ಮೈತ್ರಿ ಅಭ್ಯರ್ಥಿಗೆ ಅರಿವಿಲ್ಲ ಬೆಳೆಗಾರರ ಸಮಸ್ಯೆ

ಆಲ್ದೂರು: ಕಾಫಿ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕಾಳುಮೆಣಸು ಧಾರಣೆ ಕುಸಿತ, ಹವಾಮಾನ ವೈಪರಿತ್ಯದಿಂದ ಕಾಫಿ ಉದ್ದಿಮೆ ಸಂಕಷ್ಟಕ್ಕೆ ತುತ್ತಾಗಿದೆ. ಈ ಬಗ್ಗೆ ಶೋಭಾ ಕರದ್ಲಾಂಜೆ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಕಾಫಿ ಬೋರ್ಡ್ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಹೇಳಿದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ಮಾಡಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗೆ ಮಲೆನಾಡಿನ ಕಾಫಿಯ ವಾಸನೆ ಗೊತ್ತಿಲ್ಲ. ಅಂಥವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ನಮ್ಮ ಅಭ್ಯರ್ಥಿ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ, ಅವರಿಗೆ ಕಾಫಿ ಉದ್ದಿಮೆ ಬಗ್ಗೆ ಅರಿವಿದೆ ಎಂದರು.

ಹೊರ ದೇಶದಲ್ಲಿ ಕಾಫಿ ಉತ್ಪತಿ ಹೆಚ್ಚಾಗಿದ್ದು ಇದು ಕಾಫಿ ಧಾರಣೆ ಮೇಲೆ ಪರಿಣಾಮ ಬೀರುತ್ತಿದೆ. ಎರಡು ಬಾರಿ ಕಾಫಿ ಬೆಳೆಗಾರರಿಗೆ ಸಬ್ಸಿಡಿ ನೀಡಿದ್ದು ಮೂರನೇ ಹಂತದಲ್ಲಿ 269 ಕೋಟಿ ರೂ. ಬಿಡುಗಡೆಯಾಗಿದೆ. ನೀತಿ ಸಂಹಿತೆ ಇರುವುದರಿಂದ ಚುನಾವಣೆ ಮುಗಿದ ನಂತರ ಸಬ್ಸಿಡಿ ನೀಡಲಾಗುವುದು ಎಂದರು.

ಕಾಫಿಬೋರ್ಡ್​ಗಳಲ್ಲಿ ದುರುಪಯೋಗ ಕಂಡು ಬಂದ ಹಿನ್ನೆಲೆಯಲ್ಲಿ ಸಬ್ಸಿಡಿ ರದ್ದು ಮಾಡಲಾಗಿದೆ. ಆದರೆ ಹನಿ ನೀರಾವರಿಗೆ ಶೇ. 90 ದರದಲ್ಲಿ ಸಲಕರಣೆಗಳನ್ನು ನೀಡುತ್ತಿದೆ ಎಂದರು.

ಪಶ್ಚಿಮ ಘಟ್ಟ ಅರಣ್ಯ ಅಭಿವೃದ್ಧಿಯಾಗಬೇಕೆಂದರೆ ಈ ಭಾಗದಲ್ಲಿ ಕಾಫಿ ಉದ್ದಿಮೆ ಅಭಿವೃದ್ಧಿಯಾಗಬೇಕು. ಈ ಬಾರಿ ಕಾಫಿ ಮಂಡಳಿಯಿಂದ ಶಿಫಾರಸು ಮಾಡಿದ್ದು 25 ಲಕ್ಷ ರೂ. ವರೆಗೆ ಶೇ.3 ಹಾಗೂ 25 ಲಕ್ಷ ರೂ. ಮೇಲ್ಪಟ್ಟು ಶೇ.6 ದರದಲ್ಲಿ ಬ್ಯಾಂಕ್​ಗಳು ಸಾಲ ನೀಡಿ ಕಾಫಿ ಉದ್ದಿಮೆಯನ್ನು ಬೆಳೆಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

ಕಾಫಿ ಮಂಡಳಿ ಸದಸ್ಯ ಕಲ್ಲೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣ್ ಆಚಾರ್ಯ, ಬಿಜೆಪಿ ಮುಖಂಡರಾದ ಪ್ರಸನ್ನ, ಸಂಧ್ಯನ್, ಶಿವಕುಮಾರ್ ಮತಿತ್ತರರಿದ್ದರು.