ಮಳೆ ನೀರು ಪೋಲಾಗದಂತೆ ಸಂಗ್ರಹಿಸಿ

ಚಾಮರಾಜನಗರ: ನರೇಗಾ ಸೇರಿಂತೆ ಇತರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ ಮಳೆ ನೀರು ಹರಿದು ಹೋಗದಂತೆ ಸಂಗ್ರಹಿಸಬೇಕು ಎಂದು ಜಿಪಂ ಸಿಇಒ ಕೆ.ಎಸ್.ಲತಾಕುಮಾರಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಗಳ ಪುನಶ್ಚೇತನ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಅಂತರ್ಜಲ ಬಳಕೆ ಹೆಚ್ಚು ಮಾಡಿಕೊಂಡ ಪರಿಣಾಮ ಸಾಂಪ್ರದಾಯಿಕ ನೀರಿನ ಮೂಲಗಳನ್ನು ನಿರ್ಲಕ್ಷೃ ಮಾಡಲಾಗಿದೆ. ನೀರು ಅವಶ್ಯಕ ಸಂಪನ್ಮೂಲವಾಗಿದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ನೀರು ಲಭ್ಯವಾಗುತ್ತಿಲ್ಲ. ಸಾಂಪ್ರದಾಯಿಕ ನೀರಿನ ಮೂಲಗಳಾದ ಕಲ್ಯಾಣಿ, ಕುಂಟೆ, ಗೋಕಟ್ಟೆ, ಕಟ್ಟೆಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ತಿಳಿಸಿದರು.

ದಿವಾನ್ ಪೂರ್ಣಯ್ಯ ಅವರ ದೂರದೃಷ್ಟಿಯಿಂದಾಗಿ ಜಿಲ್ಲೆಯ ಯಳಂದೂರು ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಒಂದೊಂದು ಕೆರೆ ಇದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಸಾಂಪ್ರದಾಯಿಕ ನೀರಿನ ಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವುಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿದ್ದು, 720 ಗ್ರಾಮಗಳಿವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,191 ಕೆರೆಗಳು ಒಳಪಡುತ್ತವೆ. ಜಿಲ್ಲೆಯಲ್ಲಿ 185 ಕಲ್ಯಾಣಿಗಳು, 117 ಕುಂಟೆಗಳು, 508 ಗೋಕಟ್ಟೆಗಳು, 722 ಕಟ್ಟೆಗಳಿವೆ. ಇವುಗಳ ರಕ್ಷಣೆ ಮಾಡುವ ಮೂಲಕ ಬತ್ತಿ ಹೋಗುತ್ತಿರುವ ಅಂತರ್ಜಲ ಮಟ್ಟವನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಎ.ಆರ್.ಶಿವಕುಮಾರ್ ಮಾತನಾಡಿ, ವಿಶ್ವದಲ್ಲಿ ಭೂಮಿಗಿಂತ ನೀರು ಹೆಚ್ಚಿನ ಪ್ರಮಾಣದಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆ, ಕಟ್ಟೆಗಳಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ನಡೆಯುವ ಪರಿಣಾಮ ನೀರು ಕಲುಷಿತಗೊಳ್ಳುತ್ತಿದೆ. ಹಿರಿಯರು ಹೊಲ, ಗದ್ದೆಗಳಲ್ಲಿ ನಿರ್ಮಿಸುತ್ತಿದ್ದ ಕಲ್ಲು ಕಟ್ಟಡ ಬಾವಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮಳೆ ನೀರು ಎಲ್ಲದಕ್ಕೂ ಮೂಲ. ಮಳೆ ನೀರಿಗಿಂತ ಶುದ್ಧ ನೀರು ಯಾವುದೂ ಇಲ್ಲ. ಮಳೆ ನೀರು ಸಂಗ್ರಹದಿಂದ ಒಂದು ಮನೆಯಲ್ಲಿ ವರ್ಷಕ್ಕೆ 1.75 ಲಕ್ಷ ಲೀ. ನೀರು ಸಂಗ್ರಹವಾಗುತ್ತದೆ. ನೀರನ್ನು ಕತ್ತಲಲ್ಲಿ ಎಷ್ಟು ವರ್ಷ ಇಟ್ಟರು ಕೆಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಮಳೆ ನೀರು ಸಂಗ್ರಹಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಹನುಮನರಸಯ್ಯ, ಜಿಪಂ ಮುಖ್ಯ ಯೋಜನಾಧಿಕಾರಿ ಪದ್ಮಶೇಖರಪಾಂಡೆ ಇತರರಿದ್ದರು.

Leave a Reply

Your email address will not be published. Required fields are marked *