More

  ಬದಲಾದ ಭಾರತ: ಉದಾರೀಕರಣದ ರೂವಾರಿ ಮನಮೋಹನ್ ಅಲ್ಲವೇ ಅಲ್ಲ

  ನೀವು ಇದನ್ನು ಒಪ್ಪುವುದಿಲ್ಲ. ಇಲ್ಲಿದೆ ನೋಡಿ ಕೆಲವು ವಿವರಗಳು: 1991ರಲ್ಲಿ ರಾಯರು ಅಧಿಕಾರಕ್ಕೆ ಬರುವ ಸನ್ನಿವೇಶದಲ್ಲಿ 18 ತಿಂಗಳುಗಳಲ್ಲಿ ಮೂವರು ಪ್ರಧಾನಿಗಳು, ಮೂವರು ವಿತ್ತ ಸಚಿವರು, ಮೂವರು ಮುಖ್ಯ ಆರ್ಥಿಕ ಸಲಹೆಗಾರರು ಆಗಿ ಹೋಗಿದ್ದರು. ಇದಕ್ಕೂ ಮೊದಲೇ ಐದು ವರ್ಷ ಕಾಲ ರಾಜೀವ್ ಗಾಂಧಿ ಅವರ ಸರ್ಕಾರಕ್ಕೆ 400 ಲೋಕಸಭಾ ಸದಸ್ಯರ ಬೆಂಬಲ ಇತ್ತು. ಅದಕ್ಕೂ ಮೊದಲು 4 ವರ್ಷ ಕಾಲ ಇಂದಿರಾಗಾಂಧಿ ಅವರು ಪ್ರಧಾನಿ ಆಗಿದ್ದರು. ಈ ಹತ್ತು ವರ್ಷಗಳಲ್ಲಿ ಗದ್ದುಗೆಗೆ ಹತ್ತಿರವಾಗಿದ್ದ ಮನಮೋಹನಸಿಂಗ್ ಅವರ ಕೊಡುಗೆ ಏನು? 1984- 1991ರ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟು ತುಂಬಿ ತುಳುಕುತ್ತಿತ್ತು.

  ಎಂಥ ಆರ್ಥಿಕ ಅಂಧಾದರ್ಬಾರ್ ಇತ್ತೆಂದರೆ ಭಾರತ ಸರ್ಕಾರದ ಬೊಕ್ಕಸ ಖಾಲಿ ಖಾಲಿ! ದೇಶ ವಿದೇಶಗಳಲ್ಲಿ ಇದ್ದ ಕಡೆಗಳಿಂದೆಲ್ಲ ಸಾಲ ತಂದು, ಕೈ ಸಾಲ ತಂದು ತಿಂದು ತೇಗಿದ್ದು ಮುಗಿಸಿದ್ದು ಆಗಿತ್ತು. ಆಗ ಪ್ರಧಾನಿ ರಾಜೀವ್ ಗಾಂಧಿ ಅವರು ಸಾಗರದಲ್ಲಿ ನೌಕಾಪಡೆ ಹಡಗಿನಲ್ಲಿ ಚಂದ್ರವಿಹಾರ ನಡೆಸಿದ್ದು ಆಗಿತ್ತು! -ಎಂಬತ್ತರ ದಶಕದ ಮನಮೋಹನ್ ಸಿಂಗ್ ಸಾಧನೆ ಇನ್ನಿಂಗ್ಸ್ ಹೀಗಿತ್ತು. ಆಗಿತ್ತು – ದೇಶದಲ್ಲಿ ಆರ್ಥಿಕ ಅಂಧಕಾರ. ಆದರೆ ಆರ್ಥಿಕ ವಿಚಾರದ ಪರಮಜ್ಞಾನಿ ಮನಮೋಹನ್ ಸಿಂಗ್ ಚಮತ್ಕಾರ ಆಗ ಎಲ್ಲೂ ಕಾಣಲಿಲ್ಲ.

  ಬದಲಾಗಿ ದೇಶದ ಮೇಲೆ ಬಲಾತ್ಕಾರ ಆಗಿತ್ತು! ಗಂಡಾಂತರ ದೇಶದಲ್ಲಿ ಇತ್ತು. ಐಎಂಎಫ್- ವಿಶ್ವಬ್ಯಾಂಕ್ ಸಾಲ ತಂದು ಗಂಡಾಂತರದಿಂದ ದೇಶವನ್ನು ಪಾರು ಮಾಡಬಹುದಿತ್ತು. ಆದರೆ ಅಂಥ ನಿರ್ಧಾರ ಕೈಗೊಳ್ಳುವ ಧೈರ್ಯ ಯಾರಿಗೂ ಇರಲಿಲ್ಲ; ಮನಮೋಹನಸಿಂಗ್ ಅವರಿಗೂ ಇರಲಿಲ್ಲ. ಹೀಗಾಗಿ ಅರ್ಥ ವ್ಯವಸ್ಥೆಯು ಸರ್ವನಾಶ ಆಗಿತ್ತು. ಪೆಟ್ರೋಲ್ ಸೀಮೆ ಎಣ್ಣೆ ಖರೀದಿಸಲು ದೇಶದಲ್ಲಿ ಕೇವಲ ಏಳು ದಿನಗಳಿಗೆ ಮಾತ್ರ ಸಾಕಾಗುವಷ್ಟು ಡಾಲರ್ ಹಣ ಇತ್ತು.

  ಆಗ ನರಸಿಂಹರಾಯರ ಆಗಮನವಾಯಿತು. ಆಪತ್ಬಾಂಧವರು ಅವರು. ಪ್ರಧಾನಿ ಪಟ್ಟಕ್ಕೆ ಬಂದಾಗ ಅವರಿಗಿದ್ದುದು ಕಲ್ಲುಮುಳ್ಳಿನ ಹಾದಿ. ಒಂದು ಕೈಯಲ್ಲಿ ನೂತನ ಸಚಿವರ ಪಟ್ಟಿ, ಇನ್ನೊಂದು ಕೈಯಲ್ಲಿ ಬೆಂಕಿಯ ಉಂಡೆ- ಇದು ಅವರಿಗಿದ್ದ ಇಕ್ಕಟ್ಟು. ಅತ್ತ ಪಾತಾಳ ಇತ್ತ ಬೇತಾಳ- ಇದು ಅವರ ಕಷ್ಟ. ಆ ಬೆಂಕಿಯ ಉಂಡೆ ವಾಷಿಂಗ್ಟನ್ನಿನಲ್ಲಿ ಸಿದ್ಧವಾಗಿ ಬಂದಿತ್ತು. ಸಾಲ ಕೊಡಲು, ಗಂಡಾಂತರದಲ್ಲಿದ್ದ ಭಾರತವನ್ನು ಬಚಾವ್ ಮಾಡಲು ಐಎಂಎಫ್- ವಿಶ್ವ ಬ್ಯಾಂಕುಗಳು ಸಿದ್ಧವಿದ್ದವು.

  ಆದರೆ ಅವುಗಳ ಷರತ್ತು ಕಬ್ಬಿಣದ ಕಡಲೆ ಆಗಿತ್ತು. ಭಾರತ ಏನು ಮಾಡಬೇಕು ಎಂಬ ಫರ್ವನ್ ಅನ್ನು ಅವು ಮುಂದಿಟ್ಟಿದ್ದವು. ಹತ್ತು ವರ್ಷಗಳ ಅಂಧಾದರ್ಬಾರಿನ ಫಲಶ್ರುತಿಯಾಗಿ ಈ ಫರ್ವನ್ ಬಂದಿತ್ತು. ಅದನ್ನು ಮಾಡ್ತೀನಿ ಎಂದು ಹೇಳುವ ಶಕ್ತಿ – ದಾಷತ್ತು ಎಂಬತ್ತರ ದಶಕದಲ್ಲಿ ದಿಲ್ಲಿ ಗದ್ದುಗೆಯಲ್ಲಿ ಕುಳಿತಿದ್ದ ಯಾರಿಗೂ ಇರಲಿಲ್ಲ. ಅದು ನರಸಿಂಹರಾಯರಿಗೆ ಗೊತ್ತಾಗಿತ್ತು. ಅವರು ಮಹಾ ಮುತ್ಸದ್ದಿ.

  ಭಾರತದ ದಿಲ್ಲಿ ದರ್ಬಾರಿನ ಅಂತರಾಳ ಅವರಿಗೆ ಚೆನ್ನಾಗಿ ಗೊತ್ತಿತ್ತು. ಪ್ರಧಾನಿ ಆಗುತ್ತೇನೆ ಎಂದು ಬಂದಿದ್ದ ಶರದ್ ಪವಾರ್ ಅವರನ್ನೇ ನುಂಗಿ ನೀರು ಕುಡಿದ ಚಾಣಾಕ್ಷ ಈ ರಾಯರು. ಅಂತಹವರು ವಾಶಿಂಗ್ಟನ್ ಫರ್ವನನ್ನು ಜಾರಿ ಮಾಡುವ, ವಿಷ ಕುಡಿದು ವಿಷಕಂಠನಾಗುವ ಸಾಹಸ ಮೆರೆದಿದ್ದರು. ಹಾಗಾದರೆ ಮನಮೋಹನಸಿಂಗ್ ಮಾಡಿದ್ದಾದರೂ ಏನು?

  1991ರ ಮೇ 21ರಂದು ಆಗಬಾರದ್ದು ಆಗಿ ಹೋಯಿತು; ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ನಡೆದು ಹೋಯಿತು. ಆಗ ದೇಶದ ಚುಕ್ಕಾಣಿ ಹಿಡಿದು ಜೂನ್ 21ರಂದು ಅಧಿಕಾರಕ್ಕೆ ಬಂದರು ನರಸಿಂಹ ರಾಯರು. ರಾಯರು ಅರ್ಥಶಾಸ್ತ್ರಜ್ಞ ಐ.ಜಿ. ಪಟೇಲ್ ಅವರನ್ನು ವಿತ್ತ ಸಚಿವರಾಗಿ ಎಂದು ಕೇಳಿಕೊಂಡರು. ಅವರು ಒಲ್ಲೆ ಅಂದರು. ಇನ್ನೊಂದು ಹೆಸರನ್ನು ಅವರು ಸೂಚಿಸಿದರು.

  ಪ್ರಧಾನಿ ಕಚೇರಿಯಿಂದ ಫೋನ್ ಕರೆ ಹೋದಾಗ ಆ ಮಹಾಶಯರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು! ಅವರೇ ಮನಮೋಹನ ಸಿಂಗ್! ಹೀಗೆ ಜೂನ್ 21ರಂದು ಮನಮೋಹನಸಿಂಗ್ ವಿತ್ತಮಂತ್ರಿ ಆದರು. ಅವರು ಜುಲೈ 24ರಂದು ಬಜೆಟ್ ಮಂಡನೆ ಮಾಡಿದರು. ಒಂದು ದಶಕದ ಕಾಲ ದೇಶದ ಆರ್ಥಿಕ ಅವನತಿಯ ಹತ್ತಿರವಾಗಿದ್ದವರು ಹೀಗೆ ಒಂದೇ ತಿಂಗಳಲ್ಲಿ ಉದಾರೀಕರಣದ ಪವಾಡ ಮಾಡಿಬಿಟ್ಟರೆ? ಹೊಸ ಅಧ್ಯಾಯದ ನಾಂದಿ ಹಾಡುವ ಚಮತ್ಕಾರ ಮಾಡಿಬಿಟ್ಟರೆ? ಖಂಡಿತ ಸಾಧ್ಯವೇ ಇಲ್ಲ. ರಾಯರು ಹೇಳಿದರು; ಈ ಸರ್ದಾರರು ಮಾಡಿದರು- ಆಗಿದ್ದು ಇಷ್ಟೇ.

  ಮನಮೋಹನಸಿಂಗ್ 24ರಂದು ಬಜೆಟ್ ಮಂಡಿಸಿದರು. ನಿಜ ಹೇಳಬೇಕೆಂದರೆ ಐಎಂಎಫ್- ವಿಶ್ವಬ್ಯಾಂಕ್ ವರದಿಯನ್ನು ಬಜೆಟ್ ರೂಪದಲ್ಲಿ ಮಂಡಿಸಿದ್ದು ಇವರು. ವಾಷಿಂಗ್ಟನ್ನಿನಲ್ಲಿಯೇ ಉದಾರೀಕರಣದ ಸಿದ್ಧಾಂತ ಸಿದ್ಧವಾಗಿದ್ದು. ಅದಕ್ಕೆ ಒಪ್ಪಿಗೆ- ಆಜ್ಞೆ ನೀಡಿದವರು ನರಸಿಂಹ ರಾಯರು. ಹೀಗೆ ರಾಯರು ಸಿದ್ಧಪಡಿಸಿದ್ದನ್ನು ಓದುವ ಕೆಲಸ ಮಾತ್ರ ಮಾಡಿದ್ದು ಮನಮೋಹನಸಿಂಗ್. ಇಂದು ರಾಯರೇ ಇದ್ದಿದ್ದರೆ, ಸರ್ದಾರರು ವಿತ್ತ ಸಚಿವರಾಗಿದ್ದರೆ, ಗ್ಯಾರಂಟಿಯಾಗಿ ಸಿಂಗ್ ಅವರನ್ನು ರಾಯರು ಮನೆಗೆ ಕಳುಹಿಸುತ್ತಿದ್ದರು! ಇದು ನನ್ನ ಮಾತಲ್ಲ. ಸರ್ದಾರರ ಮಗಳು ತಮ್ಮ ಒಂದು ಪುಸ್ತಕದಲ್ಲಿ ಈ ಒಂದು ಮಾತು ನೆನಪಿಸಿಕೊಂಡಿದ್ದಾರೆ.

  ರಾಯರು ಸಿಂಗ್ ಅವರನ್ನು ಮನೆಗೆ ಕಳುಹಿಸುವ ಮಾತನ್ನು ಜೋಕಾಗಿ ಹೇಳಿದ್ದರಂತೆ! ಉದಾರೀಕರಣ ಬರಲಿ, ಆದರೆ ದುರ್ಬಲ ವರ್ಗಗಳಿಗೆ- ಬಡವರಿಗೆ ಮಾತ್ರ ಕಷ್ಟವಾಗಬಾರದು ಎಂಬುದು ರಾಯರ ಕಟ್ಟಪ್ಪಣೆ ಆಗಿತ್ತಂತೆ. ಹಾಗೇನಾದರೂ ಆದಲ್ಲಿ ನಿಮ್ಮನ್ನು ಮನೆಗೆ ಕಳುಹಿಸಬೇಕಾಗುತ್ತದೆ ಎಂದು ರಾಯರು ಸಿಂಗ್ ಅವರಿಗೆ ಹೇಳಿದ್ದರಂತೆ. ಈಗೇನಾಗಿದೆ ನೋಡಿ. ಉದಾರೀಕರಣ ಬಂದ ಮೇಲೆ ದೇಶದಲ್ಲಿ ಕೃಷಿಯ ಪಾಲು ಅರ್ಧಕ್ಕರ್ಧ ಆಗಿದೆ. ಪಶುಪಾಲನೆ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಲ್ಲಿ ಶೂನ್ಯ ಸಂಪಾದನೆ ಆಗಿದೆ! ಅಂದರೆ ಬಡವರು ದುರ್ಬಲ ವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

  ರಾಯರು ಇದ್ದಿದ್ದರೆ ಈಗ ಸಿಂಗ್ ಅವರನ್ನು ಮನೆಗೆ ಕಳುಹಿಸುತ್ತಿದ್ದರು ಎಂದು ಆಗಲೇ ನಾನು ಹೇಳಿದ್ದು ಇದಕ್ಕೇ. ಮತ್ತೊಂದು ಮಾತು ಹೇಳಲೇ ಬೇಕು. ಐಎಂಎಫ್- ವಿಶ್ವಬ್ಯಾಂಕುಗಳು ನಮ್ಮ ದೇಶಕ್ಕಾಗಿ ಸಿದ್ಧಪಡಿಸಿದ ವರದಿಯು ಸೀದಾ ನಮ್ಮ ಸರ್ದಾರರ ಕೈಗೆ ಹೋಗಲಿಲ್ಲ. ವರದಿ ವಾಷಿಂಗ್ಟನ್ನಿನದಾದರೂ ಆದರ ಒಕ್ಕಣೆ ನಮ್ಮದಾಗಿ ಬರಬೇಕು. ಇದು ರಾಯರ ಕಟ್ಟಪ್ಪಣೆ. ತಿದ್ದುವ ಕಾರ್ಯವನ್ನು ರಾಯರ ನೇತೃತ್ವದ ಒಂದು ತಂಡವು ನಡೆಸಿತ್ತು. ವಾಷಿಂಗ್ಟನ್ ಕರಡು ಪ್ರತಿಗೆ ಹೊಸದಾಗಿ ಆರು ಪ್ಯಾರಾ ಸೇರಿಸುವ ಕಾರ್ಯ ಮಾತ್ರ ನಡೆಯಿತು.

  ಕಾಂಗ್ರೆಸ್ ಪರಿವಾರದವರನ್ನು ಸಂತೃಪ್ತಿಗೊಳಿಸುವ ಕಾರ್ಯ ಇಲ್ಲಾಗಿತ್ತು. ಈ ಕಾರ್ಯಭಾರವನ್ನು ರಾಯರ ನೇತೃತ್ವದಲ್ಲಿ ನಡೆಸಿದ್ದು ಯಾರು ಗೊತ್ತೆ? ಅವರೇ ಚಿದಂಬರಂ! ಹೀಗೆ ರಾಯರ ಮಾರ್ಗದರ್ಶನದಲ್ಲಿ ಬಜೆಟ್ ಸಿದ್ಧವಾಗಿದ್ದು. ಇದನ್ನು ಓದಿದ್ದು ಮಾತ್ರ ಮನಮೋಹನ ಸಿಂಗ್ ಅವರು! ಹಾಗಾದರೆ ನಮ್ಮಸರ್ದಾರರು ಮಾಡಿದ್ದು ಏನು? ಬೇರೆಯವರು ಕೊಟ್ಟಿದ್ದನ್ನು ಓದಿದ್ದಷ್ಟೇ ಅವರು ಮೆರೆದ ಪರಾಕ್ರಮ. ಉದಾರೀಕರಣವನ್ನು ಒಪ್ಪಿ, ಅದನ್ನು ಜಾರಿಗೆ ಕೊಡಿಸಿದ ಕೀರ್ತಿ ನರಸಿಂಹರಾಯರದ್ದಾಗಿದೆ. ಉದಾರೀಕರಣದ ಕೀರ್ತಿ ಅವರಿಗೆ ಸಲ್ಲಬೇಕು. ಅವರಿಗೆ ಭಾರತ ರತ್ನ ಪ್ರಶಸ್ತಿ ಈಗ ಸಂದರೆ ಅದು ನ್ಯಾಯಯುತವಾದದ್ದೇ ಆಗುತ್ತದೆ. ಏಕೆಂದರೆ ನೆಹರೂ ನಂತರ ಶ್ರೇಷ್ಠ ಪ್ರಧಾನಿ ಎಂದರೆ ನರಸಿಂಹ ರಾಯರೇ.

  ರಾಜಕಾರಣಿಯಾಗಿ ಜಾಣ; ಅರ್ಥಶಾಸ್ತ್ರಿಯಾಗಿ ಕೋ…

  ‘ಭಾರತ ಪಾಪರ್’ ಎನ್ನುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು 1991ರಲ್ಲಿ. ನೂತನ ವಿತ್ತ ಸಚಿವರಾಗಿ ಆಗ ಅಧಿಕಾರ ವಹಿಸಿಕೊಂಡಿದ್ದರು ಮನಮೋಹನ ಸಿಂಗ್. ಅವರು ಆಗ ವಿತ್ತ ಮಂತ್ರಾಲಯದ ಹಿರಿಯ ಅಧಿಕಾರಿಯೊಬ್ಬರನ್ನು ಕರೆಸಿಕೊಂಡರು. ಈ ಹಿರಿಯ ಐಎಎಸ್ ಅಧಿಕಾರಿ ವಿತ್ತ ಮಂತ್ರಾಲಯದ ಮುಂಚೂಣಿಯಲ್ಲಿದ್ದವರು. ವಿಷಮ ಪರಿಸ್ಥಿತಿ ಏಕೆ- ಹೀಗೆ ಆಯಿತು? ಯಾರೆಲ್ಲಾ ಜವಾಬ್ದಾರರು ಇದಕ್ಕೆ – ಎಂಬುದೆಲ್ಲ ಅವರಿಗೆ ತಿಳಿದಿತ್ತು. ಆ ಬಗ್ಗೆ ಟಿಪ್ಪಣಿ ಸಿದ್ಧಪಡಿಸಿ ಎಂದು ಅವರಿಗೆ ಸಿಂಗ್ ಹುಕುಂ ನೀಡಿದ್ದರು.

  ಬಂದ ಟಿಪ್ಪಣಿ ಹೀಗಿತ್ತು : ‘ಎಂಬತ್ತರ ದಶಕದಲ್ಲಿ ಪರಿಸ್ಥಿತಿ ವರ್ಷೆ ವರ್ಷೆ ಅಧೋಗತಿಗೆ ಬಂತು. ತೈಲ ಆಮದಿಗಾಗಿ ಕೈಸಾಲ ಮಾಡುವುದು ಸಲ್ಲ ಎಂದು ರಿಸರ್ವ್ ಬ್ಯಾಂಕ್ ಮತ್ತೆ-ಮತ್ತೆ ಅಪಾಯದ ಗಂಟೆ ಬಾರಿಸಿತ್ತು. ವಿತ್ತ ಮಂತ್ರಾಲಯದ ಹಿರಿಯ ಅನುಭವಿ ಅಧಿಕಾರಿಗಳು, ಸರ್ಕಾರವು ವಿದೇಶಿ ಕೈಸಾಲಕ್ಕೆ ಜೋತುಬೀಳಬಾರದು- ಎಂದು ತಮ್ಮ ಕಳವಳವನ್ನು ಪದೇಪದೇ ವ್ಯಕ್ತಪಡಿಸಿ ಕಡತ ತುಂಬಿದ್ದರು. ಇದ್ದ ವಿಷಮ ಪರಿಸ್ಥಿತಿ ಬಗ್ಗೆ ಸರ್ಕಾರದ ಬಳಿ ಎಲ್ಲ ಕಾಲದಲ್ಲೂ ಎಲ್ಲಾ ವಿವರಗಳು ಪೂರ್ತಿಯಾಗಿದ್ದವು.

  ಆದರೆ ಅದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಆಗಿತ್ತು; ಸರ್ಕಾರದ ಪರಿಸ್ಥಿತಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಆಗ ಕೊಲ್ಲಿ ಯುದ್ಧ ಬಂತು; ಪರಿಸ್ಥಿತಿ ಕೈಮೀರಿ ಹೋಗಿತ್ತು. ಆಗಲೂ ದೇಶದ ನಾಯಕತ್ವವು ಕಠಿಣ ನಿರ್ಧಾರ ಕೈಗೊಳ್ಳಲಿಲ್ಲ. ಅದು ಬೆದರಿದ ಜಿಂಕೆ ಆಗಿತ್ತು. ಇಂಥ ನಾಯಕತ್ವ ಇದ್ದುದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ಐಎಂಎಫ್ ನಿಂದ ತುರ್ತು ಸಾಲ ಪಡೆದು ಪರಿಸ್ಥಿತಿ ನಿಭಾಯಿಸಬಹುದಿತ್ತು. ರಾಜಕೀಯ ನಾಯಕತ್ವಕ್ಕೆ ಆ ಧೈರ್ಯ ಇರಲಿಲ್ಲ; ರಾಜಕೀಯ ಬೆಂಬಲ ಕ್ರೋಡೀಕರಿಸುವ ಶಕ್ತಿ ಅದಕ್ಕೆ ಇರಲಿಲ್ಲ. ದೇಶದ ನಾಯಕತ್ವದ ಅಂಜುಬುರುಕುತನ ಹೀಗೆ ದೇಶಕ್ಕೆ ಗಂಡಾಂತರ ತಂದಿತ್ತು’- ಇದು ಟಿಪ್ಪಣಿಯ ಸಾರಾಂಶ. ಈ ಟಿಪ್ಪಣಿಯನ್ನು ಸಿಂಗ್ ಆಚೆಗೆ ಹಾಕಿದ್ದರು !

  ಇಷ್ಟೆಲ್ಲಾ ನಡೆದಾಗ, ಗಂಡಾತರವು ಅಪ್ಪಳಿಸಿದೆ ಎನ್ನುವ ಕಾಲದಲ್ಲಿ ಆ ಎಂಬತ್ತರ ದಶಕದಲ್ಲಿ ಮನಮೋಹನ ಸಿಂಗ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು; ಯೋಜನಾ ಆಯೋಗದ ಚುಕ್ಕಾಣಿ ಹಿಡಿದಿದ್ದರು; ಪ್ರಧಾನಿಗೆ ಸಲಹೆಗಾರರಾಗಿದ್ದರು . ಇವರಿದ್ದರೂ ಎಂಥ ಪರಿಸ್ಥಿತಿ ಬಂತು ನೀವೇ ನೋಡಿ. ಭಾರತಕ್ಕೆ ವಿಶ್ವ ಹಣಕಾಸು ಸಂಸ್ಥೆಗಳು ಸಾಲ ಕೊಡುವುದನ್ನು ನಿಲ್ಲಿಸಿದವು; ವಿದೇಶಿ ಬ್ಯಾಂಕುಗಳು ಭಾರತದ ಬ್ಯಾಂಕುಗಳನ್ನು ನಂಬುತ್ತಿರಲಿಲ್ಲ; ಇಲ್ಲಿನ ಬ್ಯಾಂಕ್ ಸಾಲಪತ್ರಗಳಿಗೆ ವಿದೇಶಿ ಬ್ಯಾಂಕ್ಗಳಲ್ಲಿ ಕಿಮ್ಮತ್ತು ಇರಲಿಲ್ಲ.

  ಭಾರತಕ್ಕೆ ಕೈಸಾಲ ವಾಪಸ್ ಇರಲಿ, ಕೈ ಸಾಲದ ಬಡ್ಡಿ ಕೊಡಲು ಸಾಧ್ಯವಿಲ್ಲ ಎಂಬ ಸ್ಥಿತಿ ಇತ್ತು. ಭಾರತದ ಬಗ್ಗೆ ಜಗತ್ತು ನಂಬಿಕೆ ಕಳೆದುಕೊಂಡಿತ್ತು! ನಮ್ಮ ಸರ್ದಾರರು ಅಪ್ರಯೋಜಕ ರಾಗಿದ್ದರು. ಭಾರತವು ತನ್ನ ಚಿನ್ನವನ್ನು ವಿದೇಶದಲ್ಲಿ ಅಡ ಇಟ್ಟು ಮುಖ ಮುಚ್ಚಿಕೊಳ್ಳುವ ನಾಚಿಕೆಗೆಟ್ಟ ಸ್ಥಿತಿಗೆ ಬಂದಿತ್ತು . ಇದರ ತಾತ್ಪರ್ಯ: ಮನಮೋಹನಸಿಂಗ್ ರಾಜಕಾರಣಿಯಾಗಿ ಜಾಣ; ಅರ್ಥಶಾಸ್ತ್ರಿಯಾಗಿ ಕೋ…!

  ‘ಸಾಲದ ಮೇಲೆ ಬದುಕಲು ಸದಾ ಸಾಧ್ಯವಿಲ್ಲ. ಈಗ ಅದಕ್ಕೂ ಕಾಲ ಮಿಂಚಿಹೋಗಿದೆ. ಅರ್ಥವ್ಯವಸ್ಥೆಯು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಇದೊಂದೇ ದಾರಿ’- ಇದು 1991 ರ ಜುಲೈ 24ರಂದು ಸಿಂಗ್ ಅವರು ಮಾಡಿದ ಬಜೆಟ್ ಭಾಷಣ . ಹೀಗೇ ಇನ್ನೊಂದು ಇದೆ ನೋಡಿ- ‘1991 ರಲ್ಲಿ ನಮಗೆ ಯಾರೂ ಬಿಡಗಾಸು ಸಾಲ ಕೊಡುತ್ತಿರಲಿಲ್ಲ.

  ಈಗಲೂ ಪರಿಸ್ಥಿತಿ ದುಸ್ತರವಾಗಿದೆ. ಪೆಟ್ರೋಲಿಯಮ್ ಸಬ್ಸಿಡಿ 2 ಲಕ್ಷ ಕೋಟಿ ದಾಟುವಂತಿದೆ. ಕೊಡಲು ಹಣ ಇಲ್ಲ. ಗಿಡದ ಮೇಲೆ ಹಣ ಬೆಳೆಯುವುದಿಲ್ಲ. ಇದಕ್ಕಾಗಿಯೇ ವರ್ಷಕ್ಕೆ 6 ಸಿಲಿಂಡರ್ ಗ್ಯಾಸ್ ಮಾತ್ರ ಕೊಡೋದು’- 2012ರ ಸೆಪ್ಟೆಂಬರ್ 21ರಂದು ಸಿಂಗ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಪ್ರಸಾರ ಭಾಷಣ ಇದು. ಇಲ್ಲಿ ಉದ್ದಕ್ಕೂ ಸಿಂಗ್ ಅವರ ವೈಫಲ್ಯ ಕಾಣುತ್ತಿದೆ.

  1991 ರಲ್ಲೂ ಇವರದ್ದು ಎಡವಟ್ಟು; 2012ರಲ್ಲೂ ಇವರದ್ದು ಅದೇ ಎಡವಟ್ಟು. ಇದು ಇವರ ಆರ್ಥಿಕ ಚರಿತ್ರೆ. ಇವರ ಕಾಲದಲ್ಲಿ 1971-73ರಲ್ಲಿ, 1984-88ರಲ್ಲಿ, 1991-93ರಲ್ಲಿ, 2012-14ರಲ್ಲಿ ಆರ್ಥಿಕ ಮುಗ್ಗಟ್ಟಿನ ಮುಳುಗಡೆ ಆಗಿಹೋಗಿದೆ. ಇವರು ಈಗ ಮೋದಿ ಸರ್ಕಾರಕ್ಕೆ ಅರ್ಥ ವ್ಯವಸ್ಥೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾಷಣ ಬಿಗಿಯುತ್ತಾರೆ.

  ಇವರ ಈ ಸರ್ಟಿಫಿಕೇಟ್ ಗೆ ಕಿಲುಬು ಕಾಸಿನ ಕಿಮ್ಮತ್ತು ಇಲ್ಲ. ಅವರು ಈಗ ಹೇಳುತ್ತಿರುವ ಮಾತು – ಭೂತ ಭಗವದ್ಗೀತೆಯನ್ನು ಬೋಧಿಸಿದಂತಿದೆ . 1969ರಲ್ಲಿ ಈ ಮಹಾಶಯರು ದಿಲ್ಲಿ ಗದ್ದುಗೆಯ ಬಳಿಗೆ ಬಂದರು. 2019ರಲ್ಲಿ ಗದ್ದುಗೆ ಸಮೀಪದಲ್ಲಿ ಇದ್ದಾರೆ. ಅದಕ್ಕೆ ಹೇಳಿದ್ದು ಸಿಂಗ್ ಅವರು- ರಾಜಕಾರಣಿಯಾಗಿ ಜಾಣ; ಅರ್ಥಶಾಸ್ತ್ರಿಯಾಗಿ ಕೋ… ಎಂದು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts