ಬೆಳಗಾವಿ ಮೇಲಾಟ ಸರ್ಕಾರ ಓಲಾಟ

ಬೆಂಗಳೂರು: ಸರ್ಕಾರ ಪತನವಾಗುತ್ತದೆ ಎಂಬ ಊಹಾಪೋಹದ ಬೆಳವಣಿಗೆ ಕಳೆದ 48 ಗಂಟೆಗಳಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಂಪಿಸಿದ ಅನುಭವವಾಗಿದೆ.

ಸರ್ಕಾರ ಬಿದ್ದುಹೋಗುತ್ತದೆ ಎಂಬ ವಾದಗಳಿಗೆ ಆದಿಯೂ ಕಾಣಿಸಿಲ್ಲ, ಅಂತ್ಯ ಮುಟ್ಟುವ ಲಕ್ಷಣಗಳಿಲ್ಲ. ಈ ಸಂದರ್ಭಕ್ಕೆ ಕಾಕತಾಳಿಯವೆಂಬಂತೆ ನಡೆದ ಬೆಳವಣಿಗೆಗಳು ಮಾತ್ರ ಮೂರೂ ರಾಜಕೀಯ ಪಕ್ಷದ ನಾಯಕರಲ್ಲಿ ತಳಮಳ ಹುಟ್ಟುಹಾಕಿದ್ದು ಮಾತ್ರ ಸುಳ್ಳಲ್ಲ. ಸರ್ಕಾರಕ್ಕೆ ಬೆಂಬಲವಾಗಿ ನಿಂತ ಶಾಸಕರ ಪೈಕಿ 11 ಮಂದಿ ಎಲೆಗಳಂತೆ ಉದುರಿಹೋಗುತ್ತಾರೆಂಬ ಗಾಳಿಸುದ್ದಿಗೆ ಪೂರಕವಾಗಿ ಕಳೆದೆರಡು ದಿನಗಳಲ್ಲಿ ಅನೇಕ ಘಟನೆಗಳು ನಡೆದಿವೆ. ಹಾಗೆಯೇ ಪರ್ಯಾಯ ಸರ್ಕಾರ ರಚನೆಗೆ ಪ್ರಯತ್ನ ನಡೆಯುತ್ತಿದೆ ಎಂಬ ವಾದಕ್ಕೆ ಪೂರಕವಾಗಿಯೂ ಸಭೆಗಳು ನಡೆದಿವೆ. ಇಡೀ ಅನಿಶ್ಚಿತತೆಗೆ ಮೂಲ ಕಾರಣಿಕರ್ತರಾದ ಬೆಳಗಾವಿ ಬ್ರದರ್ಸ್ ನಡವಳಿಕೆ ಮತ್ತು ಅವರ ಮಾತುಗಳು ರಾಜಕೀಯ ವಾತಾವರಣದ ಮೇಲೆ ಗಾಢ ಪರಿಣಾಮ ಬೀರಿದ್ದು, ಕಾಂಗ್ರೆಸ್ ಒಳಗೆ ಹೊಂದಾಣಿಕೆ ಕೊರತೆ ಎದ್ದು ಕಾಣಿಸಿದೆ.

ಊಹಾಪೋಹಗಳ ಸರಣಿ

  • ಸುದ್ದಿ 1: ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿರುವ ಕೆಲವು ಶಾಸಕರು ಹೈದರಾಬಾದ್ ರೆಸಾರ್ಟ್​ನತ್ತ ಪ್ರಯಾಣ, 20 ಕೊಠಡಿ ಬುಕಿಂಗ್.
  • ಸುದ್ದಿ 2: ಬಿಜೆಪಿ ಸಂದೇಶಗಳು ಶ್ರೀರಾಮುಲು ಮೂಲಕ ರಮೇಶ್ ಜಾರಕಿಹೊಳಿ ತಲುಪಿದ್ದು, ಬಿಜೆಪಿ ಬೆಂಬಲಿಸಿದರೆ ಸತೀಶ್​ಗೆ ಡಿಸಿಎಂ ಪಟ್ಟ.
  • ಸುದ್ದಿ 3: ಯಾವುದೇ ಸಂದರ್ಭಕ್ಕೆ ಸಜ್ಜಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಂದ ಪಕ್ಷದ ಪ್ರಮುಖ ನಾಯಕರಿಗೆ ಸೂಚನೆ.
  • ಸುದ್ದಿ 4: ಬಿಜೆಪಿ ಐದು ಶಾಸಕರೊಂದಿಗೆ ಸಿಎಂ ಕುಮಾರಸ್ವಾಮಿ ಬುಧವಾರ ಗೌಪ್ಯ ಸಭೆ ನಡೆಸುವರು. ಸರ್ಕಾರಕ್ಕೆ ಆಪತ್ತಾದರೆ ನೆರವು ಕೋರಿಕೆ.
  • ಸುದ್ದಿ 5: ಸಿದ್ದರಾಮಯ್ಯ ಆಗಮನ ಹಾಗೂ ಗಣಪತಿ ಹಬ್ಬದ ಬಳಿಕ ನಿರ್ಣಾಯಕ ತೀರ್ಮಾನ ಮಾಡಲಿರುವ ಜಾರಕಿಹೊಳಿ ಸಹೋದರರು.

ಆನಂದ್ ಸಿಂಗ್ ಕಾರ್ಯಕ್ರಮದಲ್ಲಿ ರಾಜೀನಾಮೆ ಕೊಡುವ ಬಗ್ಗೆ ನೋವಿನಿಂದ ಹೇಳಿದ್ದು ನಿಜ. ಯಾರನ್ನು ಬಳ್ಳಾರಿಯಿಂದ ಮಂತ್ರಿ ಮಾಡುತ್ತಾರೆ ಎಂದು ಕಾದು ನೋಡ್ತೇವೆ.

| ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ

ಸರ್ಕಾರ ಹೋಗಿಯೇ ಬಿಡ್ತು ಎಂದು ಮಾಧ್ಯಮಗಳು ಹೇಳುತ್ತಿರá-ವುದನ್ನು ನೋಡುತ್ತಿದ್ದೇನೆ. ಅವರಿಗೆ ಯಾರು ಮಾಹಿತಿ ಕೊಡುತ್ತಾರೋ ಗೊತ್ತಿಲ್ಲ. ಹೈದರಾಬಾದ್​ನಲ್ಲಿ 10 ಜನರ ಟೀಂ, ಇಲ್ಲೆಲ್ಲೋ 10 ಜನರ ಟೀಂ ಅಂತೀರಿ. ಆದರೆ, ಮಾಧ್ಯಮಗಳ ಉದ್ದೇಶ ಏನು ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.

| ಎಚ್.ಡಿ.ಕುಮಾರಸ್ವಾಮಿ ಸಿಎಂ

ಜಾರಕಿಹೊಳಿ ಸಹೋದರರು ಪಕ್ಷದ ನಿಷ್ಠಾವಂತ ಶಾಸಕರು. ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದೆ ಎಂದೆನಿಸಿದಾಗ ಸಿಡಿದೇಳುತ್ತಾರೆ. ಇದು ಅವರ ಸ್ವಭಾವ. ಹಾಗಂತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂಥ ಕೆಲಸ ಮಾಡಲ್ಲ. ಸಮಸ್ಯೆ ಆದರೆ ನಾನೇ ಮಧ್ಯೆ ಪ್ರವೇಶಿಸುವೆ.

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಂಸದೀಯ ನಾಯಕ

ಮಾತುಕತೆ ಭಾರತ-ಪಾಕಿಸ್ತಾನ ಮಧ್ಯೆಯೂ ನಡೆಯುತ್ತದೆ. ಅಂತಹದ್ದರಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸ ಬಾರದಾ? ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತು ಕೊಳ್ಳುವ ಮೂರ್ಖರು ನಾವಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

| ಸಿ.ಟಿ.ರವಿ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಜೆಡಿಎಸ್ ಪಡೆ ಗಲಿಬಿಲಿ

ತನ್ನೊಳಗಿನ ಗೊಂದಲ ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಹೆಣಗಾಟ ನಡೆಸಿರುವಾಗ, ಬಿಜೆಪಿ ಸಭೆ ನಡೆಸಿ ಅವಕಾಶವನ್ನು ಎದುರು ನೋಡುತ್ತಿತ್ತು. ಇನ್ನೊಂದು ಕಡೆ ಸರ್ಕಾರದ ಭಾಗಿದಾರ ಪಕ್ಷ ಜೆಡಿಎಸ್​ನಲ್ಲಿ ತಳಮಳ ಉಂಟಾಗಿದ್ದು, ಖುದ್ದು ಸಿಎಂ ಕುಮಾರಸ್ವಾಮಿ ಅಭಿಪ್ರಾಯ ನೀಡಿ ‘ಸರ್ಕಾರ ಪತನಕ್ಕೆ ಪೂರಕವಾಗಿ ಏನೋ ನಡೆಯುತ್ತಿದೆ’ ಎಂಬುದನ್ನು ಪುಷ್ಟೀಕರಿಸಿದರು. ‘ನಾಡಿನ ಸಮಸ್ಯೆಗಿಂತ ಹೆಚ್ಚಾಗಿ ಸರ್ಕಾರ ಅತಂತ್ರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಇದು ಬಿಜೆಪಿ ನಾಯಕರ ಸಣ್ಣತನ ತೋರಿಸುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂಬುದಕ್ಕಷ್ಟೇ ಸಿಎಂ ಮಾತು ಸೀಮಿತವಾಗದೆ, ‘ಸ್ವಲ್ಪದಿನ ಕಾದುನೋಡೋಣ, ಬೇರೆ ರೀತಿ ಯುಟರ್ನ್ ತೆಗೆದುಕೊಳ್ಳಬೇಕು. ಅಂದರೆ, ಬಿಜೆಪಿಯ ಐವರು ಶಾಸಕರಿಂದ ನಾವು ರಾಜೀನಾಮೆ ಕೊಡಿಸೋಣ. ಜಾರಕಿಹೊಳಿ ಸಹೋದರರ ಅಸಮಾಧಾನದ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ಗುಟುರು ಹಾಕಿದ್ದಾರೆ.

ಗುಂಪಲ್ಲಿ ಅನುಮಾನಿತರು

ಸಮ್ಮಿಶ್ರ ಸರ್ಕಾರ ರಚನೆಗೆ ಮುನ್ನ ಬಿಜೆಪಿ ಸಂಪರ್ಕಕ್ಕೆ ಹೋಗಿಬಂದ ಕೈ ಶಾಸಕರೆಲ್ಲ ಈಗ ಒಟ್ಟಿಗಿರುವುದು ಕಾಂಗ್ರೆಸ್​ಗೆ ನುಂಗ ಲಾರದ ತುತ್ತಾಗಿ ಪರಿಣಮಿಸಿದೆ. ಶಾಸಕರಾದ ಪ್ರತಾಪ್ ಗೌಡ, ನಾಗೇಂದ್ರ, ತುಕಾರಾಂ, ಆನಂದ್ ಸಿಂಗ್ ಮತ್ತಿತರ 7 ಶಾಸಕರು ಸಂಪರ್ಕದಲ್ಲಿದ್ದಾರೆ. ಮಂಗಳವಾರ ಇವರಲ್ಲಿ ಬಹುತೇಕರು ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಕಾಣಿಸಿಕೊಂಡರು ಮತ್ತು ಅವರೆಲ್ಲರೂ ಯಾವುದೇ ಕ್ಷಣದಲ್ಲಿ ಹೈದರಾ ಬಾದ್​ಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡಿತು.

ದ್ವಂದ್ವ ಹೇಳಿಕೆ

ಜಾರಕಿಹೊಳಿ ಸಹೋದರರು ಕೆಲವು ಶಾಸಕರೊಂದಿಗೆ ಬಿಜೆಪಿ ಸೇರುತ್ತಾ ರೆಂಬ ಮಾತು ಬಲಗೊಳ್ಳುತ್ತಿದ್ದಂತೆ ಸತೀಶ್ ಜಾರಕಿಹೊಳಿ ಹೇಳಿಕೆ ಇಡೀ ಘಟನೆಗೆ ತಿರುವು ನೀಡಿತು. ‘ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಸತೀಶ್ ಪಕ್ಷದ ಮುಖಂಡರ ಬಳಿ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಪ್ರವಾಸದಿಂದ ಬಂದ ಬಳಿಕ ತೀರ್ಮಾನ ಎಂದು ಆತ್ಮೀಯರ ಬಳಿ ಹೇಳಿಕೊಂಡ ವಿಚಾರ ಇನ್ನೂ ಗೊಂದಲವನ್ನು ಹಾಗೇ ಉಳಿಸಿದೆ.

ಸಿದ್ದು ಊರುಬಿಟ್ಟಾಗೆಲ್ಲ ಸರ್ಕಾರಕ್ಕೆ ಗುದ್ದು!

ಮೂರೂ ಪಕ್ಷಗಳನ್ನು ತಳಮಳಕ್ಕೆ ತಳ್ಳಿರುವ ಜಾರಕಿಹೊಳಿ ಸಹೋದರರು ಯಾವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂಬ ಸಂಗತಿ ಗೌಪ್ಯವಾಗಿದೆ. ಆದರೆ, ಇಡೀ ಬೆಳವಣಿಗೆ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೆರಳು ಕಾಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರೇ ಅನುಮಾನ ವ್ಯಕ್ತಪಡಿಸುತ್ತಾರೆ.

ಸಿದ್ದರಾಮಯ್ಯ ಪೂರ್ವನಿಯೋಜಿತ ಕಾರ್ಯಕ್ರಮದ ಮೇಲೆ ಬೆಂಗಳೂರಿನಿಂದ ಹೊರಗಿದ್ದಾಗಲೇ ಸರ್ಕಾರದಲ್ಲಿ ಅನಿಶ್ಚಿತತೆ ಸೃಷ್ಟಿಯಾಗುತ್ತದೆ ಎಂಬ ವಾದಕ್ಕೆ ಪುಷ್ಟಿ ನೀಡುವಂತೆ ಬೆಳವಣಿಗೆಗಳೂ ನಡೆದಿವೆ. ಸರ್ಕಾರ ರಚನೆಗೊಂಡ ಆರಂಭದಿಂದಲೂ ಸಿಎಂಗೆ ಪತ್ರ ಬರೆದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಸುದ್ದಿಯಾಗುತ್ತಿರುವ ಸಿದ್ದ ರಾಮಯ್ಯ ಅವರ ಛಾಯೆ ಮೂರೂ ಘಟನೆಗಳ ಹಿಂದೆ ಪ್ರಮುಖವಾಗಿ ಎದ್ದು ಕಾಣಿಸುತ್ತದೆ.

ಎಂ.ಬಿ.ಪಾಟೀಲ್ ಸಚಿವ ಸ್ಥಾನಕ್ಕಾಗಿ ರಾದ್ಧಾಂತ ಮಾಡಿಕೊಂಡಾಗ ಸಿದ್ದರಾಮಯ್ಯ ಬಾದಾಮಿ ಪ್ರವಾಸದಲ್ಲಿದ್ದರು. ಅಂದು ಇಡೀ ಬೆಳವಣಿಗೆ ಮಾಹಿತಿ ತರಿಸಿಕೊಂಡು ಪಾಟೀಲ್​ಗೆ ಮಾರ್ಗದರ್ಶನ ಮಾಡುತ್ತಲೇ ಇದ್ದರು ಎಂಬುದು ಗೌಪ್ಯವಾಗುಳಿದ ವಿಚಾರವೇನಲ್ಲ.

ವಿಶ್ರಾಂತಿ, ಚಿಕಿತ್ಸೆ ನೆಪದಲ್ಲಿ ಧರ್ಮಸ್ಥಳ ಶಾಂತಿವನಕ್ಕೆ ಸಿದ್ದರಾಮಯ್ಯ ತೆರಳಿದಾಗ ಅಲ್ಲಿ ಮಾತನಾಡಿದ ‘ಲೋಕಸಭಾ ಚುನಾವಣೆವರೆಗಷ್ಟೇ ಮೈತ್ರಿ’ ವಿಡಿಯೋ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಕಾಂಗ್ರೆಸ್ ಅನೇಕ ಶಾಸಕರು ಬೆಂಗಳೂರಿಂದ ಶಾಂತಿವನಕ್ಕೆ ತೆರಳಿ ಅವರನ್ನು ಭೇಟಿ ಮಾಡಿ, ಶಕ್ತಿ ಪ್ರದರ್ಶನವೆಂಬಂತೆ ಇಡೀ ಘಟನೆಯನ್ನು ರಾಜ್ಯದ ಜನರಿಗೆ ಪರಿಚಯ ಮಾಡಿಕೊಡಲಾಗಿತ್ತು.

ಇದೀಗ ವಿದೇಶ ಪ್ರವಾಸಕ್ಕೆ ಹೊರಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರೊಬ್ಬರು, ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಬಹುದೆಂಬ ಹಾಸ್ಯಭರಿತ ಭವಿಷ್ಯ ನುಡಿದಿದ್ದರು. ಕಾಕತಾಳೀಯವೆಂಬಂತೆ ಲಕ್ಷ್ಮೀ ಹೆಬ್ಬಾಳ್ಕರ್ ನೆಪದಲ್ಲಿ ಜಾರಕಿಹೊಳಿ ಸಹೋದರರು ಮುನ್ನೆಲೆಗೆ ಬಂದಿದ್ದಾರೆ. ವಿಶೇಷವೆಂದರೆ, ಜಾರಕಿಹೊಳಿ ಸಹೋದರರು ಸಿದ್ದರಾಮಯ್ಯ ಅತ್ಯಾಪ್ತರು. ಸಿದ್ದರಾಮಯ್ಯ ಅಣತಿ ಇಲ್ಲದೇ ಇವರಿಬ್ಬರು ಯಾವುದೇ ನಿರ್ಧಾರ ತೆಗೆದುಕೊಳ್ಳರು ಎಂಬುದೂ ನಿಕ್ಕಿ. ಹೀಗಾಗಿ ಈಗ ನಡೆಯುತ್ತಿರುವ ಬೆಳವಣಿಗೆ ಹಿಂದೆಯೂ ಸಿದ್ದರಾಮಯ್ಯ ಇದ್ದೇ ಇದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ.

ಸಿದ್ದುಗೇಕೆ ಉಸಾಬರಿ?

ಮತ್ತೆ ಸಿಎಂ ಆಗುವ ಅಭಿಲಾಷೆ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ತಮ್ಮ ಬಳಿ ಪ್ರಭಾವ ಇರಬೇಕೆಂಬ ಕಾರಣಕ್ಕಾಗಿಯೇ ಈ ರೀತಿ ಚಟುವಟಿಕೆ ನಡೆಸುತ್ತಿದ್ದಾರೆಂಬ ಮಾತಿದೆ. ಜಾರಕಿಹೊಳಿ ಸಹೋದರರಿಗೆ ಸರ್ಕಾರದಲ್ಲಿ ಹೆಚ್ಚು ಅವಕಾಶ ಸಿಗಬೇಕು. ಅವರ ಜತೆಗಿರುವ ಶಾಸಕರಿಗೆ ಹೆಚ್ಚು ಮಂತ್ರಿ ಸ್ಥಾನ ಕೊಡಿಸುವ ಮೂಲಕ ಶಕ್ತಿ ಕುಂದದಂತೆ ನೋಡಿಕೊಳ್ಳಲು ಈ ತಂತ್ರ ಹೆಣೆದಿದ್ದಾರೆಂದು ಹೇಳಲಾಗುತ್ತಿದೆ.

ಮೈತ್ರಿಗೆ ತಲೆಬೇನೆ ತಂದ ನಾಮನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಗೊಂದಲದಲ್ಲಿ ಮುಳುಗಿರುವ ಮಿತ್ರ ಪಕ್ಷಗಳಲ್ಲಿ ಇದೀಗ ಹೊಸ ತಲೆ ನೋವು ಉಂಟಾಗಿದೆ. ವಿಧಾನಪರಿಷತ್​ನ ಮೂರು ನಾಮನಿರ್ದೇಶನ ಹಾಗೂ ವಿಧಾನಸಭೆಯ ಆಂಗ್ಲೋ ಇಂಡಿಯನ್ ಸ್ಥಾನಕ್ಕೆ ನೇಮಕ ವಿಚಾರದಲ್ಲಿ ಹೊಸ ವಿವಾದ ಉಂಟಾಗಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸದಿರುವುದೇ ಸಮಸ್ಯೆಯ ಮೂಲವಾಗಿದೆ.

ಒಟ್ಟು ನಾಲ್ಕು ಸ್ಥಾನಗಳಲ್ಲಿ ತಲಾ ಎರಡರಂತೆ ಹಂಚಿಕೆ ಮಾಡಿಕೊಳ್ಳಬೇಕು ಎಂಬುದು ಜೆಡಿಎಸ್ ವಾದವಾದರೆ, ಅದನ್ನು ಒಪ್ಪಲು ಕಾಂಗ್ರೆಸ್ ಸಿದ್ಧವಿಲ್ಲ. ಮೂರು ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆಯನ್ನಿಟ್ಟಿದೆ. ಪರಿಷತ್ ನಾಮ ನಿರ್ದೇಶನದಲ್ಲಿ ಎರಡು ಹಾಗೂ ವಿಧಾನಸಭೆಯ ಆಂಗ್ಲೋ ಇಂಡಿಯನ್ ಸ್ಥಾನವೂ ಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಈ ಹಿಂದೆ ನಡೆದಿರುವ ಸಮನ್ವಯ ಸಮಿತಿ ಸಭೆಗಳಲ್ಲಿ ಈ ವಿಚಾರ ಚರ್ಚೆಗೆ ಒಳಪಟ್ಟಿಲ್ಲ. ಬಹುತೇಕ ಮುಂದಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಪರಿಷತ್​ನ 3 ನಾಮ ನಿರ್ದೇಶನಗಳ ಹೊಣೆಯನ್ನು ಸಂಪುಟ ಸಭೆಯಲ್ಲಿ ಸಿಎಂಗೆ ನೀಡಲಾಗಿತ್ತು. ಎರಡು ಪಕ್ಷಗಳು ಚರ್ಚೆ ನಡೆಸಿ ಅಂತಿಮಗೊಳಿಸಬೇಕಾಗಿದೆ. ಎರಡು ಪಕ್ಷದಲ್ಲಿ ನಾಮ ನಿರ್ದೇಶನಕ್ಕಾಗಿ ಸಾಕಷ್ಟು ಮಂದಿ ಮುಖಂಡರ ಮೇಲೆ ಒತ್ತಡ ತರುತ್ತಿದ್ದಾರೆ. ಆಂಗ್ಲೋ ಇಂಡಿಯನ್ ಕೋಟಾದಲ್ಲಿ ನಾಮ ನಿರ್ದೇಶಿತರಾಗಲು ಕಾಂಗ್ರೆಸ್​ನಲ್ಲಿ ಮಾಜಿ ಶಾಸಕರಾದ ಐವಾನ್ ಇಗ್ಲಿ, ವಿನಿಶಾ ನಿರೋ ಮತ್ತೆ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಸಹ ಕೆಲ ಹೆಸರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಒಂದು ಸ್ಥಾನ ‘ಕೈ’ಲಿ: ಸೆಪ್ಟ್ಟೆಂಬರ್ ಮೂರನೇ ವಾರ ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿದ್ದು, ಕಾಂಗ್ರೆಸ್ ಆರು ಸ್ಥಾನಗಳ ಪೈಕಿ ಒಂದನ್ನು ಖಾಲಿ ಉಳಿಸಿಕೊಳ್ಳುವ ಬಗ್ಗೆಯೂ ಚಿಂತಿಸಿದೆ. ಐದು ಸ್ಥಾನಗಳಿಗೆ ತುಕಾರಾಂ, ಎಂ.ಬಿ.ಪಾಟೀಲ್, ಸಿ.ಎಸ್.ಶಿವಳ್ಳಿ, ಬಿ.ಕೆ.ಸಂಗಮೇಶ್, ರಾಮಲಿಂಗಾರೆಡ್ಡಿ ಅಥವಾ ಎಂ.ಕೃಷ್ಣಪ್ಪ ಸಂಪುಟ ಸೇರುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆ ನಂತರ ಮತ್ತಷ್ಟು ಗೊಂದಲಗಳಿಗೆ ಅವಕಾಶ ಆಗುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದಲೇ ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ನಿಗಮ-ಮಂಡಳಿಗಳ ನೇಮಕಕ್ಕೂ ಪಟ್ಟಿ ಸಿದ್ಧವಾಗಿದೆ. ಕಾಂಗ್ರೆಸ್​ನ 20 ಶಾಸಕರಿಗೆ ನಿಗಮಗಳಲ್ಲಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಅವಕಾಶ ನೀಡಲಾಗುತ್ತದೆ. ಆದರೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಕೆಲ ಹಿರಿಯ ಶಾಸಕರು ನಿಗಮಗಳ ಅಧ್ಯಕ್ಷ ಸ್ಥಾನಕ್ಕೆ ಒಪು್ಪವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯ ವಾಪಸ್ ಬಂದ ಕೂಡಲೇ ಅವರೊಂದಿಗೆ ಮುಖಂಡರು ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ. ಆನಂತರ ದೆಹಲಿಗೆ ತೆರಳಿ ರಾಹುಲ್ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಲಿದ್ದಾರೆ.

ಬೆಳಗಾವಿ ನಮ್ದೇ ಆಗಿರ್ಬೇಕು!

ಬೆಂಗಳೂರು: ಆಗಿದ್ದು ಆಗಿ ಹೋಗಿದೆ, ಮುಂದೆ ಯಾವುದೇ ತೀರ್ಮಾನ ನಮ್ಮದೇ ಆಗಬೇಕು. ನಮ್ಮನ್ನು ಪರಿಗಣಿಸದೆ ಇದ್ದರೆ ನಮ್ಮ ತೀರ್ಮಾನ ನಮ್ಮದು ಎಂದು ಬಿರುಸು ದನಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಮಂಗಳವಾರ ಡಿಸಿಎಂ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಸ್ಪಷಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭಿಪ್ರಾಯವನ್ನೇ ಪರಿಗಣಿಸಬೇಕು, ಪಕ್ಷದ ಇತರ ನಾಯಕರು ಮೂಗು ತೂರಿಸುವುದು ಸರಿಯಲ್ಲ. ಸಂಪುಟ ವಿಸ್ತರಣೆಯಲ್ಲಿ ನಮ್ಮ ಕಡೆಯವರಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಲಕ್ಷ್ಮೀ ಹೆಬ್ಬಾಳ್ಕರ್​ಗೆ ನೀಡುವ ಆದ್ಯತೆ ಕಡಿಮೆ ಮಾಡಿ, ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ನೀಡಬಾರದು ಮತ್ತು ತಿದ್ದಿಕೊಂಡು ಹೋಗಲು ಬುದ್ಧಿ ಹೇಳಬೇಕೆಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಬ್ಬರು ನಾಯಕರು, ನಿಮ್ಮ ಬೇಡಿಕೆಗಳು ನ್ಯಾಯಬದ್ಧವಾಗಿದೆ, ವರಿಷ್ಠರ ಗಮನಕ್ಕೂ ತರಲಾಗುತ್ತದೆ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಹೇಳಿ ಕಳಿಸಿದ್ದಾರೆಂದು ತಿಳಿದುಬಂದಿದೆ.

ಸಹೋದರರಿಗೆ ಲಕ್ಷ್ಮೀ ಭಯ: ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಹಿಡಿತ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅದನ್ನು ಮರು ಸ್ಥಾಪಿಸುವ ಉದ್ದೇಶದಿಂದ ಪಕ್ಷದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆದ್ಯತೆ ಸಿಕ್ಕಷ್ಟು ಜಿಲ್ಲೆಯಲ್ಲಿ ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಯಾಗುತ್ತದೆ, ಜತೆಗೆ ರಾಜ್ಯಮಟ್ಟದಲ್ಲಿ ಲಕ್ಷ್ಮೀ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತವೆ. ಮುಂದೊಂದು ದಿನ ಇಡೀ ಜಿಲ್ಲೆ ಮೇಲಿನ ಹಿಡಿತ ಕೈ ತಪ್ಪಲಿದೆ ಎಂಬ ಆತಂಕದಲ್ಲಿ ಈ ರೀತಿ ತಂತ್ರ ಹೂಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.