ಅಸ್ಥಿರ-ಸುಸ್ಥಿರ ಮಧ್ಯೆ ಲಾಭ-ನಷ್ಟ ಲೆಕ್ಕಾಚಾರ

ಬೆಂಗಳೂರು: ತೀವ್ರ ಅಸಮಾಧಾನಗೊಂಡಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಸಮಾಧಾನಿಸುವ ಜತೆ ಸುಸೂತ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುವುದರ ಸಂಬಂಧ ಕಾಂಗ್ರೆಸ್ ಮುಖಂಡರು ಸುಸ್ತಾಗಿದ್ದಾರೆ.

ಸರ್ಕಾರದ ಭದ್ರತೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆಗೆ ತೆರಳಿ ಎರಡು ಗಂಟೆ ರ್ಚಚಿಸಿದ್ದಾರೆ.

ಜಾರಕಿಹೊಳಿ ಸಹೋದರರ ಬೇಡಿಕೆ ಈಡೇರಿಸುವುದರ ಜತೆಗೆ, ಬಿಜೆಪಿ ಆಪರೇಷನ್ ಕಮಲ ನಡೆಸಿದರೆ ತಡೆಯುವ ಬಗ್ಗೆಯೂ ಚರ್ಚೆ ನಡೆದಿದೆ. ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಸಮಸ್ಯೆ ಮೈಮೇಲೆ ಬರುವುದರಿಂದ ಸ್ವಲ್ಪ ದಿನ ಮುಂದೂಡಬಹುದೇ ಎಂಬ ಬಗ್ಗೆಯೂ ಮಾತುಕತೆ ನಡೆದಿದ್ದು, ವಿದೇಶ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಾಪಸ್ ಬಂದ ನಂತರ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲು ತೀರ್ವನಿಸಲಾಯಿತು ಎಂದು ಮೂಲಗಳು ಹೇಳಿವೆ.

ಅಂತರಕ್ಕೆ ಸೂಚನೆ: ಬೆಳಗಾವಿ ಪಿಎಲ್​ಡಿ ಬ್ಯಾಂಕ್ ವಿಚಾರದಲ್ಲಿ ತಲೆಹಾಕಬಾರದಿತ್ತು ಎಂದು ಶಿವಕುಮಾರ್​ಗೆ ತಿಳಿ ಹೇಳಿದ ಪರಮೇಶ್ವರ್, ಬೆಳಗಾವಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರೆಂದು ಗೊತ್ತಾಗಿದೆ.

ದೂರು ಬಗ್ಗೆ ನಿರ್ಧಾರ: ಬಿಜೆಪಿಯಿಂದ ಹಣದ ಆಮಿಷ ಬರುತ್ತಿರುವುದಾಗಿ ಹಲವು ಶಾಸಕರು ಮಾಹಿತಿ ನೀಡಿದ್ದು, ಎಸಿಬಿ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

50 ಕೋಟಿ ರೂ. ಕೊಟ್ಟರು, 100 ಕೋಟಿ ರೂ. ಕೊಟ್ಟರು ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯನ್ನಾಧರಿಸಿಯೇ ದೂರು ನೀಡಲಾಗುವುದು, ಮಾಧ್ಯಮಗಳ ಸುದ್ದಿಯನ್ನು ಜನ ನಂಬುತ್ತಾರೆ, ನಾವೂ ನಂಬಬೇಕಲ್ವ, ಅದಕ್ಕೆ ದೂರು ಕೊಡುತ್ತಿದ್ದೇವೆ. ತನಿಖೆಯಾದರೆ ಎಲ್ಲವೂ ಬಯಲಿಗೆ ಬರಲಿದೆ ಎಂದರು.

‘ಲೋಕ’ ಸಿದ್ಧತೆ ಬಗ್ಗೆಯೂ ಚರ್ಚೆ

ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಬಳ್ಳಾರಿ ಶಾಸಕರ ರೀತಿಯಲ್ಲಿ ಹಲವರು ಸಂಪುಟದಲ್ಲಿ ಅವಕಾಶ ಕೋರುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಲೋಕಸಭಾ ಚುನಾವಣೆಗೆ ಸಿದ್ಧತೆ ಬಗ್ಗೆಯೂ ಸಭೆಯಲ್ಲಿ ಮಾತುಕತೆ ನಡೆಸಿದ್ದೇವೆ ಎಂದು ಪರಮೇಶ್ವರ್ ಹೇಳಿದರು.

ಕಾಂಗ್ರೆಸ್, ಜೆಡಿಎಸ್​ನವರು ಬಿಜೆಪಿಯ 104 ಶಾಸಕರ ಪೈಕಿ ಒಬ್ಬರನ್ನು ತೆಗೆದುಕೊಳ್ಳಲಿ ನೋಡೋಣ. ಸರ್ಕಾರ ರಚಿಸಲು ಪಕ್ಷಕ್ಕೆ 9 ಶಾಸಕರ ಅಗತ್ಯವಿದ್ದು, ಅಷ್ಟು ಜನ ನಮ್ಮ ಕಡೆ ಬಂದರೆ ಅವಕಾಶ ಬಳಸಿಕೊಳ್ಳದಿರಲು ನಾವೇನು ಮೂರ್ಖರಲ್ಲ.

| ವೀರಣ್ಣ ಚರಂತಿಮಠ, ಶಾಸಕ (ಬಾಗಲಕೋಟೆ)

ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿಯವರು ನನ್ನನ್ನು ಸಂರ್ಪಸಿದ್ದು ನಿಜ, ಮಾಜಿ ಸಚಿವರೊಬ್ಬರು ನನಗೆ ಅಪೋ›ಚ್ ಮಾಡಿದ್ದರು. ಆದರೆ, ಅವರ ಹೆಸರು ಬಹಿರಂಗ ಪಡಿಸುವುದಿಲ್ಲ. ರಾಜೀನಾಮೆ ನೀಡಿ ಮತ್ತೆ ಚುನಾವಣೆ ಗೆದ್ದು ಬರೋದು ಅಸಾಧ್ಯ.

| ಸಿ.ಎಸ್. ಶಿವಳ್ಳಿ ಶಾಸಕ (ಕುಂದಗೋಳ)

ಸಂಖ್ಯಾಬಲ ಇಲ್ಲದಿದ್ದರೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಅವರಿಗೆ ದೈವಬಲವಿದೆ. ಸರ್ಕಾರ ಪತನಕ್ಕೆ ಪ್ರಯತ್ನ ಮಾಡಿದರೆ ಅವರಿಗೆ ಒಳ್ಳೆಯದಾಗದು.

| ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ

ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆ ಇರಬಹುದು. ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ವಿಶೇಷ ಶಕ್ತಿ ಸರ್ಕಾರವನ್ನು ಕಾಪಾಡುತ್ತಿದೆ. ಆ ಶಕ್ತಿ ಇರುವವರೆಗೂ ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯ ಇಲ್ಲ. ಮಾಧ್ಯಮಗಳಿಗೆ ಸರ್ಕಾರದ ಒಳ್ಳೇ ಕೆಲಸಕ್ಕಿಂತ ಪತನವೇ ಮುಖ್ಯ.

| ಎಚ್.ಡಿ.ದೇವೇಗೌಡ ಜೆಡಿಎಸ್ ವರಿಷ್ಠ

ನನ್ನ ಕ್ಷೇತ್ರವನ್ನು ಸಮ್ಮಿಶ್ರ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕ್ಷೇತ್ರದ ಜನರಿಗೆ ಮುಖ ತೋರಿಸಲೂ ಬಿಡದೆ ಕಾಂಗ್ರೆಸ್​ನವರು ಕರೆದಾಗ ಅವರೊಂದಿಗೆ ಹೋಗಿದ್ದೇನೆ. ಆದರೀಗ ಅನ್ಯಾಯವಾಗಿದೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮತ್ತು ಮಂತ್ರಿ ಪದವಿ ನೀಡಬೇಕು. ಹಾಗಿದ್ದರೆ ಮಾತ್ರ ಈ ಸರ್ಕಾರವನ್ನು ಬೆಂಬಲಿಸುತ್ತೇನೆ.

| ಎಚ್.ನಾಗೇಶ್ ಮುಳಬಾಗಿಲು ಶಾಸಕ