ಉಳ್ಳಾಲ: ನಿರಂತರ ಮಳೆಯಿಂದಾಗಿ ಮಣ್ಣು ಮೆದುವಾಗಿದ್ದ ಪರಿಣಾಮ ಪಜೀರ್ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ತಡೆಗೋಡೆ ಮತ್ತು ಆವರಣ ಗೋಡೆ ಕುಸಿದು ಬಿದ್ದಿದೆ.

ನಿರಂತರ ಮಳೆ ಸುರಿದ ಹಿನ್ನೆಲೆ ಕುಸಿತ
ದೈವಸ್ಥಾನದ ಬ್ರಹ್ಮಕಲಶೋತ್ಸವ 2012ರ ನವೆಂಬರ್‌ನಲ್ಲಿ ನಡೆದಿತ್ತು. ದೈವಸ್ಥಾನದ ಸುತ್ತಲೂ ಸುಮಾರು 12 ಅಡಿಯಷ್ಟು ಎತ್ತರದಲ್ಲಿ ತಡೆಗೋಡೆ ಜತೆ ಆವರಣ ಗೋಡೆ ನಿರ್ಮಿಸಲಾಗಿದ್ದು, ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿತ್ತು. ಕಳೆದ ತಿಂಗಳು ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಮಣ್ಣು ಮೆದುವಾಗಿದ್ದು ಇದರ ಪರಿಣಾಮ ಶುಕ್ರವಾರ ಸುಮಾರು 40 ಅಡಿಯಷ್ಟು ಉದ್ದದ ತಡೆಗೋಡೆ ಆವರಣ ಗೋಡೆಯೂ ಕುಸಿದು ಬಿದ್ದಿದೆ. ಉಳಿದಿರುವ ಆವರಣ ಗೋಡೆ ಬಿರುಕು ಬಿಟ್ಟು ಕುಸಿಯುವ ಅಪಾಯದಲ್ಲಿದೆ.
ದೈವದ ಗುಡಿ, ಬಸವನ ಹಟ್ಟಿಗೂ ಅಪಾಯ
ಆವರಣ ಗೋಡೆಗೆ ತಾಗಿಕೊಂಡು ನಿರ್ಮಿಸಲಾಗಿರುವ ಪಂಜುರ್ಲಿ ದೈವದ ಗುಡಿಯ ಅಡಿಭಾಗ ಕಾಣುತ್ತಿದೆ. ಗೋವುಗಳ ವಾಸಕ್ಕೆ ನಿರ್ಮಿಸಲಾಗಿರುವ ಬಸವನ ಹಟ್ಟಿಗೂ ಅಪಾಯ ಎದುರಾಗಿದೆ. ತಡೆಗೋಡೆ ಮತ್ತು ಆವರಣ ಗೋಡೆ ಪುನರ್‌ನಿರ್ಮಾಣಕ್ಕೆ 10 ಲಕ್ಷ ರೂ. ಬೇಕಾಗುತ್ತದೆ ಎಂದು ಸೇವಾ ಸಮಿತಿ ಉಪಾಧ್ಯಕ್ಷ ರವಿ ರೈ ಪಜೀರ್ ತಿಳಿಸಿದ್ದಾರೆ.