ಬೆಳಗಾವಿ: ವರಿಷ್ಠರ ಸೂಚನೆಯಂತೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ (ಬಿಡಿಸಿಸಿ) ನಿರ್ದೇಶಕರ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆ. ಗುಂಪುಗಾರಿಕೆ, ವೈಮನಸ್ಸು ಬಿಟ್ಟು, ಕಹಿ ಘಟನೆಗಳನ್ನು ಮರೆತು ಇದೀಗ ಸವದಿ, ಜಾರಕಿಹೊಳಿ ಹಾಗೂ ಕತ್ತಿ ಕುಟುಂಬಗಳು ಒಂದಾಗಿವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದಿಂದ ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರ ಅವಿರೋಧ ಆಯ್ಕೆಗೆ ಪಕ್ಷಾತೀತವಾಗಿ ಕಸರತ್ತು ನಡೆಸುತ್ತಿದ್ದೇವೆ. ವೈಮನಸ್ಸು ತಪ್ಪಿಸಲು ಅವಿರೋಧ ಆಯ್ಕೆಗೆ ಒತ್ತು ನೀಡಲಾಗಿದೆ. ಅದರಲ್ಲಿ ರಾಜಕಾರಣ ಮಾಡುವ ಪ್ರಶ್ನೆ ಇಲ್ಲ ಎಂದರು.
ಹೊಸ ಪರ್ವ: ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ರಾಜಕೀಯ ಪರ್ವ ಆರಂಭಿಸಲು ನಿರ್ಧರಿಸಿದ್ದೇವೆ. 16 ನಿರ್ದೇಶಕರ ಸ್ಥಾನಗಳ ಪೈಕಿ 13 ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ರಾಮದುರ್ಗ, ಖಾನಾಪುರ ಹಾಗೂ ನೇಕಾರ ಸಹಕಾರ ಸಂಘಗಳ ಮತ ಕ್ಷೇತ್ರದಲ್ಲಿ ನ. 6ಕ್ಕೆ ಹೆಸರಿಗೆ ಮಾತ್ರ ಚುನಾವಣೆ ನಡೆಯಲಿದೆ. ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಬಿಡಿಸಿಸಿ ನಿರ್ದೇಶಕರ ಆಯ್ಕೆಯಲ್ಲಿ ಕಮಲ, ಕೈ ಎನ್ನುವ ಪ್ರಶ್ನೆ ಇಲ್ಲ. ಪಕ್ಷಾತೀತವಾಗಿ ಸಹಕಾರಿ ಕ್ಷೇತ್ರದ ಚುನಾವಣೆ ನಡೆದಿದೆ. ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷ ಬರುವುದಿಲ್ಲ. ಈಗಲೂ ಕಾಂಗ್ರೆಸ್‌ನ ಆರು ನಿರ್ದೇಶಕರಿದ್ದಾರೆ. ನಿರ್ದೇಶಕರ ಚುನಾವಣೆ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ನೆರವಾಗುತ್ತದೆ ಎಂದು ಸವದಿ ಅಭಿಪ್ರಾಯ ಪಟ್ಟರು.
ಬಿಡಿಸಿಸಿ ಅಧ್ಯಕ್ಷ ರಮೇಶ ಕತ್ತಿ, ಶಾಸಕ ಮಹಾಂತೇಶ ದೊಡ್ಡಗೌಡರ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅರವಿಂದ ಪಾಟೀಲ ಇತರರು ಇದ್ದರು.
ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಜತೆ ಮಾತನಾಡಿಲ್ಲ: ನಿರ್ದೇಶಕರ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆ. ಆದರೆ, ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿಲ್ಲ ಏಕೆ ಎನ್ನುವುದು ಗೊತ್ತಿಲ್ಲ. ಈ ಕುರಿತು ಅವರೊಂದಿಗೆ ನಾವ್ಯಾರೂ ಮಾತನಾಡಿಲ್ಲ. ಈ ಮೂವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷ!
ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಶನಿವಾರ ಪ್ರವಾಸಿ ಮಂದಿರದಲ್ಲಿ ಒಂದೇ ವೇದಿಕೆಯಲ್ಲಿ ಉಪಸ್ಥಿತರಿರುವ ಮೂಲಕ ಅಚ್ಚರಿ ಮೂಡಿಸಿದರು. ಭವಿಷ್ಯದಲ್ಲಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದು ನಾಯಕರಿಬ್ಬರೂ ಘೋಷಿಸಿದರು.