Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಮಧುರ ನೆನಪುಗಳನ್ನು ಮಡಿಲಿಗಿಕ್ಕುವ ಪುಸ್ತಕಗಳು…

Thursday, 01.02.2018, 3:03 AM       No Comments

| ದೀಪಾ ಹಿರೇಗುತ್ತಿ

ಮಲೆನಾಡು ಎಂದರೆ ಅದೊಂದು ಕೌತುಕ, ಥೇಟ್ ಪಶ್ಚಿಮಘಟ್ಟದ ದಟ್ಟಮಲೆಗಳಂತೆ. ಕುವೆಂಪುರವರ ಕಾದಂಬರಿಗಳಲ್ಲಿ ಕಳೆದುಹೋದವರಿಗೆ ಗೊತ್ತು ಮಲೆನಾಡಿನ ಮಡಿಲ ಅನೂಹ್ಯ ಅನುಭವ. ಹೊರಗಿನವರಿಗೆ ಮನದಣಿಯೇ ನೋಡಿದರೂ ಮುಗಿಯದ ದಟ್ಟಹಸಿರಿನ ಕಾಡು ಮತ್ತು ಹಾಲ್ನೊರೆಯ ಜಲಪಾತಗಳ ಸುಂದರ ಪಿಕ್ನಿಕ್ ಸ್ಪಾಟ್ ಮಾತ್ರವೇ ಆಗಿರುವ ಮಲೆನಾಡು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಸಂಗತಿಗಳು ಅಸಂಖ್ಯ. ಅದು ಮಲೆನಾಡಿನ ಮಣ್ಣಲ್ಲಿ ಮಣ್ಣಾಗಿ, ಕಾಡಲ್ಲಿ ಒಂದಾಗಿರುವವರಿಗೆ ಮಾತ್ರ ಗೊತ್ತಾಗಬಹುದಾದ ಗುಟ್ಟು.

ಹಳೆಯ ಮಧುರ ನೆನಪುಗಳ ಲೋಕದಲ್ಲಿ ಕಳೆದುಹೋಗುವಂತಹ 3 ಪುಸ್ತಕಗಳನ್ನು ಒಟ್ಟಿಗೇ ಓದಿದ ಪರಿಣಾಮ ಈ ಲೇಖನ. ಶಿವಾನಂದ ರ್ಕ ಅವರ ‘ಖಾನೇಷುಮಾರಿ’, ನೆಂಪೆ ದೇವರಾಜ್ ಅವರ ‘ಆದ್ರೆ ಮಳೇಲಿ ಆದವನೇ ಗಂಡ’ ಮತ್ತು ಗೋಪಾಲ್ ಯಡಗೆರೆ ಅವರ ‘ಮಿಸ್ಡ್ ಕಾಲ’. ಈ 3 ಪುಸ್ತಕಗಳನ್ನೂ ಓದಿದಾಗ ಅಚ್ಚರಿಯಾಗಿದ್ದೆಂದರೆ ಸರಿಸುಮಾರು ಸಮಕಾಲೀನರಾದ ಈ ಮೂವರೂ ಲೇಖಕರ ವಿಷಯವಸ್ತು ಒಂದೇ- ಅದು ಮಲೆನಾಡು. ಮಲೆನಾಡಿನ ವಿಷಯಗಳೂ ಹೆಚ್ಚು ಕಡಿಮೆ ಅವವೇ. ಆದರೆ ಪ್ರತಿ ಲೇಖಕನೂ ಬರೆದ ಶೈಲಿ ಅವರಿಗೇ ವಿಶಿಷ್ಟವಾದುದು. ಸರಳವಾದ, ಓದಿಸಿಕೊಂಡು ಹೋಗುವ, ಕುತೂಹಲ ಕೆರಳಿಸುವ ಈ 3 ಪುಸ್ತಕಗಳಲ್ಲಿ ಮಲೆನಾಡಿನ ಆಲೆಮನೆಯ ಬೆಲ್ಲದ ಪರಿಮಳದಂತಹ ಆಪ್ತತೆಯಿದೆ. ಅಮ್ಮನ ಸೆರಗಿನ ಬೆಚ್ಚನೆಯ ಅನುಭೂತಿಯಿದೆ. ಅಷ್ಟೇ ಅಲ್ಲ, ಓದುತ್ತ ಓದುತ್ತ ಆಗಾಗ್ಗೆ ಕಣ್ಣಂಚಿನಲ್ಲಿ ನೀರು, ತುಟಿಯಂಚಿನಲ್ಲಿ ತುಂಟನಗು, ಬಾಯಲ್ಲಿ ನೀರು ಸುರಿಸುವ ಹಾಗೆ ಮಾಡುತ್ತ ಓದುಗನನ್ನು ನಾಸ್ಟಾಲ್ಜಿಕ್ ಆಗಿಸುವ ತಾಕತ್ತು ಈ ಎಲ್ಲ ಬರಹಗಳಿಗಿದೆ.

ಶಿವಾನಂದ ರ್ಕಯವರ ‘ಖಾನೇಷುಮಾರಿ’ ಬಾಲ್ಯದ ದಟ್ಟ ಅನುಭವಗಳ ಖಜಾನೆ. ಅವಿಭಕ್ತ ಕುಟುಂಬದ ಮಲೆನಾಡಿನ ಹಳ್ಳಿಗಾಡಿನ ಬದುಕನ್ನು ಬಾಲಕನೊಬ್ಬ ತನ್ನ ಸಹಜ ಮುಗ್ಧತೆಯಿಂದ ನೋಡುವ ಈ ಬರಹಗಳು ತಮ್ಮ ಸೂಕ್ಷ್ಮ ವಿವರಣೆಗಳಿಂದ ಬೆರಗು ಮೂಡಿಸುತ್ತವೆ. ಸಂಭ್ರಮದ ಸಂಗತಿಗಳ ನೆನಪುಗಳ ಜತೆ ಇರುವ ನೋವಿನ ಘಟನೆಗಳ ನೆನಪುಗಳು ಈಟಿಯಂತೆ ತಿವಿಯುತ್ತವೆ. ಮನೆಮಗನಂತೆ ಪ್ರೀತಿಸಿದ ಎತ್ತನ್ನು ವಯಸ್ಸಾಗುತ್ತ ಬಂತೆಂದು ಮಾರಿದಾಗ ಮನೆಮಂದಿಯೆಲ್ಲ ಅನುಭವಿಸಿದ ನೋವು ಲೇಖಕನ ಎದೆಯಲ್ಲಿ ತಾಜಾ ಆಗಿದೆ. ದೊಡ್ಡಮನೆ ಪಾಲಾದಾಗ ದನಕರುಗಳನ್ನೂ ಪಾಲು ಮಾಡಲಾಗುತ್ತಿತ್ತು. ತನ್ನ ನೆಚ್ಚಿನ ಹಸುವೋ ಕರುವೋ ಬೇರೆಯವರ ಪಾಲಿಗೆ ಹೋದಾಗಿನ ಸಂಕಟ, ಪಾಲಾಗಿ ಬೇರೆಯಾದ ಒಂದೇ ಕಾರಣಕ್ಕೆ ಅಣ್ಣತಮ್ಮಂದಿರ ಮಕ್ಕಳಿಗೇ ಅವರಿಷ್ಟದ ಕರುವನ್ನೂ ಮುದ್ದಿಸಲು ಅವಕಾಶ ಕೊಡದ ಹಿರಿಯರ ಸಣ್ಣತನದಿಂದ ತಮ್ಮ ಮನೆಯ ಪಾಲು ಭಾರತ-ಪಾಕಿಸ್ತಾನದ ವಿಭಜನೆಯಂತೆ ಪುಟ್ಟ ಬಾಲಕನಿಗೆ ಅನ್ನಿಸುತ್ತದೆ. ಬಾಣಂತಿಗೆಂದು ಸಾರು ಮಾಡಲು ತಂದ ಟೊಮ್ಯಾಟೋ ಹಣ್ಣುಗಳನ್ನು ಅಮೂಲ್ಯ ಆಸ್ತಿ ಎಂಬಂತೆ ಬೀರುವಿನಲ್ಲಿ ತೆಗೆದಿಟ್ಟ ಅಪ್ಪ ಹಾಗೂ ಅದನ್ನು ತಿನ್ನಲೇಬೇಕೇಂಬ ಹುಡುಗನ ಹಠ, ನಿಧಾನವಾಗಿ ಪರದೇಸಿ ಟೊಮ್ಯಾಟೋ ಹಿತ್ತಲಲ್ಲಿ ಬೆಳೆಯಲಾರಂಭಿಸಿದ್ದು, ಅಡುಗೆಯಲ್ಲಿ ಅತ್ಯವಶ್ಯಕ ಪದಾರ್ಥವಾಗಿದ್ದು ಕೇವಲ ಅಡುಗೆ ಮನೆಯ ಸ್ಥಿತ್ಯಂತರವನ್ನು ಮಾತ್ರವಲ್ಲ ಬದುಕಿನಲ್ಲಿ ಆದ ಬದಲಾವಣೆಯನ್ನೂ ರೂಪಕವಾಗಿ ಹಿಡಿದಿಟ್ಟಿದೆ.

ಗ್ಯಾಸು ಲೈಟಿನ ಸಂಭ್ರಮ, ದೈದರ್ಕೆ ಊಟ, ಇಂಬ್ಳ, ಭೂಮಿ ಹುಣ್ಣಿಮೆ, ಹುಳ್ಳಿಕಟ್ಟು, ಮೇಸ್ಟ್ರು ಹೀಗೆ ಮಲೆನಾಡಿನ ಸಮಸ್ತ ವಿಷಯಗಳನ್ನು ಬಿಚ್ಚಿಟ್ಟಿರುವ ‘ಖಾನೇಷುಮಾರಿ’ ಓದುಗರಿಗೆ ರಸದೂಟವೇ ಸರಿ.

ನೆಂಪೆ ದೇವರಾಜ್ ಅವರ ‘ಆದ್ರೆ ಮಳೇಲಿ ಆದವನೇ ಗಂಡ’ ಕೃತಿ ಮಲೆನಾಡನ್ನು ವೈಚಾರಿಕತೆಯ ಬೆಳಕಿನಲ್ಲಿ ವಿಶಿಷ್ಟವಾಗಿ ಕಟ್ಟಿಕೊಡುತ್ತದೆ. ಮಲೆನಾಡಿನ ಭಾಗದ ತೀರ್ಥಹಳ್ಳಿ ತಾಲೂಕನ್ನು ಕೇಂದ್ರವಾಗಿರಿಸಿಕೊಂಡಿರುವ ಇದು ತುಂಗಾನದಿ ಮೂಲದಿಂದ ಶಿವಮೊಗ್ಗದವರೆಗಿನ ತುಂಗೆಯ ತೀರದ ಜನರ ಸಾಂಸ್ಕೃತಿಕ ಕಥನದಂತಿದೆ. ಲೇಖನಗಳಲ್ಲಿ ದಟ್ಟವಾಗಿ ಬರುವ ಮುಳುಗಡೆಯ ನೆನಪುಗಳು, ಅರಣ್ಯದ ಜ್ಞಾನವನ್ನು ಹೇಳುತ್ತ ಅರಣ್ಯವೆಂದರೆ ಬರೀ ಬೀಟೆ, ಹಲಸು, ಸಾಗವಾನಿ ಮರಗಳಿರುವ ಕಾಡಲ್ಲ; ಮುಂಡುಗ, ಕೇದಗೆ ಉಡಿ, ಬೀಳು, ಅಣಬೆಯಂತಹ ಸಣ್ಣಪುಟ್ಟ ಗಿಡಗಂಟೆಗಳನ್ನೆಲ್ಲ ಒಳಗೊಂಡಿದ್ದು ಎಂಬ ಜೈವಿಕ ವಿಜ್ಞಾನವನ್ನು ಪ್ರತಿಪಾದಿಸಿದ್ದಾರೆ. ಭೂಮಿ ಹುಣ್ಣಿಮೆ ಬಗ್ಗೆ ಬರೆಯುತ್ತ ಚಗಟೆ, ಕುನ್ನೇರಲು, ಕೆಸ, ಕೆಂದಾಳ, ಮೀನಿಂಗಿ, ಕೇಸಟ್ಟೆ, ಸಳ್ಳೆ, ಗಿಡಾಲೆ, ಗರ್ಗ, ಮಳ್ಳಿ, ಮತ್ತಿ, ಮುಕ್ಕುಡುಕ, ಕಲ್ಡಿ, ಕರ್ಜಿ, ಬಾಳೆ, ಹಲಸು, ಮಾವು, ಕಬಳೆ, ನೀರಟ್ಟೆ, ಗಂಧ, ನೇರಲು, ಹೈಗ, ಹಾಲುವಾಣ, ಹೊಳೆಲಕ್ಕಿ, ಕಿರಾಲುಭೋಗಿ, ತ್ವಾರಂಗಲು, ಬೋಗಿ, ಕೂಳೆ, ಸದಗ, ಒಂದೆಲಗ, ರತ್ನಗಂಜಿ, ಇಲಿಕಿವಿ, ತಗ್ಗಿ, ತುಂಬೆ, ಅರಮರಲು, ಅತ್ತಿ, ನೆಲ್ಲಿ, ಬಲಿಗೆ, ಬಗುನೆ, ಮುಳ್ಳಿ, ಕಾಡುಕಿತ್ತಳೆ, ಕಾಕಿ, ಜೀರಿಗೆ ಮೆಣಸು, ಹೆಡಿಗೆ ಗೆಣಸು ಹೀಗೆ ನೂರೊಂದು ಜಾತಿಯ ಕುಡಿಗಳನ್ನು ಕಿತ್ತು ಅಡುಗೆ ಮಾಡಿ ಭೂಮಿಗೆ ಬಯಕೆ ಹಾಕುವುದನ್ನು ಹೇಳುತ್ತಾರೆ. ತೀರ್ಥಹಳ್ಳಿಯ ಹಿರಿಯ ಜೀವ ಏಳುಮನೆ ಉಮೇಶ್ ಗೌಡರ ನೆನಪಿನಿಂದ ಕಟ್ಟಿಕೊಡುವ ಮಾರಿನೆರೆಯ ನೆನಪು ಮೈನವಿರೇಳಿಸುತ್ತದೆ. ಅಡಕೆ, ಕೊಳೆರೋಗ- ಬೋಡೋಮಿಶ್ರಣ, ಆ ಸಂಶೋಧನೆಯ ಹಿಂದಿರುವ ವ್ಯವಸ್ಥಿತ ವಂಚನೆಗಳನ್ನು ಸಹ ರೂಪಕಗಳ ಮೂಲಕವೇ ಕಟ್ಟಿಕೊಡುವುದು ಈ ಕೃತಿಯ ವಿಶೇಷ. ಅಡುಳಿ, ವಾಟೆಹುಳಿಯ ಡಬ್ಬಿಯ ಜಾಗದಲ್ಲಿ ಟೇಸ್ಟಿಂಗ್ ಪೌಡರ್ ಡಬ್ಬಿ ಕುಳಿತಿರುವ ರೂಪಕವಂತೂ ಜಾಗತೀಕರಣದ ಮಸಲತ್ತು ಮೋಸಗಾರಿಕೆಗೆ ಮಲೆನಾಡೂ ಬಲಿಯಾದದ್ದನ್ನು ಯಶಸ್ವಿಯಾಗಿ ಕಟ್ಟಿಕೊಡುತ್ತದೆ. ‘ರೈತರ ಹಿತ ಕಾಯ್ದ ಬಲಿ ಚಕ್ರವರ್ತಿಗೆ ಪಾತಾಳ’ ಎಂಬ ಲೇಖನದ ಮೂಲಕ ರೈತನ ಅಧೋಗತಿಯನ್ನು ಪುರಾಣದ ಕತೆಯೊಂದಿಗೆ ಬೆಸೆದು ಚಿತ್ರಿಸುತ್ತಾರೆ.

ಕಾಟ್ಲಾ, ಗೌರ್, ಕ್ಯಾಟ್ ಫಿಶ್​ಗಳೆಂಬ ಹೊಸ ಪ್ರಭೇದಗಳಿಂದ ತರಹೇವಾರಿ ಮೀನುಗಳು ಈಗ ಕಾಣೆಯಾಗುತ್ತಿರುವ ಹಿಂದಿನ ಜೈವಿಕ ಪಲ್ಲಟದ ಬಗ್ಗೆ ಹೊಸ ಪರಿಸರ ವ್ಯಾಖ್ಯಾನವನ್ನೂ ಈ ಕೃತಿ ಕೊಡುತ್ತದೆ. ತೋಟಾ ಸಿಡಿಸಿ, ರಾಸಾಯನಿಕ ಬಳಸಿ ಮೀನು ದೋಚುವ ಬಾಡುಗಳ್ಳರ ಬಗ್ಗೆ ತಣ್ಣನೆಯ ಆಕ್ರೋಶವನ್ನು ಹೇಳುವ ಇದು ಮಲೆನಾಡಿನ ಸಾಂಪ್ರದಾಯಿಕ ಶೈಲಿಯ ಶಿಕಾರಿ ಕಥನದ ಅನನ್ಯತೆ ಮತ್ತು ಪರಿಸರ ಪ್ರೀತಿಯನ್ನು ಸಾರಿ ಹೇಳುತ್ತದೆ.

ಮೀನು ತಿನ್ನುವ ಸಮುದಾಯದ ಮೇಲಿನ ಇಬ್ಬರು ಲೇಖಕರ ಪುಸ್ತಕಗಳು ಮೀನಿನಿಂದಲೇ ಪೂರ್ಣತೆ ಕಂಡುಕೊಂಡರೆ, ಇತ್ತೀಚೆಗೆ ಬಿಡುಗಡೆಯಾದ ಗೋಪಾಲ್ ಯಡಗೆರೆ ಅವರ ‘ಮಿಸ್ಡ್ ಕಾಲ’ ಮೀನು ತಿನ್ನದ ಸಮುದಾಯದ ಬದುಕನ್ನು ಕಟ್ಟಿಕೊಡುತ್ತದೆ! ಮಲೆನಾಡಿನ ಮಕ್ಕಳ ಅದ್ಭುತ ಬಾಲ್ಯವಷ್ಟೇ ಅಲ್ಲದೆ ಆಗಿನ ಮೂಢನಂಬಿಕೆಗಳು ಮತ್ತು ಅವುಗಳಿಂದ ಪಡಬಾರದ ಪಡಿಪಾಟಲು ಪಟ್ಟ ದುರ್ದೈವಿಗಳ ಪಾಡೂ ಇಲ್ಲಿ ಚಿತ್ರಿತವಾಗಿದೆ. ವಿಶಾಲ ಬಚ್ಚಲುಮನೆಯ ಹಂಡೆಯ ಸ್ನಾನ, ಅದ್ಯಾವ ಮಾಯಕದಲ್ಲೋ ಬಂದು ಬೀಳುವ ಒರತೆ ನೀರು, ಕಾಡಿನ ಅಲೆದಾಟ, ಅಡಕೆ ಕೊಯ್ಲಿನ ಪ್ರೇಮ ಪ್ರಸಂಗಗಳು, ಅಕ್ಕೂಬಾಯಿಯೆಂಬ ಸೂಲಗಿತ್ತಿ, ಸೇರೇಗಾರರು ಎಲ್ಲವೂ ಈಗ ಕೌತುಕದಿಂದ ಕೇಳುವ ಕತೆಗಳು ಮಾತ್ರ. ಬಾಲವಿಧವೆಯರ ನತದೃಷ್ಟ ಬದುಕನ್ನು ಅಕ್ಕಯ್ಯನ ಬಾಳು ತೆರೆದಿಟ್ಟಿದೆ. ಸಂಭಾವನೆ ಭಟ್ಟರ ತಟ್ಟೆ ತುಂಬ ಬೀಳುತ್ತಿದ್ದ ಅಡಕೆ ಕೆಲವೇ ಹೋಳುಗಳಿಗೆ ಇಳಿದದ್ದು ಮಲೆನಾಡಿನ ಬದುಕಿನಲ್ಲಿ ಆದ ಬದಲಾವಣೆಯ ರೂಪಕದಂತಿದೆ. ಬಡವರ ಮನೆಯ ಹುಡುಗಿಯಾದ ಕಾರಣಕ್ಕೆ ಅವಳನ್ನು ಅಪಹರಿಸಿ ‘ಇಟ್ಟುಕೊಳ್ಳುವ’ ನೀಚಪದ್ಧತಿಯೂ ಮಲೆನಾಡಿನಲ್ಲಿ ಇತ್ತೆಂಬುದನ್ನು ಓದಿ ಮೈ ಜುಮ್ಮೆನ್ನುತ್ತದೆ. ಈ ಹಣವಂತ ಪುರುಷನ ಹೆಂಡತಿಯ ಅಸಹಾಯಕತೆ, ಓದದ, ಹಣಕಾಸಿನ ಬೆಂಬಲವೂ ಇಲ್ಲದ ಎಷ್ಟು ಮಹಿಳೆಯರ ಕತೆಯಾಗಿತ್ತೋ? ಸತ್ಯಮ್ಮ ನೋವಿನಿಂದ ಎತ್ತುವ ಜಾತಿಯ ಪ್ರಶ್ನೆಗಳು ಸಮಾಜದಿಂದ ಉತ್ತರ ಬೇಡುತ್ತವೆ. ಹಳೆಯದನ್ನು ನೆನಪಿಸಿಕೊಳ್ಳುವುದು ಚೆಂದ. ಆ ಹಳೆಯ ಸಂಗತಿಗಳು ಕೇವಲ ನೆನಪುಗಳಾಗಿ ಉಳಿದುಹೋಗಿರುವಾಗ ಜತೆಗೇ ನೋವು. ಹಾಗಾಗಿ ಈ ಮೂರೂ ಪುಸ್ತಕಗಳ ಲೇಖನಗಳ ಸಂಭ್ರಮದ ಸೆರಗಿಗೆ ವಿಷಾದದ ಅಂಚಿದೆ. ಮಾರಾಟಗಾರರ ಮಾತಿಗೆ ಮರುಳಾಗಿ ದುಬಾರಿಯಾದ ಕಂಚಿನ ಪಾತ್ರೆಗಳು, ರೇಷ್ಮೆ ಸೀರೆಯನ್ನು ಕೊಟ್ಟು ಥಳಥಳನೆ ಹೊಳೆವ ಅಗ್ಗದ ಸ್ಟೀಲ್ ಪಾತ್ರೆಗಳನ್ನು ಕೊಳ್ಳುವ ಹೆಂಗಸರ ಮುಗ್ಧ ಮೂರ್ಖತನದ ಬಗ್ಗೆ ವಿಷಾದದಿಂದ ಬರೆಯಲಾಗಿದೆ. ವರ್ಷವಿಡೀ ಬೆವರು ಸುರಿಸಿ ದುಡಿದ ಬೆಳೆಯಲ್ಲಿ ದೊಡ್ಡ ಪಾಲನ್ನು ಸಾಹುಕಾರರಿಗೆ ಕೊಡುವಾಗ ಗೇಣಿದಾರರು ಅನುಭವಿಸುವ ನೋವು ಈ ಲೇಖಕರುಗಳಿಗೆ ಅನುಭವಕ್ಕೆ ಬಂದಿದೆ. ಶ್ರೀಮಂತರಾಗಲಿ ಬಡವರಾಗಲಿ ಹಸಿವೆ ಎಂಬುದು ಅತಿಸಾಮಾನ್ಯ ಸಂಗತಿಯಾಗಿದ್ದನ್ನು ಎಲ್ಲ ಪುಸ್ತಕಗಳಲ್ಲೂ ಕಾಣಬಹುದು. ಮಲೆನಾಡನ್ನು ಕಿತ್ತುತಿನ್ನುವ ಸಮಸ್ಯೆಗಳನ್ನು ತಮ್ಮದೇ ಆದ ಅನನ್ಯ ಶೈಲಿಯಲ್ಲಿ ಈ ಲೇಖಕರು ವಿವರಿಸಿದ್ದಾರೆ.

ಕಳೆದೊಂದು ದಶಕದಿಂದೀಚಿಗೆ ಬೀಸುತ್ತಿರುವ ಆಧುನಿಕತೆಯ ಗಾಳಿ ಮಲೆನಾಡು, ಕರಾವಳಿ ಬಯಲುಸೀಮೆಗಳ ಅವುಗಳದ್ದೇ ಆದ ವಿಶಿಷ್ಟ, ವೈವಿಧ್ಯಮಯ ಅಸ್ಮಿತೆಗಳನ್ನು ಹಗೂರಕ್ಕೆ ಗುಡಿಸಿಹಾಕಿ , ಪ್ಲಾಸ್ಟರ್ ಆಫ್ ಪ್ಯಾರಿಸ್​ನ ಮೂರ್ತಿಗಳಂತೆ ಏಕರೂಪದ ಟಿವಿ ಧಾರಾವಾಹಿಗಳ ಸಂಸ್ಕೃತಿಯನ್ನು ಪ್ರತಿಷ್ಠಾಪಿಸುತ್ತಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಹಳೆಯದನ್ನು ನೆನೆನೆನೆದು ಎಲ್ಲಿ ಹೋದವೋ ಆ ಕಾಲ ಎಂದು ನಿಡುಸುಯ್ಯುವ ಪಾಡು ಎಲ್ಲರದ್ದು. ನೀವು ಮಲೆನಾಡಿನವರಲ್ಲವೇ? ಹಾಗಾದರೆ ಈ ಕೃತಿಗಳು ಹೊಸಲೋಕಕ್ಕೆ ನಿಮ್ಮನ್ನು ಕೊಂಡೊಯ್ಯುತ್ತವೆ. ಮಲೆನಾಡಿನವರೇ? ನಿಮ್ಮ ಸುತ್ತಲಿನ ಲೋಕದ ಹೊಸ ಪರಿಚಯವನ್ನು ಮಾಡಿಕೊಡುತ್ತವೆ! ಹ್ಯಾಪಿ ರೀಡಿಂಗ್!

Leave a Reply

Your email address will not be published. Required fields are marked *

Back To Top