ಗಣೇಶಪುರಿ ಶ್ರೀನಿತ್ಯಾನಂದ ಅವಧೂತರು

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​

ನಾರಾಯಣಗುರುಗಳು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಹುಟ್ಟಿ ಇಪ್ಪತ್ತನೆಯ ಶತಮಾನದ ಮೊದಲ ಆರುದಶಕಗಳ ಕಾಲ ಅಧ್ಯಾತ್ಮಲೋಕದ ಸಿದ್ಧಪುರುಷರಾಗಿ, ಯೋಗಿಗಳಾಗಿ, ಅವಧೂತರಾಗಿ, ಮಹಾಸಂತರಾಗಿ ಸಹಸ್ರಾರು ಜನರ ಕಷ್ಟಕಾರ್ಪಣ್ಯಗಳನ್ನು ನೀಗಿಸಿದ್ದು ಇದೀಗ ಇತಿಹಾಸ. ಅವರು ಪರಮಾರ್ಥದ ಹಾದಿಯಲ್ಲಿ ನಡೆಯುವವರಿಗೆ ಮಾರ್ಗದರ್ಶನ ನೀಡಿದರು. ಕೇರಳದಲ್ಲಿ ಜನಿಸಿ, ಮುಂಬಾಪುರಿಯ ಗಣೇಶಪುರಿಯಲ್ಲಿ ನೆಲೆಯೂರಿ ಸಮಸ್ತರನ್ನು ತಮ್ಮತ್ತ ಸೆಳೆದುಕೊಂಡ ಅವಧೂತ ಪ್ರಜ್ಞೆಯ ಮಹಾನ್ ಯೋಗಿಪುರುಷ ಸ್ವಾಮಿ ನಿತ್ಯಾನಂದರು.

ಜನನ-ಬಾಲ್ಯ: ಶ್ರೀನಿತ್ಯಾನಂದರು ಕೊಚ್ಚಿನ್ (ಕೊಯ್ಲ್ಯಾಂಡಿ) ಸಮೀಪ ಇರುವ ನಡುಕುಂಡಾಡ ಎಂಬ ಗ್ರಾಮದಲ್ಲಿ 1897ರ ನ.30ರಂದು ರಂದು ಜನಿಸಿದರು. ಇವರ ಜನ್ಮನಾಮ ರಾಮನ್​ಕುಟ್ಟಿ. ಕಟ್ಟಾಚೇರಿ ಎಂಬುದು ಇವರ ಮನೆತನದ ಹೆಸರು. ತಾಯಿಯ ಹೆಸರು ಉಮ್ಮಮ್ಮ. ಮೂರನೆಯ ವಯಸ್ಸಿನಲ್ಲಿರುವಾಗ ತಂದೆಯನ್ನು ಕಳೆದುಕೊಂಡರು. ತಾಯಿ ಆಗ ಅನಾಥೆಯಾದಳು. ಮಗು ರಾಮನ್​ಕುಟ್ಟಿಯನ್ನು ಕರೆದುಕೊಂಡು ಕೊಯ್ಲ್ಯಾಂಡಿನ ಪ್ರಸಿದ್ಧ ವಕೀಲರಾದ ಈಶ್ವರ ಅಯ್ಯರ್ ಎಂಬ ಸದ್​ಗೃಹಸ್ಥರ ಆಶ್ರಯಕ್ಕೆ ಉಮ್ಮಮ್ಮ ಬಂದರು. ಇವರು ಧರ್ಮಭೀರುಗಳೂ ಉದಾತ್ತಮನಸ್ಕರೂ ಆಗಿದ್ದರು. ಇವರು ತಮ್ಮಲ್ಲಿ ಬಂದ ಅನಾಥರಿಗೆ ಆಶ್ರಯ ನೀಡುತ್ತಿದ್ದರು. ತಾಯಿ ಉಮ್ಮಮ್ಮ ವಕೀಲರ ಆಶ್ರಯಕ್ಕೆ ಬಂದು ಮೂರುವರ್ಷಗಳು ಕಳೆದಿದ್ದವು. ರಾಮನ್​ಕುಟ್ಟಿ ಆಗ ಆರು ವರ್ಷದ ಬಾಲಕ. ಒಂದು ದಿನ ತಾಯಿ ಕಾಯಿಲೆಯಿಂದ ಮಲಗಿದವಳು ಮೇಲಕ್ಕೆ ಏಳಲಿಲ್ಲ. ಆರುವರ್ಷದ ಬಾಲಕನನ್ನು ಬಿಟ್ಟು ಆಕೆ ಸ್ವರ್ಗಸ್ಥಳಾದಳು.

ಈಶ್ವರ ಅಯ್ಯರ್ ಪರಮ ಕರುಣಾಳು. ಅವರು ತಾಯಿಯನ್ನು ಕಳೆದುಕೊಂಡ ರಾಮನ್ ಕುಟ್ಟಿಗೆ ಪೋಷಕರಾದರು. ಬಾಲಕ ರಾಮನ್​ಕುಟ್ಟಿಯನ್ನು ತಮ್ಮ ಮಕ್ಕಳಂತೆಯೇ ಕಾಪಾಡಿದರು. ಬಾಲಕ ರಾಮನ್ ಬಲು ಜಾಣನಾಗಿದ್ದ. ಸಮೀಪದಲ್ಲಿದ್ದ ಶಾಲೆಗೆ ರಾಮನನ್ನುಕಳುಹಿಸಿದರು. ಆದರೆ, ರಾಮನ್ ಶಾಲೆಗೆ ಹೋಗದೆ ಕೆರೆಯಲ್ಲಿ ಸ್ನಾನಮಾಡಿ ವಿಭೂತಿಯನ್ನು ಹಣೆ-ಮೈಗೆ ಹಚ್ಚಿಕೊಂಡು ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ. ಚಿಕ್ಕವಯಸ್ಸಿನಿಂದಲೂ ದೈವಭಕ್ತಿ, ವಿರಕ್ತಿ, ಧ್ಯಾನನಿಷ್ಠೆ ಮತ್ತು ಸೂಕ್ಷ್ಮಬುದ್ಧಿ ಬೆಳೆಯುತ್ತ ಹೋಯಿತು. ರಾಮನ್ ನಯವಿನಯಗಳಿಂದ ಭಕ್ತಿಗೌರವಗಳಿಂದ ನಡೆದುಕೊಳ್ಳುತ್ತಿದ್ದ.

ಅನ್ವೇಷಣ: ಶ್ರೀಮಂತರಾದ ಈಶ್ವರ ಅಯ್ಯರ್ ಕುಟುಂಬಸಹಿತವಾಗಿ ಅನೇಕ ತೀರ್ಥಕ್ಷೇತ್ರಗಳಿಗೆ ಯಾತ್ರೆಗೆ ಹೊರಟರು. ಅವರು ರಾಮನ್​ಕುಟ್ಟಿಯನ್ನು ಜತೆಗೆ ಕರೆದುಕೊಂಡೇ ಹೊರಟರು. ಕಾಶಿ, ಹೃಷೀಕೇಶ, ಹರಿದ್ವಾರಗಳಿಗೆ ಹೋದರು. ಅಲ್ಲೆಲ್ಲ ರಾಮನ್ ದೈವಸಾನ್ನಿಧ್ಯದಲ್ಲಿ ಮುಳುಗಿಹೋದ. ಅವರು ಬುದ್ಧಗಯೆಗೆ ಬಂದರು. ಅಲ್ಲಿ ಒಂದೆರಡು ದಿನಗಳಿದ್ದು ಹೊರಡುವ ವೇಳೆಗೆ ರಾಮನ್​ಕುಟ್ಟಿ ತಾನು ಇಲ್ಲಿಯೇ ಧ್ಯಾನಮಾಡಿಕೊಂಡಿರುತ್ತೇನೆಂದು ಹಟಹಿಡಿದುಬಿಟ್ಟ. ಆಗ ನಿರ್ವಾಹವಿಲ್ಲದೆ ಐಯ್ಯರ್ ಊರಿಗೆ ಹಿಂತಿರುಗ ಬೇಕಾಯಿತು. ಆಗ ರಾಮನ್​ಕುಟ್ಟಿಗೆ ಹನ್ನೆರಡು ವರ್ಷದ ಪ್ರಾಯ! ಅವನಿಗೆ ಬುದ್ಧಗಯೆ ಧ್ಯಾನಕ್ಕೆ ಪ್ರಶಸ್ತವಾದ ಸ್ಥಳವೆಂದು ಅನ್ನಿಸಿತು. ರಾಮನ್ ಅಲ್ಲಿ ಕೆಲಕಾಲ ತಪಸ್ಸು ಮಾಡಿಕೊಂಡಿದ್ದು, ಹಿಮಾಲಯಕ್ಕೆ ಹೋದ. ಅಲ್ಲಿಯ ಗುಹೆಯೊಂದರಲ್ಲಿ ಆರುವರ್ಷಗಳ ಕಠಿಣ ತಪಸ್ಸಿನಲ್ಲಿದ್ದು ಸ್ವಯಂಸಾಧನೆಯಲ್ಲಿ ತಲ್ಲೀನನಾದ. ರಾಮನ್ ಹಿಮಾಲಯದ ಮೌನದಲ್ಲಿ ಆತ್ಮತತ್ತ್ವದ ಸಾಧನೆ ಮಾಡಿಕೊಂಡ. ಅಲ್ಲಿ ಹಲವಾರು ಸಿದ್ಧಿಗಳನ್ನು ಪಡೆದುಕೊಂಡ. ಕುಂಡಲಿನೀಯೋಗದ ಅಭ್ಯಾಸದಿಂದ ಅನಿರ್ವಚನೀಯವಾದ ಆತ್ಮಾನಂದವನ್ನು ರಾಮನ್ ಅನುಭವಿಸಿದ. ರಾಮನ್ ಹಿಮಾಲಯದಿಂದ ಅರಣ್ಯಮಾರ್ಗವಾಗಿ ಬರ್ವದೇಶಕ್ಕೆ ಬಂದು, ಸ್ಟೀಮರ್ ಮೂಲಕ ಸಿಲೋನಿಗೆ ಹೋಗಿ, ಅಲ್ಲಿಂದ ಕೊಚ್ಚಿನ್​ಗೆ ಮರಳಿ ಬಂದ. ಆಗ ರಾಮನ್ ಹದಿನೇಳರ ಪ್ರಾಯದ ಹುಡುಗ. ಈಶ್ವರ ಅಯ್ಯರ್ ರಾಮನ್​ಕುಟ್ಟಿಯನ್ನು ಕಂಡು ಬೆರಗಾಗಿಬಿಟ್ಟರು. ಅವನ ಅನಿರೀಕ್ಷಿತ ಆಗಮನ ಅವರಿಗೆ ಸಂತೋಷವನ್ನೇ ತಂದಿತು. ಅವನ ಮುಖಮಂಡಲದಲ್ಲಿ ಶೋಭಿಸುತ್ತಿದ್ದ ತೇಜಸ್ಸು, ವಾಕ್​ಶಕ್ತಿಗಳನ್ನು ಅಯ್ಯರ್ ಕಂಡರು. ಅವರು ರಾಮನನ್ನು ಆಲಿಂಗಿಸಿಕೊಂಡರು. ಅವನು ಆತ್ಮಾನಂದದಲ್ಲಿ ಸದಾ ನಿರತನಾಗಿದ್ದನ್ನು ಕಂಡರು. ಆಗ ಅಯ್ಯರ್ ವಿಸ್ಮಿತರಾಗಿ ಅವನನ್ನು ‘ನಿತ್ಯಾನಂದ’ ಎಂದು ಕರೆಯತೊಡಗಿದರು. ಇದೇ ಹೆಸರು ಮುಂದೆ ಪ್ರಸಿದ್ಧಿಗೆ ಬಂದಿತು.

ಪರಿವ್ರಾಜಕ: ನಿತ್ಯಾನಂದರು, ಈಶ್ವರ್ ಅಯ್ಯರ್ ಜೀವಿತದ ಕೊನೆಗೆ ವಿರಜಾಹೋಮ ಮಾಡಿ ಸಂನ್ಯಾಸದೀಕ್ಷೆಯನ್ನು ನೀಡಿದರು. ಅಯ್ಯರ್ ಅವರಿಗೆ ಬ್ರಾಹ್ಮಣಕುಲದಲ್ಲಿ ಹುಟ್ಟಿದೆ ಎಂಬ ಅಜ್ಞಾನ ಇತ್ತು. ಆಗ ನಿತ್ಯಾನಂದರು ‘‘ಜೀವ ಮತ್ತು ಶಿವ ಬ್ರಹ್ಮವೇ ಆಗಿರುತ್ತದೆ. ಆತ್ಮವೇ ಬ್ರಹ್ಮ, ಆತ್ಮವೇ ಬ್ರಾಹ್ಮಣ, ಶರೀರವಲ್ಲ’ ಎಂಬ ಉಪದೇಶವನ್ನು ಅವರಿಗೆ ನೀಡಿದರು. ಅವರಲ್ಲಿದ್ದ ಶರೀರ ಸಂಬಂಧವಾದ ಮೋಹವನ್ನು ಸುಟ್ಟರು. ಈಶ್ವರ ಅಯ್ಯರ್ ಮುಕ್ತಿಗೆ ಸಂದ ಮೇಲೆ ನಿತ್ಯಾನಂದರು ಊರನ್ನು ಬಿಟ್ಟರು. ಅವರು ಪಳನಿಗೆ ಬಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಾಗ ದೇಗುಲ ಮುಚ್ಚುವ ವೇಳೆಯಾಗಿತ್ತು. ಪೂಜಾರಿ ಕದಹಾಕಿ ಹೋಗಿದ್ದರು. ಭಗವಾನ್ ನಿತ್ಯಾನಂದರು ದೇವಾಲಯದ ಎದುರು ಒಂಟಿಕಾಲಿನ ಮೇಲೆ ನಿಂತುಕೊಂಡರು. ಅಚ್ಚರಿ ಎನ್ನುವಂತೆ ಗುಡಿಯ ಒಳಗೆ ಪೂಜೆ ನಡೆಯತೊಡಗಿತು. ಪೂಜಾರಿಗಳಿಗೆ ಗಾಬರಿಯಾಗಿ ಕದತೆರೆದು ನಿತ್ಯಾನಂದರನ್ನು ಒಳಗೆ ಬರಮಾಡಿಕೊಂಡರು. ಅವರು ಹಣ, ಬಂಗಾರವನ್ನು ನಿತ್ಯಾನಂದರಿಗೆ ನೀಡಿದರು. ತಮಗೆ ನೀಡಿದ ಹಣ-ಬಂಗಾರಗಳನ್ನು ಸಾಧುಗಳಿಗೂ ಮಠಗಳಿಗೂ ನೀಡಿಬಿಟ್ಟರು. ಅಲ್ಲಿಯ ಸಂನ್ಯಾಸಿಗಳಿಗೆ ಪ್ರತಿನಿತ್ಯ ಗಂಜಿಊಟಕ್ಕೆ ವ್ಯವಸ್ಥೆ ಮಾಡಿದರು. ಆಮೇಲೆ ಪಳನಿಯಿಂದ ಮಂಜೇಶ್ವರಕ್ಕೆ ಬಂದರು. ಮಂಜೇಶ್ವರದ ಶ್ರೀಮಂತ ಜಮೀನ್ದಾರರಾದ ಅನಂತಕೃಷ್ಣರಾಯರ ಮನೆಯ ಆಶ್ರಯವನ್ನು ಪಡೆದರು. ಅವರ ಮನೆಯವರಿಗೆ ನಿತ್ಯಾನಂದರ ಆಧ್ಯಾತ್ಮಿಕ ಶಕ್ತಿ ತಿಳಿಯಿತು. ನಿತ್ಯಾನಂದರು ಮಹಡಿಯ ಮೇಲೆ ಒಂದು ತಿಂಗಳು ಶೀರ್ಷಾಸನ ಸ್ಥಿತಿಯಲ್ಲಿಯೇ ಇದ್ದರು. ಅವರು ಏನನ್ನೂ ಸೇವಿಸದೆ ಇದ್ದುಬಿಟ್ಟರು. ಅದೇ ಸಮಯದಲ್ಲಿ ಸೇತುವೆಯ ಮೇಲಿಂದ ನೀರು ಹರಿದು ಮಂಜೇಶ್ವರ ಮುಳುಗಡೆ ಆಗುವ ಪ್ರಸಂಗ ಒದಗಿತು. ಅನಂತಕೃಷ್ಣರಾಯರ ಕೋರಿಕೆಯಂತೆ ಅದನ್ನು ತಡೆದರು. ಅವರು ಸೇತುವೆಯ ಮೇಲೆ ನಿಂತು ಆಗಸದ ಕಡೆಗೆ ಎರಡು ಕೈಗಳನ್ನು ಮೇಲೆತ್ತಿ ಹತ್ತುನಿಮಿಷ ನಿಂತರು. ಆಗ ಪ್ರವಾಹ ತಗ್ಗಿತು. ಜನ ಜಲಸಂಕಷ್ಟದಿಂದ ಪಾರಾದರು. ಮಂಜೇಶ್ವರದಲ್ಲಿ ಅನೇಕ ಪವಾಡಗಳನ್ನು ಮೆರೆದರು. ಜನರ ಸಂಕಟಕ್ಕೆ ಪ್ರತಿಸ್ಪಂದಿಸಿದರು. ಮಂಗಳೂರು, ಉಡುಪಿ, ಉಚ್ಚಿಲ ಮೊದಲಾದ ಸ್ಥಳಗಳಲ್ಲಿ ಅನೇಕ ಬಗೆಯ ‘ಪವಾಡ’ಗಳನ್ನು ನಡೆಸಿದರು.

ಅಧ್ಯಾತ್ಮಕೇಂದ್ರ: ನಿತ್ಯಾನಂದರು ಮಂಜೇಶ್ವರಕ್ಕೆ ಬರುವ ಮೊದಲು ಪಳನಿಯಿಂದ ಕೇರಳದ ಕಣ್ಣಾನೂರು ಜಿಲ್ಲೆಯ ಕಾಂಞಂಗಾಡು ರೈಲ್ವೆ ನಿಲ್ದಾಣದಿಂದ ಎರಡು ಕಿ.ಮೀ. ದೂರದ ಮೂಡುಪಾರ್ಶ್ವದಲ್ಲಿ ನಿತ್ಯಾನಂದರ ಆಶ್ರಮ ಸ್ಥಾಪನೆಗೊಂಡಿತು. ಕಾಂಞನ ಎಂಬ ಅರಸ ಕಟ್ಟಿದ ಕೋಟೆಯೊಳಗೆ ನಿತ್ಯಾನಂದರು ನಲವತ್ತಮೂರು ಗುಹೆಗಳನ್ನು ನಿರ್ವಿುಸಿದರು. ಇವು 1921 ರಿಂದ 1922ರಲ್ಲಿ ನಿರ್ವಣಗೊಂಡವು. ಆಗ ಈ ಕೋಟೆಯು ಬ್ರಿಟಿಷರ ವಶದಲ್ಲಿತ್ತು. ಮುಂದೆ ಬ್ರಿಟಿಷ್ ಕಲೆಕ್ಟರ್ ಗೋವನ್ ಎಂಬುವನು ಸ್ವಾಮಿ ನಿತ್ಯಾನಂದರ ಭಕ್ತನಾಗಿ ಜನಹಿತಕಾರ್ಯಗಳಿಗೆ ತೊಂದರೆ ಮಾಡಕೂಡದೆಂದು ಸರ್ಕಾರಿ ಆದೇಶವನ್ನು ಹೊರಡಿಸಿದನು. ಅವನೇ ನಿಂತು ಸ್ವಾಮಿಗಳ ಆಶ್ರಮಕ್ಕೆ ರಸ್ತೆ ನಿರ್ವಣವನ್ನು ಮಾಡಿಕೊಟ್ಟನು. ಕೋಟೆಯಲ್ಲಿರುವ ನಲವತ್ತಮೂರು ಗುಹೆಗಳು ಶ್ರೀಚಕ್ರದ ಆಧಾರದ ಮೇಲೆ ನಿತ್ಯಾನಂದರು ನಿರ್ಮಾಣ ಮಾಡಿದರು. ಇವುಗಳಲ್ಲಿ ಬಹುತೇಕ ಗುಹೆಗಳನ್ನು ನಿತ್ಯಾನಂದರೇ ನಿರ್ವಿುಸಿದ್ದು ವಿಶೇಷ. ಗುಹೆಯ ಕೆಲಸಕ್ಕೆ ನೆರವಾಗಲು ಕೆಲವರನ್ನು ಆಯ್ದುಕೊಂಡಿದ್ದರು. ಅವರಿಗೆ ಮಜೂರಿ ನೀಡುವಾಗ ಬಂಡೆಗಲ್ಲಿನ ಸಂದನ್ನು ತೋರಿಸಿ ‘ದುಡ್ಡು ಅಲ್ಲಿದೆ ತೆಗೆದುಕೊಳ್ಳಿ’ ಎಂದು ಹೇಳುತ್ತಿದ್ದರಂತೆ. ಈ ಗುಹೆಗಳು ಭವಿಷ್ಯತ್ ಕಾಲದಲ್ಲಿ ಸಂನ್ಯಾಸಿಗಳ ಆಧ್ಯಾತ್ಮಿಕ ಶಿಕ್ಷಣಕೇಂದ್ರವಾಗಬೇಕೆಂದು ಸ್ವಾಮಿ ನಿತ್ಯಾನಂದರು ಬಯಸಿದ್ದರು.

ಕಾಂಞಂಗಾಡಿನ ನಿತ್ಯಾನಂದಾಶ್ರಮದಿಂದ ಆಗ್ನೇಯಕ್ಕೆ ಐದು ಕಿ.ಮೀ ದೂರದಲ್ಲಿ ಗುರುವನವೊಂದು ನಿರ್ವಣಗೊಂಡಿತು ಅಲ್ಲಿಯ ಗುಹೆಯೊಂದರಲ್ಲಿ ನಿತ್ಯಾನಂದರು ಇರುತ್ತಿದ್ದರು. ಇದಕ್ಕೆ ‘ಕೊರೆಯಾನಂ’ ಎಂದು ಜನ ಕರೆಯುತ್ತಿದ್ದರು. ಇಲ್ಲಿ ಆದಿವಾಸಿ ಕೊರಗರು ಹಿಂದೆ ನೆಲೆಸಿದ್ದರು. ಇದು ಮುಂದೆ ‘ಗುರುವನ’ವಾಗಿ ಬೆಳೆಯಿತು. ಇಲ್ಲಿ ‘ಪಾಪನಾಶಿನಿ ಗಂಗಾ’ ಎಂಬ ತೊರೆ ಹಾಗೂ ಮಲೆರಾಯನ ಗುಡಿ ಉಂಟು. ಗುರುವನದ ಸುತ್ತ ಹಲವು ಮರಗಳಿದ್ದು ಇಲ್ಲಿ ಅನೇಕ ಶಕ್ತಿಗಳೂ ಗುಣಗಳೂ ಅಡಗಿವೆಯೆಂದು ಸ್ವಾಮಿ ನಿತ್ಯಾನಂದರು ಆಗಾಗ್ಗೆ ಹೇಳುತ್ತಿದ್ದರಂತೆ! ಅವರು ಇಲ್ಲಿರುವಾಗ ದೇವರಾಯ ಮಾಸ್ತರ್ ನಿತ್ಯಾನಂದರ ಸೇವೆಯನ್ನು ಮಾಡಿದರು. ಕೇರಳದ ‘ನಿತ್ಯಾನಂದಾಶ್ರಮ’ ರೂಪುಗೊಳ್ಳುತ್ತಿರುವ ವೇಳೆಯಲ್ಲೆ ಕಾಸರಗೋಡು, ಮಂಗಳೂರು, ಮಂಜೇಶ್ವರ, ಉಡುಪಿ, ಗೋಕರ್ಣ, ಶಿರಸಿ ಮುಂತಾದ ಕಡೆಗಳಲ್ಲಿ ಪರಿವ್ರಾಜಕರಾಗಿ ನಿತ್ಯಾನಂದರು ಸುತ್ತುತ್ತಿದ್ದರು. ಅವರು ಕೆಲಕಾಲ ಗೋಕರ್ಣದಲ್ಲಿಯೂ ಇದ್ದರೆಂಬ ವಿವರಗಳುಂಟು.

ಮುಂಬೈವಾಸ: ಸ್ವಾಮಿ ನಿತ್ಯಾನಂದರು 1933ನೆಯ ಸರಿಸುಮಾರಿಗೆ ಮುಂಬೈ ಹತ್ತಿರ ಇರುವ ವಜ್ರೇಶ್ವರಿಯ ಗಣೇಶಪುರಿಕ್ಷೇತ್ರದಲ್ಲಿ ವಾಸ ಮಾಡತೊಡಗಿದರು. ಅಲ್ಲಿ ಬಿಸಿನೀರಿನ ಕುಂಡಗಳಿದ್ದುವು. ಆ ಕುಂಡಗಳಿಂದಾಗಿ ಗಣೇಶಪುರಿ ಪ್ರಸಿದ್ಧಿಯಾಗಿತ್ತು. ಇದಕ್ಕಾಗಿ ಅನೇಕ ಯಾತ್ರಿಕರು ಆ ಕ್ಷೇತ್ರಕ್ಕೆ ಮಹತ್ತಾದ ಔಷಧಗುಣವುಳ್ಳ ಬಿಸಿನೀರಿನ ಕುಂಡಗಳ ಸ್ನಾನಕ್ಕಾಗಿಯೇ ಹೋಗುತ್ತಿದ್ದರು. ಅನೇಕ ಭಕ್ತರು ಇಲ್ಲಿಗೆ ಬಂದಾಗ ಓಡಾಡಲು ಸರಿಯಾದ ರಸ್ತೆಗಳಿರಲಿಲ್ಲ. ಆಗ ಸ್ವಾಮಿ ನಿತ್ಯಾನಂದರು ರಸ್ತೆಗಳನ್ನು ಮಾಡಿಸಿ, ಕೈಲಾಸಾಶ್ರಮ, ವೈಕುಂಠಾಶ್ರಮ, ಧರ್ಮಶಾಲೆ ಹಾಗೂ ಕುಡಿಯುವ ನೀರಿನ ಬಾವಿಗಳನ್ನು ಜನಹಿತಕ್ಕಾಗಿ ಕಟ್ಟಿಸಿದರು. ಸ್ವಾಮಿ ನಿತ್ಯಾನಂದರೇ ಹೋಟೆಲ್ಲುಗಳನ್ನು ಇಡಿಸಿದರು. ಅಲ್ಲಿ ನಿತ್ಯವೂ ಸಾವಿರಾರು ಬಡಮಕ್ಕಳಿಗೆ ಬೆಳಗ್ಗೆ ಬಾಲಭೋಜನವನ್ನು ಏರ್ಪಡಿಸಿ, ಮಿಠಾಯಿ ಮತ್ತು ಬಟ್ಟೆಗಳನ್ನು ಹಂಚುತ್ತಿದ್ದರು. ನಿತ್ಯವೂ ನೂರಾರು ಜನರು ಗುರುಗಳ ದರ್ಶನಕ್ಕಾಗಿ ಬರುತ್ತಿದ್ದರು. ನಿತ್ಯಾನಂದರಿಂದ ಕಷ್ಟಪರಿಹಾರವನ್ನೂ ಇಷ್ಟಾರ್ಥಸಾಧನೆಗಳನ್ನೂ ತತ್ತೊ್ವೕಪದೇಶಗಳನ್ನೂ ಭಕ್ತರು ಪಡೆಯುತ್ತಿದ್ದರು. ಸ್ವಾಮಿ ನಿತ್ಯಾನಂದರಲ್ಲಿ ಭಕ್ತರು ಅನೇಕ ಬಗೆಯ ಯೋಗಸಿದ್ಧಿಗಳನ್ನೂ ಆಶ್ಚರ್ಯಕರವಾದ ಪವಾಡಗಳನ್ನೂ ಕಾಣುತ್ತಿದ್ದರು. ಸ್ವಾಮಿ ನಿತ್ಯಾನಂದರ ಬಳಿಗೆ ದೇಶದ ನಾನಾ ಭಾಗಗಳಿಂದ ಜನರು ಬರುತ್ತಿದ್ದರು. ಅವರಲ್ಲಿ ಸಾಮಾನ್ಯಜನ ಇದ್ದಂತೆ ಅಸಾಮಾನ್ಯರೂ ಇರುತ್ತಿದ್ದರು. ಅಂಥವರಲ್ಲಿ ಗಾಂಧೀಜಿ, ಲಾಲ್​ಬಹದ್ದೂರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ ಪ್ರಮುಖರು. ಲಾಲ್​ಬಹದ್ದೂರ್ ಶಾಸ್ತ್ರಿ ಅವರು ಆಗ ರೈಲ್ವೆ ಮಂತ್ರಿಗಳಾಗಿದ್ದರು. ಅವರ ಸಂಬಂಧದ ಹುಡುಗಿಗೆ ಬಿಳಿತೊನ್ನು ಇತ್ತು. ಆಕೆಯೊಡನೆ ಬಂದಾಗ ಬಿಸಿನೀರಿನ ಕುಂಡದಲ್ಲಿ ಆರುದಿನ ಸ್ನಾನ ಮಾಡುವಂತೆ ನಿತ್ಯಾನಂದರು ಸೂಚಿಸಿದರು. ಅನಂತರ ರೋಗ ಪೂರ್ಣವಾಸಿಯಾಯಿತು. ಶಾಸ್ತ್ರಿಗಳನ್ನು ಬೆಂಚಿನಮೇಲೆ ಕುಳ್ಳಿರಿಸಿ, ಹಾಲು-ಹಣ್ಣುಕೊಟ್ಟು ‘‘ನೀವು ಮುಂದಿನ ಭಾರತದ ಪ್ರಧಾನಮಂತ್ರಿ ಆಗುತ್ತೀರಿ’ ಎಂದು ಆಶೀರ್ವದಿಸಿದರು. ಸ್ವಾಮೀಜಿಯವರ ಮಾತು ನಿಜವಾಯಿತು. ಉಡುಪಿಯ ಪೇಜಾವರ ಶ್ರೀಗಳು ನಿತ್ಯಾನಂದರನ್ನು ಭೇಟಿಯಾಗಿ ಅವತಾರ, ವಿಶ್ವರೂಪ ಇವುಗಳ ಬಗೆಗೆ ಮಾತನಾಡಿದಾಗ ಅವುಗಳ ಮರ್ಮವನ್ನು ಸೂಕ್ಷ್ಮವಾಗಿ ಪೇಜಾವರ ಶ್ರೀಗಳಿಗೆ ನಿತ್ಯಾನಂದರು ತಿಳಿಸಿದರಂತೆ.

ಅನುಗ್ರಹ-ಸಮಾಧಿ: ಸ್ವಾಮಿ ನಿತ್ಯಾನಂದರು ಅನೇಕ ಕಡೆ ಸಂಚರಿಸುತ್ತಿದ್ದಾಗ ಇವರ ಪ್ರಭಾವಕ್ಕೆ ನೂರಾರು ಜನ ಒಳಗಾದರು. ಇವರ ಶಿಷ್ಯೆಯಾಗಿ ಬಂದ ಕಟಪಾಡಿ ಗೌಡಸಾರಸ್ವತ ಬ್ರಾಹ್ಮಣ ನಾಯಕ ಮನೆತನದ ತುಳಸಿ ಮಾತಾ ಚಿಕ್ಕಂದೇ ವಿಧವೆಯಾಗಿದ್ದರು. ಆಕೆಯನ್ನು ಶಿಷ್ಯೆಯನ್ನಾಗಿ ಸ್ವೀಕರಿಸಿ, ಅದ್ವೈತದ ಬೆಳಕಿನ ಕಡೆಗೆ ಆಕೆಯನ್ನು ಕರೆದೊಯ್ದರು. ವಿಧವೆಯರಿಗೆ ಧಾರ್ವಿುಕಕಾರ್ಯಗಳಲ್ಲಿ ಬಹಿಷ್ಕಾರ ಇದ್ದಂತಹ ಕಾಲದಲ್ಲಿ, ಆಕೆಗೆ ಆಧ್ಯಾತ್ಮಿಕ ಶಿಕ್ಷಣ ನೀಡಿ, ಆತ್ಮಜ್ಞಾನ ಪಡೆಯಲು ಸ್ವಾಮಿಗಳು ನೆರವಾದರು. ಸ್ವಾಮಿ ನಿತ್ಯಾನಂದರು ಆತ್ಮಜ್ಞಾನ ಪಡೆಯಲು ಎಲ್ಲ ಜಾತಿಯವರಿಗೂ ಎಲ್ಲ ಸ್ತ್ರೀಯರಿಗೂ ಅವಕಾಶ ಉಂಟೆಂದು ಪ್ರತಿಪಾದಿಸಿದರು. ಅದರಂತೆ ಆಧ್ಯಾತ್ಮಿಕ ತತ್ತ್ವದ ಕಡೆಗೆ ಹೋಗಲು ಪ್ರತಿಯೊಬ್ಬರನ್ನೂ ಪ್ರೇರಿಸಿದರು. ಸ್ವಾಮೀಜಿ ಅವರ ಬಳಿ ಅನೇಕ ಲೌಕಿಕರು ಬಂದು ಶಿಷ್ಯತ್ವ ಪಡೆದರು. ಬೆಂಗಳೂರಿನ ಪ್ರಸಿದ್ಧ ಉದ್ಯಮಿಗಳಾಗಿದ್ದ ಲಕ್ಷ್ಮಣ್ ಸಾ ಖೋಡೆ ನಿತ್ಯಾನಂದರ ಪರಿಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದರು. ಸ್ವಾಮಿ ನಿತ್ಯಾನಂದರು 1961ರ ಆಗಸ್ಟ್ 7ರಂದು ಭಕ್ತರನ್ನು ಕರೆದು ‘ಸೂರ್ಯನನ್ನು ನೋಡಬೇಕಾದವರು ಇಂದೇ ನೋಡಿ. ನಾಳೆ ನೋಡಲು ಸಿಗುವುದು ದುರ್ಲಭ’ ಎಂದರಂತೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ಇತರೆ ರಾಜ್ಯಗಳಿಂದ ನೂರಾರು ಭಕ್ತರು ಬಂದು ಸೇರಿದರು. ಆದಿನ ಸಂಜೆ ಪಿ.ಎಸ್.ಮೆಹತಾ ಎಂಬುವರಿಗೆ ಒಂದು ದೊಡ್ಡ ಬಟ್ಟೆಗಂಟು ಕೊಟ್ಟು ಕಾಂಞಂಗಾಡಿನ ಆಶ್ರಮ ಅಭಿವೃದ್ಧಿ ಪಡಿಸಲು ನಿತ್ಯಾನಂದರು ಸೂಚನೆ ನೀಡಿದರು. ‘ನಾಳೆ ಮಹಾಸಮಾಧಿ’ ಎಂದು ಮೂರು ಬಾರಿ ಉಚ್ಚರಿಸಿದರು. ಅವರ ಪ್ರೀತಿಯ ಶಿಷ್ಯ ಜನಾನಂದ ಸ್ವಾಮಿ ಅವರನ್ನು ಒಂದೆರಡು ಬಾರಿ ಕರೆದರು. ಗೋಪಾಲ ಮಾಮಾ ಅವರನ್ನು ಕರೆದು ‘ಸ್ವಾಮಿ ಆಯಿತು. ಯೋಗಿ ಆಯಿತು. ಇನ್ನು ಸ್ಥಿರಸಮಾಧಿ ಮಾತ್ರ’ ಎಂದು ಹೇಳಿದರು. ಅನಂತರ ಭಕ್ತರನ್ನು ಉದ್ದೇಶಿಸಿ-‘‘ಶರೀರ ಬಿಡುವುದು ಅನಿವಾರ್ಯ. ಸಮಾಧಿಸ್ಥನಾದರೂ ಇಲ್ಲಿಯೇ ನಾನಿರುತ್ತೇನೆ. ಸಮಾಧಿ ಕಟ್ಟುವ ಕೆಲಸ ಆರಂಭವಾಗಲಿ. ಯಾವುದೇ ಭಕ್ತ ಸಮಾಧಿ ದರ್ಶನಕ್ಕೆ ಬಂದರೆ ತೊಂದರೆ ಕೊಡಬೇಡಿ. ಜಾತಿಭೇದ ಎಂದೂ ಮಾಡದಿರಿ’ ಎಂದು ಉದ್​ಘೊಷಿಸಿದರು. 1961ರ ಆ.8ರಂದು ಬೆಳಿಗ್ಗೆ 10.45ಕ್ಕೆ ಮಹಾಸಮಾಧಿಗೆ ಏರಿದರು. ಅವರು ಬ್ರಹ್ಮದಲ್ಲಿ ಲೀನವಾದರು.

ಸ್ವಾಮಿ ನಿತ್ಯಾನಂದರು ಭಕ್ತಿಯೋಗ, ಕುಂಡಲಿನೀಯೋಗ ಮತ್ತು ಜ್ಞಾನಯೋಗಗಳ ವಿರಾಡ್ರೂಪದ ಸಂಕೇತವಾಗಿದ್ದರು. ಸಾಮಾಜಿಕ ಆಂದೋಲನದ ಜತೆಗೆ ಆಧ್ಯಾತ್ಮಿಕ ಬೆಳಕನ್ನು ಜನರಲ್ಲಿ ವ್ಯಾಪಕವಾಗಿ ಹರಡಿದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *