Wednesday, 12th December 2018  

Vijayavani

Breaking News

ಮನುಷ್ಯ ಚೈತನ್ಯದ ಒಂದು ಮಹಾಪ್ರತಿಮೆ!

Tuesday, 20.03.2018, 3:03 AM       No Comments

| ಪ್ರೊ. ಎಂ. ಕೃಷ್ಣೇಗೌಡ

ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ದೈಹಿಕ ನ್ಯೂನತೆಯ ಸಂಕಟಗಳನ್ನು ಅವಡುಗಚ್ಚಿ ಸಹಿಸಿಕೊಂಡ ಸ್ಟೀಫನ್ ಹಾಕಿಂಗ್, ಸಂಕಲ್ಪಶಕ್ತಿಯ ದೀಪ ಆರದಂತೆ ಕಾಪಿಟ್ಟುಕೊಂಡು ಗೂಢಾತಿಗೂಢ ವೈಜ್ಞಾನಿಕ ವಿಷಯಗಳನ್ನು ಶೋಧಿಸುತ್ತಾ, ಪ್ರಕಟಿಸುತ್ತಾ, ದೃಢವಾಗಿ ಬದುಕಿದ ಅನ್ನುವುದೊಂದು ಅದ್ಭುತ ವಿಷಯ.

ಮೊನ್ನೆ ಮಾರ್ಚ್ 14ನೇ ತಾರೀಕು- ಜಗದ್ವಿಖ್ಯಾತ ವಿಜ್ಞಾನಿ, ಮಾನವತಾವಾದಿ ಆಲ್ಬರ್ಟ್ ಐನ್​ಸ್ಟೀನ್ ಹುಟ್ಟಿದ ದಿನ ಅದು- ಆವತ್ತು ಇಂಗ್ಲೆಂಡಿನಲ್ಲೊಂದು ಸಾವಾಯಿತು.

ಅಂತಿಂಥ ಸಾವಲ್ಲ ಅದು! ಇಡೀ ಭೂಗೋಳದ ಕಣ್ಣನ್ನೇ ಒದ್ದೆಮಾಡಿದ ಸಾವು. ಈ ಸಾವು ಸುದ್ದಿಯಾಗದ ದೇಶವಿಲ್ಲ, ಮಾತಾಡದ ಭಾಷೆಯಿಲ್ಲ.

ಆ ಪರಮ ಪುರುಷೋತ್ತಮನ ಹೆಸರು ಸ್ಟೀಫನ್ ಹಾಕಿಂಗ್. ಆತನನ್ನೊಂದು ದೇಶ, ಭಾಷೆ, ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ ನೋಡಿ ನಾವು ಕ್ಷುದ್ರರಾಗುವುದು ಬೇಡ. ಈ ಮನುಷ್ಯೇತಿಹಾಸದ ಮಹಾಚೈತನ್ಯಗಳಲ್ಲೊಬ್ಬ ಅವನು. ಲೋಕದ ಎಲ್ಲಾ ಮನುಷ್ಯಜೀವಿಗಳಿಗೂ ಸ್ಪೂರ್ತಿಯಾಗಬಲ್ಲ ಧೀಮಂತ ಬದುಕು ಆತನದು. ಒಂದು ಸಣ್ಣ ಅಂಗವೈಕಲ್ಯಕ್ಕೆ, ಸಣ್ಣದೊಂದು ಸೋಲಿಗೆ, ಅಪಘಾತಕ್ಕೆ, ಅಸ್ವಸ್ಥತೆಗೆ ಹೆದರಿ ದಿಕ್ಕೇಡಿಗಳಾಗಿ ಬದುಕು ಮುಗಿಸಿಕೊಳ್ಳುವವರು, ಜಗತ್ತು ತನ್ನನ್ನು ಗಮನಿಸುತ್ತಿಲ್ಲ, ತನ್ನನ್ನು ಪ್ರೀತಿಸುತ್ತಿಲ್ಲ ಎಂದು ಲಬೋ ಲಬೋ ಕೈಬಾಯಿ ಬಡಕೊಳ್ಳುವ ಮುಖೇಡಿಗಳು ಆ ಮಹಾನುಭಾವನ ಕತೆಯನ್ನೊಮ್ಮೆ ಓದಿಕೊಳ್ಳಬೇಕು. ಎಲ್ಲಾ ದೇಶದ ಪಠ್ಯಪುಸ್ತಕಗಳು ತಮ್ಮ ಮಕ್ಕಳಿಗೆ ಅವನ ಬದುಕಿನ ಕತೆ ಹೇಳಬೇಕು. ಅದೆಂಥಾ ಸಂಕಲ್ಪಶಕ್ತಿ! ಅದೇನು ತೀಕ್ಷ್ಣಮತಿ! ಎಂಥ ಪ್ರತಿಕೂಲ ಪರಿಸ್ಥಿತಿಯನ್ನೂ ಎದುರ್ಗೆಂಡು ನಿಂತು ವಿಶ್ವವನ್ನೇ ನಿಬ್ಬೆರಗಾಗಿಸಿದ ಅದೆಂಥಾ ತಾಕತ್ತು ಅದು! ಊಹಿಸಿಕೊಳ್ಳಲೂ ಬುದ್ಧಿ ಬ್ಬೆಬ್ಬೆಬ್ಬೆಯಾಗುತ್ತದೆ!

ಗೆಲಿಲಿಯೋ, ನ್ಯೂಟನ್, ಐನ್​ಸ್ಟೀನ್​ರಂಥ ಯುಗಪ್ರತಿಭೆಗಳ ಸಾಲಿನಲ್ಲಿ ನಿಲ್ಲುವ ವಿಜ್ಞಾನಿ ಅವನು. ವಿಜ್ಞಾನಿಯಾಗಿ ಆತ ಎಷ್ಟು ದೊಡ್ಡವನು? ಅವನ ಸಂಶೋಧನೆ ಅದೆಂಥಾ ಅಸಾಧಾರಣವಾದುದು ಎಂದು ಸಾಧಿಸಿ ತೋರಿಸುವಷ್ಟು ತಿಳಿವಳಿಕೆ ನನಗಿಲ್ಲ. ಈ ಅಂಕಣ ಲೇಖನದ ಉದ್ದೇಶ ಅದಲ್ಲವೂ ಅಲ್ಲ. ಒಬ್ಬ ಮನುಷ್ಯ ಎಷ್ಟೆಲ್ಲಾ ದೈಹಿಕ ಪ್ರತಿಕೂಲತೆಯ ನಡುವೆಯೂ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ಆ ಎಲ್ಲಾ ನ್ಯೂನತೆಯ ನೋವು ಸಂಕಟಗಳನ್ನು ಅವಡುಗಚ್ಚಿ ಸಹಿಸಿಕೊಂಡು, ಸಂಕಲ್ಪಶಕ್ತಿಯ ದೀಪ ಆರದಂತೆ ಕಾಪಿಟ್ಟುಕೊಂಡು ಗೂಢಾತಿಗೂಢ ವೈಜ್ಞಾನಿಕ ವಿಷಯಗಳನ್ನು ಶೋಧಿಸುತ್ತಾ, ಪ್ರಕಟಿಸುತ್ತಾ, ವಾದವಿವಾದಗಳ ವರ್ತಲದ ಮಧ್ಯೆಯೂ ದೃಢವಾಗಿ ಬದುಕಿದ ಅನ್ನುವುದೊಂದು ಅದ್ಭುತ ವಿಷಯ. ಹಾಗೆಯೇ ಆ ದೇಶದ ವ್ಯವಸ್ಥೆ, ಸಮಾಜ ಅಂಥವನೊಬ್ಬ ಮನುಷ್ಯನ ಕನಸುಗಳು ಸೀದುಹೋಗದ ಹಾಗೆ ಪ್ರೋತ್ಸಾಹಿಸಿ ಬೆಳೆಸಿ, ಬಳಸಿಕೊಂಡಿತಲ್ಲಾ, ಅದೂ ಅದ್ಭುತ ವಿಷಯವೇ! ಬೆಳಗ್ಗೆ ಎದ್ದರೆ ಆ ಪಕ್ಷ ಈ ಪಕ್ಷ ನಮ್ಮದು ನಿಮ್ಮದು ಅಂತ ಮನಸ್ಸನ್ನು ರಾಡಿ ಎಬ್ಬಿಸಿಕೊಳ್ಳುತ್ತಿರುವ ನಾವು, ಸಿಗಬಹುದಾದ ಒಂದಿಷ್ಟು ಸವಲತ್ತು, ಸ್ಥಾನಮಾನ, ಪ್ರಶಸ್ತಿ, ಪುರಸ್ಕಾರಗಳಿಗಾಗಿ ಮುಗಿಬಿದ್ದು ಹೋರಾಡುತ್ತಿರುವ ನಮ್ಮ ಕವಿ-ಸಾಹಿತಿ-ವಿದ್ಯಾವಂತರು, ನಾವು ಬದುಕಿರುವುದೇ ದುಡ್ಡು ದುಡಿಯುವುದಕ್ಕಾಗಿ ಮತ್ತು ದುಡಿದ ದುಡ್ಡನ್ನು ಖರ್ಚು ಮಾಡುವುದಕ್ಕಾಗಿ ಎಂದು ಇಡೀ ಬದುಕನ್ನು ಒಂದು ಸರಳ ಸೂತ್ರಕ್ಕೆ ಬಿಗಿದುಕೊಂಡಿರುವ ನಮ್ಮಂಥ ಮಧ್ಯಮ ವರ್ಗದ ಸಾಮಾನ್ಯರು ಅವನ ಕತೆ ಕೇಳಬೇಕು, ಮತ್ತೆ ಮತ್ತೆ ಕೇಳುತ್ತಿರಬೇಕು.

ಗೆಲಿಲಿಯೋ ಹುಟ್ಟಿದ ಮುನ್ನೂರು ವರ್ಷಕ್ಕೆ ಸರಿಯಾಗಿ ಅದೇ ದಿನಾಂಕ (ಜನವರಿ 8, 1942)ದಂದು ಆಕ್ಸ್​ಫರ್ಡ್​ನಲ್ಲಿ ಹುಟ್ಟಿದವನು ಸ್ಟೀಫನ್ ಹಾಕಿಂಗ್. ಅವನ ತಂದೆ ಫ್ರಾಂಕ್ ವಿಲಿಯಮ್ ಹಾಕಿಂಗ್ ಹಾಗೂ ತಾಯಿ ಇಸಾಬೆಲ್. ಹಣಕಾಸಿನ ಮುಗ್ಗಟ್ಟಿದ್ದರೂ ಈ ದಂಪತಿ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಸೇರಿ ಕಷ್ಟಪಟ್ಟು ಓದಿದ್ದರು. ಆ ದಂಪತಿಗೆ ಸ್ಟೀಫನ್ ಅಲ್ಲದೆ ಇನ್ನೂ ಇಬ್ಬರು ಹೆಣ್ಣು ಮಕ್ಕಳು, ಮತ್ತೊಬ್ಬ ದತ್ತುಮಗ ಇದ್ದರು. ಫ್ರಾಂಕ್ ಮತ್ತು ಇಸಾಬೆಲ್​ರಿಗೆ ಮಗ ಡಾಕ್ಟರಾಗಬೇಕೆಂಬ ಆಸೆ. ಆದರೆ ಸ್ಟೀಫನ್​ಗೆ ಆಸಕ್ತಿಯಿದ್ದುದು ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ. ಅವನು ಶಾಲೆಯಲ್ಲಿದ್ದಾಗಲೇ ಈ ವಿಷಯಗಳಲ್ಲಿ ಅದೆಷ್ಟು ಚುರುಕಾಗಿದ್ದ ಅಂದರೆ, ಅವನನ್ನು ಸಹಪಾಠಿಗಳು ಜೂನಿಯರ್ ಐನ್​ಸ್ಟೀನ್ ಎಂದು ಕರೆಯುತ್ತಿದ್ದರಂತೆ. ಹದಿನೇಳನೇ ವಯಸ್ಸಿಗೆ ಆಕ್ಸ್​ಫರ್ಡ್ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಯಾಗಿ ಸೇರಿದ ಸ್ಟೀಫನ್. ಅದ್ಯಾಕೋ ಅವನಿಗೆ ಕಾಲೇಜು ಶಿಕ್ಷಣ ಬೋರುಹೊಡೆಯತೊಡಗಿತು. ಹಾಗಂತ ಅವನು ತುಂಬಾ ಓದುತ್ತಿದ್ದ ಹುಡುಗನೇನಲ್ಲ. ಅಧ್ಯಾಪಕರ ದೃಷ್ಟಿಯಲ್ಲಿ ಅವನೊಬ್ಬ ಸೋಮಾರಿ, ಆದರೆ ಅಸಾಧ್ಯ ಹುಡುಗ. ಆ ವರ್ಷದ ಪರೀಕ್ಷೆಯಲ್ಲಿ ಅವನು ಮೊದಲನೇ ಮತ್ತು ಎರಡನೇ ದರ್ಜೆಯ ಗಡಿರೇಖೆಯಲ್ಲಿದ್ದ. ಮೌಖಿಕ ಪರೀಕ್ಷೆಯಲ್ಲಿ ನಿನ್ನ ಮುಂದಿನ ಯೋಜನೆಗಳೇನು ಅಂತ ಕೇಳಿದರೆ, ‘ನೀವು ಮೊದಲನೇ ದರ್ಜೆ ನೀಡಿದರೆ ನಾನು ಕೇಂಬ್ರಿಜ್​ಗೆ ಹೋಗುತ್ತೇನೆ, ಎರಡನೇ ದರ್ಜೆ ನೀಡಿದರೆ ಇಲ್ಲೇ ಆಕ್ಸ್​ಫರ್ಡ್​ನಲ್ಲೇ ಉಳಿಯುತ್ತೇನೆ. ಆದ್ದರಿಂದ ನೀವು ಮೊದಲನೇ ದರ್ಜೆ ನೀಡಬೇಕೆಂಬುದೇ ನನ್ನ ಅಪೇಕ್ಷೆ’- ಹಾಗಂತ ದಿಟ್ಟತನದ ಉತ್ತರ ಕೊಟ್ಟಿದ್ದ. ಪರೀಕ್ಷಕರು ಮೊದಲನೇ ದರ್ಜೆಯನ್ನೇ ನೀಡಿದರು.

ಹಾಗೆ ಆಕ್ಸ್​ಫರ್ಡ್​ನಲ್ಲಿ ಮೊದಲನೇ ದರ್ಜೆಯ ಬಿ.ಎ. ಆನರ್ಸ್ ಡಿಗ್ರಿ ಪಡೆದ ಹುಡುಗ ಸ್ಟೀಫನ್ 1962ರಲ್ಲಿ ಕೇಂಬ್ರಿಜ್​ನ ಟ್ರಿನಿಟಿ ಕಾಲೇಜ್ ಸೇರಿದ. ಅಲ್ಲಿ ಓದುವಾಗ ಭೌತಶಾಸ್ತ್ರದ ವಲಯದಲ್ಲಿ ಅದಾಗಲೇ ಒಪ್ಪಿತವಾಗಿದ್ದ ವಿಶ್ವದ ಸೃಷ್ಟಿಯ ಸಂಬಂಧದ ತಿಳಿವಳಿಕೆಗಳ ಮೇಲೆ ಚರ್ಚೆ ಆರಂಭವಾಗಿತ್ತು. ಆ ಚರ್ಚೆಗಳಿಂದ ಪ್ರಭಾವಿತನಾದ ಸ್ಟೀಫನ್ ತಾನೂ ಆ ಕುರಿತು ಏಕಾಂಗಿಯಾಗಿಯೇ ಸಂಶೋಧನೆ ನಡೆಸಿ ಕಪು್ಪರಂಧ್ರ (ಆಚ್ಚk ಏಟ್ಝಛಿ) ಮತ್ತು ಮಹಾಸ್ಪೋಟ (ಆಜಿಜ ಆಚ್ಞಜ)ದ ವಿಷಯದಲ್ಲಿ ತನ್ನದೇ ಸಿದ್ಧಾಂತಗಳನ್ನು ಮಂಡಿಸಿ ಮಹಾಪ್ರಬಂಧಗಳನ್ನು ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ. 1966ರಲ್ಲಿ ಅನ್ವಯಿಕ ಗಣಿತಶಾಸ್ತ್ರ ಮತ್ತು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಅವನಿಗೆ ಪಿಎಚ್.ಡಿ ಪದವಿ ಕೂಡಾ ದೊರೆಯಿತು. ಆ ನಂತರ ಖಭೌತಶಾಸ್ತ್ರ ವಿಷಯದ ಅದ್ಭುತ ಸಂಶೋಧಕನಾಗಿ ಹೆಸರು ಮಾಡಿದ. ನಾನು ಅದರ ವಿವರಗಳನ್ನು ಬರೆಯುವಷ್ಟು ತಜ್ಞನಲ್ಲ. ಅಷ್ಟಕ್ಕೂ ಮತ್ತಾವನಾದರೊಬ್ಬ ವಿಜ್ಞಾನಿ ಇಂಥ ಸಾಧನೆಯನ್ನು ಮಾಡಿದ್ದರೆ, ಅದು ಸ್ಟೀಫನ್ ಹಾಕಿಂಗ್ ಸಾಧಿಸಿದಷ್ಟು ಅತಿಶಯದ ಅಥವಾ ಅಚ್ಚರಿಯ ಸಾಧನೆಯಾಗುತ್ತಿರಲಿಲ್ಲ.

21ನೇ ವಯಸ್ಸಿನಲ್ಲಿ ಒಂದು ಅನಾರೋಗ್ಯ ನಿಮಿತ್ತ ಹಾಕಿಂಗ್ ಡಾಕ್ಟರ ಬಳಿಗೆ ಹೋಗಬೇಕಾಯಿತು. ಅಲ್ಲಿ ಡಾಕ್ಟರು ಸ್ಟೀಫನ್​ಗೆ ಒಂದು ಅಪರೂಪದ ಕಾಯಿಲೆಯಿರುವುದನ್ನು ಪತ್ತೆಹಚ್ಚಿದರು. ಆ ಕಾಯಿಲೆಯ ಹೆಸರು ಹೇಳಲೂ ಸಾಮಾನ್ಯರ ನಾಲಿಗೆ ತಿರುಗುವುದಿಲ್ಲ- ಅಮಿಯೊಟ್ರೊಫಿಕ್ ಲ್ಯಾಟೆರಲ್ ಸ್ಕೀ ್ಲೋಸಿಸ್ (ಎ.ಎಲ್.ಎಸ್). ಅದೊಂದು ಭಯಂಕರವಾದ ನರಸಂಬಂಧಿ ರೋಗ. ಈ ರೋಗ ಮನುಷ್ಯನ ಸ್ನಾಯುಗಳನ್ನು ನಿಯಂತ್ರಿಸುವ ಮಿದುಳು ಮತ್ತು ಬೆನ್ನುಹುರಿಯ ಮುಖ್ಯ ನರಕೋಶಗಳನ್ನು ಸಂಪೂರ್ಣವಾಗಿ ನಾಶಮಾಡುತ್ತದೆ. ನರಕೋಶಗಳು ನಿಷ್ಕ್ರಿಯವಾಗಿ ಹೋಗುವುದರಿಂದ ಮಿದುಳಿಗೆ ಮಾಂಸಖಂಡಗಳ ಚಲನೆಯ ಮೇಲಿನ ನಿಯಂತ್ರಣ ಕಳೆದುಹೋಗುತ್ತದೆ. ರೋಗಿಯ ಬೆನ್ನುಹುರಿಯೂ ನಿಶ್ಚೇಷ್ಟವಾಗುತ್ತದೆ. ರೋಗಿಗೆ ಪಾರ್ಶ್ವವಾಯು ಬಡಿಯುತ್ತದೆ. ತನ್ನ ಅಂಗಾಂಗಗಳ ಚಲನವಲನ ಮತ್ತು ಮಾತುಗಳ ಸ್ವಾಧೀನ ಕಳೆದುಹೋಗುತ್ತದೆ. ಇಂಥ ರೋಗ ಪತ್ತೆಯಾದ ಮೇಲೆ ಆ ರೋಗಿ ಎರಡು ವರ್ಷ, ಹೆಚ್ಚೆಂದರೆ ಮೂರು ವರ್ಷ ಮಾತ್ರ ಬದುಕಿರುತ್ತಾನೆ. ಈ ರೋಗಕ್ಕೆ ನಿರ್ದಿಷ್ಟ ಕಾರಣವೂ ಗೊತ್ತಿಲ್ಲ. ಚಿಕಿತ್ಸೆಯೂ ಆಧುನಿಕ ವೈದ್ಯವಿಜ್ಞಾನಕ್ಕೆ ತಿಳಿದಿಲ್ಲ. ಅಮೆರಿಕ, ಯುರೋಪುಗಳಲ್ಲಿ ಅತಿ ಅಪರೂಪಕ್ಕೆ ಕಾಣಿಸಿಕೊಳ್ಳುವ ರೋಗ ಇದು. ಸಾಮಾನ್ಯವಾಗಿ 55ರಿಂದ 65 ವರ್ಷ ವಯಸ್ಸಿನಲ್ಲಷ್ಟೇ ಈ ರೋಗ ಬರುತ್ತದೆ. ಈ ರೋಗದ ಲಕ್ಷಣ (ಖಢಞಟಠಿಟಞ)ಗಳನ್ನು ಮಾತ್ರ ಒಂದಿಷ್ಟು ಶಮನಗೊಳಿಸಲು ವೈದ್ಯವಿಜ್ಞಾನಕ್ಕೆ ಸಾಧ್ಯವಿದೆ. ಡಾಕ್ಟರು ಸ್ಟೀಫನ್​ಗೆ ಈ ರೋಗದ ವಿಷಯ ಹೇಳಿದಾಗ ಅವನು ಸಹಜವಾಗಿಯೇ ತತ್ತರಿಸಿಹೋದ. ಇನ್ನು ಬದುಕಿರುವಷ್ಟು ಕಾಲ ಯಾವ ದೈಹಿಕ ಚಲನೆಯೂ ಇಲ್ಲದೆ, ಮಾತಾಡುವುದೂ, ಕಣ್​ರೆಪ್ಪೆ ಮಿಟುಕಿಸುವುದೂ ತನ್ನ ಸ್ವಾಧೀನದಲ್ಲಿಲ್ಲದೆ ಬದುಕುವುದು ಹೇಗೆ? ತನ್ನ ಸಂಶೋಧನೆಗಳು ನಿಂತುಹೋಗುತ್ತವೆಯಲ್ಲವೆ? ಗದ್ಗದಿಸುತ್ತಲೇ ಸ್ಟೀಫನ್ ಡಾಕ್ಟರನ್ನು ಕೇಳಿದರು- ‘ಈ ರೋಗವಿರುವವರಿಗೆ ದೇಹದ ಹಾಗೇ ಮಿದುಳು ಕೂಡಾ ಸ್ವಾಧೀನ ಕಳೆದುಕೊಳ್ಳುತ್ತದಾ? ದೇಹ ಸಹಕರಿಸದಿದ್ದ ಮೇಲೆ ಮಿದುಳೂ ತನ್ನಂತಾನೇ ಸತ್ತುಹೋಗಿಬಿಡುತ್ತದಾ?’. ಡಾಕ್ಟರು ಹೇಳಿದರು- ‘ನಿಮ್ಮ ಮನೋಬಲ ಗಟ್ಟಿಯಾಗಿದ್ದರೆ ಮಿದುಳು ಮಾತ್ರ ಚಟುವಟಿಕೆಯಲ್ಲಿರಲು ಸಾಧ್ಯ- ಅದೂ ಸಂಪೂರ್ಣವಾಗಿ ಅಲ್ಲ’.

ಈಗ ಯೋಚಿಸಿ, ಇಂಥದೊಂದು ರೋಗ ನಮ್ಮ ದೇಶದಲ್ಲಿ, ನಮ್ಮ ಸಮಾಜದಲ್ಲಿ ಯಾರಿಗಾದರೂ ತಗುಲಿದ್ದರೆ ಆ ರೋಗಿ ಆ ಕೂಡಲೇ ಕೊರಳಿಗೆ ನೇಣು ಬಿಗಿದುಕೊಂಡೋ, ವಿಷ ಕುಡಿದೋ ಸತ್ತುಹೋಗಿಬಿಡುತ್ತಿದ್ದ. ಅಷ್ಟಕ್ಕೂ ಅವನು ಸಾಯಬಾರದೆಂದುಕೊಂಡರೆ ಸಮಾಜದ ಕನಿಕರವೇ ಅವನನ್ನು ಕೊಂದುಬಿಡುತ್ತಿತ್ತು. ಆದರೆ ಸ್ಟೀಫನ್ ತನ್ನೊಳಗಿದ್ದ ಎಲ್ಲಾ ಧೃತಿಯನ್ನೂ ಒಟ್ಟುಗೂಡಿಸಿಕೊಂಡು ನಿರ್ಧರಿಸಿಬಿಟ್ಟ. ಈ ರೋಗ ಏನೇನು ಮಾಡುತ್ತದೆಯೋ ನೋಡಲೇಬೇಕು. ತನ್ನ ಮಿದುಳು ಚುರುಕಾಗಿರುವವರೆಗೂ ಸಂಶೋಧನೆ ಮುಂದುವರಿಸಬೇಕು. ಸ್ಟೀಫನ್​ನ ನಿರ್ಧಾರಕ್ಕೆ ಅವನ ಇಡೀ ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ತಾನು ಯಾವ್ಯಾವ ಬಗೆಯಲ್ಲಿ ಪ್ರೋತ್ಸಾಹಿಸಬಹುದೋ, ಸಹಾಯ ಮಾಡಬಹುದೋ ಅದನ್ನೆಲ್ಲಾ ಮಾಡಿತು. ಇಂಥದೊಂದು ನಿರ್ಧಾರ ತನ್ನಲ್ಲಿ ಮೂಡುವುದಕ್ಕೆ ಕಾರಣವಾದ ಘಟನೆಯನ್ನು ಸ್ಟೀಫನ್ ಹಾಕಿಂಗ್ ಹೇಳಿದ್ದಾನೆ.

ಸ್ಟೀಫನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ ದಿನ ತುಂಬಾ ಹತಾಶೆಯಿಂದ ನರಳುತ್ತಿದ್ದ. ಆಗ ಅವನು ತೀವ್ರನಿಗಾ ಘಟಕದಲ್ಲಿದ್ದ. ಅವನ ಮಂಚದ ಪಕ್ಕದಲ್ಲಿ ಕ್ಯಾನ್ಸರ್​ನಿಂದ ನರಳುತ್ತಿದ್ದ ಒಬ್ಬ ಸ್ಪುರದ್ರೂಪಿ ಯುವಕ ಸಂಕಟದಿಂದ ಒದ್ದಾಡುತ್ತಿದ್ದುದನ್ನು ನೋಡಿದ. ಮತ್ತೆ ಕೆಲವರು ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದರು. ಆಗವನು ನಿರ್ಧರಿಸಿದ. ಜಗತ್ತಿನಲ್ಲಿ ಬೇಕಾದಷ್ಟು ದುಃಖ ಇದೆ, ಹತಾಶೆಯಿದೆ, ನೋವಿದೆ. ತನ್ನದೊಂದೇ ದುಃಖವಲ್ಲ, ತನ್ನ ನೋವೊಂದೇ ನೋವಲ್ಲ. ಹೀಗೆ ನೋಯುವ ಹಲವರ ನಡುವೆ ತಾನೂ ಒಬ್ಬ. ತಾನು ಈ ನೋವಿನಿಂದ ಹತಾಶನಾಗಬಾರದು. ಬದುಕಬೇಕು, ಬದುಕಿರುವಷ್ಟು ಕಾಲ ಚಟುವಟಿಕೆಯಿಂದಿರಬೇಕು.

ಸ್ಟೀಫನ್​ನ ಇಡೀ ದೇಹವನ್ನು ರೋಗ ಆಕ್ರಮಿಸಿಕೊಂಡಿತು. ಅವನ ಇಡೀ ದೇಹ ಸ್ವಾಧೀನ ತಪ್ಪಿತು. ಗಾಲಿಕುರ್ಚಿಯೊಂದೇ ಗತಿಯಾಯಿತು. ಮಾತೂ ನಿಂತುಹೋದಾಗ ಕಂಪ್ಯೂಟರ್ ಸ್ಪೀಚ್ ಸಿಂಥಸೈಜರ್ ಎಂಬ ಧ್ವನಿ ಪರಿಷ್ಕಾರಕ ಯಂತ್ರ ಅವನ ಅಸ್ಪಷ್ಟ ಮಾತುಗಳನ್ನು ಗ್ರಹಿಸಿ ತೆರೆಯ ಮೇಲೆ ಮೂಡಿಸಲು ಸಹಾಯಮಾಡಿತು. ಇದೇ ವಿಸ್ಮಯ! ಇದೇ ಬೆರಗು!! ಸ್ಟೀಫನ್ ಹಾಕಿಂಗ್ ಇದೇ ಸ್ಥಿತಿಯಲ್ಲಿಖಭೌತಶಾಸ್ತ್ರದ ಸಂಶೋಧನೆಯನ್ನು ಮುಂದುವರಿಸಿದ. ಮಿದುಳನ್ನು ತನ್ನ ಮನೋದಾರ್ಢ್ಯದ ಬಲದಿಂದಲೇ ನಿರಂತರ ಚುರುಕಾಗಿಟ್ಟುಕೊಂಡ. ವಿಶ್ವದ ಸೃಷ್ಟಿ, ವಿನಾಶ, ದೇವಕಣ ಮುಂತಾದ ಗಹನ ವಿಷಯಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡಿದ. ಅವನ ಪುಸ್ತಕಗಳು ಜಗತ್ತಿನ ಬೆಸ್ಟ್ ಸೆಲ್ಲರ್ ಪುಸ್ತಕಗಳಾಗಿ ಕೋಟ್ಯಂತರ ಪ್ರತಿಗಳು ಮಾರಾಟವಾದವು. ಅವನ ಬದುಕನ್ನೇ ಆಧರಿಸಿದ ಸಿನಿಮಾ ‘ದಿ ಥಿಯರಿ ಆಫ್ ಎವೆರಿಥಿಂಗ್’ ಹಲವಾರು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಎರಡೇ ವರ್ಷ ಬದುಕುತ್ತಾನೆಂದಿದ್ದ ಹಾಕಿಂಗ್ ಎಪ್ಪತ್ತಾರು ವಯಸ್ಸಾಗುವವರೆಗೂ ಅದೇ ಗಾಲಿಕುರ್ಚಿಯ ಮೇಲೆ, ಅದೇ ನಿಶ್ಚೇಷ್ಟಿತ ಸ್ನಾಯುಗಳೊಂದಿಗೆ ಬದುಕಿದ, ಸಂಶೋಧನೆ ಮಾಡಿದ. ಜಗತ್ತಿನ ಪ್ರಮುಖ ಭೌತವಿಜ್ಞಾನಿಗಳ ಸಾಲಿನಲ್ಲಿ ನಿಂತ. ಸ್ಟೀಫನ್ ಹಾಕಿಂಗ್ ‘ಇಡೀ ಮನುಕುಲದ ಇತಿಹಾಸದಲ್ಲೇ ಮನುಷ್ಯ ಚೈತನ್ಯದ ಒಂದು ಮಹಾಪ್ರತಿಮೆ’ ಅಂದರೆ ಅಷ್ಟು ಸಾಕಾ? ಗೊತ್ತಿಲ್ಲ. ಸ್ಟೀಫನ್ ಹಾಕಿಂಗ್ ಉಳಿದಂತೆ ಸಾಮಾನ್ಯ ಗೃಹಸ್ಥನ ಬದುಕನ್ನು ಬದುಕಿದ. ಅವನು ಇಬ್ಬರು ಹೆಂಡಿರನ್ನು ಮದುವೆಯಾಗಿ ಇಬ್ಬರಿಂದಲೂ ವಿಚ್ಛೇದನ ಪಡೆದ. ಅವನಿಗೆ ಮೂರು ಮಕ್ಕಳೂ ಇದ್ದಾರೆ, ಅದಿರಲಿ.

ಅವನು ಮಹಾವಿಜ್ಞಾನಿ ಹೇಗೋ ಹಾಗೆ ಇತರರ ಬದುಕಿಗೆ ಸ್ಪೂರ್ತಿ ಕೊಡುವ ದಾರ್ಶನಿಕನೂ ಹೌದು. ಅಂಥ ದೈಹಿಕ ಅವಸ್ಥೆಯಲ್ಲೂ ಅವನು ಪ್ರಪಂಚವಿಡೀ ಓಡಾಡಿದ. 2001ನೇ ಇಸವಿಯಲ್ಲಿ ಭಾರತಕ್ಕೂ ಬಂದಿದ್ದ. ಗಗನನೌಕೆಯಲ್ಲಿ ಕೂತು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲಿ ಆ ಅನುಭವವನ್ನೂ ಪಡೆದ. ಅವನು ಹೇಳಿದ ಕೆಲವು ಸೂಕ್ತಿಗಳನ್ನು ಗಮನಿಸಿ-

· ಬದುಕು ಅದೆಷ್ಟೇ ಕಠಿಣವೆನ್ನಿಸಿದರೂ ನಿಮಗೆ ಒಂದಿಷ್ಟು ಸಾಧಿಸುವ ಅವಕಾಶ ಇದ್ದೇ ಇರುತ್ತದೆ. ನೀವು ಯಾವ ಹಂತದಲ್ಲೂ ಕೈಬಿಡಬಾರದು ಅಷ್ಟೆ.

· ನಮ್ಮ ದುರಾಸೆ ಮತ್ತು ದುರುಳತನದಿಂದ ನಮ್ಮನ್ನೇ ವಿನಾಶ ಮಾಡಿಕೊಳ್ಳುವ ಅಪಾಯದಂಚಿಗೆ ಬಂದಿದ್ದೇವೆ. ವಿಪರೀತ ಮಲಿನಗೊಳ್ಳುತ್ತಿರುವ, ಜನನಿಬಿಡವಾಗುತ್ತಿರುವ ನಮ್ಮ ಭೂಮಿಯ ಮೇಲೆ ನಮ್ಮನ್ನಷ್ಟೇ ನಾವು ನೋಡಿಕೊಂಡು ಬಹಳ ಕಾಲ ಉಳಿಯುವುದು ಸಾಧ್ಯವಿಲ್ಲ.

· ನಾನೊಂದು ಇನ್ನೂ ಬೆಳೆಯದಿರುವ ಮಗು. ಈಗಲೂ ಇದು ಹೇಗೆ? ಇದು ಯಾಕೆ? ಎಂಬ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೇನೆ. ಆಗಾಗ ನನಗೆ ಉತ್ತರವೂ ದೊರೆಯುತ್ತದೆ.

ಈ ಅಂಕಣ ಓದಿದ ಮೇಲೆ ಹಾಕಿಂಗ್ ಬಗ್ಗೆ ಇನ್ನಷ್ಟು ಓದಿ. ಮನಸ್ಸಿಗೊಂದು ಉತ್ಸಾಹ, ಸ್ಪೂರ್ತಿ ಸಿಗದಿದ್ದರೆ ಹೇಳಿ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

(ಅನಿವಾರ್ಯ ಕಾರಣದಿಂದ ಈ ಅಂಕಣ ಭಾನುವಾರ ಪ್ರಕಟವಾಗಿರಲಿಲ್ಲ)

Leave a Reply

Your email address will not be published. Required fields are marked *

Back To Top