More

  ಕಾಮಗಾರಿಗೆ ಖಾಕಿ ಕಾವಲು

  ಕಾರವಾರ: ಮೀನುಗಾರರ ತೀವ್ರ ವಿರೋಧ, ಪ್ರತಿಭಟನೆ ನಡುವೆ ಕಾರವಾರ ಬೈತಖೋಲ್ ಬಂದರು ಅಲೆ ತಡೆಗೋಡೆ ಕಾಮಗಾರಿಯನ್ನು ಪೊಲೀಸ್ ಸರ್ಪಗಾವಲಿನಲ್ಲಿ ಸೋಮವಾರ ಪ್ರಾರಂಭಿಸಲಾಗಿದೆ.

  ರಾಷ್ಟ್ರೀಯ ಹೆದ್ದಾರಿ 66ರ ಪಕ್ಕ ನಗರಸಭೆ ಉದ್ಯಾನದ ಬಳಿ ಟ್ಯಾಗೋರ್ ಕಡಲ ತೀರದಲ್ಲಿ ವೇ ಬ್ರಿಜ್ ಕಾಮಗಾರಿಯನ್ನು ಗುತ್ತಿಗೆ ಕಂಪನಿ ಪ್ರಾರಂಭಿಸಿದ್ದು, ಸಾಕಷ್ಟು ಕಲ್ಲುಗಳನ್ನು ತಂದು ದಾಸ್ತಾನು ಮಾಡುತ್ತಿದೆ. ಆದರೆ, ಮೀನುಗಾರರು ಪ್ರತಿಭಟನೆ ಮುಂದುವರಿಸುವ ಸೂಚನೆ ನೀಡಿದ್ದು, ಕಾರವಾರ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

  ಮುಖಂಡರ ಬಂಧನ: ಎಸ್​ಪಿ ಶಿವಪ್ರಕಾಶ ದೇವರಾಜು ನೇತೃತ್ವದಲ್ಲಿ ಡಿವೈಎಸ್​ಪಿಗಳಾದ ಶಂಕರ ಮಾರಿಹಾಳ, ಜಿ.ಟಿ. ನಾಯ್ಕ ಸಾಕಷ್ಟು ಪೊಲೀಸರ ಭದ್ರತೆಯಲ್ಲಿ ಬಂದರು ಇಲಾಖೆ ಇಂಜಿನಿಯರ್​ಗಳಾದ ರಾಜಕುಮಾರ ಹೆಡೆ, ಮಂಜುನಾಥ ನಾಯ್ಕ, ತಹಸೀಲ್ದಾರ್ ರಾಮಚಂದ್ರ ಕಟ್ಟಿ ಸಮ್ಮುಖದಲ್ಲಿ ಸೋಮವಾರ ಕಾಮಗಾರಿ ಆರಂಭಿಸಲಾಯಿತು. ಪೊಲೀಸ್ ಬ್ಯಾರಿಕೇಡ್ ದಾಟಿ ಕಾಮಗಾರಿ ತಡೆಯಲು ಹೊರಟ ಮುಖಂಡರಾದ ಗಣಪತಿ ಮಾಂಗ್ರೆ, ರಾಜು ತಾಂಡೇಲ, ಪ್ರಸಾದ ಕಾರವಾರಕರ್, ಚೇತನ ಹರಿಕಂತ್ರ, ವಿನಾಯಕ ಹರಿಕಂತ್ರ ಸೇರಿ 100 ಕ್ಕೂ ಅಧಿಕ ಮೀನುಗಾರ ಮುಖಂಡರನ್ನು ಎರಡು ಹಂತದಲ್ಲಿ ಬಂಧಿಸಿ ಪೊಲೀಸ್ ಹೆಡ್ ಕ್ವಾರ್ಟರ್ಸ್​ಗೆ ಕರೆದೊಯ್ದು ಕೆಲ ಕಾಲದ ನಂತರ ಬಿಡುಗಡೆ ಮಾಡಲಾಯಿತು. ಪೊಲೀಸರು, ಜಿಲ್ಲಾಡಳಿತ, ಶಾಸಕರ ವಿರುದ್ಧ ಮೀನುಗಾರ ಮಹಿಳೆಯರು ಘೊಷಣೆ ಕೂಗಿದರು. ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸಲು ಎರಡು ಬಾರಿ ನಡೆಸಿದ ಪ್ರಯತ್ನಗಳು ವಿಫಲವಾದವು. ಮೀನುಗಾರರು ಮುಂದಿನ ಹೋರಾಟದ ಬಗ್ಗೆ ಸಭೆ ನಡೆಸಿದ್ದು, ಜ. 14, 15ರಂದು ಮೀನು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ಮೆರವಣಿಗೆ ನಡೆಸುವುದು, ಜ. 16ರಂದು ಕಾರವಾರ ಬಂದ್ ಕರೆ ನೀಡುವ ಬಗ್ಗೆ ನಿರ್ಣಯಿಸಿದರು.

  ಬೆಳಗಿನಿಂದ ಏನೇನಾಯ್ತು?:

  * ಬೆಳಗ್ಗೆ 7.30ಕ್ಕೆ ಟ್ಯಾಗೋರ್ ಕಡಲ ತೀರದಲ್ಲಿ 250ಕ್ಕೂ ಹೆಚ್ಚು ಪೊಲೀಸರ ಜಮಾವಣೆ

  * 8 ಗಂಟೆಗೆ ಗುತ್ತಿಗೆ ಕಂಪನಿಯಿಂದ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಪ್ರಾರಂಭ

  * 8.30ಕ್ಕೆ ರಸ್ತೆಯಲ್ಲಿ ಧರಣಿ ನಡೆಸಿದ ಮೀನುಗಾರರ ಮುಖಂಡರು

  * 8.45ಕ್ಕೆ ಪೊಲೀಸ್ ಬ್ಯಾರಿಕೇಡ್ ಮುರಿದು ಕಾಮಗಾರಿ ತಡೆಯಲು ಮುಂದಾದ ಮುಖಂಡರ ಬಂಧನ

  * 9ಕ್ಕೆ ನಗರದ ವಿವಿಧೆಡೆ ತೆರಳಿ ಪ್ರತಿಭಟನೆ, ಮಾರುಕಟ್ಟೆ ಬಂದ್​ಗೆ ಒತ್ತಾಯಿಸಲು ಮುಂದಾದ ಮೀನುಗಾರರು, ಪೊಲೀಸರಿಂದ ಕೆಲವರ ಬಂಧನ

  * 9.15ಕ್ಕೆ ನಗರದ ಅಂಗಡಿ, ಮುಂಗಟ್ಟುಗಳು ಬಂದ್. ಹಂತ, ಹಂತವಾಗಿ ರಿಕ್ಷಾ ಸಂಚಾರ ಸ್ಥಗಿತ

  * 10.41ಕ್ಕೆ ಎರಡನೇ ಹಂತದಲ್ಲಿ ಮತ್ತಷ್ಟು ಮೀನುಗಾರರಿಂದ ಪ್ರತಿಭಟನೆ ಪ್ರಾರಂಭ, ಬಂಧನ

  * 11.26ಕ್ಕೆ ಕಡಲ ತೀರದ ಕಡೆಯಿಂದ ಕಾಮಗಾರಿ ನಡೆಯುವ ಸ್ಥಳಕ್ಕೆ ನುಗ್ಗಿದ ಮೀನುಗಾರ ಮಹಿಳೆಯರು. ಕಾಮಗಾರಿಗೆ ತಡೆ

  * 12ಕ್ಕೆ ಕಾಮಗಾರಿ ಸ್ಥಳದಿಂದ ಒತ್ತಾಯಪೂರ್ವಕವಾಗಿ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು

  * 1.30ಕ್ಕೆ ಬಂಧಿತ ಮೀನುಗಾರರ ಬಿಡುಗಡೆ

  * 2ಕ್ಕೆ ಟ್ಯಾಗೋರ್ ಕಡಲ ತೀರದಲ್ಲಿ ನೀರಿಗೆ ಇಳಿದು ಪ್ರತಿಭಟನೆಗೆ ಮುಂದಾದ ಮುಖಂಡರು

  * 2.15ಕ್ಕೆ ಇಬ್ಬರು ಮಹಿಳೆಯರು ಅಸ್ವಸ್ಥ

  *2.30ಕ್ಕೆ ಹಂತ ಹಂತವಾಗಿ ಚದುರಿದ ಮೀನುಗಾರರು

  ಮಾರುಕಟ್ಟೆ ಬಂದ್: ಮೀನು ಮಾರುಕಟ್ಟೆಯನ್ನು ಬೆಳಗಿನಿಂದಲೇ ಬಂದ್ ಮಾಡಲಾಗಿತ್ತು. ಮುಖಂಡರ ಬಂಧನವಾಗುತ್ತಿದ್ದಂತೆ ಶಹರದಲ್ಲಿ ಓಡಾಡಿದ ಕೆಲ ಮುಖಂಡರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಅದರಂತೆ ಇಡೀ ಮಾರುಕಟ್ಟೆ ಸಾಯಂಕಾಲದವರೆಗೆ ಅಘೊಷಿತವಾಗಿ ಬಂದ್ ಆಗಿತ್ತು. ಆಟೋ ರಿಕ್ಷಾ, ಟೆಂಪೊ ಸಂಚಾರವೂ ಸ್ಥಗಿತಗೊಂಡಿತ್ತು.

  ನಾಲ್ವರು ಅಸ್ವಸ್ಥ: ಪ್ರತಿಭಟನೆಯಯಲ್ಲಿ ತೊಡಗಿ ಬಂಧಿತರಾಗಿದ್ದ ಗೌರಿ ಹರಿಕಂತ್ರ ಎಂಬುವವರು ಅಸ್ವಸ್ಥರಾದರು. ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸಲು ಸಹಕರಿಸಿದರು. ನೀರಿಗಿಳಿದು ಪ್ರತಿಭಟನೆ ಮಾಡುವ ವೇಳೆ ಉಮಾ, ಅಂಜಲಿ ಉಳ್ವೇಕರ ಹಾಗೂ ಅಶೋಕ ಬಾನಾವಳಿ ಅಸ್ವಸ್ಥರಾಗಿ ಬಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಂಡಿದ್ದಾರೆ.

  ಏನಿದು ಕಾಮಗಾರಿ..?: ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ವಾಣಿಜ್ಯ ಬಂದರು ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ ಹಂತ, ಹಂತವಾಗಿ ಕಾಮಗಾರಿ ನಡೆಸಲಾಗುತ್ತಿದೆ. ತೀರದಿಂದ ಕಡಲಿನೊಳಗೆ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿ ಇದಾಗಿದೆ. ಮುಂಬೈ ಮೂಲದ ಖಾಸಗಿ ಕಂಪನಿ 125 ಕೋಟಿ ರೂ.ಗೆ ಗುತ್ತಿಗೆ ಪಡೆದಿದೆ. ಇನ್ನು ಹಾಲಿ ಬಂದರಿನಿಂದ ಕಾರವಾರ ಶಹರ ಕಡೆಗೆ 250 ಮೀಟರ್​ನಷ್ಟು ದಕ್ಕೆ ವಿಸ್ತರಣೆಗೆ 61 ಕೋಟಿ ರೂ. ಬಿಡುಗಡೆಯಾಗಿ ಟೆಂಡರ್ ಪೂರ್ಣವಾಗಿದೆ.

  ವಿರೋಧವೇಕೆ..?: ಬಂದರಿನ ಎರಡನೇ ಹಂತದ ವಿಸ್ತರಣೆಯಾದರೆ ಮೀನುಗಾರಿಕೆ ಬಂದರು ಕಾರ್ಯನಿರ್ವಹಣೆಗೆ ತೊಂದರೆಯಾಗುವ ಆತಂಕವಿದೆ. ಕಾರವಾರದ ಸುಪ್ರಸಿದ್ಧ ಟ್ಯಾಗೋರ್ ಕಡಲ ತೀರ ಕೊರೆತಕ್ಕೆ ತುತ್ತಾಗುವ ಸಾಧ್ಯತೆ ಇದೆ. ಬಂದರು ವಿಸ್ತರಣೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಲಿದೆ ಎಂಬ ಕಾರಣದಿಂದ ಮೀನುಗಾರರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ, ಪಿಎಂವರೆಗೂ ಪತ್ರ ಬರೆದಿದ್ದಾರೆ. ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಸಿದ ಸಭೆಯೂ ವಿಫಲವಾಗಿದೆ.

  ಆದೇಶ ಉಲ್ಲಂಘನೆ ಆರೋಪ: ತಮ್ಮ ಅನುಮತಿ ಪಡೆಯದೇ ಪ್ರಾರಂಭಿಸಿರುವ ಅಲೆ ತಡೆಗೋಡೆ ಕಾಮಗಾರಿಯನ್ನು ನಿಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಬಂದರು ಇಲಾಖೆ ಅಧಿಕಾರಿಗಳು ಸರ್ಕಾರಿ ಮಂಡಳಿಯೊಂದರ ಆದೇಶವನ್ನೇ ಗಾಳಿಗೆ ತೂರಿ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ ಎಂದು ವಕೀಲ ಬಿ.ಎಸ್.ಪೈ ಆರೋಪಿಸಿದರು.

  ಕಾರವಾರ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈತಖೋಲ್ ಗ್ರಾಮದಲ್ಲಿ ಬಂದರು ಅಭಿವೃದ್ಧಿಗೆ ಅನುಮತಿ ಪಡೆಯಲಾಗಿದೆ. ಆದರೆ, ಬಾಡ-1 ಗ್ರಾಮದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸಾಮಾನ್ಯ ಜನರಿಗೊಂದು, ಸರ್ಕಾರಿ ಕಾಮಗಾರಿಗೊಂದು ನ್ಯಾಯ ಮಾಡುತ್ತಿದ್ದಾರೆ. ಬಂದರು ಇಲಾಖೆ ಅಧಿಕಾರಿಗಳು ಟೆಂಡರ್ ಅಕ್ರಮ ಹಣದ ಆಸೆಗೆ ಸಂಪೂರ್ಣ ತಪ್ಪು ಮಾಹಿತಿ ನೀಡಿ ಪರಿಸರ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ. ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಅವರು ಹೇಳಿದಂತೆ ತಲೆದೂಗುತ್ತಿದ್ದಾರೆ. ಸ್ಥಳೀಯ ಶಾಸಕರು, ಸಂಸದರು, ಬಂದರು ಸಚಿವರು ಅಧಿಕಾರಿಗಳ ಮಾತಿಗೆ ತಲೆದೂಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇವರೂ ಶಾಮೀಲಾಗಿದ್ದಾರೆ ಎಂದು ಅನುಮಾನ ಹುಟ್ಟುವಂತಾಗಿದೆ ಎಂದರು.

  ಪರಿಸರ ಇಲಾಖೆ ಚೆನ್ನೈ ಮೂಲದ ಕಂಪನಿ 1.99 ಕೋಟಿ ರೂ.ಗಳಿಗೆ ಅಲ್ಲಿಯೇ ಕುಳಿತು ಗೂಗಲ್ ಮಾಹಿತಿ ಆಧರಿಸಿ ಪರಿಸರ ವರದಿ ಸಿದ್ಧ ಮಾಡಿದೆ. ವರದಿಯಲ್ಲಿ ಕಾರವಾರ ಪಟ್ಟಣದ ಬಗ್ಗೆ ಪ್ರಸ್ತಾಪವೇ ಇಲ್ಲ. ಇನ್ನು ಸುಪ್ರಸಿದ್ಧ ಟ್ಯಾಗೋರ್ ಕಡಲ ತೀರದ ಪ್ರಸ್ತಾಪವೂ ಇಲ್ಲ. ಯೋಜನೆಯಿಂದ ಮೀನುಗಾರರಿಗೆ ಮಾತ್ರವಲ್ಲ, ಇಡೀ ಪಟ್ಟಣಕ್ಕೇ ಗಂಡಾಂತರ ಕಾದಿದೆ. ಬಂದರಿನಲ್ಲಿ ಕಬ್ಬಿಣದ ಅದಿರು ರಫ್ತು ಹಾಗೂ ಕಲ್ಲಿದ್ದಲು ಆಮದು ಮಾಡಲಾಗುವುದು ಎಂದು ತಿಳಿಸಲಾಗಿದೆ. ಇದರಿಂದ ಇಡೀ ಊರಿಗೇ ಧೂಳು ಹರಡಲಿದೆ. ಕಾರವಾರ ಪಟ್ಟಣ ಸರ್ವನಾಶವಾಗಲಿದೆ. ಕೋಣೆನಾಲಾ ನೀರು ಹರಿವನ್ನು ತಡೆಯಲಾಗುತ್ತದೆ. ಕಡಲ ತೀರ ಸಂಪೂರ್ಣ ನಾಶವಾಗಲಿದೆ. ಇದರಿಂದ ಎಲ್ಲರೂ ಹೋರಾಟಕ್ಕೆ ಸಜ್ಜಾಗಬೇಕು ಎಂದರು. ಉದ್ಯಮಿ ಪ್ರೀತಮ್ ಮಾಸೂರಕರ್ ಮಾತನಾಡಿ, ಪರಿಸರ ಅನುಮತಿ ನೀಡುವ ಸಂದರ್ಭದಲ್ಲಿ ವಿಧಿಸಿದ ಯಾವುದೇ ಷರತ್ತುಗಳನ್ನು ಪೂರೈಸದೇ ಕಾಮಗಾರಿ ಮಾಡಲಾಗುತ್ತಿದೆ. ಪರಿಸರ ಉಸ್ತುವಾರಿ ಸಮಿತಿ ಮಾಡಿಲ್ಲ. ಗಿಡಗಳನ್ನು ನೆಟ್ಟಿಲ್ಲ. ಸ್ಥಳೀಯರ ಸಾಮಾಜಿಕ ಅಭಿವೃದ್ಧಿಗೆ ಕ್ರಮ ವಹಿಸಿಲ್ಲ ಎಂದರು. ವಕೀಲ ಜಿ.ಎನ್. ಜಾಂಬಾವಳಿಕರ್, ಮೀನುಗಾರರ ಮುಖಂಡರಾದ ಕೆ.ಟಿ. ತಾಂಡೇಲ, ಸುರೇಶ ತಾಂಡೇಲ, ಮೋಹನ ಬೋಳಶೆಟ್ಟಿಕರ್ ಸುದ್ದಿಗೋಷ್ಠಿಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts