ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೆಕರ್ ಮಹಾರಾಜ್

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​

ಮಹಾರಾಷ್ಟ್ರದ ಸಂತಶ್ರೇಷ್ಠರಲ್ಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜ್​ರ ಹೆಸರು ಚಿರಸ್ಮರಣೀಯವಾದುದು. ಇವರ ಸದ್ಗುರುಗಳು ಏಹಳೇಗಾಂವದ ತುಕಾಮಾಯಿ ಮಹಾರಾಜರು. ಬ್ರಹ್ಮಚೈತನ್ಯರು ಗೋಂದಾವಲೆ ಎಂಬ ಸುಕ್ಷೇತ್ರವನ್ನು ತಮ್ಮ ನಾಮಜಪದ ಸಾಧನ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡರು. ಈ ಊರು ಸತಾರದಿಂದ 64 ಕಿ.ಮೀ. ದೂರದಲ್ಲಿದೆ. ಬ್ರಹ್ಮಚೈತನ್ಯ ಸಮಾಧಿ ಮಂದಿರವು ಗೋಂದಾವಲೆ ಬಸ್​ನಿಲ್ದಾಣದಿಂದ ಎರಡುನೂರು ಮೀಟರ್ ಅಂತರದಲ್ಲಿದೆ. ಅವರ ಸಮಾಧಿ ನೆಲಮನೆಯಲ್ಲಿದೆ. ಅದರ ಮೇಲೆ ಗೋಪಾಲಕೃಷ್ಣ ಮೂರ್ತಿ ಉಂಟು. ಇದೇ ಪರಿಸರದಲ್ಲಿ ಅಯಿಸಾಹೇಬರ ಮಂದಿರ, ನಾಮಮಂದಿರ, ಗೋಶಾಲೆಗಳುಂಟು. ಗೋಂದಾವಲೆ ಗ್ರಾಮದಲ್ಲಿ ಮಹಾರಾಜರು ಹುಟ್ಟಿದ ಹಾಗೂ ವಾಸ ಮಾಡಿದ ಮನೆಗಳು ಈಗಲೂ ಇವೆ. ಬ್ರಹ್ಮಚೈತನ್ಯರೆ ಕಟ್ಟಿದ, ಕಟ್ಟಿಸಿದ ರಾಮಮಂದಿರ, ದತ್ತಮಂದಿರ ಮತ್ತು ಶನಿಮಂದಿರಗಳಿವೆ.

ಜನನ; ಪರಿವ್ರಾಜಕ: ಮಹಾರಾಷ್ಟ್ರದಲ್ಲಿ ‘ನಾಮಜಪ’ದ ಮಹಾ ಆಂದೋಲನವನ್ನು ಆಧುನಿಕ ಕಾಲದಲ್ಲಿ ವ್ಯಾಪಕವಾಗಿ ಪ್ರಾರಂಭಿಸಿದವರು ಬ್ರಹ್ಮಚೈತನ್ಯ ಮಹಾರಾಜ್. ಇದು ಕರ್ನಾಟಕದಲ್ಲಿ ಬೆಳೆದದ್ದು ಅವರ ಸಚ್ಛಿಷ್ಯರಾದ ಬ್ರಹ್ಮಾನಂದ ಮಹಾರಾಜ್ ಅವರಿಂದ. ಬ್ರಹ್ಮಾನಂದರ ವ್ಯಕ್ತಿತ್ವವು ಅಲೌಕಿಕವಾಗಿತ್ತು. ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಜನರ ಮೇಲೆ ಸದ್ಗುರು ಬ್ರಹ್ಮಚೈತನ್ಯರ ಪ್ರಭಾವ ಆಳವಾಗಿ ಬೇರುಬಿಟ್ಟಿತ್ತು. ಕವಿ ದ.ರಾ.ಬೇಂದ್ರೆ ಬ್ರಹ್ಮಚೈತನ್ಯರಿಂದ ಪ್ರಭಾವಿತರಾಗಿದ್ದರು. ಬ್ರಹ್ಮಚೈತನ್ಯರ ಶಿಷ್ಯಬಳಗ ಬಲು ದೊಡ್ಡದು. ಅವರಲ್ಲಿ ಮುಂಬೈಯ ಮಾಲಾಡದಲ್ಲಿದ್ದ ತಾತ್ಯಾಸಾಹೇಬ ಕೇತಕರ, ನಾಶಿಕದ ಕುರ್ತಕೋಟಿ ಮಹಾಭಾಗವತರು, ಜಾಲನಾದ ಪಾಂಡುರಂಗ ಮಹಾರಾಜರು, ಆನಂದ ಸಾಗರ ಮಹಾರಾಜರು ಮತ್ತು ಪ್ರಹ್ಲಾದ ಮಹಾರಾಜರು ಪ್ರಮುಖರು. ಆತ್ಮೋದ್ಧಾರಕ್ಕೆ ‘ನಾಮಜಪ’ವೊಂದೇ ಪ್ರಮುಖ ಸಾಧನವೆಂದು ಇವರೆಲ್ಲರೂ ಏಕಕಂಠದಿಂದ ಸಾರಿದರು.

ಬ್ರಹ್ಮಚೈತನ್ಯ ಮಹಾರಾಜರು ಶಕೆ 1766 ಮಾಘ ಶುದ್ಧ ದ್ವಾದಶಿ ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ಆವಿರ್ಭಾವಗೊಂಡರು. ಇದು ಇಂಗ್ಲಿಷ್ ದಿನಾಂಕದಂತೆ 1845ರ ಫೆಬ್ರವರಿ 19 ಆಗಿತ್ತು. ಮಹಾರಾಜರು ಹುಟ್ಟಿದ್ದು ಗೋಂದಾವಲೆಯಲ್ಲಿಯೇ. ಅವರು 12ನೆಯ ವಯಸ್ಸಿನಲ್ಲೆ ಸದ್ಗುರು ಏಹಳೇಗಾಂವದ ತುಕಾಮಾಯಿ ಅವರ ಪ್ರಭಾವಕ್ಕೆ ಒಳಗಾದರು. ಅವರಿಂದ ದತ್ತದೀಕ್ಷೆ ಪಡೆದು ‘ನಾಮಜಪ’ ಪ್ರಚಾರ ಮಾಡತೊಡಗಿದರು. ಆಗಿನಿಂದಲೇ ಪರಿವ್ರಾಜಕರಾದರು. ಅವರು ಭಾರತದಾದ್ಯಂತ ಓಡಾಡಿದರು; ಅನೇಕ ಸುಕ್ಷೇತ್ರಗಳನ್ನು ಕಂಡರು. ಅವರು ಅನೇಕ ರಾಮಮಂದಿರಗಳನ್ನು ಹನುಮಾನ್ ಮಂದಿರಗಳನ್ನು ದರ್ಶಿಸಿದರು. ಅವರು ಪ್ರವಾಸಕಾಲದಲ್ಲಿ ತತ್ಕಾಲೀನ ಸಮಾಜವನ್ನು ನೇರವಾಗಿ ನೋಡಿದರು. ಜನಸಾಮಾನ್ಯರ ಸ್ಥಿತಿಗತಿಗಳನ್ನು ಹತ್ತಿರದಿಂದ ಪರಿಭಾವಿಸಿದರು. ಅವರು ಈಜುವುದರಲ್ಲಿ ಪರಿಣತಿ ಪಡೆದಿದ್ದರು. ಜತೆಗೆ, ಕುದುರೆ ಸವಾರಿಯೂ ಗೊತ್ತಿತ್ತು.

ಬ್ರಹ್ಮಚೈತನ್ಯರನ್ನು ಬಾಲ್ಯದಲ್ಲಿ ಅಜ್ಜ-ಅಜ್ಜಿ ಗಣಪತಿ ಎಂದು ಕರೆಯುತ್ತಿದ್ದರು. ಮೊಮ್ಮಗನನ್ನು ಕಂಡರೆ ಪಂಚಪ್ರಾಣ. ಬಾಲ್ಯದ ಆಟ, ಪಾಠ, ದೈವಭಕ್ತಿ, ಗುರು-ಹಿರಿಯರ ಬಗೆಗಿನ ಗೌರವ ಕಂಡು ತಂದೆ-ತಾಯಿ ಹಿರಿಹಿರಿ ಹಿಗ್ಗುತ್ತಿದ್ದರು. ಅವರು ‘ಗಣೂ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಆ ಊರಿನ ಜನ ‘ಗಣೂ ಬುವಾ’ ಎಂದು ಕರೆಯುತ್ತಿದ್ದರು. ಬ್ರಹ್ಮಚೈತನ್ಯರು ಉತ್ತರ ಭಾರತದಲ್ಲಿ ತುಂಬ ಹೆಸರು ಮಾಡಿದ್ದರು. ಅಲ್ಲಿಯ ಜನ ಇವರನ್ನು ‘ದಖ್ಖನಕೆ ಮಹಾರಾಜ್’ ಎಂದು ಆದರಿಸುತ್ತಿದ್ದರು. ಮಹಾರಾಜರ ಗುರುಗಳಾದ ‘ತುಕಾಮಾಯಿ’ ಅವರು ‘ನನ್ನ ಮಗು’ ಎಂದು ಮರಾಠಿಯಲ್ಲೇ ಕರೆಯುತ್ತಿದ್ದರು.

ವ್ಯಕ್ತಿಮತ್ವ: ಬ್ರಹ್ಮಚೈತನ್ಯರು ಎಲ್ಲೇ ಹೋದರೂ ಜನ ಮುತ್ತಿಕೊಳ್ಳುತ್ತಿದ್ದರು. ಅವರ ಪ್ರವಚನಗಳಿಗೆ ಜನಸಂದಣಿ ಸದಾ ಇರುತ್ತಿತ್ತು. ಅವರು ಮರಾಠಿಯಲ್ಲದೆ ಹಿಂದಿ, ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯ ಪಡೆದಿದ್ದರು. ಅವರೊಬ್ಬ ಉತ್ತಮ ಪ್ರವಚನಕಾರರೂ ಆಗಿದ್ದರು.

ಮಹಾರಾಜರ ವ್ಯಕ್ತಿಮತ್ವ ಬಲು ವಿಲಕ್ಷಣವಾದುದು. ಅವರ ಮುಖಮಂಡಲ ಸದಾ ದೇದೀಪ್ಯಮಾನವಾಗಿರುತ್ತಿತ್ತು. ಅವರ ಕಣ್ಣುಗಳಲ್ಲಿ ಅಪೂರ್ವ ತೇಜಸ್ಸು ತುಂಬಿರುತ್ತಿತ್ತು. ಅವರ ವಾಣಿ ಮೃದುಮಧುರವಾಗಿರುತ್ತಿತ್ತು.

ಗೊಂದಾವಲೆಗೆ ಎಲ್ಲ ಕಡೆಯಿಂದ ಜನ ಬರುತ್ತಿದ್ದರು. ಮಹಾರಾಜರು ತಮ್ಮ ಹೊಟ್ಟೆಯ ಮಕ್ಕಳಂತೆ ಅವರನ್ನು ಪ್ರೀತಿ ಮಾಡುತ್ತಿದ್ದರು. ಅವರು ಯಾರಿಂದಲೂ ವಂತಿಗೆ ಸಂಗ್ರಹಿಸಲು ಹೋಗುತ್ತಿರಲಿಲ್ಲ. ಲೋಕದ ಪ್ರಸಿದ್ಧಿಗೆ ಇವರು ವಿಮುಖರಾಗಿದ್ದರು. ಬ್ರಹ್ಮಚೈತನ್ಯರು ಬಂದವರಿಗೆಲ್ಲ ತಾವೇ ಊಟ ಬಡಿಸುತ್ತಿದ್ದರು. ಅದು ‘ರಾಮಪ್ರಸಾದ’ ಎಂದು ತಿಳಿಯಬೇಕೆಂದು ಆಗ್ರಹಿಸುತ್ತಿದ್ದರು. ಅನೇಕ ಬಾರಿ ಬಂದಂಥ ಜನರಿಗೆ ಊಟಕ್ಕೆ ವ್ಯವಸ್ಥೆ ಮಾಡಿ ಅವರ ಊಟವಾದ ಮೇಲೆ ಇವರು ಊಟ ಮಾಡುತ್ತಿದ್ದರು. ಎಲೆಯ ಮುಂದೆ ಕುಳಿತು ಊಟ ಪ್ರಾರಂಭ ಮಾಡುವವರೆಗೂ ‘ಜಯ ಜಯ ಶ್ರೀರಾಮ, ಜಯ ಜಯ ಶ್ರೀರಾಮ’ ಎಂದು ಉಚ್ಚಸ್ವರದಲ್ಲಿ ನಾಮಸ್ಮರಣೆ ಮಾಡುತ್ತಿದ್ದುದುಂಟು. ಈ ಪದ್ಧತಿಯನ್ನು ಮಹಾರಾಜರೇ ರೂಢಿಗೆ ತಂದರು. ಅವರು ಯಾವುದೇ ಕೆಲಸ ಮಾಡುವಾಗ ನಾಮಸ್ಮರಣೆ ಇರುತ್ತಿತ್ತು; ಅದನ್ನು ಉಳಿದವರು ಅನುಸರಿಸುತ್ತಿದ್ದರು. ಅವರು ತಮ್ಮ ಬಳಿ ಬಂದವರ ಮೈಮೇಲೆ ಕೈಯಾಡಿಸಿ ಭಕ್ತಿಪರವಶವಾಗಿಸುತ್ತಿದ್ದರು.

ನಾಲ್ಕು ಸರಳ ತತ್ತ್ವಗಳು: ಬ್ರಹ್ಮಚೈತನ್ಯರು ಭಾರತದ ನಾನಾಕಡೆ ರಾಮಮಂದಿರಗಳನ್ನು ಸ್ಥಾಪಿಸಿದರು. ಇಲ್ಲಿ ತಾವು ಕಂಡುಕೊಂಡ ನಾಲ್ಕು ಮುಖ್ಯ ಸಿದ್ಧಾಂತಗಳನ್ನು ತಿಳಿಸಿ ಹೇಳಿ ಅದನ್ನು ಆಚರಣೆಯಲ್ಲಿ ತರುತ್ತಿದ್ದರು. ಆ ನಾಲ್ಕು ಸಿದ್ಧಾಂತಗಳು ಸರಳವಾಗಿದ್ದುವು. ನಾಮಸ್ಮರಣೆ, ಸಗುಣೋಪಾಸನೆ, ಅನ್ನದಾನ ಮತ್ತು ಗೋರಕ್ಷಣೆ. ರಾಮನಾಮ ಸ್ಮರಣೆ ಅಖಂಡವಾಗಿ ನಡೆಯುತ್ತಿರಬೇಕೆಂದೂ ಸಗುಣೋಪಾಸನೆ ಮನಸ್ಸಿನ ಕಲ್ಮಶವನ್ನು ಹೊರತೆಗೆಯುತ್ತದೆಂದೂ ಹೇಳುತ್ತಿದ್ದರು. ರಾಮಮಂದಿರಗಳನ್ನು ಭಾರತದ ಅನೇಕಕಡೆ ನಿರ್ಮಾಣ ಮಾಡಿದ್ದು ಸರಿಯಷ್ಟೆ. ಅವುಗಳನ್ನು ಆಸಕ್ತರಾದ ಆಸ್ತಿಕರಿಗೆ ವಹಿಸುತ್ತ- ‘ಮಂದಿರವು ಆಧ್ಯಾತ್ಮಿಕ ಜಿಜ್ಞಾಸುಗಳ ವಿಶ್ವವಿದ್ಯಾಲಯವಾಗಿರಬೇಕು. ಅಲ್ಲಿಂದಲೇ ಎಲ್ಲ ರೀತಿಯ ಸದ್ವಿಚಾರ, ಸತ್​ಪ್ರವೃತ್ತಿ ಹಾಗೂ ಆಧ್ಯಾತ್ಮಿಕ ಸಾಧನೆಗಳ ಪ್ರಸಾರವಾಗಬೇಕು. ಅದಕ್ಕಾಗಿ ಅಲ್ಲಿ ನಾಮಸ್ಮರಣೆ, ಸಗುಣೋಪಾಸನೆ, ಅನ್ನದಾನ ಹಾಗೂ ಗೋರಕ್ಷಣೆಗಳು ಅವ್ಯಾಹತವಾಗಿ ನಡೆಯುತ್ತಿರಬೇಕು’ ಎಂದು ಭಕ್ತರಲ್ಲಿಯೂ ಗುರುಬಂಧುಗಳಲ್ಲಿಯೂ ಆಗ್ರಹಿಸುತ್ತಿದ್ದರು. ತಮ್ಮ ಪ್ರಾರಂಭಿಕ ಮೂವತ್ತು ವರ್ಷಗಳ ಕಾಲ ಸಂಚಾರದಲ್ಲಿ ಕಳೆದರು. ಭಾರತದಾದ್ಯಂತ ರಾಮನಾಮದ ಮಹಿಮೆಯನ್ನು ಸಾರುತ್ತ ಹೋದರು. ಅವರು ಹೋದ ಕಡೆಯೆಲ್ಲ ದಾಸಬೋಧ, ನಾಥಭಾಗವತ ಮತ್ತು ಜ್ಞಾನೇಶ್ವರಿ ಗ್ರಂಥಗಳನ್ನು ಉದಾಹರಿಸುತ್ತ ಪ್ರವಚನ ಮಾಡುತ್ತಿದ್ದರು. ಈ ಗ್ರಂಥಗಳಲ್ಲಿ ಅಡಗಿರುವ ರಹಸ್ಯಗಳನ್ನು ಸರಳ ಭಾಷೆಯಲ್ಲಿ ಪುನರ್ ನಿರೂಪಿಸುತ್ತಿದ್ದರು. ಅವರ ಪ್ರವಚನಗಳಲ್ಲಿ ನಾಮಸ್ಮರಣೆ ಮತ್ತು ಭಗವದ್​ಭಕ್ತಿಗಳೇ ನಿರೂಪಣದ ಮುಖ್ಯ ವಿಷಯಗಳಾಗಿರುತ್ತಿದ್ದುವು.

ಬ್ರಹ್ಮಚೈತನ್ಯರು ಪರಿಶುದ್ಧ ಪಾರಮಾರ್ಥಿಕ ಜೀವನ ನಡೆಸಿದರು. ಅವರು ಪ್ರತಿನಿತ್ಯ ಎಲ್ಲಿದ್ದರೂ ಬೆಳಗಿನ ಮೂರಕ್ಕೆ ಎದ್ದು ನಾಮಸ್ಮರಣೆಯೊಂದಿಗೆ ನಿತ್ಯಕರ್ಮಗಳನ್ನು ಮುಗಿಸಿ, ನಾಮಸ್ಮರಣೆ ಹಾಗೂ ಭಜನೆಯಲ್ಲಿ ಮುಳುಗಿ ಹೋಗುತ್ತಿದ್ದರು. ಬೆಳಕು ಹರಿದರೂ ‘ರಾಮನಾಮ’ ಅವರ ಮೈ-ಮನಸ್ಸುಗಳನ್ನು ತುಂಬಿಕೊಂಡಿರುತ್ತಿತ್ತು. ಅನಂತರ ರಾಮದೇವರನ್ನು ಅರ್ಚಿಸಿ, ಮಂಗಳಾರತಿಯೊಂದಿಗೆ ಬೆಳಗಿನ ದಿನಚರಿ ಪ್ರಾರಂಭವಾಗುತ್ತಿತ್ತು. ಬಳಿಕ, ದೂರದೂರದಿಂದ ಕಾಣಲು ಬಂದ ಗುರುಬಂಧುಗಳ ಜತೆ ನಾಮಜಪದ ಮಹತ್ತ್ವವನ್ನು ತಿಳಿಸುತ್ತಿದ್ದರು. ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಅಡುಗೆ ಸಿದ್ಧವಾಗುತ್ತಿದ್ದಲ್ಲಿಗೆ ಹೋಗಿ ನೆರವಾಗುತ್ತಿದ್ದರು. ಅನಂತರ, ಅಲ್ಲಿಗೆ ಬಂದ ಎಲ್ಲರಿಗೂ ಅನ್ನದಾನ ನಡೆಯುತ್ತಿತ್ತು. ಆಮೇಲೆ ತಾವು ಊಟ ಮಾಡಿ ‘ಶ್ರೀರಾಮಾರ್ಪಣಮಸ್ತು’ ಎಂದು ಹೇಳಿ, ತುಸು ವಿಶ್ರಾಂತಿ ನಂತರ ಸದ್ಗ›ಂಥಗಳ ವ್ಯಾಸಂಗ ಮಾಡುತ್ತಿದ್ದರು. ಸಂಜೆ ಹಸುಗಳ ಬಳಿ ಹೋಗಿ ಅವುಗಳ ಮೈತಿಕ್ಕಿ, ಹುಲ್ಲು ನೀಡಿ, ಅವುಗಳ ಆರೈಕೆಯಲ್ಲಿ ಆನಂದಿತರಾಗುತ್ತಿದ್ದರು. ಭಜನೆ, ಸತ್ಸಂಗ, ಆರತಿ ನಾಮಜಪದೊಡನೆ ಸಂಜೆಯ ಕಲಾಪಗಳು ಮುಗಿಯುತ್ತಿದ್ದುವು. ಅನಂತರ ಊಟ ಮುಗಿಸಿಕೊಂಡು ರಾಮನಾಮಧ್ಯಾನದಲ್ಲಿ ಮುಳುಗಿರುತ್ತಿದ್ದರು. ಮಹಾರಾಜ್​ರು ಮಧ್ಯರಾತ್ರಿಗೆ ಮಲಗಲು ಹೋಗುತ್ತಿದ್ದರು.

ಮಹಾ ಸಮಾಧಿ: ಭಗವಂತನ ಅಸ್ತಿತ್ವದ ನಿಜವಾದ ಅರಿವು ಉಂಟಾಗಿ ಅವನ ಅನುಸಂಧಾನದಲ್ಲಿ ಜೀವನದ ಪ್ರತಿಯೊಂದು ಕ್ಷಣವನ್ನು ಸಾರ್ಥಕವಾಗಿ ಕಳೆಯಬೇಕೆಂದು ಮಹಾರಾಜ್ ಬಂದಂಥ ಆಸ್ತಿಕರಿಗೆಲ್ಲ ತಿಳಿಸುತ್ತಿದ್ದರು. ಆದರೆ, ಇದು ಸಾಮಾನ್ಯ ಸ್ತ್ರೀ-ಪುರುಷರಿಗೆ ಕಠಿಣವೆಂದು ಅವರಿಗೆ ಗೊತ್ತಿತ್ತು. ಆಗ ಗೋಂದಾವಲೆಯಲ್ಲಿ ರಾಮದೇವರನ್ನು ತಂದು ಪ್ರತಿಷ್ಠಾಪಿಸಿದರು. ಅದು ಕೇವಲ ಕಲ್ಲಿನ ವಿಗ್ರಹವಲ್ಲ. ನಾವು ಎಷ್ಟು ಆಳವಾಗಿ ಭಗವಂತನನ್ನು ಆರಾಧನೆ ಮಾಡುತ್ತೇವೋ ಅಷ್ಟರಮಟ್ಟಿಗೆ ಪ್ರತಿಫಲ ಉಂಟೆಂದು ಬ್ರಹ್ಮಚೈತನ್ಯರು ಹೇಳುತ್ತಿದ್ದರು. ಒಮ್ಮೆ ಮಹಾರಾಜರು ನೈಮಿಷಾರಣ್ಯಕ್ಕೆ ಹೊರಟು ನಿಂತಾಗ ರಾಮನ ಕಣ್ಣಲ್ಲಿ ನೀರು ತುಂಬಿತಂತೆ. ಈ ಸಂಗತಿಯನ್ನು ಮಹಾರಾಜರು ಉದಾಹರಿಸುತ್ತ, ಪ್ರತಿಯೊಬ್ಬರು ಆಳದ ಮನಸ್ಸಿನಿಂದಲೂ ಪ್ರೇಮಲ ಸ್ವಭಾವದಿಂದಲೂ ರಾಮನನ್ನು ಕಣ್ತುಂಬ ತುಂಬಿಸಿಕೊಂಡು ಹೋಗಬೇಕೆಂದು ಬಂದವರಿಗೆ ತಿಳಿಸುತ್ತಿದ್ದರು. ರಾಮನ ಮೇಲೆ ಯಾರಿಗೆ ಶ್ರದ್ಧೆ ತುಂಬುತ್ತದೋ ಅವರಿಗೆ ಯಾವುದೇ ಬಗೆಯ ದುಃಖಬಾಧೆ ಆಗುವುದಿಲ್ಲವೆಂದು ತಿಳಿಸಿಕೊಡುತ್ತಿದ್ದರು. ಭಗವಂತನಿಗೆ ಕರ್ತೃತ್ವವನ್ನು ಸಮರ್ಪಣೆ ಮಾಡಿದಾಗ ಅಹಂಭಾವ ಇಲ್ಲವಾಗುತ್ತದೆ. ಈ ಯುಕ್ತಿಯನ್ನು ಎಲ್ಲರೂ ಕಲಿಯಬೇಕೆಂದು ಬ್ರಹ್ಮಚೈತನ್ಯರು ಆಗ್ರಹಿಸುತ್ತಿದ್ದರು.

ಪ್ರತಿಯೊಬ್ಬ ಮನುಷ್ಯನಲ್ಲೂ ಭಗವಂತನ ಕಡೆಗೆ ಹೋಗುವ ಗುಣ ಸುಪ್ತವಾಗಿ ಅಡಗಿರುತ್ತದೆ. ಆ ಗುಣದ ಉಪಯೋಗ ಹಾಗೂ ವಿಕಾಸ ಮಾಡಿಕೊಳ್ಳುವ ರಹಸ್ಯದ ಬಗ್ಗೆ ಬ್ರಹ್ಮಚೈತನ್ಯರು ತಿಳಿಹೇಳುತ್ತಿದ್ದರು. ನಾವು ಮಾಡುವ ತತ್ತ್ವವು ಎಷ್ಟು ಶ್ರೇಷ್ಠವಾಗಿದ್ದರೂ ಅದು ಫಲಕಾಣಬೇಕಾದರೆ ಆಚರಣೆಯಿಂದ ಮಾತ್ರ ಸಾಧ್ಯವೆಂದು ತಿಳಿಹೇಳುತ್ತಿದ್ದರು. ಯಾವ ಪ್ರಪಂಚದಲ್ಲಿ ರಾಮನಿಲ್ಲವೊ ಆ ಪ್ರಪಂಚದಲ್ಲಿ ಆರಾಮವಿಲ್ಲವೆಂದು ಯುಕ್ತಿ-ಯುಕ್ತವಾಗಿ ಉದ್​ಘೊಷಿಸುತ್ತಿದ್ದದ್ದುಂಟು. ಬ್ರಹ್ಮಚೈತನ್ಯರು ತಮ್ಮ 45ನೇ ವರ್ಷ ತುಂಬಿದ ಮೇಲೆ ಗೋಂದಾವಲೆಯನ್ನು ಬಿಟ್ಟು ಹೊರಹೋಗುತ್ತಿರಲಿಲ್ಲ. 1913ರಲ್ಲಿ ಆದ ರಾಮನವಮಿ ಉತ್ಸವವೇ ಮಹಾರಾಜರ ಜೀವನದಲ್ಲಿನ ಕೊನೆಯ ಉತ್ಸವ. ಒಂಭತ್ತು ದಿನಗಳವರೆಗೆ ಅಖಂಡವಾಗಿ ನಾಮಸ್ಮರಣೆ ನಡೆಯಿತು. ಪ್ರತಿದಿನ ಕೀರ್ತನೆ, ಪುರಾಣ, ಪ್ರವಚನ, ಅಧ್ಯಾತ್ಮಚರ್ಚೆ ಮುಂತಾದ ವಿಷಯಗಳು ನಡೆದುವು. ಆ ವರ್ಷ ಗೋಂದಾವಲೆಯಲ್ಲಿ ಸಾವಿರಾರು ಜನ ನೆರೆದಿದ್ದರು. ಜನರೆಲ್ಲ ಬಂದು ಬ್ರಹ್ಮಚೈತನ್ಯರಿಗೆ ನಮಸ್ಕಾರ ಮಾಡುತ್ತಿದ್ದರು. ಪ್ರತಿಯೊಬ್ಬರ ಬೆನ್ನಮೇಲೆ ಕೈಯಾಡಿಸಿ ‘ಮಗು, ಭಗವಂತನು ನಮ್ಮನ್ನು ಯಾವ ಪರಿಸ್ಥಿತಿಯಲ್ಲಿ ಇಟ್ಟಿರುತ್ತಾನೋ ಅದರಲ್ಲಿಯೇ ನಾವು ಸಮಾಧಾನ ಹೊಂದಬೇಕು. ಆದರೆ, ಅವನ ನಾಮವನ್ನು ಎಂದೂ ಮರೆಯಬಾರದು. ಅವನು ನಮ್ಮ ಬೆನ್ನ ಹಿಂದೆ ನಿಂತು ರಕ್ಷಿಸುತ್ತಾನೆ. ನನ್ನ ಮಾತನ್ನು ನೀವು ಕೊನೆಯವರೆಗೂ ಮರೆಯಬೇಡಿರಿ’ ಎಂದು ಉಪದೇಶ ಮಾಡುತ್ತಿದ್ದರು.

ಅಂದು ಡಿಸೆಂಬರ್ 22. ರಾಮಸ್ಮರಣೆ ಮಾಡುತ್ತ ಮಹಾರಾಜರು ಮಲಗಿದ್ದರು. ಆಗ ಅವರ ವಯಸ್ಸು 69. ಶರೀರ ಗಳಿತವಾಗಿದ್ದರೂ ಮನಸ್ಸು ರಾಮನಲ್ಲಿಯೇ ನೆಟ್ಟಿತ್ತು. ಅವರ ಸಚ್ಛಿಷ್ಯರಾದ ಸದ್ಗುರು ಬ್ರಹ್ಮಾನಂದ ಮುಂತಾದವರು ನಾಮಸ್ಮರಣೆ ನಡೆಸುತ್ತಿದ್ದರು. ಬ್ರಹ್ಮಚೈತನ್ಯರು ಹಿಂದಿನ ರಾತ್ರಿಯೇ ರಾಮನಾಮದಲ್ಲಿ ಮುಳುಗಿಹೋಗಿದ್ದರು. ಭಕ್ತರಿಂದಲೂ ಸಚ್ಛಿಷ್ಯರಿಂದಲೂ ಭಜನೆ ನಡೆಯುತ್ತಿತ್ತು. ಬ್ರಹ್ಮಾನಂದರ ಮನಸ್ಸು ರಾಮನಲ್ಲಿಯೇ ನೆಲೆಸಿತ್ತು. ಬೆಳಗಿನ ಸೂರ್ಯೋದಯದ ಹೊತ್ತಿಗೆ ಶಕೆ 1835 ಮಾರ್ಗಶೀರ್ಷ ಮಾಸ ವದ್ಯದಶಮಿಯಂದು ರಾಮನಾಮ ನುಡಿಯುತ್ತಲೇ ತಮ್ಮ ದೇಹ ತ್ಯಜಿಸಿದರು. ವಿಧಿಪೂರ್ವಕವಾಗಿ ಬ್ರಹ್ಮಚೈತನ್ಯರ ಪಾರ್ಥಿವಶರೀರವನ್ನು ಸಮಾಧಿ ಮಾಡಲಾಯಿತು.

ಬ್ರಹ್ಮಚೈತನ್ಯರು ಭಗವಂತನ ನಾಮದ ಮಹಿಮೆಯನ್ನು ಹಾಡುತ್ತ ಆಯುಷ್ಯದ ಪ್ರತಿಯೊಂದು ಕ್ಷಣವನ್ನು ಸಾರ್ಥಕವಾಗಿ ಕಳೆದರು. ನಾಮದ ಮಹತ್ತ್ವವನ್ನು ಹೇಳುವುದಕ್ಕಾಗಿಯೇ ಅವರು ಹುಟ್ಟಿ ಬಂದರು. ಅವರು ತಮ್ಮ ಜೀವಮಾನದ ತುಂಬೆಲ್ಲ ನಾಮದ ಗಾಯನವನ್ನೇ ಮಾಡಿದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *