ಚಿಕ್ಕಬಾಸೂರ ದಸರಾ ನೋಡಬನ್ನಿ…

ಹಾವೇರಿ: ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರ ಗ್ರಾಮ 6 ಸಾವಿರಕ್ಕೂ ಕಡಿಮೆ ಜನಸಂಖ್ಯೆಯುಳ್ಳ ಚಿಕ್ಕ ಗ್ರಾಮ. ಈ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ದಸರಾ ಉತ್ಸವ ಪಂಚಪೀಠದ ಜಗದ್ಗುರುಗಳ ದಸರಾ ದರ್ಬಾರ್ ಮಾದರಿಯಲ್ಲಿ 13 ದಿನಗಳ ಕಾಲ ಗಜಾನನ ಯುವಕ ಮಂಡಳಿ ಹಾಗೂ ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.

ದಸರಾ ಮಹೋತ್ಸವವು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೈಸೂರ ದಸರಾ, ಪಂಚಪೀಠದ ಜಗದ್ಗುರುಗಳ ದಸರಾ ದರ್ಬಾರ್ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಡೆಯುವ ಆದಿಶಕ್ತಿ ಪೂಜೆ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪ್ರತಿದಿನ ಆಗಮಿಸುತ್ತಾರೆ.

ಪ್ರತಿವರ್ಷ ಮಹಾನವಮಿ ಅಮವಾಸ್ಯೆಪಾಡ್ಯದಿಂದ ಚಿಕ್ಕಬಾಸೂರ ಗ್ರಾಮದಲ್ಲಿ ದಸರಾ ಉತ್ಸವ ಹಾಗೂ ಶ್ರೀದೇವಿ ಪುರಾಣ ಆರಂಭಗೊಳ್ಳುತ್ತದೆ. ಅಂದಿನಿಂದ 13 ದಿನಗಳ ಕಾಲ ನಿರಂತರವಾಗಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಕಾರ್ಯಗಳು ವಿಶಿಷ್ಠವಾಗಿ ಜರುಗುತ್ತವೆ.

ಅಮವಾಸ್ಯೆಪಾಡ್ಯದಂದು ಆರಡಿ ಎತ್ತರದ ಆದಿಶಕ್ತಿ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಮಂಟಪಕ್ಕೆ ತಂದು ಪ್ರತಿಷ್ಠಾಪನೆ ಮಾಡುವುದರೊಂದಿಗೆ ಚಿಕ್ಕಬಾಸೂರನ ದಸರಾ ಉತ್ಸವಕ್ಕೆ ಚಾಲನೆ ದೊರೆತಿದೆ.

ಆಕರ್ಷಕ ಮಂಟಪ: ಗ್ರಾಮದ ಸಿದ್ಧರಾಮೇಶ್ವರ ಮಠದ ಬಳಿ ದಸರಾ ಮಹೋತ್ಸವ ನಡೆಯುತ್ತಿದೆ. ಅಲ್ಲಿ ಆದಿಶಕ್ತಿ ಮಂಟಪವನ್ನು ಅರಮನೆ ಮಾದರಿಯಲ್ಲಿ ವಿಶಿಷ್ಟವಾಗಿ ನಿರ್ವಿುಸಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಅದ್ದೂರಿ ಮೆರವಣಿಗೆ: ದಸರಾ ಮಹೋತ್ಸವದ ಕೊನೆಯ ದಿನ ಅ. 21ರಂದು ಅಲಂಕೃತ ಸಾರೋಟದಲ್ಲಿ ಆದಿಶಕ್ತಿ ಮೂರ್ತಿಯ ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡೀ ಸಾಗುವುದು. ಮೆರವಣಿಗೆಯೂ ಮರುದಿನ ನಸುಕಿನಜಾವದವರೆಗೆ ಸಾಗಿ ಗ್ರಾಮದ ಹೊಂಡದಲ್ಲಿ ತೆಪ್ಪೋತ್ಸವದ ನಂತರ ದೇವಿಯ ವಿಸರ್ಜನೆಯಾಗುವುದು.

ದಸರಾ ಮಹೋತ್ಸವ ಹುಟ್ಟಿದ್ದು ಹೀಗೆ: ಚಿಕ್ಕಬಾಸೂರ ಗ್ರಾಮದಲ್ಲಿ ದಸರಾ ಮಹೋತ್ಸವ ಆರಂಭವಾಗಿದ್ದು 2004ರಲ್ಲಿ. ಗ್ರಾಮದ ಹಿರಿಯರಿಗೆ ಆದಿಶಕ್ತಿಯ ಪ್ರೇರಣೆ ದೊರಕಿ ಎಲ್ಲರೂ ಕೂಡಿ ರ್ಚಚಿಸಿ ದೇವಿ ಪುರಾಣ ಆರಂಭಿಸಲು ನಿರ್ಧರಿಸಿದರು. ಗ್ರಾಮದಲ್ಲಿ ಸಾರ್ವಜನಿಕ ಗಣೇಶ ಸ್ಥಾಪನೆ ಮಾಡಿದ್ದ ಮಂಟಪದಲ್ಲಿಯೇ ಮೊದಲ ವರ್ಷ ದೇವಿಪುರಾಣ ಆರಂಭಿಸಲಾಯಿತು. ಅಂದಿನಿಂದ ವರ್ಷದಿಂದ ವರ್ಷಕ್ಕೆ ದೇವಿ ಪುರಾಣದ ಜೊತೆಗೆ ಚಿಕ್ಕಬಾಸೂರ ದಸರಾ ಮಹೋತ್ಸವವಾಗಿ ಆರಂಭವಾಗಿ ಅದ್ದೂರಿಯಾಗಿ ಜರುಗುತ್ತಿದೆ.