ರಟ್ಟಿಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗುವ ಜತೆಗೆ ಕಿಡಿಗೇಡಿಗಳ ಕೃತ್ಯದಿಂದಾಗಿ ಕಟ್ಟಡದಲ್ಲಿನ ಸೌಲಭ್ಯಗಳು ಹಾನಿಗೀಡಾಗುತ್ತಿವೆ.
ಪಟ್ಟಣದ ಹಿರೇಕೆರೂರ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರತ್ಯೇಕ ಎರಡು ಕಟ್ಟಡ ಹೊಂದಿದೆ.
ಒಂದು ಹಳೆಯ ಕಟ್ಟಡವಿದೆ. ಇತ್ತೀಚೆಗೆ ಹೊಸದಾಗಿ ನೆಲಮಹಡಿ ಮತ್ತು ಮೇಲ್ಮಹಡಿ ಸೇರಿ ಒಟ್ಟು 6 ಕೊಠಡಿ ನಿರ್ವಿುಸಲಾಗಿದೆ. ಹೊಸ ಕಟ್ಟಡದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಪ್ರಸ್ತುತ ಕಾಲೇಜ್ಗಳಿಗೆ ರಜೆ ಇರುವ ಕಾರಣ ಕಟ್ಟಡ ಅನೈತಿಕ ಚಟುವಟಿಕೆಗೆ ಬಳಕೆಯಾಗುತ್ತಿದೆ. ಮದ್ಯವ್ಯಸನಿಗಳು, ಕೀಡಿಗೇಡಿಗಳು ಕಟ್ಟಡವನ್ನು ಮದ್ಯ ಸೇವಿಸುವ ತಾಣವಾಗಿಸಿಕೊಂಡಿದ್ದಾರೆ.
ಕುಡಿದ ಮತ್ತಿನಲ್ಲಿ ಕಿಟಿಕಿಯ ಎಲ್ಲ ಗಾಜುಗಳನ್ನು ಒಡೆದು ಹಾಕಿದ್ದಾರೆ. ಕಟ್ಟಡದ ನೆಲ ಮಹಡಿ ಮತ್ತು ಮೇಲ್ಮಹಡಿಯಲ್ಲಿ ಮದ್ಯ ಸೇವಿಸಿ, ಅಲ್ಲಿಯೇ ತಂಬಾಕು ಜಗಿದು ಎಲ್ಲೆಂದರಲ್ಲಿ ಉಗಿದು ಗಲೀಜು ಮಾಡಿದ್ದಾರೆ. ಜೂಜಾಟ ಆಡಿ ಅಲ್ಲಿಯೇ ಕಾರ್ಡ್ ಎಸೆದಿದ್ದಾರೆ.
ಕಾಲೇಜ್ನ ಸಾಮಗ್ರಿಗಳಿಗೆ ಹಾನಿ
ಕಟ್ಟಡದ ಎಲ್ಲ ಕಿಟಕಿಗಳಿಗೆ ಅಳವಡಿಸಿದ ಗಾಜುಗಳನ್ನು ಒಡೆದು ಹಾಕಿದ್ದಾರೆ. ವಿದ್ಯುತ್ ಮೀಟರ್ಗೆ ಅಳವಡಿಸಿರುವ ಪ್ಯೂಸ್, ಗೋಡೆಗೆ ಅಳವಡಿಸಲಾಗಿರುವ ಸ್ವಿಚ್ ಬೋರ್ಡ್ಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದಾರೆ.
ಕಾಲೇಜ್ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ಕುರಿತು ಹಾಗೂ ಪದೇಪದೆ ಕಾಲೇಜ್ನ ಸೌಕರ್ಯಗಳಿಗೆ ಹಾನಿ ಮಾಡುತ್ತಿರುವ ಕುರಿತು ಇತ್ತೀಚೆಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ರಾತ್ರಿ ವೇಳೆ ಪೊಲೀಸ್ ಬೀಟ್ಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಪ್ರಾಚಾರ್ಯ ರಮೇಶ ಭೇಟಿ ತಿಳಿಸಿದ್ದಾರೆ.
ಈ ರೀತಿಯ ಕೃತ್ಯಗಳು ಜ್ಞಾನ ದೇಗುಲಕ್ಕೆ ಮಾಡಿದ ಅವಮಾನ. ಸದ್ಯ ನೆಲ ಮಹಡಿಯ ಎಲ್ಲ ಕಿಟಕಿಗಳಿಗೆ ಪೈಬರ್ಶೀಟ್ ಮತ್ತು ಯಾರೂ ಮೇಲೆ ಹತ್ತಲು ಸಾಧ್ಯವಾಗದಂತೆ ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
| ಮಾಲತೇಶಗೌಡ ಗಂಗೋಳ, ಸದಸ್ಯರು, ಕಾಲೇಜ್ ಅಭಿವೃದ್ಧಿ ಸಮಿತಿ ರಟ್ಟಿಹಳ್ಳಿ