Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಆಫ್ರಿಕಾ ಸಫಾರಿ, ಬ್ಯಾಟ್ಸ್​ಮನ್​ಗಳದ್ದೇ ವರಿ!

Wednesday, 10.01.2018, 3:03 AM       No Comments

| ರಾಘವೇಂದ್ರ ಗಣಪತಿ

ಕಾಲ ಬದಲಾದಂತೆ ಆದ್ಯತೆಗಳು ಬದಲಾಗುತ್ತವೆ. ಕ್ರಿಕೆಟ್ ಸರಣಿಗಳಿಗೆ ಮೊದಲೆಲ್ಲ ತಂಡಗಳು ಸಿದ್ಧವಾಗುವ ಬಗೆಯೇ ಬೇರೆ ರೀತಿ ಇರುತ್ತಿತ್ತು. ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ಪ್ರವಾಸವೆಂದರೆ ತಿಂಗಳು ಮೊದಲೇ ಪ್ರವಾಸಕ್ಕೆ ತಂಡದ ಆಯ್ಕೆ ನಡೆದು, ಅಭ್ಯಾಸ ಶಿಬಿರಗಳು ನಡೆದಿರುತ್ತಿದ್ದವು.

ಆಟಗಾರರನ್ನು ದೈಹಿಕವಾಗಿ, ಮಾನಸಿಕವಾಗಿ ಹುರಿಗೊಳಿಸುವ ಪುನಶ್ಚೇತನ ಶಿಬಿರಗಳನ್ನು ನಡೆಸಿ, ಸರಣಿಗೆ ಕನಿಷ್ಠ ಹದಿನೈದು ದಿನ ಮುನ್ನವೇ ಪ್ರಯಾಣ ಬೆಳೆಸಿ ಕಿರು ಶಿಬಿರ, ಒಂದೆರಡಾದರೂ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಆ ಮೂಲಕ ಆಟಗಾರರು ಎದುರಾಳಿ ದೇಶದ ವಾತಾವರಣಕ್ಕೆ ಹೊಂದಿಕೊಳ್ಳಲು, ತಮ್ಮ ಆಟದಲ್ಲಿ ಅಲ್ಲಿನ ಸನ್ನಿವೇಶಕ್ಕೆ ಸರಿಯಾಗಿ ಮಾರ್ಪಾಡು ಮಾಡಿಕೊಳ್ಳಲು, ಲೋಪದೋಷ ತಿದ್ದಿಕೊಳ್ಳಲು ಅವಕಾಶವಾಗುತ್ತಿತ್ತು.

ಅಂತೆಯೇ ಮೊದಲೆಲ್ಲ ಯಾವುದೇ ಮಹತ್ವದ ಪ್ರವಾಸಕ್ಕೆ ಮುನ್ನ ಸಚಿನ್ ತೆಂಡುಲ್ಕರ್ ಬೆಳಗಿನ ಜಾವ ಅಥವಾ ಮುಸ್ಸಂಜೆ ಮಬ್ಬಿನಲ್ಲಿ ಒದ್ದೆ ಪಿಚ್​ನಲ್ಲಿ ಅಭ್ಯಾಸ ನಡೆಸಿದ್ದು, ನೀರಿನಲ್ಲಿ ನೆನೆಸಿದ ಕಾರ್ಕ್ ಬಾಲ್​ನಲ್ಲಿ ಅಭ್ಯಾಸ ನಡೆಸಿದ್ದು ಸುದ್ದಿಯಾಗುತ್ತಿತ್ತು. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮೊದಲಾದವರು ಕಾಲೇಜು ವಿದ್ಯಾರ್ಥಿಗಳಂತೆ ಅಭ್ಯಾಸ ಶಿಬಿರಗಳಲ್ಲಿ ಬೆವರು ಹರಿಸುತ್ತಿದ್ದ ಚಿತ್ರಗಳು ಪತ್ರಿಕೆಗಳಲ್ಲಿರುತ್ತಿದ್ದವು.

ಆದರೆ, ಈಗ ಎಲ್ಲವೂ ಬದಲಾಗಿದೆ. ವರ್ಷದ ಹನ್ನೆರಡು ತಿಂಗಳಲ್ಲಿ ಪೂರ್ತಿ 2 ತಿಂಗಳ ಅವಧಿಯನ್ನು ಐಪಿಎಲ್ ವೇಳಾಪಟ್ಟಿ ತಿಂದುಹಾಕಿದ ಮೇಲೆ ಬೇರೆ ಸರಣಿಗಳನ್ನು ಆಡಲು, ಪ್ರವಾಸ ಕೈಗೊಳ್ಳಲು, ನಡುನಡುವೆ ಐಸಿಸಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಕಾಲಾವಕಾಶವೇ ಸಿಗುತ್ತಿಲ್ಲ. ಹಾಗಾಗಿ ವಿದೇಶ ಪ್ರವಾಸಗಳು ‘ಪಿಕ್​ನಿಕ್’ಗಳಂತೆ ಭಾಸವಾಗಿವೆ. ಸದ್ಯ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸವಂತೂ ಅಕ್ಷರಶಃ ‘ಹನಿಮೂನ್ ಟೂರ್’ ಆಗಿಬಿಟ್ಟಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಇಟಲಿಯಲ್ಲಿ ಮದುವೆ, ದೆಹಲಿ, ಮುಂಬೈನಲ್ಲಿ ಎರಡೆರಡು ಆರತಕ್ಷತೆ ಮುಗಿಸಿಕೊಂಡು ಕೈಗಂಟಿದ ಮದರಂಗಿ ಆರುವ ಮುನ್ನವೇ ಆಫ್ರಿಕಾಕ್ಕೆ ಬಂದಿಳಿದಿದ್ದಾರೆ. ಇದು ನಾಯಕನ ಕಥೆಯಾದರೆ, ಉಳಿದ ಆಟಗಾರರೂ ತಮ್ಮ ಸಂಗಾತಿಗಳೊಂದಿಗೆ ವಿಹಾರದ ಮೂಡ್​ನಲ್ಲೇ ಆಗಮಿಸಿದ್ದಾರೆ.

ಇನ್ನು ಮೊದಲಿಗೆ ಹೋಲಿಸಿದರೆ ಕ್ರಿಕೆಟ್ ಕೋಚ್​ಗಳ ಪಾತ್ರ ಹಾಗೂ ಹೊಣೆಗಾರಿಕೆ ಕೂಡ ಬದಲಾಗಿದೆ. ಆಟಗಾರರು ಅಥವಾ ಕೋಚ್​ಗಳು ಕಲಿಸುವಂಥದ್ದು ಏನೂ ಇರುವುದಿಲ್ಲ. ಕೇವಲ ‘ಮ್ಯಾನೇಜ್ ಮಾಡಿದರೆ’ ಸಾಕು ಎಂಬಂಥ ಮ್ಯಾನೇಜರ್ ಪಾತ್ರಕ್ಕೆ ಕೋಚ್​ಗಳು ಸೀಮಿತರಾಗುತ್ತಿದ್ದಾರೆ. ಅದರಲ್ಲೂ ಕುಂಬ್ಳೆಯಂಥ ಶಿಸ್ತಿನ ಮಾಸ್ತರಿಕೆಯನ್ನು ಆಟಗಾರರು ಇಷ್ಟಪಡುವುದಿಲ್ಲವಾದ ಕಾರಣ, ಹುಡುಗರ ಜೊತೆ ‘ಹುಡುಗನಂತೆ ಬೆರೆಯುವ’ ರವಿಶಾಸ್ತ್ರಿ ತರಬೇತಿಯಲ್ಲಿ ಆಟಗಾರರು ಸ್ವಲ್ಪ ಹೆಚ್ಚೇ ಮೈಮರೆತಂತಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟೆಸ್ಟ್​ನಲ್ಲಿ ಭಾರತ ತಂಡ 208 ರನ್ ಗುರಿ ಬೆನ್ನಟ್ಟಲಾಗದೆ ಸೋತಿತಲ್ಲ ಎಂಬ ಬೇಜಾರಿನಲ್ಲಿ ಈ ಪೀಠಿಕೆ ಹಾಕಬೇಕಾಯಿತು. ಅಂಥ ಸೋಲು ಅನುಭವಿಸಿದ್ದು ಹೇಗೆ ಎಂದು ವಿಮಶಿಸುವ ಮುನ್ನ, ‘ಭೂತ’ಕಾಲದ ಬಗ್ಗೆಯೂ ಇನ್ನೂ ಸ್ವಲ್ಪ ಬೆಳಕು ಚೆಲ್ಲಬೇಕಿದೆ. ರವಿಶಾಸ್ತ್ರಿ ಕೋಚ್ ಆದ ಒಂದು ವರ್ಷದ ಅವಧಿಯಲ್ಲಿ ಭಾರತ ತಂಡ ಉಪಖಂಡವನ್ನು ಬಿಟ್ಟು ಹೊರಗೆಲ್ಲೂ ಹೋಗಿಲ್ಲ. ಇತ್ತೀಚೆಗೆ ಶ್ರೀಲಂಕಾಕ್ಕೆ ಹೋಗಿ ಬಂದಿದ್ದೇ ವಿದೇಶಿ ಪ್ರವಾಸವೆನಿಸಿತ್ತು. ಆದರೆ, ಆ ತಂಡ ಹಾಗೂ ಅಲ್ಲಿನ ಪಿಚ್, ಕಂಡೀಷನ್​ಗಳ ಗುಣಮಟ್ಟದ ಆಧಾರದ ಮೇಲೆ ಭಾರತಕ್ಕೆ ಅದೊಂದು ಸವಾಲಾಗಿರಲೇ ಇಲ್ಲ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ತವರಿನಲ್ಲೇ ಆಡುತ್ತಿರುವ, ಅದರಲ್ಲೂ ವಿರಾಟ್ ಕೊಹ್ಲಿ ಪೂರ್ಣಪ್ರಮಾಣದ ಕ್ಯಾಪ್ಟನ್ ಹುದ್ದೆಗೇರಿ, ರವಿಶಾಸ್ತ್ರಿ ಕೋಚ್ ಆದ ಮೇಲೆ ತಂಡ ತವರಿನಲ್ಲಿ ಪಡೆದುಕೊಂಡ ನಿರಂತರ ಗೆಲುವುಗಳು ತಂಡದ ಸುತ್ತ ಭ್ರಾಮಕ ಪ್ರಭಾವಳಿಯೊಂದನ್ನು ಸೃಷ್ಟಿಸಿವೆ. ಬ್ಯಾಟ್ಸ್​ಮನ್​ಗಳ ರನ್ ಅಬ್ಬರ, ಬೌಲರ್​ಗಳ ವಿಕೆಟ್ ಬೇಟೆ, ಗೆಲುವಿನ ಮೇಲೆ ಗೆಲುವು, ಸರಣಿ ಮೇಲೆ ಸರಣಿ ವಶ, ವಿಶ್ವ ಶ್ರೇಯಾಂಕದಲ್ಲಿನ ಹೆಚ್ಚುಗಾರಿಕೆ, ಪ್ರಾಯೋಜಕತ್ವ ಒಪ್ಪಂದಗಳ ಶ್ರೀಮಂತಿಕೆ, ಬಾಲಿವುಡ್​ನ ನಂಟು ಇವೆಲ್ಲವೂ ಆಟಗಾರರ ಮನೋಭಿತ್ತಿಯಲ್ಲಿ ಸುವರ್ಣಯುಗದ ಕಲ್ಪನೆ ಮೂಡಿಸಿದ್ದವು. ಯಶಸ್ಸಿನಿಂದ ಅಹಂಕಾರ ಹೆಚ್ಚುತ್ತದೆ. ಸೋಲು ಬದುಕುವುದನ್ನು ಕಲಿಸುತ್ತದೆ. ಅನೇಕ ಬಾರಿ ಯಶಸ್ಸನ್ನು ಹಿಂಬಾಲಿಸುವ ವರ್ಚಸ್ಸು, ತಾರಾಮೌಲ್ಯ, ಪ್ರಚಾರ, ಬಿಡುವಿಲ್ಲದ ಚಟುವಟಿಕೆಗಳ ನಡುವೆ ಯಶಸ್ಸಿನ ತೂಕವನ್ನು ಅಳೆಯುವುದಕ್ಕೆ ವ್ಯವಧಾನವೂ ಸಿಗುವುದಿಲ್ಲ. ಭಾರತ ತಂಡಕ್ಕಾಗಿದ್ದೂ ಅದೇ.

ಹಾಗೆ ನೋಡಿದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ರಿಕಾ ತಂಡಗಳನ್ನು ಭಾರತದಲ್ಲಿ ಸೋಲಿಸುವುದಕ್ಕೂ, ಆ ದೇಶಕ್ಕೇ ಪ್ರವಾಸ ಹೋಗಿ ಸೋಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದೇ ಆಧಾರದ ಮೇಲೆ ಹೇಳುವುದಾದರೆ, ಕೊಹ್ಲಿ ನಾಯಕರಾದ ಬಳಿಕ ಭಾರತ ತಂಡ ಸತತ 9 ಟೆಸ್ಟ್ ಸರಣಿಗಳನ್ನು ಗೆದ್ದು ದಾಖಲೆ ನಿರ್ವಿುಸಿದೆ. ಇದರಲ್ಲಿ ಭಾರತದಿಂದ ಹೊರಗೆ ಗೆದ್ದಿದ್ದು 2015 ಮತ್ತು 2017ರಲ್ಲಿ ಶ್ರೀಲಂಕಾ ವಿರುದ್ಧ 2 ಸರಣಿ, 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 1 ಸರಣಿ ಮಾತ್ರ. ಉಳಿದ ಆರು ಗೆಲುವುಗಳು ತವರಿನಲ್ಲಿ ಒಲಿದಂಥವು. ಅಂದರೆ, ಕಳೆದ ಮೂರು ವರ್ಷಗಳಿಂದ ಭಾರತ ತಂಡ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್​ನಂಥ ಕಠಿಣ ರಾಷ್ಟ್ರಗಳಿಗೆ ಟೆಸ್ಟ್ ಪ್ರವಾಸ ಮಾಡಿಯೇ ಇಲ್ಲ. ಈ ವ್ಯತ್ಯಾಸ ರವಿಶಾಸ್ತ್ರಿ, ಕೊಹ್ಲಿಗೆ ಗೊತ್ತಿಲ್ಲವೆಂದಿಲ್ಲ. ಆದರೆ, ಬಿಸಿಸಿಐ ರೂಪಿಸಿರುವ ವೇಳಾಪಟ್ಟಿಯೇ ಹಾಗಿರುವ ಕಾರಣ, ಯಶಸ್ಸನ್ನು ಆಸ್ವಾದಿಸುವ ಸಂದರ್ಭದಲ್ಲಿ ಹೆಚ್ಚಿನ ಆತ್ಮಾವಲೋಕನಕ್ಕೆ ಅವಕಾಶವಿರಲಿಲ್ಲ.

ವಿವಾಹದ ನಿಮಿತ್ತ ಕಳೆದ ವರ್ಷಾಂತ್ಯದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಂಥ ಮಹತ್ವದ ಪ್ರವಾಸಕ್ಕೆ ಮುನ್ನ ಕಾಲಾವಕಾಶದ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟಾದ ಮೇಲೂ ಎಚ್ಚೆತ್ತುಕೊಳ್ಳದ ಬಿಸಿಸಿಐ ಆಟಗಾರರಿಗೆ ವಿಶೇಷ ತರಬೇತಿ ಕೊಡಿಸುವ ವ್ಯವಸ್ಥೆಯನ್ನೇನೂ ಮಾಡಲಿಲ್ಲ. ಹಾಗಾಗಿ ಆಫ್ರಿಕಾಕ್ಕೆ ತೆರಳಿದ ಮೇಲೂ ಆಟಗಾರರು ತಮ್ಮ ಸಂಗಾತಿಗಳ ಜೊತೆ ಶಾಪಿಂಗ್​ನಲ್ಲಿ ಕಾಲ ಕಳೆದರೇ ವಿನಾ, ಕೇಪ್​ಟೌನ್ ಪಿಚ್​ನ ಬೌನ್ಸ್, ಸ್ವಿಂಗ್​ಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಕಾಟಾಚಾರಕ್ಕೆ ನಾಲ್ಕು ದಿನ ನೆಟ್ ಪ್ರಾಕ್ಟೀಸ್ ಮಾಡಿದರೂ ಅದರಲ್ಲಿ ಆಟಗಾರರು ಆಫ್ರಿಕಾ ಪಿಚ್​ಗಳ ವಿಲಕ್ಷಣ ಪುಟಿತಕ್ಕೆ ತಾಂತ್ರಿಕವಾಗಿ, ಮಾನಸಿಕವಾಗಿ ತಯಾರಿ ನಡೆಸಿದಂತೆ ಕಾಣಲಿಲ್ಲ.

ಇನ್ನು ರವಿಶಾಸ್ತ್ರಿ ಕೋಚ್ ಆಗಿ ಆಯ್ಕೆಯಾದ ಸಂದರ್ಭದಲ್ಲಿ ತಂಡದ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್​ರನ್ನು ಆಯ್ಕೆ ಮಾಡಿರುವುದಾಗಿ ಆಯ್ಕೆ ಸಮಿತಿಯಲ್ಲಿದ್ದ ಸೌರವ್ ಗಂಗೂಲಿ ಘೋಷಿಸಿದ್ದರು. ಅದಾದ ನಂತರದ ಪ್ರಹಸನಗಳು ಹಾಗೂ ಬೆಳವಣಿಗೆಗಳ ನಂತರ ಜಹೀರ್ ಕಾಯಂ ಬೌಲಿಂಗ್ ಕೋಚ್ ಅಲ್ಲ ಬದಲಿಗೆ ಪ್ರಮುಖ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅವರ ತಜ್ಞತೆ ಬಳಸಿಕೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿತ್ತು. ಪ್ರಾಯಶಃ ಈ ಪ್ರವಾಸದಲ್ಲಿ ಜಹೀರ್ ಸೇವೆ ಪಡೆದುಕೊಂಡಿದ್ದರೆ ಬ್ಯಾಟ್ಸ್​ಮನ್​ಗಳು ಕೇಪ್​ಟೌನ್​ನಲ್ಲಿ ಈ ಪ್ರಮಾಣದಲ್ಲಿ ಕಕ್ಕಾಬಿಕ್ಕಿ ಆಗುತ್ತಿರಲಿಲ್ಲವೇನೋ. ಆದರೆ, ಬಿಸಿಸಿಐಗೆ ಆಫ್ರಿಕಾ ಪ್ರವಾಸ ಪ್ರಮುಖವೆನಿಸಲೇ ಇಲ್ಲ. ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ಸ್ ಮನ್​ಗಳ ಪರದಾಟದ ಬಗ್ಗೆ ಹೇಳುವುದಾದರೆ, ಎರಡೂ ಇನಿಂಗ್ಸ್​ಗಳಲ್ಲಿ ತಲಾ 7 ಬ್ಯಾಟ್ಸ್​ಮನ್​ಗಳು ಚೆಂಡಿನ ಪುಟಿತ ಮತ್ತು ಗತಿ ಗುರುತಿಸಲಾಗದೆ ವಿಕೆಟ್ ಕೀಪರ್ ಇಲ್ಲವೇ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ಔಟಾದರು. ಮೊದಲ ಇನಿಂಗ್ಸ್​ನಲ್ಲಿ ಹಾರ್ದಿಕ್ ಪಾಂಡ್ಯರ ಪವಾಡಸದೃಶ 93 ರನ್​ಗಳ ಇನಿಂಗ್ಸ್ ಬಲ ಇಲ್ಲದೇ ಹೋಗಿದ್ದರೆ, ಪಂದ್ಯದಲ್ಲಿ ಭಾರತೀಯರ ಸ್ಥಿತಿ ಇನ್ನಷ್ಟು ಹೀನಾಯವಾಗಿರುತ್ತಿತ್ತು. ಒಟ್ಟಾರೆ ಹೇಳುವುದಾದರೆ, ಬೌಲರ್​ಗಳ ಮೆರೆದಾಟಕ್ಕೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಭಾರತದ ಬೌಲರ್​ಗಳು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದರು. ನ್ಯೂಲ್ಯಾಂಡ್ಸ್ ಕ್ರೀಡಾಂಗಣದ ವಾತಾವರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ವೇಗ, ಸ್ವಿಂಗ್ ಮತ್ತು ಬೌನ್ಸ್ ಮೂಲಕ ತವರಿನ ಬ್ಯಾಟ್ಸ್ ಮನ್​ಗಳು ಬೆಚ್ಚುವಂತೆ ಮಾಡಿದರು. ಆದರೆ, ಇವರ ಸಾಹಸವನ್ನು ಗೆಲುವಾಗಿ ಸದುಪಯೋಗ ಪಡಿಸಿಕೊಳ್ಳುವುದಕ್ಕೆ ಬೇಕಾದ ತಾಂತ್ರಿಕತೆ ಬ್ಯಾಟ್ಸ್ ಮನ್​ಗಳಲ್ಲಿರಲಿಲ್ಲ.

ತಾಂತ್ರಿಕತೆ ಎಂದಾಗ ಹಿಂದಿನ ಆಫ್ರಿಕಾ ಪ್ರವಾಸಗಳಲ್ಲಿ ಭಾರತವನ್ನು ಇಂಥ ಸಂಕಷ್ಟಮಯ ಸನ್ನಿವೇಶಗಳಲ್ಲಿ ಕಾಪಾಡುತ್ತಿದ್ದವರು ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಹಾಗೂ ಗೌತಮ್ ಗಂಭೀರ್​ರಂಥ ತಾಂತ್ರಿಕ ಗಟ್ಟಿಗ ಬ್ಯಾಟ್ಸ್ ಮನ್​ಗಳು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮೊದಲಾದವರೆಲ್ಲ ಮ್ಯಾಚ್​ವಿನ್ನರ್​ಗಳು. ಆದರೆ, ಪ್ರತಿಕೂಲ ಸನ್ನಿವೇಶದಲ್ಲಿ ಗಂಟೆಗಟ್ಟಲೆ ಕ್ರೀಸ್ ಕಚ್ಚಿನಿಂತು ಸೋಲು ತಪ್ಪಿಸುವುದು ತಾಂತ್ರಿಕಗಟ್ಟಿಗ ಬ್ಯಾಟ್ಸ್​ಮನ್​ಗಳಿಂದ ಮಾತ್ರ ಸಾಧ್ಯ. ಸದ್ಯ ಭಾರತ ತಂಡದಲ್ಲಿರುವ ಅಂಥ ತಾಂತ್ರಿಕಗಟ್ಟಿಗ ಬ್ಯಾಟ್ಸ್​ಮನ್​ಗಳು ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್. ರಾಹುಲ್ ಮಾತ್ರ. ಈ ಪಂದ್ಯದಲ್ಲಿ ಪೂಜಾರ ವಿಫಲರಾದರೆ, ಉಳಿದಿಬ್ಬರು ಆಡುವ ಬಳಗದಲ್ಲಿರಲಿಲ್ಲ.

ಭಾರತ ಮುಂದಿನ 2 ಟೆಸ್ಟ್ ಪಂದ್ಯಗಳನ್ನು ಸೆಂಚುರಿಯನ್ ಮತ್ತು ಜೊಹಾನ್ಸ್ ಬರ್ಗ್​ಗಳಲ್ಲಿ ಆಡಬೇಕಿದೆ. ಕೇಪ್​ಟೌನ್​ಗೆ ಹೋಲಿಸಿದರೆ, ಅಲ್ಲಿ ಇನ್ನೂ ಹೆಚ್ಚಿನ ಬೌನ್ಸ್ ಮತ್ತು ಸ್ವಿಂಗ್ ಇರುತ್ತದೆ. ಮೊದಲ ಟೆಸ್ಟ್ ಸೋಲಿನ ಪಾಠದಿಂದ ಬ್ಯಾಟ್ಸ್​ಮನ್​ಗಳು ಮಾನಸಿಕವಾಗಿ ಹಾಗೂ ತಾಂತ್ರಿಕವಾಗಿ ಗಟ್ಟಿಗರಾಗದೇ ಹೋದರೆ ವಿಶ್ವ ನಂ.1 ಪಟ್ಟಕ್ಕೆ ಕುತ್ತು ಗ್ಯಾರಂಟಿ. ಶ್ರೇಯಾಂಕಕ್ಕಿಂತಲೂ ತಂಡದ ವರ್ಚಸ್ಸಿಗೆ ಬೀಳುವ ಪೆಟ್ಟು ದೊಡ್ಡದು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top