ರಾಕೆಟ್ ಮ್ಯಾನ್ ಹೆಗಲಿಗೆ ಇಸ್ರೋ

| ಉಮೇಶ್​ಕುಮಾರ್ ಶಿಮ್ಲಡ್ಕ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋವನ್ನು ಇನ್ನು ಮುಂದೆ ‘ರಾಕೆಟ್ ಮ್ಯಾನ್’ ಕೆ.ಶಿವನ್ ಮುನ್ನಡೆಸಲಿದ್ದಾರೆ ಎಂಬ ಸುದ್ದಿ(ಜ.10) ಓದಿದ ಕೂಡಲೇ, ಸ್ಮೃತಿಪಟಲದಲ್ಲಿ ಒಂದರೆಕ್ಷಣ ನಮ್ಮ ದೇಶದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂರ ಚಿತ್ರ ಹಾಗೇ ಮಿಂಚಿ ಮರೆಯಾಯಿತು. ಬಹುಶಃ ರಾಕೆಟ್ ಮ್ಯಾನ್ ಎಂಬ ವಿಶೇಷಣ ಅದಕ್ಕೆ ಕಾರಣವಿರಬಹುದು. ಬಡತನದ ಬೇಗೆಯಲ್ಲಿ ಬೆಳೆದು ಬಂದವರೊಬ್ಬರು ‘ಇಸ್ರೋ’ದಂತಹ ಪ್ರತಿಷ್ಠಿತ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂಬುದೇ ಎಂಥವರನ್ನೂ ಭಾವುಕವಾಗಿಸುವಂತಹ ವಿಷಯ. ಬಹುಪಾಲು ಸಾಧಕರ ಹಿನ್ನೆಲೆ ಗಮನಿಸಿ ನೋಡಿ. ಅವರೆಲ್ಲರೂ ಕಡುಬಡತನ, ಅವಮಾನ, ಸಂಕಷ್ಟಗಳ ಸರಮಾಲೆಯನ್ನು ಎದುರಿಸಿದವರೇ ಇರುತ್ತಾರೆ. ಇಸ್ರೋದ ನಿಯೋಜಿತ ಅಧ್ಯಕ್ಷ ಕೈಲಾಸವಡಿವು ಶಿವನ್ ಕೂಡ ಅದೇ ಸಾಲಿನಲ್ಲಿ ನಿಲ್ಲುವವರು.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್​ಕೋಯಿಲ್​ನ ಸರಕ್ಕಾಲ್​ವಿಲೈನ ಬಡ ಕೃಷಿ ಕುಟುಂಬದ ಹಿನ್ನೆಲೆಯ ಕೆ.ಶಿವನ್ ಶಾಲಾ ಶಿಕ್ಷಣ ಪೂರ್ತಿಗೊಳಿಸುವ ಮುನ್ನವೇ ಹಲವು ಕಠಿಣ ಸನ್ನಿವೇಶಗಳನ್ನು ಎದುರಿಸಿದವರು.

‘ನಮ್ಮದು ಬಡ ಕೃಷಿ ಕುಟುಂಬ. ತಂದೆ ಕೈಲಾಸವಡಿವು ಕೃಷಿಕ. ತಾಯಿ ಚೆಲ್ಲಮ್ಮ, ಅವರು ಈಗ ಇಲ್ಲ. ತಂದೆಯವರು ಸರಕ್ಕಾಲ್​ವಿಲೈನ ಸಮೀಪ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದರು. ಆದರೆ, ಮನೆಯಲ್ಲಿನ ಆರ್ಥಿಕ ಸಂಕಷ್ಟದ ಕಾರಣ ಅಣ್ಣ ಅರ್ಧಕ್ಕೇ ಶಾಲಾ ಶಿಕ್ಷಣ ಮೊಟಕುಗೊಳಿಸಿದ್ದರು. ಆದಾಗ್ಯೂ, ಒಂಭತ್ತನೇ ತರಗತಿ ಓದಬೇಕಾದರೆ ಶಾಲಾ ಶಿಕ್ಷಣದ ಶುಲ್ಕ ಪಾವತಿಸುವುದಕ್ಕಾಗಿ ಮಾವಿನ ಹಣ್ಣು ಮಾರುವ ಕೆಲಸ ಮಾಡಬೇಕಾಗಿ ಬಂದಿತ್ತು’ ಎಂಬ ವಿಷಯವನ್ನು ಸ್ವತಃ ಶಿವನ್ ಡೆಕ್ಕನ್ ಕ್ರಾನಿಕಲ್ ಪತ್ರಿಕೆ ಜತೆ ಹಂಚಿಕೊಂಡಿದ್ದಾರೆ.

ಸರಕ್ಕಾಲ್​ವಿಲೈನಲ್ಲೇ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಪಡೆದರು. ಇದಾಗಿ, 1974ರಲ್ಲಿ ಪಿಯು ಶಿಕ್ಷಣ ಪಡೆಯುತ್ತಿರುವಾಗಲೇ ಇಂಜಿನಿಯರಿಂಗ್ ಶಿಕ್ಷಣ ಪಡೆಯಬೇಕು ಎಂದು ಶಿವನ್ ನಿರ್ಧರಿಸಿದ್ದರು. ಆದರೆ, ಅವರ ಕುಟುಂಬದ ಆರ್ಥಿಕ ಸ್ಥಿತಿಗತಿ ದೇಶದ ಎಲ್ಲ ಕೃಷಿ ಕುಟುಂಬಗಳ ಕತೆಯಂತೆಯೇ ಅದಕ್ಕೆ ಪೂರಕವಾಗಿರಲಿಲ್ಲ. ಕೊನೆಗೆ, ನಾಗರ್​ಕೋಯಿಲ್​ನ ಎಸ್.ಟಿ. ಹಿಂದು ಕಾಲೇಜಿನಲ್ಲಿ ಗಣಿತ ವಿಷಯದ ಪದವಿ ಶಿಕ್ಷಣಕ್ಕೆ ಸೇರ್ಪಡೆಗೊಂಡರು. ನಾಲ್ಕೂ ವಿಷಯಗಳಲ್ಲಿ ಶೇಕಡ 100 ಅಂಕ ಗಳಿಸಿ ದಾಖಲೆ ಬರೆದರು. ಈ ಸಾಧನೆಯಿಂದಾಗಿ ಅವರಿಗೆ ಮದ್ರಾಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ವಿದ್ಯಾರ್ಥಿ ವೇತನದೊಂದಿಗೆ ಕಲಿಯುವ ಅವಕಾಶ ಸಿಕ್ಕಿತು. ಅದೇ ಕಾಲೇಜಿನಲ್ಲಿ ಅಬ್ದುಲ್ ಕಲಾಂ ಕೂಡ ಓದಿದ್ದರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಎಂಐಟಿಗೆ ಸೇರಿದ ಅಂದಿನ ದಿನಗಳ ಬಗ್ಗೆ ಮಾತನಾಡುತ್ತ ಶಿವನ್, ‘ತಂದೆ ಹೆಸರಿನಲ್ಲಿ ಒಂದು ಎಕರೆ ಕೃಷಿ ಜಮೀನು ಇತ್ತು. ಅದರಲ್ಲಿ ಭತ್ತ ಮತ್ತು ಅವಧಿ ಬೆಳೆಗಳನ್ನು ಬೆಳೆಯುತ್ತಿದ್ದೆವು. ಇನ್ನೊಂದೆಡೆ ಮಾವು ಬೆಳೆದಿದ್ದೆವು. ಎಂಐಟಿಗೆ ನನ್ನನ್ನು ಸೇರಿಸುವುದಕ್ಕಾಗಿ ನನ್ನ ತಂದೆ ಕಾಲು ಎಕರೆ ಜಮೀನು ಮಾರಾಟ ಮಾಡಿದರು. ನಾನು, ಅಣ್ಣ, ಇಬ್ಬರು ಸಹೋದರಿಯರು ಅಪ್ಪ ಮತ್ತು ಅಮ್ಮ ಸೇರಿ ಆರು ಸದಸ್ಯರ ಇಡೀ ಕುಟುಂಬಕ್ಕೆ ಆದಾಯ ಒದಗಿಸುತ್ತಿದ್ದ ಆಧಾರ ಅದಾಗಿತ್ತು. ನಾನೂ ಆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಇನ್ನೂ ನೆನಪಿದೆ. ಎಂಐಟಿನಲ್ಲಿ ಕಲಾಂ ಅವರು ತೆಗೆದುಕೊಂಡ ಅದೇ ಏರೋನಾಟಿಕಲ್ ಇಂಜಿನಿಯರಿಂಗ್ ಕೋರ್ಸ್​ಗೆ ನಾನೂ ಸೇರಿದೆ. ಕಲಾಂ ಅವರದ್ದು ಕಾಲೇಜಿನ ನಾಲ್ಕನೇ ಬ್ಯಾಚು, ನನ್ನದು 29ನೇಯದ್ದು. ನಮ್ಮ ನಡುವೆ 25 ವರ್ಷಗಳ ಅಂತರ. ಈ ಕೋರ್ಸ್ ಪೂರ್ಣಗೊಂಡ ಬಳಿಕ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್​ಸಿ)ಗೆ ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಸ್ನಾತಕೋತ್ತರ ಪದವಿ(ಎಂಇ)ಗೆ ಸೇರ್ಪಡೆಗೊಂಡೆ. 1982ರಲ್ಲಿ ಇಸ್ರೋದಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್​ಎಲ್​ವಿ) ಯೋಜನೆಯಲ್ಲಿ ಕೆಲಸಕ್ಕೆ ಸೇರಿದೆ’ ಎಂದು ಹಳೇ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.

ಅಲ್ಲಿಂದೀಚೆಗೆ 36 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಇಸ್ರೋ ಮತ್ತು ಅದರ ಸಹಯೋಗಿ ಸಂಸ್ಥೆಗಳಲ್ಲಿ ಹಲವು ಹೊಣೆಗಾರಿಕೆಗಳನ್ನು ನಿಭಾಯಸಿದ್ದಾರೆ. ಪಿಎಸ್​ಎಲ್​ವಿ(ಇಸ್ರೋ ಇದನ್ನು ತನ್ನ ‘ಗಾಣದೆತ್ತು’ ಎಂದು ಕರೆದುಕೊಂಡಿದೆ) ಯೋಜನೆಯ ಚಿಂತನೆ, ವಿನ್ಯಾಸ, ಏಕೀಕರಣ ಮತ್ತು ವಿಶ್ಲೇಷಣೆ ತನಕದ ವಿವಿಧ ಹಂತಗಳಲ್ಲಿ ಶಿವನ್ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಪಿಎಸ್​ಎಲ್​ವಿ ಯೋಜನೆ ಇಸ್ರೋದ ಜಿಎಸ್​ಎಲ್​ವಿ, ಜಿಎಸ್​ಎಲ್​ವಿ-ಎಂಕೆ3, ಆರ್​ಎಲ್​ವಿ-ಟಿಡಿ ಮುಂತಾದ ನವೋನ್ವೇಷಣೆಯ ಯೋಜನೆಗಳಿಗೆ ಭದ್ರ ಬುನಾದಿ ಒದಗಿಸಿದೆ.

ಇದಲ್ಲದೆ, ಇಸ್ರೋದ ಎಲ್ಲ ಉಡಾವಣಾ ವಾಹನಗಳ ನಿಜಾವಧಿಯ ಮತ್ತು ಅದಕ್ಕೆ ಹೊರತಾದ ಅವಧಿಯಲ್ಲಿನ ಪಯಣ ಪಥವನ್ನು ಅನುಸರಿಸುವಂತಹ ‘6ಡಿ’ ಸಾಫ್ಟ್​ವೇರ(ಸಿತಾರಾ)ನ್ನು ಸಿದ್ಧಪಡಿಸುವ ಯೋಜನೆಯ ಮುಖ್ಯಸ್ಥರಾಗಿ ಅವರು ಕೆಲಸ ಮಾಡಿದ್ದರು. ಹಾಗೆಯೇ, ವರ್ಷದ ಯಾವುದೇ ದಿನ ಎಂಥದ್ದೇ ವಾತಾವರಣ ಇದ್ದರೂ ರಾಕೆಟ್ ಉಡಾವಣೆ ಮಾಡುವ ಹೊಸ ಮಾದರಿಯ ಗಾಳಿ ಆಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನಕ್ಕೆ ತಂದಿದ್ದಾರೆ.

ಪಿಎಸ್​ಎಲ್​ವಿ ಮೂಲಕ ಭಾರತದ ಮಂಗಳ ಯೋಜನೆ ‘ಮಾಮ್​ನ ಉಡಾವಣಾ ತಂತ್ರಗಾರಿಕೆಯಲ್ಲೂ ಅವರದ್ದು ಪ್ರಮುಖ ಪಾತ್ರ. 2011ರ ಏಪ್ರಿಲ್​ನಲ್ಲಿ ಜಿಎಸ್​ಎಲ್​ವಿ ಯೋಜನೆ ಸೇರ್ಪಡೆಗೊಂಡು, ಸ್ವದೇಶಿ ನಿರ್ವಿುತ ಕ್ರಯೋಜನಿಕ್ ಇಂಜಿನ್ ಮೂಲಕ ಅದನ್ನು ಉಡಾವಣೆ ಮಾಡಿದ ಯಶಸ್ಸು, ಕೀರ್ತಿ ಅವರದ್ದು.

ಇಂಥ ಶಿವನ್​ಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭ್ಯವಾಗಿವೆ. ಮುಖ್ಯವಾಗಿ 2014ರ ಏಪ್ರಿಲ್​ನಲ್ಲಿ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 2013ರಲ್ಲಿ ಎಂಐಟಿಯ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ 2013ರಲ್ಲಿ ಗೌರವ ಪ್ರಶಸ್ತಿ, 2011ರಲ್ಲಿ ಡಾ. ಬಿರೇನ್ ರಾಯ್ ಬಾಹ್ಯಾಕಾಶ ವಿಜ್ಞಾನ ಪ್ರಶಸ್ತಿ, 2007ರಲ್ಲಿ ಇಸ್ರೋದ ಪ್ರತಿಭಾ ಪುರಸ್ಕಾರ, 1999ರಲ್ಲಿ

ಡಾ. ವಿಕ್ರಂ ಸಾರಾಭಾಯಿ ಸಂಶೋಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಸ್ರೋದಲ್ಲಿನ ತಮ್ಮ ಕೆಲಸ ಕಾರ್ಯಗಳ ನಡುವೆ ಅವರು ಶಿಕ್ಷಣವನ್ನೂ ಮುಂದುವರಿಸಿದ್ದು, 2006ರಲ್ಲಿ ಬಾಂಬೆಯ ಇಂಡಿಯನ್ ಇನ್​ಸ್ಟಿಟ್ಯೂಟ್​ನಿಂದ ಏರೋಸ್ಪೇಸ್ ಇಂಜಿಯರಿಂಗ್​ನಲ್ಲಿ ಪಿಎಚ್​ಡಿ ಪದವಿ ಪಡೆದರು.

ಇನ್ನು ಅವರ ವೈಯಕ್ತಿಕ ಬದುಕಿನತ್ತ ನೋಡಿದರೆ, ಪತ್ನಿ ಗೃಹಿಣಿ. ಇಬ್ಬರು ಪುತ್ರರಿದ್ದಾರೆ.

ಸದ್ಯ ಮೂರು ವರ್ಷಗಳ ಹಿಂದೆ ಜನವರಿಯಲ್ಲಿ ಇಸ್ರೋ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ಹೊತ್ತ ಎ.ಎಸ್.ಕಿರಣ್ ಕುಮಾರ್ ಅವರ ಅಧಿಕಾರಾವಧಿ ಇಂದೇ(ಜ.14) ಕೊನೆಗೊಳ್ಳುತ್ತಿದೆ. ಅವರು ಇಸ್ರೋ ನಿರ್ವಿುತ 100ನೇ ಉಪಗ್ರಹ (ಇಚ್ಟಠಿಟಠಚಠಿ)ವನ್ನು ಪಿಎಸ್​ಎಲ್​ವಿ ಸಿ-40 ಉಡಾವಣಾ ವಾಹಕದ ಮೂಲಕ ಕಕ್ಷೆ ಸೇರಿಸಿ ಯಶಸ್ಸಿನ ಅಲೆಯನ್ನೇರಿ ನಿವೃತ್ತರಾಗುತ್ತಿದ್ದಾರೆ.

ಇದೇ ವೇಳೆ, ಇಸ್ರೋದ ನಿಯೋಜಿತ ಅಧ್ಯಕ್ಷ ಅರವತ್ತನೇ ವಯಸ್ಸಿನಲ್ಲಿ ಇಸ್ರೋ ಸಾರಥ್ಯ ವಹಿಸಿಕೊಳ್ಳಲು ಮುಂದಾಗಿದ್ದು, ‘ಇದೊಂದು ವಿರಳ ಅವಕಾಶ. ಬಾಹ್ಯಾಕಾಶ ತಂತ್ರಜ್ಞಾನದ ದಿಗ್ಗಜರೆನಿಸಿಕೊಂಡ ವಿಕ್ರಂ ಸಾರಾಭಾಯಿ, ಸತೀಶ್ ಧವನ್, ಯು.ಆರ್.ರಾವ್ ಮುಂತಾದವರು ಅಲಂಕರಿಸಿದ್ದ ಈ ಸ್ಥಾನದ ಹೊಣೆಗಾರಿಕೆಯನ್ನು ಅತ್ಯಂತ ದೀನನಾಗಿ ಒಪ್ಪಿಕೊಳ್ಳುತ್ತಿದ್ದೇನೆ. ಹಾಲಿ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಈ ಸಂಸ್ಥೆಯನ್ನು ಸಾಧನೆಯ ಪ್ರಗತಿ ಪಥದಲ್ಲಿ ತಂದು ನಿಲ್ಲಿಸಿದ್ದಾರೆ. ಅದನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯುವ ಬಹುದೊಡ್ಡ ಹೊಣೆಗಾರಿಕೆಯನ್ನು ನಿಭಾಯಿಸಲು ಮುಂದಾಗಿದ್ದೇನೆ’ ಎಂದು ಹೇಳಿದ್ದಾರೆ.

ಇಸ್ರೋ ಜಾಗತಿಕವಾಗಿ ಗಮನ ಸೆಳೆದಿದ್ದು, ಕಡಿಮೆ ಖರ್ಚಿನಲ್ಲಿ ವಿದೇಶಿ ಉಪಗ್ರಹಗಳನ್ನು ಉಡಾಯಿಸಿ ಯಶಸ್ಸು ಕಂಡಿರುವ ಕಾರಣ ಶಿವನ್ ಅವರ ಮೇಲಿನ ಹೊಣೆಗಾರಿಕೆಯೂ ಇನ್ನಷ್ಟು ಹೆಚ್ಚಿದೆ. ಇಸ್ರೋ ಈಗಾಗಲೇ ಹಾಕಿಕೊಂಡಿರುವ ಚಂದ್ರಯಾನ 2, ಸೌರ ಮಿಷನ್​ಗಳನ್ನು ಪೂರೈಸುವ ಸವಾಲೂ ಅವರ ಎದುರಿಗಿದೆ.

Leave a Reply

Your email address will not be published. Required fields are marked *