ಕಲಾಸಿಪಾಳ್ಯದಂತಾಗಿದೆ ಸಮ್ಮಿಶ್ರ ಸರ್ಕಾರ: ಕೆ.ಎಸ್​.ಈಶ್ವರಪ್ಪ

ಬಾಗಲಕೋಟೆ: ಸಿದ್ದರಾಮಯ್ಯವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಅವರಂತೆ ಕುಡಕರೂ ಮಾತನಾಡುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಯಡಿಯೂರಪ್ಪನವರಿಗೆ ವಯಸ್ಸಾಗಿ, ಬುದ್ಧಿ ಇಲ್ಲ ಎಂದು ಟೀಕಿಸಿದ್ದ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ವಯಸ್ಸಾಗಲ್ವ? ಅವರಿಗೇನು ಹೊಸದಾಗಿ ಹೆಣ್ಣು ಕೊಡುತ್ತಾರಾ? ಮಾತನಾಡುವಾಗ ನಾಲಿಗೆ ಬಿಗಿಹಿಡಿದು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ಕಲಾಸಿಪಾಳ್ಯದಂತಾಗಿದೆ. ಶಾಸಕ, ಶಾಸಕರೇ ಕೊಲೆಗಡುಕರಾಗ್ತಿದ್ದಾರೆ. ಅವರನ್ನೆಲ್ಲ ಸರ್ಕಾರ ರಕ್ಷಣೆ ಮಾಡುತ್ತಿದೆ. ಆನಂದ್​ ಸಿಂಗ್​ ಮೇಲೆ ಓರ್ವ ಶಾಸಕ ಹಲ್ಲೆ ಮಾಡಿದ. ಓಡಿಹೋದವನನ್ನು ಇನ್ನೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್​ನವರು ಒಂದು ರೀತಿ ಮಕ್ಕಳ ಕಳ್ಳರು ಇದ್ದಹಾಗೆ. ಹಾಗಾಗಿಯೇ ನಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್​ಗೆ ಹೋಗಿದ್ದೆವು. ಬಿಜೆಪಿ ಶಾಸಕರು ಹುಲಿಗಳಿದ್ದಂತೆ. ನಾವು ಮೊದಲು 104 ಜನರಿದ್ದೆವು. ಪಕ್ಷೇತರರು ಸೇರಿ 106 ಮಂದಿ ಆಗಿದ್ದೇವೆ. ನಾವು ಆಪರೇಶನ್​ ಕಮಲ ಮಾಡೋದಿಲ್ಲ ಎಂದರು.