Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಯುವ ಮನಸುಗಳಿಗೆ ಶಕ್ತಿ ಸಂಜೀವಿನಿ ವಿವೇಕಾನಂದ

Friday, 12.01.2018, 3:03 AM       No Comments

| ಸ್ವಾಮಿ ವೀರೇಶಾನಂದ ಸರಸ್ವತೀ

ಸ್ವಾಮಿ ವಿವೇಕಾನಂದರು ಮಾನವ ಇತಿಹಾಸದಲ್ಲಿ ಸಮಾಜದ ಮೇಲೆ ಬೀರಿದ ಪ್ರಭಾವ ಅತ್ಯಪಾರ ಹಾಗೂ ಅಸಾಧಾರಣ. ಶಕ್ತಿ, ಸ್ವಾಭಿಮಾನ, ಸ್ವಾವಲಂಬನೆ, ಸೇವೆ, ಆತ್ಮವಿಶ್ವಾಸ, ಯೋಗ್ಯ ವ್ಯಕ್ತಿತ್ವ, ರಾಷ್ಟ್ರಭಕ್ತಿ-ಇವೇ ಮೊದಲಾದ ವಿಚಾರಗಳಲ್ಲಿ ಅವರ ಸ್ಪಷ್ಟ ವಿಚಾರಗಳು ನಮ್ಮನ್ನು ಮಂತ್ರಮುಗ್ಧರನ್ನಾ ಗಿಸುತ್ತವೆಯಲ್ಲದೆ ಕ್ರಿಯಾಶೀಲರಾಗಿ ರೂಪುಗೊಳ್ಳಲು ಪ್ರೇರಣಾದಾಯಕವಾಗಿವೆ.

ಯಾವುದೇ ಕಾಲದಲ್ಲೂ ಸಮಾಜದ ಪ್ರಗತಿಯಲ್ಲಿ ಯುವಕರ ಪಾತ್ರ ಹಿರಿದಾದರೂ ಭವಿಷ್ಯದ ಬಗ್ಗೆ ಕಣ್ತುಂಬ ಕನಸುಗಳನ್ನೇ ತುಂಬಿಕೊಂಡಿರುವ ಅವರಲ್ಲಿ ಹೊಸತನದ ಬಯಕೆ ಅಧಿಕವಾಗಿ ಕಂಡುಬರುವುದು ಸಹಜವೂ ಹೌದು, ಶ್ಲಾಘನೀಯವೂ ಸಹ. ಆದರೆ ಅವರ ಹೊಸತನದ ಬಯಕೆ ಹಳೆಯದನ್ನು ತಿರಸ್ಕರಿಸುವ, ಲೇವಡಿ ಮಾಡುವ, ಕೆಲವೊಮ್ಮೆ ದ್ವೇಷಿಸುವ ವಿಚಿತ್ರ, ವಿಕೃತ ನಡವಳಿಕೆಗೆ ಎಡೆಮಾಡಿಕೊಟ್ಟಲ್ಲಿ ಅದಕ್ಕೆ ಸರಿಯಾದ, ಸಕಾಲಿಕವಾದ ಮಾರ್ಗದರ್ಶನದ ಕೊರತೆಯೇ ಕಾರಣ ಎನಿಸುತ್ತದೆ. ಯುವಶಕ್ತಿಯಿಂದ ರಚನಾತ್ಮಕ ಕಾರ್ಯಗಳು ನಡೆಯದಿದ್ದರೆ ಅದಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರೇ ಹೊಣೆಗಾರರಾಗುತ್ತಾರೆ. ನಮ್ಮ ಮುಂದಿರುವ ಹಲವಾರು ಆಯ್ಕೆಗಳಲ್ಲಿ ಯಾವುದನ್ನು ಆಯ್ದುಕೊಂಡು ಕಾರ್ಯಪ್ರವೃತ್ತರಾಗಬೇಕೆಂಬ ವಿವೇಚನೆಯನ್ನು ಯುವಕರಿಗೆ ನೀಡಬೇಕಾದ ಗುರುತರ ಜವಾಬ್ದಾರಿ ಈ ಮೂವರ ಮೇಲೆಯೇ ಇದೆ. ಅಲ್ಲದೆ ಹಿರಿಯರು ಈ ಹಂತದಲ್ಲಿ ಎಚ್ಚರ ವಹಿಸಬೇಕಾದ ಅತಿಮುಖ್ಯ ಅಂಶವೆಂದರೆ, ತಮ್ಮ ಜೀವನಕ್ಕೊಂದು ಆದರ್ಶದ ಅನ್ವೇಷಣೆಯಲ್ಲಿ ಸಾಗುವ ಯುವ ಮನಸ್ಸುಗಳಿಗೆ ಆದರ್ಶದ ಬೋಧನೆಯಷ್ಟೇ ಸಾಲದು; ಸ್ಪೂರ್ತಿಯುತ ಜೀವನದ ಪ್ರೇರಣೆಯೂ ಬೇಕು!

ಯುವಜನರ ಬದುಕಿಗೆ ದಾರಿದೀಪವಾಗಬಲ್ಲ ಸ್ವಾಮಿ ವಿವೇಕಾನಂದರ ಕೆಲವು ಚಿಂತನೆಗಳನ್ನು ವಿಶ್ಲೇಷಿಸಬಹುದು.

?·ಜೀವನ ಎಂದರೇನು?: ಸ್ವಾಮಿ ವಿವೇಕಾನಂದರು ಜೀವನವನ್ನು ‘ಹೋರಾಟ’ ಹಾಗೂ ‘ಸವಾಲು’ ಎಂದೇ ವಿಶ್ಲೇಷಿಸುತ್ತಾರೆ. ಅವರೆನ್ನುತ್ತಾರೆ: ‘ತನ್ನನ್ನು ಕೆಳಕೊತ್ತುತ್ತಿರುವ ಪರಿಸರ ಹಾಗೂ ಪರಿಸ್ಥಿತಿಗಳಲ್ಲಿ ಜೀವಿಯ ವಿಕಸನ ಹಾಗೂ ಮುನ್ನಡೆಯೇ ಜೀವನ’. ಪರಿಸರ ಹಾಗೂ ಪರಿಸ್ಥಿತಿಗಳು ಮಾನವನನ್ನು ನಿಯಂತ್ರಿಸಲು ನಿರಂತರ ಹೊಂಚುಹಾಕುತ್ತವೆ. ಸುಭಾಷಿತವೊಂದು ಮಾನವ ಬದುಕಿನ ವೈಚಿತ್ರ್ಯವನ್ನು ಕುರಿತು, ‘ಮಾನವ ಅಳುತ್ತ ಈ ಜಗತ್ತಿಗೆ ಪದಾರ್ಪಣೆ ಮಾಡುತ್ತಾನೆ, ಗೊಣಗುತ್ತ ಬದುಕುತ್ತಾನೆ; ನಿರಾಶೆಯಲ್ಲಿ ಜಗತ್ತಿನಿಂದ ನಿರ್ಗಮಿಸುತ್ತಾನೆ!… ಆದರೆ ಸಾವನ್ನು ಸ್ವಾಗತಿಸಬೇಕೆಂದರೆ ಒಂದಿಲ್ಲೊಂದು ದಿನ ಸಾಯಲೇಬೇಕು ಎಂದಲ್ಲ! ಬದಲಾಗಿ ಪರಾಕ್ರಮದಿಂದ ಸಾಯುವ’ ಎಂದು. ಜೀವನ ನಿಂತ ನೀರಾಗಬಾರದು! ಅದು ಚಲನಶೀಲತೆ ಕಾಯ್ದುಕೊಳ್ಳಲೇಬೇಕು. ಮಾನವನು ತನ್ನ ಬದುಕಿನ ಪಯಣದಲ್ಲಿ ನಿಂತ ಜಾಗದಲ್ಲಿ ನಿಲ್ಲದೆ, ನಿಂತ ಜಾಗದಲ್ಲೇ ಕುಸಿಯದೆ ಸ್ಥಿರವಾಗಿ ನಿಲ್ಲುವುದೂ ಅಲ್ಲದೆ ಆತ್ಮವಿಶ್ವಾಸದಿಂದ ಬದುಕಿನ ಗುರಿಯತ್ತ ಸಾಗಬೇಕೆಂಬ ಆಶಯ ಸ್ವಾಮಿ ವಿವೇಕಾನಂದರದ್ದು. ‘ವಿಕಸನವೇ ಜೀವನ’ ಎನ್ನುವ ವಿವೇಕಾನಂದರು ‘ದುರ್ಬಲತೆ’ ಎಂಬುದು ಗುಲಾಮಗಿರಿಗೆ ದಾರಿ ಮಾಡಿಕೊಡುತ್ತದೆ. ಹಲವಾರು ಶಾರೀರಿಕ ಹಾಗೂ ಮಾನಸಿಕ ವ್ಯಥೆಗಳಿಗೆ ದುರ್ಬಲತೆಯೇ ಕಾರಣ, ದೌರ್ಬಲ್ಯವು ಮರಣವೇ ಸರಿ ಎಂದು ಎಚ್ಚರಿಸುತ್ತಾರೆ. ಅಂದರೆ ಜೀವನವನ್ನು ಸಂತೋಷದಿಂದ ಸ್ವೀಕರಿಸಬೇಕು ಮತ್ತು ಸಾಹಸದಿಂದ ಬದುಕಬೇಕು ಎಂಬ ತಿಳಿವಳಿಕೆ ನೀಡುತ್ತಾರೆ.

ಜೀವನ ಎಂಬುದೊಂದು ಯಜ್ಞ, ಇದೊಂದು ಯೋಗವೂ ಹೌದು. ಇಲ್ಲಿ ಕಷ್ಟ-ಸುಖಗಳು ನಮ್ಮ ಅನಿವಾರ್ಯ ಮಿತ್ರರಾಗುತ್ತಾರೆ. ಸುಖಕ್ಕಿಂತ ದುಃಖವು ಹೆಚ್ಚು ಪ್ರಖರ ಹಾಗೂ ತೀಕ್ಷ್ಣ. ದುಃಖವು ಮಾನವನನ್ನು ಆಳವಾಗಿ ಯೋಚಿಸುವಂತೆ ಮಾಡುತ್ತದೆ. ಆಗ ಅವನಲ್ಲಿ ಮೂಡುವ ಉನ್ನತ ಹಾಗೂ ಶಕ್ತಿಯುತ ಆಲೋಚನೆಗಳು ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಗಳನ್ನು ಊರ್ಜಿತಗೊಳಿಸುತ್ತದೆ. ‘ನಮ್ಮ ಭಾಗ್ಯದ ದಿನಗಳನ್ನು ರೂಪಿಸಿಕೊಳ್ಳಬೇಕಾದವರು ನಾವೇ’ ಎಂದು ಮತ್ತೆ ಮತ್ತೆ ನೆನಪಿಸುವ ಸ್ವಾಮಿ ವಿವೇಕಾನಂದರು ‘ಜೀವನವನ್ನು ಅಲ್ಲಗಳೆಯಬೇಡ, ವೈಫಲ್ಯಗಳ ಕುರಿತಾಗಿ ಕೊರಗಬೇಡ, ವಿಧಿಲಿಖಿತವನ್ನು ಶಪಿಸಬೇಡ, ಸಾಹಸದಿಂದ ಹೋರಾಡು, ಸತ್ಯಕ್ಕಾಗಿ ಬದುಕು, ಸಮಯ ಬಂದರೆ ಸತ್ಯಕ್ಕಾಗಿಯೇ ಪ್ರಾಣತ್ಯಾಗ ಮಾಡು’ ಎಂದು ತಿಳಿಹೇಳುತ್ತಾರೆ.

ಛಾಂದೋಗ್ಯ ಉಪನಿಷತ್ ಹೇಳುತ್ತದೆ:

‘ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ

ತದೇವ ವೀರ್ಯವತ್ತರಂ ಭವತಿ’

ಅಂದರೆ ಯಾವುದೇ ಕಾರ್ಯವನ್ನು ಸಮರ್ಪಕ ಜ್ಞಾನದೊಂದಿಗೆ ಕೈಗೊಂಡಾಗ, ಶ್ರದ್ಧೆಯ ಬೆಳಕಿನಲ್ಲಿ ನಿರ್ವಹಿಸಿದಾಗ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ನಿರೂಪಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ.

·ಆತ್ಮವಿಶ್ವಾಸ: ಆಸ್ತಿಕ ಹಾಗೂ ನಾಸ್ತಿಕ ಎಂಬ ವಿಷಯಗಳು ನಮಗೆ ಸುಪರಿಚಿತವೇ ಆಗಿವೆ. ಆದರೆ ‘ನಾಸ್ತಿಕ’ ಎಂಬ ಶಬ್ದಕ್ಕೆ ವಿವೇಕಾನಂದರ ವಿಶ್ಲೇಷಣೆ ಅತ್ಯದ್ಭುತ! ದೇವರನ್ನು ನಂಬದೇ ಇರುವವನು ‘ನಾಸ್ತಿಕ’ ಎಂಬುದು ಹಳೆಯ ನಂಬಿಕೆ! ಆದರೆ ವಿವೇಕಾನಂದರೆನ್ನುತ್ತಾರೆ: ‘ನೀನು ಮುನ್ನೂರ ಮೂವತ್ತಮೂರು ಕೋಟಿ ದೇವತೆಗಳನ್ನು ನಂಬಿಯೂ ನಿನ್ನನ್ನು ನೀನು ನಂಬದಾದರೆ ನೀನು ನಾಸ್ತಿಕ!’ ನಿನ್ನನ್ನು ನೀನು ನಂಬಿದಾಗ ನಿನಗೆ ನೀನೇ ಸಹಾಯ ಮಾಡಿಕೊಳ್ಳಬಲ್ಲೆ; ನಿನಗೆ ನೀನೇ ಸಹಾಯ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ನೀನು ಬದುಕಲೂ ಅನರ್ಹ!

ಋಷಿವಾಣಿ ಹೀಗೆನ್ನುತ್ತದೆ: ಆತ್ಮಾತ್ಮಸಾ ನ ಚೇತ್ತ್ರಾತಸ್ತದುಪಾಯೋಸ್ತಿನೇತರಃ|

ಅಂದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳದಿದ್ದರೆ ಬೇಕಾದ ರಕ್ಷಣೆಯೂ ಸಾಧ್ಯವಿಲ್ಲ!

ಆತ್ಮವಿಶ್ವಾಸವು ಮಾನವನ ಉದ್ಧಾರದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಯುವಕರಿಗೆ ಉನ್ನತ ವಿಚಾರಗಳಲ್ಲಿ ನಂಬಿಕೆ ಹಾಗೂ ಧ್ಯೇಯನಿಷ್ಠವಾದ ಬದುಕು ಅತ್ಯವಶ್ಯಕ ಎಂಬುದು ಸ್ವಾಮಿ ವಿವೇಕಾನಂದರ ನಿಲುವು. ಮಾನವನಲ್ಲಿ ಶಕ್ತಿ ಇದ್ದರೂ ಅವನು ನರಳುವಂತಾಗುವುದು ಇಚ್ಛಾಶಕ್ತಿಯ ಕೊರತೆಯಿಂದ ಎಂಬ ಸತ್ಯವನ್ನು ಅವರು ಪರಿಚಯಿಸುತ್ತಾರೆ. ಇಚ್ಛಾಶಕ್ತಿಯ ಕೊರತೆಯು ಮಾನವನ ಬದುಕಿನಲ್ಲಿ ಶುಷ್ಕತೆ, ಶೂನ್ಯತೆ ಹಾಗೂ ನಿಷ್ಕಿ›ಯತೆಯನ್ನು ಮೂಡಿಸಿ ಅವನನ್ನು ‘ಹತಭಾಗ್ಯ’ನನ್ನಾಗಿಸುತ್ತದೆ. ಬಹಿರಂಗ ಜಗತ್ತನ್ನು ಗೆಲ್ಲಲು ಅತ್ಯವಶ್ಯವಾದ ಶಕ್ತಿಯ ಗಣಿ ಅವನ ಅಂತರಂಗದಲ್ಲಿದೆ ಎಂಬ ಸತ್ಯವನ್ನು ಸ್ವಾಮೀಜಿ ಸಾರಿ ಸಾರಿ ಹೇಳುತ್ತಾರೆ.

·ಸ್ವಪ್ರಯತ್ನ: ತತ್ತ್ವಜ್ಞಾನಿ ನಿಷೆ ಹೇಳುವಂತೆ ‘ಅಸಹನೆ’ ಎಂಬ ಭಾವವಿಕಾರವು ಮಾನವನನ್ನು ತ್ವರಿತವಾಗಿ ನುಂಗಿ ಹಾಕುತ್ತದೆ. ಸ್ವಾಮಿ ವಿವೇಕಾನಂದರು, ‘ನಾನು ಇತಿಹಾಸವನ್ನು ಅಧ್ಯಯನ ಮಾಡಿದಂತೆಲ್ಲ ಅಸಹನೆ, ಸ್ಪರ್ಧೆಯ ಭಾವನೆ ತಪ್ಪು ಎಂದು ಅರ್ಥವಾಗುತ್ತದೆ. ಮಾನವನು ಮಾನವನೊಂದಿಗೆ ಯುದ್ಧ ಮಾಡದಿದ್ದರೆ ಅವನು ಪ್ರಗತಿ ಹೊಂದಲಾರ ಎಂದು ಕೆಲವರು ಹೇಳುತ್ತಾರೆ… ನನಗನ್ನಿಸುವಂತೆ ಪ್ರತಿಯೊಂದು ಯುದ್ಧವೂ ಪ್ರಗತಿಯನ್ನು ತ್ವರಿತಗೊಳಿಸುವ ಬದಲು ಅದನ್ನು ಐವತ್ತು ವರ್ಷಗಳಷ್ಟು ಹಿಮ್ಮೆಟ್ಟಿಸುತ್ತದೆ’ ಎಂದಿದ್ದಾರೆ.

ಅವರೆನ್ನುತ್ತಾರೆ- ‘ಸತ್ಯಸಾಕ್ಷಾತ್ಕಾರಕ್ಕೆ ಸ್ವಪ್ರಯತ್ನ ಬೇಕು. ಶಕ್ತಿಶಾಲಿಯೂ ಪೌರುಷವಂತನೂ ಆದ ದುಷ್ಟನನ್ನು ಬೇಕಾದರೆ ನಾನು ಗೌರವಿಸಬಲ್ಲೆ ಆದರೆ ಹೇಡಿಯನ್ನಲ್ಲ!’ ಸ್ವಾಮಿ ವಿವೇಕಾನಂದರು ಯುವಕರಿಗಿತ್ತ ಶ್ರೇಷ್ಠ ಸಂದೇಶಗಳಲ್ಲಿ ಇದು ಪ್ರಮುಖವಾದುದು. ಜೀವನದಲ್ಲಿ ಗುರಿ ಮುಖ್ಯ, ಅದನ್ನು ತಲುಪಲು ದಾರಿಯೂ ಮುಖ್ಯ. ಗುರಿ ಸೇರಲು ದಾರಿ ಬೇಕು, ಆದರೆ ದಾರಿ ಸರಿಯಿಲ್ಲದಿದ್ದರೆ ಗುರಿ ಸೇರುವುದಾದರೂ ಹೇಗೆ? ಆದರೂ ಜಗತ್ತಿನಲ್ಲಿ ಹೆಚ್ಚಿನವರು ಗುರಿಯನ್ನೇ ಮುಖ್ಯವೆಂದೆಣಿಸಿ, ಅದರ ಕುರಿತೇ ಹಗಲುಗನಸು ಕಾಣುತ್ತ, ಗುರಿಗೊಯ್ಯುವ ದಾರಿಯ ವಿಷಯದಲ್ಲಿ ನಿರ್ಲಕ್ಷ್ಯ ತಾಳಿ ವಿಫಲರಾದದ್ದು ಇತಿಹಾಸ. ಆದರೆ ಸ್ವಾಮೀಜಿ ಹೇಳುತ್ತಾರೆ, ‘ನನ್ನ ಜೀವನದಲ್ಲಿ ನಾನು ಕಲಿತ ಅತಿದೊಡ್ಡ ಪಾಠಗಳಲ್ಲೊಂದು ಇದು: ಕಾರ್ಯೋದ್ದೇಶದ ಕಡೆಗೆ ಎಷ್ಟು ಗಮನ ಹರಿಸಬೇಕೋ, ಕಾರ್ಯವಿಧಾನ ಕಡೆಗೂ ಅಷ್ಟೇ ಗಮನವೀಯಬೇಕು ಎಂಬುದು!’

ಮನುಷ್ಯನು ಶಕ್ತಿವಂತನಾಗಬೇಕು, ಪೌರುಷವಂತನಾಗಬೇಕು, ಸಾಹಸಪೂರ್ಣ ಪ್ರಯತ್ನದಲ್ಲಿ ಲೋಪ ಉಂಟಾದರೂ ತಪ್ಪಿಲ್ಲ. Every sinner has a future if you believe that every saint had a past! ಆದರೆ ಜೀವನದಲ್ಲಿ ಉನ್ನತ ಗುರಿ ಇಲ್ಲದ, ಪ್ರಯತ್ನವನ್ನು ಒಲ್ಲದ ವ್ಯಕ್ತಿಯು ಹೇಡಿಯಾಗುತ್ತಾನಲ್ಲದೆ ಅವನ ಬದುಕು ಮೃಗೀಯವಾಗುತ್ತದೆ ಎಂಬುದೇ ಸ್ವಾಮೀಜಿಯವರ ಇಂಗಿತ.

ಬದುಕಿನಲ್ಲಿ ಒಳ್ಳೆಯದನ್ನೇ ನಿರೀಕ್ಷಿಸುವುದು ತಪ್ಪಲ್ಲ. ಆದರೆ ಕೆಟ್ಟದ್ದಕ್ಕೆ ಸಿದ್ಧರಾಗಬೇಕಾದುದು ಅತ್ಯಗತ್ಯ. ಕೇವಲ ಆಸೆಗಳಷ್ಟೇ ನಮ್ಮನ್ನು ಯಶಸ್ವಿಯಾಗಿಸಲು ಅಸಾಧ್ಯ. ‘ಆಸೆಗಳೇ ಕುದುರೆಗಳಾಗಿದ್ದರೆ ಭಿಕ್ಷುಕರೂ ಸವಾರಿ ಮಾಡುತ್ತಿದ್ದರು!’ ಎಂಬ ನಾಣ್ಣುಡಿ ಸುಳ್ಳಲ್ಲ. ಪುರುಷ ಪ್ರಯತ್ನವನ್ನು ಕುರಿತು ಗೌಡಪಾದರು ತಮ್ಮ ಮಾಂಡೂಕ್ಯಕಾರಿಕೆಯಲ್ಲಿ ಹೀಗೆ ಪ್ರಸ್ತಾಪಿಸುತ್ತಾರೆ:

ಉತ್ಸೇಕ ಉದಧೇರ್ಯದ್ವತ್ ಕುಶಾಗ್ರೇನೈಕ ಬಿಂದುನಾ|

ಮನಸೋ ನಿಗ್ರಹಸ್ತದ್ವದ್ಭವೇದ ಪರಿಖೇದತಃ||

ಅಂದರೆ ಸಮುದ್ರವನ್ನು ಕುಶಾಗ್ರದಿಂದ ಒಂದೊಂದು ಹನಿಯಾಗಿ ಖಾಲಿಮಾಡುವುದು ಹೇಗೋ ಹಾಗೆಯೇ ಮನೋನಿಗ್ರಹವೂ ತಾಳ್ಮೆಗೆಡದೆ ನಡೆಯಬೇಕು.

ನಮ್ಮ ಭಾಗ್ಯದ ದಿನಗಳನ್ನು ರೂಪಿಸಕೊಳ್ಳಬೇಕಾದವರು ನಾವೇ ನಿಜ! ನಮಗೆ ಸಿಗುವುದು ನಮ್ಮ ಯೋಗ್ಯತೆಗೆ ತಕ್ಕಷ್ಟೇ! ಇಂದು ಮೈಗಳ್ಳತನ ಮಾಡಿದಷ್ಟೂ ನಾಳೆ ಮೈಮುರಿದು ದುಡಿಯಲೇಬೇಕಾಗುತ್ತದೆ.

·ಸ್ವಾತಂತ್ರ್ಯ ಮತ್ತು ಉದ್ಧಾರ: ಮಾನವನ ಅಭಿವೃದ್ಧಿಯಲ್ಲಿ ಸ್ವಾತಂತ್ರ್ಯ ಎಂಬುದು ಮೊದಲ ಹೆಜ್ಜೆ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆದರೆ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಗಳು ಒಂದೇ ನಾಣ್ಯದ ಎರಡು ಮುಖಗಳೆಂಬುದು ಅವರ ನಿಶ್ಚಿತ ಅಭಿಮತ. ಸಮರ್ಥ ವ್ಯಕ್ತಿಗಳ ಆಂತರ್ಯದಲ್ಲಿ ಹಕ್ಕು ಹಾಗೂ ಕರ್ತವ್ಯಗಳು ಪರ್ಯಾಯ ಪದಗಳೆನಿಸುತ್ತವೆ!

ಸ್ವತಂತ್ರ ಭಾರತದಲ್ಲಿ ಇಂದು ಕರ್ತವ್ಯಗಳನ್ನು ನಿರ್ಲಕ್ಷಿಸಿ ಕೇವಲ ಹಕ್ಕುಗಳಿಗಾಗಿ ಹೋರಾಡುವ, ಹೊಡೆದಾಡುವ ಅಸಹ್ಯ ಸನ್ನಿವೇಶಗಳಲ್ಲಿ ನಾವಿದ್ದೇವೆ. ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ವಿಜಯದ ಮಾಲೆಯನ್ನು ತನ್ನದಾಗಿಸಿಕೊಳ್ಳುವ ವ್ಯಕ್ತಿ ‘ಉತ್ಥಾನ’ ಹೊಂದಿದರೆ ಕರ್ತವ್ಯಗಳನ್ನು ನಿರ್ಲಕ್ಷಿಸಿ ಹಕ್ಕುಗಳಿಗಷ್ಟೇ ಜೊಲ್ಲು ಸುರಿಸುವವನು ‘ಪತನ’ ಹೊಂದುತ್ತಾನೆ! ಆತ್ಮಾಭಿಮಾನವಿಲ್ಲದ ವ್ಯಕ್ತಿ ರಾಷ್ಟ್ರಾಭಿಮಾನಿಯಾಗುವುದು ಅಸಾಧ್ಯ.

ಸ್ವಾಮಿ ವಿವೇಕಾನಂದರು ಮನುಷ್ಯ ಸಮಾಜವನ್ನು, ‘‘ಜನಸಾಮಾನ್ಯರ ಪರಿಶ್ರಮದಿಂದ ಬದುಕಿನಲ್ಲಿ ಔನ್ನತ್ಯ ಸಾಧಿಸಿದ ವಿದ್ಯಾವಂತರು ತದನಂತರ ಜನಸಾಮಾನ್ಯರನ್ನು ನಿರ್ಲಕ್ಷಿಸಿದರೆ ಅಂಥವರನ್ನು ನಾನು ‘ದೇಶದ್ರೋಹಿ’ ಎಂದು ಕರೆಯುತ್ತೇನೆ..’. ಈ ಮಾತುಗಳು ಯುವಜನತೆಗಂತೂ ದಿಕ್ಸೂಚಿ ಆಗಬೇಕು.

ಸ್ವಾಮಿ ವಿವೇಕಾನಂದರು ಮಾನವ ಜನಾಂಗದ ಅಭ್ಯುದಯಕ್ಕೆ ಬೆಳಕು ಚೆಲ್ಲಿದರಾದರೂ ಅವರು ಯುವಜನತೆಯ ಪಕ್ಷಪಾತಿಗಳಾಗಿದ್ದರು. ಅವರ ಈ ಮಾತು ಅದನ್ನು ಸಾಬೀತುಪಡಿಸುತ್ತದೆ:“My faith is in the younger generation, the modern generation. Out of them will come my children and they will work out the problems like lions”. ಆದರೆ ಸ್ವಾತಂತ್ರಾ್ಯನಂತರ ನಮ್ಮನ್ನಾಳಿದ ಜನಪ್ರತಿನಿಧಿಗಳಿಗೆ ಈ ದೇಶದ ಸಂಸ್ಕೃತಿಯ ಹಿರಿಮೆ-ಗರಿಮೆಗಳು ಬೇಡವಾಯ್ತು. ಕಾಲಕ್ರಮದಲ್ಲಿ ಮರೆತೇಹೋಯ್ತು. ಭಾರತೀಯ ವಿಚಾರಗಳು ಕೋಮದಳ್ಳುರಿಗೆ ಪ್ರಚೋದಕ, ಜಾತ್ಯತೀತ ತತ್ತ್ವಕ್ಕೆ ವಿರೋಧ ಎಂಬಂತೆ ಬಿಂಬಿತವಾಗುತ್ತ ಬಂದಿವೆ.

ನಮಗೊಂದು ವಿಶಿಷ್ಟ ಸಂವಿಧಾನವಿದೆ. ಅದು ನಮ್ಮ ಅಭ್ಯುದಯ ಅಂದರೆ ಒಳಿತಿಗಾಗಿ ಇದೆ. ಜೋಸೆಫ್ ಸ್ಟೋರಿ ಅವರ ಮಾತು ಇಲ್ಲಿ ಉಲ್ಲೇಖಾರ್ಹ: ‘‘ಮಾನವ ರಚಿತ ಸಂವಿಧಾನ ಪೋಷಿಸಿ ಬೆಳೆಸುವುದರ ಧ್ಯೇಯೋದ್ದೇಶ ಅದನ್ನು ಅಮರವಾಗಿಸಲು, ಹಾಗೆಂದು ಹೇಳಬಹುದಾದರೆ! ಆದರೆ ತಪ್ಪುಗಳಿಂದ ಅಥವಾ ಭ್ರಷ್ಟಾಚಾರದಿಂದ ಅಥವಾ ಅದನ್ನು ಜತನದಿಂದ ಕಾಪಾಡಬೇಕಾದ ಪ್ರಜೆಗಳ ಕಡೆಗಾಣಿಸುವಿಕೆಯಿಂದ ಕೇವಲ ಒಂದು ಗಂಟೆಯಲ್ಲೇ ಅದು ನಾಶವಾಗಲೂಬಹುದು!’ ಸಾರಾಂಶವಿಷ್ಟೇ, ಮಾನವನನ್ನು ವಿಶ್ವಮಾನವನನ್ನಾಗಿ ಪರಿವರ್ತಿಸಲು ಅವನ ವೈಶಿಷ್ಟ್ಯವನ್ನು ತೊಡೆದು ಹಾಕದೇ ತನ್ನ ಸಂಕುಚಿತ ಪ್ರಾದೇಶಿಕ ಪರಿಧಿ ದಾಟಿ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳು ಸರ್ವರ ಬಾಳಿಗೂ ಬೆಳಕಾಗಬಲ್ಲದು.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top