ಋಷೀಜಿ ಎಂದು ಕರೆಸಿಕೊಂಡ ಧೀಮಂತ ಕ್ರಾಂತಿಕಾರಿ

| ಡಾ. ಬಾಬು ಕೃಷ್ಣಮೂರ್ತಿ

‘‘ಸುಮಾರು 1907ರ ಮಧ್ಯದಲ್ಲಿ ಒಂದು ದಿನ ನಮ್ಮ ಪ್ರಸಿದ್ಧ ‘ಇಂಡಿಯಾ ಹೌಸ್’ನ ಕೆಲಸದ ಹುಡುಗಿ ನಾನು ಊಟ ಮಾಡಲು ಮಹಡಿ ಇಳಿದು ಬರುತ್ತಿದ್ದಾಗ ನಮ್ಮ ಕೈಗೆ ಒಂದು ವಿಸಿಟಿಂಗ್ ಕಾರ್ಡ್ ಕೊಟ್ಟು ದಿವಾನಖಾನೆಯಲ್ಲಿ ಒಬ್ಬ ಮಹನೀಯರು ನಿಮಗಾಗಿ ಕಾದಿರುವರೆಂದು ಹೇಳಿದಳು. ಬಾಗಿಲು ತೆರೆಯಿತು. ಅಚ್ಚುಕಟ್ಟಾಗಿ ಧರಿಸಿದ್ದ ಐರೋಪ್ಯ ಉಡುಪಿನಲ್ಲಿ ಸೊಗಸುಗಾರನಂತಿದ್ದ ಒಬ್ಬ ವ್ಯಕ್ತಿ ಆತ್ಮೀಯವಾಗಿ ಕೈಕುಲುಕಿದ. ತಾನು ರಂಗೂನ್​ನಲ್ಲಿ ಪ್ಲೀಡರ್ ಆಗಿದ್ದುದಾಗಿಯೂ ಪೂರ್ಣಪ್ರಮಾಣದ ಬ್ಯಾರಿಸ್ಟರ್ ಅರ್ಹತೆ ಗಳಿಸಲು ಇಂಗ್ಲೆಂಡಿಗೆ ಬಂದಿರುವುದಾಗಿಯೂ ಪರಿಚಯಿಸಿಕೊಂಡ. ತಾನು ಆಂಗ್ಲ ಸಂಗೀತ, ನೃತ್ಯಗಳನ್ನು ಕಲಿಯುವ ಉದ್ದೇಶವಿರಿಸಿಕೊಂಡಿರುವುದಾಗಿಯೂ ಹೇಳಿದ. ಅದನ್ನು ಕೇಳಿ ಸೌಮ್ಯವಾಗಿ ವಿರೋಧವನ್ನು ಸೂಚಿಸಿದ ನಾನು, ಕಣ್ಣಮುಂದೆ ಬೃಹತ್ತಾದ ಸಮಸ್ಯೆಗಳು ಎದ್ದು ನಿಂತಿರುವಾಗ ಇಂಥ ವ್ಯರ್ಥ ಕಾಲಕ್ಷೇಪಗಳಲ್ಲಿ ತೊಡಗಿಕೊಂಡು ಶಕ್ತಿವ್ಯಯ ಮಾಡಿಕೊಳ್ಳುವುದು ಸರಿಯಲ್ಲವೆಂದು ಹೇಳಿದೆ. ತಾನು ಆಗಾಗ ಇಂಡಿಯಾ ಹೌಸ್​ಗೆ ಬರುತ್ತಿರುವುದಾಗಿ ಹೇಳಿ ಅಲ್ಲಿಂದ ವಿರಮಿಸಿದ. ಅವನೇ ಶ್ರೀಯುತ ವಿ.ವಿ.ಎಸ್. ಅಯ್ಯರ್!’’- ಇದು ಸ್ವಾತಂತ್ರ್ಯವೀರ ಸಾವರ್ಕರ್ ವಿ.ವಿ.ಎಸ್. ಅಯ್ಯರ್​ನನ್ನು ಮೊದಲ ಬಾರಿಗೆ ಕಂಡ ಸಂದರ್ಭದ ವರ್ಣನೆ, ಅವರ ಲೇಖನಿಯಿಂದಲೇ ಮೂಡಿಬಂದಿದ್ದು.

ರಂಗೂನಿನಿಂದ ಲಂಡನ್ನಿಗೆ: ತುಸು ಶೋಕಿಲಾಲನಾಗಿ ಸುಖ ಸಮೃದ್ಧ ಜೀವನದ ರಸಾನುಭೂತಿಯನ್ನು ಪಡೆದುಕೊಳ್ಳುವ ಮಹದಾಸೆಯಿಂದ ಲಂಡನ್ನಿಗೆ ಬಂದ ಅಯ್ಯರ್, ಇಂಡಿಯಾ ಹೌಸ್​ನ ಸದಸ್ಯನಾಗಿ, ಆ ಕುಲುಮೆಯಲ್ಲಿ ಹದಗೊಂಡು ಒಬ್ಬ ಧ್ಯೇಯನಿಷ್ಠ ದೇಶ ಸೇವಕನಾದ ಕತೆಯೇ ವರಾಹನೇರಿ ವೆಂಕಟೇಶ ಸುಬ್ರಹ್ಮಣ್ಯ ಅಯ್ಯರ್​ದು.

ಅಯ್ಯರ್ ಅವರದು ಸಂಪ್ರದಾಯಸ್ಥ ಸ್ಮಾರ್ತ ಬ್ರಾಹ್ಮಣ ಮನೆತನ. ತಂದೆಯವರದು ಶಾಲಾ ಇನ್ಸ್​ಪೆಕ್ಟರ್ ವೃತ್ತಿ. ಹೆಸರು ವರಾಹನೇರಿ ವೆಂಕಟೇಶ ಅಯ್ಯರ್. ತಾಯಿ ಕಾಮಾಕ್ಷಿ ಅಮ್ಮಾಳ್. ಜನಿಸಿದ್ದು 1881ರ ಏಪ್ರಿಲ್ 2ರಂದು. ಮದ್ರಾಸಿನಲ್ಲಿ ಪ್ಲೀಡರ್ ಪರೀಕ್ಷೆ ಮುಗಿಸಿ ತಿರುಚ್ಚಿಯ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಕಾಲ ವಕೀಲಿ ವೃತ್ತಿ ನಡೆಸಿ 1906ರಲ್ಲಿ ರಂಗೂನಿಗೆ ಹೋಗಿ ಅಲ್ಲಿ ಒಬ್ಬ ಇಂಗ್ಲಿಷ್ ಬ್ಯಾರಿಸ್ಟರ್ ಬಳಿ ಅಸಿಸ್ಟೆಂಟ್ ಆಗಿ ಸೇರಿದ. ಅಲ್ಲಿ ಸಮಾಧಾನವಾಗದೆ ಬ್ಯಾರಿಸ್ಟರ್ ಪದವಿ ಪಡೆಯಲು 1907ರಲ್ಲಿ ಲಂಡನ್ನಿಗೆ ಪಯಣಿಸಿದ. ಆಗಲೇ ಸಾವರ್ಕರ್ ಭೇಟಿಯಾದದ್ದು. ಲಿಂಕನ್ಸ್ ಇನ್​ನ ಸದಸ್ಯನಾಗಿ ಬ್ಯಾರಿಸ್ಟರ್ ವಿದ್ಯಾಭ್ಯಾಸವನ್ನು ಮಾಡಲಾರಂಭಿಸಿದ.

ಇಂಡಿಯಾ ಹೌಸ್​ನ ಬೆಂಕಿಚೆಂಡುಗಳಂಥ ತೇಜಸ್ವಿ ಸದಸ್ಯರ ಸಂಪರ್ಕಕ್ಕೆ ಒಮ್ಮೆ ಬಂದನಂತರ ಅಯ್ಯರ್ ಹಿಂದಿರುಗಿ ನೋಡಲಿಲ್ಲ.

ಆ ದಿನಗಳಲ್ಲಿ ಲಂಡನ್ ಹಲವು ದೇಶಗಳ ಕ್ರಾಂತಿಕಾರಿಗಳ ಅಡಗುದಾಣವಾಗಿತ್ತು. ಇಟಲಿ, ರಷ್ಯಾ, ಭಾರತ ಹೀಗೆ ಅನೇಕ ದೇಶಗಳಿಂದ ಅಲ್ಲಿಗೆ ಯುವಕರು ಬಂದು ರಹಸ್ಯ ಸಂಘಟನೆಗಳನ್ನು ಸ್ಥಾಪಿಸಿಕೊಂಡಿದ್ದರು. ಅಂಥ ಒಂದು ಪ್ರಬಲ ಕ್ರಾಂತಿಕೇಂದ್ರ ಇಂಡಿಯಾ ಹೌಸ್. ಅಲ್ಲಿಗೆ ಸೇರಿಕೊಂಡ ಮೇಲೆ ಅಯ್ಯರ್ ಜೀವನವೇ ಬದಲಾಯಿತು. ಅವನು ಸಾವರ್ಕರ್​ರನ್ನು ಜತೆ ಮಾಡಿಕೊಂಡು ರೈಫಲ್ ಕ್ಲಬ್ ಒಂದಕ್ಕೆ ಸೇರಿ ರಿವಾಲ್ವರ್ ಚಲಾಯಿಸುವುದನ್ನು ಅಭ್ಯಾಸ ಮಾಡಿದ.

ಇಂಡಿಯಾ ಹೌಸ್​ನ ರಹಸ್ಯ ಚಟುವಟಿಕೆಗಳನ್ನು ಅರಿಯಲು ಬ್ರಿಟಿಷ್ ಗೂಢಚಾರ ವಿಭಾಗ ಸ್ಕಾಟ್ಲೆಂಡ್ ಯಾರ್ಡ್ ಶತಪ್ರಯತ್ನ ಮಾಡಿದರೂ ಯಶಸ್ಸು ಸಿಕ್ಕಿರಲಿಲ್ಲ. ಆಗ ಮಹಾರಾಷ್ಟ್ರದಿಂದ ಬಂದ ಕೀರ್ತಿಕರ್ ಎಂಬ ವಿದ್ಯಾರ್ಥಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ಬಲೆಗೆ ಬಿದ್ದ. ಅವನು ಇಂಡಿಯಾ ಹೌಸ್ ಸಭೆಗಳ ರಹಸ್ಯ ಮಾಹಿತಿಗಳನ್ನು ಸ್ಕಾಟ್ಲೆಂಡ್ ಯಾರ್ಡ್​ಗೆ ತಲುಪಿಸುತ್ತಿದ್ದಾಗ ಅನುಮಾನ ಬಂದ ಅಯ್ಯರ್ ಕೀರ್ತಿಕರನ ದೇಶದ್ರೋಹಿ ಕೃತ್ಯವನ್ನು ಬಯಲಿಗೆಳೆದ. ಅಯ್ಯರ್ ಆ ವೇಳೆಗೆ ಇಂಡಿಯಾ ಹೌಸ್​ನವರಿಗೆಲ್ಲ ‘ಋಷೀಜೀ’. ಕೀರ್ತಿಕರನನ್ನು ತಮ್ಮ ಏಜಂಟನನ್ನಾಗಿ ಪರಿವರ್ತಿಸಿಕೊಂಡು ಸ್ಕಾಟ್ಲೆಂಡ್ ಯಾರ್ಡ್ ಸಮಾಚಾರ ತಮಗೆ ತಲಪಿಸುವಂತೆ ಮಾಡಿಕೊಂಡ ಚಾಣಾಕ್ಷತನ ಅಯ್ಯರ್​ದಾಗಿತ್ತು.

ಕರ್ಜನ್ ವಾಯಿಲಿ ವಧಾ ನಂತರ: ಮದನ್​ಲಾಲ್ ಧಿಂಗ್ರ ಕರ್ಜನ್ ವಾಯಿಲಿಯ ವಧೆ ಮಾಡಿದ ನಂತರ ವಾತಾವರಣದಲ್ಲಿ ದಿಢೀರ್ ಬದಲಾವಣೆ ಉಂಟಾಯಿತು. ಸಾವರ್ಕರ್ ಲಂಡನ್ನಿನ ರೈಲು ನಿಲ್ದಾಣದಲ್ಲಿ ಬಂಧನಕ್ಕೊಳಗಾದರು. ಅವರನ್ನು ಮಾರ್ಸೆಲ್ಸ್​ನಲ್ಲಿ ಬಿಡಿಸಿಕೊಳ್ಳಬೇಕೆಂದು ಅಯ್ಯರ್ ಮಾಡಿದ ಹರಸಾಹಸ ಫಲ ನೀಡಲಿಲ್ಲ. ಸಾವರ್ಕರ್ ನಂತರ ಸ್ಕಾಟ್ಲೆಂಡ್ ಯಾರ್ಡ್ ದೃಷ್ಟಿ ಅಯ್ಯರ್ ಕಡೆಗೆ ತಿರುಗಿತು. ಅವನಿಗೆ ಲಂಡನ್ನಿನಲ್ಲಿರುವುದು ದುಸ್ಸಾಧ್ಯವಾಯಿತು. ಹೋಟೆಲ್​ನಿಂದ ಹೋಟೆಲ್​ಗೆ ಎಷ್ಟು ಸಲ ಸ್ಥಳ ಬದಲಾವಣೆ ಮಾಡಿದರೂ ಬೆಂಬಿಡದ ಭೂತಗಳಂತೆ ಗುಪ್ತಚರರು ಅವನ ಹಿಂದೆ ಬಿದ್ದರು. ಅಪ್ರತಿಮ ಚಾಣಾಕ್ಷನಾಗಿದ್ದ ಅಯ್ಯರ್ ಸ್ಕಾರ್ಲೆಟ್ ಪಿಂಪರ್ನಲ್​ನಂತೆ ಅವರ ಕಣ್ಣಿಗೆ ಧೂಳೆರೆಚುತ್ತ ಪಾರಾಗುತ್ತಿದ್ದ. ಲಂಡನ್ನಿನಲ್ಲಿ ಹೆಚ್ಚು ಕಾಲ ಉಳಿದರೆ ಬ್ರಿಟಿಷರ ಬಂದಿಯಾಗುತ್ತಿದ್ದುದು ಖಚಿತ. ಈಗ ಆತ ಪ್ಯಾರಿಸ್ಸಿಗೆ ತೆರಳಿ ಮೇಡಮ್ ಕಾಮಾ ಆಶ್ರಯದಲ್ಲಿ ನಿಂತ. ಆದರೆ ಸ್ಕಾಟ್ಲೆಂಡ್ ಯಾರ್ಡ್ ಗುಪ್ತಚರರು ಅವನ ಫೋಟೋಗಳನ್ನು ಹಿಡಿದುಕೊಂಡು ಅಲ್ಲಿಗೂ ಬಂದು ತಪಾಸಣೆ ಶುರುಹಚ್ಚಿಕೊಂಡರು.

ಭಾರತಕ್ಕೆ ಹೋಗಿ ಅಲ್ಲಿ ಸ್ವರಾಜ್ಯ ಹೋರಾಟ ಮುಂದುವರಿಸುವ ವಿಚಾರ ಅಯ್ಯರ್​ಗೆ ಬಂತು. ರೋಮಾಂಚಕಾರಿ ರೀತಿಯಲ್ಲಿ, ಹೆಜ್ಜೆ ಹೆಜ್ಜೆಗೂ ಗುಪ್ತಚರರಿಗೆ ಚಳ್ಳೆಹಣ್ಣು ತಿನ್ನಿಸುತ್ತ ಭಾರತದತ್ತ ಧಾವಿಸಿದ. ಒಮ್ಮೆ ಪಂಜಾಬಿ ಸರ್ದಾರ್​ಜೀ ವೇಷದಲ್ಲಿ ಗುರುಗ್ರಂಥ ಸಾಹಿಬ್ ಪಠಿಸುತ್ತ, ಇನ್ನೊಮ್ಮೆ ಮುಸಲ್ಮಾನ್ ಮುಲ್ಲಾ ಅಥವಾ ವ್ಯಾಪಾರಿಯಂತೆ ಕುರಾನ್ ಹಿಡಿದುಕೊಂಡು, ಮತ್ತೊಮ್ಮೆ ಪಾರ್ಸಿಯಂತೆ ಮಾರುವೇಷ ಹಾಕುತ್ತ ತನ್ನನ್ನು ರುಸ್ತುಂ ಸೇಠ್ ಎಂದು ಪರಿಚಯಿಸಿಕೊಳ್ಳುತ್ತ ಹಡುಗುಗಳಲ್ಲಿ ಪಯಣಿಸಿ 1910ರ ಮಧ್ಯಭಾಗದಲ್ಲಿ ಭಾರತದಲ್ಲಿನ ಫ್ರೆಂಚ್ ವಸಾಹತು ಪಾಂಡಿಚೆರಿಯನ್ನು ತಲುಪಿದ.

ಆ ವೇಳೆಗೆ ಪಾಂಡಿಚೆರಿಗೆ ಕೊಲ್ಕತಾದಿಂದ ಮಹರ್ಷಿ ಅರವಿಂದ ಘೊಷರೂ ಬಂದು ನೆಲೆಸಿದ್ದರು. ಮದ್ರಾಸಿನಿಂದ ಮಹಾಕವಿ ಸುಬ್ರಹ್ಮಣ್ಯ ಭಾರತಿ ಕೂಡ 1908ರಲ್ಲೇ, ಬ್ರಿಟಿಷರ ಕೈಕೋಳಗಳಿಂದ ಪಾರಾಗಲು, ಪಾಂಡಿಚೆರಿಯಲ್ಲಿ ಬಂದು ನೆಲೆಸಿದರು. ಅವರಿಗೆ ಆಶ್ರಯ ನೀಡಿದ್ದ ಮಂಡಯಂ ಶ್ರೀನಿವಾಸಾಚಾರ್ಯ ಎಂಬ ಅಯ್ಯಂಗಾರ್ ಬ್ರಾಹ್ಮಣ ಧೈರ್ಯದಿಂದ ತಲೆಮರೆಸಿಕೊಂಡು ಬರುತ್ತಿದ್ದ ದೇಶಭಕ್ತರಿಗೆ ಬೆಂಬಲವಾಗಿ ನಿಂತಿದ್ದ. ಅಯ್ಯರ್​ಗೆ ಅವರ ಆಶ್ರಯವೂ ದೊರೆಯಿತು. ಅರವಿಂದರೊಡನೆ ಸಂಪರ್ಕ, ಸಂವಾದ ಹಾಗೂ ಚರ್ಚೆಗಳೂ ನಡೆದವು.

ಪಾಂಡಿಚೆರಿಯಲ್ಲಿ ಜೀವನ ಪುನರಾರಂಭ: ಅಯ್ಯರ್ ಪಾಂಡಿಚೆರಿಯ ಧರ್ಮರಾಜ ಕೋಯಿಲ್ ಸ್ಟ್ರೀಟ್​ನಲ್ಲಿ ಮನೆ ಬಾಡಿಗೆಗೆ ಪಡೆದು ಹೆಂಡತಿ ಭಾಗ್ಯಲಕ್ಷ್ಮಿಯೊಡನೆ ಸಂಸಾರ ಹೂಡಿದ. ಅವನಿಗೆ ಒಂದು ಹೆಣ್ಣು ಮಗುವೂ ಹುಟ್ಟಿತು. ಆದರೆ ಆತ ಕ್ರಾಂತಿಕಾರ್ಯಕ್ಕೆ ಕಿಂಚಿತ್ತೂ ವಿರಾಮ ನೀಡಲಿಲ್ಲ. ಅರವಿಂದರಂತೂ ರಾಜಕೀಯವನ್ನು ಸಂಪೂರ್ಣ ತ್ಯಜಿಸಿ ಆಧ್ಯಾತ್ಮಿಕ ಸಾಧನೆಯ ಹಾದಿಯನ್ನು ಹಿಡಿದಿದ್ದರಿಂದ ಅಯ್ಯರ್ ಅರವಿಂದರ ನಡುವೆ ಹಲವು ಬಾರಿ ಬಿಸಿಬಿಸಿ ಚರ್ಚೆಯಾಗುತ್ತಿತ್ತು. ಭಾರತಕ್ಕೆ ಅರವಿಂದರ ರಾಜಕೀಯ ನಾಯಕತ್ವ ಅವಶ್ಯವಿದೆ ಎಂದೂ, ಅವರು ಸಕ್ರಿಯ ರಾಜಕಾರಣ ತ್ಯಜಿಸಬಾರದೆಂದೂ ಅಯ್ಯರ್ ವಾದಿಸುತ್ತಿದ್ದ. ಆ ವೇಳೆಗೆ ತಮ್ಮ ಹಾದಿಯನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದ ಅರವಿಂದರು ಜಪ್ಪಯ್ಯ ಅಂದರೂ ಜಗ್ಗಲಿಲ್ಲ.

ಅಯ್ಯರ್ ಧರ್ಮರಾಜ ಕೋಯಿಲ್ ಸ್ಟ್ರೀಟ್​ನ ತನ್ನ ಮನೆಯಲ್ಲಿ ‘ಧರ್ವಲಯಂ’ ಎಂಬ ಹೆಸರಿನ ಆಶ್ರಮ ಸ್ಥಾಪಿಸಿಕೊಂಡ. ‘ಧರ್ಮಂ’ ಎಂಬ ಮಾಸಪತ್ರಿಕೆ ಆರಂಭಿಸಿದ. ಅಲ್ಲಿಂದ ಕ್ರಾಂತಿಕಾರ್ಯ ನಡೆಸಲು ತಮಿಳು ಯುವಕರ ಸಂಪರ್ಕ ಆರಂಭಿಸಿದ. ಹೀಗೆ ಸಂಪರ್ಕಕ್ಕೆ ಬಂದವನು ಸಿಡಿಲಮರಿಯಂತಿದ್ದ ನೀಲಕಂಠ ಬ್ರಹ್ಮಚಾರಿ ಎಂಬ ಇಪ್ಪತ್ತೊಂದರ ತರುಣ. ಪಾಂಡಿಚೆರಿಗೆ ಬಂದು ತಲೆಮರೆಸಿಕೊಂಡ ದೇಶಭಕ್ತ ಹೋರಾಟಗಾರರಿಗೆ ‘ಸ್ವದೇಶಿ’ ಎಂಬ ವಿಶೇಷ ನಾಮದಿಂದ ಅಲ್ಲಿ ಗುರುತಿಸಲಾಗುತ್ತಿತ್ತು.

ವಾಂಚಿ ಅಯ್ಯರ್ ಆಷ್​ನನ್ನು ವಧೆ ಮಾಡಬೇಕೆಂದು ನಿರ್ಧರಿಸಿದ ಮೇಲೆ ಅದಕ್ಕೆ ಸಿದ್ಧತೆ ನಡೆಸಲು ಪಾಂಡಿಚೆರಿಗೆ ಬಂದ. ಅಲ್ಲಿ ಅಯ್ಯರ್ ಭೇಟಿಯಾಯಿತು. ಅಯ್ಯರ್ ಅವನಿಗೆ ತನ್ನ ಮನೆಯಲ್ಲಿಯೇ ಆಶ್ರಯ ಕೊಟ್ಟು ರಿವಾಲ್ವರ್ ಚಲಾಯಿಸುವುದರ ಪಕ್ಕಾ ತರಬೇತು ನೀಡಿದ. ಆದರೆ ನೀಲಕಂಠ ಬ್ರಹ್ಮಚಾರಿಯ ಒಪ್ಪಿಗೆ ಇದಕ್ಕಿರಲಿಲ್ಲ. ಅಯ್ಯರ್-ನೀಲಕಂಠ ಬ್ರಹ್ಮಚಾರಿ ನಡುವೆ ಸೈದ್ಧಾಂತಿಕ ವಾದ ವಿವಾದವೂ ಜರುಗಿತು. ಆದರೆ ವಾಂಚಿ ತನ್ನ ನಿರ್ಧಾರದಂತೆ, ನೀಲಕಂಠನ ವಿರೋಧವಿದ್ದರೂ ಕಾರ್ಯಾಚರಣೆ ನಡೆಸಿ ಆತ್ಮಾಹುತಿ ನೀಡಿದ್ದ.

1917ರಲ್ಲಿ ಒಮ್ಮೆ ಗಾಂಧೀಜಿ ಪಾಂಡಿಚೆರಿಗೆ ಭೇಟಿ ನೀಡಿದರು. ಅಯ್ಯರ್ ಅವರನ್ನು ಭೇಟಿಯಾದ. ಗಾಂಧೀಜಿಯವರ ಜನಸಂಘಟನೆಯ ಮೂಲಕ ಸ್ವರಾಜ್ಯ ಸಾಧನೆಯ ಕಾರ್ಯಕ್ರಮ ಆಗ ಹೆಚ್ಚು ಸೂಕ್ತ ಮಾರ್ಗವೆಂದು ಭಾವಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ದೇಶಸೇವೆಯ ಹಾದಿಯನ್ನು ಮುಂದುವರಿಸಲು ನಿಶ್ಚಯಿಸಿದ. ಗಾಂಧೀಜಿ ಭೇಟಿಯಿಂದ ಅಯ್ಯರ್ ಜೀವನಕ್ಕೆ ಮಹತ್ವದ ತಿರುವು ದೊರೆಯಿತು.

ಪ್ರಥಮ ಮಹಾಯುದ್ಧ ಮುಗಿದ ಮೇಲೆ 1920ರಲ್ಲಿ ರಾಜಕೀಯ ಕೈದಿಗಳನ್ನು ಬಿಟ್ಟುಬಿಡಲಾಯಿತು. ತಲೆಮರೆಸಿಕೊಂಡಿದ್ದವರ ಮೇಲಿನ ವಾರಂಟುಗಳನ್ನು ಹಿಂಪಡೆಯಲಾಯಿತು. ಆಗ ಅಯ್ಯರ್ ಮದ್ರಾಸಿಗೆ ಹೋಗಿ ನೆಲೆಸಿ ‘ದೇಶಭಕ್ತನ್’ ಎಂಬ ತಮಿಳು ದಿನಪತ್ರಿಕೆಗೆ ಸಂಪಾದಕನಾಗಿ, ಅಸಹಕಾರ ಚಳವಳಿ ಸಮಯದಲ್ಲಿ ಆ ಪತ್ರಿಕೆಯಲ್ಲಿ ಬರೆದ ಉಗ್ರಲೇಖನಗಳಿಗಾಗಿ ಒಂದು ವರ್ಷ ಸೆರೆಮನೆ ವಾಸ ಮಾಡಿ ಹೊರಬಂದ.

ಉತ್ತರದಲ್ಲಿ ಆರ್ಯಸಮಾಜ ನಾಯಕ ಸ್ವಾಮಿ ಶ್ರದ್ಧಾನಂದರು ನಡೆಸುತ್ತಿದ್ದ ಗುರುಕುಲಗಳ ಮಾದರಿಯಲ್ಲಿ ತಿರುನೆಲ್ವೇಲಿಯಲ್ಲಿ ಗುರುಕುಲಾಶ್ರಮ ಆರಂಭಿಸಿದ. ತಮಿಳುನಾಡಿನ ಜನರಲ್ಲಿ ಸಾಹಸ, ದೇಶಭಕ್ತಿ, ಧರ್ಮಶ್ರದ್ಧೆಗಳನ್ನು ಉಂಟುಮಾಡಿ ಪಂಜಾಬಿನ ಸಿಖ್ ಯೋಧರಂತೆ ತಯಾರಿಸಬೇಕೆಂಬ ಆಶಯ ಅಯ್ಯರ್​ದಾಗಿತ್ತು. ಅದ್ಭುತವಾಗಿ ಆಶ್ರಮಗಳನ್ನು ನಡೆಸಿ ಅಲ್ಲಿಂದಲೇ ಮಕ್ಕಳ ಸಂಸ್ಕಾರಕ್ಕಾಗಿ ‘ಬಾಲ ಭಾರತಿ’ ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದ. ಆದರೆ ಆಶ್ರಮದ ವಿದ್ಯಾರ್ಥಿಗಳಲಿ ಜಾತಿ ಹೆಸರಿನಲ್ಲಿ ಬ್ರಾಹ್ಮಣ-ಅಬ್ರಾಹ್ಮಣ ಎಂಬ ಭೇದಭಾವ ಉಂಟು ಮಾಡಿದ ಕೆಲವರ ಕುತಂತ್ರದ ಕಾರಣ ಆಶ್ರಮ ದುಃಸ್ಥಿತಿ ತಲುಪಿ ದಾನಿಗಳಿಂದ ಬರುತ್ತಿದ್ದ ದಾನಗಳೂ ನಿಂತುಹೋಗಿ ಅದನ್ನು ಮುಚ್ಚಬೇಕಾಯಿತು.

ಅತ್ತ ಅಯ್ಯರ್​ನ ಕುಟುಂಬವರ್ಗದಲ್ಲಿ ಅವನ ವಿರುದ್ಧ ಬಂಡಾಯವೇ ಎದ್ದಿತ್ತು. ತಂದೆ ವೆಂಕಟೇಶ ಅಯ್ಯರ್ ಮಗನನ್ನು ಮನೆಗೆ ಬರದಂತೆ ಬಹಿಷ್ಕರಿಸಿದ್ದರು. ಬಂಧು-ಬಳಗ, ನೆರೆ-ಹೊರೆ ಅಯ್ಯರ್ ತಾಯಿ ಕಾಮಾಕ್ಷಿ ಅಮ್ಮಾಳರನ್ನು ‘ಎಂಥ ಕೆಟ್ಟಮಗನಿಗೆ ಜನ್ಮವಿತ್ತೆಯೇ ಕಾಮಾಕ್ಷಿ! ನಿಮ್ಮ ವಂಶಕ್ಕೆ ಅಪಕೀರ್ತಿ ತಂದಂಥ ಇಂಥ ಮಗನಿಗೆ ಜನ್ಮ ಯಾಕೆ ನೀಡಿದೆಯೇ’ ಎಂದು ಹಿಂಸಿಸಿದರು. ಆ ಹಿಂಸೆ ಸಹಿಸಲಾರದ ಕಾಮಾಕ್ಷಿ ಅಮ್ಮಾಳ್ ಬುದ್ಧಿಭ್ರಮಣೆಗೆ ಒಳಗಾಗಿ ಒಂದು ದಿನ ಒಂದೇ ಉಸುರಿನಲ್ಲಿ ಓಡುತ್ತ ಹೊಗಿ ಒಂದು ಕಲ್ಯಾಣಿಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳು. ಇದು ಅಯ್ಯರ್​ಗೆ ಬಹಳ ನೋವು ನೀಡಿದ ಸಂದರ್ಭ.

ಹಿಂದೂಗಳಲ್ಲಿ ಶ್ರೇಷ್ಠ ಹಿಂದೂ: ಪಾಂಡಿಚೇರಿಯಲ್ಲಿ ಹೆಂಡತಿ ಭಾಗ್ಯಲಕ್ಷ್ಮಿಯೊಂದಿಗೆ ಹತ್ತು ವರ್ಷ ಸಂಸಾರ ನಡೆಸಿದ ಅಯ್ಯರ್ ನಿರಂತರ ಸಾಹಿತ್ಯ ರಚನೆಯನ್ನು ಮಾಡಿದ. ತಿರುವಳ್ಳುವರ್ ಅವರ ಪ್ರಾಚೀನ ಕೃತಿ ‘ತಿರುಕ್ಕುರಳ್’ನ ಅದ್ಭುತವಾದ ಇಂಗ್ಲಿಷ್ ಅನುವಾದ ಮಾಡಿದ. ತಮಿಳ ಸಂಗಮ್ ಕಾಲದ ಅಪೂರ್ವ ಸಾಹಿತ್ಯ ಕೃತಿಗಳ ‘ಕುರುಂತೊಗೈ’ ಎಂಬ ಸಂಗ್ರಹವನ್ನೂ ಇಂಗ್ಲಿಷ್​ಗೆ ಅನುವಾದಿಸಿದ. ನೆಪೋಲಿಯನ್, ಬೂಕರ್ ಟಿ. ವಾಷಿಂಗ್ಟನ್ ಮುಂತಾದ ಹಲವಾರು ಮಹಾ ವ್ಯಕ್ತಿಗಳ ಮೇಲೆ ತಮಿಳಿನಲ್ಲಿ ಬರೆದು ತಮಿಳು ಸಾಹಿತ್ಯ ಕ್ಷೇತ್ರದಲ್ಲಿ 20ನೆಯ ಶತಮಾನದ ಆರಂಭದ ಮಹತ್ವದ ಲೇಖಕ ಎಂದು ದಾಖಲಾದ.

ಅಯ್ಯರ್ ಕೊನೆ ಮಾತ್ರ ದುರಂತ ಹಾಗೂ ಆಕಸ್ಮಿಕ. 1925ರ ಜುಲೈ 3ರಂದು ಪುಟ್ಟ ಮಗಳೊಂದಿಗೆ ಪಾಪನಾಶನಂ ತೀರ್ಥದಲ್ಲಿ ಸ್ನಾನ ಮಾಡಲು ಹೋದಾಗ ಅಕಸ್ಮಾತ್ ನೀರಿಗೆ ಜಾರಿ ಬಿದ್ದ ಮಗಳನ್ನು ಕಾಪಾಡಲು ಹೋಗಿ ಜಲಪಾತದ ಹೊಡೆತದಿಂದ ತಪ್ಪಿಸಿಕೊಳ್ಳಲಾರದೆ ಮಗಳೊಂದಿಗೆ ತಾನೂ ಕೊಚ್ಚಿ ಹೋಗಿ ಪ್ರಪಂಚಕ್ಕೆ ವಿದಾಯ ಹೇಳಿದ! ಅಸುನೀಗಿದಾಗ ಅಯ್ಯರ್ ವಯಸ್ಸು 44!

ಸಾವಿಗೆ ಒಂದು ವರ್ಷ ಮುಂಚೆ ಮುಂಬಯಿಗೆ ಹೋಗಿ ತನ್ನ ಲಂಡನ್ನಿನ ಗುರು, ಗೆಳೆಯ, ಆಪ್ತಬಂಧು ಸ್ವಾತಂತ್ರ್ಯವೀರ ಸಾವರ್ಕರ್​ರೊಂದಿಗೆ ಆತ್ಮೀಯವಾಗಿ ಒಂದು ದಿನ ಕಳೆದುಬಂದ.

ಅಯ್ಯರ್ ಆಕಸ್ಮಿಕ ಸಾವಿನ ಸುದ್ದಿ ತಿಳಿದಾಗ ಹೀಗೆ ಹೊರಹೊಮ್ಮಿತು ಸಾವರ್ಕರ್ ಉದ್ಗಾರ: ‘ಅಯ್ಯರ್ ಹಿಂದೂಗಳಲ್ಲಿ ಶ್ರೇಷ್ಠ ಹಿಂದೂ! ಅವನ ಮರಣದಿಂದ ಹಿಂದೂ ಜನಾಂಗವು ಹಿಂದೂ ಸಂಸ್ಕೃತಿಯ ಒಬ್ಬ ಉನ್ನತ ಶ್ರೇಣಿಯ ಪ್ರತಿನಿಧಿಯನ್ನು ಕಳೆದುಕೊಂಡಿದೆ… ಅಯ್ಯರ್ ಸಾವಿನಲ್ಲಿ ಹಿಂದೂ ಸಂಘಟನಾ ಕಾರ್ಯವು ಮದ್ರಾಸ್ ಪ್ರದೇಶದ ಒಬ್ಬ ಅತ್ಯುತ್ತಮ ಮುಂಚೂಣಿಯ ವೀರಾಗ್ರೇಸರನನ್ನು ಕಳೆದುಕೊಂಡಿದೆ… ಭಗವಂತನ ಸೈನಿಕನೆ! ನಿನಗೆ ಜೀವನದಲ್ಲಿ ಶಾಂತಿ ಇರಲಿಲ್ಲ. ಆದರೆ ಸಾವಿನಲ್ಲಿ ಆ ಶಾಂತಿ ನಿನಗೆ ದೊರೆತಿದೆ. ಹೇ ಹುತಾತ್ಮ! ಎಲ್ಲ ಹಿಂದೂಗಳ ಪರವಾಗಿ ನಿನಗೆ ನನ್ನ ಶತ ಶತ ನಮನಗಳು’.

Leave a Reply

Your email address will not be published. Required fields are marked *