ತೆಂಗಿನಕಾಯಿ ಬೆಲೆ ದಿಢೀರ್ ಕುಸಿತ!

ಶ್ರವಣ್ ಕುಮಾರ್ ನಾಳ ಪುತ್ತೂರು

ಕರಾವಳಿ ಮಾರುಕಟ್ಟೆಯಲ್ಲಿ 2019ರ ಆರಂಭದಿಂದ ಏರುಗತಿಯಲ್ಲೇ ಸಾಗಿ ಕೆ.ಜಿ.ಗೆ 37 ರೂಪಾಯಿವರೆಗೆ ಏರಿಕೆಯಾಗಿದ್ದ ತೆಂಗಿನಕಾಯಿಗೆ ಈಗಿನ ಬೆಲೆ 20ರಿಂದ 31 ರೂ. ಮಾತ್ರ!
2017ರ ಆಗಸ್ಟ್‌ನಲ್ಲಿ ಕೆ.ಜಿ. ತೆಂಗಿನಕಾಯಿಗೆ 30-31 ರೂ. ಆಸುಪಾಸಿನಲ್ಲಿತ್ತು. ನಂತರ ಏರಿಕೆಯಾಗುತ್ತಲೇ ಸಾಗಿ ಡಿಸೆಂಬರ್ ಅಂತ್ಯಕ್ಕೆ 40 ರೂ. ತಲುಪಿತ್ತು. 2018ರ ಆರಂಭದಲ್ಲೇ ಕೆ.ಜಿ.ತೆಂಗಿನಕಾಯಿಗೆ 43 ರೂ.ಗರಿಷ್ಠ ದಾಖಲೆಯ ಬೆಲೆ ಕರಾವಳಿ ಮಾರುಕಟ್ಟೆಯಲ್ಲಿ ಲಭಿಸಿತ್ತು. ಈ ಸಂದರ್ಭ ಕರಾವಳಿ ಮಾರುಕಟ್ಟೆಯಲ್ಲಿ ತೀವ್ರತರದಲ್ಲಿ ತೆಂಗಿನಕಾಯಿ ಕೊರತೆಯಿದ್ದು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಲಭ್ಯ ಇರುತ್ತಿರಲಿಲ್ಲ. ಕರಾವಳಿಯಲ್ಲಿ ತೆಂಗಿನಕಾಯಿ ಇಳುವರಿ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿತ್ತು. ಆದರೆ ಈಗ ತಮಿಳುನಾಡು, ಆಂಧ್ರಪ್ರದೇಶದ ತೆಂಗು ಕರಾವಳಿ ಮಾರುಕಟ್ಟೆಗೆ ಪ್ರವೇಶಿಸಿದೆ. ಬೇಡಿಕೆಗೆ ಅನುಗುಣವಾಗಿ ಕಾಯಿ ಪೂರೈಕೆಯಾಗುತ್ತಿದೆ. ಇದೇ ಕಾರಣದಿಂದ ತೆಂಗಿನಕಾಯಿಗೆ ಬೆಲೆ ಕುಸಿದಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಹೊರಗಿನಿಂದ ಪೂರೈಕೆ
2017ರಲ್ಲಿ ದ.ಕ ಜಿಲ್ಲೆಯಲ್ಲಿ 2967 ಲಕ್ಷ ತೆಂಗಿನಕಾಯಿ, ಉಡುಪಿಯಲ್ಲಿ 3275 ಲಕ್ಷ ತೆಂಗಿನಕಾಯಿ ಉತ್ಪಾದನೆಯಾಗಿತ್ತು. 2018ರಲ್ಲಿ 2389 ಲಕ್ಷ, ಉಡುಪಿಯಲ್ಲಿ 1960 ಲಕ್ಷ ತೆಂಗಿನಕಾಯಿ ಉತ್ಪಾದನೆಯಾಗಿತ್ತು. ಈ ಎರಡು ಜಿಲ್ಲೆಗಳಲ್ಲಿಯೂ 2017ಕ್ಕಿಂತ 2018ರಲ್ಲಿ ಕಡಿಮೆ ತೆಂಗಿನಕಾಯಿ ಉತ್ಪಾದನೆಯಾಗಿದೆ. 2019ರ ಜನವರಿಯಿಂದ ಕರಾವಳಿಯಾದ್ಯಂತ ತೆಂಗಿನಕಾಯಿಗೆ ಬೇಡಿಕೆಯಿದ್ದರೂ, ಪೂರೈಕೆ ಸಾಧ್ಯವಾಗಿಲ್ಲ. ಜನವರಿಯಿಂದ ಮೇ ಮೊದಲ ವಾರದವರೆಗೆ ತಮಿಳುನಾಡು ಸೇರಿದಂತೆ ದೇಶದ ಪ್ರಮುಖ ತೆಂಗು ಉತ್ಪಾದನಾ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶಗಳಲ್ಲಿ ತೆಂಗಿನಕಾಯಿ ಕೊಯ್ಲು ಇರುವುದಿಲ್ಲ. ಈಗ ಹೊರರಾಜ್ಯಗಳಲ್ಲಿ ಕೊಯ್ಲು ಆರಂಭ ಗೊಂಡಿದ್ದು, ಕಾವೇರಿಟಣಂ, ಓಮಲೂರು, ಪೊಳ್ಳಾಚ್ಚಿ ಪ್ರದೇಶಗಳ ಮಧ್ಯಮ ದರ್ಜೆ ತೆಂಗಿನಕಾಯಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮಂಗಳೂರು ಮಾರುಕಟ್ಟೆಗೆ ಯಥೇಚ್ಛವಾಗಿ ಪೂರೈಕೆಯಾಗುತ್ತಿವೆ. ಇವೆಲ್ಲ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಧಾರ್ಮಿಕ ಕಾರ್ಯಕ್ರಮಗಳಿಗೆ ವಿರಾಮ
ಜನವರಿಯಿಂದ ಮೇ ಅಂತ್ಯದವರೆಗೆ ಕರಾವಳಿಯಾದ್ಯಂತ ಧಾರ್ಮಿಕ ಕಾರ್ಯಕ್ರಮಗಳು ಅಧಿಕ ಸಂಖ್ಯೆಯಲ್ಲಿ ಇರುತ್ತದೆ. ಈ ಸಂದರ್ಭ ತೆಂಗಿನಕಾಯಿಗೆ ಯಥೇಚ್ಚ ಬೇಡಿಕೆ ಇದೆ. ಈಗ ಧಾರ್ಮಿಕ ಕಾರ್ಯಕ್ರಮಗಳಿಗೆ ವಿರಾಮ. ಬೇಡಿಕೆ ಕಡಿಮೆಯಾಗಿ ಬೆಲೆಯೂ ಕುಸಿದಿದೆ. ಜೂನ್ ಆರಂಭದಿಂದ ಕರಾವಳಿಯಲ್ಲೂ ತೆಂಗಿನಕಾಯಿ ಕೊಯ್ಲು ಆರಂಭಗೊಳ್ಳುತ್ತದೆ. ಈ ವೇಳೆ ಬೇಡಿಕೆ ಕಳೆದುಕೊಳ್ಳುವ ತೆಂಗಿನಕಾಯಿಯನ್ನು 3 ತಿಂಗಳು ಶೇಖರಿಸಿ, ಆಗಸ್ಟ್ ನಂತರ ಮಾರಾಟ ಮಾಡುವುದು ರೂಢಿ. ಮಳೆಗಾಲ ಆರಂಭ ವೇಳೆ ದೇಶದ ಅತಿ ದೊಡ್ಡ ತೆಂಗು ಮಾರುಕಟ್ಟೆಯ (ಕೊಯಮತ್ತೂರು ಹಾಗೂ ಕಾಂಗಯಂ) ಗೋದಾಮುಗಳು ಬರಿದಾಗುತ್ತವೆ. ಈ ವೇಳೆ ಪಿಲಿಪೈನ್ಸ್, ಇಂಡೋನೇಷ್ಯಾ, ಬ್ರೆಸಿಲ್ ಹಾಗೂ ಶ್ರೀಲಂಕಾದ ತೆಂಗು ಆಮದು ಕಡಿಮೆ ಇದ್ದು, ಕರ್ನಾಟಕದ ತೆಂಗಿಗೆ ಜೂನ್ ನಂತರ ಕೊಯಮತ್ತೂರು ಹಾಗೂ ಕಾಂಗಯಂಗಳಲ್ಲಿ ಬೇಡಿಕೆ ಇರುತ್ತಿತ್ತು. ಆದರೆ, ಈ ಬಾರಿ ತಮಿಳುನಾಡಿನಲ್ಲೇ ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಣ, ಕರ್ನಾಟಕದ ತೆಂಗಿನಕಾಯಿಗೆ ಡಿಮಾಂಡ್ ಕಡಿಮೆ.

ಜೂನ್‌ನಿಂದ ನವೆಂಬರ್‌ವರೆಗೆ ಕೊಯಮತ್ತೂರು ಹಾಗೂ ಕಾಂಗಯಂಗಳ ಗೋದಾಮುಗಳಲ್ಲಿ ತೆಂಗು ರಾಶಿ ಹಾಕಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕರ್ನಾಟಕದಲ್ಲಿ ಕೊಯ್ಲು ಆರಂಭ ವೇಳೆ ತಮಿಳುನಾಡಿನ ತೆಂಗಿನಕಾಯಿ ಕೊಯಮತ್ತೂರು ಹಾಗೂ ಕಾಂಗಯಂಗಳಲ್ಲಿ ಹೆಚ್ಚು ಬೇಡಿಕೆ ಪಡೆದಿದೆ. ಇದರಿಂದ ಕರಾವಳಿ ಮಾರುಕಟ್ಟೆ ಸೇರಿದಂತೆ ಬಹುತೇಕ ಮಾರುಕಟ್ಟೆಯಲ್ಲಿ ತೆಂಗು ಧಾರಣೆ ಅಲ್ಪಪ್ರಮಾಣದಲ್ಲಿ ಕುಸಿದಿದೆ.
ಹೇಮಚಂದ್ರ, ಸಹಾಯಕ ನಿರ್ದೇಶಕ, ತೆಂಗು ಅಭಿವೃದ್ಧಿ ನಿಗಮದ ಪ್ರದೇಶಿಕ ಕಚೇರಿ, ಬೆಂಗಳೂರು

2019ರ ಆರಂಭದಿಂದ ಕೆಜಿಗೆ 37 ರೂ. ವರೆಗೆ ಏರುಗತಿಯಲ್ಲೇ ಸಾಗಿದ್ದ ತೆಂಗು ಮಾರುಕಟ್ಟೆ ಧಾರಣೆ ಈಗ ಇಳಿಕೆಯಾಗುತ್ತಿದೆ. ತೆಂಗು ಕೊಯ್ಲು ಇಲ್ಲದೇ ಇರುವ ಸಂದರ್ಭ ಬೆಲೆ ಏರಿಕೆಯಾಗುತ್ತದೆ, ಕೊಯ್ಲು ಆರಂಭವಾದಾಗ ಧಾರಣೆ ಇಳಿಕೆಯಾಗುತ್ತದೆ. ಒಂದೆಡೆ ರೋಗಬಾಧೆ, ಮತ್ತೊಂದೆಡೆ ಇಳುವರಿ ಕೊರತೆಯಿಂದ ತೆಂಗು ಬೆಳೆಗಾರರು ಹೈರಾಣಾಗಿದ್ದಾರೆ.
ಕುಮಾರ್ ಪೆರ್ನಾಜೆ, ತೆಂಗುಬೆಳೆಗಾರ ಹಾಗೂ ಕೃಷಿ ತಜ್ಞ

Leave a Reply

Your email address will not be published. Required fields are marked *