
ಬೇತಮಂಗಲ: ಜೂ.25ಕ್ಕೆ ನಿಗದಿಯಾಗಿರುವ ಕೊಮುಲ್ ನಿರ್ದೇಶಕರ ಚುನಾವಣೆ ರಂಗೇರಿದ್ದು, ಈ ಅಖಾಡಕ್ಕೆ ಕೆಜಿಎಫ್ ಕ್ಷೇತ್ರದಿಂದ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಸ್ಪರ್ಧಿಸುವುದು ಬಹೇತಕ ಖಚಿತವಾಗಿದೆ.
ಇದುವರೆಗೂ ಒಟ್ಟು 6 ಬಾರಿ ನಿರ್ದೇಶಕರಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ ಕೋಚಿಮುಲ್ಗೆ ಸೇವೆ ಸಲ್ಲಿಸಿದ್ದು, ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರಗಳು ಪುನರ್ವಿಂಗಡಣೆ ಆಗಿರುವ ಹಿನ್ನೆಲೆಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಡೇರಿ ಸಂಖ್ಯೆ ಕುಸಿತ:
ಕ್ಷೇತ್ರ ಪುನರ್ವಿಂಗಡಣೆಗೂ ಮೊದಲು 124 ಡೇರಿಗಳಿದ್ದವು. ಪ್ರಸ್ತುತ ಕೆಜಿಎಫ್ ಕ್ಷೇತ್ರಕ್ಕೆ 64 ಡೀರಿಗಳನ್ನು ವಿಂಗಡಿಸಲಾಗಿದೆ. ಆ ಪೈಕಿ ಕೆಜಿಎಫ್ ಕ್ಷೇತ್ರದಲ್ಲಿ ನಾಲ್ಕು ಮತ್ತು ಬಂಗಾರಪೇಟೆ ಕ್ಷೇತ್ರದಲ್ಲಿ 7 ಡೀರಿಗಳು ಸೂಪರ್ ಸೀಡ್ ಆಗಿವೆ. ಈಗ ಕೆಜಿಎಫ್ನಲ್ಲಿ 60 ಮತ್ತು ಬಂಗಾರಪೇಟೆಯಲ್ಲಿ 53 ಡೇರಿಗಳು ಚಾಲ್ತಿಯಲ್ಲಿವೆ. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ 21 ಮತ್ತು ಬೂದಿಕೋಟೆ ಹೋಬಳಿ ಗುಳ್ಳಹಳ್ಳಿ ಪಂಚಾಯಿತಿ ವ್ಯಾಪ್ತಿಯ 6 ಡೇರಿಗಳನ್ನು ಕೆಜಿಎಫ್ ಕ್ಷೇತ್ರ ವ್ಯಾಪ್ತಿಗೆ ಸೇರಿಸಲಾಗಿದೆ.
ಒಟ್ಟು 60 ಡೇರಿಗಳ ಪೈಕಿ ಈಗಾಗಲೇ 58 ಮಂದಿ ಡೆಲಿಗೇಟ್ ಮತದಾರರು ಜಯಸಿಂಹ ಅವರನ್ನು ಬೆಂಬಲಿಸಿದ್ದಾರೆ. ವಿಶೇಷವಾಗಿ ಎಸ್.ಎನ್.ನಾರಾಯಣಸ್ವಾಮಿ ಶಾಸಕರಾಗಿರುವ ಬಂಗಾರಪೇಟೆ ಕ್ಷೇತ್ರದ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ಒಟ್ಟು 27 ಮಂದಿ ಮತದಾರರ ಪೈಕಿ 26 ಮಂದಿ ಜಯಸಿಂಹ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ಈ ಪ್ರತಿನಿಧಿಗಳು ಕ್ಷೇತ್ರ ತೊರೆದು ಪ್ರವಾಸದ ನೆಪದಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಬಂಗಾರಪೇಟೆ ಕ್ಷೇತ್ರದಲ್ಲಿಯೂ ಡೆಲಿಗೇಟ್ಗಳಿಗೆ ಬಲೆ ಬೀಸಬಹುದು ಎಂಬ ಆತಂಕದಲ್ಲಿರುವ ನಾರಾಯಣಸ್ವಾಮಿ ಸಾಕಷ್ಟು ಎಚ್ಚರಿಕೆ ಕ್ರಮ ಕೈ ಗೊಂಡಿದ್ದಾರೆ ಎಂಬ ಮಾತುಗಳು ಚರ್ಚೆಯಲ್ಲಿವೆ.
ಹೆಚ್ಚಿದ ಕುತೂಹಲ
ಕೆಜಿಎಫ್ ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ಲಕ್ಷಿ$್ಮನಾರಾಯಣ ಅವರನ್ನು ಕಣಕ್ಕೆ ಇಳಿಸಲು ಶಾಸಕ ನಾರಾಯಣಸ್ವಾಮಿಗೆ ಆಸಕ್ತಿ ಇದ್ದು, ಇದಕ್ಕೆ ಪೂರಕ ಎಂಬಂತೆ ಲಕ್ಷಿನಾರಾಯಣ ಅವರು ಡೇರಿಗಳನ್ನು ಭೇಟಿ ಮಾಡಿ ಡೆಲಿಗೇಟ್ಗಳ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಕೆಜಿಎಫ್ ಶಾಸಕಿ ರೂಪಕಲಾ ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ಬಹುತೇಕ ಜಯಸಿಂಹ ಕೃಷ್ಣಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದು, ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಇದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಜೂ.16ರಂದು ಉಮೇದುವಾರಿಕೆ ಸಲಿಸುತ್ತೇನೆ. ಶಾಸಕಿ ರೂಪಕಲಾ ಅವರನ್ನು ಭೇಟಿಯಾಗಿ ಉಮೇದುವಾರಿಕೆ ಸಲ್ಲಿಕೆ ವೇಳೆ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೇನೆ. ಅವರು ಬರುವ ವಿಶ್ವಾಸ ಇದೆ. ಬಂಗಾರಪೇಟೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಚಟುವಟಿಕೆ ಮಾಡಿಲ. ಅದು ನನಗೆ ಸಂಬಂಧಿಸಿದ ವಿಷಯ ಅಲ.
– ಜಯಸಿಂಹ ಕೃಷ್ಣಪ್ಪ
ಕೋಚಿಮುಲ್ ಮಾಜಿ ಅಧ್ಯಕ್ಷ