ಕೊಬ್ಬರಿ ಎಣ್ಣೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಕೊಬ್ಬರಿ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇಲ್ಲ. ಯಾವ ಸಸ್ಯಾಹಾರದಲ್ಲಿಯೂ ಕೊಲೆಸ್ಟರಾಲ್ ಇಲ್ಲ. ಕೊಬ್ಬರಿ ಎಣ್ಣೆಯನ್ನು ವಿದೇಶೀಯರು ಸ್ಯಾಚುರೇಟೆಡ್ ಫ್ಯಾಟ್ ಎಂದು ವರ್ಗೀಕರಿಸಿ, ಅದು ಆರೋಗ್ಯಕ್ಕೆ ಹಾಲು ಎಂದು ಹೇಳುತ್ತಾರೆ. ಇದೆಲ್ಲ ವ್ಯಾಪಾರಕ್ಕಾಗಿ ಮಾಡಿದಂತಹ ವೈಜ್ಞಾನಿಕ ತಲೆಬರಹ ಹೊತ್ತ ಸಂಶೋಧನೆಗಳು. ನಿಜವಾದ ವಿಜ್ಞಾನ ಅದಲ್ಲ. ನಿಜವಾದ ವಿಜ್ಞಾನದ ಪ್ರಕಾರ ಕೊಬ್ಬರಿ ಎಣ್ಣೆಯಲ್ಲಿ ಇರುವ ಫ್ಯಾಟಿ ಅಸಿಡ್ ಮೋನೋಲ್ಯಾರಿಕ್ ಅಸಿಡ್ (monolauric acid). ತಾಯಿಯ ಹಾಲಿನಲ್ಲಿರುವುದು ಕೂಡ ಇದೇ ಮೋನೋಲ್ಯಾರಿಕ್ ಅಸಿಡ್. ನಮ್ಮ ದೇಹದ ರೋಗನಿರೋಧಕ ಶಕ್ತಿ ಕೂಡ ಮೋನೋಲ್ಯಾರಿಕ್ ಅಸಿಡ್. ಹೀಗಾಗಿ ಈ ಅಂಶಗಳನ್ನೆಲ್ಲ ವಿವೇಚಿಸಿ ನೋಡಿದರೆ ಕೊಬ್ಬರಿ ಎಣ್ಣೆ ಎಲ್ಲ ರೀತಿಯಲ್ಲಿಯೂ ಆರೋಗ್ಯಕ್ಕೆ ಒಳ್ಳೆಯದು. ಪ್ರಶ್ನೆ ಬರುವುದು ಏನೆಂದರೆ ಎಷ್ಟು ಆಹಾರವನ್ನು ಸೇವಿಸುತ್ತೀರಿ ಎಂದು. ಒಳ್ಳೆಯದು ಎಂಬ ಕಾರಣಕ್ಕೆ ಯಾವುದನ್ನೂ ತುಂಬಾ ತಿನ್ನಬಾರದು.

ಕೊಬ್ಬರಿ ಎಣ್ಣೆಯಲ್ಲಿರುವ ಫ್ಯಾಟಿ ಅಸಿಡ್ ಹಾಗೂ ತಾಯಿಯ ಹಾಲಿನಲ್ಲಿರುವ ಫ್ಯಾಟಿ ಅಸಿಡ್ – ಈ ಎರಡೂ ಒಂದೇ. ಇದಕ್ಕೆ ಮೋನೋಲ್ಯಾರಿಕ್ ಅಸಿಡ್ ಎಂದು ಕರೆಯುತ್ತಾರೆ. ಅಷ್ಟು ಮಾತ್ರವೇ ಅಲ್ಲ. ಈ ಕೊಬ್ಬರಿ ಎಣ್ಣೆಯಲ್ಲಿ ಇರುವಷ್ಟು ಒಳ್ಳೆಯ ಕ್ರಿಮಿನಾಶಕ ವಸ್ತುವೇ ಇಲ್ಲ. ಹಾಗಾಗಿ ಕೊಬ್ಬರಿ ಎಣ್ಣೆಯು ಎಲ್ಲ ರೀತಿಯಲ್ಲಿಯೂ ಒಳ್ಳೆಯದು.

ಇತ್ತೀಚೆಗೆ ಅಮೆರಿಕದ ಒಂದು ಸಂಶೋಧನಾ ಪ್ರಬಂಧವೊಂದರಲ್ಲಿ ಓದಿದ ವಿಚಾರ ಹೀಗಿದೆ. ಬೆಳಗ್ಗೆ ಎದ್ದ ಕೂಡಲೇ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಬಾಯಿಯಲ್ಲಿ ಐದು-ಹತ್ತು ನಿಮಿಷಗಳ ಕಾಲ ಇಟ್ಟುಕೊಂಡು ಅತ್ತಿತ್ತ ಮಾಡಿ ಉಗುಳಿದರೆ – ಹಲ್ಲಿನ ಮೇಲೆ ಹಳದಿ ಪದರ ಉಂಟಾಗುವುದಿಲ್ಲ. ಹಲ್ಲು ಸ್ವಚ್ಛವಾಗಿರುತ್ತದೆ. ದಂತವೈದ್ಯರ ಬಳಿ ಹೋಗುವ ಆವಶ್ಯಕತೆಯೂ ಉಂಟಾಗುವುದಿಲ್ಲ. ಇಷ್ಟೆಲ್ಲ ಒಳ್ಳೆಯ ಗುಣಗಳಿವೆ. ಹಾಗಾಗಿ ಕೊಬ್ಬರಿ ಎಣ್ಣೆ ಆಹಾರಕ್ಕೆ ಒಳ್ಳೆಯದು, ಹೃದಯಕ್ಕೂ ಒಳ್ಳೆಯದು.

ಕೊಬ್ಬರಿ ಎಣ್ಣೆಯ ಹಾಗೆಯೇ ತುಪ್ಪ ಕೂಡ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕೇ ಆಯುರ್ವೆದದಲ್ಲಿ ‘ಘೃತಂ ತೇಜಸ್ವಿನಂ, ಪಿತ್ತಾನಿಲ ಹರಂ, ರಸಸೌಜಸಮ್ ಎಂದು ಹೇಳುತ್ತಾರೆ. ಒಳ್ಳೆಯ ಆರೋಗ್ಯ ಬೇಕು ಎಂದಾದರೆ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ತುಪ್ಪ ತಿನ್ನಬೇಕು.

ತೀವ್ರವಾದ ಒತ್ತಡವು ಹೃದಯದ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತದೆ ಎಂದು ಕೇಳುತ್ತಾರೆ. ಆ ಬಗ್ಗೆ ನೋಡೋಣ. ಈ ಒತ್ತಡ ಎಂಬುದು ಇರುವುದು ಮನಸ್ಸಿನಲ್ಲಿ. ಒತ್ತಡದ ಕುರಿತಾಗಿ ನೀವು ಏನೇ ಮಾತಾಡಿದರೂ ಅದು ಕೊನೆಗೆ ಬಂದು ತಲುಪುವುದು ಮನಸ್ಸಿಗೆ. ಆ ಮನಸ್ಸಿನಲ್ಲಿ ಪ್ರೀತಿ ತುಂಬಿಸಿ ಇಟ್ಟುಕೊಂಡರೆ ಒತ್ತಡದ ಪ್ರಶ್ನೆಯೇ ಬರುವುದಿಲ್ಲ. ಕೆಲಸದಲ್ಲಿ ಒತ್ತಡ ಇರಬಹುದು. ಕೆಲಸದಲ್ಲಿ ಒತ್ತಡ ಬರುವುದು ಯಾವಾಗ? ಎಂದರೆ – ಆ ಕೆಲಸ ಮಾಡಲು ನಮಗೆ ಮನಸ್ಸಿಲ್ಲ. ಆದರೆ ನಾವು ಹಣಕ್ಕಾಗಿ ಕೆಲಸ ಮಾಡುತ್ತೇವೆ. ಅದು ಕೆಲಸದ ಒತ್ತಡ. ಆದ್ದರಿಂದ ಯಾವುದನ್ನೇ ಮಾಡಬೇಕಾದರೂ ಪ್ರೀತಿಯಿಂದ ಮಾಡಬೇಕು. ಕೆಲಸ ಮಾಡುವುದರಲ್ಲಿ ಪ್ರೀತಿ ಇರಬೇಕು. ಹುಮ್ಮಸ್ಸು ಇರಬೇಕು.enthusiasm to work. ಆಗ ಯಾವ ಬಗೆಯ ಒತ್ತಡವೂ ಉಂಟಾಗುವುದಿಲ್ಲ. ಒತ್ತಡ ಎಂಬುದು ಪ್ರತ್ಯೇಕವಾಗಿಯೇನೂ ಇಲ್ಲ. ಒತ್ತಡ ಎಂಬುದು ಮನುಷ್ಯನಿಗೆ ಬೇಕು. ಅದಿಲ್ಲದೆ ಮನುಷ್ಯ ಬದುಕುವುದಿಲ್ಲ.

ಹೃದಯ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದಾದರೆ ಮನುಷ್ಯ ಮುಖ್ಯವಾಗಿ ಮಾಡಬೇಕಾದುದು ವ್ಯಾಯಾಮ. ಅದರ ಜೊತೆಗೆ ಮನಸ್ಸು ಶುದ್ಧವಾಗಿರಬೇಕು. ಜೊತೆಗೆ ಪ್ರೀತಿಯಿಂದ, ಉತ್ಸಾಹದಿಂದ ಕೆಲಸ ಮಾಡಬೇಕು. ಇಷ್ಟೇ ಬೇಕಾಗಿರುವುದು.

Leave a Reply

Your email address will not be published. Required fields are marked *