ನಮ್ ಕಥೆ ಯಾರೂ ಕೇಳಲ್ಲ ಎಂಬ ಕೊರಗಿಗೆ ಕಿವಿಯಾಗುತ್ತ…

| ರವೀಂದ್ರ ಎಸ್. ದೇಶಮುಖ್​

 ಪ್ರತಿಯೊಬ್ಬರ ಜೀವನದಲ್ಲೂ ಕಥೆ ಇರುತ್ತದೆ, ಪ್ರತೀ ಜೀವದಲ್ಲೂ ವ್ಯಥೆಗಳ ದೊಡ್ಡ ಪಟ್ಟಿ ಇರುತ್ತದೆ!

ಇದನ್ನೊಮ್ಮೆ ಯಾರಾದರೂ ಕೇಳಬಾರದೆ, ದುಃಖ ಮಾತುಗಳಲ್ಲಿ ಪ್ರವಹಿಸಿ ಮನಸು ನಿರಾಳವಾಗಬಾರದೆ ಎಂದು ಹಂಬಲಿಸುವವರ ಸಂಖ್ಯೆ ಅದೆಷ್ಟೋ. ಈಗಂತೂ ಬಿಡಿ, ಯಾರ ಮಾತು ಕೇಳಲೂ ವ್ಯವಧಾನವೇ ಇಲ್ಲ. ಅಪ್ಪ ಬಿಜಿ, ಅಮ್ಮ ಬಿಜಿ. ಹೀಗಿರುವಾಗ ಮಕ್ಕಳು ಖಿನ್ನತೆಯ ಕೂಪಕ್ಕೆ ಜಾರದೆ ಏನಾಗಬೇಕು? ಸಂಜೆ ಪಾರ್ಕಲ್ಲಿ ಕೂತ ವೃದ್ಧರತ್ತ ಒಮ್ಮೆ ನೋಡಿ ‘ಬಹಳಷ್ಟು ಮಾತಾಡ್ಲಿಕ್ಕಿದೆ’ ಎಂಬುದನ್ನು ಅವರ ಕಣ್ಣುಗಳೇ ಹೇಳುತ್ತಿರುತ್ತವೆ. ಗೆಳೆಯರ ಪಟ್ಟಾಂಗಗಳು, ಜಗುಲಿಯ ಮಾತುಕತೆಗಳು, ಸಂಜೆಯಾಗುತ್ತಿದ್ದಂತೆ ಮನೆ ಹೊರಗಿನ ಕಟ್ಟೆಯಲ್ಲಿ ರಂಗೇರುವ ಮಾತಿನ ಮಂಟಪಗಳಲ್ಲೆಲ್ಲ ಭಾವನೆಗಳ ವಿನಿಮಯ ಸಲೀಸಾಗಿ ನಡೆಯುತ್ತಿತ್ತು. ಇದರಿಂದ ಮನಸ್ಸಿನಲ್ಲಿನ ಚಿಂತೆಯ ಗೂಡು ಖಾಲಿಯಾಗುತ್ತಿತ್ತು. ಹಿಂದೆಲ್ಲ ಕಷ್ಟ-ಸುಖ ತೋಡಿಕೊಂಡಾಗ ಹಿರಿಯರು ‘ಅಷ್ಟಕ್ಯಾಕೆ ಕೊರಗುತ್ತಿ ಬಿಡು, ನಾನಿಲ್ವ’ ಎಂದು ಅಭಯ ನೀಡೋರು. ಹಾಗಂತ ಅವರು ಸಹಾಯಕ್ಕೆ ಬಂದೇ ಬರ್ತಾರೆ ಅಂತೇನಲ್ಲ, ಆದರೆ ಆ ಕ್ಷಣಕ್ಕೆ ನೀಡಿದ ಭಾವನಾತ್ಮಕ ಬೆಂಬಲ, ಆಸರೆ ಒಂದಿಷ್ಟು ಚೈತನ್ಯ, ಹುರುಪು ತುಂಬುತ್ತದೆ. ಈ ಫೇಸ್​ಬುಕ್, ವಾಟ್ಸ್​ಆಪ್​ಗಳು ಬಂದ ಮೇಲೆ ಆಗಿರುವ ದೊಡ್ಡ ಹಾನಿ ಎಂದರೆ ಮಾತು ಕರಗಿದೆ, ಕೃತಕತೆ ಹೆಚ್ಚಿದೆ. ಬಿಡಿ, ನಮ್ಮವರ ಮಾತೇ ಕೇಳಲು ಪುರುಸೊತ್ತಿಲ್ಲ (ಅದೊಂದು ಸಬೂಬು ಅಷ್ಟೇ) ಅಂದರೆ ಇನ್ನು ಕಷ್ಟಗಳನ್ನು ಗೆದ್ದುಬಂದವರು, ಸಾಮಾಜಿಕ ಕಳಂಕಗಳ ವಿರುದ್ಧ, ಪೂರ್ವಗ್ರಹಗಳ ವಿರುದ್ಧ ಹೋರಾಡಿ ಬಂದವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದೆಂತು?

ಮಾತು ಭಗವಂತ ಮನುಷ್ಯನಿಗೆ ಕೊಟ್ಟಿರುವ ಅತ್ಯುದ್ಭುತ ವರ ಮತ್ತು ಶಕ್ತಿ. ಮಾತುಗಳ ವಿನಿಮಯ ಸಂಬಂಧಗಳನ್ನು ಗಟ್ಟಿ ಮಾಡಬಲ್ಲದು, ಪ್ರೀತಿಯ ತೇರನ್ನು ಹೃದಯದಿಂದ ಜಗದಗಲಕ್ಕೆ ಕೊಂಡೊಯ್ಯಬಲ್ಲದು, ಮಾನವೀಯತೆಗೆ ಹೊಸ ಭಾಷ್ಯ ಬರೆಯಬಲ್ಲದು. ಆದರೆ ಇಂಥ ಮಾತನ್ನು ಭಾವನೆಗಳ ಕಿಡಿ ಹೊತ್ತಿಸಲು ಬಳಸುತ್ತಿರುವಾಗ ಹುಣ್ಣಿಮೆಯ ಅಂಗಳದಂತಿರುವ ಮನಸ್ಸು ರಣರಂಗದಂತೆ ಆಗದಿರಲು ಹೇಗೆ ಸಾಧ್ಯ? ಮಾತು ಆಡುವ ಮತ್ತು ಕೇಳುವ ಕಲೆ ರೂಢಿಸಿಕೊಂಡರೆ ಈ ಜಗತ್ತು ತಲ್ಲಣ, ಖಿನ್ನತೆ, ಆತಂಕಗಳಿಂದ ಮುಕ್ತವಾಗಬಲ್ಲದು. ಅದರಲ್ಲೂ ಯುವಸಮೂಹದ ನಡುವೆ ವಿಚಾರ ವಿನಿಮಯ ನಡೆದರೆ ಅದೆಷ್ಟೋ ಮಿಥ್ಯರೂಢಿಗಳು ದೂರವಾಗಿ ಸತ್ಯದ ಬೆಳಕು ಕಾಣಲು ಸಾಧ್ಯ.

ನಾವೆಲ್ಲ ಗ್ರಂಥಾಲಯಗಳನ್ನು ನೋಡಿದ್ದೇವೆ, ಪುಸ್ತಕಗಳನ್ನು ಓದಿದ್ದೇವೆ. ಆದರೆ, ಮನುಷ್ಯರನ್ನು ‘ಓದಿದ್ದೇವೆಯಾ?’ ಇದೆಂಥ ವಿಚಿತ್ರ ಪ್ರಶ್ನೆ ಮನುಷ್ಯರನ್ನು ಓದಲು ಸಾಧ್ಯವಾ ಅಂದುಕೊಳ್ಳಬೇಡಿ. ಮನುಷ್ಯರನ್ನು ‘ಓದುವುದು’ ಎಂದರೆ ಅವರನ್ನು ಅರಿಯುವುದು, ಅವರಲ್ಲಿನ ಭಾವನೆ, ತುಮುಲಗಳನ್ನೆಲ್ಲ ಮಾತುಕತೆ ಮೂಲಕ ಅರ್ಥೈಸಿಕೊಳ್ಳುವುದು. ಇದಕ್ಕಾಗಿಯೇ 2000ನೇ ಇಸ್ವಿಯಲ್ಲಿ ದೂರದ ಆಸ್ಟ್ರೇಲಿಯಾದಲ್ಲಿ ‘ಹ್ಯೂಮನ್ ಲೈಬ್ರರಿ’ ಆರಂಭವಾಯಿತು. ನೋಡುನೋಡುತ್ತಿದ್ದಂತೆ ಈ ಅಭಿಯಾನ 70 ರಾಷ್ಟ್ರಗಳಲ್ಲಿ ವಿಸ್ತರಿಸಿತು. ‘ಇದನ್ನು ನಮ್ಮಲ್ಲೂ ಆರಂಭಿಸಿದರೆ ಹೇಗೆ’ ಎಂಬ ಚಿಂತನೆ ಒಬ್ಬ ಹುಡುಗನಿಗೆ ಬಂದದ್ದೆ ತಡ ಹೈದರಾಬಾದ್​ನಲ್ಲೂ ‘ಹ್ಯೂಮನ್ ಲೈಬ್ರರಿ’ ಆರಂಭಗೊಂಡಿದ್ದು, ಜೀವನದ ಪುಸ್ತಕಗಳನ್ನು ಜನಸಾಮಾನ್ಯರು ‘ಓದುತ್ತಿದ್ದಾರೆ’.

ಮಹಾರಾಷ್ಟ್ರದ ಪುಣೆಯವನಾದ ಹರ್ಷದ್ ದಿನಕರ್ ಫಾದ್ ಎಂಬ ಹುಡುಗ ಮೀಡಿಯಾ ಬಿಸಿನೆಸ್ ಅಡ್​ವಿುನಿಸ್ಟ್ರೇಷನ್​ನಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಹೈದರಾಬಾದ್​ಗೆ ಬಂದು ಈ ಮಾನವ ಗ್ರಂಥಾಲಯ ಸ್ಥಾಪಿಸಿದ್ದಾನೆ. 2017ರ ಮಾರ್ಚ್​ನಲ್ಲಿ ಇದು ಆರಂಭಗೊಂಡಿದ್ದು, ಸಮಾಜದ ವಿಭಿನ್ನ ತಲ್ಲಣ, ಸಂಕಟ ಅನುಭವಿಸಿದ ವ್ಯಕ್ತಿಗಳು ಇಲ್ಲಿ ತಮ್ಮ ಜೀವನಗಾಥೆ ಅನಾವರಣಗೊಳಿಸುತ್ತಾರೆ. ಆ ಮೂಲಕ ತಮ್ಮ ಈ ಸ್ಥಿತಿಗೆ ಕಾರಣವೇನು? ಆಂತರ್ಯದಲ್ಲಿ ಮಡುಗಟ್ಟಿರುವ ನೋವು, ನಲಿವುಗಳು ಯಾವುವು ಎಂಬುದೆಲ್ಲ ಮಾತಾಗಿ ಹರಿಯುತ್ತದೆ. ಇಲ್ಲಿ ಎರಡು ಮುಖ್ಯಅಂಶಗಳನ್ನು ಗಮನಿಸಬೇಕು. ಒಂದು, ಸಾಕಷ್ಟು ಜ್ಞಾನ, ಕೌಶಲ, ವಿಷಯ ಅಥವಾ ತಳಮಳ ಇದ್ದರೂ ಅದನ್ನು ಹೇಗೆ ಹೇಳುವುದು, ಹೇಳಿಬಿಟ್ಟರೆ ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬ ಅಳುಕಿನಿಂದ ಮನಸ್ಸಲ್ಲೇ ಭಾವನೆಗಳನ್ನು ಸಮಾಧಿ ಮಾಡಿಕೊಳ್ಳುವವರಿಗೆ ಮಾನವ ಗ್ರಂಥಾಲಯದಲ್ಲಿ ಮುಕ್ತವಾಗಿ ಮಾತಾಡಲು ಸಾಧ್ಯವಾಗುತ್ತಿದೆ. ‘ಬೀಯಿಂಗ್ 37 ಆಂಡ್ ಅನ್​ವ್ಯಾರಿಡ್’ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಿ ಸಮಾಜದ ವಾಸ್ತವಗಳನ್ನು ಅನಾವರಣಗೊಳಿಸಿದಾಗ, ‘ದ ಹಿಪ್ಪಿ ವಾಸ್ ಎ ಲೆಟ್​ಡೌನ್’ ಎಂಬ ‘ಮಾನವ ಪುಸ್ತಕ’ ತನ್ನ ಗಡ್ಡ, ರೂಪ, ದೇಹಭಾಷೆ ಬಗ್ಗೆ ವಿವರಿಸಿದಾಗ ಜನಸಾಮಾನ್ಯರ ಅದೆಷ್ಟೋ ಪೂರ್ವಗ್ರಹಗಳು ದೂರವಾದವು. ಜನಸಾಮಾನ್ಯರು ಸಮಾಜದ, ವ್ಯಕ್ತಿಗಳ ನೈಜ ಸಂಗತಿಗಳನ್ನು ಅರಿಯುವುದು ಎರಡನೇ ಮುಖ್ಯ ಅಂಶ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ನಡೆಯುವ ಕಾರ್ಯಕ್ರಮದಲ್ಲಿ ಒಂದು ದಿನದಲ್ಲಿ 20 ‘ಮಾನವ ಪುಸ್ತಕ’ ಓದಬಹುದು. ಸಭಿಕರು ಪ್ರತಿ ವ್ಯಕ್ತಿಯೊಡನೆ ಸಂವಾದ ನಡೆಸಲು 30 ನಿಮಿಷಗಳ ಸಮಯಾವಕಾಶ ಇರುತ್ತದೆ. ಹೈದರಾಬಾದ್ ಅಷ್ಟೆ ಅಲ್ಲದೆ ದೇಶದ ಇತರೆ ಮಹಾನಗರಗಳಿಗೂ ಈ ಪರಿಕಲ್ಪನೆಯನ್ನು ವಿಸ್ತರಿಸಲು ಮುಂದಾಗಿರುವ 24 ವರ್ಷದ ಹರ್ಷದ್ ಮಾತು ಸಂಬಂಧಗಳ ಸೇತುವೆಯನ್ನು ಕಟ್ಟಬೇಕು ಎಂಬ ಸಂಕಲ್ಪ ತಳೆದಿದ್ದಾರೆ.

ಜೀವನದಲ್ಲಿ ಎದುರಾದ ಅಸಂಖ್ಯ ಕಷ್ಟಗಳನ್ನು ಆತ್ಮಬಲದ ಮೂಲಕ ಸೋಲಿಸಿ ಸಾಧನೆಯ ಎತ್ತರಕ್ಕೆ ತಲುಪಿದ ಅದೆಷ್ಟೋ ಸಾಧಕರ ಮಾತು ಕೂಡ ಸಮಾಜಕ್ಕೆ ಕೇಳಿಸಬೇಕು. ಆ ಹೋರಾಟ, ದುರ್ಗಮ ಹಾದಿ, ಸೋತಾಗ ಅನುಭವಿಸಿದ ಅವಮಾನ, ಸವಾಲುಗಳನ್ನು ಗೆದ್ದಾಗ ಸಿಕ್ಕ ಸಂತೃಪ್ತಿ… ಈ ಎಲ್ಲ ಸಂಗತಿಗಳು ವ್ಯಷ್ಟಿ-ಸಮಷ್ಟಿಗೆ ಹೊಸ ಚೈತನ್ಯ ಒದಗಿಸುವುದಲ್ಲದೆ ಜೀವನಪ್ರೀತಿಯನ್ನು ಹೆಚ್ಚಿಸುತ್ತವೆ. ಹೀಗೆ ಸಾಧಕರನ್ನು ಜನರೆದುರು ತಂದು ನಿಲ್ಲಿಸಿ ಪ್ರೇರಣೆಯ ಭಾವವನ್ನು ಹರಡಬೇಕು ಎಂಬ ಸದುದ್ದೇಶದಿಂದ ನಮ್ಮ ಕನ್ನಡದ ಹುಡುಗ ಕೃಷ್ಣನ ನಾಡಾದ ಉಡುಪಿಯಲ್ಲಿ ನಡೆಸುತ್ತಿರುವ ‘ಹೆಜ್ಜೆಗುರುತು’ ಕಾರ್ಯಕ್ರಮ ಕೂಡ ಹೊಸ ಸಂಚಲನಕ್ಕೆ ಕಾರಣವಾಗಿದೆ. ಸಮಾಜದ ವಿಕೃತಿಗಳಿಗೆ ಬೆಂದುಹೋದವರು ಮತ್ತೆ ಹೊಸದಾಗಿ ಬದುಕು ಕಟ್ಟಿಕೊಳ್ಳುವುದು ಸಾಮಾನ್ಯವಾದುದೇನಲ್ಲ. ಅದಕ್ಕೆ ಅಸಾಧಾರಣ ಮನೋಸ್ಥೈರ್ಯ, ನೋವು, ಅವಮಾನವನ್ನು ಮೀರಿ ನಿಲ್ಲುವ ಗಟ್ಟಿತನ ಎಲ್ಲವೂ ಬೇಕು. ‘ನನ್ನದೇ ಕಷ್ಟ ದೊಡ್ಡದು’ ಎಂಬ ಕೊರಗಿನಲ್ಲಿ ಜೀವನ ನೀರಸವಾಗಿಸಿಕೊಂಡವರಿಗೆ ಇಂಥ ಸ್ಪೂರ್ತಿಗಾಥೆಗಳು ಬದುಕಿಗೆ ಹೊಸ ಪಥವನ್ನೇ ಕಟ್ಟಿಕೊಡುತ್ತವೆ.

ತನ್ನ ಗೆಳೆಯರೊಡನೆ ಉಡುಪಿಯ ಮನೆ-ಮನೆಗೂ ಹೋಗಿ ಸಸಿ ನೆಡುತ್ತಿರುವ, ‘ಬೀಯಿಂಗ್ ಸೋಷಿಯಲ್’ ಎಂಬ ಸಂಘಟನೆ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಅವಿನಾಶ್ ಕಾಮತ್ ಸಮಾನ ಮನಸ್ಕರ ಜತೆಗೂಡಿ ‘ಹೆಜ್ಜೆಗುರುತು’ ಮೂಡಿಸುತ್ತಿದ್ದಾರೆ. ಆಸಿಡ್ ದಾಳಿ ಸಂತ್ರಸ್ತೆಯಾಗಿದ್ದು ಮತ್ತೆ ಹೊಸದಾಗಿ ಬದುಕು ಕಟ್ಟಿಕೊಂಡ ಡಾ.ಮಹಾಲಕ್ಷ್ಮಿ, ತಾನು ಅಕ್ಷರಲೋಕವನ್ನೇ ಕಾಣದಿದ್ದರೂ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿಸಿದ ಹರಕಳ ಹಾಜಬ್ಬ, ಚಂದನವನದಲ್ಲಿ ತಾಜಾ ಅಲೆ ಸೃಷ್ಟಿಸಿರುವ ಸಂಗೀತ ನಿರ್ದೇಶಕ ರವಿ ಬಸ್ರೂರ್, ಮರಗಳನ್ನು ಮಕ್ಕಳಂತೆ ಸಾಕಿರುವ ಸಾಲುಮರದ ತಿಮ್ಮಕ್ಕ, ಅಡಕೆ ಚಹಾ ಅನ್ವೇಷಿಸಿದ ನಿವೇದನ ನೆಂಪೆ, ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡ, ಈ ಪಯಣದಲ್ಲಿ ಸಾಲು ಸಾಲು ನೋವುಂಡ ರಾಜ್ಯ ಜಾನಪದ ಅಕಾಡೆಮಿ ಸದಸ್ಯೆ ಮಂಜಮ್ಮ ಜೋಗತಿ… ಇವರೆಲ್ಲ ‘ಹೆಜ್ಜೆಗುರುತು’ ಕಾರ್ಯಕ್ರಮದಲ್ಲಿ ತಮ್ಮ ಜೀವನಗಾಥೆ ಬಿಚ್ಚಿಟ್ಟ ಪರಿಣಾಮ ಯುವಮನಸುಗಳು ಹೊಸ ಹುರುಪಿನೊಂದಿಗೆ ಜೀವನದ ಕನಸುಗಳನ್ನು ಹೆಣೆಯುತ್ತಿವೆ, ಏನಾದರೂ ಸಾಧನೆ ಮಾಡಬೇಕು ಎಂದು ಹವಣಿಸುತ್ತ ಕ್ರಿಯಾಶೀಲವಾಗಿವೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಅವಿನಾಶ್ ಕಾಮತ್ ಹಾಗೂ ತಂಡ ನಿರ್ಧರಿಸಿದೆ.

ಇದೇ ಅಂಕಣ(ಜರೂರ್ ಮಾತು)ದ ಸಾಧಕರನ್ನು ‘ನಕ್ಷತ್ರಗಳೊಂದಿಗೆ ಮಾತಿನ ಮಂಟಪ’ದ ಶೀರ್ಷಿಕೆಯಲ್ಲಿ ಸಂವಾದಕ್ಕೆ ತಂದು ಕೂರಿಸಿದವರು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಗಗನ್ ನಂದಿ ಹಾಗೂ ಅವರ ತಂಡ. ಸೆಲೆಬ್ರಲ್ ಪಾಲ್ಸಿ ಕಾಯಿಲೆ ಹೊಂದಿ ದೇಶದ ಮೊದಲ ಸಾಫ್ಟ್​ವೇರ್ ಇಂಜಿನಿಯರ್ ಆದ ಅಶ್ವಿನ್ ಕಾರ್ತಿಕ್, ಚಹಾ ಮಾರುತ್ತ, ಕ್ಲೀನರ್ ಆಗಿ ಕೆಲಸ ಮಾಡುತ್ತಲೇ ಸಿಎ ಮಾಡಿದ ಭೋಪಾಲ್​ನ ಮುಕೇಶ್ ಸಿಂಗ್, ‘ಯೂತ್ ಫಾರ್ ಸೇವಾ’ ಸಂಘಟನೆ ಮೂಲಕ ಸೇವೆಗೆ ತರುಣರ ದೊಡ್ಡ ಪಡೆಯನ್ನೇ ಕಟ್ಟಿರುವ ವೆಂಕಟೇಶಮೂರ್ತಿ ಸೇರಿದಂತೆ ಹಲವರು ‘ನಕ್ಷತ್ರಗಳೊಂದಿಗೆ ಮಾತಿನ ಮಂಟಪ’ದಲ್ಲಿ ಆಡಿದ ಮಾತುಗಳು ಸಮಾಜದಲ್ಲಿ ಸಕಾರಾತ್ಮಕತೆ ಮತ್ತು ಆಶಾವಾದ ಬಿತ್ತಿವೆ. ಇವು ಕೆಲ ಉದಾಹರಣೆಗಳಷ್ಟೇ. ನೊಂದ ಹೃದಯಗಳು, ಮನಸ್ಸುಗಳು ಸಾಕಷ್ಟಿವೆ. ಅವರ ಮಾತುಗಳಿಗೆ ಕಿವಿಯಾದರೆ, ಸಾಧಕರ ಮಾತುಗಳನ್ನು ಧ್ಯಾನಿಸಿದರೆ ನೈರಾಶ್ಯ, ನೋವನ್ನು ನೀಗಿಸಬಹುದು. ಈಗ ಮತ್ತೆ ಮಾತಾಡಲು ಶುರು ಮಾಡಬೇಕಿದೆ. ಆ ಮಾತುಗಳು ಅಂತಃಕರಣದಿಂದ ಬರಲಿ, ಹೃದಯದಿಂದ ಹೊಮ್ಮಲಿ. ನಮ್ಮ ಮಾತುಗಳು ಯಾರದ್ದೋ ನೋವು ಕಳೆದರೆ, ಕಡೇ ಪಕ್ಷ ನಮ್ಮ ಮನೆಯವರ ಮೊಗದಲ್ಲಿ ಸಂತಸ ಮೂಡಿಸಿದರೆ ಅದಕ್ಕಿಂತ ಸಾರ್ಥಕತೆ ಬೇರೇನಿದೆ ಅಲ್ವೆ? ಮಾತುಗಳಿಗೆ ಜೀವ ಬಂದಾಗ ನಮ್ ಕಥೆ ಯಾರೂ ಕೇಳಲ್ಲ, ನಮಗೆ ಯಾರೂ ಇಲ್ಲ ಎಂಬ ಕೊರಗಿಗೆ ‘ಅಲ್ವಿದಾ’ ಹೇಳಬಹುದಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *