More

    ಯೋಗ ವಾಸಿಷ್ಠ; ವೇದಗಳ ಆವಿರ್ಭಾವ (3.12.14ರಿಂದ 17)

    ಸೃಷ್ಟಿಯ ಆಖ್ಯಾಯಿಕೆಯನ್ನು ಹೇಳಲು ಪ್ರಾರಂಭಿಸಿದ ಶ್ರೀ ವಸಿಷ್ಠರು ಈಗ ವೇದಗಳ ಆವಿರ್ಭಾವವನ್ನು ಹೇಳುತ್ತಿದ್ದಾರೆ. ‘ಶ್ರೀರಾಮ! ಈ ಆಕಾಶತನ್ಮಾತ್ರೆಯು (ಶಬ್ದತನ್ಮಾತ್ರೆ) ಶಬ್ದಸಮೂಹವೆಂಬ ವೃಕ್ಷಕ್ಕೆ ಬೀಜ. ಆ ಬೀಜದಲ್ಲಿ ಮುಂದೆ ಬರಲಿರುವ ಶಬ್ದಗಳು ಮತ್ತು ಅವುಗಳ ಅರ್ಥಗಳು ಸೂಕ್ಷ್ಮರೂಪದಿಂದ ಸೇರಿವೆ. ಶಬ್ದತನ್ಮಾತ್ರೆ ಎಂಬ ಬೀಜದಿಂದಲೇ ಪದ-ವಾಕ್ಯ-ಪ್ರಮಾಣಗಳಿಂದ ವಿವರಿಸಲ್ಪಡುವ ವೇದರಾಶಿ ವಿಕಾಸವಾಗಿದೆ. (ಪದವೆಂದರೆ ವ್ಯಾಕರಣಶಾಸ್ತ್ರ. ಪದಗಳ ಅವಯವಗಳನ್ನು ಬಿಡಿಸುವ ಮೂಲಕ ಪದದ ಅರ್ಥವಿವರಣೆಗೆ ಸಹಾಯಕ. ವಾಕ್ಯವೆಂದರೆ ಪೂರ್ವಮೀಮಾಂಸಾಶಾಸ್ತ್ರ. ವೇದವಾಕ್ಯಗಳಿಗೆ ಹೇಗೆ ಅರ್ಥ ಹೇಳಬೇಕೆಂದು ತರ್ಕಬದ್ಧವಾಗಿ ವಿವರಿಸುವ ಶಾಸ್ತ್ರ. ಪ್ರಮಾಣವೆಂದರೆ ನ್ಯಾಯಶಾಸ್ತ್ರ. ಪ್ರತ್ಯಕ್ಷ, ಅನುಮಾನ ಮುಂತಾದ ಪ್ರಮಾಣಗಳಿಂದ ವಿಷಯಗಳನ್ನು ವಿವರಿಸುವ ಶಾಸ್ತ್ರ.)’

    ‘ಈ ಜಗತ್ತೆಂಬ ಶ್ರೀಯು (ಶೋಭಿಸುತ್ತಿರುವ ಜಗತ್ತು) ಆ ಪರಮಾತ್ಮನಿಂದ ಹುಟ್ಟುವಾಗ ವೇದಗಳಿಂದಲೇ ಉದಯಿಸುತ್ತವೆ. ವೇದಗಳ ಶಬ್ದಗಳಿಂದಲೇ ಅವನು ಸೃಷ್ಟಿಸುತ್ತಾನೆ. ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನು ಅವನು ವೇದಶಬ್ದಗಳ ಮೂಲಕವೇ ಸೃಷ್ಟಿಸುತ್ತಾನೆ. ಹೀಗೆ ಸೃಷ್ಟಿಸಲ್ಪಡುವ ವಸ್ತುಗಳ ಸಮೂಹದ ರೂಪದಲ್ಲಿ ಪರಿಣಾಮ ಹೊಂದುವ ಮೂಲಕ ವೇದಶಬ್ದವೇ ವಿಸ್ತಾರಗೊಳ್ಳುತ್ತದೆ. ಅಂಥ ವೇದವು ಪರಮಾತ್ಮನ ಇನ್ನೊಂದು ರೂಪ. ಅಂದರೆ ಪರಮಾತ್ಮನೇ ಆಕಾಶವಾಗಿ, ವಾಯುವಾಗಿ ತೋರಿಕೊಂಡಂತೆ ವೇದವಾಗಿಯೂ ತೋರಿಕೊಂಡಿದ್ದಾನೆ. ಶಬ್ದತನ್ಮಾತ್ರೆಯ ರೂಪದಲ್ಲಿರುವ ಪರಮಾತ್ಮನಿಂದ ಇಂಥ ವೇದವು ಆವಿರ್ಭವಿಸುತ್ತದೆ. ಅಂದರೆ ಶಬ್ದತನ್ಮಾತ್ರೆಯ ರೂಪದಲ್ಲಿದ್ದ ಪರಮಾತ್ಮನ ಮೂಲಕವೇ ಅವನು ವೇದಗಳ ರೂಪದಲ್ಲಿ ಆವಿರ್ಭಾವಗೊಳ್ಳುತ್ತಾನೆ.’ (ವೇದಾಂತಗಳು ಹೇಳುವ ಸೃಷ್ಟಿಪ್ರಕ್ರಿಯೆಯಲ್ಲಿ ವೇದಗಳ ಮೂಲಕವೇ ಜಗತ್ತಿನ ಸೃಷ್ಟಿ ಕೇಳಿಬರುತ್ತದೆ.

    ‘ಸ ಭೂರಿತಿ ವ್ಯಾಹರತ್, ಸ ಭುವಮಸೃಜತ್’ ಪರಮಾತ್ಮನು ‘ಭೂಃ’ ಎಂಬ ಶಬ್ದವನ್ನು ಹೇಳುವ ಮೂಲಕವೇ ಭೂಮಿಯನ್ನು ಸೃಷ್ಟಿಸಿದನು. ‘ಏತ ಇತಿ ವೈ ಪ್ರಜಾಪತಿರ್ದೇವಾನಸೃಜತ, ಅಸೃಗ್ರಮಿತಿ ಮನುಷ್ಯಾನ್, ಇಂದವ ಇತಿ ಪಿತೃನ್’ ಅವನು ‘ಏತೇ’ ಎಂದು ಹೇಳಿಕೊಂಡು ದೇವತೆಗಳನ್ನು ಸೃಷ್ಟಿಸಿದನು. ಹಾಗೆಯೇ ‘ಅಸೃಗ್ರಂ’ ಎಂದು ಹೇಳುತ್ತ ಮನುಷ್ಯರನ್ನು ಸೃಷ್ಟಿಸಿದನು. ‘ಇಂದವಃ’ ಎನ್ನುತ್ತ ಪಿತೃಗಳನ್ನು ಸೃಷ್ಟಿಸಿದನು. ‘ಏತೇ ಅಸ್ಮಿಗ್ರಮಿಂದವಃ ತಿರಃ ಪವಿತ್ರಮಾಶವಃ | ವಿಶ್ವಾನ್ಯಭಿ ಸೌಭಗಾ ||’ ಎಂಬುದಾಗಿ ಋಗ್ವೇದದಲ್ಲಿ ಬಂದಿದೆ.

    ಈ ಋಕ್ಕಿನ ಒಂದೊಂದೇ ಶಬ್ದಗಳನ್ನು ಹೇಳುತ್ತ ಒಂದೊಂದು ಜೀವಪ್ರಕಾರಗಳನ್ನು ಅವನು ಸೃಷ್ಟಿಸುತ್ತಾನೆ. ಶಬ್ದಗಳನ್ನು ಹೇಳುತ್ತ ಸೃಷ್ಟಿಸಿದನೆಂದರೆ ಆ ಶಬ್ದಗಳು ಮೊದಲು ಹೊರಬಂದವು, ಅನಂತರ ಅದಕ್ಕೆ ಸಂಬಂಧಿಸಿದ ವಸ್ತುಗಳು ಸೃಷ್ಟಿಯಾದವು ಎಂದರ್ಥ. ಹೀಗೆ ವೇದಶಬ್ದಗಳ ಮೂಲಕ ಸೃಷ್ಟಿಯಾಗುವಿಕೆಯನ್ನು ವೇದವ್ಯಾಸರು ‘ಶಬ್ದ ಇತಿ ಚೇನ್ನಾತಃ ಪ್ರಭವಾತ್ ಪ್ರತ್ಯಕ್ಷಾನುಮಾನಾಭ್ಯಾಮ್ ಎಂಬ ಸೂತ್ರದಲ್ಲಿ ಹೇಳಿದ್ದಾರೆ.)

    ‘ಹಿಂದೆ ಹೇಳಿದಂತೆ ಪರಮಾತ್ಮನಲ್ಲಿ ಈಶ್ವರನು ಆವಿರ್ಭವಿಸಿದ ನಂತರ ಪ್ರಥಮ ಜೀವಾತ್ಮನು ಆವಿರ್ಭವಿಸಿದ್ದಾನೆ. ಅವನಿಗೆ ಜೀವ ಎಂಬ ಹೆಸರು ಬರಲು ಪ್ರಾಣಧಾರಣೆಯೇ ಕಾರಣ. ಈ ಹಿಂದೆ (ಶಬ್ದತನ್ಮಾತ್ರೆಯ ಸೃಷ್ಟಿಗಿಂತ ಮೊದಲು) ಆಕಾಶ-ವಾಯುಗಳ ಸೃಷ್ಟಿಯನ್ನು ಹೇಳಿದ್ದೇನೆ. ಅಲ್ಲದೆ ಆಕಾಶದ ಸೃಷ್ಟಿಯ ನಂತರ ವಾಯುವಿನ ಸೃಷ್ಟಿಗಿಂತ ಮೊದಲು ಅಹಂಕಾರದ ಸೃಷ್ಟಿಯಾಗಿದೆ. ಆಕಾಶ, ವಾಯುಗಳು ಆ ಚಿದಾತ್ಮನ ಪರಿವಾರವಾದಾಗ ಆ ಚಿದಾತ್ಮನೇ ಜೀವನೆನಿಸಿಕೊಳ್ಳುತ್ತಾನೆ.

    ಜೀವಾತ್ಮನ ಆವಿರ್ಭಾವ ಮೊದಲೇ ಆಗಿದ್ದರೂ ವಾಯುವಿನವರೆಗಿನ ಸೃಷ್ಟಿಯು ಅನಂತರ ಆಗಿರುವುದರಿಂದ ವಾಯುವಿನ ಸೃಷ್ಟಿಯ ನಂತರವೇ ಅವನಿಗೆ ಜೀವ ಎಂಬ ಹೆಸರು ಬರುತ್ತದೆ. ಏಕೆಂದರೆ ವಾಯುವಿನ ಸೃಷ್ಟಿಯ ನಂತರ ಪ್ರಾಣಧಾರಣೆ-ಉಸಿರಾಟ ಶುರುವಾಗುತ್ತದೆ. ಈ ಪ್ರಥಮ ಜೀವನೇ ಮುಂದೆ ಬರಲಿರುವ ನಾಮ-ರೂಪಗಳುಳ್ಳ ವಸ್ತುಗಳ ಸೃಷ್ಟಿಗೆ ಕಾರಣನಾಗಿದ್ದಾನೆ. ಹಿರಣ್ಯಗರ್ಭನು ಮುಂದಿನ ಸೃಷ್ಟಿಪ್ರಕ್ರಿಯೆಗಳನ್ನು ಮಾಡುತ್ತಾನೆ. ಅವುಗಳನ್ನು ಮಾಡುವಾಗಲೂ ಮುಂಬರುವ ವೇದಶಬ್ದಗಳ ಮತ್ತು ಅವುಗಳ ಅರ್ಥಗಳ ಚಿಂತನೆಯೊಂದಿಗೇ ಮಾಡುತ್ತಾನೆ.’

    ‘ಹೀಗೆ ಪ್ರಾಣಧಾರಣೆ ಮಾಡಿದ ಪ್ರಥಮ ಜೀವನೇ ಹದಿನಾಲ್ಕು ಲೋಕಗಳಲ್ಲಿರುವ ಹದಿನಾಲ್ಕು ವಿಧದ ಪ್ರಾಣಿಸಮೂಹಗಳನ್ನು ಸೃಷ್ಟಿಸುತ್ತಾನೆ. ಅವನ ಪ್ರಾಣವೇ ಎಲ್ಲ ಪ್ರಾಣಿಗಳಲ್ಲೂ ಪ್ರಾಣವಾಗಿದೆ. ಅವನು ಸಮಷ್ಟಿ ಪ್ರಾಣನಾದರೆ ಎಲ್ಲ ಪ್ರಾಣಿಗಳಲ್ಲಿರುವ ಪ್ರಾಣವಾಯುವು ವ್ಯಷ್ಟಿಪ್ರಾಣವಾಗಿದೆ. ಇಂಥ ಪ್ರಾಣಿಸಮೂಹಗಳಿಂದ ಕೂಡಿದ ಹದಿನಾಲ್ಕು ಭುವನಗಳು ಅವನಿಂದ ಸೃಷ್ಟಿಸಲ್ಪಡುತ್ತವೆ. ಈ ಭುವನಗಳೇ ಬ್ರಹ್ಮಾಂಡದ ಜಠರದ ಒಳಗಿರುವ ಹದಿನಾಲ್ಕು ಗರ್ತಗಳು (ಕುಣಿಗಳು). ಇಂಥ ಜೀವಲೋಕಗಳು ಆ ಪ್ರಥಮ ಜೀವನಿಂದ ಮುಂದೆ ಸೃಷ್ಟಿಸಲ್ಪಡುತ್ತವೆ.’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts