Friday, 16th November 2018  

Vijayavani

Breaking News

ಕೈಹಿಂಡಿದ ಸಿದ್ದರಾಮಯ್ಯ

Monday, 25.06.2018, 3:05 AM       No Comments

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿಗೆ ಸ್ಪಂದಿಸಿ, ಸಮ್ಮಿಶ್ರ ಸರ್ಕಾರಕ್ಕೆ ಅಡ್ಡಿಯಾಗಬಾರದೆಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕಟ್ಟಪ್ಪಣೆ ಹೊರಡಿಸಿದ ಬಳಿಕ ಕೆಲದಿನ ತಣ್ಣಗಾಗಿದ್ದ ಕಾಂಗ್ರೆಸ್ ಆಂತರಿಕ ಬೇಗುದಿ ಬಜೆಟ್ ಹೊಸ್ತಿಲಿನಲ್ಲಿ ಮತ್ತೆ ಸ್ಪೋಟಿಸಿದೆ. ಪ್ರಕೃತಿ ಚಿಕಿತ್ಸೆ ಸಲುವಾಗಿ ಧರ್ಮಸ್ಥಳ ಬಳಿಯ ಶಾಂತಿವನದಲ್ಲಿ ಮೊಕ್ಕಾಂ ಹೂಡಿರುವ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತೊಮ್ಮೆ ಬಜೆಟ್ ಹಾಗೂ ಸಾಲಮನ್ನಾ ಕುರಿತು ಅಪಸ್ವರವೆತ್ತುವ ಮೂಲಕ ತಣ್ಣಗೆ ಕ್ರಾಂತಿ ಎಬ್ಬಿಸಿರುವುದು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಶಾಂತ ವಾತಾವರಣ ಮೂಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ದಿಢೀರ್ ಉಜಿರೆಗೆ ತೆರಳಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದಾರೆ. ಶಾಂತಿವನದ ನಾಲ್ಕು ಗೋಡೆಗಳ ಮಧ್ಯೆ ಕುಳಿತು ದಿನನಿತ್ಯ ತಮ್ಮ ಆಪ್ತರೊಂದಿಗೆ ನಡೆಸುತ್ತಿರುವ ಸರಣಿ ಸಭೆ ಹಾಗೂ ಸರ್ಕಾರದ ತೀರ್ವನಗಳ ಕುರಿತಂತೆ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳ ವಿಡಿಯೋ ತುಣುಕು ಕಾಂಗ್ರೆಸ್​ನಲ್ಲಿ ತಲ್ಲಣ ಮೂಡಿಸಿದೆ. ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಅವರಾಡಿರುವ ಮಾತುಗಳು, ಸಾಲಮನ್ನಾ ಬಗ್ಗೆ ಅವರ ನಿಲುವು ಹಾಗೂ ಬಜೆಟ್ ಮಂಡನೆ ಬಗೆಗಿನ ಅಪಸ್ವರಗಳು ಸರ್ಕಾರದ ಆಯಸ್ಸನ್ನೇ ಪ್ರಶ್ನೆ ಮಾಡುವಂತಾಗಿದೆ.

ಪಟ್ಟು ಬಿಡದ ಮಾಜಿ ಸಿಎಂ: ಸಂಪುಟ ರಚನೆ ವೇಳೆ ಭಿನ್ನಮತೀಯರು, ಅವಕಾಶವಂಚಿತರಿಂದ ಉಂಟಾಗಬಹುದಾದ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಪಕ್ಷದ ಹೈಕಮಾಂಡ್ ಅಸಮಾಧಾನ ನಿವಾರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯಗೆ ನೀಡಿತ್ತು. ಸಚಿವ ಸ್ಥಾನ ಕೈತಪು್ಪವವರನ್ನು ಕರೆದು ಮಾತನಾಡಿ ಸಮಾಧಾನ ಪಡಿಸುವಂತೆಯೂ ಸೂಚಿಸಿತ್ತು. ಆದರೆ, ಅದೇ ಸಂದರ್ಭದಲ್ಲಿ ತಮ್ಮನ್ನು ಗೆಲ್ಲಿಸಿದ ಬಾದಾಮಿ ಕ್ಷೇತ್ರಕ್ಕೆ ತೆರಳಿದ ಸಿದ್ದರಾಮಯ್ಯ ಐದು ದಿನ ಅಲ್ಲಿಂದ ಕದಲಲಿಲ್ಲ. ಬಳಿಕ ಸಂಪುಟ ವಿಸ್ತರಣೆ ಸಮಯಕ್ಕೆ ಸರಿಯಾಗಿ ಆಗಮಿಸಿದರಾದರೂ, ನಂತರ ಚಿಕಿತ್ಸೆಗೆಂದು ಧರ್ಮಸ್ಥಳದ ಶಾಂತಿವನಕ್ಕೆ ತೆರಳಿದರು. ಈ ಎಲ್ಲ ಬೆಳವಣಿಗೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಹೈಕಮಾಂಡ್ ಅಸಮಾಧಾನ ಶಮನದ ಹೊಣೆಯನ್ನು ಡಿ.ಕೆ.ಶಿವಕುಮಾರ್ ಹೆಗಲಿಗೆ ವರ್ಗಾಯಿಸಿತ್ತು.

ಮುನಿಸಿನ ಬಗ್ಗೆ ಮಾಹಿತಿ ಇಲ್ಲ

ಸಾಲ ಮನ್ನಾ ಹಾಗೂ ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರೆಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಹೊಸ ಸರ್ಕಾರ ಬಂದಾಗ ಹೊಸ ಚಿಂತನೆಗಳು ಸಹಜ. ಆದರೆ ಹಳೇ ಯೋಜನೆಗಳನ್ನು ಮುಂದುವರಿಸುವುದಾಗಿ ಸಿಎಂ ಹೇಳಿದ್ದಾರೆ. ಆದ್ದರಿಂದ ಭಿನ್ನಮತ, ಗೊಂದಲವಿಲ್ಲ.

| ಪರಮೇಶ್ವರ್, ಡಿಸಿಎಂ

ವಿಡಿಯೋ ಗುಟ್ಟು ರಟ್ಟು

ಉಜಿರೆಯ ಶಾಂತಿವನದಲ್ಲಿ ತಮ್ಮ ಆತ್ಮೀಯ ಬಳಗದ ಶಾಸಕರೊಂದಿಗೆ ಚರ್ಚೆ ನಡೆಸುವಾಗ ಸಿದ್ದರಾಮಯ್ಯ ಆಡಿದ ಮಾತಿನ ವಿಡಿಯೋ ಬಹಿರಂಗವಾಗಿದೆ. ‘ಹೊಸ ಸರ್ಕಾರಕ್ಕೆ ಬಜೆಟ್ ಮಂಡಿಸುವ ಅನಿವಾರ್ಯತೆ ಏನಿದೆ? ಹೈಕಮಾಂಡ್​ನ ಗ್ರೀನ್ ಸಿಗ್ನಲ್ ಪಡೆದಿದ್ದೇವೆಂದು ಬಜೆಟ್ ಮಂಡಿಸುತ್ತಿದ್ದಾರೆ. ನಮ್ಮ ಪಕ್ಷ ಕೊಟ್ಟ ಬೆಂಬಲದಿಂದಲೇ ಅವರು ಮುಖ್ಯಮಂತ್ರಿಯಾಗಿದ್ದಲ್ಲವೇ? ಮುಂದಿನ ವರ್ಷ ಬಜೆಟ್ ಮಂಡಿಸಲು ಅವಕಾಶವಿತ್ತಲ್ಲವೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹೊಸ ಸರ್ಕಾರ ಬಂದಾಗ ಬಜೆಟ್ ಮಂಡಿಸುವುದು ಸರ್ವೆ ಸಾಮಾನ್ಯ ಎಂಬ ಉಪ ಮುಖ್ಯಮಂತ್ರಿ ಪರಮೇಶ್ವರ್ ಸಮರ್ಥನೆ ಬಗ್ಗೆಯೂ ಸಿದ್ದರಾಮಯ್ಯ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅತೃಪ್ತ ಶಾಸಕರೊಂದಿಗೆ ಸಭೆ ನಡೆಸುವಾಗ ಸಾಲಮನ್ನಾ ಬಗ್ಗೆಯೂ ಋಣಾತ್ಮಕ ಚರ್ಚೆ ನಡೆದಿರುವುದು ಸ್ಪಷ್ಟವಾಗಿದೆ. ಒಟ್ಟಾರೆ ರಾಜಕೀಯ ಬೆಳವಣಿಗೆಗಳಿಂದ ದೂರ ಇದ್ದಂತೆ ಕಂಡರೂ ಗುಪ್ತ ಸಭೆ ನಡೆಸಿರುವುದು, ಸರ್ಕಾರದ ಆಗುಹೋಗುಗಳ ಬಗ್ಗೆ ಆ ಸಭೆಯಲ್ಲಿ ಮಾತನಾಡಿರುವುದು ಪಕ್ಷದ ಹಿರಿಯ ನಾಯಕರ ಸಿಟ್ಟಿಗೆ ಕಾರಣವಾಗಿದೆ. ದೇವೇಗೌಡರು ಮುಂದಿನ ಬಾರಿ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಮತ್ತು ಪ್ರಜ್ವಲ್ ರೇವಣ್ಣರನ್ನು ಹಾಸನದಿಂದ ಕಣಕ್ಕಿಳಿಸುತ್ತಾರೆಂಬ ವಿಚಾರ ಸಹ ಅತೃಪ್ತ ಶಾಸಕರ ಸಭೆಯಲ್ಲಿ ಚರ್ಚೆಯಾಗಿತ್ತು. ಇನ್ನು ಎಂ.ಬಿ.ಪಾಟೀಲ್ ಹಾಗೂ ಡಾ.ಸುಧಾಕರ್ ಕರೆಯುವ ಸಭೆಗೆ ಹೋಗುವ ಕುರಿತು ಸಿದ್ದರಾಮಯ್ಯ ತಮ್ಮ ಬಳಗದ ಶಾಸಕರಿಗೆ ಎಚ್ಚರಿಕೆ ನೀಡಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ.

ನಿಗಮ ಮಂಡಳಿ, ಸಚಿವರ ಪಟ್ಟಿ ರೆಡಿ

ಜುಲೈ 5ರಂದು ನಡೆಯುವ ಬಜೆಟ್ ಮಂಡನೆಯೊಳಗೆ ಸಂಪುಟ ವಿಸ್ತರಣೆ ಮತ್ತು 20 ನಿಗಮ ಮಂಡಳಿ ನೇಮಕ ಮಾಡಬೇಕೆಂಬ ಪಕ್ಷದ ಹೈಕಮಾಂಡ್ ಸೂಚನೆ ಪಾಲಿಸಲು ರಾಜ್ಯ ನಾಯಕರು ಕಸರತ್ತು ನಡೆಸಿದ್ದಾರೆ. ಪಕ್ಷದಿಂದ ಸಚಿವ ಸ್ಥಾನಕ್ಕೆ ಐದು ಹೆಸರು ಅಂತಿಮಗೊಂಡಿದ್ದು, 20 ನಿಗಮ ಮಂಡಳಿಗಳಿಗೂ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಉಜಿರೆಯಲ್ಲಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 1 ಗಂಟೆ ಚರ್ಚೆ ನಡೆಸಿದ್ದಾರೆ.

ಒಂದೆರಡು ಬದಲಾವಣೆ ಹೊರತುಪಡಿಸಿ ಎಲ್ಲ ಹೆಸರಿಗೂ ಒಪ್ಪಿಗೆ ಸಿಕ್ಕಿದ್ದು, ಹೈಕಮಾಂಡ್ ಹಸಿರು ನಿಶಾನೆ ನೀಡುವುದಷ್ಟೇ ಬಾಕಿ ಇದೆ. ಮೂವರು ಹಿರಿಯರು ಮತ್ತು ಇಬ್ಬರು ಹೊಸಬರಿಗೆ ಮಂತ್ರಿ ಸ್ಥಾನ, ಉಳಿದ ಅಸಮಾಧಾನಿತರಿಗೆ ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ನೀಡಲಾಗುತ್ತದೆ. 2020ರಲ್ಲಿ ನಡೆಯುವ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವುದಾಗಿ ಈಗಾಗಲೇ ಐದು ಮಂದಿಯನ್ನು ಒಪ್ಪಿಸಲಾಗಿದೆ.


ಸಾಲ ಮನ್ನಾ ಗೊಂದಲ ಇಲ್ಲ

ಬೆಳ್ತಂಗಡಿ: ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಗೊಂದಲವಿಲ್ಲ. ಮುಖ್ಯಮಂತ್ರಿ ಸಾಲ ಮನ್ನಾ ಬಗ್ಗೆ ಈಗಾಗಲೇ ರ್ಚಚಿಸಿದ್ದಾರೆ. ಅವರ ನಿಲುವಿಗೆ ಕಾಂಗ್ರೆಸ್ ಪೂರ್ಣ ಬೆಂಬಲ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ 8400 ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಇದೀಗ ಮತ್ತೆ ರೈತರ ಹಿತದೃಷ್ಟಿಯಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸಾಲ ಮನ್ನಾಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರಕ್ಕೆ ಹೆಚ್ಚು ಹೊರೆಯಾಗದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿಯವರನ್ನು ಭೇಟಿ ಮಾಡಿ ಸಾಲ ಮನ್ನಾಕ್ಕೆ 50 ಸಾವಿರ ಕೋಟಿ ರೂ.ಬೇಡಿಕೆ ಇಟ್ಟಿದ್ದಾರೆ. ಮತ್ತೊಮ್ಮೆ ಪ್ರಧಾನಿಯವರನ್ನು ಭೇಟಿ ಮಾಡಿ ಅನುದಾನ ಕೇಳುತ್ತೇವೆ ಎಂದರು. ಪರಮೇಶ್ವರ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿಷ್ಟಾಚಾರ ಬದಿಗೊತ್ತಿ ಖಾಸಗಿ ಕಾರಿನಲ್ಲಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದರು.

Leave a Reply

Your email address will not be published. Required fields are marked *

Back To Top