Tuesday, 11th December 2018  

Vijayavani

Breaking News

ವಿಶ್ವಾಸದ ಆಧಾರ ಮೂಡಿಸಲು ಯತ್ನಿಸಲಿ

Saturday, 13.01.2018, 3:03 AM       No Comments

| ಎಂ. ಕೆ. ಭಾಷ್ಕರ ರಾವ್​ 

ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಹಗರಣ ನಡೆಯುವುದು; ಆರೋಪ ಹೊರಿಸುವುದು; ನಿರಾಕರಿಸುವುದು; ತನಿಖೆ ನಡೆಯುವುದು ಹೊಸದೇನೂ ಅಲ್ಲ. ಹಾಗೇ, ನಡೆದ ತನಿಖೆಯೂ ಕೋರ್ಟ್​ನಲ್ಲಿ ನಿಲ್ಲದೆ ಆರೋಪಿ ಖುಲಾಸೆಯಾಗುವುದೂ ಹೊಸದಲ್ಲ. ಮಿಲಿಟರಿ ಅಥವಾ ಸರ್ವಾಧಿಕಾರದ ಆಡಳಿತವಿರುವ ದೇಶಗಳಲ್ಲಿನ ಹಗರಣಗಳು ಬಹುತೇಕ ಸಂದರ್ಭಗಳಲ್ಲಿ ಉಕ್ಕಿನ ಪರದೆಯ ಹಿಂದೆಯೇ ಕರಗಿ ಹೋಗುತ್ತದೆ. ಜನತಂತ್ರದಲ್ಲಿ ಹಾಗಲ್ಲ, ಅದೊಂಥರಾ ಬಸಿರಿನಂತೆ, ಬಹಳ ಕಾಲ ಮುಚ್ಚಿಡಲಾಗದು. ಹಗರಣಗಳನ್ನು ಮುಚ್ಚಿಕೊಳ್ಳುವ ಯತ್ನವನ್ನು ದೇಶ, ರಾಜ್ಯ ಸರ್ಕಾರಗಳು ಮಾಡುತ್ತವಾದರೂ ಅಂತಿಮವಾಗಿ ಸತ್ಯದರ್ಶನವಾಗುವ ವ್ಯವಸ್ಥೆ ಜನತಂತ್ರದಲ್ಲಿ ಇನ್ನೂ ಜೀವಂತವಿದೆ. ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಜೈಲು ಸೇರಿರುವುದು ಈ ಮಾತಿಗೆ ಒಂದು ಉದಾಹರಣೆ. 1.70 ಲಕ್ಷ ಕೋಟಿ ರೂ.ಗಳ 2-ಜಿ ಹಗರಣದಲ್ಲಿ ಮುಖ್ಯ ಆರೋಪಿಗಳಾಗಿದ್ದ ಎ.ರಾಜಾ ಮತ್ತು ಕನಿಮೋಳಿ ಸಾಕ್ಷ್ಯಾಧಾರದ ಕೊರತೆಯಲ್ಲಿ ಪಾರಾಗಿರುವುದು ಮತ್ತೊಂದು ಉದಾಹರಣೆ.

ಸ್ವಾತಂತ್ರೊ್ಯೕತ್ತರ ಭಾರತ ನೂರಾರು ಹಗರಣಗಳನ್ನು ಕಂಡಿದೆ. ಹಗರಣಗಳ ಹಿಂದಿದ್ದ ಕೆಲವರ ತಲೆದಂಡವಾಗಿದೆ; ಹಲವರು ರಂಗೋಲಿ ಕೆಳಗೆ ತೂರಿ ಬಚಾವೂ ಆಗಿದ್ದಾರೆ. ನಾವೇ ನಮಗಾಗಿ ರೂಪಿಸಿಕೊಂಡಿರುವ ವ್ಯವಸ್ಥೆ ದೋಷಮುಕ್ತವಲ್ಲ ಎನ್ನುವುದಕ್ಕೆ ಇದರಲ್ಲಿ ಹತ್ತಾರು ಸ್ವರೂಪದ ನಿದರ್ಶನ ಕಾಣಿಸುತ್ತಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ-2 ಅವಧಿ ದೇಶವನ್ನು ಬೆಚ್ಚಿ ಬೀಳಿಸುವಂಥ ಹಗರಣಗಳಿಗೆ ವೇದಿಕೆಯಾಯಿತು. ಆ ಹಗರಣದ ಭಾರದಲ್ಲಿ ನಿಷ್ಕಳಂಕ ಚಾರಿತ್ರ್ಯದ ಪ್ರಧಾನಿಯೇ ನಲುಗಿಹೋದರು. ಇದು ‘ಸಂಯುಕ್ತ ಸರ್ಕಾರದ ಸಂಕಷ್ಟ’ (ಕೋಅಲಿಯೇಷನ್ ಕ್ರೈಸಿಸ್) ಎಂಬ ಅಸಹಾಯಕತೆಯನ್ನೂ ಅವರು ತೋಡಿಕೊಂಡಿದ್ದರು. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಭಾರೀ ಎನ್ನಬಹುದಾದ ಹಗರಣ ನಡೆದಿಲ್ಲವೆನ್ನುವುದು ವಾಸ್ತವ. ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದ ಮಾಹಿತಿ ಹಕ್ಕು ಕಾನೂನು (ರೈಟ್ ಟು ಇನ್ಪರ್ಮೇಷನ್), ನುಂಗುವುದೇ ನಿತ್ಯಕಾಯಕವಾಗಿರುವ ಅನೇಕ ರಾಜಕಾರಣಿಗಳ ಪ್ರವೃತ್ತಿಗೆ ಕಡಿವಾಣ ಹಾಕಿದೆ ಎನ್ನುವುದನ್ನು ಮರೆಯಬಾರದು. ಹಗರಣಮುಕ್ತ ಸರ್ಕಾರವನ್ನು ನಾವು ಕೊಟ್ಟಿದ್ದೇವೆ ಎನ್ನುವ ನರೇಂದ್ರ ಮೋದಿ ಮತ್ತು ಅವರ ಪಕ್ಷದವರ ಹೇಳಿಕೆಗೆ ಮೂಲಾಧಾರ ಮಾಹಿತಿ ಹಕ್ಕು ಕಾಯ್ದೆ. ಇಂಥ ಕಾಯ್ದೆಗಳು ಮಾತ್ರವೇ ಸುಖೀ ಮತ್ತು ಸಮೃದ್ಧ ಸಮಾಜಕ್ಕೆ ನೆರವಾಗುತ್ತವೆ.

ಮೋದಿ ಸರ್ಕಾರದಲ್ಲಿ ಹಗರಣವೇ ಇಲ್ಲ ಎಂಬಂಥ ವಾತಾವರಣ ಸೃಷ್ಟಿಯಾಗಿರುವಾಗಲೇ ಆಧಾರ್ ಕಾರ್ಡ್​ನ (ಬಯೋಮೆಟ್ರಿಕ್ ಐಡಿ) ಮಾಹಿತಿ ಸೋರಿಕೆ ಸುದ್ದಿ ತಲ್ಲಣ ಉಂಟು ಮಾಡಿದೆ. ತಾಂತ್ರಿಕ ದೃಷ್ಟಿಯಿಂದ ನೋಡಿದರೆ ಆಧಾರ್ ವ್ಯವಸ್ಥೆಗೂ ಸರ್ಕಾರಕ್ಕೂ ನೇರ ಸಂಬಂಧವಿಲ್ಲ. ಆಧಾರ್ ಸ್ವಾಯತ್ತ ಪ್ರಾಧಿಕಾರ ಎನ್ನುವುದು ಸರ್ಕಾರ ನೀಡಬಹುದಾದ ವಿವರಣೆ. ಹಾಗೆ ನೋಡಿದರೆ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವ ವಿದ್ಯಾಲಯಗಳೆಲ್ಲವೂ ತಥಾಕಥಿತ ಸ್ವಾಯತ್ತ ಸಂಸ್ಥೆಗಳೇ. ಕೇಂದ್ರ, ರಾಜ್ಯ ಸರ್ಕಾರಗಳು ಇಂಥ ಸ್ವಾಯತ್ತ ಸಂಸ್ಥೆಗಳ ಮೇಲೆ ಹೇಗೆ ಸವಾರಿ ಮಾಡುತ್ತವೆ ಎನ್ನುವುದು ಎಲ್ಲ ಬಲ್ಲ ಸಂಗತಿ. ಈ ಹಿನ್ನೆಲೆಯಲ್ಲಿ ಆಧಾರ್ ಪ್ರಕರಣವನ್ನು ನೋಡಬೇಕಿದೆ.

ಆಧಾರ್ ಕಾರ್ಡ್ ಹೊಂದಿರಬೇಕಾದ ಅನಿವಾರ್ಯದಲ್ಲಿ ತಮ್ಮೆಲ್ಲ ಖಾಸಗಿ ವಿವರಗಳನ್ನೂ ಹಂಚಿಕೊಂಡ ನೂರು ಕೋಟಿಗೂ ಹೆಚ್ಚಿನ ಭಾರತೀಯರ ವೈಯಕ್ತಿಕ ಬದುಕಿನಲ್ಲಿ ಆಟ ಆಡುವುದಕ್ಕೆಂದೇ ಆಧಾರ್ ಹೆಸರಿನಲ್ಲಿ ಬಲೆ ನೇಯಲಾಗುತ್ತಿದೆ ಎಂಬ ಆರೋಪ ಈ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಳಿಬಂದಿತ್ತು. 2014ರ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ/ಎನ್​ಡಿಎ ಅಭ್ಯರ್ಥಿಗಳು ತಾವು ಅಧಿಕಾರಕ್ಕೆ ಬಂದ ನೂರು ದಿವಸಗಳ ಒಳಗಾಗಿ ಆಧಾರ್ ಅನ್ನು ರದ್ದು ಮಾಡುವ ವಚನವನ್ನೂ ನೀಡಿದ್ದರು. ಆಧಾರ್ ಕಾರ್ಡ್ ಕಲ್ಪನೆಯ ರೂವಾರಿ ನಂದನ್ ನೀಲೇಕಣಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿದ್ದರು. ನೀಲೇಕಣಿ ಕ್ಷೇತ್ರದಲ್ಲಿದ್ದಾರೆಂಬ ಕಾರಣಕ್ಕಾಗಿಯೇ ತಮ್ಮ ಎಲ್ಲ ಭಾಷಣದಲ್ಲೂ ಅನಂತ್ ಕುಮಾರ್ ಆಧಾರ್ ರದ್ದತಿಯ ಮಾತನ್ನಾಡಿದ್ದರು. ಬಿಜೆಪಿಗೆ ಅಧಿಕಾರ ಸಿಕ್ಕಿತು. ಅನಂತ್ ಕುಮಾರ್ ಗೆದ್ದು ಪುನಃ ಸಚಿವರೂ ಆದರು. ಯಾವ ವ್ಯವಸ್ಥೆಯ ವಿರುದ್ಧ ಬಿಜೆಪಿ ಕೂಗು ಹಾಕಿತ್ತೋ ಅದೇ ಆಧಾರ್ ವ್ಯವಸ್ಥೆಯನ್ನು ಇನ್ನಷ್ಟು ಜೋರಾಗಿ ಅಮಲಿಗೆ ತರುವ ಕೆಲಸವನ್ನು ಅದು ಮಾಡಿತು.

‘ಟ್ರಿಬ್ಯೂನ್’ ಪತ್ರಿಕೆಯ ವರದಿಗಾರರಾಗಿರುವ ರಚನಾ ಖೈರಾ ಸತತ ಆರು ತಿಂಗಳು ಬೆನ್ನು ಹತ್ತಿ ಸಂಶೋಧಿಸಿ ಸಿದ್ಧಪಡಿಸಿದ ವರದಿಯ ರೀತ್ಯ ಯಕಃಶ್ಚಿತ್ ಐದು ನೂರು ರೂಪಾಯಿ ಕೊಟ್ಟರೆ ಶತಕೋಟಿ ಜನರ ಪೂರ್ವಾಪರವನ್ನೆಲ್ಲ ಸುಲಭದಲ್ಲಿ ಸಲೀಸಾಗಿ ಪಡೆಯಬಹುದಾಗಿದೆ. ವರದಿ ಮಾಡಿರುವ ಖೈರಾ, ತಾನು ಹಣ ಕೊಟ್ಟು ಮಾಹಿತಿ ಪಡೆದು ನಿಜ-ಸುಳ್ಳಿನ ಪರಿಶೀಲನೆ ನಡೆಸಿದಾಗ ಎಲ್ಲೋ ಇರುವ ಅಪರಿಚಿತ ವ್ಯಕ್ತಿಯ ಎಲ್ಲ ಮಾಹಿತಿಯೂ ಕೈಗೆ ದಕ್ಕಿತೆಂದಿದ್ದಾರೆ. ಅನ್ನ ಬೆಂದಿದೆಯೇ ಎಂದು ನೋಡಲು ಒಂದೆರಡು ಅಗುಳನ್ನು ಹಿಸುಕಿದರೆ ಸಾಕು. ದೇಶದ ಎಲ್ಲ ನಾಗರಿಕರ ಖಾಸಗಿತನ ಹರಾಜಾಗುವ ವಿವರವನ್ನು ಒಳಗೊಂಡ ವರದಿಯನ್ನು ಪ್ರಕಟಿಸಿ, ಜನರ ಬದುಕಿನಲ್ಲಿ ಚೆಲ್ಲಾಟವಾಡುವ ವ್ಯವಸ್ಥೆ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಟ್ಟೀತೆಂಬ ಆತಂಕವನ್ನು ಕೂಡಾ ಖೈರಾ ವ್ಯಕ್ತಪಡಿಸಿದ್ದಾರೆ. ಆಧಾರ್ ಕಾರ್ಡ್ ಯೋಜನೆಗೆ ಕೇಂದ್ರ ಸರ್ಕಾರ ಭಾರಿ ಮೊತ್ತ ವ್ಯಯಿಸುತ್ತಿದೆ. ಇದುವರೆಗೆ 18 ವರ್ಷ ದಾಟಿದ 119 ಕೋಟಿ (ಶೇ.99) ಭಾರತೀಯರು ಆಧಾರ್​ದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ ಆಗಿರುವ, ಮುಂದೆ ಆಗಬೇಕಿರುವ ಒಟ್ಟಾರೆ ವೆಚ್ಚ 18 ಸಾವಿರ ಕೋಟಿ ರೂಪಾಯಿಯ ಗಡಿಯನ್ನು ದಾಟಲಾರದೆಂಬ ವಿಶ್ವಾಸವನ್ನು ಆಧಾರ್ ಯೋಜನಾ ನಿರ್ದೇಶಕ ರಾಮ್ ಸೇವಕ್ ಶರ್ಮಾ ಹೊಂದಿದ್ದಾರೆ. ಸರ್ಕಾರದ ಯಾವುದೇ ಯೋಜನೆ ನಿಗದಿಪಡಿಸಿದ ವೆಚ್ಚದಲ್ಲಿ ಮುಗಿಯುವುದಿಲ್ಲ ಎನ್ನುವುದು ನಮಗೆಲ್ಲ ಗೊತ್ತಿದೆ. ವಿವರ ಸೋರಿಕೆಯಾಗುವುದು ಹೌದೇ ಆಗಿದ್ದಲ್ಲಿ ಇದನ್ನು 18 ಸಾವಿರ ಕೋಟಿ ರೂ. ಮೊತ್ತದ ಹಗರಣ ಎನ್ನಬಹುದಲ್ಲವೇ…?

ವರದಿ ಪ್ರಕಟವಾದ 24 ತಾಸಿನ ಒಳಗಾಗಿ ‘ಟ್ರಿಬ್ಯೂನ್’ ಪತ್ರಿಕೆ ಮತ್ತು ವರದಿಗಾರರ ವಿರುದ್ಧ ಆಧಾರ್ ಪ್ರಾಧಿಕಾರ ಮೊಕದ್ದಮೆ ಹೂಡಿದ್ದು ಎಫ್​ಐಆರ್ ದಾಖಲಾಗಿದೆ. ಇದು ಖಂಡಿತವಾಗಿಯೂ ಮಾಧ್ಯಮದ ಬಾಯಿ ಮುಚ್ಚಿಸುವ, ಬೆದರಿಕೆ ಒಡ್ಡುವ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಕ್ರಮ. ಸೋರಿಕೆಯ ಸುಳಿವನ್ನು ಕೊಟ್ಟಿದ್ದಕ್ಕಾಗಿ ಮೆಚ್ಚಿ ಪ್ರಶಂಸಿಸುವ ಬದಲು ಬಾಯಿ ಮುಚ್ಚಿಕೊಂಡಿರದಿದ್ದರೆ ಭವಿಷ್ಯವಿಲ್ಲ ಎಂಬ ಸಂದೇಶ ನೀಡುವುದು ತರವಲ್ಲದ ನಡವಳಿಕೆ. ದೇಶದ ಸಂಪಾದಕರ ಒಕ್ಕೂಟ ಎಫ್​ಐಆರ್ ಹಾಕಿರುವ ಕ್ರಮವನ್ನು ಟೀಕಿಸಿದೆ. ನಮ್ಮ ದೇಶದಲ್ಲಿ ಅನೇಕ ಸಲ ರಕ್ಷಣಾ ರಹಸ್ಯವೇ ಶತ್ರುದೇಶಗಳಿಗೆ ಸೋರಿಕೆಯಾಗಿದೆ. ಅದನ್ನು ಮಾಡಿದವರಿಗೆ ಏನೆಲ್ಲ ಶಿಕ್ಷೆ ನೀಡಲಾಗಿದೆ ಎನ್ನುವುದೂ ರಕ್ಷಣಾ ರಹಸ್ಯವೇ ಆಗಿ ಅಡಗಿ ಕುಳಿತಿದೆ. ವಾಸ್ತವ ಹೀಗಿರುವಾಗ ತನಿಖೆ ನಡೆಸಿ, ಜನರಲ್ಲಿ ಆತಂಕಕ್ಕೆ ಕಾರಣವಾಗಿರುವ ಲೋಪವನ್ನೆಲ್ಲ ನಿವಾರಿಸಬೇಕಾದ ಹೊಣೆ ಆಧಾರ್ ಪ್ರಾಧಿಕಾರದ ಮೇಲಿದೆ. ತಮ್ಮ ಜುಟ್ಟು ಜನಿವಾರವನ್ನೆಲ್ಲ ಆಧಾರ್ ಹೆಸರಿನಲ್ಲಿ ಅಡವಿಟ್ಟಿರುವ ಜನ ಸರ್ಕಾರದ ಒಂದು ವ್ಯವಸ್ಥೆಯನ್ನು ಅನುಮಾನದಿಂದ ನೋಡುವುದು ಜನತಂತ್ರಕ್ಕೆ ಶೋಭೆ ತರುವುದಿಲ್ಲ. ದಶಕಗಳ ಹಿಂದೆ ‘ಹಿಂದೂ’ ಪತ್ರಿಕೆಯ ವರದಿಗಾರ್ತಿ ಚಿತ್ರಾ ಸುಬ್ರಮಣ್ಯಂ, ಬೋಫೋರ್ಸ್ ಗನ್ ಖರೀದಿ ಹಗರಣದ ಕರ್ಮಕಾಂಡವನ್ನು ಬಯಲಿಗೆ ಎಳೆದಿದ್ದರು. ಅದು ಅಂತಿಮವಾಗಿ ಒಂದು ಸರ್ಕಾರದ ಭವಿಷ್ಯವನ್ನೇ ನೆಲಸಮ ಮಾಡಿತು. ಆದರೆ ಆಗ ಇದ್ದ ಸರ್ಕಾರವಾಗಲೀ, ರಕ್ಷಣಾ ಖಾತೆಯಾಗಲೀ ವರದಿಗಾರರ, ಪತ್ರಿಕೆಯ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡಲಿಲ್ಲ. ಇದು ಆಧಾರ್ ಪ್ರಾಧಿಕಾರಕ್ಕೆ ಮಾದರಿಯಾಗದ್ದು ಖೇದದ ಸಂಗತಿ.

ಆಧಾರ್ ವ್ಯವಸ್ಥೆಯ ಹೆಸರು ಕೆಡಿಸುವ ಷಡ್ಯಂತ್ರ ನಡೆದಿದೆ ಎಂಬ ಆತಂಕವನ್ನು ಸ್ವತಃ ನಂದನ್ ನೀಲೇಕಣಿ ವ್ಯಕ್ತಪಡಿಸಿದ್ದಾರೆ. ತಮ್ಮ ಶಿಶುವಿನ ವಿಚಾರದಲ್ಲಿ ಅವರಿಗೆ ಮಮತೆ ಇರುವುದು ಸಹಜವೇ. ಅವರ ಆತಂಕವನ್ನೂ ವರದಿಯ ಸತ್ಯಾಸತ್ಯವನ್ನೂ ನಿಕಷಕ್ಕೆ ಒಡ್ಡಲು ಇದು ಸರಿಯಾದ ಸಮಯ. ಕೂಡಲೇ ಸಮರ್ಥರಿಂದ ಆಂತರಿಕ ತನಿಖೆಗೆ ಆಧಾರ್ ಪ್ರಾಧಿಕಾರ ಮುಂದಾಗಬೇಕು. ಒಂದೊಮ್ಮೆ ಪ್ರಾಧಿಕಾರ ಇದಕ್ಕೆ ಹಿಂದೆಮುಂದೆ ನೋಡಿದರೆ ಕೇಂದ್ರ ಸರ್ಕಾರವೇ ಮುಂದಡಿಯಿಟ್ಟು ಜನರಲ್ಲಿನ ಶಂಕೆ ನಿವಾರಿಸಬೇಕು. ಸರ್ಕಾರದ ವಿಶ್ವಾಸಾರ್ಹತೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಸಮಗ್ರ ತನಿಖೆ ಅಪೇಕ್ಷಣೀಯ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top