ಕರಾವಳಿ ಕಮಲ ಪಾಳಯದಲ್ಲಿ ಗೆಲುವಿನ ವಿಶ್ವಾಸ

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ಹಾಲಿ ಸಂಸದ, ಬಿಜೆಪಿಯ ನಳಿನ್‌ಕುಮಾರ್ ಕಟೀಲ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಭವಿಷ್ಯ ನಿರ್ಧರಿಸಿ ಒಂದು ತಿಂಗಳು ಕಳೆದಿದೆ. ಮೇ 23ರಂದು ತೀರ್ಪು ಹೊರಬೀಳಲಿದೆ.
ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಜಯ ಗಳಿಸುವ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕರಾವಳಿಯ ಕಮಲ ಪಡೆ ಗೆಲುವು ಗ್ಯಾರಂಟಿ ಎನ್ನುವ ಆತ್ಮವಿಶ್ವಾಸದಲ್ಲಿದೆ. ಕಾಂಗ್ರೆಸ್ ಪಾಳಯದಲ್ಲಿ ಜಯದ ನಿರೀಕ್ಷೆ ಕೊಂಚ ಕ್ಷೀಣವಾಗಿದೆ.

ರಾಜಕೀಯ ಭವಿಷ್ಯ: ಜನಾರ್ದನ ಪೂಜಾರಿ ಅವರಂತಹ ಪ್ರಬಲ ನಾಯಕರನ್ನು ಎರಡು ಬಾರಿ ಸೋಲಿಸಿರುವ ನಳಿನ್‌ಗೆ ಹ್ಯಾಟ್ರಿಕ್ ಗೆಲುವು ಅತ್ಯಂತ ಮಹತ್ವದ್ದು. ಅದಕ್ಕಿಂತಲೂ ಕರಾವಳಿಯಲ್ಲಿ ಗೆಲುವು ಸಾಧಿಸುವುದು ಆರ್‌ಎಸ್‌ಎಸ್‌ಗೆ ಪ್ರತಿಷ್ಠೆಯ ವಿಷಯ. ನಳಿನ್‌ಗೆ ಟಿಕೆಟ್ ನೀಡುವುದರ ಬಗ್ಗೆ ಕಾರ್ಯಕರ್ತರಿಂದ ಅಸಮಾಧಾನ ಇದ್ದರೂ, ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ವ್ಯವಸ್ಥಿತ ಪ್ರಚಾರ ಕಾರ್ಯ ಹಾಗೂ ಮೋದಿ ರ‌್ಯಾಲಿ ಮೂಲಕ ಮತ್ತೆ ಗೆಲುವಿನ ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಲೆಕ್ಕಾಚಾರ: 1991ರಿಂದ ಕಾಂಗ್ರೆಸ್‌ಗೆ ಮರೀಚಿಕೆಯಾಗಿರುವ ದ.ಕ (ಹಿಂದಿನ ಮಂಗಳೂರು) ಕ್ಷೇತ್ರದಲ್ಲಿ ಈ ಬಾರಿ ಯುವ ನಾಯಕ ಮಿಥುನ್ ರೈ ಅಭ್ಯರ್ಥಿಯಾದ ಕಾರಣ ಯುವಕರ ಮತ ಗರಿಷ್ಠ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಾಲಾಗಿದೆ. ಮೋದಿ ಅಲೆ ಎಷ್ಟೇ ಇದ್ದರೂ ಕಾಂಗ್ರೆಸ್ ಮತ ಒಡೆಯುವ ಸಾಧ್ಯತೆ ಇಲ್ಲ. ಅಲ್ಪಸಂಖ್ಯಾತರ ಮತ ಬ್ಯಾಂಕ್ ಗಟ್ಟಿಯಾಗಿದೆ. ಜೆಡಿಎಸ್, ಸಿಪಿಎಂ ಪರ ಮತಗಳು ಕೂಡ ಕಾಂಗ್ರೆಸ್‌ಗೆ ದೊರೆಯಲಿದೆ. ಬಿಜೆಪಿಯ ಒಳಗೆ ಅವರ ಅಭ್ಯರ್ಥಿಯನ್ನು ಸೋಲಿಸುವ ಸಂಚು ನಡೆದಿದೆ. ಹಾಗಾಗಿ ನಮ್ಮ ಸೋಲಲು ಸಾಧ್ಯವೇ ಇಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

ಬಿಜೆಪಿ ಲೆಕ್ಕಾಚಾರ: ಶೇ.77ರಷ್ಟು ಮತದಾನವಾಗಿದ್ದು, ಯುವ ಮತದಾರರು ಮೋದಿ ಪರ ಮತ ಚಲಾಯಿಸಿದ್ದಾರೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿರುವುದು ಈ ಚುನಾವಣೆಯಲ್ಲಿ ವರದಾನವಾಗಿದೆ. ಸುಳ್ಯ ಮತ್ತು ಪುತ್ತೂರಿನಲ್ಲಿ ಬಿಜೆಪಿ ಭರ್ಜರಿ ಲೀಡ್ ಸಾಧಿಸಲಿದೆ. ಹಾಗಾಗಿ ಗೆಲುವು ನಮ್ಮದೇ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಏಳು ಪಕ್ಷೇತರ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 13 ಮಂದಿ ಕಣದಲ್ಲಿದ್ದಾರೆ. ಎಸ್‌ಡಿಪಿಐ ಪಡೆಯುವ ಮತಗಳು ಫಲಿತಾಂಶ ಮೇಲೆ ಪರಿಣಾಮ ಬೀರಬಹುದೇ ಎನ್ನುವ ಕುತೂಹಲವೂ ಇದೆ.

ಫಲಿತಾಂಶದ ಬಗ್ಗೆ ಈಗ ಏನೂ ಹೇಳುವಂತಿಲ್ಲ. ಮಾ.23ರಂದು ಜನತೆಯ ಅಭಿಪ್ರಾಯ ಬಹಿರಂಗವಾಗುತ್ತದೆ. ಪಕ್ಷ ನನಗೆ ನೀಡಿದ ಅವಕಾಶವನ್ನು ಸ್ವೀಕರಿಸಿ ವ್ಯವಸ್ಥಿತ ಪ್ರಚಾರ ಕಾರ್ಯ ನಡೆಸಿದ್ದೇನೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ, ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಜಯಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಜನತೆ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಗೆಲುವಿನ ನಿರೀಕ್ಷೆ ಇದೆ.
ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ

ಎರಡು ಅವಧಿಗೆ ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ನಮಗೆ ವರದಾನವಾಗಿದೆ. ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಭಾರಿ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ.
ನಳಿನ್‌ಕುಮಾರ್ ಕಟೀಲ್, ಬಿಜೆಪಿ ಅಭ್ಯರ್ಥಿ

Leave a Reply

Your email address will not be published. Required fields are marked *