More

    ದೊಣ್ಣೆಯೆದುರು ಸುರಕ್ಷಾ ಸಾಧನವಾದರೇ ರಾಹುಲ್?

    ದೊಣ್ಣೆಯೆದುರು ಸುರಕ್ಷಾ ಸಾಧನವಾದರೇ ರಾಹುಲ್?ಮಾನನಷ್ಟ ಮೊಕದ್ದಮೆಯಲ್ಲಿ ದೋಷಿಯೆಂದು ನ್ಯಾಯಾಲಯದಿಂದ ತೀರ್ವನಿಸಲ್ಪಟ್ಟು ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾದ ತರುವಾಯ ರಾಹುಲ್ ಗಾಂಧಿ ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಭಾರತದ ರಾಜಕೀಯದಲ್ಲಿ ಇದೇನೂ ಅಭೂತಪೂರ್ವ ಪ್ರಕರಣವೇನಲ್ಲ. ಇಂಥದೇ ಪರಿಸ್ಥಿತಿಗೊಳಗಾಗಿ ಈಗಾಗಲೇ 32 ಶಾಸಕರು ತಮ್ಮ ಶಾಸನಸಭಾ ಸದಸ್ಯತ್ವಗಳನ್ನು ಕಳೆದುಕೊಂಡಿದ್ದಾರೆ. ಸೂರತ್ ನಗರದ ಛೀಫ್ ಜ್ಯುಡಿಸಿಯಲ್ ಮ್ಯಾಜಿಸ್ಟ್ರೇಟ್ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್​ಗೆ, ನಂತರ ಸುಪ್ರೀಂ ಕೋರ್ಟಿಗೂ ಸಹ ಹೋಗುವ ಅವಕಾಶ ರಾಹುಲ್ ಗಾಂಧಿಯವರಿಗೆ ಇದ್ದೇ ಇದೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ಅವರ ಪರವಾಗಿ ತೀರ್ಮಾನ ನೀಡಿ ಕೆಳಗಿನ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ರದ್ದುಪಡಿಸಿದರೆ ರಾಹುಲ್ ಗಾಂಧಿಯವರಿಗೆ ತಮ್ಮ ಸಂಸತ್ ಸದಸ್ಯತ್ವ ಮರಳಿ ಸಿಗಬಹುದು. ಸುಪ್ರೀಂ ಕೋರ್ಟ್​ನ ತೀರ್ಮಾನ ಅವರಿಗೆ ವಿರುದ್ಧವಾಗಿ ಬಂದಲ್ಲಿ ಅವರು ಕಾರಾಗೃಹದಲ್ಲಿ ಎರಡು ವರ್ಷಗಳನ್ನು ಕಳೆಯಬೇಕಾಗುತ್ತದೆ. ಅಲ್ಲಿಂದ ಹೊರಬಂದ ನಂತರ ಆರು ವರ್ಷಗಳವರೆಗೆ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಂದರೆ 2024 ಮತ್ತು 2029ರ ಚುನಾವಣೆಗಳಲ್ಲಿ ಅವರಿಗೆ ಸ್ಪರ್ಧಿಸುವ ಅವಕಾಶ ಇರುವುದಿಲ್ಲ. ಮುಂದಿನ ಚುನಾವಣೆ 2034ರಲ್ಲಿ. ಆಗ ರಾಹುಲ್ ಗಾಂಧಿಯವರಿಗೆ 64 ವರ್ಷಗಳಾಗಿರುತ್ತವೆ. ಸಕ್ರಿಯ ರಾಜಕಾರಣದಲ್ಲಿ ಮತ್ತೆ ತೊಡಗಿಕೊಳ್ಳಬಲ್ಲ ದೈಹಿಕ ಹಾಗೂ ಮಾನಸಿಕ ಚೈತನ್ಯ ಅವರಲ್ಲಿರುತ್ತದೆಯೇ ಅಥವಾ ಅದಕ್ಕೆ ಆ ದಿನದ ರಾಷ್ಟ್ರ ರಾಜಕಾರಣ ಅನುಕೂಲಕರವಾಗಿರುತ್ತದೆಯೇ ಎನ್ನುವುದು ಭವಿಷ್ಯಕ್ಕೆ ಬಿಟ್ಟ ವಿಷಯ.

    ಪ್ರಸ್ತುತ ಸನ್ನಿವೇಶವನ್ನೇ ಪರಿಶೀಲಿಸುವುದಾದರೆ ರಾಹುಲ್ ಗಾಂಧಿಯವರಿಗೆ ಇಂದು ಒದಗಿರುವ ಪರಿಸ್ಥಿತಿ ರಾಷ್ಟ್ರ ರಾಜಕಾರಣದ ಮೇಲೆ ಹೇಳಿಕೊಳ್ಳುವ ಪರಿಣಾಮವನ್ನೇನೂ ಬೀರಲಾರದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿ ಯಾವ ಬಗೆಯಲ್ಲೂ ಸಮರ್ಥ ಪ್ರತಿಸ್ಪರ್ಧಿಯಲ್ಲ ಹಾಗೂ ತಮ್ಮ ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷೆಗೆ ಅವರು ಪ್ರತಿಸ್ಪರ್ಧಿಯಾಗಬಲ್ಲರೆಂಬ ನಂಬಿಕೆ ಅಥವಾ ಹೆದರಿಕೆ ಯಾವುದೇ ವಿರೋಧ ಪಕ್ಷದ ನಾಯಕರಲ್ಲೂ ಇಲ್ಲ. ರಾಹುಲ್ ಗಾಂಧಿಯವರಿಗೆ ಸಂತಾಪ ತೋರುವ, ಅವರ ಪರವಾಗಿ ದನಿಯತ್ತುವ ಮನಸ್ಸು ಸಹ ಬಹುತೇಕ ವಿರೋಧ ಪಕ್ಷಗಳಿಗೆ ಇಲ್ಲ. ಇದೇ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ ಭವನದ ತಮ್ಮ ಕೋಣೆಯಲ್ಲಿ ಕರೆದ ಸಭೆಗೆ ವಿರೋಧ ಪಕ್ಷಗಳ ನಾಯಕರು ತೋರಿದ ನಿರಾಶಾದಾಯಕ ಪ್ರತಿಕ್ರಿಯೆ ಇದಕ್ಕೆ ಸೂಚನೆ. ಜನತೆಯ ಬಗ್ಗೆ ಹೇಳುವುದಾದರೆ ರಾಹುಲ್ ಗಾಂಧಿಯವರನ್ನು ಗಂಭೀರವಾಗಿ ತೆಗೆದುಕೊಂಡಿರುವವರು ಬಹಳ ಬಹಳ ಕಡಿಮೆ. ತಮ್ಮ ನೇತಾರರಾಗಬಲ್ಲರು ಎಂದು ಅವರ ಬಗ್ಗೆ ವಿಶ್ವಾಸವಿಟ್ಟ ಜನರ ಸಂಖ್ಯೆ ನಗಣ್ಯ. ರಾಹುಲ್ ಗಾಂಧಿಯವರಿಗೆ ಬಂದೊದಗಿರುವ ಸ್ಥಿತಿಯನ್ನು ವಿರೋಧಿಸಿ ಒಂದಷ್ಟು ಕಾಂಗ್ರೆಸ್ಸಿಗರು ಅಲ್ಲಲ್ಲಿ ಪ್ರದರ್ಶನ ನಡೆಸುತ್ತಿರಬಹುದಷ್ಟೇ. ಅದರಲ್ಲೂ ಅವರು ಪೂರ್ಣ ಮನಸ್ಸಿನಿಂದ ತೊಡಗಿಕೊಂಡಿದ್ದಾರೆ ಎನ್ನುವಂತೆ ಕಾಣುತ್ತಿಲ್ಲ. ಅತಿ ದೊಡ್ಡ ವಕೀಲರ ಪಡೆಯನ್ನೇ ಹೊಂದಿರುವ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರ ಪರವಾಗಿ ಸೂರತ್ ನ್ಯಾಯಾಲಯದಲ್ಲಿ ಗಂಭೀರ ಕಾನೂನು ಸಮರಕ್ಕೆ ತೊಡಗಲೇ ಇಲ್ಲ ಮತ್ತು ಈಗಲೂ ಹೈಕೋರ್ಟ್​ನ ಬಾಗಿಲು ತಟ್ಟಲು ಉತ್ಸುಕತೆ ತೋರುತ್ತಿಲ್ಲ ಎನ್ನುವುದು ತನಗೆ ಹಿಡಿದ ರಾಹುಲ್ ಗ್ರಹಣದಿಂದ ಹೊರಬರಲು ಕಾಂಗ್ರೆಸ್ ಒಳಗೊಳಗೆ ಪ್ರಯತ್ನಿಸುತ್ತಿದೆ ಎಂಬ ಅನುಮಾನವನ್ನು ಉಂಟು ಮಾಡುತ್ತದೆ. ಇನ್ನು ಬಿಜೆಪಿಯ ಬಗ್ಗೆ ಹೇಳುವುದಾದರೆ ಅದರಲ್ಲಿರುವುದು ತಮ್ಮ ಅತಿ ದೊಡ್ಡ ಪ್ರಚಾರಕ ಜೈಲು ಸೇರುತ್ತಿದ್ದಾರಲ್ಲ ಎಂಬ ಅಣಕು ನಿರಾಶಭರಿತ ತಮಾಷೆ.

    ಇದನ್ನೂ ಓದಿ: ತಂದೆಯನ್ನು ಬಿಜೆಪಿ ಮರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ವಿಜೇತಾ ಅನಂತಕುಮಾರ್

    ಇಷ್ಟಾಗಿಯೂ ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ರಾಹುಲ್ ಗಾಂಧಿಯವರ ಪರಿಸ್ಥಿತಿಯನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳಲು ಆಮ್ ಆದ್ಮಿ ಪಾರ್ಟಿಯ ನೇತಾರ ಅರವಿಂದ್ ಕೇಜ್ರಿವಾಲ್ ಪ್ರಯತ್ನ ನಡೆಸುತ್ತಿರುವುದು ತಿಳಿಯುತ್ತದೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಹುಲ್ ಗಾಂಧಿಯವರನ್ನು ಒಂದು ಸುರಕ್ಷಾ ಸಾಧನವನ್ನಾಗಿ ಒಂದರ್ಥದಲ್ಲಿ ನಿರೀಕ್ಷಣಾ ಜಾಮೀನಾಗಿ ಉಪಯೋಗಿಸಿಕೊಳ್ಳಲು ಕೇಜ್ರಿವಾಲ್ ಕಸರತ್ತು ನಡೆಸುತ್ತಿರುವಂತಿದೆ.

    ಅರವಿಂದ್ ಕೇಜ್ರಿವಾಲ್ ಹತ್ತು ವರ್ಷಗಳ ಹಿಂದೆ ತಾವು ಕಂಡಂತೆ ದೇಶದ 15 ಅತಿ ದೊಡ್ಡ ಭ್ರಷ್ಟಾಚಾರಿಗಳ ಪಟ್ಟಿಯನ್ನು ತಯಾರಿಸಿ, ಅದರಲ್ಲಿ ರಾಹುಲ್ ಗಾಂಧಿಯವರ ಹೆಸರನ್ನೂ ಸೇರಿಸಿ, ಇಂಥವರಿಗೆ ನೀವು ಮತ ನೀಡಬಹುದೇ? ಅಂದರೆ ಇಂಥವರು ನಿಮ್ಮ ಶಾಸನಸಭೆಗಳಲ್ಲಿ ನಿಮ್ಮ ಪ್ರತಿನಿಧಿಗಳಾಗಬಹುದೇ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದ್ದರು. ಅದೇ ಕೇಜ್ರಿವಾಲ್ ಕಳೆದ ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ! ಅದು ಅಷ್ಟಕ್ಕೇ ನಿಂತಿದ್ದರೆ ಸರಿಯಾಗಬಹುದಿತ್ತೇನೋ. ಆದರೆ, ಕೇಜ್ರಿವಾಲ್ ಮುಂದುವರಿದು ನರೇಂದ್ರ ಮೋದಿಯವರನ್ನು ಈ ದೇಶ ಕಂಡ ಅತಿ ದೊಡ್ಡ ಭ್ರಷ್ಟಾಚಾರಿ ಪ್ರಧಾನಮಂತ್ರಿ ಎಂದು ಬಣ್ಣಿಸಿದ್ದಾರೆ. ಜತೆಗೆ ಮೋದಿ ಕೇವಲ ಹನ್ನೆರಡನೇ ತರಗತಿಯನ್ನಷ್ಟೇ ಪಾಸ್ ಮಾಡಿದವರು ಎಂದು ಹೀಗಳೆದಿದ್ದಾರೆ.

    ಇದನ್ನೂ ಓದಿ: ಅರುಣ್ ಸೋಮಣ್ಣಗೆ ಹೊಸ ಸ್ಥಾನ; ವಿ.ಸೋಮಣ್ಣಗೆ ಸಮಾಧಾನ?

    ಅರವಿಂದ್ ಕೇಜ್ರಿವಾಲ್ ತಾವು ಆಡಿದ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ಕಳೆದೊಂದು ದಶಕದಿಂದ ನೋಡುತ್ತಲೇ ಇದ್ದೇವೆ. ಹೀಗಾಗಿ ಇಂದು ಅವರು ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದಾದ್ದನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುವುದರಲ್ಲಿ ಅಚ್ಚರಿಯೇನೂ ಕಾಣುವುದಿಲ್ಲ. ಆದರೆ, ನರೇಂದ್ರ ಮೋದಿಯವರನ್ನು ಈ ದೇಶ ಕಂಡ ಅತಿ ದೊಡ್ಡ ಭ್ರಷ್ಟಾಚಾರಿ ಪ್ರಧಾನಮಂತ್ರಿ ಎಂದು ಹೇಳುವ ಅವರ ಮಾತುಗಳು ಒಪ್ಪತಕ್ಕಂಥವಲ್ಲ. ಇದೇ ಕೇಜ್ರಿವಾಲ್ ಹನ್ನೆರಡು ವರ್ಷಗಳ ಹಿಂದೆ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಭ್ರಷ್ಟಾಚಾರ ವಿರುದ್ಧದ ಸಮರಕ್ಕಿಳಿದಿದ್ದಾಗ ಅವರು ಮೋದಿಯವರನ್ನು ಭ್ರಷ್ಟಾಚಾರಿ ಎಂದು ಪರಿಗಣಿಸಿರಲಿಲ್ಲ. ಅವರು ತಯಾರಿಸಿದ 15 ಅತಿ ದೊಡ್ಡ ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯವರ ಹೆಸರು ಇರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರ ವಿರುದ್ಧ ಎದ್ದಿದ್ದ ಒಂದೇ ಆಪಾದನೆ ಎಂದರೆ ಕೋಮು ಹಿಂಸಾಚಾರಕ್ಕೆ ಕಾರಣರಾಗಿದ್ದರು ಎನ್ನುವುದಾಗಿತ್ತು. ಆದರೆ, ಆ ಆಪಾದನೆ ಸತ್ಯಕ್ಕೆ ದೂರ, ದುರುದ್ದೇಶಪೂರಿತ ಎನ್ನುವುದು ನ್ಯಾಯಾಲಯದಿಂದಲೇ ಸಾರಲ್ಪಟ್ಟಿತು. ಯುಪಿಎ ಆಡಳಿತಾವಧಿಯಲ್ಲಿಯೇ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ಮೋದಿಯವರನ್ನು ನಿದೋಷಿ ಎಂದು ನೀಡಿದ ವರದಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದು ಇದೀಗ ದಾಖಲಿತ ಇತಿಹಾಸ. ತಮ್ಮ ವಿರುದ್ಧ ಎದ್ದ ಒಂದೇ ಆಪಾದನೆಯಿಂದ ಮೋದಿಯವರು ಹೀಗೆ ಸುರಕ್ಷಿತವಾಗಿ, ಸ್ವಚ್ಛವಾಗಿ ಹೊರಬಂದರು.

    ನಂತರ ಕಳೆದ ಒಂಬತ್ತು ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲರ ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ ಸೇರುವಂತಹ, ಸತ್ಯಕ್ಕೆ ಹತ್ತಿರವಾದ ಯಾವ ಆಪಾದನೆಯೂ ಮೋದಿಯವರ ವಿರುದ್ಧ ಬಂದಿಲ್ಲ. ಚೌಕಿದಾರ್ ಚೋರ್ ಹೈ ಎಂದು ಎಲ್ಲೆಲ್ಲೂ ಕೂಗಿ, ಅದರ ಸಮರ್ಥನೆಗಾಗಿ ಸುಪ್ರೀಂ ಕೋರ್ಟ್​ನ ಹೆಸರನ್ನು ದುರುಪಯೋಗಪಡಿಸಿಕೊಂಡ ರಾಹುಲ್ ಗಾಂಧಿ ಅದೇ ಸುಪ್ರೀಂ ಕೋರ್ಟ್ ಮುಂದೆ ಕ್ಷಮಾಪಣೆ ಕೋರಿದ್ದು ದೇಶಕ್ಕೇ ತಿಳಿದಿರುವ ಸತ್ಯ. ರಾಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಆಪಾದಿಸಿದಂತೆ ನರೇಂದ್ರ ಮೋದಿಯವರೇನೂ ಅನಿಲ್ ಅಂಬಾನಿಯವರ ಜೇಬಿಗೆ ಮೂವತ್ತುಸಾವಿರ ಕೋಟಿ ರೂಪಾಯಿಗಳನ್ನು ಹಾಕಲಿಲ್ಲ. ಅದೊಂದು ದುರುದ್ದೇಶಪೂರಿತ, ಹಾಸ್ಯಾಸ್ಪದ, ಸತ್ಯ ದೂರವಾದ ಆಪಾದನೆ ಎನ್ನುವುದು ದೇಶಕ್ಕೆ ತಿಳಿದುಹೋಗಿದೆ. ರಾಹುಲ್ ಗಾಂಧಿ ಆ ಬಗ್ಗೆ ತುಟಿ ಬಿಚ್ಚದೇ ಮೂರು ವರ್ಷಗಳೇ ಕಳೆದುಹೋಗಿವೆ. ಈಗವರು ಗೌತಮ್ ಅದಾನಿ ಅವರೊಂದಿಗೆ ಮೋದಿ ಶಾಮೀಲಾಗಿದ್ದಾರೆ ಎಂಬ ಆಪಾದನೆ ಹೊರಿಸತೊಡಗಿದ್ದಾರೆ. ಅದರಲ್ಲಿ ಸತ್ಯವಿದೆಯೇ ಎನ್ನುವುದನ್ನು ಸೆಬಿ ಹಾಗೂ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ತಂಡ ಪರಿಶೀಲಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ತನಿಖೆಯ ಫಲಿತಾಂಶ ಹೊರಬೀಳಲಿದೆ.

    ಇದನ್ನೂ ಓದಿ: ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?

    ಹೀಗಿದ್ದೂ ನರೇಂದ್ರ ಮೋದಿಯವರನ್ನು ದೇಶ ಕಂಡ ಅತಿ ದೊಡ್ಡ ಭ್ರಷ್ಟಾಚಾರಿ ಪ್ರಧಾನಮಂತ್ರಿ ಎಂದು ಅರವಿಂದ ಕೇಜ್ರಿವಾಲ್ ಉದ್ರೇಕಿತರಂತೆ ಬಣ್ಣಿಸಿದ್ದರ ಹಿಂದಿನ ಮರ್ಮವೇನು? ಮೋದಿ ಭ್ರಷ್ಟಾಚಾರಿ ಅಲ್ಲ; ಅವರ ರಾಷ್ಟ್ರನಿಷ್ಠೆ, ದೇಶ ಕಲ್ಯಾಣದ ಉದ್ದೇಶಗಳು ಮತ್ತು ಧನಾತ್ಮಕ ಕಾರ್ಯಯೋಜನೆಗಳನ್ನು ಅಳೆಯಲು ಅವರ ವಿದ್ಯಾಭ್ಯಾಸ ಒಂದು ಮಾನದಂಡ ಅಲ್ಲ ಎನ್ನುವುದು ಅರವಿಂದ್ ಕೇಜ್ರಿವಾಲ್ ಅವರಿಗೂ ತಿಳಿದಿದೆ. ತಮ್ಮದೇ ಗುರು ಅಣ್ಣಾ ಹಜಾರೆ ಆರನೆಯ ತರಗತಿಯನ್ನೂ ಪಾಸಾದವರಲ್ಲ ಎಂದವರಿಗೆ ಗೊತ್ತೇ ಇದೆ. ಆದಾಗ್ಯೂ ಮೋದಿಯವರ ಬಗ್ಗೆ ಅವರು ಹೀಗೆ ಕೀಳುಮಟ್ಟದಲ್ಲಿ ಹರಿಹಾಯುತ್ತಿರುವುದರ ಹಿಂದಿನ ಲೆಕ್ಕಾಚಾರವನ್ನು ಅವರು ಇಂದು ಸಿಲುಕಿರುವ ಪರಿಸ್ಥಿತಿಯಲ್ಲಿ ಗುರುತಿಸಬಹುದು. ಭ್ರಷ್ಟಾಚಾರ-ವಿರೋಧಿ ಆಂದೋಲನದ ಬೆನ್ನೇರಿ ರಾಜಕೀಯ ಕೇಳಿದ ಅರವಿಂದ್ ಕೇಜ್ರಿವಾಲ್ ಇಂದು ಭ್ರಷ್ಟಾಚಾರಗಳ ಸುಳಿಯಲ್ಲಿ ಸಿಲುಕಿಹೋಗಿರುವುದನ್ನು ನೋಡುತ್ತಲೇ ಇದ್ದೇವೆ. ಅಬಕಾರಿ ನೀತಿಯಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ತನಿಖೆಯ ಕತ್ತಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕೊರಳಿನ ಮೇಲೆ ಬಿದ್ದಿದೆ. ಅವರೂ ಸೇರಿದಂತೆ ಡಜನ್​ಗಟ್ಟಲೆ ಅಧಿಕಾರಿಗಳು ಮತ್ತು ಶರಾಬ್ ದಂಧೆಗಾರರು ಸಿಬಿಐ ಮತ್ತು ಇಡಿ ತನಿಖೆಗೆ ಒಳಪಟ್ಟಿದ್ದಾರೆ. ಐಐಟಿ ಪದವೀಧರ, ಸಿವಿಲ್ ಸರ್ವಿಸಸ್ ಪರೀಕ್ಷೆಯನ್ನು ಪಾಸ್ ಮಾಡಿದ ಬುದ್ಧಿವಂತ ಅರವಿಂದ್ ಕೇಜ್ರಿವಾಲ್ ತಮ್ಮ ಹೆಸರಿನಲ್ಲಿ ಯಾವುದೇ ಖಾತೆಯನ್ನೂ ಇಟ್ಟುಕೊಂಡಿಲ್ಲ, ತಮ್ಮ ಸಹಿ ಎಲ್ಲೂ ಬೀಳುವಂತೆ ಮಾಡಿಕೊಂಡಿಲ್ಲ. ಆದರೆ, ಮುಖ್ಯಮಂತ್ರಿಯಾಗಿ ಎಲ್ಲಾ ನಿರ್ಧಾರಗಳಲ್ಲಿ ಅವರ ಪಾತ್ರ ಯಾವುದಿತ್ತು ಎನ್ನುವುದರ ಬಗ್ಗೆ ತನಿಖಾದಳಗಳಿಗೆ ಸುಳಿವುಗಳು ಸಿಗತೊಡಗಿವೆ. ಇದುವರೆಗೆ ನೇರ ಸಾಕ್ಷ್ಯ ದೊರೆತಿಲ್ಲದಿದ್ದರೂ ಸಾಂರ್ದಭಿಕ ಸಾಕ್ಷ್ಯಗಳು ಮತ್ತು ಇತರ ಆರೋಪಿಗಳ ಹೇಳಿಕೆಗಳು ತನಿಖೆಯನ್ನು ಅರವಿಂದ್ ಕೇಜ್ರಿವಾಲರ ಹತ್ತಿರಕ್ಕೆ ಕೊಂಡೊಯ್ಯಲಿವೆ. ಇದು ಸಾಲದು ಎಂಬಂತೆ ದೆಹಲಿ ಸರ್ಕಾರದ ವಿಜಿಲೆನ್ಸ್ ಡಿಪಾರ್ಟ್​ವೆುಂಟ್​ನಲ್ಲಿ ಫೀಡ್​ಬ್ಯಾಕ್ ಯೂನಿಟ್ ಎಂಬ ರಹಸ್ಯ ಬೇಹುಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿ, ಕೇಂದ್ರ ತನಿಖಾ ಮತ್ತು ಸುರಕ್ಷಾ ದಳಗಳ ನಿವೃತ್ತ ಉನ್ನತಾಧಿಕಾರಿಗಳನ್ನು ಅಲ್ಲಿ ನೇಮಿಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು ಎನ್ನಲಾದ ಆಪಾದನೆ ಕೇಜ್ರಿವಾಲರ ಹತ್ತಿರಹತ್ತಿರಕ್ಕೆ ಸುಳಿಯುತ್ತಿದೆ. ರಾಜಕೀಯ ವಿರೋಧಿಗಳು, ತಮ್ಮದೇ ಪಕ್ಷದಲ್ಲಿ ತಮಗೆ ಅನುಮಾನವೆನಿಸಿದವರು, ಅವರ ಪತ್ನಿಯರು, ದೆಹಲಿಯ ಪತ್ರಕರ್ತರು ಸೇರಿದಂತೆ ಏಳುನೂರು ಜನರ ಮೇಲೆ ಈ ಫೀಡ್​ಬ್ಯಾಕ್ ಯೂನಿಟ್ ಬೇಹುಗಾರಿಕೆ ನಡೆಸಿ ವರದಿಗಳನ್ನು ಕೇಜ್ರಿವಾಲರಿಗೆ ನೀಡುತ್ತಿತ್ತು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಸೇನೆ ಮಾತ್ರ ಉಪಯೋಗಿಸುವಂತಹ ಅತ್ಯಾಧುನಿಕ ಸೂಕ್ಷ್ಮ ಬೇಹುಗಾರಿಕಾ ಉಪಕರಣಗಳನ್ನು ಇಸ್ರೇಲ್​ನಿಂದ ಆಮದು ಮಾಡಿಕೊಳ್ಳಲೂ ಅದು ಪ್ರಯತ್ನಿಸುತ್ತಿತ್ತು ಎನ್ನುವುದಂತೂ ಅತ್ಯಂತ ಗುರುತರ ಆಪಾದನೆ. ಏಕೆಂದರೆ, ಅದು ರಾಷ್ಟ್ರೀಯ ಸುರಕ್ಷೆಯ ವ್ಯಾಪ್ತಿಗೆ ಒಳಪಡುವ ವಿಷಯ. ಆಪಾದನೆಗಳು ಸಾಬೀತುಗೊಂಡರೆ ದೆಹಲಿಯ ಆಪ್ ಸರ್ಕಾರ ಬರಖಾಸ್ತುಗೊಂಡು ಕೇಜ್ರಿವಾಲ್ ಜೈಲು ಸೇರುವಂತಾಗಲೂಬಹುದು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಈ ಎಲ್ಲಾ ಕಾರಣಗಳಿಂದಾಗಿ ಕೇಂದ್ರೀಯ ತನಿಖಾ ದಳಗಳು ನಿಧಾನವಾಗಿ ತಮ್ಮನ್ನು ಸಮೀಪಿಸುತ್ತಿವೆ ಎನ್ನುವುದು ಆಪ್ ನೇತಾರನಿಗೆ ತಿಳಿದುಹೋಗಿದೆ. ತಮ್ಮ ಮೇಲಿನ ಆಪಾದನೆಗಳು ನಿರಾಧಾರ, ಮೋದಿ ಸರ್ಕಾರ ರಾಜಕೀಯ ದ್ವೇಷದಿಂದಾಗಿ ತಮ್ಮ ವಿರುದ್ಧ ಹಗೆತನ ಸಾಧಿಸುತ್ತಿದೆ, ತಮ್ಮನ್ನು ಬಲಿಪಶು ಮಾಡುತ್ತಿದೆ ಎಂದು ಬಿಂಬಿಸಲು, ‘ವಿಕ್ಟಿಂ ಕಾರ್ಡ್’ ಸೃಷ್ಟಿಸಿಕೊಂಡು ಮೋದಿ ಸರ್ಕಾರದ ವಿರುದ್ಧ ಬಳಸುವ ಪ್ರಯತ್ನದಲ್ಲಿ ಅರವಿಂದ್ ಕೇಜ್ರಿವಾಲ್ ತೊಡಗಿರುವಂತೆ ಕಾಣುತ್ತಿದೆ. ಇಲ್ಲಿ ಅವರಿಗೆ ಕಾಣುತ್ತಿರುವುದು ರಾಹುಲ್ ಗಾಂಧಿ.

    ರಾಹುಲ್ ಗಾಂಧಿಯವರಿಗೆ ಶಿಕ್ಷೆ ನೀಡಿರುವುದು ನ್ಯಾಯಾಲಯ. ಆದರೆ, ಅದರ ಹಿಂದೆ ಮೋದಿಯವರಿದ್ದಾರೆ, ಅವರು ತಮ್ಮ ವಿರುದ್ಧ ಮಾತಿನ ದಾಳಿ ಎಸೆಗಿದ ರಾಹುಲ್ ಗಾಂಧಿಯವರ ವಿರುದ್ಧ ವೈಯುಕ್ತಿಕ ಹಗೆತನ ಸಾಧಿಸುತ್ತಿದ್ದಾರೆ ಮತ್ತು ಅದರ ಅಂಗವಾಗಿ ಕಾಂಗ್ರೆಸ್ ನೇತಾರನ ರಾಜಕೀಯ ಬಲಿ ತೆಗೆದುಕೊಳ್ಳಹೊರಟಿದ್ದಾರೆ ಎಂಬ ಆಪಾದನೆಗಳು ಕಾಂಗ್ರೆಸ್​ನಿಂದ ಬರುತ್ತಿವೆ. ಕೇಜ್ರಿವಾಲ್ ಹುಡುಕಿಕೊಂಡಿರುವುದೂ ಇದೇ ವಿಕ್ಟಿಂ ಕಾರ್ಡ್. ರಾಹುಲ್ ಗಾಂಧಿಯವರಂತೆ ತಾವೂ ಮೋದಿಯವರ ವಿರುದ್ಧ ಮಾತಾಡಿದ್ದರಿಂದ ಮೋದಿ ಸರ್ಕಾರ ತಮ್ಮ ಮೇಲೂ ಸುಳ್ಳು ಆಪಾದನೆಗಳನ್ನು ಹೊರಿಸಲು ಹೊರಟಿದೆ, ತಾವು ನಿರಪರಾಧಿ ಎಂದು ಬಿಂಬಿಸಲು ಕೇಜ್ರಿವಾಲ್ ಕಸರತ್ತು ನಡೆಸಿದ್ದಾರೆ. ಅದರ ಪೂರ್ವತಯಾರಿಯೇ ಅವರು ಈಗ ಮೋದಿಯವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವುದು. ಈ ಪ್ರಯತ್ನದಲ್ಲಿ ಅವರು ಎಷ್ಟು ಯಶಸ್ವಿಯಾಗಬಹುದು?

    ಬಂಧನದಲ್ಲಿದ್ದುಕೊಂಡು ತನಿಖೆ ಎದುರಿಸುತ್ತಿರುವ ತಮ್ಮ ಇಬ್ಬರು ಸಹೋದ್ಯೋಗಿಗಳಾದ ಸತ್ಯೇಂದ್ರ ಜೈನ್ ಮತ್ತು ಮನೀಷ್ ಸಿಸೋಡಿಯಾ ಕುರಿತಾಗಿ ಕೇಜ್ರಿವಾಲ್ ಆಡದ ಪ್ರಶಂಸೆಯ ಮಾತುಗಳಿಲ್ಲ. ಸತ್ಯೇಂದ್ರ ಜೈನ್ ಅತ್ಯಂತ ಪ್ರಾಮಾಣಿಕ, ಅವರು ಭಾರತರತ್ನ ಪ್ರಶಸ್ತಿಗೆ ಯೋಗ್ಯರು ಎಂದೂ ಕೇಜ್ರಿವಾಲ್ ಹೇಳಿದ್ದುಂಟು. ಹಾಗಾಗಿಯೂ ಕಳೆದ ಎಂಟು-ಒಂಬತ್ತು ತಿಂಗಳುಗಳಿಂದಲೂ ಜೈನ್ ಜಾಮೀನು ಸಿಗದೇ ಕಾರಾಗ್ರಹದಲ್ಲಿ ಕೊಳೆಯುತ್ತಿದ್ದಾರೆ. ಇನ್ನು ಸಿಸೋಡಿಯಾ ವಿಷಯಕ್ಕೆ ಬಂದರೆ ಅವರು ಜಗತ್ತಿನ ಅತ್ಯುತ್ತಮ ಶಿಕ್ಷಾಮಂತ್ರಿ ಎಂದೂ ಕೇಜ್ರಿವಾಲ್ ಹೊಗಳಿದ್ದುಂಟು.

    ಆದರೆ ಅವರಿಗೂ ಜಾಮೀನು ಸಿಗುತ್ತಿಲ್ಲ. ಆರೋಪಗಳ, ವಿಚಾರಣೆಯ, ತನಿಖೆಯ ಸುಳಿಗಳಲ್ಲಿ ಸಿಸೋಡಿಯಾ ದಿನೇದಿನೆ ಆಳವಾಗಿ ಸಿಲುಕಿಹೋಗುತ್ತಿದ್ದಾರೆ. ಅವರಿಬ್ಬರನ್ನು ಪ್ರಾಮಾಣಿಕರು, ನಿರಪರಾಧಿಗಳು ಎಂದು ಬಿಂಬಿಸುವ ಅರವಿಂದ್ ಕೇಜ್ರಿವಾಲರ ಎಲ್ಲ ಪ್ರಯತ್ನಗಳೂ ಇದುವರೆಗೆ ವಿಫಲವಾಗಿವೆ. ಹಾಗೆಯೇ ತಮ್ಮನ್ನು ಕಟ್ಟರ್ ಈಮಾಂದಾರ್ ಎಂದು ಬಿಂಬಿಸಿಕೊಳ್ಳುತ್ತಿರುವ ಅವರ ಪ್ರಯತ್ನವೂ ವಿಫಲವಾಗುವ ಸಾಧ್ಯತೆ ಕಂಡುಬರುತ್ತಿದೆ.

    ಕಾನೂನಿನ ಕೈ ಬಹಳ ಉದ್ದವಿರುತ್ತದೆ. ಹೀಗಾಗಿ ಕೇಂದ್ರೀಯ ತನಿಕಾ ದಳಗಳು ಬೀಸಲಿರುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು, ನಿರಪರಾಧಿಯಾದ ತಮ್ಮ ವಿರುದ್ಧ ಮೋದಿ ವೈಯುಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಜನತೆಯನ್ನು ನಂಬಿಸಲು ರಾಹುಲ್ ಗಾಂಧಿಯವರನ್ನು ಒಂದು ಸುರಕ್ಷಾ ಸಾಧನವನ್ನಾಗಿ ಬಳಸಿಕೊಳ್ಳಲು ಕೇಜ್ರಿವಾಲ್ ನಡೆಸುತ್ತಿರುವ ಪ್ರಯತ್ನಗಳು ಯಶಸ್ವಿಯಾಗುವಂತೆ ಕಾಣುತ್ತಿಲ್ಲ.

    ರಾಹುಲ್ ಗಾಂಧಿಯವರನ್ನು ಹೀಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸುರಕ್ಷಾ ಸಾಧನವನ್ನಾಗಿ ಬಳಸಿಕೊಳ್ಳಲು ಕೇಜ್ರಿವಾಲ್ ಕಸರತ್ತು ನಡೆಸುತ್ತಿದ್ದರೆ, ಇದಿರಿನವರನ್ನು ಅತ್ತಿತ್ತ ಸರಿಸಿ ಮುಂದೆ ನುಗ್ಗಲು ಅದೇ ರಾಹುಲ್ ಗಾಂಧಿಯವರನ್ನು ಒಂದು ದೊಣ್ಣೆಯನ್ನಾಗಿ ಪ್ರಿಯಾಂಕಾ ಗಾಂಧಿ ಬಳಸಿಕೊಳ್ಳುತ್ತಿದ್ದಾರೆ. ಇದು ಗಂಭೀರ

    ಪ್ರಯತ್ನವೇ ಸರಿ. ರಾಷ್ಟ್ರರಾಜಕಾರಣದಲ್ಲಿ ನಿಶ್ಚಿತವಾಗಿ ಒಂದಷ್ಟು ತೆರೆಗಳನ್ನೆಬ್ಬಿ ಸಬಹುದಾದ ಈ ಬೆಳವಣಿಗೆಯನ್ನು ಮುಂದಿನವಾರ ವಿವರವಾಗಿ ಪರಿಶೀಲಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts