Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಊರು ಬದಲಾಗಬೇಕೋ, ನಾವು ಬದಲಾಗಬೇಕೋ?

Thursday, 11.01.2018, 3:02 AM       No Comments

| ಅನಿತಾ ನರೇಶ್​ ಮಂಚಿ

ಮೊನ್ನೆಯಷ್ಟೇ ನಮ್ಮೂರಲ್ಲಿ ಯಕ್ಷಗಾನ ಸ್ಪರ್ಧೆ ನಡೆದಿತ್ತು. ಭಾಗವಹಿಸಿದ ತಂಡಗಳು ಪ್ರದರ್ಶಿಸಿದ ಯಕ್ಷಗಾನ ತನ್ನ ಸಾರಸತ್ವವನ್ನು ಧಾರೆಯೆರೆದು ಕಣ್ಮನ ಸೂರೆಗೊಳ್ಳುವಂತಿತ್ತು. ಇದಕ್ಕೆ ಕಾರಣ ಅದು ತನ್ನ ಮೂಲದೆಡೆಗೆ ಪಯಣ ಹೊರಟದ್ದು. ಜನ ಕೇಳಿದ್ದನ್ನು ಕೊಡ್ತೀವಿ ಎನ್ನುವ ಅಗ್ಗದ ಪ್ರದರ್ಶನವಾಗಿರಲಿಲ್ಲವದು. ಸಾಂಪ್ರದಾಯಿಕ ಪ್ರದರ್ಶನ ಸಹಜವಾಗಿ ಆಪ್ತವೆನಿಸುತ್ತಿತ್ತು. ಹಿರಿಯ ವೃತ್ತಿಪರ ತಂಡಗಳು ಯಕ್ಷಗಾನದ ತನ್ನತನವನ್ನು ಬಿಟ್ಟುಕೊಡುತ್ತಾ ಹೋಗಿ ಖಾಲಿಯಾಗುವ ಕಾಲಘಟ್ಟದಲ್ಲಿ ಹವ್ಯಾಸಿ ಕಲಾವಿದರು ಯಕ್ಷಗಾನವನ್ನು ಪುನರುಜ್ಜೀವನಗೊಳಿಸುತ್ತಾ ಸುಂದರವಾಗಿಸಿದ್ದು ತುಂಬಾ ದಿನಗಳವರೆಗೆ ಮೆಲುಕು ಹಾಕುವಂತಿತ್ತು. ಮೊದಲು ಹೀಗೆ ಇತ್ತಂತೆ, ಈ ಕುಣಿತಗಳೆಲ್ಲಾ ಹೀಗೆ ಇರಬೇಕಾದ್ದಂತೆ ಎಂಬ ಪಿಸುಧ್ವನಿಗಳ ನಡುವೆ ಕಲೆಯೊಂದು ಬದುಕಿತ್ತು. ಅದನೆಲ್ಲಾ ಆಸ್ವಾದಿಸುವ ಮನಸ್ಸುಗಳಿಲ್ಲ ಎಂಬ ವಾದವನ್ನು ತಲೆದೂಗುತ್ತಾ ನೋಡುತ್ತಿದ್ದ ಮಂದಿ ಸುಳ್ಳೆನಿಸಿದ್ದರು.

ನಮ್ಮ ಪರಿಚಿತರೊಬ್ಬರು ಮಣ್ಣಿನಿಂದ ಕಟ್ಟಲ್ಪಟ್ಟ ನಾಲ್ಕಂಕಣದ ತಮ್ಮ ಹಳೆಯ ಮನೆಯನ್ನು ನವೀಕರಣಗೊಳಿಸುವಾಗ ಮೊದಲಿನ ರೂಪವನ್ನು ಉಳಿಸಿಕೊಳ್ಳದೇ ಬೇರೆ ವಿನ್ಯಾಸದಲ್ಲಿ ಕಟ್ಟಿದ್ದರು. ಹೊಸ ಮನೆ ಚೆನ್ನಾಗಿದೆ ಎಂದು ಅವರಿವರು ಹೇಳಿದರೂ ಮನೆಯ ಗೃಹಿಣಿಯ ಮೊಗದಲ್ಲಿ ನಗುವಿರಲಿಲ್ಲ. ಮಾತಿಗೆ ಸಿಕ್ಕಿದಾಗ ಹೇಳಿದ್ದರು ‘ಎಂತದಿದು ಮನೆ, ಹೋಟೆಲಲ್ಲಿ ರೂಮ್ ಮಾಡಿ ಕುಳಿತ ಹಾಗೆ ಆಗುತ್ತದೆ ಮಾರಾಯ್ರೇ. ನೋಡಿ ನನ್ನ ಮೊಸರು ಕಡೆಯುವ ಗೂಟಕ್ಕಿಲ್ಲಿ ಜಾಗ ಇಲ್ಲ. ಮಳೆಗಾಲದಲ್ಲಿ ನಾಲ್ಕೂ ಮಾಡುಗಳಿಂದ ಒಳಗಿಳಿಯುತ್ತಿದ್ದ ನೀರಿನ ದೃಶ್ಯಕಾವ್ಯವಿನ್ನಿಲ್ಲ. ನಡೆದಾಡುತ್ತಿದ್ದ ಅಗಲದ ಜಗುಲಿ, ಸಂಜೆಯ ಹೊತ್ತು ಸುಮ್ಮನೆ ಕುಳಿತು ಆಗಸ ನೋಡಲು ಸಾಧ್ಯವಾಗುತ್ತಿದ್ದ ಒಳಗಿನ ಮೆಟ್ಟಿಲು ಎಲ್ಲವನ್ನೂ ಬಲಿಕೊಟ್ಟಿದ್ದೇವೆ ಈ ಹೊಸ ಮನೆಯೆಂಬ ಭೂತಕ್ಕೆ. ಸುಮ್ಮನೆ ಅಲ್ಲಿ ಕಿಚನ್, ಇಲ್ಲಿ ಬೆಡ್ರೂಮ್ ಮತ್ತೊಂದು ಹಾಲ್..ಎಲ್ಲರಂತೆ ನಾವೂ.. ಹಳೆ ಮನೆಯ ಗೋರಿಯಲ್ಲಿ ಮಲಗಿದಂತೆ ಇದು’. ಮನೆಯೊಂದು ಸಾವನ್ನಪ್ಪಿದ ನೋವಿತ್ತು ಅವರಲ್ಲಿ.

ಈ ಭೂಮಿಯ ಮೇಲೆ ಹುಟ್ಟನ್ನು ಪಡೆದ ಯಾವುದೇ ಜೀವಿಯು ಸಾವನ್ನಪ್ಪುವುದು ಸಹಜ. ಒಂದಷ್ಟು ದಿನ ಹತ್ತಿರದವರ ನೆನಪಿನಲ್ಲಿ ಜೀವಂತ. ಮುಂದಿನ ಪೀಳಿಗೆಗೆ ಫೋಟೋವಾಗಿ ಪರಿಚಯ. ಅದರ ನಂತರದವರಿಗೆ ಗೊತ್ತಿಲ್ಲ. ಯಾಕೆಂದರೆ ನಮ್ಮ ತಲೆಮಾರಿನ ಹಿಂದಿನ ವಂಶಜರನ್ನು ನೆನಪಿಟ್ಟುಕೊಳ್ಳುವುದನ್ನು ನಾವು ಮರೆತುಬಿಡುತ್ತೇವೆ. ಅವರನ್ನು ನೆನಪಿಸಲೆಂದೇ ಇರುವ ಶ್ರಾದ್ಧದಂತಹ ಧಾರ್ವಿುಕ ಕಾರ್ಯಕ್ರಮಗಳಲ್ಲು ಹಿಂದಿನ ಮೂರು ತಲೆಗಳ ಹೆಸರುಗಳಷ್ಟೇ ಉಲ್ಲೇಖವಾಗುತ್ತದೆ. ಅದರ ಹಿಂದಿನವರು ನಮಗಪರಿಚಿತರಾಗಿ ಸರಿದು ಹೋಗುತ್ತಾರೆ. ಮುಖ್ಯರೋ, ಪ್ರಾಮುಖ್ಯರೋ ನಮ್ಮ ಹೆಮ್ಮೆಯ ಗರಿಗಳಾಗಿ ಕೆಲವೊಮ್ಮೆ ಉಳಿದುಕೊಳ್ಳಲೂಬಹುದು. ಅದು ಬಿಟ್ಟರೆ ಇಂತಹ ಇತಿಹಾಸ ನಮಗೆ ಮುಗಿದ ಅಧ್ಯಾಯವಷ್ಟೇ. ಇದೇನೋ ಮನುಷ್ಯರ ಮಾತಾಯಿತು. ವೈಯಕ್ತಿಕವಷ್ಟೇ ಎಂದು ಬಿಟ್ಟು ಬಿಡಬಹುದು. ಆದರಿದು ಊರು ಕೇರಿಗಳ ಪಾಡಾದರೆ..? ನಮ್ಮ ಜೊತೆಯೇ ಇದ್ದ ಊರು ಇದ್ದಕ್ಕಿದ್ದಂತೆ ಸತ್ತು ಹೋದರೆ..? ಇದೇನು ಊರುಗಳು ಸಾಯುವುದುಂಟೇ ಎಂದು ಅಚ್ಚರಿ ಪಡುತ್ತೀರಾ.. ಅಭಿವೃದ್ಧಿಯೆಂಬ ಅಪಘಾತಕ್ಕೆ ಸಿಲುಕಿ ಊರುಗಳೂ ಸಾಯತೊಡಗಿವೆ!

ನಾನು ಹುಟ್ಟಿ ಬೆಳೆದ ಭಾಗಮಂಡಲವನ್ನೇ ತೆಗೆದುಕೊಂಡರೆ… ಆಗ ಹೇಗಿತ್ತು, ಎಷ್ಟು ಆಪ್ತವಾಗಿತ್ತು! ನಮ್ಮ ಮನೆಯಲ್ಲಿ ಮಾಡುತ್ತಿದ್ದ ನೀರುದೋಸೆಯ ಸದ್ದು ಹತ್ತಿರದ ಮನೆಯವರ ತಟ್ಟೆಯಲ್ಲೂ ಕುಣಿಯುತ್ತಿತ್ತು. ಅವರ ರೊಟ್ಟಿ ತಟ್ಟುವ ಕೈಗಳು ನಮ್ಮ ಮನೆಯ ಮುಸುರೆಯನ್ನು ತೊಳೆಯುತ್ತಿತ್ತು. ಆ ಹಿತ್ತಿಲು, ಅದರ ಹಿಂದಿನ ತೋಟ, ಪಕ್ಕದಲ್ಲೇ ಹರಿಯುವ ಜುಳು ಜುಳು ನದಿ, ಅದರ ದಂಡೆಯಲ್ಲಿರುವ ಕಲ್ಲಿನ ನಂದಿ, ಅದರಾಚೆಯ ಬೆಟ್ಟದ ದಾರಿಯ ಸೀಬೆ ಮರ, ರೆಂಜೆ, ಹಲಸು, ರಸ್ತೆ ಬದಿಯ ಗೋವಿಂದಜ್ಜನ ಗೋ ಮಾವಿನ ಮರ, ವಿಟ್ಠಲಣ್ಣನ ಮನೆಯ ಬದಿಯಲ್ಲಿ ಅಮೆ ಹಣ್ಣಿನ ಮರ, ಎಲ್ಲವು ಊರನ್ನು ಗುರುತಿಸುವ ಸಾಧನಗಳಾಗಿದ್ದವು. ನಮ್ಮ ಮನೆ ಸೇತುವೆ ಕಳೆದು

ಆ ಹೊಂಗಾರೆ ಮರದಡಿಯಲ್ಲೇ ಮೂರನೆಯದ್ದು ಎಂದರೆ ಕಣ್ಣು ಕಾಣಿಸದವನಿಗೂ ಗುರುತು ಹತ್ತೀತು.

ಊರಿನ ನಡುವೆ ಭಗಂಡೇಶ್ವರ ದೇವಸ್ಥಾನ. ವರ್ಷಕ್ಕೊಂದೆರಡು ಬಾರಿ ದೇವಸ್ಥಾನದ ಪಾದವನ್ನು ತೋಯಿಸಿ ನಡೆಯುವ ಕಾವೇರಿ. ಒಂದು ರೀತಿಯಲ್ಲಿ ಆ ವರ್ಷದ ಮಳೆಯನ್ನು ಅಳೆಯುವ ಮಾಪಕವೂ ಇದುವೇ. ಎಷ್ಟು ಸಲ ನೀರು ಮೇಲೇರಿದೆ, ಎಷ್ಟು ಎತ್ತರಕ್ಕೇರಿದೆ ಎಂಬುದೆಲ್ಲಾ ಮುಂದಿನ ವರ್ಷದ ಫಲವಂತಿಕೆಯನ್ನು ನಿಶ್ಚಯಿಸಿಬಿಡುತ್ತಿದ್ದವು. ಊರಲ್ಲಿ ವರ್ಷಕ್ಕೊಮ್ಮೆ ಚೌಂಡಿ ಕಳದಲ್ಲಿ ನಡೆಯುವ ಚೌಂಡಿ ಮೇಲೇರಿ (ಕ್ಷೇತ್ರಪಾಲಕ ದೈವವಾದ ಚಾಮುಂಡಿಯ ಒತ್ತೆಕೋಲ). ಹೊಳೆ ದಾಟಿದೊಡನೆ ಕಾಣುತ್ತಿದ್ದ ಸಂಗಮ ಕಾಡು. ಇದು ದೇವರ ಕಾಡು ಎಂಬುದರಿಂದ ಇದರ ಮರಗಳನ್ನು ಕಡಿಯುವುದನ್ನು ಊರವರ ಭಕ್ತಿ ಭಾವವೇ ನಿಷೇಧಿಸಿತ್ತು. ಅತಿಕ್ರಮಣಗಳೇನಾದರು ಬಂದರೆ ತಾಯಿ ನೋಡಿಕೊಳ್ಳುತ್ತಾಳೆ ಎಂಬ ಭಯ ಕೆಟ್ಟದ್ದನ್ನು ಮಾಡದಂತೆ ತಡೆಯುತ್ತಿತ್ತು. ದೇವಸ್ಥಾನದ ಪಾಗಾರ ಕಾಡು ಕಲ್ಲು ಮತ್ತು ಮಣ್ಣಿನದ್ದಾಗಿತ್ತು, ಹೊರಚಾಚಿದಂತಿದ್ದ ಕಲ್ಲುಗಳು ಅದನ್ನೇರುವ ಮೆಟ್ಟಿಲುಗಳಾಗಿಯೂ ಬಳಕೆಯಾಗುತ್ತಿದ್ದವು. ದೇವರ ಪೂಜೆಗೆಂದೇ ಹೂ ಕೊಯ್ಯಲು ಪುಟ್ಟ ಹೂ ತೋಟ ಅಲ್ಲಿತ್ತು. ಒಂದು ಸಹೃದಯೀ ವಾತಾವರಣವಿತ್ತಲ್ಲಿ.

ಈಗ ಹಳೆಯದನ್ನು ಕಳೆದುಕೊಳ್ಳುತ್ತಾ ಹೊರಟ ಊರು ನಿಧಾನಕ್ಕೆ ಪೇಟೆಯಂತಾಗುತ್ತಿದೆ, ಅದಕ್ಕೆ ಮೊದಲ ಬಲಿ ರಸ್ತೆ ಬದಿಯ ಮರಗಳು. ಒಂದು ಕಾಲದಲ್ಲಿ ಊರನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅವುಗಳಿಗೀಗ ಕೆಲಸವಿಲ್ಲ. ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಲ್ಪಟ್ಟು ಯಾರದೋ ಮನೆಯ ಸೌದೆಯಾಗುರಿದು ಬೂದಿಯಾಗಿತ್ತು. ವರ್ಷಕ್ಕೊಮ್ಮೆ ತೆನೆ ಹೊತ್ತು ಹಸುರಾಗುತ್ತಿದ್ದ ಗದ್ದೆಗಳ ಮೇಲೆ ಎಲ್ಲಿಂದಲೋ ತಂದ ಮಣ್ಣ ರಾಶಿ ಮೇಲೆ ಬಿದ್ದು ಸಮತಟ್ಟುಗೊಳಿಸಿತ್ತು. ನಿಧಾನಕ್ಕೆ ಅದರ ಮೇಲೆ ಸಿಮೆಂಟಿನ ಸೌಧಗಳೆದ್ದವು. ಪಕ್ಕಕ್ಕೂ ಪಸರಿಸಿದವು. ಮಣ್ಣಿನ ಗೋಡೆ ಹೊತ್ತ ಮೊದಲಿನ ಪುಟ್ಟ ಅಂಗಡಿಗಳು ನಾಚಿ ‘ನಾವೂ ಅದರಂತಾಗಬೇಕು’ ಎಂದು ಅಳುಮುಖ ಹೊತ್ತು ನಿಂತಿದ್ದವು. ಎತ್ತರದ ದಿಣ್ಣೆಗಳು ತಗ್ಗಾದವು. ತಗ್ಗಿನವು ಎತ್ತರವಾಗಿ ಸಮತಟ್ಟಾದವು. ಇಲ್ಲೊಂದು ಗುಡ್ಡವಿತ್ತಲ್ಲ ಎಂದು ಹೋದವರಿಗೆ ಬಯಲು ಕಾಣುವಂತಾಯಿತು. ಕೆಲವೊಂದು ಬದಲಾವಣೆಗಳು ನಿತ್ಯ ಜೀವನಕ್ಕೆ ಅಗತ್ಯವಾದ್ದರಿಂದ ಮಾಡಲೇಬೇಕಾದ ಅನಿವಾರ್ಯತೆಗಳಿವೆ. ಒಪ್ಪಿಕೊಳ್ಳಲೇಬೇಕು. ಆದರೆ ಇದ್ದುದರ ಮೂಲರೂಪವೇ ಬದಲಾಗಿ ಹೋದರೆ.. ಆ ಊರು ಪೇಟೆಯಂತಾಗುತ್ತಾ ಹೋಗುತ್ತದೆ. ಒಂದೇ ರೀತಿಯ ಕಾಂಕ್ರೀಟು ಕಟ್ಟಡಗಳು ಒಂದೇ ರೀತಿಯ ರಚನೆಯಿಂದ ಕೂಡಿದರೆ ವೈವಿಧ್ಯತೆಯೆಲ್ಲಿ.. ಊರಿನ ಗುರುತದೆಲ್ಲಿ…

ಇದೀಗ ಫ್ಲೈ ಓವರ್ ಎಂಬ ತೂಗುಗತ್ತಿಯೂ ಊರಿನ ಮೇಲೆ ನೇತಾಡಲಿದೆಯಂತೆ. ಅದೂ ನದಿ ತಟದಲ್ಲೇ ತನ್ನ ರಾಕ್ಷಸ ಹೆಜ್ಜೆಯನ್ನೂರಿ ಹೊರಡುವ ಇದು ಪುಟ್ಟ ಪೇಟೆಯ ಮೇಲೆಲ್ಲಾ ತನ್ನ ಕಾಂಕ್ರೀಟು ಪಾದಗಳನ್ನಿಳಿಬಿಟ್ಟು ಊರನ್ನು ಉದ್ಧಾರ ಮಾಡಲಿದೆಯಂತೆ. ಊರಿನ ರಕ್ಷಕ ದೈವವಾದ ಚಾಮುಂಡಿ ಕೋಲವಾಗುವ ಜಾಗದಲ್ಲೇ ತನ್ನ ಮೊದಲ ಹೆಜ್ಜೆ ಇಡುತ್ತಿದೆಯಂತೆ. ಮಳೆಗಾಲದಲ್ಲಿ ಬರುವ ಪ್ರವಾಹ ಕಾಲದಲ್ಲಿ ಪ್ರವಾಸಿಗಳಿಗೂ, ಸ್ಥಳೀಯ ನಿವಾಸಿಗಳಿಗೂ ಇದು ಸಂಪರ್ಕ ಸಾಧನವಂತೆ. ದೇವಸ್ಥಾನಕ್ಕಿಂತಲೂ ಎತ್ತರವಿರುವ ಈ ಫ್ಲೈ ಓವರ್ ದೇವಸ್ಥಾನದ ಸುರಕ್ಷತೆಯ ದೃಷ್ಟಿಯಿಂದ ಇಷ್ಟು ಹತ್ತಿರದಲ್ಲಿ ಹಾದು ಹೋಗುವುದು ಅಪಾಯಕಾರಿ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೇ ದ್ವೀಪವಾಗುವಾಗ ಪ್ಲೈ ಓವರಿನ ಪಾದಗಳಿಂದಾಗಿ ನೀರಿನ ಹರಿವಿಗೆ ಇನ್ನಷ್ಟು ತೊಂದರೆಯುಂಟಾಗಿ ಹತ್ತಿರದ ಸಾರ್ವಜನಿಕರ ಆಸ್ತಿಪಾಸ್ತಿಗೆ ಆಗುವ ನಷ್ಟ ಅಪಾರ.

ಅತ್ತಿತ್ತ ಸಾಗುವ ಮಂದಿಗೇನೋ ಉಪಯೋಗ ಸರಿ. ಆದರೆ ಇಲ್ಲೇ ಮನೆಮಾರುಗಳನ್ನು ಕಟ್ಟಿಕೊಂಡು ಬದುಕುತ್ತಿರುವವರಿಗೆ ತಲೆಯ ಮೇಲಿನ ವಾಹನ ಸವಾರಿ ನಿತ್ಯ ಗೋಳಾಗಿ ಪರಿಣಮಿಸದೇ? ಅವರ ಮನೆಯ ಮೇಲಿನ ಸ್ವಚ್ಛತೆ ಮತ್ತು ಸುರಕ್ಷತೆಗೆ ಸರಕಾರ ಹೊಣೆ ಹೊತ್ತುಕೊಳ್ಳುತ್ತದೆಯೇ? ರಾಜಕೀಯ ಪಕ್ಷಗಳ ಮೇಲಾಟಕ್ಕೆ ಇದೀಗ ಇನ್ನೊಂದು ಬಲಿ. ಒಂದಿಷ್ಟು ಹರಿದಾಡುವ ನೋಟಿನ ಹೊಳೆ, ಅಲ್ಲಿ ಹರಿಯುವ ಕಾವೇರಿ ಹೊಳೆಯನ್ನು ಬರಡಾಗಿಸುವುದೇನೋ. ಊರಿನ ಮೂಲರೂಪವನ್ನೇ ಮರೆಮಾಡುವ ಕಾಂಕ್ರೀಟು ರಚನೆಗಳು ನಮಗೆ ಬೇಕಾ? ಮಳೆಕಾಡುಗಳನ್ನು ಅನವಶ್ಯಕವಾಗಿ ತರಿದು ಹಾಕಿ ಮಾಡುವ ರಸ್ತೆಗಳು ನಮಗೆ ಅಗತ್ಯವೇ? ಯೋಚಿಸಬೇಕಾದ್ದು ಬರೀ ಆ ಊರಿನ ಮಂದಿಯಲ್ಲ.. ನಾವು ನೀವು ಎಲ್ಲರೂ.. ಯಾಕೆಂದರೆ ಈ ಅಭಿವೃದ್ಧಿಯೆಂಬ ಪಿಡುಗು ಎಲ್ಲಾ ಕಡೆಯು ಆವರಿಸುತ್ತಾ ಇರುವ ಒಂದೇ ಭೂಮಿಯನ್ನು ಧೂಳುಮಯವಾಗಿಸುತ್ತಿ್ತೆ. ರಸ್ತೆ ಬದಿಯ ಗದ್ದೆ ತೋಟಗಳೆಲ್ಲಾ ಸೈಟುಗಳಾಗಿ ತುಂಡಾಗಿ ಹೋಗಿ ತನ್ನ ಮೇಲೆ ಕಾಂಕ್ರೀಟು ಕಟ್ಟಡಗಳನ್ನು ಬೆಳೆಸಿಕೊಳ್ಳುತ್ತಿದೆ. ಅಪರೂಪಕ್ಕೆ ಹಾರಿ ಬಂದ ಹಕ್ಕಿಗಳು ನಾವು ನಿಲ್ಲುವ ತಾಣವೆಲ್ಲಿ, ಮರವೆಲ್ಲಿ ಗಿಡವೆಲ್ಲಿ ಎಂದು ಅಲೆದಲೆದು ಬಳಲಬೇಕಾಗುತ್ತದೆ. ಮಳೆ ಮೋಡಗಳನ್ನು ತಡೆಯಲು ಬೆಟ್ಟಗಳಿಲ್ಲದೇ ಅವುಗಳು ಆಕಾಶದಲ್ಲೇ ಹಾರಿ ಸಾಗಬೇಕಾಗುತ್ತದೆ. ನಾವಿದ್ದ ಊರಿನ ಚೈತ್ರ ಕಾಲ ಮತ್ತೆಂದೂ ಮರುಕಳಿಸದಂತೆ ಮಾಯವಾಗಿಬಿಡುತ್ತದೆ.

ಕಾಂಕ್ರೀಟು ಕಟ್ಟಡಗಳ ಸಂಖ್ಯೆಯು ಅಭಿವೃದ್ಧಿಯ ಮಾನದಂಡವಾದಾಗ ಭೂಮಿ ಬರಡಾಗುತ್ತದೆ. ಅದರ ಬದಲು ನಮ್ಮ ಊರಿನಲ್ಲಿ ಎಷ್ಟು ಮಳೆ ಬೀಳುತ್ತದೆ, ಎಷ್ಟು ಅನ್ನ ಬೆಳೆಯುತ್ತದೆ, ಹರಿಯುವ ನೀರೆಷ್ಟು ಸ್ವಚ್ಛವಾಗಿದೆ, ಹಚ್ಚನ್ನ ಹಸುರು ಕಾಡೆಷ್ಟಿದೆ, ಊರು ಎಷ್ಟು ನಿರ್ಮಲವಾಗಿದೆ, ಗಾಳಿ ಎಷ್ಟು ಪವಿತ್ರವಾಗಿದೆ, ಗುಡ್ಡ ಬೆಟ್ಟಗಳೆಷ್ಟು ಉಳಿದಿವೆ- ಎಂಬುದು ನಮಗೆ ಮುಖ್ಯವಾಗಬೇಕು.

ಈಗ ಹೇಳಿ.. ಊರು ಬದಲಾಗಬೇಕೋ, ನಾವು ಬದಲಾಗಬೇಕೋ.. ಇಂದೇ ಯೋಚಿಸಿ ಮುನ್ನಡಿಯಿಡದಿದ್ದರೆ ನಾಳೆಗಳಿಗೆ ಏನೂ ಉಳಿದಿರುವುದಿಲ್ಲ ಎಂಬುದು ದುರಂತ.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top