ವೈಭವದಿಂದ ಜರುಗಿದ ರಜತ ತುಲಾಭಾರ

ವಿಜಯವಾಣಿ ಸುದ್ದಿಜಾಲ ಬೇಲೂರು
ಗುರು ತೋರಿದ ದಾರಿ, ತಿಂಗಳ ಮಾಮನ ತೇರು, ಅಮೃತ ಹುಣ್ಣಿಮೆ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಮತ್ತು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗುರು ವಂದನೆ ಹಾಗೂ ರಜತ ತುಲಾಭಾರ, ಬೆಳದಿಂಗಳೋತ್ಸವ ಮತ್ತು ಮಹಿಳಾ ಸಮಾವೇಶಕ್ಕೆ ಸೋಮವಾರ ಬೆಳಗ್ಗೆ ಚನ್ನಕೇಶವಸ್ವಾಮಿ ದೇಗುಲ ಸಮೀಪ ಚಾಲನೆ ದೊರೆಯಿತು.
ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದ ಮುಂಭಾಗದಿಂದ 1008 ಪೂರ್ಣಕುಂಭಗಳ ಸ್ವಾಗತದೊಂದಿಗೆ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಪಲ್ಲಕ್ಕಿ ಉತ್ಸವದಲ್ಲಿ ಕೂರಿಸಲಾಯಿತು. ಬಳಿಕ ವಿವಿಧ ಜನಪದ ತಂಡಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ವೇಲಾಪುರಿ ಸಭಾಂಗಣಕ್ಕೆ ಕರೆತರಲಾಯಿತು.
ಪಲ್ಲಕ್ಕಿ ಉತ್ಸವದ ನಂತರ ವೇದಿಕೆ ಪಕ್ಕದಲ್ಲೆ ಸಿದ್ಧಗೊಂಡಿದ್ದ ಹೋಮದ ಕುಂಡಕ್ಕೆ ಸ್ವಾಮೀಜಿಗಳು ಪೂಜೆ ಸಲ್ಲಿಸುವ ಮೂಲಕ ಪ್ರರ್ಣಾಹುತಿ ಸಲ್ಲಿಸಿದರು. ಗುರು ತೋರಿದ ದಾರಿ, ತಿಂಗಳ ಮಾಮನ ತೇರಿನ ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಭಕ್ತರು ನೀಡಿದ್ದ 108 ಕೆಜಿ ರಜತದಿಂದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ತುಲಾಭಾರ ನಡೆಸಲಾಯಿತು. 108 ಅಹಾರ ಪದಾರ್ಥಗಳನ್ನು ಸಮರ್ಪಿಸಿದ ನಂತರ ಸ್ವಾಮೀಜಿಯವರಿಗೆ ಪುಷ್ಪಾರ್ಚನೆ ಮೂಲಕ ಮಂಗಳಾರತಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ‘ಸನಾತನ ಸಂಸ್ಕೃತಿಯ ಹಬ್ಬಗಳು’ ಪುಸ್ತಕವನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಬಿಡುಗಡೆ ಮಾಡಿದರು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಕೆ.ಎಸ್.ಲಿಂಗೇಶ್, ಎಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ , ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಪಿ.ಶೈಲೇಶ್ ಇತರರು ಇದ್ದರು.

Leave a Reply

Your email address will not be published. Required fields are marked *