More

  ಶೀತಗಾಳಿಗೆ ತತ್ತರಿಸಿದ ಉತ್ತರ ಭಾರತ

  ಈ ಬಾರಿಯ ಚಳಿಗಾಲ ಉತ್ತರ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ. ಡಿಸೆಂಬರ್-ಜನವರಿ ತಿಂಗಳಲ್ಲಿನ ತೀವ್ರವಾದ ಶೀತಗಾಳಿಯಿಂದ ಜನರು ತೊಂದರೆ ಎದುರಿಸಬೇಕಾಯಿತು. ಹೊಸ ವರ್ಷದ ಮೊದಲ ದಿನವೂ (ಜನವರಿ 1) ಹಲವು ಪ್ರಮುಖ ನಗರಗಳಲ್ಲಿ ತಾಪಮಾನದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂತು.

  ‘ಅಬ್ಬಾ ಈ ಬಾರಿ ಚಳಿ ಸ್ವಲ್ಪ ಜಾಸ್ತಿನೇ ಇದೆ ನೋಡಿ’ ಅಂತ ಜನ ಲೋಕಾಭಿರಾಮವಾಗಿ ಮಾತನಾಡುವಾಗ ಹೇಳುವುದು ಕೇಳಿದ್ದೇವೆ. ಆದರೆ, ಹವಾಮಾನ ಇಲಾಖೆಯೇ ಹೇಳಿದೆ ಈ ಬಾರಿ ಚಳಿ ಭೀಕರವಾಗಿದೆ ಅಂತ! 1901ರ ಬಳಿಕ ಈ ವರ್ಷ ಅಂದರೆ 2019-20ರಲ್ಲಿ ಈ ಪ್ರಮಾಣದಲ್ಲಿ ಚಳಿ ಕಂಡುಬಂದಿದ್ದು, ರಾಜಧಾನಿ ದೆಹಲಿ ತಾಪಮಾನ ಕೇವಲ 1-2 ಡಿಗ್ರಿಗೆ ಕುಸಿದರೆ, ‘ಆರೆಂಜ್ ಸಿಟಿ’ ಖ್ಯಾತಿಯ ನಾಗಪುರದ ತಾಪಮಾನ ಕಳೆದ ಗುರುವಾರ ಬರೀ ಮೂರು ಡಿಗ್ರಿಯಾಗಿತ್ತು.

  ಇದು ಕೆಲವೇ ನಗರ, ರಾಜ್ಯಗಳಿಗೆ ಸೀಮಿತವಾಗಿಲ್ಲ. ಇಡೀ ಉತ್ತರ ಭಾರತ ಶೀತಗಾಳಿಯ ಆರ್ಭಟಕ್ಕೆ ನಲುಗಿದೆ. ಬೇಸಿಗೆಯಲ್ಲಿ 48 ಡಿಗ್ರಿ ಸೆಲ್ಸಿಯಸ್​ವರೆಗಿನ ಭಾರಿ ಉಷ್ಣತೆ ಕಾಣುವ ಮರಭೂಮಿ ಪ್ರದೇಶ ರಾಜಸ್ಥಾನದಲ್ಲೂ ಚಳಿ ಎಷ್ಟು ತೀವ್ರವಾಗಿದೆ ಎಂದರೆ ಹಲವು ಜಲಪಾತಗಳು ಮಂಜುಗಡ್ಡೆಯಾಗಿಬಿಟ್ಟಿವೆ! ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ್, ಪಂಜಾಬ್, ಹರಿಯಾಣ, ಛತ್ತೀಸ್​ಗಢ, ಉತ್ತರಾಖಂಡ ರಾಜ್ಯಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿದ್ದು, ಜನರು ಮಾತ್ರವಲ್ಲದೆ, ಪ್ರಾಣಿಗಳೂ ಪರದಾಡುವಂತಾಗಿದೆ. ಈ ಎಲ್ಲ ರಾಜ್ಯಗಳಲ್ಲಿ ಹೆಚ್ಚುಕಡಿಮೆ ಒಂದು ತಿಂಗಳಿಂದ ತಾಪಮಾನ 10 ಡಿಗ್ರಿ ಸೆಲ್ಸಿಯಸ್​ಗಿಂತಲೂ ಕಡಿಮೆ ಇದೆ.

  ಏಕೆ ಜಾಸ್ತಿ ಆಗಿದೆ ಚಳಿ?

  ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಲಡಾಖ್​ನಲ್ಲಿ ಭಾರಿ ಹಿಮಪಾತವಾಗಿದ್ದು, ಅದರ ಪರಿಣಾಮವೂ ಉತ್ತರದ ರಾಜ್ಯಗಳ ಮೇಲಾಗಿದೆ. ಅಲ್ಲದೆ, ಪಶ್ಚಿಮ ಭಾರತದಿಂದ ಬಂದಪ್ಪಳಿಸಿದ ಶೀತಗಾಳಿಯ ತೀವ್ರತೆ ಹೆಚ್ಚಿರುವುದು ತಾಪಮಾನ ಕುಸಿತಕ್ಕೆ ಕಾರಣವಾಗಿದೆ. ‘ಹವಾಮಾನ ಬದಲಾವಣೆ’ಯ ಪರಿಣಾಮವೂ ಇದಾಗಿದೆ ಎಂದು ಪರಿಸರ ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ. ಅಕಾಲಿಕ ಮಳೆ, ಹಿಮಪಾತದಂಥ ಘಟನೆಗಳು ತಾಪಮಾನ ಕುಸಿತಕ್ಕೆ ಕಾರಣವಾಗುತ್ತವೆ.

  ವಾಸ್ತವದಲ್ಲಿ ಸೆಪ್ಟೆಂಬರ್ ತಿಂಗಳು ಮಳೆಗಾಲದ ಕೊನೆಯ ಘಟ್ಟ. ಆದರೆ, ಈ ಬಾರಿ ಸೆಪ್ಟೆಂಬರ್​ನಲ್ಲಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಹಾಗಾಗಿ, ಚಳಿಗಾಲದ ಅವಧಿಯಲ್ಲಿ ತಾಪಮಾನ ಇಳಿಕೆ ಆಗಿದೆ. ಮೋಡ ಕವಿದ ಪರಿಣಾಮ, ದಟ್ಟ ಮಂಜು ಆವರಿಸಿಕೊಳ್ಳುತ್ತಿದ್ದು, ಹಗಲು ಹೊತ್ತಿನಲ್ಲೂ ತೀವ್ರ ಚಳಿ ಕಾಡುತ್ತಿದೆ. ವಿಮಾನ, ರೈಲುಸೇವೆಗಳು ವ್ಯತ್ಯಯಗೊಂಡಿದ್ದು, ದೆಹಲಿ, ಎನ್​ಸಿಆರ್ ಸೇರಿ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಜನವರಿ 3ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

  ಅಕಾಲಿಕ ಮಳೆ ತಂದ ಆಪತ್ತು

  ಸೆಪ್ಟೆಂಬರ್​ನಲ್ಲಿ ಸುರಿದ ಮಳೆ ಮಾತ್ರವಲ್ಲದೆ, ಡಿಸೆಂಬರ್ ಕೊನೇ ವಾರ ಮತ್ತು ಜನವರಿ ಆರಂಭದಲ್ಲಿ ಸುರಿದ ಅಕಾಲಿಕ ಮಳೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಹೊಸವರ್ಷದಂದೇ ನಾಗಪುರ ಭಾರಿ ಮಳೆಗೆ ಸಾಕ್ಷಿಯಾಯಿತು. ಹಾಗಾಗಿ, ಸರಾಸರಿ ಏಳೆಂಟು ಡಿಗ್ರಿಗಳಿದ್ದ ಅಲ್ಲಿನ ತಾಪಮಾನ ಮೂರು ಡಿಗ್ರಿ ಸೆಲ್ಸಿಯಸ್​ಗೆ ಕುಸಿಯಿತು. ಅದೇ ರೀತಿ, ಬಿಹಾರ, ಹರಿಯಾಣದ ಹಲವು ನಗರಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ಶೀತಗಾಳಿಯ ಅಬ್ಬರ ಹೆಚ್ಚಿದೆ. ಮಹಾರಾಷ್ಟ್ರದ ಅಕೋಲಾ, ವರ್ಧಾ, ಚಂದ್ರಪುರ, ಗಢ್​ಚಿರೋಲಿ, ಭಂಡರಾ, ಲಾತುರ್, ಯವತಮಾಲ್​ನಲ್ಲಿ ಕಳೆದ ಬುಧವಾರ ರಾತ್ರಿ ಮತ್ತು ಗುರುವಾರ ಆಲಿಕಲ್ಲು ಮಳೆಯಾಗಿದೆ. ಈ ಅಕಾಲಿಕ ಮಳೆಯಿಂದ ಬೆಳೆಹಾನಿ ಆಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.

  ಎಲ್ಲೆಲ್ಲಿ ಹಿಮಪಾತ?

  ಉತ್ತರಾಖಂಡದ ಕೇದಾರನಾಥ, ಉತ್ತರಕಾಶಿ, ಗಿಢವಾಲ್, ಚಮೋಲಿ, ಪಿಥೌರ್​ಗಢ, ರುದ್ರಪ್ರಯಾಗದಲ್ಲಿ ಹಿಮಪಾತ ಭಾರಿ ಪ್ರಮಾಣದಲ್ಲಾಗಿದೆ. ಹಾಗಾಗಿ, ಜನವರಿ 1ರಂದು ಕೇದಾರನಾಥದ ತಾಪಮಾನ ಮೈನಸ್ 10 ಡಿಗ್ರಿ ಸೆಲ್ಸಿಯಸ್​ಗೆ ಕುಸಿದು, ಮಂದಿರ ಸುತ್ತಮುತ್ತಲ ಪ್ರದೇಶ ಹಿಮಹೊದಿಕೆಯಿಂದ ಆವೃತವಾಗಿದೆ. ಜಮ್ಮು-ಶ್ರೀನಗರ ಹೆದ್ದಾರಿ ಹಿಮಪಾತದಿಂದ ಬಂದ್ ಆಗಿದೆ. ಪರಿಣಾಮ, 200ಕ್ಕಿಂತ ಹೆಚ್ಚು ಲಾರಿಗಳು ಸಿಲುಕಿಕೊಂಡಿವೆ.

  ಗುಲ್ಮರ್ಗ್​ದ ತಾಪಮಾನ ಮೈನಸ್ 5 ಡಿಗ್ರಿಗೆ ಕುಸಿದಿದೆ. ಹಿಮಪಾತದಿಂದ ಬಾರಾಮುಲ್ಲಾದಲ್ಲಿ ಅಘೋಷಿತ ಕರ್ಫದಂಥ ಸ್ಥಿತಿ ಇದ್ದು, ಜನರು ಮನೆಯಿಂದ ಹೊರಬರುತ್ತಿಲ್ಲ. ರಾಜೌರಿ, ಶ್ರೀನಗರ, ಪಹಲಗಾವ್, ಅನಂತನಾಗ್, ಕಾರ್ಗಿಲ್, ಲೇಹ್​ನಲ್ಲೂ ಭಾರಿ ಹಿಮಪಾತವಾಗಿದೆ. ಕಾರ್ಗಿಲ್​ನ ತಾಪಮಾನ ಮೈನಸ್ 17 ಡಿಗ್ರಿ ಸೆ.ಗೆ ಕುಸಿದಿದೆ. ಅಲ್ಲದೆ, ಈ ಭಾಗದಲ್ಲಿ ಇನ್ನೂ ಹಲವು ದಿನಗಳ ಕಾಲ ಹಿಮಪಾತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಲವು ಕೆರೆ, ಜಲಪಾತಗಳು ಮಂಜುಗಡ್ಡೆ ಆಗಿ ಪರಿವರ್ತಿತವಾಗಿವೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಜ.1ರಂದು ಹಿಮಪಾತ ಆರಂಭವಾಗಿದ್ದು, ಜ.5ರಿಂದ 7ರವರೆಗೆ ಹಿಮಪಾತ ಮರುಕಳಿಸಿತು. ಹೊಸ ವರ್ಷಕ್ಕೇ ಹಿಮಪಾತ ಆರಂಭವಾಗಿರುವುದರಿಂದ ಮನಾಲಿ, ಸುತ್ತಮುತ್ತಲ ಪ್ರದೇಶಗಳಿಗೆ ಪ್ರವಾಸಿಗರ ದಂಡೇ ಆಗಮಿಸುತ್ತಿದೆ.

  ಸದ್ಯಕ್ಕಿಲ್ಲ ರಿಲೀಫ್

  ಹತ್ತು ರಾಜ್ಯಗಳಲ್ಲಿ ಅಕಾಲಿಕ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಶೀತಗಾಳಿಯ ಅಬ್ಬರವೂ ಹೆಚ್ಚಲಿದೆ. 4-5 ದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದ್ದು, ತಾಪಮಾನ ಏರಿಕೆ ಆಗುವ ಸಾಧ್ಯತೆ ತೀರಾ ಕಡಿಮೆ ಎಂದಿದೆ ಹವಾಮಾನ ಇಲಾಖೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಇನ್ನು ಮೂರ್ನಾಲ್ಕು ದಿನ ಹಿಮಪಾತ ಮುಂದುವರಿಯುವ ಸಾಧ್ಯತೆ ಇದೆ. ಮಧ್ಯಪ್ರದೇಶದ 40ಕ್ಕೂ ಹೆಚ್ಚು ನಗರ-ಪಟ್ಟಣಗಳು ಅಕಾಲಿಕ ಮಳೆಗೆ ತುತ್ತಾಗಿವೆ. ಬಿಹಾರದ ಗಯಾ, ಭಾಗಲ್​ಪುರ್, ಪುರ್ಣಿಯಾ ನಗರಗಳ ತಾಪಮಾನ 6 ಡಿಗ್ರಿ ಸೆ.ಗೆ ಕುಸಿದಿದೆ.

  40ಕ್ಕೂ ಅಧಿಕ ಜನರ ಸಾವು

  ತೀವ್ರ ಚಳಿ ಜನರ ಪ್ರಾಣವನ್ನೇ ಕಿತ್ತುಕೊಳ್ಳುತ್ತಿದೆ. ವೃದ್ಧರು, ಯಾವುದೇ ಆಶ್ರಯ ಇಲ್ಲದೆ ರಸ್ತೆಬದಿ, ರೈಲ್ವೆ ಸ್ಟೇಷನ್​ಗಳಂಥ ಬಯಲು ಪ್ರದೇಶದಲ್ಲಿ ವಾಸಿಸುವವರು ಪ್ರಾಣ ಕಳೆದುಕೊಂಡ ಘಟನೆಗಳು ಸಂಭವಿಸಿವೆ. ಏಳು ರಾಜ್ಯಗಳಲ್ಲಿ ಕಳೆದೊಂದು ತಿಂಗಳಲ್ಲಿ 40ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಈ ಪೈಕಿ ದೆಹಲಿ-ಎನ್​ಸಿಆರ್​ಗೆ ಸೇರಿದ ಏಳು ಜನರಿದ್ದಾರೆ. ಉತ್ತರಪ್ರದೇಶವೊಂದರಲ್ಲೇ 20ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ರೋಗಿಗಳ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿದೆ. ಅಸ್ತಮಾ, ಹೃದ್ರೋಗಿಗಳು ಪರದಾಡುವಂತಾಗಿದೆ.

  ಚಳಿಯಿಂದ ರಕ್ಷಣೆಗೆ ಉಪಾಯಗಳು

  • ಹಾಸಿಗೆ ಬಿಟ್ಟೇಳುವ ಮುನ್ನ ಕೊಂಚ ವ್ಯಾಯಾಮ ಮಾಡುವುದು ಒಳ್ಳೆಯದು. ಇದರಿಂದ ದೇಹದ ಉಷ್ಣತೆ ಹೆಚ್ಚಿ, ಚಳಿ ಎದುರಿಸಲು ಅನುಕೂಲವಾಗುತ್ತದೆ.
  • ಸ್ನಾನದ ಹೊತ್ತಲ್ಲಿ ಸಾಬೂನು ಬಳಸುವುದು ಬೇಡ. ಕಡಲೆಹಿಟ್ಟು ಬಳಸುವುದು ಸೂಕ್ತ.
  • ಚಳಿಗಾಲದಲ್ಲಿ ಹಸಿವು ಹೆಚ್ಚು. ಹಾಗಾಗಿ, ಚೆನ್ನಾಗಿ ತಿನ್ನಿ. ಆದರೆ ತೆಗೆದುಕೊಳ್ಳುವ ಆಹಾರ ಪೌಷ್ಟಿಕವಾಗಿರಲಿ. ಬೆಳಗಿನ ತಿಂಡಿ ಹೊಟ್ಟೆತುಂಬ ತಿನ್ನಿರಿ.
  • ಬೆಚ್ಚನೆ ಉಡುಪು ಧರಿಸಿ, ಕಿವಿಗೆ ಗಾಳಿ ಪ್ರವೇಶಿಸುವುದನ್ನು ತಡೆಯಿರಿ.

  ತಜ್ಞರು ಏನಂತಾರೆ?

  ಹವಾಮಾನ ಬದಲಾವಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಇದನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೆಚ್ಚು ಉಷ್ಣತೆ, ಅತಿಯಾದ ಚಳಿ ಎರಡೂ ಅಪಾಯಕಾರಿಯೇ. ಅಕಾಲಿಕ ಮಳೆ ಹಲವು ಕಾಯಿಲೆಗಳನ್ನು ಜತೆಗೇ ತರುತ್ತದೆ. ಮುಂದಿನ ವರ್ಷಗಳಲ್ಲಿ ಈ ಸ್ಥಿತಿ ಸುಧಾರಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುತ್ತದೆ. ಅದಕ್ಕೆ ಮುಂಚೆ ಎಚ್ಚೆತ್ತುಕೊಂಡು, ಕ್ರಮಕ್ಕೆ ಮುಂದಾಗಬೇಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts