Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಎಲ್ಲವೂ ಸುಖಾಂತ್ಯವಾಗಲೆಂದು ಆಶಿಸುತ್ತ್ತ..

Wednesday, 24.01.2018, 3:03 AM       No Comments

| ರಾಘವೇಂದ್ರ ಗಣಪತಿ

ಲಕ್ಷ್ಮಣರೇಖೆ ಹಾಕುವುದು ಗುಲಾಮಗಿರಿ; ಗೆರೆ ದಾಟುವುದು ಸ್ವಾತಂತ್ರ್ಯ ಎಂದು ಹೇಳುವುದು ಸುಲಭ. ಆದರೆ, ಲಕ್ಷ್ಮಣ ಹಾಕಿದ ಗೆರೆಯನ್ನು ಸೀತೆ ದಾಟಿದ್ದರಿಂದ ಒಂದು ದೊಡ್ಡ ‘ರಾಮಾಯಣ’ವೇ ನಡೆದುಹೋಯಿತು.

**

ಇದು ಯಾವತ್ತೋ ಆಗಿ ಹೋಗಿದ್ದಲ್ಲ… ಕೆಲವು ವರ್ಷ ಕೆಳಗೆ ನಡೆದಿದ್ದು. ಕಮಲಹಾಸನ್​ರ ಮಹತ್ವಾಕಾಂಕ್ಷೆಯ ‘ವಿಶ್ವರೂಪಂ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದ ದಿನಗಳವು. ಚಿತ್ರದಲ್ಲಿ ಒಂದು ಸಮುದಾಯಕ್ಕೆ ನೋವುಂಟು ಮಾಡುವ ಸಂಭಾಷಣೆಗಳಿವೆ ಎಂಬ ವದಂತಿ ಹರಡಿತ್ತು. ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ದೇಶವ್ಯಾಪಿ ಪ್ರತಿಭಟನೆ ಜೋರಾಗಿತ್ತು. ಚಿತ್ರ ಬಿಡುಗಡೆಗೆ ಅನುಮತಿ ಕೊಡಬಾರದು ಎಂದು ನ್ಯಾಯಾಲಯದಲ್ಲೂ ದಾವೆ ಹೂಡಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಚಿತ್ರ ಬಿಡುಗಡೆಗೆ ಅವಕಾಶ ಕೊಟ್ಟರೆ, ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ. ಏಕೆಂದರೆ, ಚಿತ್ರ ಬಿಡುಗಡೆಯಾಗುವ ಅಷ್ಟೂ ಚಿತ್ರಮಂದಿರ-ಮಲ್ಟಿಪ್ಲೆಕ್ಸ್​ಗಳ ಸಾವಿರಾರು ಸ್ಕ್ರೀನ್​ಗಳಿಗೆ ಪೊಲೀಸ್ ಕಾವಲು ಹಾಕಿ ರಕ್ಷಣೆ ಒದಗಿಸುವುದು ಅಸಾಧ್ಯದ ಕೆಲಸ ಎಂದು ತಮಿಳುನಾಡು ಸರ್ಕಾರ ನ್ಯಾಯಪೀಠದ ಎದುರು ಅಸಹಾಯಕತೆ ತೋಡಿಕೊಂಡಿತ್ತು. ಆಗ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಕೊನೆಗೂ ಕಮಲಹಾಸನ್ ಹೋರಾಟಗಾರರೊಂದಿಗೆ ಕೋರ್ಟ್​ನಿಂದ ಹೊರಗೆ ಸಂಧಾನ ಮಾಡಿಕೊಂಡು, ಆಕ್ಷೇಪಾರ್ಹ ದೃಶ್ಯ, ಸಂಭಾಷಣೆಗಳನ್ನು ತೆಗೆದುಹಾಕಿದ ಮೇಲೆ ಚಿತ್ರ ಬಿಡುಗಡೆ ಕಂಡಿತ್ತು.

ನಾಳೆ ಪದ್ಮಾವತಿ ಅಲಿಯಾಸ್ ಪದ್ಮಾವತ್ ದೇಶಾದ್ಯಂತ ತೆರೆ ಕಾಣಲಿದೆ. ಚಿತ್ರ ಬಿಡುಗಡೆ ಆಗಲೇಬಾರದು ಎಂದು ರಜಪೂತ ಸಮುದಾಯ ಪಟ್ಟುಹಿಡಿದು ಹೋರಾಡುತ್ತಿದೆ. ರಜಪೂತ ಜನಾಂಗ ಪ್ರಾಬಲ್ಯದ ರಾಜಸ್ಥಾನ, ಮಧ್ಯಪ್ರದೇಶ ಸಹಿತ ಉತ್ತರ ಭಾರತದ ಕೆಲ ರಾಜ್ಯಗಳು ಚಿತ್ರ ಬಿಡುಗಡೆ ವಿರೋಧಿಸುತ್ತಿವೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದಿರುವ ಸುಪ್ರಿಂ ಕೋರ್ಟ್ ಚಿತ್ರ ಬಿಡುಗಡೆ ಆಗಬೇಕು ಎಂದು ಹೇಳಿದೆ. ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಕಿವಿಹಿಂಡಿದೆ.

ಚಲನಚಿತ್ರಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ಚರ್ಚೆ ಇಂದು ನಿನ್ನೆಯದಲ್ಲ ಹಾಗೂ ಇಲ್ಲಿಗೇ ನಿಲ್ಲುವಂಥದ್ದೂ ಅಲ್ಲ. ತಮಿಳುನಾಡಿನಲ್ಲಿ ಹಲವು ವರ್ಷಗಳ ಹಿಂದೆ ‘ಡ್ಯಾಂ 999’ ಚಿತ್ರವನ್ನು ನಿಷೇಧಿಸಲಾಗಿತ್ತು. ಮುಲ್ಲಪೆರಿಯರ್ ಅಣೆಕಟ್ಟು ವಿವಾದದ ಕಥಾವಸ್ತು ಹೊಂದಿದ್ದ ಚಿತ್ರ ಬಿಡುಗಡೆಯಾದರೆ ತಮಿಳುನಾಡು-ಕೇರಳ ರಾಜ್ಯಗಳಲ್ಲಿ ಅಶಾಂತಿಯ ವಾತಾವರಣ ನಿರ್ವಣವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಎರಡು ರಾಜ್ಯಗಳ ಜನರ ನಡುವೆ ಸಮಸ್ಯೆ ಉಲ್ಬಣವಾಗಿ ದ್ವೇಷಭಾವ ಹೆಚ್ಚುವುದು ಸರಿಯಲ್ಲ ಎಂದು ನ್ಯಾಯಾಲಯ ಚಿತ್ರವನ್ನು ನಿಷೇಧಿಸಿತ್ತು.

ಸದ್ಯ ರಜಪೂತ ಕರ್ಣಿ ಸಮುದಾಯದವರು ಹೇಳುತ್ತಿರುವುದೂ ಅದನ್ನೇ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ರಜಪೂತರ ಇತಿಹಾಸ ತಿರುಚಲಾಗಿದೆ ಎನ್ನುವುದು ಅವರ ಆಕ್ಷೇಪ. ಆದರೆ, ಅವರ ಆಕ್ರೋಶವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ. ಅಷ್ಟಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು? ನಮಗೆ ಅನಿಸಿದ್ದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯದ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ, ಸನ್ನಿವೇಶದಿಂದ ಸನ್ನಿವೇಶಕ್ಕೆ ಅಥವಾ ಕಾಲಕಾಲಕ್ಕೆ ಬದಲಾಗುವುದೇ? ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ಸಮುದಾಯದ, ಸಮಾಜದ ಪರಂಪರಾಗತ ನಂಬಿಕೆಗಳನ್ನು, ಐತಿಹಾಸಿಕ ಘಟನೆಗಳನ್ನು ಬದಲಾಯಿಸಿಬಿಡಬಹುದೇ? ಸೃಜನಶೀಲತೆ ಎಂದರೆ ಇತಿಹಾಸವನ್ನು ಅತಿರಂಜಿತಗೊಳಿಸಿ ಪುನರ್​ರಚಿಸುವುದೇ? ಐತಿಹಾಸಿಕ ಪಾತ್ರಗಳನ್ನು ದೃಶ್ಯಮಾಧ್ಯಮದ ರಮ್ಯ, ಮೋಹಕ ಅಗತ್ಯತೆಗೆ ತಕ್ಕಂತೆ ಮಾರ್ಪಡಿಸಬಹುದೇ? ಚಲನಚಿತ್ರ, ಕಿರುತೆರೆ, ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಪರಂಪರೆ, ಇತಿಹಾಸ ಅರಿಯುವಂಥ ವಿಪರ್ಯಾಸ ಸೃಷ್ಟಿಯಾಗಿರುವ ಇಂದಿನ ಕಾಲಘಟ್ಟದಲ್ಲಿ ಇತಿಹಾಸವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹೊಸ ಬಗೆಯಲ್ಲಿ ತೋರಿಸುವುದರಿಂದ ಒಂದು ಪೀಳಿಗೆಯನ್ನು ದಾರಿ ತಪ್ಪಿಸಿದಂತಾಗುವುದಿಲ್ಲವೇ?

ರಾಣಿ ಪದ್ಮಾವತಿಯ ಕಥೆ 13-14ನೇ ಶತಮಾನದಲ್ಲಿ ನಡೆದಿದ್ದು. ದೆಹಲಿಯನ್ನಾಳಿದ ಖಿಲ್ಜಿ ವಂಶದ ಕುಖ್ಯಾತ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೋರ್​ಗಢದ ಮೇಲೆ ಪದೇಪದೆ ದಾಳಿ ಮಾಡಿದ್ದು ಇತಿಹಾಸದಲ್ಲಿ ಪ್ರಖ್ಯಾತ. ಆದರೆ, ಆತ ರಾಣಿ ಪದ್ಮಾವತಿಯ ಸೌಂದರ್ಯಕ್ಕೆ ಮಾರು ಹೋಗಿ, ಆಕೆಯ ಸಲುವಾಗಿಯೇ ದಾಳಿ ಮಾಡಿದ ಎಂಬ ಕಥೆಯಲ್ಲಿ ದಂತಕಥೆಗಳ ಪಾತ್ರವೇ ಹೆಚ್ಚು. ಈ ಕಥೆಯಲ್ಲಿ ಎಷ್ಟು ನಿಜ? ಎಷ್ಟು ಇತಿಹಾಸಕಾರರ, ಕವಿಗಳ ಕಲ್ಪನೆ ಎಂಬ ವಿಚಾರದಲ್ಲಿ ಇದಮಿತ್ಥಂ ಎಂಬ ಸ್ಪಷ್ಟನೆ ಇಲ್ಲ. ಸದ್ಯ ಪದ್ಮಾವತಿಯ ಕಥೆಗೆ ಲಭ್ಯವಿರುವ ಅತ್ಯಂತ ಪ್ರಾಚೀನ ಮೂಲವೆಂದರೆ, 1540ರಲ್ಲಿ ಮಲಿಕ್ ಮುಹಮ್ಮದ್ ಜಯಸಿ ಬರೆದ ಪದ್ಮಾವತ್ ಕವಿತೆ. ಆನಂತರ ಸಾಕಷ್ಟು ಇತಿಹಾಸಕಾರರು, ಕವಿಗಳು, ಸಾಹಿತಿಗಳು ಪದ್ಮಾವತಿ ಬಗ್ಗೆ ಬರೆದಿದ್ದಾರೆ. ಯುದ್ಧದಲ್ಲಿ ಚಿತ್ತೋರ್​ಘಡ

ಕೋಟೆ ಖಿಲ್ಜಿ ಕೈವಶವಾಗುತ್ತಿದ್ದಂತೆ ಪದ್ಮಿನಿ ನೇತೃತ್ವದಲ್ಲಿ ರಜಪೂತ ಸ್ತ್ರೀಯರು ಅಗ್ನಿಪ್ರವೇಶ ಮಾಡಿದ ಬಗ್ಗೆ ಇತಿಹಾಸಕಾರರು ನಾನಾ ಅಭಿಪ್ರಾಯ

ವ್ಯಕ್ತಪಡಿಸಿದರೂ, ರಜಪೂತರ ಪಾಲಿಗೆ ಇದು ಅವರ ಇತಿಹಾಸದ ಭಾಗ. ಯಾವುದೇ ಸಮುದಾಯ ತಮ್ಮ ಮೂಲವಂಶಸ್ಥರ ಬಗ್ಗೆ ಆರಾಧನಾ ಭಾವ ಹೊಂದಿರುವುದು ಹಾಗೂ ತಮ್ಮ ಅನೂಚಾನ ನಂಬಿಕೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಪ್ರತಿಭಟಿಸುವುದು ಸಹಜ.

ಸಿನಿಮಾ ದಿಗ್ದರ್ಶಕರು ಕೂಡ ಐತಿಹಾಸಿಕ ಕಥಾವಸ್ತುಗಳನ್ನು ಚಿತ್ರಮಾಧ್ಯಮಕ್ಕೆ ಅಳವಡಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲೇಬೇಕು. ಯಾವುದೇ ಕಥೆ ಇರುವುದನ್ನು ಇದ್ದಂತೆಯೇ ತೋರಿಸಿದರೆ, ಅದು ಸಿನಿಮಾ ಆಗುವುದಿಲ್ಲ, ಸಾಕ್ಷ್ಯಚಿತ್ರವಾಗುತ್ತದೆ. ಹಾಗಾಗಿ, ನಿರ್ದೇಶಕ ಸೃಜನಶೀಲ ಸ್ವಾತಂತ್ರ್ಯ ಬಳಸಿ ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ, ಆ ತಿದ್ದುಪಡಿಗಳು ತರ್ಕಬದ್ಧವಾಗಿರಬೇಕು, ಎಲ್ಲರೂ ಒಪು್ಪವಂತಿರಬೇಕು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯ ಸಾರ್ವಜನಿಕವಾಗಿ ಟೀಕೆಗೊಳಗಾಗುವುದೇ ಹೆಚ್ಚು. ಉದಾಹರಣೆಗೆ ಆಮೀರ್ ಖಾನ್​ರ ಪಿಕೆ ಚಿತ್ರ. ಅದರಲ್ಲಿ ಶಿವನ ಬಗ್ಗೆ ಅವಹೇಳನಕಾರಿಯಾಗಿ, ತಮಾಷೆಯಾಗಿ ಚಿತ್ರಿಸಲಾಗಿತ್ತು. ಇದನ್ನು ಚಿತ್ರಿಸಿರುವ ರೀತಿ ಆ ಕ್ಷಣದ ವೀಕ್ಷಣೆ ಸಂದರ್ಭದಲ್ಲಿ ನಗು ತರಿಸಿದರೂ, ಸೂಕ್ಷ್ಮವಾಗಿ ಯೋಚಿಸಿದಾಗ, ಶಿವನ ಆರಾಧನೆ ಮಾಡುವ ಕೋಟ್ಯಂತರ ಜನರ ಭಾವನೆಗಳನ್ನು ಅಪಹಾಸ್ಯ ಮಾಡಿದಂತೆಯೂ ಇತ್ತು.

ಹಾಗೆ ನೋಡಿದರೆ ಇಂದು ನಮಗೆ ಗೊತ್ತಿರುವ ರಾಮಾಯಣ, ಮಹಾಭಾರತಕ್ಕೆ ಸಂಬಂಧಪಟ್ಟ ಅನೇಕ ಕಥೆಗಳು ವಾಲ್ಮೀಕಿ, ವೇದವ್ಯಾಸರು ಬರೆದ ಮೂಲಕಾವ್ಯಗಳಲ್ಲಿಲ್ಲ. ಈ ಮಹಾಕಾವ್ಯಗಳು ಬೇರೆ ಬೇರೆ ಕವಿಗಳ ಕಲ್ಪನೆಯಲ್ಲಿ ಹೊಸ ಹೊಸ ಸಾಧ್ಯತೆ, ವಿಸ್ತಾರಗಳನ್ನು ಪಡೆದುಕೊಂಡು, ರೂಪಾಂತರಗೊಂಡು, ವಿಶ್ಲೇಷಣೆ, ವ್ಯಾಖ್ಯಾನಗಳಲ್ಲಿ ಹೊಸ ಅರ್ಥ ಪಡೆದುಕೊಂಡು, ಮೂಲ ಯಾವುದು, ಪರಿವರ್ತಿತ ಯಾವುದೆಂಬ ವ್ಯತ್ಯಾಸ ಗೊತ್ತಾಗದಂತಾಗಿದೆ. ಇನ್ನು ದುಷ್ಟರು, ಖಳನಾಯಕರಿಗೂ ದುರಂತನಾಯಕರ ಪಟ್ಟ ಕಟ್ಟುವ ಕವಿಗಳ ಕಲ್ಪನೆಯಿಂದಾಗಿ ರಾವಣ, ದುರ್ಯೋಧನರೂ ಒಳ್ಳೆಯವರಾಗಿ ಬಿಟ್ಟಿದ್ದಾರೆ. ನಮ್ಮ ಇತಿಹಾಸದಲ್ಲೂ ಅಷ್ಟೇ. ಅಲ್ಲಾವುದ್ದೀನ್ ಖಿಲ್ಜಿ, ಅಕ್ಬರ್, ಔರಂಗಜೇಬರು ಇತಿಹಾಸಕಾರರ ಕೃಪೆಯಿಂದ ಹೀರೋಗಳಾಗಿ ಬಿಟ್ಟಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿಯಂಥ ಶ್ರೇಷ್ಠ ನಿರ್ದೇಶಕರ ಕೈಗೆ ಐತಿಹಾಸಿಕ ಕಥಾವಸ್ತು ದೊರೆತಾಗ ಅವರ ನಿರ್ದೇಶನ, ನಿರೂಪಣೆ, ಚಿತ್ರಕಥೆಯ ಗಟ್ಟಿತನ, ಪಾತ್ರಗಳ ವೈಭವ, ಹಾಗೂ ತಾಂತ್ರಿಕ ಶ್ರೀಮಂತಿಕೆಯಿಂದಾಗಿ ಇತಿಹಾಸವೇ ಮರುಸೃಷ್ಟಿಯಾದ ಕಲ್ಪನೆ ಮೂಡುತ್ತದೆ. ಇತಿಹಾಸದ ಸತ್ಯಗಳನ್ನು ಮರೆಮಾಚಿ, ಹೊಸ ವಿಷಯಗಳು ಮನೋಭಿತ್ತಿಯಲ್ಲಿ ಸ್ಥಾಪಿತವಾಗುವ ಅಪಾಯವಿರುವುದೇ

ಇಲ್ಲಿ. ಸೃಜನಶೀಲತೆ, ಅಭಿವ್ಯಕ್ತಿ ಸ್ವಾತಂತ್ರ್ಯವೆಂದಾಗ ಇತಿಹಾಸದ ಕಥೆಗಳೇ ಆಗಬೇಕೆಂದಿಲ್ಲ. ರಾಜಮೌಳಿಯಂಥ ನಿರ್ದೇಶಕ ಬಾಹುಬಲಿ ಚಿತ್ರದ ಮೂಲಕ ಮಾಹಿಷ್ಮತಿಯಂಥ ಸಾಮ್ರಾಜ್ಯವನ್ನೇ ಬೆಳ್ಳಿತೆರೆಯ ಮೇಲೆ ನಿರ್ಮಾಣ ಮಾಡಲಿಲ್ಲವೇ? ಹಾಗಾಗಿ ಹಳೆಯ ಇತಿಹಾಸ ಬದಲಿಸುವುದಕ್ಕಿಂತ ಹೊಸ ಇತಿಹಾಸ ನಿರ್ವಿುಸುವತ್ತ ಗಮನ ಹರಿಸಿದರೆ ಯಾರ ಆಕ್ಷೇಪಣೆಯೂ ಎದುರಾಗುವುದಿಲ್ಲ.

ಕೊನೆಯದಾಗಿ ಹೇಳಬೇಕೆಂದರೆ, ದೀಪಿಕಾ ಪಡುಕೋಣೆ ರಾಣಿ ಪದ್ಮಿನಿಯಾಗಿ ನಟಿಸಿರುವ ಪದ್ಮಾವತ್ ಚಿತ್ರವನ್ನು ಕೇಂದ್ರ ಸೆನ್ಸಾರ್ ಮಂಡಳಿ ಹದ್ದಿನ ಕಣ್ಣಿನಿಂದ ವೀಕ್ಷಿಸಿದೆ. ಈ ಚಿತ್ರ ವೀಕ್ಷಣೆಗೆ ಮುನ್ನ ಪದ್ಮಾವತಿ ಕಥೆಯ ಕುರಿತೂ ಸಾಕಷ್ಟು ಸಂಶೋಧನೆ, ವಿಚಾರ ವಿಮರ್ಶೆಗಳನ್ನು ನಡೆಸಿ, ಚಿತ್ರದಲ್ಲೂ ಸಾಕಷ್ಟು ಅಂಶಗಳನ್ನು ಕಿತ್ತುಹಾಕಿ, ಶೀರ್ಷಿಕೆಯನ್ನೂ ಬದಲಿಸಿದ ಬಳಿಕ ಬಿಡುಗಡೆಗೆ ಅನುಮತಿಸಿ ಸರ್ಟಿಫಿಕೇಟ್ ನೀಡಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸಹ ಎರಡೆರಡು ಬಾರಿ ವಿಚಾರಣೆ ನಡೆಸಿ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ. ಒಟ್ಟಾರೆ ಈ ಚಿತ್ರ ರಜಪೂತ ಪದ್ಮಾವತಿಗೆ ಅಪಚಾರವಾಗದೆ, ಬನ್ಸಾಲಿ ಪದ್ಮಾವತಿಯ ರಮ್ಯ ಕಥಾನಕವಾಗಿದ್ದರೆ ಎಲ್ಲವೂ ಸುಖಾಂತ್ಯವಾಗಲಿದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top