ಆರ್ಥಿಕತೆಗಳ ಸಮ್ಮಿಲನ

| ಶಾ.ರಂಗನಾಥ್​, ಹಿರಿಯ ನಿವೃತ್ತ ಪ್ರಬಂಧಕರು, ಕೆನರಾ ಬ್ಯಾಂಕ್​

2017ರ ಆಗಸ್ಟ್​ನಲ್ಲಿ ಎಸ್​ಬಿಐ ಮತ್ತು ಇತರ 6 ಸಹವರ್ತಿ ಬ್ಯಾಂಕ್​ಗಳ ವಿಲೀನಕ್ಕೆ ಲೋಕಸಭೆ ಅಸ್ತು ಎಂದಾಗ ಇಡೀ ದೇಶದಲ್ಲಿ ಗೊಂದಲವುಂಟಾಗಿತ್ತು. ಈ ಬ್ಯಾಂಕುಗಳ ಗ್ರಾಹಕರಿಗೆ ತೊಂದರೆ ಆಗುತ್ತದೆಯೇನೋ ಎನ್ನುವ ಆತಂಕವೂ ಸೃಷ್ಟಿಯಾಗಿತ್ತು. ಆದರೆ, ಇಂದು ಯಾವುದೇ ಗೊಂದಲವಿಲ್ಲದೆ ಗ್ರಾಹಕರು ಎಸ್​ಬಿಐನಲ್ಲಿ ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಈಗ ಪುನಃ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಕೈಹಾಕಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಎಲ್ಲ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ. ಅದೇ ರೀತಿ, ರಾಜ್ಯ ಸರ್ಕಾರಗಳ ಬ್ಯಾಂಕಿಂಗ್ ವ್ಯವಹಾರವನ್ನು ಆ ರಾಜ್ಯದ ಸ್ಟೇಟ್ ಬ್ಯಾಂಕುಗಳು ನಡೆಸುತ್ತಿವೆ. ಉದಾಹರಣೆಗೆ, ಕರ್ನಾಟಕ ಸರ್ಕಾರದ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳು ಮೈಸೂರು ಬ್ಯಾಂಕಿನ ಮೂಲಕ ನಡೆಯುತ್ತದೆ. ಇತ್ತೀಚೆಗೆ ಅಲ್ಪಮಟ್ಟದ ವ್ಯವಹಾರವನ್ನು ಇತರೆ ರಾಷ್ಟ್ರೀಕೃತ ಬ್ಯಾಂಕ್​ಗಳು ಸಹ ನಡೆಸುತ್ತಿದ್ದವು. ಬಹಳ ವರ್ಷಗಳಿಂದ ಭಾರತೀಯ ಸ್ಟೇಟ್ ಬ್ಯಾಂಕಿನ ಜತೆ ಇತರೆ ರಾಜ್ಯಗಳ ಸ್ಟೇಟ್ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಚಾಲ್ತಿಯಲ್ಲಿ ಇತ್ತು. 2016ರಲ್ಲಿ ಈ ಪ್ರಕ್ರಿಯೆ ಕಾರ್ಯರೂಪಗೊಂಡು ಎಲ್ಲ ಸ್ಟೇಟ್ ಬ್ಯಾಂಕುಗಳು 2017ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಜತೆಯಲ್ಲಿ ವಿಲೀನಗೊಂಡವು. ಹೀಗಾಗಿ, ಈಗ ನಾವು ಹೆಚ್ಚಿನ ಕಡೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳನ್ನು ಕಾಣಬಹುದು. ಈಗ ಎರಡನೇ ಹಂತದ ಬ್ಯಾಂಕುಗಳ ವಿಲೀನದ ಪ್ರಕ್ರಿಯೆಗೆ ಲೋಕಸಭೆ ಹಾಗೂ ರಾಜ್ಯಸಭೆಗಳು ಒಪ್ಪಿಗೆ ಸೂಚಿಸಿವೆ. ಈ ಎರಡನೇ ಹಂತದಲ್ಲಿ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಜತೆಯಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನಗೊಳ್ಳಲಿವೆ. ಈ ರೀತಿಯ ವಿಲೀನಗಳು ಮುಂದೆ ಬರುವ ಅನೇಕ ವಿಲೀನಗಳಿಗೆ ದಿಕ್ಸೂಚಿಯೂ ಆಗಿದೆ. ಇದರಿಂದ ಬ್ಯಾಂಕುಗಳಿಗೆ, ಗ್ರಾಹಕರಿಗೆ ಮತ್ತು ನೌಕರರಿಗೆ ಕೆಲವು ಅನುಕೂಲಗಳಿವೆ.

ಅನನುಕೂಲ ಅಲ್ಪ

ಬ್ಯಾಂಕುಗಳ ವಿಲೀನ ಸ್ವಲ್ಪಮಟ್ಟಿನ ಅನನುಕೂಲವನ್ನು ಸಹ ಉಂಟುಮಾಡುತ್ತದೆ. ಗ್ರಾಹಕರಿಗೆ ಉತ್ತಮ ಬ್ಯಾಂಕ್ ಆಯ್ಕೆ ಕಡಿಮೆಯಾಗುತ್ತದೆ. ಬ್ಯಾಂಕುಗಳ ವ್ಯವಹಾರ ಮತ್ತು ಮೊತ್ತದಲ್ಲಿ ಹೆಚ್ಚಾಗುವುದರಿಂದ ಅದರ ಸೂಕ್ತ ಮೇಲ್ವಿಚಾರಣೆ ಸಹ ಒಂದು ಕಠಿಣ ಪರೀಕ್ಷೆ ಆಗುತ್ತದೆ. ಪದೋನ್ನತಿ, ವರ್ಗಾವಣೆ ವಿಷಯದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವರ್ಗ ಅಸಮಾಧಾನ ಹೊಂದುವ ಸಾಧ್ಯತೆ ಇರುತ್ತದೆ. ಯಾವುದೇ ಬದಲಾವಣೆಗೆ ಹೊಸದರಲ್ಲಿ ವಿರೋಧ ಕಂಡುಬರುವುದು ಸಹಜ. ಕಾಲ ಕಳೆದಂತೆ ಈ ವಿಲೀನದ ಪ್ರಕ್ರಿಯೆಯ ತೊಡಕುಗಳು ತಾನೇತಾನಾಗಿ ಸರಿ ಹೊಂದಿ ಉತ್ತಮ ಫಲ ದೊರಕುತ್ತದೆ. ಹಾಗಾಗಿ ಈ ವಿಲೀನದ ಲಾಭ ಗ್ರಾಹಕರಿಗೆ, ಸಿಬ್ಬಂದಿ ವರ್ಗಕ್ಕೆ ಹಾಗೂ ಸರ್ಕಾರಕ್ಕೆ ಮುಂಬರುವ ವರ್ಷಗಳಲ್ಲಿ ಕಾಣಬಹುದು. ಸಹಜವಾಗಿ ಸಿಬ್ಬಂದಿ ವರ್ಗ ಹೊಸ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿ ಬಂದಾಗ ವಿರೋಧ ಕಾಣುವುದು ಸಹಜ. ವಿಲೀನಗೊಂಡ ಬ್ಯಾಂಕುಗಳು ಬೇರೆ ಬೇರೆ ರೀತಿಯ ಪ್ರಾದೇಶಿಕ ಸೊಗಡಿನಿಂದ ಬಂದಿರುತ್ತವೆ. ಕೆಲಸದ ಸಂಸ್ಕೃತಿ ಸಹ ಬೇರೆ ಬೇರೆ ಆಗಿರುತ್ತದೆ. ಒಮ್ಮೆಲೆ ಬೇರೆ ರೀತಿಯ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕು. ಸಿಬ್ಬಂದಿ ವರ್ಗದ ವರ್ಗೀಕರಣ ಸಹ ಬ್ಯಾಂಕ್​ಗಳ ವಿಲೀನದಿಂದ ಬೇರೆ ಆಗುವ ಸಾಧ್ಯತೆ ಇರುತ್ತದೆ. ವಿಲೀನವಾದ ಬ್ಯಾಂಕಿನಲ್ಲಿ ಇರುವ ಸ್ಥಾನಮಾನ ವಿಲೀನವಾಗುವ ಬ್ಯಾಂಕಿನಲ್ಲಿ ದೊರೆಯದೇ ಹೋಗಬಹುದು. ಇಷ್ಟೆಲ್ಲ ಕಷ್ಟಗಳ ನಡುವೆಯೂ ಬ್ಯಾಂಕುಗಳ ವಿಲೀನ ಇಂದಿನ ಅನಿವಾರ್ಯವಾಗಿದೆ. ಇದರ ಒಳ್ಳೆಯ ಫಲಗಳನ್ನು ಮುಂದಿನ ವರ್ಷಗಳಲ್ಲಿ ಖಂಡಿತ ಕಾಣಬಹುದು.

ಅನುಕೂಲಗಳು

 1. ಬ್ಯಾಂಕುಗಳ ವಿಲೀನದಿಂದ ಶಾಖೆಗಳು ಮತ್ತು ನೌಕರವರ್ಗ ಕಡಿಮೆ ಆಗಿ ನಿರ್ವಹಣಾ ವೆಚ್ಚ ಕಡಿಮೆ ಆಗುವುದು. ಇದರಿಂದ ಬ್ಯಾಂಕುಗಳ ಲಾಭಾಂಶ ಹೆಚ್ಚಾಗಿ ಸರ್ಕಾರಕ್ಕೆ ಮತ್ತು ಆಯಾ ಬ್ಯಾಂಕುಗಳು ಷೇರುದಾರರಿಗೆ ಹೆಚ್ಚಿನ ಅನುಕೂಲವಾಗುವುದು.
 2. ರಾಷ್ಟ್ರೀಕೃತ ಬ್ಯಾಂಕುಗಳ ನಡುವೆ ಅನವಶ್ಯಕ ಪೈಪೋಟಿ ಕಡಿಮೆಯಾಗುತ್ತದೆ. ಪ್ರಚಾರಕ್ಕೆ ಆಗುತ್ತಿದ್ದ ವೆಚ್ಚ ಕಡಿಮೆ ಆಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಬಡ್ಡಿ ಮತ್ತು ಇತರ ಸೇವಾ ಶುಲ್ಕ ಕಡಿಮೆ ಮಾಡಲು ಅನುಕೂಲವಾಗುತ್ತದೆ.
 3. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಸ್ವಯಂ ನಿವೃತ್ತಿ ಘೊಷಣೆಯಿಂದ ಸಿಬ್ಬಂದಿ ಸಂಬಳ ಇತರೆ ವೆಚ್ಚಗಳು ಕಡಿಮೆ ಆಗಿದೆ. ಈ ಸ್ವಯಂ ನಿವೃತ್ತಿ ಯೋಜನೆಯಿಂದ ಹೆಚ್ಚಿನ ಸಿಬ್ಬಂದಿ ತಾವಾಗಿಯೇ ಕೆಲಸದಿಂದ ನಿವೃತ್ತಿ ಹೊಂದಿರುತ್ತಾರೆ. ಇದರಿಂದ ಪ್ರತಿ ಸಿಬ್ಬಂದಿಯಿಂದ ಬ್ಯಾಂಕಿಗೆ ಆಗುವ ಲಾಭಾಂಶ ಹೆಚ್ಚಳ ಆಗುತ್ತದೆ. ಅಷ್ಟರಮಟ್ಟಿಗೆ, ಮುಂದೆ ಬರುವ ವರ್ಷಗಳಲ್ಲಿ ಆ ನಿವೃತ್ತಿ ಹೊಂದಿರುವ ನೌಕರರ ಸಂಬಳ ಇತರೆ ವೆಚ್ಚಗಳು ಆಯಾ ಬ್ಯಾಂಕುಗಳ ಲಾಭಾಂಶ ಹೆಚ್ಚಲು ಸಹಕರಿಸುತ್ತವೆ.
 4. ವಿಲೀನದಿಂದ ಎಲ್ಲ ಬ್ಯಾಂಕಿನಲ್ಲಿರುವ ಪರಿಣತ ಸಿಬ್ಬಂದಿ ವರ್ಗದ ಸೇವೆ ಗ್ರಾಹಕರಿಗೆ ದೊರೆಯುತ್ತದೆ ಹಾಗೂ ಎಲ್ಲ ತಾಂತ್ರಿಕ ಮತ್ತು ಇತರೆ ಉತ್ತಮ ಸೇವೆಗಳು ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರಿಗೂ ದೊರೆಯುತ್ತವೆ.
 5. ಸಿಬ್ಬಂದಿ ವರ್ಗಗಳ ಸೇವಾನಿಯಮಗಳು ಉತ್ತಮಗೊಳ್ಳುವ ಸಾಧ್ಯತೆ ಇರುತ್ತದೆ. ವಿಲೀನಗೊಂಡ ಬ್ಯಾಂಕುಗಳ ಹೆಚ್ಚುವರಿ ಖರ್ಚು ಉಳಿತಾಯ ಆಗುವುದರಿಂದ ನೌಕರರಿಗೆ ಪದೋನ್ನತಿ ಮತ್ತು ತಮ್ಮ ಕೆಲಸದಲ್ಲಿ ಆಸಕ್ತಿ ಹೆಚ್ಚಿ ತೃಪ್ತಿ ಸಿಗುವ ಸಾಧ್ಯತೆ ಇರುತ್ತದೆ.
 6. 6 ಬ್ಯಾಂಕುಗಳು ವಿಲೀನವಾದ ನಂತರ ಆರೋಗ್ಯಕರ ಬೆಳವಣಿಗೆ ಉಂಟಾಗಿ ಹೆಚ್ಚು ನೌಕರಿ ಸೃಷ್ಟಿ ಆಗುವ ಅವಕಾಶ ಜಾಸ್ತಿಯಾಗುತ್ತಿದೆ. ಆದ್ದರಿಂದ ನಮ್ಮ ಯುವಜನರಿಗೆ ಹೆಚ್ಚು ಉದ್ಯೋಗಾವಕಾಶ ಸಿಗುತ್ತದೆ. ಒಂದೇ ಪ್ರದೇಶದ ವಾತಾವರಣ ಇರುವ ಎರಡು ಅಥವಾ ಮೂರು ಬೇರೆ ಬೇರೆ ವಿಲೀನಗೊಂಡ ಬ್ಯಾಂಕಿನ ಶಾಖೆಗಳನ್ನು ಒಂದುಗೂಡಿಸುವುದರಿಂದ ಶಾಖೆಗಳ ಸಂಖ್ಯೆ ಕಡಿಮೆ ಆಗುತ್ತದೆ. ಇದರಿಂದ ಸಿಬ್ಬಂದಿ ವರ್ಗದ ಸಂಬಳ ಬಾಡಿಗೆ ಮತ್ತು ಇತರೆ ಖರ್ಚುಗಳು ಕಡಿಮೆಯಾಗುತ್ತವೆ. ಇದರಿಂದ ವಿಲೀನಗೊಂಡ ಬ್ಯಾಂಕಿನ ನಿರ್ವಹಣಾ ವೆಚ್ಚ ಕಡಿಮೆಯಾಗಿ ಲಾಭಾಂಶ ಹೆಚ್ಚಾಗುತ್ತದೆ.
 7. ಸಿಬ್ಬಂದಿ ಸಂಘಗಳು ಬೇರೆ ಬೇರೆ ರಾಜ್ಯದಲ್ಲಿ ಆಯಾ ಸಂಸ್ಕೃತಿಗೆ ತಕ್ಕಂತೆ ಸಾಮಾಜಿಕ ಪರಿಸರದಂತೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕುಗಳ ವಿಲೀನದಿಂದ ಈ ಸಂಘಗಳು ಒಂದೇ ರೀತಿಯಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟು ಕೆಲಸ ಮಾಡಬೇಕಾಗಿರುತ್ತದೆ. ಇದು ಸಹ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
 8. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸಿಬ್ಬಂದಿ ವರ್ಗ ಬೇರೆ ಬೇರೆ ಪ್ರದೇಶಗಳಿಗೆ ವರ್ಗವಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸಿಬ್ಬಂದಿ ವರ್ಗಗಳ ಪರಿಣತಿ ಎಲ್ಲ ಪ್ರದೇಶಗಳಿಗೆ ಲಭ್ಯವಾಗುವ ಅವಕಾಶ ಉಂಟಾಗುತ್ತದೆ ಮತ್ತು ಯಾವುದೇ ಒಂದು ವರ್ಗಕ್ಕೆ ಅನುಕೂಲ ಅಥವಾ ಅನನುಕೂಲವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
 9. ಸಿಬ್ಬಂದಿ ವರ್ಗಕ್ಕೆ ಏಕರೂಪವಾಗಿ ತರಬೇತಿ ಮತ್ತು ಪರಿಣತಿ ದೊರಕಿಸಿಕೊಡಲು ಎಲ್ಲ ವಿಲೀನಗೊಂಡ ಬ್ಯಾಂಕುಗಳಿಗೆ ಅನುಕೂಲವಾಗುತ್ತದೆ. ಸಿಬ್ಬಂದಿ ವರ್ಗದ ನಿಯೋಜನೆ ಸಹ ಉತ್ತಮ ಮಟ್ಟದ್ದಾಗಿ ಮಾಡಲು ಸಹಕಾರಿಯಾಗುತ್ತದೆ.
 10. ಹೆಚ್ಚುವರಿ ಸಿಬ್ಬಂದಿಯನ್ನು ಸರಿಯಾದ ರೀತಿಯಲ್ಲಿ ನಿಯೋಜಿಸಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ.
 11. ಸುಸ್ತಿ ಸಾಲ ವಸೂಲಾತಿ ಕ್ರಮವಾಗಿ ಸಾಗಿ ಉತ್ತಮಗೊಳ್ಳುತ್ತದೆ. ಹೊಸ ಸಾಲಗಳ ಪರಿಶೀಲನೆ ವಿನಿಯೋಗಕ್ಕೆ ಸೂಕ್ತ ಅವಕಾಶ ದೊರೆಯುತ್ತದೆ. ಆಡಳಿತಾತ್ಮಕ ವಿಷಯ, ಸಿಬ್ಬಂದಿ ನಿಯೋಜನೆ, ಸಾಲಗಳ ನಿರ್ವಹಣೆ ಮುಂತಾದ ವಿಷಯಗಳಿಗೆ ಅವಕಾಶ ದೊರೆಯುತ್ತದೆ.