ಕೋಸ್ಟ್‌ಗಾರ್ಡ್ ಅಕಾಡೆಮಿ ಕುಡ್ಲಕ್ಕೆ

ಭರತ್ ಶೆಟ್ಟಿಗಾರ್ ಮಂಗಳೂರು

ಭಾರತೀಯ ತಟರಕ್ಷಣಾ ಪಡೆ ತರಬೇತಿ ಅಕಾಡೆಮಿಯನ್ನು (ಐಸಿಜಿಎ) ಮಂಗಳೂರಿನ ಬೈಕಂಪಾಡಿಯಲ್ಲಿ ಸ್ಥಾಪಿಸುವ ಬಗ್ಗೆ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಆಸಕ್ತಿ ವಹಿಸಿದ್ದು, ಶೀಘ್ರ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಗೋಚರಿಸಿವೆ.

ಕೇರಳದ ಕಣ್ಣೂರು ಜಿಲ್ಲೆಯ ಆಯಿಕಲ್ ಸಮೀಪದ ಇರಿನಾವು ಸಮುದ್ರ ತೀರದ ವಳಪಟ್ಟಣಂ ನದಿ ಬಳಿ ಸ್ಥಾಪನೆಯಾಗಬೇಕಿದ್ದ ತರಬೇತಿ ಅಕಾಡೆಮಿ ಈಗ ಕರ್ನಾಟಕ ಪಾಲಿಗೆ ಸಿಗಲಿದೆ. ಕೇಂದ್ರ ಸರ್ಕಾರದಲ್ಲಿ ಕಳೆದ ಅವಧಿಯ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಭಾರತೀಯ ತಟರಕ್ಷಣಾ ಪಡೆಯ ಮಹಾ ನಿರ್ದೇಶಕರ ಜತೆ 2017ರ ಡಿಸೆಂಬರ್ ತಿಂಗಳಲ್ಲಿ ಬೈಕಂಪಾಡಿಗೆ ಭೇಟಿ ನೀಡಿ, ಐಸಿಜಿಎ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಪ್ರದೇಶವನ್ನು ಪರೀಶೀಲಿಸಿದ್ದರು. ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ನೂತನ ಸಚಿವರನ್ನು ಭೇಟಿಯಾಗಿದ್ದರು. ಸಚಿವರು ಶೀಘ್ರ ಅಕಾಡೆಮಿ ಸ್ಥಾಪಿಸುವ ಭರವಸೆ ನೀಡಿದ್ದಾರೆ.

1,010 ಕೋಟಿ ರೂ.ವೆಚ್ಚ: ಐಸಿಜಿಎ ಸ್ಥಾಪನೆ 1,010 ಕೋಟಿ ರೂ.ವೆಚ್ಚದ ಯೋಜನೆ. ರಾಜ್ಯ ಸರ್ಕಾರ ಉನ್ನತ ಮಟ್ಟದ ಅನುಮೋದನಾ ಸಮಿತಿ 160 ಎಕರೆ ಜಾಗ ಮೀಸಲಿಟ್ಟಿದೆ. ಮಂಗಳೂರಿನ ಕರಾವಳಿಯಲ್ಲಿ ಅಕಾಡೆಮಿಗೆ ಪೂರಕ ಭೌಗೋಳಿಕ ಲಕ್ಷಣಗಳಿರುವ ಕಾರಣ, ಇದರಿಂದ ಹೆಚ್ಚಿನ ಲಾಭವಾಗಲಿದೆ. ಕೋಸ್ಟ್‌ಗಾರ್ಡ್‌ನ ಮೂರನೇ ಜಿಲ್ಲಾ ಪ್ರಧಾನ ಕಚೇರಿ ಕೂಡ ಪಣಂಬೂರಿನಲ್ಲಿರುವುದು, ಬಂದರು, ವಿಮಾನ ನಿಲ್ದಾಣವೂ ಹತ್ತಿರದಲ್ಲಿರುವುದು ಅಕಾಡೆಮಿ ಸ್ಥಾಪನೆಗೆ ಅನುಕೂಲ ಎಂಬ ಲೆಕ್ಕಾಚಾರಗಳಿವೆ.

ಕಣ್ಣೂರಿನಲ್ಲಿಲ್ಲ ಪೂರಕ ವಾತಾವರಣ
ಕಣ್ಣೂರಿನ ವಳಪಟ್ಟಣಂ ನದಿ ಬಳಿ ಐಸಿಜಿಎ ಸ್ಥಾಪನೆಗೆ 2011ರ ಮೇ 28ರಂದು ಆಗಿನ ರಕ್ಷಣಾ ಸಚಿವ ಎ.ಕೆ.ಆಂಟನಿ ಶಿಲಾನ್ಯಾಸ ನೆರವೇರಿಸಿದ್ದರು. ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಅಕಾಡೆಮಿ ಕಟ್ಟಡ ಹಲವು ವರ್ಷ ಕಳೆದರೂ ಪ್ರಗತಿ ಕಂಡಿರಲಿಲ್ಲ. ಆವರಣ ಗೋಡೆ ನಿರ್ಮಿಸಿ, ಬೋರ್ಡ್ ಅಳವಡಿಸಿರುವುದು ಹೊರತುಪಡಿಸಿದರೆ, ಬೇರಾವ ಕೆಲಸವೂ ನಡೆದಿಲ್ಲ. ಕೇರಳ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ವಳಪಟ್ಟಣಂ ನದಿ ಕಿನಾರೆ ಉಷ್ಣ ವಲಯದ ಪೊದೆ (ಮ್ಯಾಂಗ್ರೋವ್) ಇರುವ ಪ್ರದೇಶ. ಅಲ್ಲಿ ಯಾವುದೇ ಯೋಜನೆ ಆರಂಭಿಸಲು ಅವಕಾಶವಿಲ್ಲ ಎಂದು ಹೇಳಿರುವುದರಿಂದ ಅಕಾಡೆಮಿ ಸ್ಥಾಪನೆಗೆ ಹಿನ್ನೆಡೆಯಾಯಿತು. ಆದ್ದರಿಂದ ಕೇಂದ್ರ ರಕ್ಷಣಾ ಸಚಿವಾಲಯ ಅದನ್ನು ಮಂಗಳೂರಿಗೆ ಸ್ಥಳಾಂತರಿಸಲು ತೀರ್ಮಾನಿಸಿ, ಮುಂದಿನ ಪ್ರಕ್ರಿಯೆ ನಡೆಸುತ್ತಿದೆ.

ಕೇರಳದಲ್ಲಿ 65.56 ಕೋಟಿ ರೂ. ಖರ್ಚು
ಅಕಾಡೆಮಿ ಸ್ಥಾಪನೆ ನಿಟ್ಟಿನಲ್ಲಿ ಕೋಸ್ಟ್‌ಗಾರ್ಡ್‌ಗೆ ನೀಡಲಾಗಿರುವ 160 ಎಕರೆ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಇದುವರೆಗೆ 65.56 ಕೋಟಿ ರೂ.ವಿನಿಯೋಗಿಸಲಾಗಿದೆ. 27.77 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಆವರಣ ಗೋಡೆ, 8.80 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಸಂಪರ್ಕ, 6.70 ಕೋಟಿ ರೂ.ನೀರು ಸಂಪರ್ಕಕ್ಕಾಗಿ ಖರ್ಚು ಮಾಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂಬುದು ಕೇರಳ ಸರ್ಕಾರ ರಕ್ಷಣಾ ಸಚಿವಾಲಯವನ್ನು ಆಗ್ರಹಿಸಿದೆ.

ಕೋಸ್ಟ್‌ಗಾರ್ಡ್ ತರಬೇತಿ ಅಕಾಡೆಮಿ ಮಂಗಳೂರಿನಲ್ಲಿ ಆರಂಭಿಸುವ ಕುರಿತು ರಕ್ಷಣಾ ಸಚಿವರಿಂದ ಪೂರಕ ಪ್ರತಿಕ್ರಿಯೆ ಸಿಕ್ಕಿದೆ. ಕರಾವಳಿಯ ವಿಶೇಷ ಭೌಗೋಳಿಕ ಲಕ್ಷಣಗಳಿಗಾಗಿ ಮಂಗಳೂರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರ ಅಕಾಡೆಮಿ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಗಿದೆ.
– ನಳಿನ್ ಕುಮಾರ್ ಕಟೀಲ್, ದ.ಕ. ಸಂಸದ

Leave a Reply

Your email address will not be published. Required fields are marked *