ನಾಗ್ಪುರ: ಭಾರತ ತಂಡ 2023ರ ಏಕದಿನ ವಿಶ್ವಕಪ್ ೈನಲ್ ಬಳಿಕ ಮೊದಲ ಬಾರಿಗೆ ತವರಿನಲ್ಲಿ ಏಕದಿನ ಸರಣಿ ಆಡಲು ಸಜ್ಜಾಗಿದೆ. ವಿಸಿಎ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡದ ಸಂಯೋಜನೆ ಮತ್ತು ಪೂರ್ವಸಿದ್ಧತೆ ದೃಷ್ಟಿಯಿಂದ ರೋಹಿತ್ ಶರ್ಮ ಪಡೆಗೆ ಈ ಸರಣಿ ಮಹತ್ವದ್ದಾಗಿದೆ.
ಆಂಗ್ಲರ ವಿರುದ್ಧ ಯುವ ಆಟಗಾರರ ಭಾರತ ತಂಡ ನಿರ್ಭೀತಿಯ ಆಟದ ಮೂಲಕ ಟಿ20 ಸರಣಿ ವಶಪಡಿಸಿಕೊಂಡಿತ್ತು. ಸದ್ಯ ರನ್‌ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಎಲ್ಲರ ಕೇಂದ್ರಬಿಂದುವಾಗಲಿದ್ದಾರೆ. 2023ರ ಏಕದಿನ ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಆಟಗಾರರು ಚಾಂಪಿಯನ್ಸ್ ಟ್ರೋಫಿಗೂ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಪ್ರಮುಖ ಆಟಗಾರರು ದೇಶೀಯ ಟೂರ್ನಿಯಲ್ಲೂ ನೀರಸ ನಿರ್ವಹಣೆ ತೋರಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ, ರೋಹಿತ್ ಸಾಕಷ್ಟು ಏಕದಿನ ಪಂದ್ಯಗಳನ್ನಾಡಿಲ್ಲ. ಸ್ಥಿತ್ಯಂತರದಲ್ಲಿರುವ ಭಾರತ ತಂಡದಲ್ಲಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮಹತ್ತರ ಬದಲಾವಣೆ ಕಾಣುವ ಸಾಧ್ಯತೆಗಳಿವೆ.
ಮುಂದಿನ ಐಸಿಸಿ ಟೂರ್ನಿಗಳ ಜತೆಗೆ ಭವಿಷ್ಯದ ಯೋಜನೆಗಳ ನಿಟ್ಟಿನಲ್ಲಿ ದೀರ್ಘಾವಧಿಯ ನಾಯಕ ಅಭ್ಯರ್ಥಿ ಹುಡುಕಾಟದಲ್ಲಿ ಆಯ್ಕೆ ಸಮಿತಿ ಕಾರ್ಯಪ್ರವೃತ್ತವಾಗಿದೆ. ನಾಯಕತ್ವ ಹಸ್ತಾಂತರ ಪ್ರಕ್ರಿಯೆ ಸುಗಮಗೊಳಿಸುವ ಬಗ್ಗೆ ರೋಹಿತ್‌ಗೆ ಮಾಹಿತಿಯನ್ನೂ ನೀಡಲಾಗಿದ ಎನ್ನಲಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ-ರೋಹಿತ್ ಕೊನೆಯದಾಗಿ ಸೀಮಿತ ಓವರ್ ಕ್ರಿಕೆಟ್ ಆಡಿದ್ದರು. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಇವರಿಬ್ಬರೂ ಾರ್ಮ್‌ಗೆ ಮರಳಲು ಈ ಸರಣಿ ನಿರ್ಣಾಯಕ ಎನಿಸಿದೆ. ಮತ್ತೊಂದೆಡೆ, ಟೀಮ್ ಇಂಡಿಯಾದಲ್ಲಿ ಏಕದಿನ ಮಾದರಿಗಷ್ಟೇ ಸೀಮಿತವಾಗುತ್ತಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ ಪಾಲಿಗೂ ಈ ಸರಣಿ ಸವಾಲಾಗಿದೆ. ದೇಶೀಯ ಟೂರ್ನಿಯಲ್ಲಿ ಭರ್ಜರಿ ಾರ್ಮ್‌ನಲ್ಲಿ ಕಾಣಸಿಕೊಂಡಿದ್ದ ಶ್ರೇಯಸ್ ಲಯ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕುಲದೀಪ್ ಯಾದವ್, ಮೊಹಮದ್ ಶಮಿಗೆ ಸರಣಿ ಫಿಟ್ನೆಸ್ ಟೆಸ್ಟ್ ಎನಿಸಿದೆ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಸಹ 2023ರ ವಿಶ್ವಕಪ್ ಬಳಿಕ ಮೊದಲ ಬಾರಿ ಏಕದಿನ ಪಂದ್ಯ ಆಡಲಿದ್ದಾರೆ.
ಮುಖಾಮುಖಿ: 107
ಭಾರತ: 58
ಇಂಗ್ಲೆಂಡ್: 44
ಟೈ: 2, ರದ್ದು: 3
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್ ಸ್ಟಾರ್