ಬ್ರಿಟಿಷರ ಒಡೆದಾಳುವ ನೀತಿ ಮುಂದುವರಿಯಬೇಕೆ?

| ಮುಜಫರ್​ ಹುಸೇನ್​

ಕೃಷಿಪ್ರಧಾನವಾದ ಭಾರತದಲ್ಲಿ ಗೋವಿಗೆ ಇರುವಷ್ಟೇ ಮಹತ್ವ ಅದರ ಕರು ಹಾಗೂ ಎತ್ತಿಗೂ ಇದೆ. ಅಷ್ಟಕ್ಕೂ, ಭಾರತ ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವ ರಾಷ್ಟ್ರ. ಹಾಗಾಗಿ ಭಗವಂತನಿಂದ ನಿರ್ವಿುತವಾಗಿರುವ ಯಾವುದೇ ಜೀವಿಯನ್ನು ತಿಳಿವಳಿಕೆಯುಳ್ಳ ಸಭ್ಯ ಸಮಾಜ ತನ್ನ ಭೋಜನದ ಸಾಧನವಾಗಿಸಿಕೊಳ್ಳಲಾರದು. ಆದಾಗ್ಯೂ, ಆಯಾಯ ಧರ್ಮಗಳ ನಂಬಿಕೆ, ಭೌಗೋಳಿಕ ಕಾರಣಗಳಿಂದ ಮಾನವ ಸಮುದಾಯ ಈ ನಿಟ್ಟಿನಲ್ಲಿ ತನ್ನಷ್ಟಕ್ಕೆ ತಾನೇ ಕೆಲ ವಿನಾಯ್ತಿಗಳನ್ನು ಪಡೆದುಕೊಂಡಿತು. ಆದರೆ ಈ ವಿನಾಯ್ತಿ ಕಾನೂನನ್ನು ಉಲ್ಲಂಘಿಸಬಾರದಲ್ಲವೇ? ಸ್ವಾತಂತ್ರ್ಯಾನಂತರ ಭಾರತದ ವಿಶೇಷ ಸಂದರ್ಭ/ಸ್ಥಿತಿಗಳನ್ನು ಗಮನಿಸಿಯೇ ಮಾಂಸಾಹಾರಕ್ಕಾಗಿ ಪ್ರಾಣಿಗಳನ್ನು ವಧಿಸುವ ಸಂಬಂಧ ಸ್ಪಷ್ಟ ನಿಯಮ, ಕಾನೂನುಗಳನ್ನು ರೂಪಿಸಲಾಯಿತು. ಕಾಲಕ್ಕೆ ತಕ್ಕಂತೆ ಅವುಗಳಿಗೆ ಮಾರ್ಪಾಡನ್ನೂ ತರಲಾಯಿತು; ಮತ್ತೆ ಕೆಲ ಬಾರಿ ಹೊಸ ಕಾನೂನನ್ನು ಮಾಡಲಾಯಿತು.

ಭಾರತದಲ್ಲಿ ಗೋ ಪೂಜೆ ಹಾಗೂ ಗೋ ಸಂರಕ್ಷಣೆ ಪರಂಪರೆ ಮಾತ್ರವಲ್ಲ ಅದು ಧರ್ಮದ ಅವಿಭಾಜ್ಯ ಅಂಗವಾಗಿದೆ. ಕೃಷಿಪ್ರಧಾನವಾದ ನಮ್ಮ ದೇಶದಲ್ಲಿ ಎತ್ತು ರೈತನ ಸ್ನೇಹಿತನಾಗಿ ಕಾರ್ಯನಿರ್ವಹಿಸಿದರೆ, ಗೋವು ಹಾಲಿನ ಮೂಲಕ ಆರೋಗ್ಯವನ್ನೂ, ಕೋಟ್ಯಂತರ ರೈತರಿಗೆ ಆದಾಯದ ಮೂಲವನ್ನೂ ಒದಗಿಸಿದೆ. ಹಾಗಾಗಿಯೇ ಸಂವಿಧಾನವು, ಭಾರತದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಗೋ ಸಂಬಂಧಿ ಕಾನೂನು ಹಾಗೂ ನಿಯಮಗಳನ್ನು ರೂಪಿಸಿದೆ. ಈ ಪರಂಪರೆ ಸ್ವಾತಂತ್ರ್ಯ ಬಂದಬಳಿಕ ಸೃಷ್ಟಿಯಾದದ್ದೇನಲ್ಲ. ಗೋಹತ್ಯೆ ನಿಷೇಧದ ಪರಂಪರೆಯನ್ನು ಮೊಘಲ್ ಕಾಲದಿಂದ ಹಿಡಿದು ಇತ್ತೀಚಿನ ಪ್ರಜಾಪ್ರಭುತ್ವ ಸರ್ಕಾರಗಳ ಯುಗದವರೆಗೂ ಕಾಣಬಹುದಾಗಿದೆ.

ಒಮ್ಮೆ ಇತಿಹಾಸ ನೆನಪಿಸಿಕೊಳ್ಳಿ. ಬ್ರಿಟಿಷರ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಮೊದಲಬಾರಿ ಬೆಚ್ಚಿಬಿದ್ದಿದ್ದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ. ಗೋಮಾಂಸ ಬಳಿದ ಕಾಡತೂಸುಗಳನ್ನು ಭಾರತೀಯ ಯೋಧರಿಗೆ ನೀಡಲಾಗಿತ್ತು. ಆ ಯೋಧರು ಅದನ್ನು ಬಾಯಿಂದ ಕಚ್ಚಿ ಸ್ಪೋಟಿಸಬೇಕಾಗುತ್ತಿತ್ತು. ಭಾರತೀಯರ ಭಾವನೆಗಳೊಡನೆ, ಶ್ರದ್ಧೆಯ ವಿಷಯಗಳೊಡನೆ ಚೆಲ್ಲಾಟವಾಡಲೆಂದೇ ಬ್ರಿಟಿಷರು ಹೀಗೆ ಮಾಡಿದ್ದರು. ಈ ಸಂಗತಿ ಭಾರತೀಯ ಸಿಪಾಯಿಗಳಿಗೆ ಗೊತ್ತಾದಾಗ ಅವರು ಬ್ರಿಟಿಷರ ವಿರುದ್ಧ ಸಾಹಸಿಸಿಂಹಗಳಂತೆ ಸಿಡಿದೆದ್ದರು. ಅದರ ಪರಿಣಾಮ ಏನಾಯಿತು ಎಂಬುದನ್ನು ಪ್ರಜ್ಞಾವಂತ ಓದುಗರಿಗೆ ವಿವರಿಸಬೇಕಿಲ್ಲ.

ಅಂತೂ, ಭಾರತೀಯ ಸಿಪಾಯಿಗಳ ಬಂಡಾಯ ಶಮನಗೊಂಡ ಸ್ವಲ್ಪ ಸಮಯದ ಬಳಿಕ ಆಗಿನ ವೈಸರಾಯ್, ಮಹಾರಾಣಿ ವಿಕ್ಟೋರಿಯಾರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಗೋಹತ್ಯೆಯ ಮೇಲೆ ನಿಷೇಧ ಹೇರಬೇಕೇ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರವಾಗಿ ರಾಣಿ ವಿಕ್ಟೋರಿಯಾ ಏನು ಬರೆದಿದ್ದಾರೆ ಎಂಬುದನ್ನು ಖ್ಯಾತ ಇತಿಹಾಸಕಾರ ಧರ್ಮಪಾಲ್ ಪುಸ್ತಕದಲ್ಲಿ ಓದಬೇಕು. ರಾಣಿ ವಿಕ್ಟೋರಿಯಾ ಹೇಳುತ್ತಾರೆ: ‘ಗೋಹತ್ಯೆ ನಮ್ಮ ಬ್ರಿಟಿಷರ ಮೂಲಭೂತ ನೀತಿಗಳಲ್ಲಿ ಒಂದಾಗಿದೆ. ಒಂದು ಸಾವಿರ ವರ್ಷದ ಕಾಲ ಚರ್ಚ್​ನ ಪ್ರಭುತ್ವ/ಆಡಳಿತ ಸ್ಥಾಪಿಸುವ ನಿಟ್ಟಿನಲ್ಲಿ ವ್ಯಾಟಿಕನ್ ಕಾರ್ಯಸೂಚಿ ತಯಾರಿಸಿದ್ದು, ಈ ನಿಟ್ಟಿನಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಪ್ರತ್ಯೇಕ ಕಾರ್ಯಸೂಚಿ ನೀಡಿದೆ. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ಗಟ್ಟಿಗೊಳಿಸಲು ಗೋಹತ್ಯೆಯನ್ನು ಪ್ರಮುಖವಾಗಿ ಕ್ರಿಯಾನ್ವಿತಗೊಳಿಸಬೇಕಿದೆ ಎಂಬ ಆದೇಶವನ್ನು ವ್ಯಾಟಿಕನ್ ನೀಡಿದೆ. ಆದ್ದರಿಂದ ಗೋಹತ್ಯೆ ವಿಷಯದ ಬಗ್ಗೆ ಬ್ರಿಟಿಷರಾದ ನಮಗೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರ/ಹಕ್ಕು ಇಲ್ಲ. ಇದೇನಿದ್ದರೂ ನಮ್ಮ ಸೂಪರ್ ಪವರ್ ವ್ಯಾಟಿಕನ್ ಬಳಿ ಇದೆ. ಹಾಗಾಗಿ ನಾವು ಯಾವುದೇ ಸ್ಥಿತಿಯಲ್ಲಿ/ಸಂದರ್ಭದಲ್ಲಿ ಗೋಹತ್ಯೆಯ ವಿಷಯವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಹಿಂದೂ ಹಾಗೂ ಮುಸಲ್ಮಾನರನ್ನು ಇದೊಂದೇ ವಿಷಯದ ಮೇಲೆ ಪರಸ್ಪರ ಸಂಘರ್ಷಕ್ಕೆ ತೊಡಗಿಸಬಹುದು. ಆದ್ದರಿಂದ ಗೋಹತ್ಯೆಯನ್ನು ಮುಂದುವರಿಸಲೇಬೇಕಿದೆ’.

ನೋಡಿ, ಬ್ರಿಟಿಷರು ಎಂಥ ಮನೆಮುರುಕರು ಅಂತ ಗೊತ್ತಾಯ್ತಲ್ಲ. ಯಾವ ಕಾರಣಕ್ಕಾಗಿ ಅವರು ಗೋಹತ್ಯೆ ವಿಷಯವನ್ನು ಜೀವಂತವಾಗಿಟ್ಟು ಹೋದರು ಎಂದು ಅರ್ಥವಾಯ್ತಲ್ಲ… ಬ್ರಿಟಿಷರ ಆ ಉದ್ದೇಶ, ಗುರಿಯನ್ನು ಇಂದು ಭಾರತೀಯ ಬ್ರಿಟಿಷರೇ ಈಡೇರಿಸುತ್ತಿದ್ದಾರೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಎಂಥ ದುರವಸ್ಥೆ ನೋಡಿ. ದಶಕಗಳ ಕಾಲ ಹೋರಾಡಿ, ಲಕ್ಷಾಂತರ ಜನರ ಬಲಿದಾನ ನೀಡಿ ಬ್ರಿಟಿಷರನ್ನೇನೋ ಇಲ್ಲಿಂದ ಕಳುಹಿಸಿದೆವು. ಆದರೆ, ಅವರ ಗುಪ್ತ ಕಾರ್ಯಸೂಚಿ (ಹಿಡನ್ ಅಜೆಂಡಾ), ಚಿಂತನೆಗಳೆಲ್ಲ ಇಂದಿಗೂ ಯಥಾವತ್ತಾಗಿ ಚಾಚೂತಪ್ಪದೆ ಜಾರಿಗೆ ಬರುತ್ತಿವೆ! ಇಂದಿಗೂ ಕೋಮುಸಂಘರ್ಷ, ಕೋಮುಗಲಭೆಗಳಿಗೆ ಗೋಹತ್ಯೆಯೂ ಪ್ರಮುಖ ಕಾರಣವಾಗಿದೆ.

ಮಾತುಮಾತಿಗೂ ಗಾಂಧೀಜಿ ಹೆಸರು ಹೇಳಿ ಅರ್ಧಶತಮಾನಗಳ ಅಧಿಕಾರ ಸವಿದ ಕಾಂಗ್ರೆಸ್ಸಿಗರೂ ಆ ಗಾಂಧಿಯ ಒಂದು ಆಸೆಯನ್ನೂ ಪೂರೈಸಲಿಲ್ಲ. ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ಸನ್ನೇ ವಿಸರ್ಜಿಸಿಬಿಡಿ ಎಂದಿದ್ದರು ಗಾಂಧಿ. ಗೋಹತ್ಯೆ ನಿಷೇಧ ಮಾಡಿ, ಗೋಸಂತತಿಯನ್ನು ಕಾಪಾಡಬೇಕು ಎಂದು ಕಳಕಳಿಯಿಂದ ಹೇಳಿದರೂ ಪ್ರಯೋಜನವಾಗಲಿಲ್ಲ. ಸ್ವಾತಂತ್ರ್ಯಪ್ರಾಪ್ತಿಯ 70 ವರ್ಷಗಳ ನಂತರವೂ ಗೋಹತ್ಯೆಯ ಕಳಂಕ ನಿವಾರಿಸಲಾಗಿಲ್ಲ. ಆರ್ಥಿಕತೆ, ಆರೋಗ್ಯ, ನಂಬಿಕೆ, ಶ್ರದ್ಧೆಗಳ ಆಗರವಾಗಿರುವ ಗೋವನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಗೋಹತ್ಯೆ ನಿಷೇಧಕ್ಕಾಗಿ ರಾಷ್ಟ್ರದಲ್ಲಿ ಎಷ್ಟೊಂದು ಆಂದೋಲನಗಳು ನಡೆದವಾದರೂ ಫಲಿತಾಂಶ ಮಾತ್ರ ತೃಪ್ತಿಕರವಾಗಿಲ್ಲ. ಹಾಗಾಗಿ ಅಹಿಂಸಾವಾದಿ ಹಾಗೂ ದೇಶಭಕ್ತ ಜನರು ಪದೇಪದೆ ಪ್ರತಿಭಟನಾ ಮಾರ್ಗಕ್ಕಿಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಗೋಹತ್ಯೆ ನಿಷೇಧವಾಗಬೇಕೆಂಬುದು ಬರೀ ಜನರ ಆಶಯವಲ್ಲ. ಹಲವು ಸರ್ಕಾರಗಳು ಇದಕ್ಕಾಗಿಯೇ ಕಾನೂನು ಮಾಡಿವೆ. ನ್ಯಾಯಾಲಯಗಳು ಹಲವು ಬಾರಿ ತೀರ್ಪಿತ್ತಿವೆ. ನಮ್ಮ ಸವೋಚ್ಚ ನ್ಯಾಯಾಲಯವೇ ಅನೇಕ ಬಾರಿ ಈ ವಿಷಯದ ಬಗ್ಗೆ ತೀರ್ಪು ನೀಡಿದೆ. 1997ರಲ್ಲಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಗೋಹತ್ಯೆಯ ಮೇಲೆ ಹಲವು ನಿಷೇಧಗಳನ್ನು ಹೇರಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೋಟಿನ ಆಸೆಗಾಗಿ ಈ ನಿರ್ಣಯವನ್ನು ಜಾರಿಗೆ ತರುವ ಮನಸ್ಸು ಮಾಡಲಿಲ್ಲ. ಇದರ ಪರಿಣಾಮವಾಗಿ ಅಹಿಂಸಾವಾದಿಗಳ ಹೋರಾಟ ವ್ಯರ್ಥವಾಗುತ್ತಿದ್ದರೆ, ಇನ್ನೊಂದೆಡೆ ಕೆಲವು ಶಕ್ತಿಗಳು ಗೋಹತ್ಯೆಯ ಮುಖೇನ ಕೋಮುಸಾಮರಸ್ಯ ಕದಡುತ್ತಿವೆ. ಸುಪ್ರೀಂ ಕೋರ್ಟ್ ಗೋಹತ್ಯೆಗೆ ನಿಷೇಧ ಹೇರಿದ್ದು, ವಯಸ್ಸಾದ ಎತ್ತುಗಳ ವಧೆಗೆ ಕೆಲ ನಿಬಂಧನೆಗಳನ್ನು ವಿಧಿಸಿದೆ. ಕೆಲ ಶಕ್ತಿಗಳು ಈ ಆದೇಶವನ್ನು ಉಲ್ಲಂಘಿಸಿದಾಗ ಸಮಾಜದಲ್ಲಿ ಉದ್ವಿಗ್ನತೆ ತಲೆದೋರುತ್ತದೆ. ಗೋಹತ್ಯೆಯ ಮೇಲೆ ನಿಷೇಧ ಹೇರಿರುವಾಗಲೂ ಆ ಕೃತ್ಯ ಎಸಗಿದರೆ ಅದು ಕಾನೂನಿಗೆ ವಿರುದ್ಧವಾದದ್ದು. ಹಾಗಾಗಿ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ.

ಎರಡು ವರ್ಷಗಳ ಹಿಂದೆ ಕೋಲ್ಕತ ಉಚ್ಚ ನ್ಯಾಯಾಲಯವೂ ಗೋಹತ್ಯೆ ನಿಷೇಧಿಸಿ ನೀಡಿದ ತೀರ್ಪು ಗಮನ ಸೆಳೆಯುವಂಥದ್ದು. ಕಳೆದ 30 ವರ್ಷಗಳಿಂದ ಗೋವುಗಳ ಸಂರಕ್ಷಣೆಗಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಆದಿತ್ಯ ಕಾನೋಡಿಯಾ ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಗೋ ರಕ್ಷಣೆಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಕೋಲ್ಕತ ಹೈಕೋರ್ಟ್​ನ ವಿಭಾಗೀಯ ಪೀಠದ ನ್ಯಾಯಾಧೀಶರಾದ ಜೆ.ಎನ್.ಪಟೇಲ್ ಹಾಗೂ ಅಸೀಮ್ ರಾಯ್ ನೀಡಿರುವ ತೀರ್ಪಿನ ಪ್ರಮುಖಾಂಶಗಳನ್ನು ಉಲ್ಲೇಖಿಸಿ ಕಾನೋಡಿಯಾ ಅವರು ಕರಪತ್ರ ಹಾಗೂ ಇತರೆ ಪ್ರಚಾರಸಾಮಗ್ರಿ ಮುದ್ರಿಸಿದ್ದು ಜನರಿಗೆ ಅದನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸೌದಿ ಅರೇಬಿಯಾದ ಸರ್ಕಾರವೂ ಬಕ್ರೀದ್ ದಿನ ಕೊಡುವ ಬಲಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನೇ ರೂಪಿಸಿದೆ. ಅಲ್ಲಿ ಕುರಿ, ಆಡು ಮತ್ತು ಒಂಟೆಗಳನ್ನು ಹೆಚ್ಚಾಗಿ ಬಲಿಕೊಡಲಾಗುತ್ತದೆ. ಸಣ್ಣ ಪ್ರಾಣಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯಲು ಸುಲಭವಾಗಿರುವುದರಿಂದ ಹೆಚ್ಚಾಗಿ ಆಡು, ಕುರಿಗಳನ್ನೇ ಬಲಿ ಕೊಡಲಾಗುತ್ತದೆ. ಸೌದಿ ಸರ್ಕಾರ ಮೆಕ್ಕಾದಿಂದ ಒಂದಿಷ್ಟು ಅಂತರದಲ್ಲೇ ಬಲಿಗಾಗಿ ಪ್ರತ್ಯೇಕ ಸ್ಥಳವೊಂದನ್ನು ನಿಗದಿಪಡಿಸಿದೆ. ಗೋವುಗಳನ್ನು ಬಲಿ ನೀಡಲು ಷರಿಯತ್​ನ ಒಪ್ಪಿಗೆ ಇದೆಯಾದರೂ ಕುರಿ, ಆಡಿನಂಥ ಪ್ರಾಣಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಅಲ್ಲದೆ ಗೋವು ಸೌದಿ ಅರೇಬಿಯಾದ ಪ್ರಾಣಿಯಲ್ಲವಾದ್ದರಿಂದ ಅಲ್ಲಿ ಗೋವನ್ನು ಬಲಿ ನೀಡಲಾಗುವುದಿಲ್ಲ. ಬಕ್ರೀದ್ ದಿನ ಭಾರತದಲ್ಲಿ ಕುರಿ, ಆಡಿನ ಜೊತೆ ಅಲ್ಲಲ್ಲಿ ಗೋವನ್ನೂ ಬಲಿನೀಡುವ ಪರಿಪಾಠವಿದೆ. ಆದರೆ ಭಾರತದಲ್ಲಿ ಗೋವು ಪೂಜನೀಯವಾಗಿದೆ ಅಲ್ಲದೆ ನಮ್ಮ ಕೃಷಿ ವ್ಯವಸ್ಥೆಗೆ ಪ್ರಧಾನ ಆಧಾರವೂ ಹೌದು. ಮುಖ್ಯವಾಗಿ, ಬಲಿನೀಡುವವರಿಗೆ ಪರ್ಯಾಯಗಳೂ ಇವೆ. ಷರಿಯತ್ ಕೂಡ ಗೋ ಬಲಿಗೆ ಪ್ರಾಧಾನ್ಯ ನೀಡಿಲ್ಲ. ಹಾಗಾಗಿ, ಗೋ ಬಲಿಗೆ ಪಟ್ಟುಹಿಡಿಯದೆ ವಿವೇಕಯುತವಾಗಿ ವರ್ತಿಸಿದರೆ ಮಾನವೀಯತೆ ಹಾಗೂ ರಾಷ್ಟ್ರೀಯತೆ ನಿಟ್ಟಿನಲ್ಲಿ ಉಚಿತವೆನಿಸುತ್ತದೆ.

ಭಾರತದ ಮುಸಲ್ಮಾನರು ರಾಷ್ಟ್ರಕ್ಕೆ ಪ್ರಾಮಾಣಿಕವಾಗಿಯೂ ಇದ್ದಾರೆ, ಕಾನೂನಿಗೆ ಕಟಿಬದ್ಧವಾಗಿಯೂ ಇದ್ದಾರೆ. ಹಾಗಾಗಿ ದೇಶದ ಏಕತೆ, ಅಖಂಡತೆ ಧಕ್ಕೆ ತರುವಂಥ ಕೆಲಸವನ್ನು ಅವರು ಮಾಡಬಯಸುವುದಿಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೆ ಎರಡೂ ಕಡೆಯವರಿಗೆ ತಮ್ಮ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಆದರೆ, ನ್ಯಾಯಾಲಯ ತೀರ್ಪಿತ್ತ ಮೇಲೆ ತಲೆಬಾಗಿ ಅದನ್ನು ಒಪ್ಪಿಕೊಳ್ಳಲೇಬೇಕು. ಭಾರತದ ಮುಸ್ಲಿಮ್ ಸಮಾಜ ಹಾಗೇ ಮಾಡುತ್ತಿದೆ. ಕೆಲವರು ಶಬ್ದಗಳ ಆಟವಾಡಿ ಏನೋ ಹೇಳಲು ಹೊರಟರೆ ಅದಕ್ಕೆ ಮುಸಲ್ಮಾನರು ಹೊಣೆಯಾಗರು. ಗೋವಿನ ವಿಷಯದಲ್ಲಿ ಸುಪ್ರೀಂ ಕೋರ್ಟ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಹಾಗಾಗಿ ಭಾರತದ ಮುಸ್ಲಿಮರು ಅದನ್ನು ಒಪ್ಪಿಕೊಳ್ಳದಿರಲಾಗದು. ನ್ಯಾಯಾಂಗ ತನ್ನ ತೀರ್ಪನ್ನು ನೀಡಿಯಾಗಿದೆ. ಸರ್ಕಾರ, ಆಳುಗರು ಅದನ್ನು ಜಾರಿಗೆ ತರುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಂಡು ಹೋಗಬೇಕಿದೆ. ಆ ಕೆಲಸ ಮಾಡುವ ವಿವೇಕ ಆಳುಗರಲ್ಲಿ ಉದಿಸಲಿ ಎಂದು ಆಶಿಸಬಹುದಷ್ಟೆ.

Leave a Reply

Your email address will not be published. Required fields are marked *