ಅವರು ಸಾಯಬೇಕು ಅನ್ನೋದನ್ನು ಮರೆತು ಕೂತಿದ್ದಾರೆ!

| ಪ್ರೊ. ಎಂ. ಕೃಷ್ಣೇಗೌಡ

ಗಾಜಿನಲ್ಲಿ ಮಾಡಿದ್ದ ಗೊಂಬೆಯ ಹಾಗಿದ್ದರು ನಮ್ಮ ಗಾಯತ್ರಿ ಮೇಡಮ್ಮು. ಎಡವಿ ಬಿದ್ದರೆ ‘ಫಳ್’ ಅಂತ ಒಡೆದೇ ಹೋಗುತ್ತಾರೇನೋ ಅನ್ನುವ ಹಾಗೆ! ಸಂಕ್ರಾಂತಿ ಹಬ್ಬದ ಸಕ್ಕರೆ ಅಚ್ಚಿನ ಹಾಗಿದ್ದ ಅವರ ಮೊಕದ ಮೇಲೆ ಒಂದಾದರೂ ಗುಳ್ಳೆ ಗುರುತು ಇತ್ತಾ? ಉಹ್ಞು, ‘ಹಾಲಿನಂಥಾ ಮೈಕಾಂತಿ’ ಅಂತ ಆಗ ಸಿನಿಮಾದ ಸೈಡ್ ರೀಲುಗಳಲ್ಲಿ ತೋರಿಸುತ್ತಿದ್ದರಲ್ಲ, ಅದಕ್ಕೆ ನಮ್ಮ ಸಮೀಪದ ಉದಾಹರಣೆ ಗಾಯತ್ರಿ ಮೇಡಮ್ಮು. ಅದ್ಯಾವ ಸಾಬೂನು, ಸ್ನೋ ಉಪಯೋಗಿಸ್ತಾ ಇದ್ದರೋ ಕಾಣೆ.

ಹೈಸ್ಕೂಲು ಓದೋಕೆ ಅಂತ ಪಟ್ಟಣಕ್ಕೆ ಬಂದಿದ್ದ ಹಳ್ಳಿ ಹೈಕಳು ನಾವು. ನಮ್ಮ ಕ್ಲಾಸಿನಲ್ಲಿ ಅವನೊಬ್ಬ ಹುಡುಗ ಇದ್ದ, ಈರಲಿಂಗೇ ಗೌಡ ಅಂತ. ಇಡೀ ಕ್ಲಾಸಿಗೇ ಹಿರೀಕ ಅವನು. ಮೊಕದ ಮೇಲೆ ಗಡ್ಡ ಮೀಸೆ ಬಂದಿದ್ದೊ. ಯಾಕೆಂದರೆ ಅವನು ಇಸ್ಕೂಲು ಸೇರಿದ್ದೇ ನಿಧಾನವಂತೆ. ಓದು ಬರಹದಲ್ಲೂ ನಿಧಾನವೇ. ಬೇಗ ಬೇಗ ಓದಿ, ಬೇಗ ಬೇಗ ಕೆಲಸ ಹಿಡಕೊಂಡು, ಬೇಗ ಬೇಗ ಸಂಪಾದನೆ ಮಾಡಿ, ಬೇಗ ಬೇಗ ಕಾರು ತಕ್ಕೊಂಡು, ಬೇಗ ಬೇಗ ಮನೆ ಕಟ್ಕೊಂಡು, ಬೇಗ ಬೇಗ ಆಸ್ತಿ ಮಾಡಿ, ಬೇಗ ಬೇಗ ರಿಟೈರ್ ಆಗಿ, ಬೇಗ ಬೇಗ ಸತ್ತೋಗಬೇಕು ಅಂತ ಅವಸರ ಮಾಡ್ತಾರಲ್ಲ, ಈಗಿನವರು! ಆಗ ಹಾಗಿರಲಿಲ್ಲ. ಅಂತೆಯೇ ನಮ್ಮ ಈರಲಿಂಗೇಗೌಡನೂ ಕೂಡ ಒಂದೊಂದು ಕ್ಲಾಸಿನಲ್ಲಿ ಒಂದಿಷ್ಟು ತಂಗಿ, ತಳುವಿ ನಿಧಾನಕ್ಕೆ ಬರ್ತಾ ಇದ್ದ. ಎಂಟನೇ ಕ್ಲಾಸಿನಲ್ಲೂ ಆಗಲೇ ಒಂದಪಾ ಫೇಲಾಗಿ ನಮ್ಮ ಜೊತೆ ಬಂದು ಕೂತಿದ್ದ. ಆದರೂ ಅವನ ಮೊಕದ ಮೇಲೆ ಆ ವಿಷಾದ, ಬೇಸರ, ನಾಚಿಕೆ, ದುಃಖ ಇತ್ಯಾದಿಗಳು ಎಳ್ಳುಮೊನೆಯಷ್ಟೂ ಇರಲಿಲ್ಲ. ನಾವೇ ಏನಾದ್ರೂ ಆ ಸುದ್ದಿ ಎತ್ತಿದರೆ ‘ಆ ಸರಸ್ವತಿಗೆ ಸವತಿ ಮಗ ಕಣ್ರಲಾ ನಾನು. ನನ್ನ್ ಕಂಡ್ರೇ ಆಗಲ್ಲ. ಆ ನನ್ನ್ ತಾಯಿಗೆ. ಅದುಕ್ಕೇ ಏನೇ ಮಾಡುದ್ರೂ ವಿದ್ಯಾ ಅನ್ನೋದು ಈ ಮಿದ್ಲಿಗೆ ಹತ್ತನಿಲ್ಲ. ಇರಲಿ ಬುಡು, ಹಣೆಬರಕ್ಕೆ ಹೊಣೆ ಯಾರು? ನೀವಿದ್ದೀರಲ್ಲ, ಚೆನ್ನಾಗಿ ಓದಿ ನಮ್ಮ ದೇಸವ ಮುಂದಕ್ಕೆ ದಬಾಕೋಕೆ, ದಬಾಕಿ’ ಅಂತಿದ್ದ.

ಈರಲಿಂಗೇಗೌಡನ ಅಪ್ಪನಿಗೆ ಕೂಡ ತನ್ನ ಮಗ ಚೆನ್ನಾಗಿ ಓದಿ ಎಮ್ಮೇಬೀಯೆಲ್ಲ್ ಪಾಸು ಮಾಡಬೇಕು ಅಂತ ಆಸೆ ಇರಲಿಲ್ಲ. ಇರೋನೊಬ್ಬ ಮಗ ಓದಿ ಬುಟ್ರೆ ನಾಳೆ ಗೌರ್ಮೆಂಟ್ ಚಾಕರಿ ಹಿಡಕೊಂಡು, ಮಡಿಕೆ ಕುಡಿಕೆ ಎತ್ತ್​ಕೊಂಡು ಊರೂರೂ ಸುತ್ತೋದ್ಯಾಕೆ? ಪಿತ್ರಾರ್ಜಿತ ಆಸ್ತಿ ನೋಡ್ಕೊಂಡು ಹೆತ್ತಮುತ್ತರು ಬಾಳಿದ ಮನೇಲಿ ದೀಪ ಹಸ್ಸ್​ಕೊಂಡು ಇರಲಿ. ಏನೋ ಒಂದಿಷ್ಟು ಕಾಗದ ಪತ್ರ ಹಿಡಿಯೋವಷ್ಟು ಓದಿದರೆ ಸಾಕು ಅನ್ನೋ ಅಭಿಪ್ರಾಯ. ಅದನ್ನೇ ತಿರುತಿರುಗಾ ಹದನಾರು ಸಲ ಮಗನಿಗೆ ಹೇಳಿಯೂ ಇದ್ದ. ಹಾಗಾಗಿ ಈರಲಿಂಗೇ ಗೌಡನಿಗೆ ಪಾಠ ಪ್ರವಚನಕ್ಕಿಂತ ಹೊಲಗದ್ದೆ, ಮಳೆಬೆಳೆ, ಎತ್ತು ಎಮ್ಮೆ, ಗೊಬ್ಬರ ಗೋಡು- ಇವುಗಳಲ್ಲೇ ಹೆಚ್ಚಿನ ಖಾಯಸ್ಸು. ಆದ್ದರಿಂದಲೇ ಕ್ಲಾಸಿನಲ್ಲಿ ಮೇಷ್ಟ್ರು ‘ನ್ಯೂಟನ್ನನ ಮೂರನೆ ನಿಯಮ ಏನು ಹೇಳುತ್ತೆ ಹೇಳೋ ಈರಲಿಂಗೇ ಗೌಡ’ ಅಂದರೆ, ‘‘ನಿಮ್ಮ ಮೂರನೇ ನಿಯಮದ ಮನೆ ಹಾಳಾಗೋಗ್ಲಿ ಸುಮ್ಕಿರಿ ಸಾ, ಊರಲ್ಲಿ ರಾಗಿ ಹುಲ್ಲು ಬಡಿಯೋಕೆ ಅಂತ ಕಣಕ್ಕೆ ಹಾಕವ್ರೆ. ಮಳೆ ಬರೂವಂಗದೆ ಏನಪ್ಪಾ ಗತಿ ಅಂತ ನಾನು ಯೋಚನೆ ಮಾಡ್ತಾ ಇವ್ನಿ’ ಅಂತ ಮೇಷ್ಟರ ಮೊಕಕ್ಕೇ ಹೇಳಿದ್ದ. ಮೇಷ್ಟರೂ ಸೇರಿ ಹುಡುಗರು, ಹುಡುಗೀರೆಲ್ಲ ‘ಗೊಳ್ಳ್’ ಅಂತ ನಕ್ಕು ಬಿಡ್ತಿದ್ದೋ. ಆದರೂ ಕೇರು ಮಾಡದೆ ಕೂತ್ಕೊಂಡು ಮೇಷ್ಟರ ಮೊಕವನ್ನೇ ದುರುದುರು ನೋಡ್ತಾ ಇದ್ದ.

ನಮ್ಮ ಗಾಯತ್ರಿ ಮೇಡಂ ಇದ್ದರಲ್ಲ, ಅವರು ನಮಗೆ ಬಯಾಲಜಿ ತಕ್ಕೊಳ್ಳೋರು. ಅಂಥಾ ಪಾಠವನ್ನು ಅಂಥಾ ಮೇಡಮ್ಮೋರ್ನ ಇನ್ನೂವರೆಗೂ ನೋಡಿಲ್ಲ ನಾನು. ಬೇರೆ ಮೇಷ್ಟರು, ಮೇಡಮ್ಮುಗಳೆಲ್ಲ ತಮ್ಮ ಇಚ್ಛಾನುಸಾರ ಹುಡುಗರನ್ನು ಹೊಡೀತಿದ್ದರಾದರೂ ನಮ್ಮ ಗಾಯತ್ರಿ ಮೇಡಮ್ಮು ಒಂದು ದಿನವಾದರೂ ಮಕ್ಕಳನ್ನ ಬಾಯೆತ್ತಿ ಬಯ್ದವರಲ್ಲ. ಕೈಯೆತ್ತಿ ಹೊಡೆದವರಲ್ಲ. ಒಂದು ಕ್ಲಾಸಿಗೆ ಹತ್ತು ಹದಿನೈದು ಸಲ ‘ಜಾಣ ಮಕ್ಳು ನೀವು’ ಅನ್ನೋರು.. ನಮ್ಮ ಈರಲಿಂಗೇ ಗೌಡನ್ನೂ ಸೇರಿಸಿ. ಅವರ ದನಿಯೋ ಜಾಮೂನು ರಸ ತೊಟ್ಟಿಕ್ಕಿದ ಹಾಗೆ ಹರಿಯೋದು. ಅವರು ಏನೋ ಒಂದು ಪ್ರಶ್ನೆ ಕೇಳಿದಾಗ ನಮ್ಮಲ್ಲಿ ಯಾವನೋ ಹುಡುಗ ಏನೋ ಒಂದು ಉತ್ತರ ಹೇಳಿದಾಗಲೂ ಕೂಡ ಅದೇ ಜಾಮೂನು ರಸದ ದನಿಯಲ್ಲಿ ‘ಜಾಣ ನೀನು, ಉತ್ತರ ತಪು್ಪ ಆದರೆ!’ ಅಂದು ಸರಿ ಉತ್ತರ ಹೇಳೋರು. ಒಂದು ಸಲ ನಮ್ಮ ಗಾಯತ್ರಿ ಮೇಡಮ್ಮು ಅದೇ ನಮ್ಮ ಈರಲಿಂಗೇ ಗೌಡನ ಕಡೆಗೆ ತಿರುಗಿಕೊಂಡು ‘ಈರಲಿಂಗೇ ಗೌಡ ಜಾಣ ನೀನು, ಸ್ವಲ್ಪಾನೇ ಒರಟು ಆದರೆ! ಇರಲಿ, ‘ಬಾಷ್ಪ ವಿಸರ್ಜನೆ ಅಂದ್ರೆ ಏನೂಂತ ಹೇಳ್ತೀಯಾಪ್ಪ? ಜಾಣ !’ ಅಂದ್ರು.

ಈರಲಿಂಗೇ ಗೌಡ, ಮೇಡಂ, ಈ ಬಾಸ್ಪ ವಿಸರ್ಜನೆ, ಮೂತ್ರ ವಿಸರ್ಜನೆ ಅಂತೆಲ್ಲ ಅಂದ್ರೆ ನಂಗೆ ತಿಳಯಾಕಿಲ್ಲ. ಬೇರೆ ಯಾರ್ನಾದರೂ ಕೇಳಿ. ಯಾರೋ ಒಬ್ಬ ಉತ್ತರ ಹೇಳಿದ್ರೆ ಆಯ್ತಲ್ಲ, ನಾನೇ ಹೇಳಬೇಕು ಅಂತ ಏನ್ ಕಾನೂನೈತಾ?’ ಅಂದ.

ಆವತ್ತು ಮೇಡಮ್ಮು ಎಳೇ ಮಕ್ಕಳು ನಗತಾವಲ್ಲ, ಹಾಗೆ ಕುಲುಕಾಡಿಕೊಂಡು ನಕ್ಕುಬಿಟ್ರು. ಇಡೀ ಕ್ಲಾಸು ಪಾಠದ ಮಧ್ಯೆ ಈರಲಿಂಗೇ ಗೌಡನ್ನ ನೋಡಿಕೊಂಡು ನಗತಾನೇ ಇದ್ದರು. ನಾವೆಲ್ಲ ಆಗ ಚಿಕ್ಕ ಹುಡುಗರು. ಆದರೂ ಹೇಳತೀನಿ. ಆ ನಗುವಿನಲ್ಲಿ ಒಂದಿಷ್ಟೂ ವ್ಯಂಗ್ಯ, ಪರಿಹಾಸ್ಯ ಇರಲಿಲ್ಲ. ಅಷ್ಟಕ್ಕೂ ಗಾಯತ್ರಿ ಮೇಡಮ್ಮು ನಕ್ಕರೆ ಅದೆಷ್ಟು ಚೆಂದ ಕಾಣೋರು ಅಂತೀರಿ! ಆ ಬೆಳ್ಳಗೆ ಚಿಲಿಯುವ ಹಲ್ಲು! ಕಪ್ಪಗೆ ಹೊಳೆಯುವ ಕಣ್ಣು! ಈರಲಿಂಗೇ ಗೌಡ ಹೀಗೇ ನಗಿಸಲಿ, ನಮ್ಮ ಗಾಯತ್ರಿ ಮೇಡಮ್ಮು ಹೀಗೇ ನಗುತ್ತ ಇರಲಿ ಪ್ರತೀ ಕ್ಲಾಸಲ್ಲೂ, ಅನ್ನಿಸ್ತಿತ್ತು ನಮಗೆ. ನಿಮಗೆ ಹೇಳಬೇಕಾಗಿಲ್ಲ. ನಾವೂ ‘ಗೊಳ್ಳ್’ ಅಂತ ನಕ್ಕಿದ್ದೋ ಆವತ್ತು.

ಆವತ್ತು ಕಡೆಗೆ ನಮ್ಮ ಗಾಯತ್ರಿ ಮೇಡಮ್ಮು ಏನು ಹೇಳಿದರು ಗೊತ್ತಾ? ‘ಈರಲಿಂಗೇ ಗೌಡ ಜಾಣ ! ನಾನು ನಕ್ಕಿದ್ದಕ್ಕೆ ಬೇಜಾರು ಮಾಡಿಕೊಳ್ಳಲ್ಲ ಅಲ್ವಪ್ಪಾ? ಏನ್ ಗೊತ್ತಾ? ಪರಾಗ ಸ್ಪರ್ಶ, ಬೀಜಪ್ರಸಾರ, ದ್ಯುತಿ ಸಂಶ್ಲೇಷಣೆ, ಬಾಷ್ಪ ವಿಸರ್ಜನೆ- ಇವೆಲ್ಲ ಆಗೋದು ಸಸ್ಯಗಳಲ್ಲಿ ಅಂದರೆ ಹೊಲಗದ್ದೆಗಳಲ್ಲಿ ಬೆಳೆಯೋ ಬೆಳೆಗಳಲ್ಲಿ. ಇದೆಲ್ಲ ನನಗೆ ಓದಿ ಗೊತ್ತು. ಪಾಠ ಮಾಡಿ ಗೊತ್ತು. ಆದರೆ, ನಾನು ಹೊಲ ಗದ್ದೇನೇ ನೋಡಿಲ್ಲ. ಈರಲಿಂಗೇಗೌಡನಿಗೆ ದ್ಯುತಿ ಸಂಶ್ಲೇಷಣೆ, ಬಾಷ್ಪ ವಿಸರ್ಜನೆ ಅಂದ್ರೆ ಏನೂ ಗೊತ್ತಿಲ್ಲ. ಆದರೆ, ಹೊಲಗದ್ದೆ ಗೊತ್ತು. ಬೆಳೆ ಬೆಳೆಯೋದು ಗೊತ್ತು. ವಿಚಿತ್ರ ಅಲ್ವಾ?’ ಅಂದರು. ಅದೇನು ವಿಚಿತ್ರವೋ ಆವಾಗ ನಮಗೆ ತಿಳಿಯಲಿಲ್ಲ.

ಗಾಯತ್ರಿ ಮೇಡಮ್ಮು ದಿನಕ್ಕೊಂದು ಬಗೆ ಸೀರೆ ಉಟ್ಟುಕೊಂಡು ಬರೋರು. ಅವರ ಮೈಮೇಲೆ ಧರಿಸಿದ್ದ ಒಂದು ಸೀರೆಯನ್ನು ಇನ್ನೊಂದಪಾ ನೋಡಬೇಕಾದರೆ ಮೂರ್ನಾಲ್ಕು ತಿಂಗಳಾದರೂ ಆಗಬೇಕಾಗಿತ್ತು. ಬಲಗೈ ಬಳೆ, ಎಡಗೈ ವಾಚು, ಕೂದಲಿಗೆ ಹಾಕುವ ಕ್ಲಿಪು್ಪ ಅವನ್ನೆಲ್ಲ ದಿನಕ್ಕೊಂದು ಬಗೆ ಬದಲಾಯಿಸಿ ಹಾಕಿಕೊಂಡು ಬರೋರು. ನಾವೆಲ್ಲ ಹಳ್ಳಿ ಹುಡುಗರು. ನಮ್ಮಲ್ಲಿ ಸಿಂಗಲ್ ಅಂಗಿ ಪ್ಯಾಂಟು ಇದ್ದೋರು. ಕಾಲಿಗೆ ಚಪ್ಪಲಿಯೂ ಇಲ್ಲದಿದ್ದ ಬರಿಗಾಲಿನವರು. ಎರಡು ಮೂರು ಲಂಗ ರವಿಕೆ ಇದ್ದರೂ ಒಂದೇ ದಾವಣಿಯಿದ್ದ ಹುಡುಗಿಯರು ಬೇಕಾದಷ್ಟು ಜನ ಇದ್ದರು. ಆದ್ದರಿಂದ ಗಾಯತ್ರಿ ಮೇಡಮ್ಮು ಧರಿಸಿಕೊಂಡು ಬರುತ್ತಿದ್ದ ಆ ಬಗೆ ಬಗೆ ಉಡುಪು ತೊಡುಗೆಗಳನ್ನು ಬೆರಗಿನಿಂದಲೂ, ಅಭಿಮಾನದಿಂದಲೂ ನೋಡಿಕೊಂಡು ಸಂತೋಷ ಪಡುತ್ತಿದ್ದೆವು. ಅದೊಂದು ದಿನ ಬಿಸಿಲುಕಾಲ. ಮೇಡಮ್ಮಿಗೆ ಮೈಸೂರಿನಿಂದ ಬಸ್ಸು ತಡವಾಯಿತಂತೆ. ಆ ಉರಿಬಿಸಿಲಲ್ಲಿ ಬರಬರಾ ನಡೆದುಕೊಂಡು ಬಂದು ನೇರವಾಗಿ ನಮ್ಮ ಕ್ಲಾಸಿಗೆ ಬಂದರು. ಆಗ ನೋಡಬೇಕಾಗಿತ್ತು. ಗಾಯತ್ರಿ ಮೇಡಮ್ಮೋರ ಮೊಕ! ಬಿಸಿಲಿಗೆ ಬೆಳ್ಳಾನ ಬೆಳ್ಳಗಿದ್ದ ಅವರ ಮೊಕ ಗುಲಾಬಿ ಪಕಳೆಗಳ ಹಾಗೆ ಕೆಂಪಗಾಗಿತ್ತು. ಮೊಕದ ತುಂಬಾ ಬೆವರು ಕಿತ್ತುಕೊಂಡು ಹರಿಯುತ್ತಿತ್ತು. ಬರಬರಾ ನಡೆದು ಬಂದಿದ್ದರಲ್ಲ, ಏದುಸಿರು ಬಿಡ್ತಾ ಇದ್ದರು. ಈರಲಿಂಗೇ ಗೌಡ ನನ್ನ ಪಕ್ಕದಲ್ಲೇ ಕೂತಿದ್ದ. ನಾನು ಮೆಲ್ಲಗೆ ‘ನಾವೆಲ್ಲ ಬಿಸಿಲಲ್ಲಿ ಬಂದರೆ ಕರ›ಗೆ ಕಾಣ್ತೀವಿ. ಮೇಡಮ್ಮು ಕೆಂಪಗೆ ಅದೆಷ್ಟು ಚೆನ್ನಾಗಿ ಕಾಣ್ತಾ ಅವುರಲ್ವಾ? ಬಿಸಿಲಲ್ಲಿ ನಾವು ಕರ›ಗಾಗ್ತೀವಿ. ಮೇಡಮ್ಮು ಕೆಂಪಗಾಗ್ತಾರೆ. ಅದೆಂಗೆ?’

ಅಂತ ಹಿರೀಕನಾಗಿದ್ದ ಈರಲಿಂಗೇಗೌಡನ್ನ ಕೇಳಿದೆ. ಅವನು, ‘ಅದೆಂಗೆ ಅಂದ್ರೆ? ನಮ್ಮದು ದುಡಿದ ಮೈಯಿ, ಮೇಡಮ್ನೋರ್ದು ಕಳ್ಳ ಮೈಯಿ!’ ಅಂದ.

ಗಾಯತ್ರಿ ಮೇಡಮ್ಮು ನಮ್ಮ ಕಡೆ ತಿರುಗಿ ನೋಡಿದರು. ‘ನೀವು ಜಾಣ ಮಕ್ಳು. ಹೇಳಿ, ಏನದು ಮಾತಾಡ್ತಾ ಇದ್ದದ್ದು? ಸುಳ್ಳು ಹೇಳಬಾರದು. ಸುಳ್ಳು ಹೇಳಿದ್ರೆ

ಕೋಣ ಮಕ್ಕಳಾಗಿ ಬಿಡ್ತೀರಿ. ನೀವು ಜಾಣ ಮಕ್ಕಳಲ್ವಾ? ನಿಜ ಹೇಳಿ’ ಅಂದರು. ಸುಳ್ಳು ಹೇಳಿ ಕೋಣ ಮಕ್ಕಳಾಗೋದಕ್ಕಿಂತ ನಿಜ ಹೇಳಿ ಜಾಣ ಮಕ್ಕಳಾಗೋದೇ ಚೆಂದ ಅಂತ ನಾನು, ನಾನು ಕೇಳಿದ್ದು, ಅವನು ಹೇಳಿದ್ದು ಎಲ್ಲವನ್ನೂ ಹೇಳಿ ‘ಈರಲಿಂಗೇ ಗೌಡ ಹೇಳ್ದ ನಿಮ್ಮದು ಕಳ್ಳ ಮೈಯಂತೆ ಮೇಡಂ’ ಅಂದುಬಿಟ್ಟೆ. ಈರಲಿಂಗೇ ಗೌಡ ನನ್ನನ್ನೇ ದುರುಗುಟ್ಟಿಕೊಂಡು ನೋಡಿದ, ‘ನೀನು ಆಚೆ ಬಾ ಮಗನೆ’ ಅನ್ನುವಂತೆ ಕೈ ಸನ್ನೆ ಮಾಡಿದ. ಗಾಯತ್ರಿ ಮೇಡಂದು ‘ಕಳ್ಳ ಮೈ’ ಅಂದದ್ದಕ್ಕೆ ಮೇಡಮ್ಮು ಅದೆಷ್ಟು ಬೇಜಾರು ಮಾಡಿಕೊಳ್ತಾರೋ ಅನ್ನಿಸ್ತು. ಆದರೆ ಹಾಗಾಗಲಿಲ್ಲ, ಆವತ್ತೂ ಮೇಡಂ ‘ಫಳ್ಳನೆ’ ನಕ್ಕರು. ಇಡೀ ಕ್ಲಾಸು ನಗುತ್ತಲೇ ಇದ್ದರು.

ಎಂಟನೇ ಕ್ಲಾಸು ಪಾಸಾಗಿ ನಾವೆಲ್ಲ ಒಂಭತ್ತನೇ ಕ್ಲಾಸಿಗೆ ಹೋದೆವು. ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ಅವನು ಏನು ಬರೆದಿದ್ದನೋ ಬಿಟ್ಟಿದ್ದನೋ, ಅವನ ಹಣೆಯಲ್ಲಿ ಬರೆದಿದ್ದು ಚೆನ್ನಾಗಿತ್ತು ಅಂತ ಕಾಣಿಸುತ್ತೆ. ಈರಲಿಂಗೇ ಗೌಡ ಕೂಡ ಪಾಸಾದ.

ನಮ್ಮ ಒಂಭತ್ತನೇ ಕ್ಲಾಸು ಮುಕ್ಕಾಲು ಮುಗಿಯೋ ಹೊತ್ತಿಗೆ ‘ಗಾಯತ್ರಿ ಮೇಡಮ್ಮಿಗೆ ಮದ್ವೆಯಂತೆ, ಗಾಯತ್ರಿ ಮೇಡಮ್ಮಿಗೆ ಮದ್ವೆಯಂತೆ’ ಅನ್ನೋ ಸುದ್ದಿ ಹಬ್ಬಿತು ಸ್ಕೂಲಿನಲ್ಲಿ. ನಮಗೆಲ್ಲ ಒಂಥರಾ ಸಂಭ್ರಮ, ಒಂಥರಾ ಕುತೂಹಲ. ಈಗಲೇ ಇಂತಿಂಥಾ ಸೀರೆ ಉಡ್ತಾ ಇದ್ದ ಗಾಯತ್ರಿ ಮೇಡಮ್ಮು ಮದುವೆಯಾದ ಮೇಲೆ ಇನ್ನ್ಯಾವ್ಯಾವ ಕಲಾಪತ್ತಿನಲ್ಲಿ ಕಾಣಿಸಿಕೊಳ್ಳುತ್ತಾರೋ, ಅದೇನು ಬಗೆ ಬಳೆ ಬಂಗಾರ ಹಾಕ್ಕೊಂಡು ಬರ್ತಾರೋ, ಇನ್ನ್ಯಾವ್ಯಾವ ನಮೂನೆಯ ಚಪ್ಪಲಿ ಮೆಟ್ಟಿಕೊಂಡು ಬರುತ್ತಾರೋ ಅಂತ. ಅದೇ ಸಂದರ್ಭದಲ್ಲಿ ನಮಗೆ ಇಂಗ್ಲಿಷ್ ತೆಗೆದುಕೊಳ್ಳುತ್ತಿದ್ದ ವಿಶ್ವಪ್ರಸಾದ್ ಅನ್ನುವ ಮೇಷ್ಟರು ಆವರೆಗೆ ಟೈ ಕಟ್ಟಿಕೊಂಡು ಶಿಸ್ತುಗಾರ ಪುಟ್ಟಸ್ವಾಮಿಯ ಹಾಗೆ ಸ್ಕೂಲಿಗೆ ಬರುತ್ತಿದ್ದವರು ಇದ್ದಕ್ಕಿದ್ದ ಹಾಗೇ ಅಸಡಾ ಬಸಡಾ ಬಟ್ಟೆ ಹಾಕಿಕೊಂಡು ಮೊಕದ ಮೇಲಿನ ಬೆಳೆಯನ್ನೂ ಕಟಾವು ಮಾಡದೆ, ಜಿಬರೆಗಣ್ಣನ್ನೂ ಒರೆಸದೆ ಸ್ಕೂಲಿಗೆ ಬರತೊಡಗಿದರು. ಆಗಲೇ ಅವರು ಕುಡಿಯೋದನ್ನೂ ಕಲಿತರಂತೆ ಅನ್ನೋದು ಸುದ್ದಿ. ಸ್ಕೂಲಿನ ಇತರೆ ಮೇಷ್ಟ್ರುಗಳು ತಮ್ಮ ತಮ್ಮಲ್ಲೇ ಏನೇನೋ ಗುಸುಗುಸಾ ಪಿಸುಪಿಸಾ ಅಂತ ಮಾತನಾಡಿಕೊಳ್ಳುತ್ತಿದ್ದರಾದರೂ ಹಳ್ಳಿಗುಗ್ಗುಗಳಾದ ನಮಗೆ ಅದೇನು, ಯಾಕೆ ಅಂತ ತಿಳಿಯಲಿಲ್ಲ.

ಅದೇ ಸಂದರ್ಭದಲ್ಲಿ ಇನ್ನೊಂದು ಸುದ್ದಿ ಹೊರಟಿತು. ಗಾಯತ್ರಿ ಮೇಡಮ್ಮನವರನ್ನು ಮದುವೆ ಆಗೋ ಗಂಡು ಭಾರೀ ಶ್ರೀಮಂತನಂತೆ. ಕೊಡಗಿನಲ್ಲಿ ಕಾಫಿ ತೋಟ ಇದೆಯಂತೆ. ಕಾರಲ್ಲೇ ಓಡಾಡೋದಂತೆ. ಮೇಡಮ್ಮನೋರ ಸಂಬಳ ಅವನ ಒಂದು ದಿನದ ಖರ್ಚಿಗೂ ಅಲ್ಲವಂತೆ. ಗಾಯತ್ರಿ ಮೇಡಮ್ಮು ಕೆಲಸ ಬಿಟ್ಟು ಮೈಸೂರಲ್ಲೇ ಇದ್ದು ಬಿಡ್ತಾರಂತೆ. ಅವರ ರೂಪು, ಗುಣ ನೋಡೇ ಆ ಶ್ರೀಮಂತ ಅವರನ್ನು ಮದುವೆ ಆಗ್ತಾ ಇರೋದಂತೆ, ಹಂಗಂತೆ, ಹಿಂಗಂತೆ ಅಂತ. ಮೇಡಮ್ಮನೋರ ಮದುವೆಯಾಗುವ ಗಂಡು ಭಾರೀ ಶ್ರೀಮಂತನಂತೆ ಅಂದದ್ದಕ್ಕೆ ನಮಗೆ ಖುಷಿಯಾದರೂ ಅವರು ಕೆಲಸ ಬಿಟ್ಟು ಬಿಡುತ್ತಾರಂತೆ ಅಂದ ಸುದ್ದಿ ಕೇಳಿ ಅಳುವೇ ಬಂದು ಬಿಟ್ಟಿತ್ತು. ನಾವು ಗಾಯತ್ರಿ ಮೇಡಂ ಹತ್ತಿರ ಹೇಳೋಣ ಅಂದರೆ ಆ ಸುದ್ದಿ ಹುಟ್ಟೋ ಹೊತ್ತಿಗೆ ಅವರು ರಜಾ ಹಾಕಿಬಿಟ್ಟಿದ್ದರು. ಈ ಮೇಡಮ್ಮಿಗೆ ಯಾಕಾದರೂ ಅಂಥ ಸಿರಿವಂತ ಗಂಡು ಸಿಕ್ಕಿದನೋ, ವರದಕ್ಷಿಣೆ ಮಣ್ಣು ಮಸಿ ಅನ್ನೋ ಕಾರಣಕ್ಕೆ ಈ ಮದುವೇನೇ ಕ್ಯಾನ್ಸಲ್ ಆಗಬಾರದಾ ಅನ್ನುವಷ್ಟರ ಮಟ್ಟಿಗೆ ಆಸೆ ಪಡೋದಕ್ಕೆ ಶುರು ಮಾಡಿದೆವು ನಾವು. ಆವತ್ತೊಂದು ದಿನ ಮೇಡಮ್ಮು ಅವರ ಮದುವೆ ಪತ್ರಿಕೆ ಕೊಡೋದಕ್ಕೆ ಅಂತ ಸ್ಕೂಲಿಗೆ ಬಂದರು. ಅಯ್ಯಪ್ಪ! ಈಗಲೂ ಕಣ್ಣೆದುರು ನಿಂತ ಹಾಗೆ ಕಾಣುತ್ತೆ. ಆಗವರ ಮೊಕದ ಕಳೆ ನೋಡಬೇಕಿತ್ತು. ಸರಸ್ವತಿ ಜೊತೆಗೆ ಲಕ್ಷ್ಮಿಯ ಕಳೆಯನ್ನೂ ಸೇರಿಸಿ ಮೊಕದ ಮೇಲೆ ಹುಯ್ದ ಹಾಗಿತ್ತು. ಮೇಡಮ್ಮು ಜಿಂಕೆಯ ಹಾಗೆ ಎಲ್ಲ ಕಡೆಗೂ ಹರಿದಾಡುತ್ತಿದ್ದರು. ನಾವೊಂದಿಷ್ಟು ಜನ, ಈಗ ಬಿಟ್ಟರೆ ಮೇಡಂ ಮತ್ತೆ ಸಿಗೋದಿಲ್ಲ ಅಂದುಕೊಂಡು ಒಂದು ಗುಂಪಾಗಿ ಹೋಗಿ ಅವರನ್ನು ಕೇಳೇ ಬಿಟ್ಟೆವು, ‘ಮೇಡಂ, ನೀವು ಮದುವೆ ಆದ ಮೇಲೆ ಕೆಲಸ ಬಿಟ್ಟು ಬಿಡ್ತೀರಾ? ಸ್ಕೂಲಿಗೆ ಬರೋದಿಲ್ವಾ?’ ಅವರ ಕಣ್ಣಲ್ಲಿ ಹರಿದ ವಾತ್ಸಲ್ಯದ ರಸವನ್ನು ಆಗ ನೋಡಬೇಕಿತ್ತು. ನಮ್ಮಲ್ಲಿ ಅವರ ಕೈಗೆಟುಕಿದ ಹುಡುಗರ ತಲೆ ಸವರುತ್ತ,. ಗಲ್ಲ ಚಿವುಟುತ್ತ ಅದೇ ಜಾಮೂನು ರಸವನ್ನು ತೊಟ್ಟಿಕ್ಕಿಸುತ್ತ, ‘ಜಾಣ ಮಕ್ಳು ನೀವು ಆದರೆ! ನನ್ನನ್ನ ಮದ್ವೆ ಆಗೋವ್ರಿಗೆ ನಾನು ಮೊದಲೇ ಹೇಳಿದ್ದೀನಿ ನಾನು ಈ ಕೆಲಸ ಬಿಡೋದಿಲ್ಲ ಅಂತ. ಇಲ್ಲೀವರೆಗೂ ನಾನು ಸಂಬಳಕ್ಕೆ ಕೆಲಸ ಮಾಡ್ತಾ ಇದ್ದೆ. ಇನ್ನು ಮೇಲೆ ಸಂತೋಷಕ್ಕೆ ಕೆಲಸ ಮಾಡ್ತೀನಿ. ನಿಮ್ಮನ್ನೆಲ್ಲ ಬಿಟ್ಟು ಒಬ್ಬಳೇ ಗಂಡನ ಮನೆಗೆ ಹೋಗೋದಕ್ಕೆ ನನಗೂ ಇಷ್ಟ ಇಲ್ಲ. ಕಣ್ರೋ ಚಿನ್ನ ಮರಿಗಳಾ!’ ಅಂದು ಕಿಲಕಿಲಕಿಲ ನಕ್ಕರು.

ಬೇಸಿಗೆ ರಜೆಯಲ್ಲಿ ಗಾಯತ್ರಿ ಮೇಡಂ ಮದುವೆ ಆಯಿತು. ನಾವ್ಯಾರೂ ಮದುವೆಗೆ ಹೋಗಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಮೈಸೂರೆಂಬುದು ನಮ್ಮೂರಿಗೆ ಈಗಿನಷ್ಟು ಹತ್ತಿರದ ಊರಲ್ಲ. ಬೇಸಿಗೆ ರಜಾ ಮುಗಿದ ಮೇಲೆ ಮೊದಲ ದಿನ ಸ್ಕೂಲಿಗೆ ಹೋದಾಗ ನಮಗೆ ಗಾಯತ್ರಿ ಮೇಡಂ ಹೇಗಿರುತ್ತಾರೋ, ಹೇಗೆ ಬರುತ್ತಾರೋ ಎಂಬ ಕುತೂಹಲ ಸಂಭ್ರಮ. ಆವತ್ತು ಮೇಡಂ ಸ್ಕೂಲಿಗೆ ಬಂದರು ನೋಡಿದೆವು. ಮೇಡಮ್ಮು ಒಂದು ರೌಂಡು ದಪ್ಪ ಆಗಿದ್ದಾರೆ. ತಲೆಗೆ ಕನಕಾಂಬರದ ಹೂವು, ಕೆನ್ನೆಗೆ ಅರಸಿಣ, ಬೈತಲೆಯಲ್ಲೂ ಕುಂಕುಮ, ಕೊರಳಲ್ಲಿ ತಾಳಿ ಸರ, ಕಾಲಲ್ಲಿ ಕಾಲುಂಗುರ, ಅಹ್ಹಾ, ಮುತೆôದೆ! ನೋಡಿ ಸಂತೋಷವಾಯಿತು. ಅಲ್ಲಿಂದ ಮುಂದಕ್ಕೆ ಬೇರೇನೂ ಬದಲಾಗಲಿಲ್ಲ. – ನಮ್ಮ ಈರಲಿಂಗೇ ಗೌಡನೂ ಕೂಡ. ಅದೇ ರೀತಿ, ಮೇಡಮ್ಮು ‘ಜಾಣ ಮಕ್ಳು’ ಅಂತ ಪಾಠ ಮಾಡುತ್ತಿದ್ದರು. ಅಷ್ಟರಲ್ಲಿ ನಮ್ಮದೆಲ್ಲ ಎಸ್​ಎಸ್​ಎಲ್​ಸಿ ಪಾಸಾಯಿತು. ಇರುವೆ ಗೂಡಿಗೆ ಅರಶಿನ ಎರಚಿದಂತಾಗಿ ಎಲ್ಲಾ ಎಲ್ಲೆಲ್ಲೋ ಛಿದ್ರವಾದೆವು. ಈರಲಿಂಗೇ ಗೌಡ ‘ಆಲ್ ಔಟ್’ ಆಗಿ ಊರಿಗೆ ಹೋಗಿ ನೇಗಿಲ ಪೋಣಿ ಹಿಡಿದ. ನಾನು ಮೈಸೂರಿನ ಕಡೆ ಬಂದೆ. ಆ ಮೇಲೆ ನಾನು ಓದಿದ್ದು, ಕೆಲಸಕ್ಕೆ ಸೇರಿದ್ದು, ‘ದೊಡ್ಡ ಮನುಷ್ಯ’ ಆಗಿದ್ದು ಎಲ್ಲಾ ಆಯಿತು. ಹೈಸ್ಕೂಲಿನ ಸಂಪರ್ಕ ತೀರಾ ತೆಳುವಾಯಿತು.

ಊರ ಕಡೆ ಹೋದಾಗ ಆಗೊಮ್ಮೆ ಈಗೊಮ್ಮೆ ಈರಲಿಂಗೇ ಗೌಡ ಸಿಗುತ್ತಿದ್ದ. ‘ನೀನೇನಪ್ಪಾ, ಮೈಸೂರು ಸೇರ್ಕೊಂಬುಟ್ಟೆ. ಹಾಳು ವಿದ್ಯೆ ನನ್ನ ತಲೆಗೆ ಹತ್ತಲಿಲ್ಲ ಕಣೋ, ನಾನು ಹೇಳ್ತಾ ಇರಲಿಲ್ವಾ? ಸರಸ್ವತಿ ಸವತಿ ಮಗ ನಾನು ಅಂತ. ಈಗ ಭೂಮಿ ತಾಯಿಯೂ ನಮ್ಮ ಕೈಬಿಟ್ಟಳು. ಲಕ್ಷ್ಮಿ ನಮ್ಮೂರ ಕಡೆ ತಿರುಗಿಯೂ ನೋಡ್ತಾ ಇಲ್ಲ. ನಿಮಗೆ ತಿಂಗಳಿಗೊಂದು ಬೆಳೆ, ನಮಗೆ ಬೆಳೆಯೂ ಇಲ್ಲ. ಮಳೆಯೂ ಇಲ್ಲ’ ಅಂತ ಏನೇನೋ ಗೊಣಗ್ತಾ ಇದ್ದ. ನಾನೂ ಒಂದಿಷ್ಟು ಮೊಸಳೆ ಕಣ್ಣೀರು ಸುರಿಸಿ ‘ಒಳ್ಳೆ ದಿನ ಬರತ್ತೆ ಬಿಡು’ ಅಂತಿದ್ದೆ. ಗಾಯತ್ರಿ ಮೇಡಂ ರಿಟೈರ್ ಆದ ಮೇಲೆ ಮೈಸೂರಲ್ಲೇ ಇದ್ದಾರಂತೆ. ಈ ನಡುವೆ ಕಾವೇರಿಯಲ್ಲಿ ಬಹಳ ನೀರು ಹರೀತು – ತಮಿಳುನಾಡಿನ ಕಡೆಗೆ.

ಮೊನ್ನೆ ಊರ ಕಡೆಯಿಂದ ಒಂದು ಸುದ್ದಿ ಬಂತು- ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು. ಮೃತ ರೈತನ ಹೆಸರು ಈರಲಿಂಗೇ ಗೌಡ!

ಫಳ್ಳನೆ ಕಣ್ಣೀರುಕ್ಕಿದವು. ಹಿಂದಿನದೆಲ್ಲ ನೆನಪಾಯಿತು. ಈರಲಿಂಗೇಗೌಡನ ಅಂತ್ಯಸಂಸ್ಕಾರಕ್ಕೆ ಹೋಗಿ ಬಂದೆ. ಯಾಕೋ, ಗಾಯತ್ರಿ ಮೇಡಂನೋರನ್ನ ನೋಡಬೇಕು ಅನ್ನಿಸಿತು. ಮನೆ ಹುಡುಕಿಕೊಂಡು ಹೋದೆ. ಗಂಡ ತೀರಿಕೊಂಡಿದ್ದಾರಂತೆ. ಮಗ ಮನೆಯಲ್ಲಿರಲಿಲ್ಲ. ಸೊಸೆ ಹೇಳಿದಳು- ಅವರಿಗೆ ಅಲ್ಜೀಮರ್ಸ್ ಕಾಯಿಲೆ. ಅವರು ಊಟ ಮಾಡಿದ್ದು, ತಿಂಡಿ ತಿಂದಿದ್ದೂ ನೆನಪಿರುವುದಿಲ್ಲ. ಯಾವುದೂ ಗೊತ್ತಾಗೋದಿಲ್ಲ. ನಿಮ್ಮನ್ನೂ ಗುರುತು ಹಿಡಿಯೋದಿಲ್ಲ. ಎಲ್ಲ ಮರೆತು ಕೂತಿದ್ದಾರೆ- ತಾನೊಂದು ದಿನ ಸಾಯಬೇಕು ಅನ್ನೋದನ್ನೂ!!

Leave a Reply

Your email address will not be published. Required fields are marked *