2ಜಿ ಹಗರಣದ ತನಿಖೆಯಲ್ಲಿ ಅಭಿಯೋಜಕ ವ್ಯವಸ್ಥೆ ವೈಫಲ್ಯ

| ಸಜನ್​ ಪೂವಯ್ಯ

ಬಹುರ್ಚಚಿತ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಮತ್ತೆ ಚರ್ಚೆಗೀಡಾಗಿರುವ ಹಿನ್ನೆಲೆಯಲ್ಲಿಈ ಕುರಿತ ಚರ್ಚೆಯನ್ನು ಕಳೆದ ವಾರ ಕೈಗೆತ್ತಿಕೊಂಡಿದ್ದೆ. ತನಿಖಾ ಸಂಸ್ಥೆಗಳನ್ನು ನಿಯಂತ್ರಿಸುವುದು ಕಾರ್ಯಾಂಗವಾದರೂ, ಅವುಗಳ ಕೆಲಸದಲ್ಲಿ ಕಾರ್ಯಾಂಗದ ಪ್ರಭಾವ ಉಂಟಾಗದಂತೆ ರಕ್ಷಿಸುವ ನಿಯಮಗಳಿವೆ ಎಂಬುದನ್ನು ಉಲ್ಲೇಖಿಸಿದ್ದೆ.

ಒಂದೊಮ್ಮೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು ಅಪರಾಧ ಸಾಬೀತಾಗುವ ಹಂತದಲ್ಲಿ ತಾಂತ್ರಿಕ ವಿಷಯಗಳನ್ನು ಮುಂದಿಟ್ಟರೆ ಅದನ್ನು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಅಧೀನ ಕೋರ್ಟ್​ಗಳಿಗೆ ಸೂಚಿಸಿದೆ. ವಿಚಾರಣಾ ವ್ಯವಸ್ಥೆ ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಕುಣಿಯದೆ, ಪ್ರಕರಣ ಸಾಬೀತುಮಾಡುವ ಮೇಲ್ನೋಟದ ಸಾಕ್ಷ್ಯಗಳು ಇದ್ದರೂ ಅದನ್ನು ದೃಢೀಕರಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡಿದರೂ ಆರೋಪ ಸಾಬೀತುಪಡಿಸಬಹುದು. ನಿರಪರಾಧಿಗೆ ಶಿಕ್ಷೆ ವಿಧಿಸಲ್ಪಡುವುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕೆಡುಕೇ ಸರಿ. ಅಲ್ಲದೆ, ಪ್ರಕರಣದ ವಸ್ತುನಿಷ್ಠ ಪರಿಶೀಲನೆ ಬಳಿಕ ಒಂದೊಮ್ಮೆ ಅಭಿಯೋಜಕ ಆರೋಪ ಸಾಬೀತು ಪಡಿಸುವ ಸಾಕ್ಷ್ಯವಿಲ್ಲ ಎಂದು ನಿರ್ಣಯಿಸಿದರೆ ಆಗ ಪ್ರಾಸಿಕ್ಯೂಷನ್ ಆ ಕೇಸನ್ನು ಹಿಂಪಡೆಯಬೇಕು. ಈ ಕುರಿತಂತೆಯೂ ಸುಪ್ರೀಂ ಕೋರ್ಟ್ ಶಿವ ಕುಮಾರ್ ಡ/ಠ ಹುಕುಮ್ ಚಾಂದ್(1999) ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿದೆ.

‘ಪ್ರಕರಣದ ಆರೋಪಿಯ ಮೇಲಿನ ಆರೋಪವನ್ನು ಹೇಗಾದರೂ ಸರಿ ಸಾಬೀತು ಮಾಡಿಯೇ ಸಿದ್ಧ ಎಂಬ ತುಡಿತವನ್ನು ಅಥವಾ ಪ್ರಕರಣದಲ್ಲಿ ಇರುವ ಇನ್ನೂ ಕೆಲವು ನಿಜಾಂಶಗಳ ಬಗ್ಗೆ ಸಾರ್ವಜನಿಕ ಅಭಿಯೋಜಕ ಆಸಕ್ತಿಯನ್ನು ತೋರಿಸಬೇಕು ಎಂದೇನೂ ಇಲ್ಲ. ವಾಸ್ತವದಲ್ಲಿ ಸಾರ್ವಜನಿಕ ಅಭಿಯೋಜಕನಾದವನು ನ್ಯಾಯಾಲಯಕ್ಕೆ ಮಾತ್ರವಲ್ಲದೆ ತನಿಖಾ ಸಂಸ್ಥೆಗಳ ಮಟ್ಟಿಗೂ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು. ಇದು ಅಪರಾಧಿಯ ವಿಚಾರಕ್ಕೂ ಅನ್ವಯ ಎಂಬುದನ್ನೂ ಮರೆಯುವಂತಿಲ್ಲ.’

ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನ್ಯಾಯಮೂರ್ತಿ ಒ.ಪಿ. ಸೈನಿ ಡಿಸೆಂಬರ್ 21ರಂದು(2017) 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ತೀರ್ಪನ್ನು ನೀಡಿದ್ದು, ಎಲ್ಲ ಆರೋಪಿಗಳನ್ನೂ ದೋಷಮುಕ್ತಗೊಳಿಸಿದ್ದಾರೆ. ಏಳು ವರ್ಷ ತನಿಖೆ ನಡೆಸಿದರೂ ಯಾವುದೇ ಸಾಕ್ಷ್ಯಾಧಾರಗಳನ್ನು ಕಲೆಹಾಕುವಲ್ಲಿ ಸಿಬಿಐ ವಿಫಲವಾದ ನೆಲೆಯಲ್ಲಿ ನ್ಯಾಯಮೂರ್ತಿ ಈ ತೀರ್ಪು ನೀಡಿದ್ದರು. ಆ ರೀತಿ ನಿರ್ಣಯಕ್ಕೆ ಬರುವಾಗ ಅವರು ಅಭಿಯೋಜನಾ ನಿರ್ವಹಣೆಯ ಕುರಿತು ಬರೆದ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದು ಹೀಗೆ-

‘ಪ್ರಕರಣದ ತನಿಖೆ ಪ್ರಗತಿ ಪಡೆದಂತೆ ಅದರ ಮೇಲೆ ನಿಗಾವಹಿಸಿಸುವುದಲ್ಲದೆ, ಈ ವಿಚಾರವಾಗಿ ಪ್ರಾಸಿಕ್ಯೂಷನ್ ಗರಿಷ್ಠ ಎಚ್ಚರವಹಿಸಬೇಕು’

‘ಅಂತೂ ಕೊನೆಯಲ್ಲಿ ಹೇಳುವುದಾದರೆ, ಪ್ರಾಸಿಕ್ಯೂಷನ್ ಗುಣಮಟ್ಟ ಪರಿಶೀಲನೆಯಲ್ಲಿಯೇ ಎಲ್ಲ ಗೊತ್ತಾಗುವುದರಿಂದ ಹೆಚ್ಚು ಬರೆಯುವುದೇನೂ ಇಲ್ಲ. ಆದಾಗ್ಯೂ, ಅಭಿಯೋಜನಾ ನಡವಳಿಕೆಯನ್ನು ಸೂಚಿಸುವುದಕ್ಕೆ ಕೆಲವೊಂದು ನಿದರ್ಶನಗಳನ್ನು ಉಲ್ಲೇಖಿಸುವುದು ಸೂಕ್ತ. ಅಭಿಯೋಜನೆ ಪರವಾಗಿ ಅನೇಕ ಅರ್ಜಿಗಳು ಮತ್ತು ಪ್ರತಿಕ್ರಿಯೆಗಳು ಕೋರ್ಟ್​ನಲ್ಲಿ ದಾಖಲಾಗಿವೆ. ಆದಾಗ್ಯೂ, ಮೊದಲು ಅಥವಾ ಕೊನೆಗೆ ಅರ್ಥಾತ್ ವಿಚಾರಣೆಯ ಅಂತಿಮ ಹಂತದಲ್ಲಿ ಯಾವನೇ ಒಬ್ಬ ಹಿರಿಯ ಅಧಿಕಾರಿ ಅಥವಾ ಅಭಿಯೋಜಕ ಈ ಅರ್ಜಿಗಳಿಗೆ ಅಥವಾ ಪ್ರತಿಕ್ರಿಯೆಗಳಿಗೆ ಸಹಿ ಹಾಕಲು ಇಚ್ಛಿಸಲಿಲ್ಲ. ಕೊನೆಗೆ, ಕೋರ್ಟ್​ನಲ್ಲಿ ನಿಯೋಜಿಸಲ್ಪಟ್ಟ ಕೆಳಹಂತದ ಅಧಿಕಾರಿ ಇನ್​ಸ್ಪೆಕ್ಟರ್ ಮನೋಜಕ್ ಕುಮಾರ್ ಸಹಿ ಹಾಕಿಕೊಡಬೇಕಾಯಿತು’.

‘ಈ ಬಗ್ಗೆ ಪ್ರಶ್ನಿಸಿದರೆ, ವಿಶೇಷ ಸರ್ಕಾರಿ ಅಭಿಯೋಜಕರು ಅದಕ್ಕೆ ಸಹಿಹಾಕಬೇಕು ಎಂದು ಕಾಯಂ ಹಿರಿಯ ಸರ್ಕಾರಿ ಅಭಿಯೋಜಕರು ಹೇಳಿದರು. ವಿಶೇಷ ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದರೆ, ಸಿಬಿಐ ಅಧಿಕಾರಿಗಳು ಸಹಿ ಹಾಕುತ್ತಾರೆ ಎಂದಿದ್ದರು. ಕೊನೆಯದಾಗಿ ಆ ದೂರು/ಪ್ರತಿಕ್ರಿಯೆ ಇನ್​ಸ್ಪೆಕ್ಟರ್ ಸಹಿಯೊಂದಿಗೆ ಸಲ್ಲಿಸಲ್ಪಟ್ಟಿತು. ಅಂತೂ, ಕೋರ್ಟ್​ನಲ್ಲಿ ನೀಡುವ ಹೇಳಿಕೆ ಅಥವಾ ಸಲ್ಲಿಸುವ ಹೇಳಿಕೆಯ ಹೊಣೆಗಾರಿಕೆಯನ್ನು ಯಾವುದೇ ತನಿಖಾಧಿಕಾರಿ ಅಥವಾ ಅಭಿಯೋಜಕರು ಹೊರುವುದಕ್ಕೆ ಸಿದ್ಧರಿಲ್ಲ ಎಂಬುದನ್ನು ತೋರಿಸಿದಂತಾಗಿತ್ತು’.

‘ಇದಕ್ಕಿಂತಲೂ ನೋವಿನ ಸಂಗತಿ ಎಂದರೆ, ಕೋರ್ಟ್​ಗೆ ಸ್ವತಃ ಸಲ್ಲಿಸುವ ಲಿಖಿತ ಹೇಳಿಕೆಗೆ ಸಹಿ ಹಾಕಲು ವಿಶೇಷ ಸರ್ಕಾರಿ ಅಭಿಯೋಜಕರು ಸಿದ್ಧರಿರಲಿಲ್ಲ. ಯಾರದೂ ಸಹಿಯಿರದ ದಾಖಲೆಯಿಂದ ನ್ಯಾಯಾಲಯದಲ್ಲಿ ಏನುಪಯೋಗವಾಗುತ್ತದೆ?

‘ಯಾಕೆ ಹೀಗೆ ಎಂದು ವಿಚಾರಿಸಿದಾಗ ಗಮನಕ್ಕೆ ಬಂದದ್ದಿಷ್ಟು – ಗೌರವಾನ್ವಿತ ವಿಶೇಷ ಸರ್ಕಾರಿ ಅಭಿಯೋಜಕ ಮತ್ತು ಕಾಯಂ ಅಭಿಯೋಜಕರ ನಡುವೆ ಸಮನ್ವಯ ಇರಲಿಲ್ಲ. ಇಬ್ಬರೂ ವಿಭಿನ್ನ ದಿಕ್ಕಿನಲ್ಲಿ ನಡೆಯುತ್ತಿದ್ದರು. ಇಂತಹ ಇನ್ನೂ ಹಲವು ವಿಷಯಗಳನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ, ಅದರಿಂದ ಈ ತೀರ್ಪಿನ ಗಾತ್ರವನ್ನು ಹೆಚ್ಚಿಸಬಹುದೇ ಹೊರತು ಬೇರೇನೂ ಸಾಧನೆಯಾಗದು’

‘ಕಳೆದ ಏಳು ವರ್ಷಗಳ ಅವಧಿಯಲ್ಲಿ ರಜೆಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಯಾರಾದರೂ ಕಾನೂನಾತ್ಮಕವಾಗಿ ಸ್ವೀಕಾರಾರ್ಹವಾದ ಸಾಕ್ಷ್ಯಗಳನ್ನು ತಂದೊಪ್ಪಿಸುತ್ತಾರೆಯೇ ಎಂದು ನಾನು ಕರಾರುವಾಕ್ಕಾಗಿ ನ್ಯಾಯಾಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ತನಕ ಕಾಯುತ್ತ ಕುಳಿತಿದ್ದೆ. ಆದರೆ, ಒಬ್ಬನೂ ಬರಲಿಲ್ಲ’.

‘ಸನ್ನಿವೇಶವನ್ನು ಇನ್ನಷ್ಟು ಹದಗೆಡಿಸುವಂತೆ, ಎರಡು ಕಂಪನಿಗಳ ನಡುವಿನ ಬಾಧ್ಯತೆ ಅಥವಾ ಮುಂಗಡ ಪಾವತಿ ಅಥವಾ ಒಪ್ಪಂದಗಳಲ್ಲಿ ಎ.ರಾಜಾ ಅವರ ಪಾತ್ರವನ್ನು ಸೂಚಿಸುವಂತಹ ಯಾವುದೇ ಅಂಶವನ್ನು ಸಾಕ್ಷಿಗಳು ಒದಗಿಸಲಿಲ್ಲ. ಸಾಕ್ಷಿಗಳ ಪೈಕಿ ಒಬ್ಬ ಚಾಲಕ ಮತ್ತು ಹಲವು ನಿರ್ದೇಶಕ(ಇವರಲ್ಲೊಬ್ಬ ರಾಜಾ ಅವರ ಸಂಬಂಧಿ)ರನ್ನು ವಿಚಾರಣೆಗೊಳಪಡಿಸಿದಾಗ ಬಹುತೇಕರು ಪ್ರಕರಣಕ್ಕೆ ಸಂಬಂಧಿಸದ ವಿಚಾರಗಳನ್ನು ಹೇಳಿದರೇ ಹೊರತು, ಪ್ರಕರಣದ ವಿಷಯ ಮುಟ್ಟಲೇ ಇಲ್ಲ!’

‘ಒಬ್ಬನೇ ಒಬ್ಬ ಆರೋಪಿಯ ವಿರುದ್ಧದ ಆರೋಪವನ್ನು ಸಾಬೀತು ಪಡಿಸುವಲ್ಲಿ ಅಭಿಯೋಜಕ ವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದೆ ಎಂಬುದನ್ನು ಯಾವುದೇ ಹಿಂಜರಿಕೆ ಇಲ್ಲದೇ ಖಚಿತವಾಗಿ ಹೇಳಬಲ್ಲೆ. ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುವ ಅಂಶಗಳನ್ನು ಅಭಿಯೋಜಕರು ಸಲ್ಲಿಸಿದ ‘ಬಹಳ ವ್ಯವಸ್ಥಿತವಾಗಿ ಹೆಣೆಯಲ್ಪಟ್ಟ ಚಾರ್ಜ್​ಶೀಟ್’ ಒದಗಿಸಿದೆ’.

ಇನ್ನು, 2012ರ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳನ್ನು ಅವಲೋಕಿಸೋಣ. ಅಂದು, 2ಜಿ ತರಂಗಾಂತರ ಹಂಚಿಕೆ ಅಸಾಂವಿಧಾನಿಕ ಮತ್ತು ಏಕಪಕ್ಷೀಯವಾದುದು ಎಂದು ಘೋಷಿಸಿದ ಸುಪ್ರೀಂ ಕೋರ್ಟ್, 2008ರಲ್ಲಿ ಕೇಂದ್ರ ಸರ್ಕಾರ ನೀಡಿದ್ದ 122 ಪರವಾನಗಿಗಳನ್ನು ರದ್ದುಗೊಳಿಸಿತ್ತು. ಎ.ರಾಜಾ ದೂರ ಸಂಪರ್ಕ ಮತ್ತು ಐಟಿ ಸಚಿವ(2007-09)ರಾಗಿದ್ದ ವೇಳೆ ಈ ತರಂಗಾಂತರ ಪರವಾನಗಿಗಳ ಹಂಚಿಕೆ ಆದೇಶವನ್ನು ನೀಡಿದ್ದರು. ಹಾಗಾಗಿ ಅವರನ್ನೇ ಈ ಹಗರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿತ್ತು. ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಡ/ಠ ಯೂನಿಯನ್ ಆಫ್ ಇಂಡಿಯಾ (2012) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹಾಗೂ 2ಜಿ ತರಂಗಾಂತರ ಹಂಚಿಕೆ ಪರವಾನಗಿ ರದ್ದುಗೊಳಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಟಿಪ್ಪಣಿ ಹೀಗಿತ್ತು:

‘ಬೊಕ್ಕಸಕ್ಕೆ ಹಾನಿಯುಂಟು ಮಾಡಿ ಕೆಲವು ಕಂಪನಿಗಳಿಗೆ ಲಾಭ ಮಾಡಿಕೊಡಲು ದೂರಸಂಪರ್ಕ ಮತ್ತು ಐಟಿ ಸಚಿವ ಬಯಸಿದ್ದರು ಎಂಬುದನ್ನು ಕೋರ್ಟ್​ಗೆ ಸಲ್ಲಿಸಲ್ಪಟ್ಟಿರುವ ದಾಖಲೆಗಳಿಂದ ವ್ಯಕ್ತವಾಗಿದೆ’

‘ ಪ್ರಧಾನಮಂತ್ರಿ, ಹಣಕಾಸು ಸಚಿವಾಲಯ ಮತ್ತು ದೂರ ಸಂಪರ್ಕ ಇಲಾಖೆಯ ಕೆಲವು ಅಧಿಕಾರಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾಗ್ಯೂ ಅಂದಿನ ದೂರಸಂಪರ್ಕ ಮತ್ತು ಐಟಿ ಸಚಿವರು, ದೂರಸಂಪರ್ಕ ಇಲಾಖೆ ಅಧಿಕಾರಿಗಳು ಬಹುಮುಖ್ಯ ರಾಷ್ಟ್ರೀಯ ಸಂಪತ್ತನ್ನು ಅತ್ಯಂತ ಕಡಿಮೆ ಬೆಲೆಗೆ ಉಡುಗೊರೆಯ ರೀತಿಯಲ್ಲಿ ನೀಡಿದ್ದಾರೆ’.

‘ಸೇನೆಯು ಉಳಿಸಿರುವ ಮಿತ ಪ್ರ್ರಾಕೃತಿಕ ಸಂಪನ್ಮೂಲವನ್ನು ಹಣಬಲವಿರುವವರು, ಅಧಿಕಾರ ಬಲವಿರುವವರು ಹೇಗೆ ಸ್ವಾರ್ಥಕ್ಕಾಗಿ ಬಳಕೊಳ್ಳುತ್ತಿದ್ದಾರೆ ಎಂಬುದು ಸಾಂವಿಧಾನಿಕ ಮತ್ತು ಇತರೆ ಕೆಲವು ಆಯಕಟ್ಟಿನ ಜಾಗದಲ್ಲಿರುವ ಜಾಗೃತ ಅಧಿಕಾರಿಗಳು, ಉತ್ತಮ, ಸ್ವಚ್ಛ ಆಡಳಿತ ಮತ್ತು ಸಾಂವಿಧಾನಿಕ ಮಾನ್ಯತೆ ಹೊಂದಿದ ಸಂಸ್ಥೆಗಳ ಬದ್ಧತೆ ಪರವಾಗಿ ಕೆಲಸ ಮಾಡುವ ಕೆಲವು ಸರ್ಕಾರೇತರ ಸಂಸ್ಥೆಗಳು(ಎನ್​ಜಿಒ), ಪೌರರಿಗೆ ತಿಳಿಯಲೇ ಇಲ್ಲ.’

ಈ ಎರಡೂ ಟಿಪ್ಪಣಿಗಳನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ, ಕೋರ್ಟಿಗೆ ಸಲ್ಲಿಸಲ್ಪಟ್ಟ ಯಾವ ದಾಖಲೆಯಲ್ಲಿ, ಸರ್ಕಾರಿ ಬೊಕ್ಕಸಕ್ಕೆ ಹಾನಿಯುಂಟು ಮಾಡಿ ಕೆಲವು ಕಂಪನಿಗಳಿಗೆ ಲಾಭ ಮಾಡಿಕೊಡುವ ಅಂಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತೋ, ಕೊನೆಗೆ ಸಾಕ್ಷ್ಯದ ಕೊರತೆ ಹಾಗೂ ಅಭಿಯೋಜಕ ವ್ಯವಸ್ಥೆಯ ಅನೇಕ ಲೋಪದೋಷಗಳ ಕಾರಣಕ್ಕೆ ಅದನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿತು. ಯಾವಾಗ ಆರೋಪ ಸಾಬೀತು ಪಡಿಸುವ ಸಾಕ್ಷ್ಯಗಳಿಲ್ಲವೋ ಆಗ ಅಭಿಯೋಜಕ ವ್ಯವಸ್ಥೆ ದೂರನ್ನು ಹಿಂಪಡೆಯಬೇಕಿತ್ತು. ಆದರೆ ಇಲ್ಲಿ ಅದಾಗಲಿಲ್ಲ. ಇದಲ್ಲದೆ, ಸಿಬಿಐ ನ್ಯಾಯಾಧೀಶರು ಹೇಳಿದಂತೆ, ಅಭಿಯೋಜಕ ವ್ಯವಸ್ಥೆ ಮುಂದಡಿ ಇರಿಸಿದ್ದರೂ ಸಾಕಿತ್ತು. ಆದರೆ, ಹಾಗಾಗಲಿಲ್ಲ.

ಹಾಗಂತ ಇದು ಆಪಾದಿತರ ಪರವಾಗಿ ನೇರ ಮತ್ತು ನಿರ್ಣಾಯಕ ಪ್ರಕರಣ ಎಂದೇನೂ ಇತಿಹಾಸದಲ್ಲಿ ದಾಖಲಾಗುವುದಿಲ್ಲ. ಹಾಗೆನೋಡಿದರೆ ಈ ಪ್ರಕರಣ ಒಂದು ಸರ್ಕಾರದ ಪತನಕ್ಕೆ ಕಾರಣವಾಯಿತು; ನಾಗರಿಕರು ಪಾರದರ್ಶಕ ಆಡಳಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಸುಪ್ರೀಂ ಕೋರ್ಟಿಗೆ ಒಯ್ದು ಗೆದ್ದ ಪ್ರಕರಣವಿದು. ಆದರೆ, ದುರದೃಷ್ಟವಶಾತ್ ಈ ಪ್ರಕರಣಕ್ಕೊಂದು ರ್ತಾಕ ಅಂತ್ಯ ಒದಗಿಸುವಲ್ಲಿ ಹಾಗೂ ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸುವ ತನ್ನ ಕರ್ತವ್ಯಕ್ಕೆ ನ್ಯಾಯ ಒದಗಿಸವಲ್ಲಿ ಅಭಿಯೋಜಕ ವ್ಯವಸ್ಥೆ ವಿಫಲವಾಯಿತು ಎಂದು ವಿಷಾದದಿಂದಲೇ ಹೇಳಬೇಕಾಗಿದೆ.

( ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *