ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಲೇಜು ಕ್ಯಾಂಪಸ್​ನಲ್ಲೇ ವಿದ್ಯಾರ್ಥಿಗೆ ಇರಿತ

ಶಿವಮೊಗ್ಗ: ವಿದ್ಯಾರ್ಥಿನಿಯರ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹ್ಯಾದ್ರಿ ವಿಜ್ಞಾನ ಕಾಲೇಜು ಕ್ಯಾಂಪಸ್​ನಲ್ಲೇ ವಿದ್ಯಾರ್ಥಿಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ.

ಭದ್ರಾವತಿಯ ಅಂತಿಮ ಬಿಎಸ್ಸಿ ವಿದ್ಯಾರ್ಥಿ ಅವಿನಾಶ್ ಚಾಕು ಇರಿತಕ್ಕೊಳಗಾಗಿದ್ದು, ಶಿಕಾರಿಪುರದ ಗೋಕುಲ್​ರಾಜ್ ಚಾಕು ಇರಿದು ಪರಾರಿಯಾಗಿದ್ದಾನೆ.

ನಾಲ್ಕು ದಿನದ ಹಿಂದೆ ಅಂತಿಮ ಮತ್ತು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಪ್ಪ ಎರಡು ಗುಂಪುಗಳನ್ನು ಸಮಾಧಾನಪಡಿಸಿ ಕಳುಹಿಸಿದ್ದರು.

ಅದೇ ದ್ವೇಷ ಗುರುವಾರ ಮುಂದುವರಿದಿದ್ದು, ಮತ್ತೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಇದೇ ವೇಳೆ ಗೋಕುಲರಾಜ್ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದು, ಇದನ್ನು ಅವಿನಾಶ್ ಪ್ರಶ್ನಿಸಿದ್ದ ಎನ್ನಲಾಗಿದೆ. ಈ ವಿಚಾರ ಸಂಬಂಧ ಗೋಕುಲ್​ರಾಜ್, ಅವಿನಾಶ್ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಾಳುವನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಭದ್ರತೆ ಕಲ್ಪಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.