More

    ಬ್ರೇಕಿಂಗ್ ನ್ಯೂಸ್… ನಮ್ಮಲ್ಲೇ ಮೊದಲು…

    ಬ್ರೇಕಿಂಗ್ ನ್ಯೂಸ್... ನಮ್ಮಲ್ಲೇ ಮೊದಲು...

    ಕೆಲವು ವರ್ಷಗಳ ಹಿಂದಿನ ಸಂಗತಿ. ಬೆಂಗಳೂರಿನ ನಮ್ಮ ಬಡಾವಣೆಯಲ್ಲಿ ಸದ್ಯದಲ್ಲಿಯೇ ಅತ್ಯಂತ ಮಹತ್ವದ ಘಟನೆಯೊಂದು ಜರುಗಲಿದೆ ಎಂಬ ಸುದ್ದಿಯ ಜಾಹೀರಾತೊಂದು ದಿನಪತ್ರಿಕೆಯಲ್ಲಿ ಅರ್ಧಪುಟದಷ್ಟು ಪ್ರಕಟವಾಗಿತ್ತು. ಬಡಾವಣೆಯ ಎಲ್ಲರಿಗೂ ಕುತೂಹಲ! ಏನಿರಬಹುದು ಅಂತಹ ಮಹತ್ವದ ಘಟನೆ! ಮಾರನೆಯ ದಿನ ಅದೇ ಜಾಗದಲ್ಲಿ ಮತ್ತದೇ ಸುದ್ದಿ, ವಿವರ ಕೊಂಚ ಭಿನ್ನ; ನಮ್ಮ ನೆರೆಹೊರೆಯವರೆಲ್ಲ ದಿನವಿಡೀ ರ್ಚಚಿಸಿದರು. ನನಗೂ ಕುತೂಹಲವಿದ್ದರೂ ಜಾಹಿರಾತಿನ ಮಹಿಮೆ ಅರಿವಿದ್ದುದರಿಂದ ಉಳಿದವರ ಉದ್ವಿಗ್ನತೆ ಇರಲಿಲ್ಲ. ಹೀಗೇ ಕೆಲವು ದಿನ ಆ ಜಾಹಿರಾತು ಪ್ರಕಟವಾಗಿ ಕಡೆಗೆ ‘ನೀವೆಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿರುವ ಘಟನೆ ನಾಳೆ ಸಂಭವಿಸಲಿದೆ’ ಎಂಬ ಸುದ್ದಿ ಎಲ್ಲರಲ್ಲಿಯೂ ಬೆಳಗಾಗುವುದನ್ನೇ ಕಾಯುವಂತೆ ಮಾಡಿತ್ತು. ಮಾರನೆಯ ದಿನ ಯಾವುದೋ ಒಂದು ಅಂಗಡಿಯ ಆರಂಭದ ಜಾಹಿರಾತು ಪ್ರಕಟವಾಗಿತ್ತು. ನಮ್ಮ ಸುದ್ದಿವಾಹಿನಿಗಳ ಬ್ರೇಕಿಂಗ್​ನ್ಯೂಸ್ ಸಹ ಇದೇ ಮಾದರಿಯದು; ಅನೇಕ ವೇಳೆ ಠುಸ್ ಪಟಾಕಿ!

    ಸುದ್ದಿ ಯಾರಿಗೆ ಬೇಡ? ನಾವೆಲ್ಲಾ ಒಂದು ರೀತಿ ಸುದ್ದಿಜೀವಿಗಳೇ! ನಾಲ್ಕು ಜನ ಸೇರಿದರೆ ಅಲ್ಲಿ ಎಂಟು ಸುದ್ದಿಗಳು ಹರಿದಾಡುತ್ತಿರುತ್ತವೆ. ನಮ್ಮ ಬದುಕಿನ ಬಹುಪಾಲು ಸುದ್ದಿಗಳನ್ನು ಕೇಳುವುದರಲ್ಲಿ ಹಾಗೂ ಹೇಳುವುದರಲ್ಲಿಯೇ ಕಳೆದಿರುತ್ತದೆ. ಅನೇಕ ವೇಳೆ ಅವುಗಳಿಗೂ ನಮಗೂ ನೇರ ಸಂಬಂಧ ಇರುವುದಿಲ್ಲ. ಆದರೂ ಅವುಗಳ ಬಗ್ಗೆ ನಮಗೆ ಕುತೂಹಲ.

    ನಾವು ಚಿಕ್ಕವರಿದ್ದಾಗ ನಮ್ಮ ನೆಂಟರೊಬ್ಬರು – ಸುಬ್ಬಮ್ಮ ಎಂಬ ಹೆಸರಿನವರು- ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಅವರಿಗೆ ‘ಸುದ್ದಿ ಸುಬ್ಬಮ್ಮ’ ಎಂದೇ ಅಡ್ಡ ಹೆಸರಿತ್ತು. ಹಿಂದಿಲ್ಲ, ಮುಂದಿಲ್ಲ ಎನ್ನುವಂತೆ ಅವರಿಗೆ ಹತ್ತಿರದ ಬಂಧುಗಳು ಯಾರೂ ಇರಲಿಲ್ಲ. ಹೀಗಾಗಿ ಅವರದು ಒಂದು ರೀತಿ ಅಲೆಮಾರಿ ಬದುಕು. ಹೋದಲ್ಲೇ ಒಂದಷ್ಟು ದಿನ ಠಿಕಾಣಿ ಹೂಡುತ್ತಿದ್ದರು. ಸೋಮಾರಿಯಾಗಿರದೆ ಕೈಲಾದ ಕೆಲಸ ಮಾಡುತ್ತಿದ್ದುದರಿಂದ ಮನೆಯವರಿಗೂ ಅವರು ಬಂದರೆ ಸಂತೋಷವಾಗುತ್ತಿತ್ತು. ಜೊತೆಗೆ ಅವರ ವಿಶೇಷ ಆಕರ್ಷಣೆಯೆಂದರೆ ಅವರು ಹೇಳುತ್ತಿದ್ದ ಸುದ್ದಿಗಳು. ಆ ಸುದ್ದಿಗಳಲ್ಲಿ ನಿಜವೆಷ್ಟು, ಅವರೇ ಸೃಷ್ಟಿಸಿದ್ದೆಷ್ಟು ಎಂಬ ಬಗ್ಗೆ ಎಲ್ಲರಿಗೂ ಸಂದೇಹವಿದ್ದರೂ ಆಕರ್ಷಕವಾಗಿ ಹೇಳುವಾಗ ಎಲ್ಲರೂ ಅತೀವ ಆಸಕ್ತಿಯಿಂದಲೇ ಕೇಳಿಸಿಕೊಳ್ಳುತ್ತಿದ್ದರು. ನಮ್ಮ ತಾತ ಗಂಭೀರ ಸ್ವಭಾವದವರು. ಇಂತಹ ಸುದ್ದಿಗಳಲ್ಲಿ ಆಸಕ್ತಿ ಪ್ರಕಟಿಸುತ್ತಿರಲಿಲ್ಲ. ‘ಸುಬ್ಬಮ್ಮನ ಸುದ್ದಿಯೇ!’ ಎಂದು ಎಲ್ಲರೆದುರು ಲೇವಡಿ ಮಾಡುತ್ತಿದ್ದರು. ಆದರೆ ಏಕಾಂತದಲ್ಲಿ ನಮ್ಮ ಅಜ್ಜಿಯಿಂದ ಆ ಸುದ್ದಿಗಳನ್ನೆಲ್ಲಾ ಕೇಳಿ ತಿಳಿದುಕೊಳ್ಳುತ್ತಿದ್ದರು. ಸುದ್ದಿಯ ಆಕರ್ಷಣೆಯೇ ಹಾಗೆ! ಕೆಲ ದಿನಗಳ ನಂತರ ಸುಬ್ಬಮ್ಮ ಸುದ್ದಿ ಹುಡುಕಿಕೊಂಡು ನಮ್ಮಲ್ಲಿಂದ ಹೊರಡುತ್ತಿದ್ದರು. ಮತ್ತೆ ಬರುವ ವೇಳೆಗೆ ಅವರ ಜೋಳಿಗೆಯಲ್ಲಿ ಸಾಕಷ್ಟು ಸುದ್ದಿಗಳಿರುತ್ತಿತ್ತು.

    ಸುದ್ದಿ ಕೇವಲ ಮನರಂಜನೆಯಲ್ಲ; ಲೋಕಾನುಭವ ನೀಡುವ ಸಾಧನವೂ ಹೌದು. ಅದು ನಮ್ಮ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ‘ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯ ಹಿಂದಿನ ಆಶಯವೂ ಇದೇ. ದೇಶ ಸುತ್ತುವುದರಿಂದ ಜೀವನಾನುಭವದ ವಿವೇಕ ಮೂಡಿ, ಸವಾಲುಗಳನ್ನು ಎದುರಿಸುವ ಸ್ಥೈರ್ಯ ಮೂಡುತ್ತದೆ. ಕೋಶ ಓದುವುದರಿಂದ ನಮ್ಮ ಭಾಷಾಸಾಮರ್ಥ್ಯ ವೃದ್ಧಿಸುತ್ತದೆ. ಶಾಲೆಗಳಲ್ಲಿ ಬೆಳಗಿನ ಅಸೆಂಬ್ಲಿ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಅಂದಿನ ದಿನಪತ್ರಿಕೆಯ ಪ್ರಮುಖ ಸುದ್ದಿಗಳನ್ನು ಸಂಗ್ರಹಿಸಿ ವಾಚಿಸುವ ಪದ್ಧತಿಯಿತ್ತು; ಈಗಲೂ ಇರಬಹುದು. ಅದರರ್ಥ ನಮ್ಮ ಸುತ್ತಮುತ್ತ ಏನೇನಾಗುತ್ತಿದೆ ಎಂಬ ಅರಿವು ನಮಗಿರಬೇಕೆಂಬುದು. ವಿ.ಸೀತಾರಾಮಯ್ಯನವರು ನಿಯತವಾಗಿ ಬಿಬಿಸಿ ಕೇಳುತ್ತಿದ್ದರೆಂಬುದು ನಮ್ಮ ಕಾಲದಲ್ಲಿ ಸುದ್ದಿಯಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ತರಬೇತುದಾರರು ಹೇಳಿಕೊಡುವ ಮೊದಲ ಪಾಠ ನಿಯತವಾಗಿ ಪತ್ರಿಕೆಗಳನ್ನು ಓದಬೇಕೆಂಬುದು. ಹಾಗೆ ಓದುವುದರಲ್ಲೂ ಒಂದು ಕ್ರಮವಿದೆ. ಮೊದಲು ಕುತೂಹಲದಿಂದ ಪತ್ರಿಕೆಯ ಎಲ್ಲ ಪುಟಗಳ ಮೇಲೂ ಕಣ್ಣಾಡಿಸಬೇಕು. ನಂತರ ನಮ್ಮ ಅಭಿರುಚಿಯ ಆಯ್ಕೆಯ ಸುದ್ದಿಯತ್ತ ಆಸಕ್ತಿ ಮೂಡುತ್ತದೆ. ಸ್ಥಳೀಯ ಸುದ್ದಿ ಮೊದಲು ಗಮನ ಸೆಳೆಯುತ್ತದೆ. ನಂತರ ಪ್ರಾದೇಶಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ರೀಡೆ, ಆರ್ಥಿಕ ವಿದ್ಯಮಾನಗಳು, ಅಂತಾರಾಷ್ಟ್ರೀಯ ಸಂಬಂಧಗಳು, ವಿಜ್ಞಾನ ಹೀಗೆ… ಕಡ್ಡಾಯವಾಗಿ ಸಂಪಾದಕೀಯ ಪುಟವನ್ನು ಓದಬೇಕೆಂಬುದು ಅಲಿಖಿತ ನಿಯಮ. ಸಂಪಾದಕೀಯ ಪುಟದಲ್ಲಿ ಸಾಮಾನ್ಯವಾಗಿ ಪ್ರಸಕ್ತ ವಿದ್ಯಮಾನ ಕುರಿತು ಅಧ್ಯಯನಪೂರ್ಣ ಟಿಪ್ಪಣಿ, ಅದರ ಮಗ್ಗುಲಲ್ಲಿ ಚಿಂತನಾರ್ಹವಾದ ಅಗ್ರಲೇಖನ, ಕೊಂಚ ಕೆಳಗೆ ಕಚಗುಳಿಯಿಡುವ ಬರಹ, ಮೇಲ್ಭಾಗದಲ್ಲಿ ಸುಭಾಷಿತ, ಇನ್ನೊಂದು ಮಗ್ಗುಲಲ್ಲಿ ವಾಚಕರ ಸ್ಪಂದನೆ…ಹೀಗೆ ವೈವಿಧ್ಯಮಯ ಲೇಖನಗಳು ಇಲ್ಲಿರುತ್ತವೆ. ಒಂದು ಪತ್ರಿಕೆ ಹೀಗೆ ಎಲ್ಲ ಬಗೆಯ ಓದುಗರಿಗೂ ಉಪಯುಕ್ತವಾಗುವಂತೆ ಸಮಗ್ರವಾಗಿರುತ್ತದೆ. ಹೀಗಾಗಿಯೇ ಅನೇಕರಿಗೆ ಜಗತ್ತು ತೆರೆದುಕೊಳ್ಳುವುದೇ ಪತ್ರಿಕೆಗಳ ಮೂಲಕ.

    ಆಕಾಶವಾಣಿಯಲ್ಲಿ ಸುದ್ದಿ ಕೇಳುವುದೂ ಕೆಲವರ ನಿಯಮಿತ ಅಭ್ಯಾಸ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ದೇಶ ವಿದೇಶಗಳ ಸುದ್ದಿಯನ್ನು ಪ್ರಸಾರ ಮಾಡಿ, ನಮ್ಮನ್ನು ವರ್ತಮಾನಕ್ಕೆ ಸಲ್ಲುವ ಹಾಗೆ ಮಾಡುತ್ತಿದ್ದುದೇ ಈ ಸುದ್ದಿಸಮಾಚಾರ. ಆಗ ಎಲ್ಲರ ಮನೆಯಲ್ಲೂ ರೇಡಿಯೋ ಇರಲಿಲ್ಲ. ವಾರ್ತೆಗಳ ಹೊತ್ತಿನಲ್ಲಿ ರೇಡಿಯೋ ಇರುವವರ ಮನೆಯ ಮುಂದೆ ಒಂದು ಸಣ್ಣ ಆಸಕ್ತರ ಗುಂಪು ಇರುತ್ತಿತ್ತು. ನಂತರ ದೂರದರ್ಶನ ನಿಯಮಿತ ವೇಳೆಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿತ್ತು. ಇದು ಸುದ್ದಿಯ ಜೊತೆಗೆ ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನೂ ತೋರಿಸಲಾರಂಭಿಸಿತು. ಸಹಜವಾಗಿಯೇ ಇದು ಹೆಚ್ಚು ಆಕರ್ಷಣೀಯವಾಯಿತು. ಅಲ್ಲದೆ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸುದ್ದಿ ಪ್ರಸಾರ ಮಾಡುತ್ತಿದ್ದುದರಿಂದ ಹೇಳಲು ಸಾಕಷ್ಟು ಸುದ್ದಿಯೂ ಇರುತ್ತಿತ್ತು; ಕೇಳುವವರಿಗೂ ಕುತೂಹಲವಿರುತ್ತಿತ್ತು.

    ಸುದ್ದಿ ಪ್ರಸಾರದಲ್ಲಿ ಕ್ರಾಂತಿಕಾರಕವೆನ್ನಬಹುದಾದ ಬದಲಾವಣೆ ಕಾಣಿಸಿಕೊಂಡದ್ದು ಸುದ್ದಿಗೆಂದೇ ಪ್ರತ್ಯೇಕ ಸುದ್ದಿವಾಹಿನಿಗಳು ರೂಪುಗೊಂಡಾಗ; ಇವು ಕೇವಲ ಸುದ್ದಿಗೆಂದೇ ಮೀಸಲಾದ ನ್ಯೂಸ್​ಚಾನಲ್​ಗಳು. ದಿನಪೂರ್ತಿ, ಇಪ್ಪತ್ತನಾಲ್ಕು ಗಂಟೆಯೂ ಸುದ್ದಿ ಪ್ರಸಾರ ಮಾಡುವುದೇ ಇವುಗಳ ಕಾರ್ಯಕ್ರಮ. ಅಂತಹ ಹತ್ತಾರು ಚಾನೆಲ್​ಗಳಿವೆ.

    ಇವುಗಳ ಪ್ರಮುಖ ಸಮಸ್ಯೆಯೆಂದರೆ ದಿನಪೂರ್ತಿ ಸುದ್ದಿ ಪ್ರಸಾರ ಮಾಡುತ್ತಲೇ ಇರಬೇಕು; ಆ ಸುದ್ದಿ ವೀಕ್ಷಕರ ಗಮನ ಸೆಳೆಯುವಂತಿರಬೇಕು; ಅದಕ್ಕೆ ತಕ್ಕ ದೃಶ್ಯಗಳೂ ಇರಬೇಕು. ಪ್ರತಿದಿನ ಎಷ್ಟೆಂದು ಸುದ್ದಿಗಳಿರುತ್ತವೆ? ಹೀಗಾಗಿ ಹೇಳಿದ್ದನ್ನೇ ಬೇರೆ ಬೇರೆ ಮಾತುಗಳಲ್ಲಿ ಹೇಳುವ ಒತ್ತಾಯಕ್ಕೆ ಇವು ಸಿಲುಕುತ್ತವೆ. ಕೆಲವೊಮ್ಮೆ ಒಂದು ಸಾಲಿನ ಸುದ್ದಿಯಿರುತ್ತದೆ. ಅದನ್ನು ಅರ್ಧ ಗಂಟೆಯ ಸ್ಲಾಟ್ ಪೂರ್ತ ಲಂಬಿಸಬೇಕಾಗುತ್ತದೆ. ಆಕಾಶವಾಣಿಯಲ್ಲಿ ‘ಚಿಂತನ’ ಎಂಬ ಒಂದು ಕಾರ್ಯಕ್ರಮ; ಕೇವಲ ಮೂರು ಅಥವಾ ನಾಲ್ಕು ನಿಮಿಷಗಳ ಅವಧಿಯದು. ಅಷ್ಟು ಹೊತ್ತು ಮಾತನಾಡಬೇಕಾದರೆ ಅದೆಷ್ಟು ಸಿದ್ಧತೆ ಬೇಕು? ಎಷ್ಟೊಂದು ವಿಷಯ ಸಂಗ್ರಹಣೆ ಮಾಡಬೇಕು? ಅದರಲ್ಲಿ ಪಾಲ್ಗೊಂಡವರಿಗೇ ಗೊತ್ತು! ಇನ್ನು ಇವರು ಮುವತ್ತು ನಿಮಿಷ ಒಂದು ಸಾಲಿನ ಸುದ್ದಿಯನ್ನು ವಿಸ್ತರಿಸಿ ಮಾತನಾಡಬೇಕಾದರೆ ಅವರ ಪರಿಸ್ಥಿತಿ ದೇವರಿಗೇ ಪ್ರೀತಿ! ಮಾತಿನ ಜೊತೆಗೆ ದೃಶ್ಯಗಳಿರುತ್ತವಾದರೂ ಅವೂ ಈಗಾಗಲೇ ಅನೇಕ ಸಲ ತೋರಿಸಿದ ದೃಶ್ಯಗಳೇ!

    ಇನ್ನು ಯಾವುದೋ ವಿಷಯದ ಬಗ್ಗೆ ಚರ್ಚೆ! ಈ ಚರ್ಚೆಯಲ್ಲಿ ಪಾಲ್ಗೊಳ್ಳುವವರು ಬಹುಮಟ್ಟಿಗೆ ರಾಜಕೀಯ ವಲಯದವರು. ಒಬ್ಬೊಬ್ಬರು ಒಂದೊಂದು ಪಕ್ಷವನ್ನು ಪ್ರತಿನಿಧಿಸುತ್ತಿರುತ್ತಾರೆ. ಅವರು ಪಕ್ಷದ ವಕ್ತಾರರೇ ಹೊರತು ವಿಷಯ ಪರಿಣತರೇನಲ್ಲ. ಹೀಗಾಗಿ ಈ ಚರ್ಚಾ ಕಾರ್ಯಕ್ರಮ ಚರ್ಚೆಯೋ ಅರಚಾಟವೋ ಎಂಬ ಬಗ್ಗೆ ಸಂದೇಹಪಡುವ ಅಗತ್ಯವಿಲ್ಲ; ಅರಚಾಟವೇ! ಒಮ್ಮೆಗೇ ಇಬ್ಬರು ಮೂವರು ಮಾತನಾಡುತ್ತಿರುತ್ತಾರೆ. ಇಂತಹ ಚರ್ಚೆ ಇತ್ತ ಉಪಯುಕ್ತ ಚರ್ಚೆಯೂ ಆಗದೆ ಅತ್ತ ಶುದ್ಧ ಮನರಂಜನೆಯೂ ಆಗದೆ ಅನೇಕ ವೇಳೆ ಬೀದಿಜಗಳದ ನೆಲೆಯಲ್ಲಿರುತ್ತದೆ.

    ಸುದ್ದಿ ನಿರೂಪಣೆಯ ಪ್ರಧಾನ ಲಕ್ಷಣವೆಂದರೆ ವಾರ್ತಾವಾಚಕರು ಯಾರ ಪರವನ್ನೂ ವಹಿಸದೆ ಸುದ್ದಿಯನ್ನಷ್ಟೇ ವಾಚಿಸಬೇಕೆಂಬುದು; ಒಂದು ಕಾಲಕ್ಕೆ ವಾರ್ತೆಗಳನ್ನು ಓದುವವರಿಗೆ ಸ್ಟಾರ್ ವ್ಯಾಲ್ಯು ಇತ್ತು. ಆದರೆ ಈಗ ಸುದ್ದಿ ನಿರೂಪಣೆಯ ಸ್ವರೂಪವೇ ಬದಲಾಗಿದೆ. ಸುದ್ದಿ ಈಗ ಸುದ್ದಿಯಾಗಿ ಉಳಿದಿಲ್ಲ. ಅದನ್ನು ಮನರಂಜನೆಯ ನೆಲೆಯಲ್ಲಿ ರೂಪಾಂತರಿಸಿ ಹೇಳುವ ರೀತಿಯಲ್ಲಿ ಅದು ಬದಲಾಗಿದೆ. ಹೀಗಾಗಿ ಅದು ಬಣ್ಣದ ವೇಷ ತೊಟ್ಟು ಬರುತ್ತದೆ. ಶುದ್ಧ ಸುದ್ದಿ ಆಕರ್ಷಕವಾಗಿರುವುದು ಕಷ್ಟ. ವೀಕ್ಷಕರೂ ಈ ಸುದ್ದಿ ಚಾನೆಲ್​ಗಳನ್ನು ನೋಡುವುದು ಸುದ್ದಿಗಾಗಿಯಲ್ಲ, ಅವರಿಗೆ ಬೇಕಾದ ಸುದ್ದಿ ಅರೆಕ್ಷಣದಲ್ಲಿ ಸಿಕ್ಕುಬಿಡುತ್ತದೆ. ಉಳಿದಂತೆ ಅದರ ವೀಕ್ಷಣೆ ಒಂದು ರೀತಿ ಮನರಂಜನೆಯೇ! ಅಗ್ಗದ ಮನರಂಜನೆ! ಹಲವು ಸಲ ಸುದ್ದಿ ವಿಶ್ಲೇಷಣೆಯ ಹೆಸರಿನಲ್ಲಿ ಅಪ್ಪಣೆ ಕೊಡಿಸುವುದೂ ಉಂಟು.

    ಅನೇಕ ವರ್ಷಗಳಿಂದ ನಿಯಮಿತವಾಗಿ ಸುದ್ದಿ ಕೇಳುತ್ತಿದ್ದ ನನ್ನ ಹಿರಿಯ ಗೆಳೆಯರೊಬ್ಬರು ಇತ್ತೀಚೆಗೆ ಸುದ್ದಿ ಕೇಳುವುದನ್ನು ನಿಲ್ಲಿಸಿದ್ದೇನೆ ಎಂದರು. ವಾಕಿಂಗ್, ಪತ್ರಿಕೆ ಓದುವುದು ಹಾಗೂ ನ್ಯೂಸ್ ಕೇಳುವುದು ಅವರ ಬದುಕಿನ ಒಂದು ಅನಿವಾರ್ಯ ಭಾಗವೆಂಬಂತೆ ನಡೆಯುತ್ತಿತ್ತು. ಮೊದಲೆರಡು ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ಆದರೆ ನ್ಯೂಸ್ ಕೇಳುವುದನ್ನು ನಿಲ್ಲಿಸಿದ್ದಾರೆ. ಯಾಕೆಂದು ಕೇಳಿದಾಗ ‘ಮನಸ್ಸಿಗೆ ಹಿಂಸೆಯಾಗುತ್ತದೆ; ತಲೆ ಕೆಡುತ್ತದೆ; ಯಾವಾಗ ನ್ಯೂಸ್ ಹಾಕಿದರೂ ಅದೇ ಸುದ್ದಿ! ಅದರ ಬದಲು ಬೆಳಿಗ್ಗೆ ಒಮ್ಮೆ ಪತ್ರಿಕೆ ಓದಿದರೆ ಬೇಕಾದ ಸುದ್ದಿ ತಿಳಿಯುತ್ತದೆ’ ಎಂದರು. ಅವರ ಮಾತುಗಳಲ್ಲಿ ಅನೇಕರ ದನಿಯಿತ್ತು. ಹಲವರಿಗೆ ಹೀಗೇ ಅನ್ನಿಸಿದ್ದರೂ ನ್ಯೂಸ್ ನೋಡುವುದನ್ನು ನಿಲ್ಲಿಸುವುದಿಲ್ಲ. ಅದೊಂದು ಚಟ!

    ಆರಂಭದಲ್ಲಿ ಸುದ್ದಿವಾಹಿನಿಗಳು ನವೀನತೆಯಿಂದಲೇ ಆಕರ್ಷಕವಾಗಿದ್ದರೂ ಈಗ ಅವು ಕೆಲವು ಸವಾಲುಗಳನ್ನು ಎದುರಿಸುತ್ತಿರುವಂತೆ ತೋರುತ್ತದೆ. ಅವುಗಳಲ್ಲಿ ಮೊದಲನೆಯದು ಇಡೀ ದಿನ ಸುದ್ದಿ ಪ್ರಸಾರ ಮಾಡಬೇಕಾದ ಅನಿವಾರ್ಯತೆಯಿಂದ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು, ತೋರಿಸಿದ ದೃಶ್ಯಗಳನ್ನೇ ತೋರಿಸುವ ಪುನರಾವೃತ್ತಿ; ಇದು ಬೋರ್ ಅನ್ನಿಸುತ್ತದೆ; ಎರಡನೆಯದು ಆಕರ್ಷಣೆಗೆಂದೋ, ಭಾವಾನುಕಂಪಕ್ಕಾಗಿಯೋ ತೋರಿಸುವ ದೃಶ್ಯಗಳು ನಮ್ಮ ಸೂಕ್ಷ್ಮ ಸಂವೇದನೆಯನ್ನೇ ನಾಶ ಮಾಡಿಬಿಡಬಹುದು. ಇದನ್ನೆ ಐ.ಎ. ರಿಚರ್ಡ್ಸ್ ‘ಅಗ್ಗದ ಕಲೆ ನಮ್ಮ ಸಂವೇದನೆಯನ್ನೇ ಹಾಳುಗೆಡವುತ್ತದೆ’ ಎಂದು ಪ್ರತಿಪಾದಿಸಿದ್ದಾನೆ. ಮೂರನೆಯದು ಅನಗತ್ಯ ಮಾತನಾಡುತ್ತಲೇ ಇರಬೇಕಾದುದರಿಂದ ಭಾಷೆಯ ಬಳಕೆ ದುರ್ಬಲವಾಗುತ್ತದೆ ಮಾತ್ರವಲ್ಲ, ಆಕರ್ಷಕವಾಗಿಸುವ ಭರದಲ್ಲಿ ಮಹತ್ವವೇ ಇಲ್ಲದಂತಾಗುತ್ತದೆ. ‘ಸಲೆ ಮೆಲ್ಪು ಬಲ್ಪನಳಿಗುಂ’ ಎಂಬುದು ಪಂಪನ ಮಾತು. ಮೆಲುವಾದ ಮಾತಿಗೆ ವಿಶೇಷ ಶಕ್ತಿಯಿರುತ್ತದೆ. ಸುದ್ದಿವಾಹಿನಿಗಳದು ಅಬ್ಬರದ ಅಸೂಕ್ಷ್ಮ ಭಾಷೆ!

    ದೃಶ್ಯಮಾಧ್ಯಮದ ಅಗತ್ಯವನ್ನು ಅಲ್ಲಗಳೆಯಲಾಗದು. ಸಮೂಹ ಮಾಧ್ಯಮಗಳಲ್ಲಿಯೇ ಅದು ಅತ್ಯಂತ ಪರಿಣಾಮಕಾರಿ ಮಾಧ್ಯಮ. ಆದರೆ ಅದರ ಸ್ವರೂಪದಲ್ಲಿ ಬದಲಾವಣೆಯಾಗದಿದ್ದರೆ ಅಪ್ರಸ್ತುತವಾಗುವ ಅಪಾಯ ಇದ್ದೇ ಇದೆ; ಈಗಾಗಲೇ ಅನೇಕರಿಗೆ ದೃಶ್ಯಮಾಧ್ಯಮದ ಬಗ್ಗೆ ಜುಗುಪ್ಸೆ ಮೂಡಿದೆ. ಮರುಚಿಂತನೆಗೆ ಇದು ಸಕಾಲವೆನ್ನಿಸುತ್ತದೆ.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts