ಕರಾವಳಿಯಲ್ಲಿ ಮುಂಗಾರು ಆರಂಭದಲ್ಲೇ ಕ್ಷೀಣ

ಮಂಗಳೂರು/ಉಡುಪಿ: ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿದ್ದು, ದುರ್ಬಲವಾಗಿದೆ. ಹೀಗಾಗಿ ಕರಾವಳಿಯಲ್ಲಿ ಆಗಾಗ ಮಳೆ ಮತ್ತು ಬಿಸಿಲಿನ ವಾತಾವರಣ ಕಂಡುಬಂದಿದೆ.

ವಾಯು ಚಂಡಮಾರುತದಿಂದ ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚುರುಕಾಗಿದ್ದ ಮಳೆ ಶುಕ್ರವಾರ ಕ್ಷೀಣಿಸಿದೆ. ಮುಂಜಾನೆವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದ್ದು, ಬಳಿಕ ಬಿಸಿಲು ಆವರಿಸಿತು. ಸೆಕೆಯ ವಾತಾವರಣ ಇತ್ತು.

ಶುಕ್ರವಾರ ಮಧ್ಯಾಹ್ನ ಬಳಿಕ ಹಗುರ ಮಳೆಯಾಗಿದ್ದು, ಮೋಡ, ಬಿಸಿಲು ಮಿಶ್ರಿತ ವಾತಾವರಣವಿತ್ತು. ಚಂಡಮಾರುತ ಒಮನ್‌ನತ್ತ ಸಾಗಿರುವುದರಿಂದ ರಾಜ್ಯದಲ್ಲಿ ಪ್ರಭಾವ ಕಡಿಮೆಯಾಗಿದೆ. ಮಂಗಳೂರು, ಸುಬ್ರಹ್ಮಣ್ಯದಲ್ಲಿ ಬಿಸಿಲು ಮತ್ತು ಹಗುರ ಮಳೆಯಾದರೆ, ಬೆಳ್ತಂಗಡಿ, ಪುತ್ತೂರಿನಲ್ಲಿ ಸಾಧಾರಣ ಮಳೆಯಾಯಿತು. ಕಡಲಿನಬ್ಬರವು ಕೊಂಚ ಕಡಿಮೆಯಾಗಿದೆ. ಸೋಮೇಶ್ವರ, ಉಳ್ಳಾಲ, ಉಚ್ಚಿಲದಲ್ಲಿ ಹೆಚ್ಚಾಗಿದ್ದ ಕಡಲ್ಕೊರೆತ ಸ್ವಲ್ಪ ಹತೋಟಿಗೆ ಬಂದಿದೆ.

ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮ ನರಸಿಂಹ, ಹಳ್ಳಾಡಿ ಹರ್ಕಾಡಿ ಗ್ರಾಮದ ಕೃಷ್ಣ ನಾಯ್ಕ, ಸಿದ್ದಾಪುರ ಗ್ರಾಮದ ಸರಸ ನಾಯ್ಕ, ಕುಳಂಜೆ ಗ್ರಾಮದ ರಾಜೀವ ಶೆಟ್ಟಿ , ಬಸ್ರೂರು ಗ್ರಾಮದ ನಿತಿನ್ ಭಟ್, ಉಡುಪಿ ತಾಲೂಕಿನ ಮೂಡುತೊನ್ಸೆ ಗ್ರಾಮದ ಕಡವಿನ ಬಾಗಿಲು ಎಂಬಲ್ಲಿ ಅಮ್ಮಣ್ಣಿ ಪೂಜಾರ್ತಿ ಎಂಬವರ ಮನೆಗೆ ಗಾಳಿಯಿಂದ ಹಾನಿಯಾಗಿದೆ.

187 ಕಂಬಗಳಿಗೆ ಹಾನಿ: ಉಡುಪಿ ಜಿಲ್ಲೆಯಲ್ಲಿ ಜೂನ್ 1ರಿಂದ ಇಲ್ಲಿವರೆಗೆ 187 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕಳೆದ ಮೂರ್ನಾಲ್ಕು ದಿನಗಳ ಗಾಳಿಮಳೆಗೆ ಹೆಚ್ಚಿನ ಹಾನಿಯಾಗಿದ್ದು, 19 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ತುರ್ತು ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಬಾರದು, ತಕ್ಷಣ ಮಾಹಿತಿ ನೀಡಬೇಕು ಎಂದು ಮೆಸ್ಕಾಂ ಅಧೀಕ್ಷಕರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಎಷ್ಟು ಮಳೆಯಾಗಿದೆ?: ಶುಕ್ರವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಸರಾಸರಿ 44.7 ಮಿ.ಮೀ. ಮಳೆಯಾಗಿದೆ. ಬಂಟ್ವಾಳ 77, ಬೆಳ್ತಂಗಡಿ 52, ಮಂಗಳೂರು 52.6, ಪುತ್ತೂರು 31, ಸುಳ್ಯದಲ್ಲಿ 11 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಉಡುಪಿ 55.2, ಕುಂದಾಪುರ 81.4, ಕಾರ್ಕಳ 38.1 ಮಿ.ಮೀ. (62.5 ಮಿ.ಮೀ. ಸರಾಸರಿ) ಮಳೆಯಾಗಿದೆ.

ಶುಕ್ರವಾರ ಮಧ್ಯಾಹ್ನ ಕರಾವಳಿಗೆ ಮುಂಗಾರು ಪ್ರವೇಶವಾಗಿದ್ದರೂ ದುರ್ಬಲವಾಗಿತ್ತು. ಒಂದೆರಡು ದಿನ ಮಳೆ ಕ್ಷೀಣಿಸಲಿದೆ. ಬಳಿಕ ಚುರುಕುಗೊಂಡು ಉತ್ತಮ ಮಳೆಯಾಗಲಿದೆ.
– ಸುನೀಲ್ ಗಾವಸ್ಕರ್, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ

ಮಲ್ಪೆ ಬೀಚ್‌ಗೆ ಬೃಹತ್ ಬೇಲಿ
ಕಡಲು ಪ್ರಕ್ಷುೃಬ್ದಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಲ್ಪೆ ಬೀಚ್‌ಗೆ 1 ಕಿ.ಮೀ. ಉದ್ದದ ಬೃಹತ್ ತಂತಿ ಬೇಲಿ ಅಳವಡಿಸಲಾಗಿದೆ. ಆಗಸ್ಟ್ ನಂತರ ಮಳೆ ಕಡಿಮೆಯಾಗಿ ಸಮುದ್ರ ಶಾಂತವಾಗುತ್ತದೆ, ಬಳಿಕ ಬೇಲಿ ತೆಗೆಯಲಾಗುವುದು. 7 ಅಡಿ ಎತ್ತರದ ತಂತಿ ಬೇಲಿ ಹಾಕಲಾಗಿದ್ದು, 40 ಡೇಂಜರ್, ನೋ ಎಂಟ್ರಿ ಎಂದು ಬರೆದಿರುವ ಕೆಂಪು ಬಾವುಟ ಹಾರಿಸಲಾಗಿದೆ. 6 ಹೋಂ ಗಾರ್ಡ್ಸ್, 8 ಲೈಫ್‌ಗಾರ್ಡ್ಸ್ ಸಿಬ್ಬಂದಿಯನ್ನು ಬೀಚ್ ಪರಿಸರದಲ್ಲಿ ನಿಯೋಜಿಸಲಾಗಿದೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಬಜೆ ಡ್ಯಾಂ 1.70 ಮೀ. ನೀರು
ಮಳೆ ಪರಿಣಾಮ ಬಜೆ ಡ್ಯಾಂನಲ್ಲಿ 1.70 ಮೀ. ನೀರು ಸಂಗ್ರಹವಾಗಿದೆ. ಆದರೆ ನದಿ ನೀರಿನ ಹರಿವು ಇನ್ನೂ ಆರಂಭವಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿ ಡ್ಯಾಂನತ್ತ ಬರುತ್ತಿದೆ. ನಗರಕ್ಕೆ ನೀರು ಪೂರೈಸಲು ನೀರಿನ ಸಂಗ್ರಹ ನೋಡಿಕೊಂಡು ಇಂತಿಷ್ಟು ಗಂಟೆ ಪಂಪಿಂಗ್ ಮಾಡಲಾಗುತ್ತಿದೆ. ನಿರಂತರ ಪಂಪಿಂಗ್‌ಗೆ ಡ್ಯಾಂನಲ್ಲಿ 3 ಮೀಟರ್‌ಗೂ ಅಧಿಕ ನೀರು ಸಂಗ್ರಹಗೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ತುಂಬೆ ಡ್ಯಾಂ 3.40 ಮೀ. ನೀರು
ತುಂಬೆಯಲ್ಲಿ ಸಿಡಿಲಿನಿಂದ ಹಾನಿಗೀಡಾಗಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಇನ್ನೂ ಕೆಲವು ದಿನ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯಲಿದೆ. ಒಂದು ಪರಿರ್ವರ್ತಕ ಇನ್ನೆರಡು ದಿನದಲ್ಲಿ ರಿಪೇರಿಯಾಗಲಿದ್ದು, ಇನ್ನೊಂದು ರಿಪೇರಿಗೆ ಸ್ವಲ್ಪ ಸಮಯ ಬೇಕಾಗಬಹುದು. ಅಲ್ಲಿಯವರೆಗೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ. ತುಂಬೆಯಲ್ಲಿ ಶುಕ್ರವಾರ ನೀರಿನ ಮಟ್ಟ 3.40 ಮೀ.ಗೆ ತಲುಪಿದೆ. ಮಳೆಯಾಗುತ್ತಿರುವುದರಿಂದ ನೀರಿಗೆ ಸಮಸ್ಯೆಯಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಐದು ಮನೆ ನೀರುಪಾಲು, 56 ಅಪಾಯದಲ್ಲಿ
ಉಳ್ಳಾಲ: ಕಡಲ್ಕೊರೆತದಿಂದ ಹಾನಿಗೀಡಾಗಿರುವ ಕೈಕೋ, ಕಿಲೇರಿಯಾ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶುಕ್ರವಾರ ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಸರ್ಕಾರದ ಲೆಕ್ಕಾಚಾರ ಪ್ರಕಾರ ಮೂರು ದಿನಗಳಲ್ಲಿ ಕಡಲ್ಕೊರೆತದಿಂದಾಗಿ ಉಳ್ಳಾಲದ ಕಿಲೇರಿಯಾ ನಗರದಲ್ಲಿ ಐದು ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಸಮ್ಮರ್ ಸ್ಯಾಂಡ್ ಬೀಚ್‌ಗೆ ಸೇರಿದ ಶೌಚಗೃಹ ಕಟ್ಟಡ ಸಮುದ್ರ ಪಾಲಾಗಿದೆ. ಕೈಕೋ, ಕಿಲೇರಿಯಾ ನಗರ, ಮೋಗವೀರಪಟ್ನ, ಸಿಗ್ರೌಂಡ್‌ನಲ್ಲಿ 49 ಮನೆಗಳು, ಎರಡು ಮಸೀದಿಗಳು, ಸೋಮೇಶ್ವರ ಉಚ್ಚಿಲದಲ್ಲಿ 7 ಮನೆಗಳು ಅಪಾಯಕ್ಕೆ ಸಿಲುಕಿವೆ. ಕಳೆದೆರಡು ವರ್ಷಗಳಿಂದ ಉಚ್ಚಿಲ ಮತ್ತು ಸೋಮೇಶ್ವರ ಸಮುದ್ರ ತಟದಲ್ಲಿ ಕಡಲ್ಕೊರೆತದಿಂದ ಅರೆಬರೆಯಾಗಿ ಉಳಿದಿದ್ದ ಮನೆಗಳು ಮತ್ತು ಮರಗಳು ಈ ವರ್ಷ ಸಮುದ್ರಪಾಲಾಗಿವೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಅಧಿಕಾರಿಗಳು, ಜನಪ್ರತಿನಿಧಿಗಳು ಜತೆಗಿದ್ದರು.

Leave a Reply

Your email address will not be published. Required fields are marked *