More

    ಸಹವಾಸ ದೋಷ ಸೆರೆಮನೆ ವಾಸ: ಆ ಕ್ಷಣ ಅಂಕಣ

    ಸಹವಾಸ ದೋಷ ಸೆರೆಮನೆ ವಾಸ: ಆ ಕ್ಷಣ ಅಂಕಣತಾಲ್ಲೂಕು ಕೇಂದ್ರವೊಂದರ ನಿವಾಸಿಯಾಗಿದ್ದ ರಾಮರಾಯರು ಸುರೇಶ್ ಎನ್ನುವನನ್ನು ತಮ್ಮ ಇನ್ನೊವಾ ಕಾರಿನ ಚಾಲಕನನ್ನಾಗಿ ನೇಮಿಸಿಕೊಂಡು ಆತನಿಗೆ ತಮ್ಮ ಮನೆಯಲ್ಲೇ ವಾಸಿಸಲು ರೂಂ ಕೊಟ್ಟಿದ್ದರು. ಆತ ಕೆಲಸಕ್ಕೆ ಸೇರಿದ ಒಂದು ವಾರದ ನಂತರ ಅವನನ್ನು 10 ಕಿ.ಮೀ ದೂರದಲ್ಲಿದ್ದ ಸಂಬಂಧಿಕರೊಬ್ಬರಿಗೆ ಪಾರ್ಸೆಲೊಂದನ್ನು ಕೊಟ್ಟು ಬರಲು ಕಳುಹಿಸಿದರು. ರಾತ್ರಿ 8 ಗಂಟೆಗೆ ಕಾರಿನಲ್ಲಿ ಹೋದ ಸುರೇಶ್ ಮಧ್ಯರಾತ್ರಿಯಾದರೂ ವಾಪಸಾಗದಿದ್ದಾಗ ರಾಮರಾಯರು ಅವನ ಸೆಲ್​ಫೋನ್​ಗೆ ಕರೆ ಮಾಡಿದರು. ಅದು ಸ್ವಿಚಾಫ್ ಆಗಿತ್ತು. ಆತಂಕಗೊಂಡ ರಾಮರಾಯರು ಸುರೇಶನ ತಂದೆಗೆ ಕರೆ ಮಾಡಿದರು. ಸುರೇಶ್ ಅಲ್ಲಿಗೂ ಬಂದಿರಲಿಲ್ಲ. ಮಾರನೆಯ ಬೆಳಗ್ಗೆ ರಾಮರಾಯರು ತಮ್ಮ ಕಾರನ್ನು ಸುರೇಶ್ ಕದ್ದಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದರು. ಸುರೇಶನ ಹಾಗೂ ಕಾರಿನ ವಿವರಗಳನ್ನು ಪಡೆದ ಪೊಲೀಸರು ಕಳ್ಳತನದ ಪ್ರಕರಣ ದಾಖಲಿಸಿ ವಿವರಗಳನ್ನು ವೈರ್​ಲೆಸ್ ಮೂಲಕ ಎಲ್ಲಾ ಠಾಣೆಗಳಿಗೆ ರವಾನಿಸಿದರು. ಕಾರು ಪತ್ತೆಯಾದರೆ ತಿಳಿಸಲು ಕೋರಿದರು.

    ಇದಾದ ಮಾರನೆಯ ದಿನ ಪಕ್ಕದ ಜಿಲ್ಲೆಯಲ್ಲಿದ್ದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭುಜಂಗರಾವ್ ಎನ್ನುವವರು ಬಂದರು. ರಸ್ತೆಯಲ್ಲಿ ದರೋಡೆಕೋರರು ಹಲ್ಲೆ ಮಾಡಿದ್ದರಿಂದ ತಾವು ಗಾಯಗೊಂಡಿರುವುದಾಗಿ ತಿಳಿಸಿ ಉಪಚರಿಸಲು ಕೋರಿದರು. ವೈದ್ಯರು ಅವರನ್ನುಪಚರಿಸಿ ಪೊಲೀಸರಿಗೆ ಮಾಹಿತಿಯಿತ್ತರು. ಪೊಲೀಸರ ಮುಂದೆ 50 ವರ್ಷದ ಭುಜಂಗರಾವ್ ಹೀಗೆಂದರು:‘ನಾನು ನೆರೆಯ ಜಿಲ್ಲೆಯವನು. ಮೊನ್ನೆ ಊರಿಗೆ ರೈಲಿನಲ್ಲಿ ಹೋಗಿದ್ದು ನನ್ನ ಕಾರನ್ನು ಇಲ್ಲಿಯೇ ಪರಿಚಯಸ್ಥರೊಬ್ಬರ ಬಳಿ ಬಿಟ್ಟಿದ್ದೆ. ಇಂದು ಬೆಳಗ್ಗೆ 4 ಗಂಟೆಗೆ ವಾಪಸಾಗಿ ಕಾರನ್ನು ತೆಗೆದುಕೊಂಡು 60 ಕಿ.ಮೀ ದೂರದ ನನ್ನ ಮನೆಗೆ ಹೊರಟಿದ್ದೆ. ಸುಮಾರು 20 ಕಿ.ಮೀ ದೂರ ದಾಟಿದಾಗ ರಸ್ತೆಯ ಪಕ್ಕದಲ್ಲಿ ಒಂದು ಕಪ್ಪು ಬಣ್ಣದ ಇನ್ನೊವಾ ಕಾರು ನಿಂತಿದ್ದು ಅದರ ಪಕ್ಕದಲ್ಲಿದ್ದ ವ್ಯಕ್ತಿ ನನಗೆ ನಿಲ್ಲಿಸಲು ಸನ್ನೆ ಮಾಡಿದ. ನಾನು ನಿಂತಾಗ ಆತ ತನ್ನ ಕಾರು ಕೆಟ್ಟು ಹೋಗಿರುವುದಾಗಿ ತಿಳಿಸಿ ನನ್ನ ಕಾರಿನಲ್ಲಿ ಟೂಲ್ ಕಿಟ್ ಇದೆಯೇ ಎಂದು ಕೇಳಿದ. ನಾನು ಇಲ್ಲ ಎನ್ನುತ್ತಾ ಮುಂದಕ್ಕೆ ಹೋಗಲು ಅನುವಾದಾಗ ಅಲ್ಲಿ ಅಡಗಿದ್ದ ಮೂರು ದಾಂಡಿಗರು ನನ್ನನ್ನು ಬಲವಂತವಾಗಿ ಕೆಳಗಿಳಿಸಿದರು. ನನ್ನನ್ನು ತಲವಾರಿನಿಂದ ಥಳಿಸಿ ನನ್ನ ಕಾರಿನ ಹಿಂದಿನ ಸೀಟಿಗೆ ದಬ್ಬಿದರು. ನನ್ನನ್ನು ಸೀಟಿನ ಮಧ್ಯಭಾಗದಲ್ಲಿ ಕೂರಿಸಿ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತರು. ಮಿಸುಕಾಡಿದರೆ ಕೊಲ್ಲುವುದಾಗಿ ಬೆದರಿಸಿದರು. ಮೂರನೆಯವನು ನನ್ನ ಕಾರನ್ನು ಚಲಾಯಿಸಿಕೊಂಡು ಈ ನಗರದತ್ತ ಹೊರಟ. ಇನ್ನೊವಾ ವಾಹನವು ನನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದಿತು. ಮಾರ್ಗಮಧ್ಯದಲ್ಲಿ ಅವರು ನನ್ನ ಪರ್ಸ್, ಉಂಗುರ, ಚೈನ್ ಕಸಿದುಕೊಂಡರು. ಪರ್ಸಿನಲ್ಲಿದ್ದ ನನ್ನ ಡೆಬಿಟ್ ಕಾರ್ಟ್ ನೋಡಿದ ಅವರು ಒಂದು ಬ್ಯಾಂಕಿನ ಎ.ಟಿ.ಎಂ ಮುಂದೆ ಕಾರು ನಿಲ್ಲಿಸಿ ನನ್ನ ಎ.ಟಿ.ಎಂ ಪಿನ್ ಕೇಳಿದರು. ನಾನು ಬೇಕೆಂತಲೇ ಸುಳ್ಳು ನಂಬರ್ ನೀಡಿದೆ. ಹಿಂದಿನ ಸೀಟಿನಲ್ಲಿದ್ದ ಇಬ್ಬರೂ ಎಟಿಎಂನತ್ತ ಹೋದಾಗ ನಾನು ಕಾರಿನಿಂದ ಕೆಳಗಿಳಿದು ಓಡಿ ಹೋದೆ. ಮುಂದೇನಾಯಿತೋ ನನಗೆ ಗೊತ್ತಿಲ್ಲ. ಅವರೆಲ್ಲರೂ 20-25 ವಯಸ್ಸಿನವರಾಗಿದ್ದು ಸ್ಥಳೀಯರಂತಿದ್ದರು.’

    ಈ ಹೇಳಿಕೆಯ ಮೇರೆಗೆ ಪೊಲೀಸರು ರಾಬರಿ ಪ್ರಕರಣ್ನ ದಾಖಲಿಸಿ ಭುಜಂಗರಾಯರೊಡನೆ ಕೃತ್ಯ ನಡೆದ ಸ್ಥಳಕ್ಕೆ ಹೋದರು. ಭುಜಂಗರಾಯರ ಕಾರು ಎಟಿಎಂ ಮುಂದಿತ್ತು. ಅದರ ಬಾಗಿಲು ಲಾಕ್ ಆಗಿರಲಿಲ್ಲ. ಕಾರಿನ ಸ್ಟೀರಿಯೋ ಕಳವಾಗಿದ್ದು ಕಾರಿನಲ್ಲಿ ಕಳ್ಳರ ಬೆರಳಚ್ಚು ಗುರುತುಗಳು ದೊರೆತವು. ದರೋಡೆಕೋರರ ಕಪು್ಪ ಬಣ್ಣದ ಇನ್ನೊವಾ ನಾಪತ್ತೆಯಾಗಿತ್ತು.

    ಮರುದಿನವೇ ರಾಮರಾಯರ ಮನೆಗೆ 10 ಕಿಮೀ ದೂರದಲ್ಲಿದ್ದ ಕೆರೆಯಲ್ಲಿ ಹೆಣವೊಂದು ತೇಲುತ್ತಿದ್ದುದನ್ನು ವ್ಯಕ್ತಿಯೊಬ್ಬ ಕಂಡು ಪೊಲೀಸ್ ಠಾಣೆಗೆ ಕರೆ ಮಾಡಿದ. ಪೊಲೀಸರು ಅಲ್ಲಿಗೆ ಬರುವಷ್ಟರಲ್ಲಿ ಜನರು ಅಲ್ಲಿ ನೆರೆದಿದ್ದರು. ಶವವನ್ನು ನೀರಿನಿಂದ ಹೊರತೆಗೆಯುವಾಗ ಶವದ ಸೊಂಟಕ್ಕೆ ಮತ್ತು ಕಾಲುಗಳಿಗೆ ಹಗ್ಗವೊಂದು ಬಿಗಿದಿದ್ದು ಗೋಚರಿಸಿತು. ಶವದ ಮೈಯಲ್ಲಿ ನೀರು ತುಂಬಿ ಊದಿತ್ತು. ಶವದ ಮೇಲೆ ಮಹಜರ್ ಮಾಡುವ ಸಮಯದಲ್ಲಿ ಅಲ್ಲಿಗೆ ಬಂದಿದ್ದ ರಾಮರಾಯರ ಸೇವಕ ಶವ ಚಾಲಕ ಸುರೇಶನದು ಎಂದು ಗುರುತಿಸಿದ. ಸುರೇಶನನ್ನು ಕೊಲೆ ಮಾಡಿ ಅವನ ದೇಹಕ್ಕೆ ಕಲ್ಲನ್ನು ಕಟ್ಟಿ ಕೆರೆಯಲ್ಲಿ ಮುಳುಗಿಸಿ ಸಾಕ್ಷ್ಯನಾಶದ ಪ್ರಯತ್ನ ಮಾಡಿದ್ದು ಮೇಲ್ನೋಟಕ್ಕೇ ತಿಳಿಯುತ್ತಿದ್ದ ಕಾರಣ ಪೊಲೀಸರು ಕೊಲೆ ಹಾಗೂ ಸಾಕ್ಷ್ಯನಾಶದ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸುರೇಶ್ ಸತ್ತು 48 ಗಂಟೆಗಳಾಗಿದೆಯೆಂದು ತಿಳಿಸಿ ಆತನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ ಎಂದು ಬರೆದಿತ್ತು.

    ಸುರೇಶ್ ಚಾಲನೆ ಮಾಡುತ್ತಿದ್ದ ಇನ್ನೊವಾ ಕಾರೇನಾಯಿತು ಎನ್ನುವುದೇ ಪ್ರಶ್ನೆಯಾಯಿತು. ಸುರೇಶನಿಗೆ ಆಗದವರು ಅವನ ಕೊಲೆ ಮಾಡಿದರೇ ಅಥವಾ ಕಾರನ್ನು ಕಳವು ಮಾಡುವ ಉದ್ದೇಶದಿಂದ ಅವನ ಕೊಲೆ ಮಾಡಿದರೇ? ಒಂದು ವೇಳೆ ಕಳವೇ ಮಾಡುವುದಿದ್ದರೆ ಬಡ ಚಾಲಕನ ಕೊಲೆಯೇಕೆ ಮಾಡಿದರು? ಮುಂತಾದ ಪ್ರಶ್ನೆಗಳು ಸ್ವಾಭಾವಿಕವಾಗಿಯೇ ಎದುರಾದವು. ಅದೇ ರಾತ್ರಿ ಕಪು್ಪ ಬಣ್ಣದ ಇನ್ನೊವಾ ಕಾರೊಂದು ಅದೇ ಜಿಲ್ಲೆಯ ಅರಣ್ಯದ ಚೆಕ್​ಪೋಸ್ಟ್ ಮೂಲಕ ನೆರೆಯ ಜಿಲ್ಲೆಗೆ ಹೋಗಿ ಮೂರು ಗಂಟೆಗಳ ನಂತರ ಮತ್ತೆ ವಾಪಾಸಾಯಿತು ಎನ್ನುವ ಮಾಹಿತಿ ತನಿಖಾಧಿಕಾರಿಗೆ ಬಂದಿತು. ಅವರು ಚೆಕ್​ಪೋಸ್ಟ್​ಗೆ ಹೋಗಿ ಪರಿಶೀಲಿಸಿದಾಗ ಇನ್ನೊವಾದ ನೋಂದಣಿ ಸಂಖ್ಯೆಯು ಕಳುವಾದ ಕಾರಿಗಿಂತ ಭಿನ್ನವಾಗಿತ್ತು. ಆ ಕಾರಿನಲ್ಲಿ ನಾಲ್ಕು ಜನರಿದ್ದರೆಂದು ಚೆಕ್​ಪೋಸ್ಟಿನ ಅಧಿಕಾರಿಗಳು ತಿಳಿಸಿದರು.

    ಮೂರು ಬೇರೆ ಪ್ರಕರಣಗಳಲ್ಲಿ ಕರಿಯ ಬಣ್ಣದ ಇನ್ನೊವಾ ಕಾರಿಗಾಗಿ ಎರಡು ಜಿಲ್ಲೆಗಳಲ್ಲಿ ಹುಡುಕಾಟ ನಡೆದಿತ್ತು. ಒಂದು ಜಿಲ್ಲೆಯ ಪೊಲೀಸರು ಅದನ್ನು ಹುಡುಕಲು ಹಲವಾರು ಕಡೆ ರಸ್ತೆ ತಡೆಗಳನ್ನು ನಿರ್ವಿುಸಿ ವಾಹನಗಳನ್ನು ಚೆಕ್ ಮಾಡತೊಡಗಿದರು. ಮಾರನೆಯ ರಾತ್ರಿ ಇಂತಹ ಒಂದು ಜಾಗಕ್ಕೆ ಕಪು್ಪ ಇನ್ನೊವಾ ಕಾರೊಂದು ಬಂದಿತು. ಅದನ್ನು ತಡೆಯಲು ಹೋದಾಗ ಅದರ ಚಾಲಕ ಪೊಲೀಸರ ಮೇಲೆಯೇ ನುಗ್ಗಿಸಿ ನಿಲ್ಲಿಸದೆಯೇ ಭರ್ರೆಂದು ಮುಂದೆ ಸಾಗಿದ. ಅಧಿಕಾರಿಯೊಬ್ಬರು ಅದನ್ನು ಚೇಸ್ ಮಾಡಿದರು. ಸುಮಾರು ಹತ್ತು ಕಿಲೋಮೀಟರ್ ಬೆನ್ನಟ್ಟಿದ ನಂತರ ಆ ವಾಹನ ರಸ್ತೆಬದಿಯಲ್ಲಿ ನಿಂತಿತು. ಅದರಲ್ಲಿದ್ದ ನಾಲ್ಕು ಜನರು ಕಾರಿನಿಂದಿಳಿದು ಕತ್ತಲಲ್ಲಿ ಮಾಯವಾದರು. ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ತಲವಾರ್​ಗಳು, ಕಬ್ಬಿಣದ ಚೈನು ಮುಂತಾದ ಮಾರಕಾಸ್ತ್ರಗಳಿದ್ದವಲ್ಲದೆ ನೈಲಾನ್ ಹಗ್ಗಗಳಿದ್ದವು. ಬೆಳಕಾದ ನಂತರ ಕಾರಿನಿಂದ ಇಳಿದು ಓಡಿಹೋಗಿದ್ದ ಒಬ್ಬ ವ್ಯಕ್ತಿ ಪಕ್ಕದ ಹಳ್ಳಿಯಲ್ಲಿ ಪತ್ತೆಯಾದ.

    ಆ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ಆತ ಹೀಗೆಂದ:‘ ನನ್ನ ಹೆಸರು ಸಿರಾಜ್. 22 ವರ್ಷ. ನನಗೆ ಯಾವುದೇ ನೌಕರಿ ಸಿಗದೆ ಹತಾಶನಾಗಿದ್ದೆ. ಆಗ ನನ್ನ ಬಾಲ್ಯಸ್ನೇಹಿತ ಮನ್ಸೂರ್ ನನ್ನನ್ನು ಸಂರ್ಪಸಿ ತನಗೆ ಬೇಗನೇ ಹಣ ಗಳಿಸುವ ದಾರಿ ತಿಳಿದಿದೆಯೆಂದು ಹೇಳಿದ. ಏನೆಂದು ಕೇಳಿದಾಗ ಹೆದ್ದಾರಿಯಲ್ಲಿ ಬರುವ ಡ್ರೈವರ್ ಒಬ್ಬನೇ ಇರುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಅವುಗಳ ಚಾಲಕರನ್ನು ಬೆದರಿಸಿ ಹಣ ಕಸಿಯುವುದು ಎಂದ. ನಾನು ಬೇಡವೆಂದರೂ ಬಿಡದೆ ಬಲವಂತದಿಂದ ನನ್ನನ್ನು ತನ್ನ ಗ್ಯಾಂಗಿಗೆ ಸೇರಿಸಿಕೊಂಡ. ನನ್ನಂತೆಯೇ ಇತರ ಇಬ್ಬರು ಗ್ಯಾಂಗ್​ನಲ್ಲಿದ್ದರು. ಕಳೆದ ವಾರ ನಾವು ನಮ್ಮ ಜಿಲ್ಲೆಯ ಒಂದು ರಸ್ತೆಯಲ್ಲಿ ಹೊಂಚು ಹಾಕಿದ್ದಾಗ ಚಾಲಕನೊಬ್ಬನೇ ಇದ್ದ ಕರಿಯ ಇನ್ನೊವಾ ಬಂದಿತು. ಡ್ರಾಪ್ ಕೇಳುವ ನೆಪದಲ್ಲಿ ಅದನ್ನು ನಿಲ್ಲಿಸಿ ವಾಹನ ಹತ್ತಿಕೊಂಡೆವು. ಸ್ವಲ್ಪ ದೂರ ಹೋದ ನಂತರ ಚಾಲಕನನ್ನು ಬೆದರಿಸಿ ಅವನಲ್ಲಿದ್ದ ಹಣ ಕೊಡಲು ಕೇಳಿದೆವು. ಅವನ ಬಳಿ ಕೇವಲ ನೂರು ರೂಗಳಿದ್ದವು. ಹಣ ಸಿಗದಿದ್ದರೇನಾಯಿತು, ಈ ವಾಹನವನ್ನೇ ಕದಿಯೋಣ ಎಂದ ಮನ್ಸೂರ್. ನಂತರ ಮನಬದಲಿಸಿದ ಆತ ಮುಂದೊಂದು ದಿನ ಚಾಲಕ ನಮ್ಮನ್ನು ಗುರುತು ಹಿಡಿದರೆ ನಾವು ಸಿಕ್ಕಿಬೀಳುವೆವೆಂದು ಹೇಳಿದ. ಚಾಲಕನನ್ನು ಕೊಲ್ಲುವುದೇ ಉಪಾಯವೆಂದ. ನಾನು ಈ ಕೃತ್ಯದಲ್ಲಿ ಶಾಮೀಲಾಗುವುದಿಲ್ಲ ಎಂದೆ. ನಮ್ಮ ಸಂಭಾಷಣೆಯನ್ನು ಕೇಳಿಸಿಕೊಂಡ ಚಾಲಕ ವಾಹನವನ್ನು ನಿಲ್ಲಿಸಿ ಕೆಳಗಿಳಿದು ಓಡತೊಡಗಿದ. ಮನ್ಸೂರ್ ಮತ್ತಿತರರು ಅವನನ್ನು ಹಿಡಿದು ತಂದರು. ರಸ್ತೆಯ ಪಕ್ಕದಲ್ಲಿ ಕೆರೆ ಇದ್ದುದನ್ನು ಕಂಡ ಅವರು ಚಾಲಕನನ್ನು ಕೆರೆಯ ಬಳಿಗೊಯ್ದರು. ಅವನ ಮುಖವನ್ನು ಬಲವಂತವಾಗಿ ನೀರಿನಲ್ಲಿ ಮುಳುಗಿಸಿ ಕೊಂದರು. ಕೊಲೆಯಾದದ್ದು ಯಾರಿಗೂ ತಿಳಿಯಬಾರದೆಂದು ಚಾಲಕನ ದೇಹಕ್ಕೆ ಕಲ್ಲುಗಳನ್ನು ಕಟ್ಟಿ ಕೆರೆಗೆಸೆದರು. ನಂತರ ನಾವು ಮನ್ಸೂರ್​ನ ಮನೆಗೆ ವಾಪಾಸಾದೆವು. ಹೆದರಿದ್ದ ನಾನು ಗ್ಯಾಂಗನ್ನು ಬಿಟ್ಟುಬಿಡುವೆನೆಂದಾಗ ಮನ್ಸೂರ್ ನನ್ನನ್ನೂ ಕೊಲ್ಲುವುದಾಗಿ ಬೆದರಿಸಿದ. ಮುಂದೆ ಯಾವ ಚಾಲಕನನ್ನೂ ಕೊಲ್ಲುವುದಿಲ್ಲವೆಂದು ಆಶ್ವಾಸನೆ ಕೊಟ್ಟರೆ ಮಾತ್ರ ನಾನು ಗ್ಯಾಂಗಿಗೆ ಮರಳುವೆ ಎಂದೆ. ಆವರು ಒಪ್ಪಿದರು. ಅನಂತರ ಅವರು ನಡೆಸಿದ ನಾಲ್ಕು ದರೋಡೆಗಳಲ್ಲಿ ಶಾಮೀಲಾದೆ.ಆತನ ವಿವರವಾದ ಹೇಳಿಕೆಯನ್ನು ಪಡೆದು ಅದರ ಮೇರೆಗೆ ಗ್ಯಾಂಗಿನ ಇತರರನ್ನು ಬಂಧಿಸಿ ಅವರಿಂದ ಕಳುವಾದ ವಸ್ತುಗಳನ್ನು, ಮಾರಕಾಸ್ತ್ರಗಳನ್ನು ಮತ್ತು ಸುರೇಶನ ಫೋನು ಮತ್ತು ಡೈರಿಯನ್ನು ಜಪ್ತು ಮಾಡಲಾಯಿತು. ಅವರ ಬೆರಳಚ್ಚು ಗುರ್ತಗಳು ಭುಜಂಗರಾಯರ ಕಾರಲ್ಲಿ ಸಿಕ್ಕ ಗುರ್ತಗಳಿಗೆ ಹೋಲಿಕೆಯಾದವು. ಆರೋಪಿಗಳು ಪೊದೆಯೊಂದರಲ್ಲಿ ಎಸೆದಿದ್ದ ಇನ್ನೊವಾದ ಒರಿಜಿನಲ್ ನಂಬರ್ ಪ್ಲೇಟುಗಳನ್ನು ತನಿಖಾಧಿಕಾರಿ ಪರಮೇಶ್ವರ್ ವಶಪಡಿಸಿಕೊಂಡರು. ನಾಲ್ಕೂ ಆರೋಪಿಗಳನ್ನು ಭುಜಂಗರಾವ್ ಮತ್ತು ಅರಣ್ಯ ಚೆಕ್​ಪೋಸ್ಟಿನ ಸಿಬ್ಬಂದಿ ಗುರುತಿಸಿದರು. ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣದಲ್ಲಿ ನ್ಯಾಯಾಲಯ ಎಲ್ಲರಿಗೂ ಜೀವಾವಧಿ ಶಿಕ್ಷೆಯನ್ನು ನೀಡಿತು. ರಾಬರಿ ಪ್ರಕರಣದಲ್ಲಿ ತಲಾ 5 ವರ್ಷಗಳ ಜೈಲುವಾಸವನ್ನು ವಿಧಿಸಿತು. ‘ಬಂಧುವುಂ, ಮಿತ್ರನುಂ, ಭೃತ್ಯನುಂ ಶತ್ರುವೊಲೆ ದಂಡಧರನೋಲಗಕೆ ನಿನ್ನ ಸೆಳೆವವರೋ, ಅಂದದೊಡವೆಯ ಮೂನೆಗಳಿಂದೆದೆಯನೊತ್ತುವಾ ಮಂದಹಸಿತದ ಕೊಲೆಯೋ ಮಂಕುತಿಮ್ಮ’ ಎಂದು ಡಿ.ವಿ.ಜಿಯವರು ಹೇಳಿದಂತೆ ಒಬ್ಬ ಮಿತ್ರನ ಮಾತು ಕೇಳಿ ಎಲ್ಲರೂ ಕೆಟ್ಟರು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts