ಬೆಳೆ ಸಾಲಮನ್ನಾ ರೂಪುರೇಷೆಗೆ ಉಪಸಮಿತಿ

ಬೆಂಗಳೂರು: ರಾಜ್ಯ ಸರ್ಕಾರದ ಬೆಳೆ ಸಾಲಮನ್ನಾ ಯೋಜನೆಗೆ ಬ್ಯಾಂಕ್​ಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಹಣ ಮರುಪಾವತಿ ಹಾಗೂ ಕಂತುಗಳ ಕುರಿತು ರೂಪುರೇಷೆ ನಿರ್ಧರಿಸಲು ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿದೆ.

ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಂಕರ್​ಗಳ 141ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಉಪ ಸಮಿತಿಯು ಮುಂದಿನ ಮೂರು ವಾರಗಳಲ್ಲಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ನೀಡಬೇಕು. ಈ ವರದಿ ಆಧರಿಸಿ ಸಾಲಮನ್ನಾ ಯೋಜನೆ ಅನುಷ್ಠಾನಗೊಳ್ಳಲಿದೆ. ರಾಜ್ಯ ದಲ್ಲಿರುವ ಒಟ್ಟು ಬೆಳೆಸಾಲದ ಪ್ರಮಾಣ, ಆ ಪೈಕಿ ಸುಸ್ತಿಸಾಲ, ಅನುಪಯುಕ್ತ ಸಾಲದ ಪ್ರಮಾಣ, ಮರು ಹೊಂದಾಣಿಕೆ ಸಾಲದ ಮೊತ್ತ ಸೇರಿ ಬೆಳೆ ಸಾಲದ ಒಟ್ಟು ಪ್ರಮಾಣ ನಿರ್ಧರಿಸಿ, ಆಯಾ ಬ್ಯಾಂಕ್​ಗಳ ನಿಯಮಗಳಿಗೆ ಅನುಗುಣವಾಗಿ ಮನ್ನಾ ಮಾಡಬಹುದಾದ ಸಾಲದ ಮೊತ್ತವನ್ನು ನಿರ್ಧರಿ ಸುವುದು ಈ ಉಪಸಮಿತಿ ಜವಾಬ್ದಾರಿಯಾಗಿದೆ.

ಬ್ಯಾಂಕ್​ಗಳ ಸಾಮರ್ಥ್ಯಕ್ಕನುಗುಣವಾಗಿ ಸರ್ಕಾರ ಸಾಲ ಮರುಪಾವತಿ ಮಾಡುವಾಗ ಯಾವ ಬ್ಯಾಂಕ್​ಗಳ ಪ್ರಮಾಣ ಎಷ್ಟಿರಬೇಕು ಹಾಗೂ 500 ಕೋಟಿ ರೂ.ಗಳಿಗಿಂತ ಹೆಚ್ಚು ಬೆಳೆ ಸಾಲ ನೀಡಿರುವ, ಅದಕ್ಕಿಂತ ಕಡಿಮೆ ಮೊತ್ತದ ಬೆಳೆ ಸಾಲ ನೀಡಿರುವ ಬ್ಯಾಂಕ್​ಗಳ ಮರುಪಾವತಿ ಸಾಮರ್ಥ್ಯವನ್ನು ಉಪ ಸಮಿತಿ ನಿರ್ಧರಿಸಲಿದೆ.

ಬೆಳೆಸಾಲ ಕೋಶ ಸ್ಥಾಪನೆ: ರಾಜ್ಯದಲ್ಲಿ ರೈತರು ಪಡೆದಿರುವ ಬೆಳೆಸಾಲದ ಪ್ರಮಾಣವನ್ನು ನಿಖರವಾಗಿ ಗುರುತಿಸುವ ಕಾರ್ಯವನ್ನು ಕಂದಾಯ ಇಲಾಖೆ ನಾಳೆಯಿಂದಲೇ ಆರಂಭಿಸಬೇಕು. ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರ ಬ್ಯಾಂಕ್​ಗಳಲ್ಲಿ ಸಾಲಮನ್ನಾ ಅವಧಿಯಲ್ಲಿ ಪಡೆದಿರುವ ಮೊತ್ತವನ್ನು ಜಿಲ್ಲಾವಾರು ಪತ್ತೆ ಮಾಡಿ, ಒಬ್ಬ ಫಲಾನುಭವಿ ಎರಡೆರಡು ಬ್ಯಾಂಕ್​ಗಳಲ್ಲಿ ಬೆಳೆಸಾಲ ಪಡೆದಿರುವ ಪ್ರಕರಣಗಳನ್ನೂ ಗುರುತಿಸುವಂತೆ ಸೂಚಿಸಲಾಗಿದೆ. ಪ್ರಸಕ್ತ ವರ್ಷದಿಂದಲೇ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಡಿ ಬೆಳೆಸಾಲ ಕೋಶ ಆರಂಭಿಸಿ, ಪ್ರತಿವರ್ಷ ಸಾಲ ಪಡೆದವರ ಮಾಹಿತಿ ಸಂಗ್ರಹಿಸುವಂತೆ ತಿಳಿಸಿರುವುದಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಮಾಹಿತಿ ನೀಡಿದರು.

ಸಮಿತಿಯಲ್ಲಿ ಯಾರ್ಯಾರು?

ರಾಜ್ಯಮಟ್ಟದ ಬ್ಯಾಂಕರ್​ಗಳ ಸಮಿತಿ ಸಂಯೋಜಕ ಹಾಗೂ ಸಿಂಡಿಕೇಟ್ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚನೆಯಾಗಲಿದೆ. ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ, 500 ಕೋಟಿ ರೂ.ಗಿಂತ ಹೆಚ್ಚು ಬೆಳೆಸಾಲ ನೀಡಿರುವ ಬ್ಯಾಂಕ್​ಗಳ ತಲಾ ಒಬ್ಬ ಪ್ರತಿನಿಧಿ ಸದಸ್ಯರಾಗಿರುತ್ತಾರೆ.

ಕೃಷಿ ವಲಯಕ್ಕೆ 98,655 ಕೋಟಿ ರೂ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಾರ್ಷಿಕ ಸಾಲ ಯೋಜನೆಯನ್ನು ರಾಜ್ಯಮಟ್ಟದ ಬ್ಯಾಂಕರ್​ಗಳ ಸಮಿತಿ ಪ್ರಕಟಿಸಿದ್ದು, ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ, 98,655 ಕೋಟಿ ರೂ. ಸಾಲ ನೀಡಲು ನಿರ್ಧರಿಸಿದೆ. ಪ್ರಸಕ್ತ ವರ್ಷ ಉತ್ತಮ ಮಳೆ ಆಗಿರುವುದರಿಂದ ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕಳೆದ ವರ್ಷಕ್ಕಿಂತ ಶೇ.102 ಹೆಚ್ಚು ಮೊತ್ತದ ಸಾಲ ವಿತರಣೆಗೆ ನಿರ್ಧರಿಸಿವೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ 40,874 ಕೋಟಿ ರೂ., ಶೈಕ್ಷಣಿಕ ಸಾಲಕ್ಕೆ 4,604 ಕೋಟಿ ರೂ. ಹಾಗೂ ಗೃಹಸಾಲಕ್ಕೆ 16,786 ಕೋಟಿ ರೂ. ನೀಡುವ ಗುರಿ ಹೊಂದಲಾಗಿದೆ.

ಶೇಕಡಾವಾರು ಯಾರ ಪಾಲು ಎಷ್ಟು?

ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಬೆಳೆಸಾಲದ ಹೆಸರಿನಲ್ಲಿರುವ ವಸೂಲಿಯಾಗದ ಸಾಲದ ಮೊತ್ತವನ್ನು ಬ್ಯಾಂಕ್​ಗಳು ಹಾಗೂ ರಾಜ್ಯ ಸರ್ಕಾರ ತಲಾ ಎಷ್ಟು ಭಾರ ಹೊರಬೇಕು ಎಂಬ ಅಂಶ ಸಭೆಯಲ್ಲಿ ಸುದೀರ್ಘ ಚರ್ಚೆಗೆ ಗ್ರಾಸವಾಯಿತು. ಭಾರತೀಯ ಸ್ಟೇಟ್ ಬ್ಯಾಂಕ್ ಕಳೆದ ವರ್ಷ ಅನುಪಯುಕ್ತ (ಎನ್​ಪಿಎ) ಎಂದು ಘೋಷಿಸಿದ ಸಾಲಮನ್ನಾಕ್ಕೆ ಈಗಾಗಲೇ ಕೆಲ ರಿಯಾಯಿತಿ ಘೋಷಿಸಿದ್ದು, ಅದರ ಪ್ರಮಾಣವನ್ನು ಹೆಚ್ಚಿಸಿಕೊಂಡರೆ ರಾಜ್ಯ ಸರ್ಕಾರ ಇನ್ನಷ್ಟು ರೈತರಿಗೆ ಅನುಕೂಲ ಮಾಡಲು ಸಹಕಾರಿಯಾಗುತ್ತದೆ. ಆದರೆ ಬ್ಯಾಂಕ್​ಗಳು ಕೂಡ ರೈತರ ಬೆಳೆಸಾಲದ ಎನ್​ಪಿಎ ಸಾಲದ ಮನ್ನಾ ವಿಚಾರದಲ್ಲಿ ಉದಾರತೆ ತೋರಬೇಕು ಎಂದು ಸರ್ಕಾರದ ಪರವಾಗಿ ಮನವಿ ಮಾಡಲಾಯಿತು. ಹೀಗಾಗಿ ಮನ್ನಾದ ಶೇಕಡಾವಾರು ಪ್ರಮಾಣವನ್ನೂ ಉಪಸಮಿತಿಯಲ್ಲಿ ರ್ಚಚಿಸಿ ನಿರ್ಧರಿಸ ಬೇಕೆಂಬ ತೀರ್ವನಕ್ಕೆ ಸಭೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಸಾಲಮನ್ನಾ ಯೋಜನೆ ಅನುಷ್ಠಾನ ಸಂಬಂಧ ಬ್ಯಾಂಕರ್​ಗಳ ಜತೆ ನಡೆಸಿದ ಸಭೆ ಫಲಪ್ರದವಾಗಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳ ಬೆಳೆ ಸಾಲ 37,159 ಕೋಟಿ ರೂ., ಸಹಕಾರ ಬ್ಯಾಂಕ್​ಗಳ 9,448 ಕೋಟಿ ರೂ. ಹಾಗೂ ಹಿಂದಿನ ಸರ್ಕಾರದ ಬಾಕಿ 4,000 ಕೋಟಿ ರೂ. ಸೇರಿ ಒಟ್ಟು 51,000 ಕೋಟಿ ರೂ. ಸಾಲಮನ್ನಾ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಂಡಿದೆ. ಬ್ಯಾಂಕ್​ಗಳು ಅರ್ಹ ಫಲಾನುಭವಿಗಳ ಡಿಜಿಟಲ್ ಸಹಿಯೊಂದಿಗೆ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಿವೆ. ಅದನ್ನಾಧರಿಸಿ ನಾಲ್ಕು ಕಂತುಗಳಲ್ಲಿ ಬ್ಯಾಂಕ್​ಗಳಿಗೆ ಮರುಪಾವತಿ ಮಾಡಲಾಗುವುದು.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ


ಅನಿಲ ಭಾಗ್ಯಕ್ಕೆ ಮರುಚಾಲನೆ

ಬೆಂಗಳೂರು: ವಿಧಾನಸಭಾ ಚುನಾವಣೆ ಕಾರಣಕ್ಕೆ ಬಾಕಿ ಉಳಿದಿದ್ದ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಮರುಚಾಲನೆಗೆ ಕಾಲ ಕೂಡಿಬಂದಿದೆ.

ಆಗಸ್ಟ್ 15ರಿಂದ ಎರಡು ತಿಂಗಳೊಳಗೆ ಒಂದು ಲಕ್ಷ ಕುಟುಂಬಕ್ಕೆ ಅಡುಗೆ ಅನಿಲ ಕಿಟ್ ವಿತರಿಸಲು ಸಮ್ಮಿಶ್ರ ಸರ್ಕಾರ ತೀರ್ವನಿಸಿದ್ದು, ಮಂಗಳವಾರ ನಡೆದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಹಾರ ಸಚಿವ ಜಮೀರ್ ಅಹ್ಮದ್, ‘ಹಿಂದಿನ ಸರ್ಕಾರ ಅರ್ಜಿ ಆಹ್ವಾನಿಸಿದ್ದಾಗ 32 ಲಕ್ಷ ಬಂದಿತ್ತು. 10 ಲಕ್ಷದಂತೆ ಮೂರು ಹಂತದಲ್ಲಿ ವಿತರಿಸಲು ತೀರ್ವನಿಸಲಾಗಿದೆ. ಒಂದು ಲಕ್ಷ ಸ್ಟೌ ಖರೀದಿ ಮಾಡಲಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಇದ್ದ ವ್ಯತ್ಯಾಸ ಸರಿಪಡಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಕಿಟ್​ವೊಂದಕ್ಕೆ 4,200 ರೂ. ಆಗಲಿದ್ದು, ಮೊದಲ ಹಂತದಲ್ಲಿ 10 ಲಕ್ಷ ವಿತರಿಸಲಾಗುವುದು. ಯೋಜನೆಗೆ 1,400 ಕೋಟಿ ರೂ. ಬೇಕಾಗಲಿದ್ದು, ಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಅನಿಲ ಸಿಲಿಂಡರ್ ಸಂಪರ್ಕ ಹೊಂದಿದವರ ಆಧಾರ್ ಲಿಂಕ್ ಆಗಿರುವುದರಿಂದ ಯೋಜನೆ ದುರುಪಯೋಗವಾಗುವುದಿಲ್ಲ ಎಂದು ಅವರು ಹೇಳಿದರು.

ಅನ್ನಭಾಗ್ಯ ಅಕ್ಕಿ ಕಡಿತವಿಲ್ಲ

ಅನ್ನಭಾಗ್ಯ ಯೋಜನೆಯಲ್ಲಿ ಫಲಾನುಭವಿಗೆ ನೀಡುವ ಅಕ್ಕಿ ಪ್ರಮಾಣ ಕಡಿತ ಮಾಡುವುದಿಲ್ಲ. ತಲಾ ಏಳು ಕೆಜಿ ನೀಡುತ್ತಿದ್ದು, ಇದು ಮುಂದುವರಿಯಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.


ನಡವಳಿಕೈ ನೋಡಿ ಮೈತ್ರಿ

ಬೆಂಗಳೂರು: ಕಾಂಗ್ರೆಸ್​ನ ನಡವಳಿಕೆ ನೋಡಿ ಲೋಕಸಭಾ ಚುನಾವಣೆ ಮೈತ್ರಿ ನಿರ್ಧಾರವಾಗಲಿದೆ ಎಂದು ಸಿಎಂ ಕುಮಾರಸ್ವಾಮಿ, ಪಕ್ಷದ ಒಳಗುಟ್ಟು ಬಹಿರಂಗಪಡಿಸಿದ್ದಾರೆ. ಚುನಾವಣೆ ಮೈತ್ರಿ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಮಹಾಮೈತ್ರಿ ಕೂಟದಲ್ಲಿ ಇರುತ್ತೇವೆ. ಕಾಂಗ್ರೆಸ್ ನಡೆ ನೋಡಿ ಮೈತ್ರಿ ನಿರ್ಧಾರವಾಗಲಿದೆ’ ಎಂದರು. ಒಂದೆಡೆ ಕಾಂಗ್ರೆಸ್ ವಿವಿಧ ಜಿಲ್ಲಾ ಘಟಕಗಳು ಜೆಡಿಎಸ್ ಜತೆ ಚುನಾವಣೆ ಮೈತ್ರಿಗೆ ಅಪಸ್ವರ ತೀವ್ರಗೊಳಿಸಿದ್ದು, ಪರಿಸ್ಥಿತಿ ನಿಭಾಯಿಸಲು ಪಕ್ಷದ ರಾಜ್ಯ ಘಟಕ ಶ್ರಮಹಾಕುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಸಾಧ್ಯವೇ ಇಲ್ಲ ಎಂದು ಹೈಕಮಾಂಡ್​ಗೆ ಸಂದೇಶ ಕಳುಹಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ ಕುತೂಹಲ ಮೂಡಿಸಿದೆ. ಕೈ ನಾಯಕರು ಸರ್ಕಾರ ತೀರ್ವನಗಳ ಬಗ್ಗೆ, ವೈಯಕ್ತಿಕವಾಗಿ ಮಾಡುತ್ತಿರುವ ಟೀಕೆಗಳಿಗೆ ಜೆಡಿಎಸ್ ವಲಯದಲ್ಲೂ ಬೇಸರ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲಸೌಕರ್ಯಕ್ಕೆ ತುರ್ತು ಕ್ರಮ: ರಾಜ್ಯದಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳು, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಸಭೆ ನಡೆಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳು, ಪ್ರಯೋಗಾಲಯ, ಶೌಚಗೃಹ, ಗ್ರಂಥಾಲಯ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹಣಕಾಸಿನ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ತಾವು ಹಿಂದೆ ಸಿಎಂ ಆಗಿದ್ದಾಗ ಮಂಜೂರು ಮಾಡಿದ್ದ ಶಾಲಾ-ಕಾಲೇಜುಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಗುಣಮಟ್ಟದ ಬೈಸಿಕಲ್ ನೀಡಿ

ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೈಸಿಕಲ್ ವಿತರಿಸುವಂತೆ ಸಿಎಂ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಹಿಂದಿನ ವರ್ಷಗಳಲ್ಲಿ ವಿತರಿಸಿದ ಬೈಸಿಕಲ್ ಕುರಿತು ಪೋಷಕರು ಅತೃಪ್ತಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದರು.


ಸಚಿವಾಲಯ ಪೀಠೋಪಕರಣ ವಾಡೆಗೆ?

ಬೆಂಗಳೂರು: ವಿಧಾನಸಭೆ ಸಚಿವಾಲಯದ ಪೀಠೋಪಕರಣವನ್ನು ನಿಕಟಪೂರ್ವ ಸ್ಪೀಕರ್ ಕೆ.ಬಿ.ಕೋಳಿವಾಡ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ‘ಕ್ರೆಸೆಂಟ್​ರಸ್ತೆಯಲ್ಲಿ ಉಳಿದುಕೊಂಡಿದ್ದ ಸರ್ಕಾರಿ ನಿವಾಸಕ್ಕೆ ಈ ಪೀಠೋಪಕರಣಗಳನ್ನು ನೀಡಲಾಗಿತ್ತು. ಪೀಠೋಪಕರಣಗಳಿಗೆ ಹಣ ಪಾವತಿ ಮಾಡುತ್ತೇನೆಂದು ಪತ್ರ ಬರೆದು ಕೊಟ್ಟು, 4 ಸೋಫಾ ಮತ್ತು 1 ಕಾಟ್ ತಂದಿದ್ದೇನೆ’ ಎಂದು ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.

‘ಎಲ್ಲದರ ದರ 3 ಲಕ್ಷ ರೂ. ಆಗಬಹುದು. ವಿಧಾನಸಭಾ ಕಾರ್ಯದರ್ಶಿ ದರ ನಿಗದಿ ಮಾಡಿದ ಮೇಲೆ ತುಂಬುತ್ತೇನೆ. ಇನ್ನು ನನಗೆ ಕಾರ್ಯದರ್ಶಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ಹಿಂದೆ ಇದ್ದ ಹಲವರು ಈ ರೀತಿ ಮಾಡಿದ್ದಾರೆ. ಹೀಗಾಗಿ ನಾನೂ ತಂದಿದ್ದೇನೆ ಎಂದಿದ್ದಾರೆ.

ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟನೆ ನೀಡಿ, ‘ಕೋಳಿವಾಡರಿಗೆ ಕ್ರೆಸೆಂಟ್ ರಸ್ತೆಯಲ್ಲಿ ಸರ್ಕಾರಿ ನಿವಾಸ ಕೊಡಲಾಗಿತ್ತು. ಸಚಿವಾಲಯದಿಂದ ಮನೆಗೆ 6 ಪೀಠೋಪಕರಣ ಕೊಡಲಾಗಿತ್ತು. 2 ಮಾತ್ರ ಬಳಕೆ ಮಾಡಿದ್ದರು. 4 ಪೀಠೋಪಕರಣಗಳನ್ನು ಹಿಂದಿರುಗಿಸುತ್ತೇನೆ, ಅದರ ದರ ನಿಗದಿ ಮಾಡಿದರೆ ಪಾವತಿ ಮಾಡುತ್ತೇವೆ ಅಂದಿದ್ದರು. ಲೋಕೋಪಯೋಗಿ ಇಲಾಖೆಯವರು ಎಸ್​ಆರ್ ದರ ನಿಗದಿ ಮಾಡುತ್ತಾರೆ ಎಂದರು.


ನವೀಕರಣವಲ್ಲ, ಚರಂಡಿ ದುರಸ್ತಿ

ಬೆಂಗಳೂರು: ಸಚಿವ ಎಚ್.ಡಿ. ರೇವಣ್ಣ ಸರ್ಕಾರಿ ಬಂಗಲೆಯನ್ನು ವಾಸ್ತು ಪ್ರಕಾರ ನವೀಕರಿಸಲು ಮುಂದಾಗಿಲ್ಲ. ಚರಂಡಿ ದುರಸ್ತಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸ್ಪಷ್ಟಪಡಿಸಿದರು. ಬಂಗಲೆ ನವೀಕರಣ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು. ಬಂಗಲೆ ಆವರಣದಲ್ಲಿ ಮಳೆ ನೀರು ಹರಿದು ಬರುತ್ತಿದ್ದರಿಂದ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದು ನಮ್ಮ ಸರ್ಕಾರದಿಂದ ಆಗಿದ್ದಲ್ಲ. ಡಿಸೆಂಬರ್​ನಲ್ಲೇ ಅನುಮೋದನೆಯಾಗಿತ್ತು ಎಂದು ಅನುಮೋದನೆ ಪ್ರತಿಯನ್ನು ಪ್ರದರ್ಶಿಸಿದರು.

ನಾನು ವಾಸ್ತು ಪ್ರಕಾರ ನವೀಕರಣಕ್ಕೆ ಮುಂದಾಗಿಲ್ಲ. ಅಲ್ಲಿ ಮಳೆ ಬಂದಾಗ ಚರಂಡಿ ನೀರು ಹರಿಯುತ್ತಿತ್ತು, ಪೈಪ್ ಅಳವಡಿಸಲಾಗುತ್ತಿದೆ. ಬಿದ್ದು ಹೋಗಿದ್ದ ಕಾಂಪೌಂಡ್ ರಿಪೇರಿ ಮಾಡಲಾಗುತ್ತಿದೆ ಅಷ್ಟೇ.

| ಎಚ್.ಡಿ.ರೇವಣ್ಣ ಸಚಿವ


ಸೌಧ ಪ್ರವೇಶಕ್ಕೆ ನಿರ್ಬಂಧ?

ಬೆಂಗಳೂರು: ವಿಧಾನಸೌಧ ಸುತ್ತಮುತ್ತಲ ಪ್ರದೇಶವನ್ನು ಅತಿಭದ್ರತಾ ವಲಯವೆಂದು ಘೊಷಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಜಿಪಿಗೆ ನೀಡಿರುವ ಸೂಚನೆ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತು.

ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ, ಅದಕ್ಕೂ ಮುನ್ನ ವಿಧಾನಸೌಧದ ಬೇಲಿ ಕಿತ್ತು ಹಾಕಿಸುತ್ತೇನೆ. ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇನೆ ಎಂದು ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ, ಈಗ ಮಾಧ್ಯಮದವರಿಗೆ ನಿರ್ಬಂಧ ವಿಧಿಸಲು ಮುಂದಾದದ್ದು ಚರ್ಚೆಗೆ ಗ್ರಾಸ ಒದಗಿಸಿತ್ತು. ಬೆಳಗ್ಗೆ ವಿಧಾನಸೌಧ ಪ್ರವೇಶಿಸಲು ಕೆಲ ಮಾಧ್ಯಮದವರಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದನ್ನು ಸಿಎಂ ಗಮನಕ್ಕೆ ತರಲಾಯಿತು. ಆಗ ಅವರು, ‘ವಿಧಾನಸೌಧದಲ್ಲಿ ದಲ್ಲಾಳಿ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಿದ್ದೇನೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿಲ್ಲ’ ಎಂದರು. ‘ಮಾಧ್ಯಮದವರು ಒಬ್ಬೊಬ್ಬರಾಗಿ ಎಲ್ಲಿ ಬೇಕೆಂದರಲ್ಲಿ ಬಂದು ಮೈಕ್ ಹಿಡಿದರೆ, ಉತ್ತರಿಸಲು ಹೇಗೆ ಸಾಧ್ಯ? ನೀವು ಕೇಳಿದ ತಕ್ಷಣ ನಮ್ಮಲ್ಲಿ ಮಾಹಿತಿ ಇರಬೇಕಲ್ಲ? ಇದರಿಂದಾಗಿ ಅನೇಕ ಗೊಂದಲ ಸೃಷ್ಟಿಯಾಗುತ್ತವೆ, ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಹಾಗಾಗಿ ಮಾಧ್ಯಮಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಹೇಳಿದ್ದೇನೆ. ಅಲ್ಲಿಯೇ ಎಲ್ಲ ಮಾಹಿತಿ ಸಿಗುವ ವ್ಯವಸ್ಥೆಗೆ ಚಿಂತನೆ ನಡೆಸಿದ್ದೇನೆ’ ಎಂದು ಹೇಳಿದರು. ‘ಮಾಧ್ಯಮದವರನ್ನು ದೂರ ಇಡಲಾಗುತ್ತದೆಯೆ? ನೀವು ಬೇಕಲ್ಲವೆ, ನಿಮಗೆ ಯಾವುದೇ ತೊಂದರೆಯಾಗದಂತೆ ಡಿಸಿಪಿಗೆ ಸೂಚನೆ ನೀಡುತ್ತೇನೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.