More

    ಕಾಂಗ್ರೆಸ್​ನಲ್ಲಿ ತಾಳಿದವಳು ಬಾಳಿಯಾಳು

    ಕಾಂಗ್ರೆಸ್​ನಲ್ಲಿ ತಾಳಿದವಳು ಬಾಳಿಯಾಳುತನ್ನಣ್ಣ ಹಿಂದೆ ಸರಿದರೆ ಕಾಂಗ್ರೆಸ್ ನಾಯಕತ್ವ ತಮ್ಮ ಕುಟುಂಬದಲ್ಲೇ ಉಳಿಯಬೇಕು ಎನ್ನುವುದನ್ನು ಪ್ರಿಯಾಂಕಾ ಹೇಳುವ ರೀತಿ ಸ್ವಾರಸ್ಯಕರವಾಗಿದೆ. ಪಾಂಡವರು ಮತ್ತು ಶ್ರೀರಾಮನನ್ನು ಉದಾಹರಣೆಯಾಗಿ ನೀಡುತ್ತಾ ಪರಿವಾರವಾದ ಸಮರ್ಥನೀಯ, ಆ ಪ್ರಕಾರ ತಮ್ಮ ಪರಿವಾರವಾದವನ್ನೂ ಮುಂದುವರಿಸಬಹುದು ಎಂದು ಸೂಚಿಸುತ್ತಾರೆ!

    ರಾಹುಲ್ ಗಾಂಧಿಯವರಲ್ಲಿ ನಾಯಕತ್ವದ ಗುಣಗಳಿಲ್ಲ, ಪ್ರಧಾನಮಂತ್ರಿಯ ಜವಾಬ್ದಾರಿಗೆ ಅವರು ಯೋಗ್ಯರಲ್ಲ ಎನ್ನುವುದು ದಶಕಕ್ಕೂ ಹಿಂದೆಯೇ ಕಾಂಗ್ರೆಸ್ ಮತ್ತದರ ಯುಪಿಎ ಸಹಯೋಗಿಗಳಿಗೆ ಅರ್ಥವಾಗಿಹೋಗಿತ್ತು. 2011ರಲ್ಲಿ ಭ್ರಷ್ಟಾಚಾರ-ವಿರೋಧಿ ಆಂದೋಲನ ತಾರಕದಲ್ಲಿದ್ದಾಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೆಳಗಿಳಿದರೆ ಅವರ ಸ್ಥಾನವನ್ನು ತುಂಬಲು ಸೂಚಿತವಾದ ಹೆಸರುಗಳು ಪ್ರಣಬ್ ಮುಖರ್ಜಿ ಮತ್ತು ಚಿದಂಬರಂ ಅವರದಾಗಿದ್ದವು. ನಲವತ್ತೊಂದರ ರಾಹುಲ್ ಗಾಂಧಿಯವರನ್ನು ಆ ಸ್ಥಾನಕ್ಕೆ ಸೂಕ್ತವೆಂದು ಯಾರೂ ಪರಿಗಣಿಸಲಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸೋನಿಯಾ ಗಾಂಧಿ ದಾರುಣವಾಗಿ ಸೋತಿದ್ದರು. 2014ರ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಮೋದಿ ನೇತೃತ್ವದ ಬಿಜೆಪಿಗೆ ಸಮರ್ಥ ಪ್ರತಿಸ್ಪರ್ಧೆ ನೀಡಲಾರರು ಎನ್ನುವುದನ್ನು ಎಲ್ಲರೂ ಅರಿತರು. ಅದನ್ನು ಗುರುತಿಸಲಾಗದ ಸೋನಿಯಾ ಗಾಂಧಿ ಮಗನನ್ನೇ ಮುಂದಿಟ್ಟುಕೊಂಡು ಕಣಕ್ಕಿಳಿದರು. ಆ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಹೆಸರು ಸೂಚಿತವಾದರೂ ಅದನ್ನು ತಣ್ಣಗೆ ಹಿಂದಕ್ಕೆ ಸರಿಸಲಾಯಿತು. ಅಂದು ಕಾಂಗ್ರೆಸ್​ನ ನೇತೃತ್ವದಲ್ಲೇ ತಾವು ಚುನಾವಣಾ ಕಣಕ್ಕಿಳಿಯಬೇಕಾದ ಅನಿವಾರ್ಯತೆಯ ಅರಿವಿದ್ದ ಇತರ ಪಕ್ಷಗಳು ಸೋನಿಯಾರ ಮಾತುಗಳಿಗೆ ಬಹಿರಂಗ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ಮತದಾರರು ನೀಡಿದ ಪರಾಭವ ಯುಪಿಎ ಸಹಯೋಗಿಗಳಿಗೆ ದನಿ ಕೊಟ್ಟಿತು. ಹೀಗಾಗಿಯೇ 2019ರ ಚುನಾವಣೆ ಸಮಯದಲ್ಲಿ ‘ಯುಪಿಎ ಸಹಯೋಗಿಗಳು ಬಯಸಿದರೆ ಪ್ರಧಾನಮಂತ್ರಿಯಾಗಲು ತಯಾರಿದ್ದೇನೆ’ ಎಂದು ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹೇಳಿಕೊಂಡರೂ ಬೆಲೆ ಸಿಗಲಿಲ್ಲ. ಮಮತಾ ಬ್ಯಾನರ್ಜಿ, ಶರದ್ ಪವಾರ್ ಅಷ್ಟೇಕೆ ಅರವಿಂದ ಕೇಜ್ರಿವಾಲ್ ಸಹಾ ಪ್ರಧಾನಮಂತ್ರಿಯಾಗುವ ಹಕ್ಕು ರಾಹುಲ್​ಗಿಂತಲೂ ತಮಗೆ ಹೆಚ್ಚಾಗಿದೆ ಎಂದು ಭಾವಿಸಿದರು, ಹಾಗೆ ಹೇಳತೊಡಗಿದರು ಕೂಡಾ.

    ನಂತರದ ನಾಲ್ಕು ವರ್ಷಗಳಲ್ಲಿ ರಾಹುಲ್ ಅದೃಷ್ಟರೇಖೆ ಮತ್ತಷ್ಟು ಕೆಳಗಿಳಿದಿದೆ. ಅದು ಢಾಳಾಗಿ ವ್ಯಕ್ತವಾದದ್ದು ಮಾರ್ಚ್ 26ರಂದು. ಮಾನಹಾನಿ ಮೊಕದ್ದಮೆಯಲ್ಲಿ ದೋಷಿಯೆಂದು ಪರಿಗಣಿತವಾಗಿ ನ್ಯಾಯಾಲಯದಿಂದ ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾದ ರಾಹುಲ್ ಗಾಂಧಿ ಪರವಾಗಿ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ಅಂದು ರಾಜಘಾಟ್​ನಲ್ಲಿ ಕಾರ್ಯಕ್ರಮ ಆಯೋಜಿಸಿತಷ್ಟೆ. ಆದರೆ ಅಲ್ಲಿ ರಾಹುಲ್ ಇರಲಿಲ್ಲ. ಪ್ರಮುಖವಾಗಿ ಕಾಣಿಸಿಕೊಂಡದ್ದು ಮತ್ತು ‘ಪ್ರಖರ’ ಭಾಷಣ ಬಿಗಿದದ್ದು ಪ್ರಿಯಾಂಕಾ ಗಾಂಧಿ.

    ಅದೇ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಜರುಗಿದ ಔತಣಕೂಟ-ಸಭೆಯಲ್ಲಿ ಹದಿನೆಂಟು ಪಕ್ಷಗಳ ನೇತಾರರು/ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲಿ ರಾಹುಲ್ ಗಾಂಧಿಯವರೂ ಹಾಜರಿದ್ದರು. ಸಭೆಯಲ್ಲಿ ಅವರಿಗೆ ಸಿಕ್ಕಿದ್ದು ಹರಕುಬಾಯಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಇನ್ನಷ್ಟು ಅನಾಹುತ ಖಂಡಿತ ಎಂಬ ಎಚ್ಚರಿಕೆಭರಿತ ಉಪದೇಶ. ಬಹುಶಃ ಕಾಂಗ್ರೆಸ್ ಯುವರಾಜನಿಗೆ ಬಿದ್ದ ಮೊದಲ ಸಾಮೂಹಿಕ ಮಾರಿನ ತಪರಾಕಿ ಇದು.

    ಸೋನಿಯಾ ಗಾಂಧಿಯವರಿಗೂ ಆಘಾತ ಎದುರಾಯಿತು. ಯುಪಿಎ ಪುನಶ್ಚೇತನ ಕುರಿತಾಗಿ ಚರ್ಚೆ ಆರಂಭವಾದಾಗ ಅದರ ನಾಯಕತ್ವ ಸೋನಿಯಾ ಅವರದೇ ಯಾಕೆ ಇರಬೇಕು ಎಂಬ ಪ್ರಶ್ನೆ ಬಂತು. ಶರದ್ ಪವಾರ್, ಮಮತಾ ಬ್ಯಾನರ್ಜಿ ಹೆಸರುಗಳು ಸೂಚಿತವಾದವು.

    ಮರುದಿನ ತಾಯಿ, ಮಗ, ಮಗಳು ಮತ್ತು ದಕ್ಷಿಣದ ಇಬ್ಬರು ಕಾಂಗ್ರೆಸ್ ಪ್ರಮುಖರು ಸೇರಿದ್ದ ಬ್ರೇಕ್​ಫಾಸ್ಟ್ ಮೀಟಿಂಗ್​ನಲ್ಲಿ ಎಲ್ಲಾ ಕಾಂಗ್ರೆಸ್ ಸಂಸತ್ ಸದಸ್ಯರು ರಾಜೀನಾಮೆ ನೀಡಬೇಕು, ಹಾಗೆಯೇ ಮಾಡುವಂತೆ ಇತರ ವಿರೋಧಪಕ್ಷಗಳನ್ನು ಮನವೊಲಿಸಬೇಕು ಎಂದು ನಿರ್ಧರಿಸಲಾಯಿತು. ಆದರೆ ರಾಹುಲ್ ಗಾಂಧಿ ಪರವಾಗಿ ತಮ್ಮ ಲೋಕಸಭಾ ಸ್ಥಾನಗಳನ್ನು ಬಲಿಕೊಡಲು ಯಾವುದೇ ವಿರೋಧಪಕ್ಷ ತಯಾರಿರಲಿಲ್ಲ.

    ನಂತರದ ದಿನಗಳಲ್ಲಿ ಕಾಂಗ್ರೆಸ್​ಗಾದ ಇನ್ನೊಂದು ದೊಡ್ಡ ನಿರಾಸೆಯೆಂದರೆ ರಾಹುಲ್ ಪರವಾಗಿ ಬೀದಿಗಿಳಿಯಲು ಜನತೆಯೂ ತಯಾರಿಲ್ಲ ಎನ್ನುವುದು. ಇದನ್ನಂತೂ ಪ್ರಮುಖ ನೇತಾರರೊಬ್ಬರೇ ಹೇಳಿ ಅಲವತ್ತುಕೊಂಡರು. ಇದರ ಜತೆಗೆ, ವೀರ ಸಾವರ್ಕರ್ ಕುರಿತ ಅಗೌರವಯುತ ಮಾತುಗಳನ್ನು ಸಹಿಸುವುದಿಲ್ಲ ಎಂದು ಶಿವಸೇನೆ ಉದ್ಧವ್ ಬಣದ ಸಂಜಯ್ ರಾವತ್ ಕಾಂಗ್ರೆಸ್ ಕಾರ್ಯಾಲಯದಲ್ಲೇ ರಾಹುಲ್ ಗಾಂಧಿಯವರ ಮುಖಕ್ಕೇ ಹೇಳಿದರು. ಅಂತಹದೇ ಅಭಿಪ್ರಾಯ ಶರದ್ ಪವಾರ್​ರಿಂದಲೂ ಬಂದಿದೆ. ಅಂದರೆ ಇಂದು ಯುಪಿಎ ಸಹಯೋಗಿಗಳಲ್ಲಿ ಅಥವಾ ಮೋದಿ-ವಿರೋಧಿ ಪಾಳೆಯದಲ್ಲಿ ರಾಹುಲ್ ಗಾಂಧಿಯವರಿಗೆ ಬೆಲೆಯಿಲ್ಲ! ಅವರನ್ನು ಬೆಂಬಲಿಸಿದ ಸೋನಿಯಾ ಗಾಂಧಿ ಸಹ ತಮಗಿದ್ದ ಗೌರವ, ಸ್ಥಾನವನ್ನು ಕಳೆದುಕೊಂಡಿದ್ದಾರೆ, ಯುಪಿಎ ನಾಯಕತ್ವ ಅವರ ಕೈತಪ್ಪಲಿದೆ.

    ಹಾಗಿದ್ದರೆ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಏನು?: ಮಗನನ್ನು ಮತ್ತೆ ಮತ್ತೆ ಲಾಂಚ್ ಮಾಡುವುದು ವ್ಯರ್ಥ, ಅದು ಸಂಪೂರ್ಣ ಸೋಲಿನಲ್ಲಿ ಅಂತ್ಯಗೊಳ್ಳುವುದು ನಿಶ್ಚಿತ ಎಂಬುದನ್ನು ಕೊನೆಗೂ ಸೋನಿಯಾ ಗಾಂಧಿಯವರು ಗುರುತಿಸಿದಂತೆ ಕಾಣುತ್ತಿದೆ. ಇದು ವ್ಯಕ್ತವಾಗಿದ್ದು ರಾಜಘಾಟ್ ಕಾರ್ಯಕ್ರಮದಲ್ಲಿ ರಾಹುಲ್ ಅನುಪಸ್ಥಿತಿಯಲ್ಲಿ ಮತ್ತು ಪ್ರಿಯಾಂಕ ಗಾಂಧಿಯವರ ಭರ್ಜರಿ ‘ಲಾಂಚ್’ನಲ್ಲಿ.

    ರಾಜಕೀಯಕ್ಕೆ ಕಾಲಿಡುವ ಇರಾದೆ ಪ್ರಿಯಾಂಕಾಗೆ ಹಿಂದೆ ಇರಲಿಲ್ಲವೆಂದಲ್ಲ. ಆದರೆ ಅವರ ಪ್ರತಿಯೊಂದು ಪ್ರಯತ್ನಕ್ಕೂ ಸೋನಿಯಾರಿಂದ ತಡೆ ಬಿದ್ದಿತ್ತು. ಎಷ್ಟರಮಟ್ಟಿಗೆ ಅಂದರೆ ಪ್ರಿಯಾಂಕಾರನ್ನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಕಮಲನಾಥ್ ಹೇಳಿದಾಗ ಅದನ್ನು ವಿರೋಧಿಸಿ ಅವರ ಬಾಯಿ ಮುಚ್ಚಿಸುವಷ್ಟು! ‘ಲಡ್ಕಿ ಹ್ಞೂಂ, ಲಡ್ ಸಕ್ತೀ ಹ್ಞೂಂ’ ಎಂದು ಪ್ರಿಯಾಂಕಾ ಗಾಂಧಿ ಹೇಳಿಕೊಂಡರೂ ಮೋದಿ ವಿರುದ್ಧ ಅಖಾಡಕ್ಕಿಳಿಯುವ ಅವಕಾಶ ಅವರಿಗೆ ಸಿಗಲೇ ಇಲ್ಲ. ಸಿಕ್ಕಿದ್ದು ಆಗೊಮ್ಮೆ ಈಗೊಮ್ಮೆ ಅಣ್ಣನ ಹಿಂದೆ ನಿಂತು ಜಾಲರಾ ಬಾರಿಸುವುದಷ್ಟೇ. ಆದರೆ ಅವರು ತಾಳ್ಮೆಯಿಂದ ಕಾದರು. ಮೌನವಾಗಿ ಎಲ್ಲವನ್ನೂ ಗಮನಿಸುವ ಹೆಣ್ಣು ಬಹಳ ಜಾಣೆಯಾಗಿರುತ್ತಾಳೆ. ಸನ್ನಿವೇಶ ತನಗನುಕೂಲವಾಗಿ ಒದಗಿಬಂದಾಗ ಆಕೆ ನೀಡುವ ಹೊಡೆತ ನಿರ್ಣಾಯಕವಾಗಿರುತ್ತದೆ. ರಾಹುಲ್ ಅಂತಿಮ ವೈಫಲ್ಯದ ದಿನ ದೂರವಿಲ್ಲ, ಅದು ತಾಯಿಯ ಅರಿವು ತಟ್ಟದಿರುವುದಿಲ್ಲ ಎನ್ನುವುದು ಪ್ರಿಯಾಂಕಾಗೆ ತಿಳಿದೇ ಇತ್ತು. ಅವರ ನಿರೀಕ್ಷೆಗಳು ಇಂದು ಫಲ ನೀಡುತ್ತಿವೆ. ಹೀಗೆ ಸಿಕ್ಕಿದ ಅವಕಾಶವನ್ನು ಪ್ರಿಯಾಂಕಾ ಗಾಂಧಿ ಹೇಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ?

    ರಾಜಘಾಟ್​ನಲ್ಲಿ ಅವರು ಆಡಿದ ಮಾತುಗಳ ಕೆಲವು ಅಂಶಗಳು ಗಮನ ಸೆಳೆಯುತ್ತವೆ. ರಾಹುಲ್ ಗಾಂಧಿ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸುವ ಪರಿಣಾಮಕಾರಿ ಪ್ರಯತ್ನದಂತೆ ಕಂಡ ಅವರ ಮಾತುಗಳಲ್ಲಿ ತನ್ನಣ್ಣನ ವ್ಯಕ್ತಿತ್ವದ ನಕಾರಾತ್ಮಕ ಮುಖದತ್ತ ಜನರ ಗಮನ ತಿರುಗಿಸುವ ಪ್ರಯತ್ನವೂ ಸ್ಪಷ್ಟವಾಗಿ ಕಾಣುತ್ತದೆ. ರಾಹುಲ್​ರನ್ನು ‘ಪಪ್ಪು’ ಎಂದು ಕರೆಯುವುದರ ಬಗ್ಗೆ ಅಸಮಾಧಾನ, ಅಸಮ್ಮತಿ ವ್ಯಕ್ತಪಡಿಸಿದ ಪ್ರಿಯಾಂಕಾ ತಮ್ಮ ನಿಲುವಿಗೆ ಸಮರ್ಥನೆಯಾಗಿ ಹೇಳಿದ್ದು ಹಾರ್ವರ್ಡ್ ಮತ್ತು ಕೇಂಬ್ರಿಜ್​ನಲ್ಲಿ ಪದವಿ ಗಳಿಸಿದ ರಾಹುಲ್ ಪಪ್ಪು ಆಗಿರಲು ಸಾಧ್ಯವಿಲ್ಲ ಎಂದು. ಮೇಲ್ನೋಟಕ್ಕೆ ಈ ಮಾತು ಸಮರ್ಥನೆ ಆಗಬಹುದು. ಆದರೆ ಹಾರ್ವರ್ಡ್ ಮತ್ತು ಕೇಂಬ್ರಿಜ್​ನಲ್ಲಿ ರಾಹುಲ್ ಗಾಂಧಿ ಅಭ್ಯಾಸ ಮಾಡಿದ್ದರ ಬಗ್ಗೆ ಅಥವಾ ಆರಂಭಿಸಿದ ಅಭ್ಯಾಸವನ್ನು ಪೂರ್ಣಗೊಳಿಸಿದ್ದರ ಬಗ್ಗೆ ಪ್ರಶ್ನೆಗಳು ಎದ್ದದ್ದುಂಟು. ಹೀಗಾಗಿ ತನ್ನಣ್ಣ ಪಪ್ಪು ಅಲ್ಲ ಎಂದು ಹೇಳುತ್ತಲೇ ಅವರ ವಿದ್ಯಾಭ್ಯಾಸದ ಬಗ್ಗೆ ಜನತೆಯಲ್ಲಿ ಮತ್ತೆ ಪ್ರಶ್ನೆಗಳನ್ನು ಪ್ರಿಯಾಂಕಾ ಉದ್ದೀಪಿಸಿದ್ದಾರೆ.

    ರಾಹುಲ್ ಗಾಂಧಿ ಪ್ರೀತಿಯನ್ನು ಹಂಚುತ್ತಾರೆ ಎಂದು ಹೇಳಿ ಅದಕ್ಕೆ ಉದಾಹರಣೆಯಾಗಿ ಲೋಕಸಭೆಯಲ್ಲಿ ಪ್ರಧಾನಮಂತ್ರಿ ಮೋದಿಯವರನ್ನು ಆಲಿಂಗಿಸಿಕೊಂಡಿದ್ದನ್ನು ಪ್ರಿಯಾಂಕಾ ನೆನಪು ಮಾಡುತ್ತಾರೆ. ರಾಹುಲ್​ರ ಆ ನಡವಳಿಕೆ ಲೋಕಸಭೆಯ ಶಿಷ್ಟಾಚಾರಕ್ಕೆ ವಿರುದ್ಧವಾಗಿತ್ತು. ಅಷ್ಟೇ ಅಲ್ಲ, ಸ್ಥಾನಕ್ಕೆ ಹಿಂತಿರುಗಿದ ರಾಹುಲ್ ಮೋದಿಯವರತ್ತ ಕಣ್ಣು ಹೊಡೆದರು! ಲೋಕಸಭೆಯನ್ನು ಒಂದು ಬೀದಿನಾಟಕದ ರಂಗಸ್ಥಳವಾಗಿಸುವ ಈ ಕ್ರಮವನ್ನು ಪ್ರಿಯಾಂಕಾ ಈಗ ನೆನಪು ಮಾಡುತ್ತಿರುವುದು ಯಾಕೆ? ತನ್ನಣ್ಣ ಹಿಂದೆ ಸರಿದರೆ ಕಾಂಗ್ರೆಸ್ ನಾಯಕತ್ವ ತಮ್ಮ ಕುಟುಂಬದಲ್ಲೇ ಉಳಿಯಬೇಕು ಎನ್ನುವುದನ್ನು ಪ್ರಿಯಾಂಕಾ ಹೇಳುವ ರೀತಿ ಸ್ವಾರಸ್ಯಕರವಾಗಿದೆ. ಪಾಂಡವರು ಮತ್ತು ಶ್ರೀರಾಮನನ್ನು ಉದಾಹರಣೆಯಾಗಿ ನೀಡುತ್ತಾ ಪರಿವಾರವಾದ ಸಮರ್ಥನೀಯ, ಆ ಪ್ರಕಾರ ತಮ್ಮ ಪರಿವಾರವಾದವನ್ನೂ ಮುಂದುವರಿಸಬಹುದು ಎಂದು ಸೂಚಿಸುತ್ತಾರೆ! ಅಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಮತ್ತದು ಪ್ರಶ್ನಾತೀತ ಎಂಬ ಸೂಚನೆಯನ್ನು ಪ್ರಿಯಾಂಕಾ ನೀಡಿದ್ದಾರೆ.

    ಕೊನೆಯದಾಗಿ, ರಾಹುಲ್​ಗಿಂತ ಪ್ರಿಯಾಂಕಾ ತಾನು ವಿವೇಕಿ ಎನ್ನುವುದನ್ನು ಅಥವಾ ಅಣ್ಣನ ತಪ್ಪಿನಿಂದ ತಾನು ಪಾಠ ಕಲಿತಿದ್ದೇನೆ ಎನ್ನುವುದನ್ನು ವ್ಯಕ್ತಪಡಿಸುವ ಬಗ್ಗೆ ಮೆಚ್ಚುಗೆಯಾಗದಿರದು. ಪ್ರಧಾನಮಂತ್ರಿ ಸ್ಥಾನ ನೆಹರು-ಗಾಂಧಿ ಪರಿವಾರದ ಜನ್ಮಸಿದ್ಧ ಹಕ್ಕು ಎಂದು ರಾಹುಲ್ ಗಾಂಧಿ ನಂಬಿದ ಹಾಗಿದೆ. ಈ ‘ಪರಂಪರೆ’ 2014ರಲ್ಲಿ ಮುರಿದು ಬಿದ್ದಾಗ ಅವರು ವ್ಯಗ್ರಗೊಂಡರು. 2019ರಲ್ಲಿ ಅದು ಹತಾಶೆಯಾಗಿ ಬದಲಾಯಿತು. ಕಳೆದ ಒಂಬತ್ತು ವರ್ಷಗಳಲ್ಲಿ ಸಂಸತ್ತಿನ ಒಳಗೆ ಹೊರಗೆ, ದೇಶದ ಒಳಗೆ ಹೊರಗೆ ಅವರು ಮೋದಿಯವರ ವಿರುದ್ಧ ಆಡುವ ಮಾತುಗಳಲ್ಲಿ, ಅವು ಹೊರಬಂದ ಧಾಟಿಯಲ್ಲಿ ಅವರ ಸಿಟ್ಟು, ಹತಾಶೆ ಕಾಣುತ್ತಿದೆ. ತನ್ನದಾಗಿದ್ದ ಪ್ರಧಾನಮಂತ್ರಿಯ ಸ್ಥಾನವನ್ನು ಮೋದಿ ಎಂಬ ಈ ಮನುಷ್ಯ ಎಲ್ಲಿಂದಲೋ ಬಂದು ತನ್ನದಾಗಿಸಿಕೊಂಡು ಪಟ್ಟಾಗಿ ಕೂತುಬಿಟ್ಟಿದ್ದಾನಲ್ಲ ಎನ್ನುವ ಅಸಹನೆ, ಸಿಟ್ಟು ರಾಹುಲ್ ನಡೆಯಲ್ಲಿ ಢಾಳಾಗಿ ವ್ಯಕ್ತವಾಗುತ್ತದೆ. ತಮ್ಮ ಭಾವನೆಗಳಿಗೆ ಮತದಾರರು ಸ್ಪಂದಿಸುತ್ತಿಲ್ಲ ಎಂದು ಅರಿವಾದ ನಂತರ ಅವರು ಅದಕ್ಕಾಗಿ ವಿದೇಶಗಳ ಸಹಾಯ ನಿರೀಕ್ಷಿಸುವ ಸ್ಥಿತಿಗಿಳಿದಿದ್ದಾರೆ. 2017ರಿಂದಲೂ ಸಿಂಗಪೂರ, ಬರ್ಲಿನ್, ಬರ್ಕ್​ಲೀ, ಕೇಂಬ್ರಿಜ್ ಮುಂತಾದ ಸ್ಥಳಗಳಲ್ಲಿ ಅವರು ಮಾಡಿದ ಭಾಷಣಗಳಲ್ಲಿ ಈ ಅಂಶಗಳು ಕಾಣಿಸಿಗುತ್ತವೆ. ಭಾರತದ ಪ್ರಧಾನಮಂತ್ರಿ ಆಗಲು ಭಾರತೀಯರ ಮನವೊಲಿಸುವುದನ್ನು ಬಿಟ್ಟು ವಿದೇಶಿಯರ ಮನವೊಲಿಸುವ ರಾಹುಲ್ ಪ್ರಯತ್ನ ಮೂರ್ಖತನದ್ದಷ್ಟೇ ಅಲ್ಲ ತಿರುಗುಬಾಣ ಸಹಾ ಆಗಬಲ್ಲದು. ಈಗ ಆಗಿರುವುದು ಅದೇ. ಇಂದಿನ ಭಾರತದ ಸ್ವಾಭಿಮಾನಿ ಜನಾಂಗ ಈ ದೇಶದ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಅಲ್ಲದೇ, ಕನಿಷ್ಠ 2017 ರಿಂದಲೂ ಮತ್ತೆ ಮತ್ತೆ ಗಡಿತಂಟೆ ತೆಗೆಯುತ್ತಿರುವ ಚೀನಾವನ್ನು ಸೌಹಾರ್ದ ಬಯಸುವ ದೇಶ ಎಂದು ಯಾರಾದರೂ ವರ್ಣಿಸಿದರೆ ಅವರು ಮೂರ್ಖರಷ್ಟೇ ಅಲ್ಲ ಭಾರತದ ಶತ್ರುಗಳು ಸಹಾ ಎಂದು ಜನತೆ ಇಂದು ಪರಿಗಣಿಸುತ್ತದೆ.

    ರಾಹುಲ್​ರ ಈ ಅವಿವೇಕಿ ಕೃತ್ಯವನ್ನು ಪ್ರಿಯಾಂಕಾ ಗಾಂಧಿ ಬದಲಾಯಿಸಿಕೊಂಡು ದೇಶದ ಮತದಾರರ ಗಮನ ಸೆಳೆಯುವ, ಮನೆ ಗೆಲ್ಲುವ ಪ್ರಯತ್ನ ಆರಂಭಿಸಿದ್ದಾರೆ. ಅವರು ತಮ್ಮ ನಾಯಕತ್ವಕ್ಕೆ ಅಥವಾ ರಾಜಕೀಯ ಆಕಾಂಕ್ಷೆಗೆ ವಿದೇಶಗಳ ಮೊರೆ ಹೋಗುತ್ತಿಲ್ಲ, ಕೊನೆಯ ಪಕ್ಷ ಬಹಿರಂಗವಾಗಿ. ಪ್ರಧಾನಮಂತ್ರಿ ಮೋದಿ ಅಹಂಕಾರಿ, ಸರ್ವಾಧಿಕಾರಿ ಪ್ರವೃತ್ತಿಯವರು ಎಂದೆಲ್ಲ ಹೇಳಿ ಅವರ ವಿರುದ್ಧ ಜನತೆ ಯಾಕೆ ಸುಮ್ಮನಿದ್ದಾರೆ? ಜನತೆ ಇದಾವುದನ್ನು ನೋಡುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಪ್ರಿಯಾಂಕಾ ಗಾಂಧಿ ಎತ್ತುತ್ತಾರೆ. ಅಂದರೆ ಅವರು ಭಾರತೀಯರ ಎದೆಗೆ ನೇರವಾಗಿ ಬಾಣ ಹೂಡಿದ್ದಾರೆ. ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎಂದು ಈಗಲೇ ಹೇಳಲಾಗುವುದಿಲ್ಲ. ಮೋದಿ-ವಿರೋಧಿ ಪಾಳಯದಲ್ಲಿ ಕಾಂಗ್ರೆಸ್ ನಗಣ್ಯತೆಗೆ ಒಳಗಾಗುತ್ತಿರುವ ಈ ಸ್ಥಿತಿಯಲ್ಲಿ ಆ ಪಕ್ಷದ ನಾಯಕತ್ವ ಪ್ರಿಯಾಂಕಾರನ್ನು ಏಕಾಏಕಿ ಈ ದೇಶದ ಪ್ರಮುಖ ರಾಜಕೀಯ ನೇತಾರರೊಬ್ಬರನ್ನಾಗಿ ಮಾಡುವುದು ಅಸಂಭವ. ಆದರೆ ಪ್ರಿಯಾಂಕಾ ಪ್ರಯತ್ನವನ್ನಂತೂ ಆರಂಭಿಸಿದ್ದಾರೆ. ಕಾಂಗ್ರೆಸ್ಸಿಗರು ಮಹಿಳಾ ನಾಯಕತ್ವದ ಪರ ಎನ್ನುವುದು ಹಳೆಯ ಸತ್ಯ. ಇಂತಹ ಸನ್ನಿವೇಶದಲ್ಲಿ ರಾಹುಲ್​ಗಿಂತಲೂ ಪ್ರಿಯಾಂಕಾ ಪಕ್ಷದೊಳಗೆ ಹೆಚ್ಚು ಜನಪ್ರಿಯರಾಗುತ್ತಾರೆ, ಆ ಮೂಲಕ ಒಂದಷ್ಟು ದೇಶವಾಸಿಗಳ ಮನಸ್ಸನ್ನು ತಲುಪುತ್ತಾರೆ ಎನ್ನುವುದನ್ನು ಅಲ್ಲಗಳೆಯಲಾಗದು. ಹೀಗಾಗಿ 2024ರ ಚುನಾವಣೆಯಲ್ಲಿ ತುಸು ಸದ್ದು ಮಾಡುವ ಸಾಮರ್ಥ್ಯ ಪ್ರಿಯಾಂಕಾರಲ್ಲಿದೆ. ಆದರೆ ಅದಷ್ಟೇ ಅವರನ್ನು ಮುಂದಿನ ವರ್ಷ ಈ ದೇಶದ ಪ್ರಧಾನಿಯನ್ನಾಗಿಸಲಾಗದು. ರಾಜಕೀಯ ಒಂದು ದಿನದ ಆಟವಲ್ಲ, ಅದು ಇಡೀ ಜೀವಮಾನದ ಸಮರ ಎನ್ನುವುದನ್ನು ಅವರು ಬಲ್ಲರು. ಅವರ ನಿಜವಾದ ಗುರಿ 2029 ಆಗಿರಬಹುದು ಅಥವಾ 2034ರಲ್ಲಿ ಆಗ ಪ್ರಬುದ್ಧಾವಸ್ಥೆಗೆ ತಲುಪಿರುವ ಮಗ ರಿಹಾನ್ ಗಾಂಧಿ ವಾದ್ರಾನನ್ನು ಮುಂಚೂಣಿಯಲ್ಲಿ ನಿಲ್ಲಿಸುವ ಪ್ರಯತ್ನ ಅವರದಾಗಬಹುದು. ಆಗ ಕಾಂಗ್ರೆಸ್​ನಲ್ಲಿ ಹಿಂದುಮುಂದಿಲ್ಲದ ರಾಹುಲ್ ಗಾಂಧಿಯವರ ಸ್ಥಾನ ಪಿತಾಮಹನದಷ್ಟೇ ಆಗುತ್ತದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts