ಒತ್ತಡದಿಂದ ಹೊರಬನ್ನಿ…

ಇಂದಿನ ದಿನಗಳಲ್ಲಿ, ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಬಿಡುವಿಲ್ಲದ ಯಾಂತ್ರಿಕ ಜೀವನವನ್ನು ನಡೆಸುತ್ತ ಸ್ಪರ್ಧಾತ್ಮಕ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಜನರಲ್ಲಿ ಕಾಣಬಹುದಾದ ಸರ್ವೆಸಾಮಾನ್ಯವಾದ ಒಂದು ಮನಸ್ಥಿತಿ ಎಂದರೆ ಅದು ಮಾನಸಿಕ ಒತ್ತಡ. ಈ ಮನಸ್ಥಿತಿಯನ್ನು ಶಾಲಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ಎಲ್ಲಾ ವರ್ಗದವರಲ್ಲೂ ಕಾಣಬಹುದು. ಮಾನಸಿಕ ಒತ್ತಡದಿಂದಾಗಿ ಬದುಕಿನಲ್ಲಿ ಅಶಾಂತಿ ಹೆಚ್ಚುವುದಲ್ಲದೆ ಹಲವು ರೋಗಗಳಿಗೂ ಒತ್ತಡವೇ ಕಾರಣವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ‘ಮನ ಏವ ಮನುಷ್ಯಣಾಂ ಕಾರಣಂ ಬಂಧಮೋಕ್ಷಯೋ’. ಅಂದರೆ, ಮಾನವನಿಗೆ ಸಂಸಾರ ಬಂಧನಕ್ಕೂ ಮತ್ತು ಅದರ ಬಿಡುಗಡೆಗೂ ಮನಸ್ಸು ಮುಖ್ಯ ಸಾಧನವಾಗಿದೆ.

ಮಾನಸಿಕ ಒತ್ತಡಕ್ಕೆ ಸಾಮಾನ್ಯ ಕಾರಣಗಳೆಂದರೆ: 

 • ತನ್ನಿಂದ ನಿಭಾಯಿಸಲಾಗದ ಸನ್ನಿವೇಶಗಳನ್ನು ಇಲ್ಲವೇ ಬಗೆಹರಿಸಲಾಗದ ಸಮಸ್ಯೆಗಳನ್ನು ಎದುರಿಸಲೇಬೇಕಾದ ಸಂದರ್ಭಗಳು ಬಂದಾಗ
 • ಸಹಿಸಲಾಗದ ಕಷ್ಟ-ನಷ್ಟಗಳು, ರೋಗ ರುಜಿನಗಳು, ನೋವು ನಿರಾಸೆಗಳು ಕಾಡಿದಾಗ ್ಝನ್ನಿಂದ ಹೊರಲಾರದ ಜವಾಬ್ದಾರಿಗಳನ್ನು ಹೇರಿದಾಗ
 • ಗುರಿ ತಲುಪುವಲ್ಲಿ ತಡವಾದಾಗ, ಅಡ್ಡಿಗಳಾದಾಗ, ವಿಫಲತೆಗಳುಂಟಾದಾಗ ್ಝಾನು ಗೈಯುತ್ತಿರುವ ಯಾವುದೇ ಕೆಲಸ, ಸನ್ನಿವೇಶ ತುಂಬಾ ಅಪಾಯಕಾರಿ, ಆತಂಕಕಾರಿ ಎಂಬ ಭಾವನೆ ಮೂಡಿದಾಗ
 • ತನ್ನೊಳಗೆ ಸಿಟ್ಟಿನ, ಸೇಡಿನ, ಅಸಮಾಧಾನದ ಭಾವನೆಗಳು ತುಂಬಿದ್ದು ಆ ಕೋಪವನ್ನು ಪ್ರಕಟಿಸಬೇಕೆಂದಿದ್ದರೂ ಪ್ರಕಟಿಸಲಾಗದೆ ಅದನ್ನು ನಿಯಂತ್ರಿಸಿಕೊಂಡಿರಬೇಕಾದ ಸ್ಥಿತಿ ನಿರ್ವಣವಾದಾಗ
 • ದ್ವಂದ್ವ, ಅನಿಶ್ಚಿತ ಅಥವಾ ಗೊಂದಲದ ಮನಃಸ್ಥಿತಿ ಉಂಟಾದಾಗ
 • ಕೆಲಸ ಮಾಡಲೇಬೇಕು, ಬೇಗನೆ ಗುರಿ ಮುಟ್ಟಬೇಕು, ತಾನು ಇದುವರೆಗೆ ಸಾಧಿಸಿದ್ದು ಏನೂ ಸಾಲದು. ಇನ್ನಷ್ಟು ಕೀರ್ತಿ, ಸ್ಥಾನಮಾನ ಎಲ್ಲರಿಗಿಂತ ಮುಂದಿರಬೇಕು. ಸಂಪತ್ತುಗಳನ್ನು ಸಂಪಾದಿಸಬೇಕು ಎಂಬ ಅತಿಯಾಸೆ ಹೆಚ್ಚಾಗಿ ಅವನ್ನು ಪೂರೈಸಲು ಕಷ್ಟವಾದಾಗ
 • ಅಧಿಕಾರ ನಷ್ಟವಾದಾಗ, ಅಸಮಾಧಾನವಾದಾಗ, ಅಪಚಾರವಾದಾಗ ಇತ್ಯಾದಿ. 
 • ಪ್ರತಿಭೆ ಇದ್ದರೂ ಯಾವುದೋ ಕಾರಣಗಳಿಂದ ಅನ್ಯಾಯವಾದಾಗ, ಪಕ್ಷಪಾತವಾದಾಗ, ಎಲ್ಲ ವಿಷಯ ತಿಳಿದಿದ್ದೂ ಏನೂ ಮಾಡಲಾಗದೇ ಕೈ ಹಿಸುಕಿಕೊಳ್ಳುವ ಇಲ್ಲವೆ ಒಳಗೊಳಗೆ ನೊಂದುಕೊಳ್ಳುವ ಪರಿಸ್ಥಿತಿಗಳು ಬಂದಾಗ
 • ವ್ಯಕ್ತಿ ತನಗೆ ಸಿಗಬೇಕಾದ ಪ್ರೀತಿ, ವಿಶ್ವಾಸ, ಗೌರವ, ಸ್ಥಾನಮಾನಗಳಿಂದ, ಹಕ್ಕು ಬಾಧ್ಯತೆಗಳಿಂದ ವಂಚಿತನಾದಾಗ
 • ವೈಯುಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ; ಶಾರೀರಿಕ ಇಲ್ಲವೇ ಮಾನಸಿಕ ದುರ್ಬಲತೆ ತನ್ನ ಬಗ್ಗೆ ಕೀಳರಿಮೆ ಮುಂತಾದ ವ್ಯಕ್ತಿತ್ವ ದೋಷಗಳು ಒತ್ತಡವನ್ನು ಹೆಚ್ಚಿಸುತ್ತವೆ. ಜತೆಗೆ ವಾಸ್ತವಿಕತೆಯ ಪ್ರಜ್ಞೆ ಇಲ್ಲದವರು ತಮಗೇ ತಾವೇ ಆತ್ಮ ವಂಚನೆಯನ್ನು ಮಾಡಿಕೊಂಡವರು ಸುಲಭವಾಗಿ ಒತ್ತಡಕ್ಕೆ ಸಿಲುಕುತ್ತಾರೆ.

ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾದಾಗ ನಿರ್ವಹಿಸಲು ಸಾಧ್ಯವಾಗದ ಆರ್ಥಿಕ ಪರಿಸ್ಥಿತಿಗಳು ಮಾನಸಿಕ ಒತ್ತಡಕ್ಕೆ ಒಂದೆಡೆ ಕಾರಣವಾದರೆ ಅತಿ ಹೆಚ್ಚಿನ ಸಂಪತ್ತು ಮತ್ತು ಅದರ ಸಂರಕ್ಷಣೆ ಕೂಡ ಮಾನಸಿಕ ಒತ್ತಡಕ್ಕೆ ಕಾರಣವಾಗಹುದು. ಇಲ್ಲವೆ ತೀರಿಸಲಾರದ ಸಾಲಗಳು, ಅದರಿಂದ ಉದ್ಭವಿಸುವ ಸಮಸ್ಯೆಗಳು, ಮಾನಹಾನಿಗಳು ವ್ಯಕ್ತಿಯನ್ನು ಒತ್ತಡಕ್ಕೆ ಸಿಲುಕಿಸುತ್ತವೆ. ತಮಗಿಷ್ಟವಿಲ್ಲದ ಯಾರದೋ ಬಲವಂತಕ್ಕೆ ಮಾಡುವ ಉದ್ಯೋಗಗಳು, ಮೇಲಧಿಕಾರಿ ಇಲ್ಲವೇ ಉದ್ಯೋಗಿಗಳಿಂದ ಬರುವ ಕಿರುಕುಳ ಅಥವಾ ಸಕಾಲಕ್ಕೆ ಬರಬೇಕಾದ ಬಡ್ತಿ, ಪ್ರೋತ್ಸಾಹ ದೊರಕದೆ ಉದ್ಯೋಗದಲ್ಲಿ ಅನ್ಯಾಯವಾದಾಗ ಒತ್ತಡ ಉದ್ಭವಿಸುತ್ತದೆ. ಇತರರಲ್ಲಿ ಹೇಳಿಕೊಳ್ಳಲಾರದ ಗುಪ್ತ ಕಾಯಿಲೆಗಳಿಗೆ, ದುರ್ಬಲತೆಗಳಿಗೆ, ಅತೃಪ್ತಿಗಳಿಗೆ, ಲೈಂಗಿಕ ರೋಗಗಳಿಗೆ ಬಲಿಯಾದಾಗ ಕೂಡ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ಅವಸರ, ಅಸ್ತವ್ಯಸ್ತತೆ, ಅಭದ್ರತೆ, ಅಸಮಾನತೆ, ಶೋಷಣೆ, ದೂಷಣೆ, ವಿಪರೀತ ಸ್ಪರ್ಧೆ, ನಿರುದ್ಯೋಗ, ಬಡತನ, ಪ್ರತಿಭೆಗೆ ತಕ್ಕ ಪುರಸ್ಕಾರ ಇಲ್ಲದಿರುವಿಕೆ ಮುಂತಾದ ಸಾಮಾಜಿಕ ಪರಿಸ್ಥಿತಿಗಳಲ್ಲಿ ಕೂಡ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾನೆ. ಅನುವಂಶಿಕತೆ, ಮಾಲಿನ್ಯ ಪರಿಸರ, ವೃದ್ಯಾಪ್ಯಗಳು ಸೇರಿಕೊಂಡಾಗ ಬೆಂಕಿಗೆ ಬಿರುಗಾಳಿ ಸೇರಿದಂತಾಗಿ ಮಾನಸಿಕ ಒತ್ತಡವು ಅಧಿಕಗೊಳ್ಳುತ್ತದೆ.

ಮಾನಸಿಕ ಒತ್ತಡಗಳಿಂದುಂಟಾಗುವ ಪರಿಣಾಮಗಳು, ಒತ್ತಡವನ್ನು ತಂದೊಡ್ಡಿದ ಪರಿಸ್ಥಿತಿ ಮತ್ತು ತೀವ್ರತೆಗಳಿಗನುಗುಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತವೆ. ಸಾಮಾನ್ಯವಾಗಿ ಒತ್ತಡ ಹೆಚ್ಚಾದಾಗ ನಮ್ಮ ಮೆದುಳಿನ ಆದೇಶದ ಮೇರೆಗೆ ಅಡ್ರಿನಲ್ ಗ್ರಂಥಿಗಳಿಂದ ಸುರಿಸಲ್ಪಡುವ ಅಡ್ರಿನಲಿನ್​ಗಳೇ ಮುಂತಾದ ರಸವಿಶೇಷಗಳ ಪ್ರಮಾಣ ರಕ್ತದಲ್ಲಿ ಹೆಚ್ಚುತ್ತದೆ. ಅದರ ಪರಿಣಾಮ ದೇಹದ ಎಲ್ಲಾ ಅಂಗ/ಕ್ರಿಯೆಗಳ ಮೇಲೆ ಪ್ರಕಟವಾಗುತ್ತದೆ.

ಒತ್ತಡ ಹೆಚ್ಚಿದಾಗ ಮೆದುಳಿಗೆ ರಕ್ತ ಪೂರೈಕೆ ಸಮರ್ಪಕವಾಗಿರದೆ ವ್ಯಕ್ತಿಯ ಏಕಾಗ್ರತೆ, ವಿವೇಚನಾ ಶಕ್ತಿ, ನೆನಪಿನ ಶಕ್ತಿ, ಹೊಸತನ್ನು ಕಲಿಯುವ ಶಕ್ತಿ ಎಲ್ಲವೂ ಕುಂಠಿತಗೊಳ್ಳುತ್ತವೆ. ಮಾನಸಿಕ ದಣಿವು ಹೆಚ್ಚಾಗುತ್ತದೆ. ದುಗುಡ, ದುಃಖ, ಭಯ, ಬೇಸರ, ಸಿಟ್ಟು, ಸಿಡುಕು, ಉದ್ವೇಗ, ಆತಂಕ, ಕಳವಳ, ಕೋಪ ಮುಂತಾದ ಅಹಿತಕಾರಿ ಭಾವನೆಗಳು ವ್ಯಕ್ತಿಯ ಮನಸ್ಸನ್ನು ಆವರಿಸಬಹುದು. ವ್ಯಕ್ತಿಯಲ್ಲಿ ಬಾಯಿರುಚಿ, ಹಸಿವು ಕಡಿಮೆಯಾಗಬಹುದು, ಇಲ್ಲವೇ ವ್ಯಕ್ತಿ ಅಪೌಷ್ಟಿಕತೆಗೆ ತುತ್ತಾಗಬಹುದು. ಹಾಗೆಯೇ ತೂಕದಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.

ನಿದ್ರಾಚಕ್ರದಲ್ಲಿ ವ್ಯತ್ಯಾಸವಾಗಬಹುದು, ನಿದ್ರಾಭಂಗವಾಗಬಹುದು, ಇಲ್ಲವೇ ರಾತ್ರಿ ನಿದ್ರಿಸಲು ಸಾಧ್ಯವಾಗದೇ ಇರಬಹುದು. ಮಹಿಳೆಯರಲ್ಲಿ ಋತುಚಕ್ರವು ಬದಲಾವಣೆಗೊಳ್ಳಬಹುದು. ಮಾನಸಿಕ ಒತ್ತಡದ ಪರಿಣಾಮವಾಗಿ ಕೆಲವರಲ್ಲಿ ಮಲಬದ್ಧತೆ ಕಾಣಿಸಿಕೊಂಡರೆ ಇತರರಲ್ಲಿ ಬೇಧಿ, ಇಲ್ಲವೇ ಮೂತ್ರ ಶಂಕೆ ಹೆಚ್ಚಾಗಬಹುದು. ಲೈಂಗಿಕ ಆಸಕ್ತಿಯಲ್ಲಿ ಇಳಿಮುಖ ಇಲ್ಲವೇ ಏರುಪೇರುಗಳನ್ನು ಕೂಡ ಕಾಣಬಹುದು. ಮಾನಸಿಕ ಒತ್ತಡವು ತಲೆನೋವು, ಬೆನ್ನು, ಸೊಂಟ, ಕೈಕಾಲು, ಕೀಲು ನೋವುಗಳನ್ನು ಕೂಡ ತಂದೊಡ್ಡಬಹುದು. ದಣಿವು, ಚರ್ಮದ ಕಾಯಿಲೆಗಳು ಕೂಡ ಸರ್ವೆಸಾಮಾನ್ಯ. ಜಠರ, ಕರುಳು, ಹೃದಯ, ರಕ್ತನಾಳ, ಶ್ವಾಸಕೋಶ ಮುಂತಾದ ಒಳ ಅಂಗಾಂಗಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಇವೆಲ್ಲದರ ಪರಿಣಾಮವಾಗಿ ಜಠರದಲ್ಲಿ ಅಧಿಕ ಆಮ್ಲ ಜಠರದ ಹುಣ್ಣು, ಕರುಳುರಿತ, ಆಮಶಂಕೆ, ಬೇಧಿ, ಅಧಿಕ ರಕ್ತದೊತ್ತಡ, ಸಿಹಿಮೂತ್ರ, ಒತ್ತಡದ ತಲೆನೋವು, ಬಂಜೆತನ, ಲೈಂಗಿಕ ದುರ್ಬಲತೆ, ಏಗ್ನಿಮಾ, ಸೋರಿಯೋಸಿಸ್ ಮುಂತಾದ ಚರ್ಮ ರೋಗಗಳು, ಕೂದಲು ಉದುರುವಿಕೆ, ಇಲ್ಲವೇ ಬಿಳಿಯಾಗುವಿಕೆ, ಖಿನ್ನತೆ, ಆತಂಕ, ಉನ್ಮಾದ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ, ಮದ್ಯಪಾನ ವ್ಯಸನಗಳು ಇವೆಲ್ಲಾ ಮಾನಸಿಕ ಒತ್ತಡದ ಕೊಡುಗೆಗಳು.

ಮುಖ್ಯವಾಗಿ ಒತ್ತಡದಿಂದ ರೋಗ ನಿರೋಧಕ ಶಕ್ತಿಯು ಕುಂದಿ, ಶರೀರ ಸುಲಭವಾಗಿ ರೋಗಗಳ ಸೋಂಕಿಗೆ ಒಳಗಾಗುತ್ತದೆ. ಸುದೀರ್ಘವಾದ ಒತ್ತಡದ ಪರಿಣಾಮವಾಗಿ ಸಾಮಾನ್ಯ ಜೀವಕೋಶಗಳೂ ಕ್ಯಾನ್ಸರ್ ಕಣಗಳಾಗಿ ಪರಿವರ್ತಿತಗೊಳ್ಳಬಹುದು. ಮಾನಸಿಕ ಒತ್ತಡಕ್ಕೆ ಒಳಗಾದವರು ವಾಸ್ತವಿಕತೆಯನ್ನು ಅರಿಯಲು ವಿಫಲರಾಗುತ್ತಾರೆ. ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ತನ್ನ ತಪ್ಪುಗಳಿಗೆ, ನ್ಯೂನ್ಯತೆಗಳಿಗೆ, ಕಷ್ಟ, ನಷ್ಟಗಳಿಗೆ ಇತರರನ್ನು ಹೊಣೆಯಾಗಿ ಮಾಡುತ್ತಾರೆ. ಯಾರದೋ ಮೇಲಿನ ಕೋಪವನ್ನು ಯಾರ ಮೇಲೆಯೋ ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲವೇ ಮದ್ಯಪಾನ, ನಿದ್ರಾಮಾತ್ರೆಗಳು ಅಥವಾ ಮಾದಕ ವಸ್ತುಗಳಿಗೆ ಬಲಿಯಾಗುತ್ತಾರೆ. ಒಟ್ಟಿನಲ್ಲಿ ತನಗೂ, ಸುತ್ತಮುತ್ತಲಿನವರಿಗೂ ಅಹಿತಕರವಾದ ಪರಿಸ್ಥಿತಿಯನ್ನು ತಂದೊಡ್ಡುತ್ತಾರೆ.

ಪರಿಹಾರವೇನು?: ವ್ಯಕ್ತಿ ವಾಸ್ತವಿಕತೆಯ ಬಗ್ಗೆ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬೇಕು. ತನ್ನ ಇತಿಮಿತಿ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನು ಅರಿತುಕೊಂಡು ಬಾಳಲು ಕಲಿಯಬೇಕು. ಸಕಾರಾತ್ಮಕ ಧೋರಣೆಯನ್ನು ತನ್ನದಾಗಿಸಿಕೊಳ್ಳಬೇಕು. ಸದಾ ತನ್ನ ಬಗ್ಗೆಯೇ ಚಿಂತಿಸುತ್ತಿರುವ ಮನೋಭಾವವನ್ನು ತೊಡೆದು ಹಾಕಬೇಕು. ನಗುನಗುತ್ತಾ ಸಮಸ್ಯೆಗಳನ್ನು ಎದುರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಸಂದರ್ಭ ಮತ್ತು ಪರಿಸ್ಥಿತಿಗಳಿಗನುಸಾರವಾಗಿ ಆಸೆ, ಆಕಾಂಕ್ಷೆಗಳನ್ನು, ಅಗತ್ಯಗಳನ್ನು, ನಿರೀಕ್ಷೆಗಳನ್ನು ಕಡಿಮೆಗೊಳಿಸಿ ಸರಳ ಜೀವನವನ್ನು ಸಾಗಿಸಬೇಕು. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಶಿಸ್ತಿರಲಿ. ಆತ್ಮೀಯರಲ್ಲಿ ಕಷ್ಟ ನಷ್ಟಗಳನ್ನು ಹಂಚಿಕೊಳ್ಳುವ ಪರಿಪಾಠವಿರಲಿ. ಕಷ್ಟ ನಷ್ಟಗಳು ಬಂದಾಗ ಸಮಸ್ಯೆಗಳು ಎದುರಾದಾಗ ಎದುರಿಸುವ ಎದೆಗಾರಿಕೆ ಇರಲಿ. ಪ್ರಯತ್ನ ನನ್ನದು, ಫಲ ಭಗವಂತನದು ಎಂಬ ಧೋರಣೆ ಎಂದೆಂದೂ ಒಳಿತು. ಆದರೆ ಪ್ರಯತ್ನ ಪ್ರಾಮಾಣಿಕವಾಗಿರಲಿ. ಫಲಿತಾಂಶದ ಬಗ್ಗೆ ಅವಸರದ, ಅತಿಯಾದ ಆತಂಕವಿಲ್ಲದಿರಲಿ, ನಮ್ಮ ನಡೆ ನುಡಿಗಳಿಂದ ಜನರ ಬೆಂಬಲವನ್ನು, ಸ್ನೇಹವನ್ನು ಗಳಿಸಿಕೊಳ್ಳುವ ಪ್ರಯತ್ನವಿರಲಿ. ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಆರೋಗ್ಯಕರ ಮನರಂಜನಾ ಚಟುವಟಿಕೆಗಳಿಗೆ ಸ್ವಲ್ಪ ಸಮಯವನ್ನು ಮೀಸಲಾಗಿಟ್ಟರೆ ಒತ್ತಡವನ್ನು ಕಡಿಮೆಗೊಳಿಸಲು ಸಾಧ್ಯ. ಹಿತಮಿತವಾದ ಆಹಾರ, ಒಳ್ಳೆಯ ಅಭ್ಯಾಸ, ಸ್ವಚ್ಛತೆ, ಆಚಾರ, ವಿಚಾರ, ವ್ಯಾಯಾಮ, ಧ್ಯಾನ, ಯೋಗ, ಮೌನ, ಇತ್ಯಾದಿಗಳು ಒತ್ತಡವನ್ನು ತಡೆಯುವ ಮಾರ್ಗಗಳು.

ಮಾನಸಿಕ ಒತ್ತಡವನ್ನು ಎದುರಿಸುವಲ್ಲಿ ಅನುಸರಿಸಬೇಕಾದ ಮೂರು ಸೂತ್ರಗಳೆಂದರೆ:

 • ನಿಭಾಯಿಸಲಾಗದ ಪರಿಸ್ಥಿತಿಗಳು ಎದುರಾದಾಗ ಸುಮ್ಮನಿದ್ದು ಬಿಡಬೇಕು. ನಮ್ಮ ಕೈಯಿಂದ ಏನೂ ಮಾಡಲಾಗದ ವಿಷಯಗಳಿಗೆ ಚಿಂತಿಸಿ ಫಲವಿಲ್ಲ.
 • ಸಣ್ಣಪುಟ್ಟ ವಿಷಯಗಳಿಗೆ ಚಿಂತಿಸಬಾರದು.
 • ಜೀವನದಲ್ಲಿ ಎಲ್ಲವೂ ಸಣ್ಣಪುಟ್ಟ ವಿಷಯಗಳೆ ಎಂಬ ಸತ್ಯಾಂಶ ತಿಳಿದಿರಲಿ. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ.What you eat does not kill you, what eats you kills you ಅರ್ಥಾತ್: ನೀವೇನು ತಿನ್ನುತ್ತೀರೋ ಅದು ನಿಮ್ಮನ್ನು ಕೊಲ್ಲುವುದಿಲ್ಲ, ಆದರೆ ನಿಮ್ಮನ್ನು ಏನು ತಿನ್ನುತ್ತದೆಯೋ ಅದೇ ನಿಮ್ಮನ್ನು ಕೊಲ್ಲುತ್ತದೆ. ಈ ಮಾತಿಗೆ ಪೂರಕವಾಗಿ ಸಂಸ್ಕೃತದಲ್ಲಿ ಒಂದು ಶ್ಲೋಕ ಹೀಗಿದೆ. ‘ಚಿಂತಾಯಾಶ್ಚ, ಚಿತಾಯಾಶ್ಚ ಬಿಂದು ಮಾತ್ರ ವಿಶೇಷಣಂ ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಂ’ ಅಂದರೆ ಚಿತೆಗೂ ಚಿಂತೆಗೂ ಸೊನ್ನೆ ಮಾತ್ರ ವ್ಯತ್ಯಾಸ. ಚಿತೆಯು ಸತ್ತವನನ್ನು ಸುಡುತ್ತದೆ, ಚಿಂತೆಯು ಸಜೀವಿಗಳನ್ನೇ ಸುಡುತ್ತದೆ.

Leave a Reply

Your email address will not be published. Required fields are marked *