ಯೋಯೋ ಫಿಟ್ನೆಸ್ ಟೆಸ್ಟ್ ಅಂಕ 17ಕ್ಕೆ ಏರಿಕೆ

ನವದೆಹಲಿ: ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಕಾಂಬಿನೇಷನ್​ನಲ್ಲಿ ಟೀಮ್ ಇಂಡಿಯಾದ ಆಟಗಾರರ ಫಿಟ್ನೆಸ್​ಗೆ ಭಾರಿ ಆದ್ಯತೆ ನೀಡುತ್ತ ಬರಲಾಗಿದೆ. ಇದೀಗ ರವಿಶಾಸ್ತ್ರಿ ತಂಡದ ಮುಖ್ಯ ಕೋಚ್ ಆಗಿ ಮತ್ತೊಂದು ಅವಧಿಗೆ ಮರುನೇಮಕ ಗೊಂಡಿರುವ ಬೆನ್ನಲ್ಲೇ ಫಿಟ್ನೆಸ್ ಮಾನದಂಡ ಮತ್ತಷ್ಟು ಮೇಲ್ಮಟ್ಟಕ್ಕೆ ಏರಲಿದೆ. ಇದರನ್ವಯ ಫಿಟ್ನೆಸ್ ಮಟ್ಟ ಅಳೆಯಲು ಮಾಡಲಾಗುವ ಯೋಯೋ ಟೆಸ್ಟ್​ನಲ್ಲಿ ಉತ್ತೀರ್ಣರಾಗಲು ಆಟಗಾರರು ಇನ್ನು ಮುಂದೆ 17 ಅಂಕ ಗಳಿಸುವುದು ಅಗತ್ಯ ಎನ್ನಲಾಗಿದೆ.

ಬಿಸಿಸಿಐ ಸಮ್ಮತಿಯ ಮೇರೆಗೆ ಇದುವರೆಗೆ ಟೀಮ್ ಇಂಡಿಯಾ ಪರ ಆಡಲು ಆಟಗಾರರಿಗೆ ಯೋಯೋ ಟೆಸ್ಟ್​ನಲ್ಲಿ ಕನಿಷ್ಠ 16.1 ಅಂಕ ಕಲೆಹಾಕುವುದು ಕಡ್ಡಾಯವಾಗಿತ್ತು. ಫಿಟ್ನೆಸ್ ಪರೀಕ್ಷೆಯ ಹೊಸ ಮಾನದಂಡ ಸೆಪ್ಟೆಂಬರ್ 16ರಂದು ಆರಂಭವಾಗಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ.ಈ ಹಿಂದೆ ಉತ್ತಮ ಫಾಮರ್್​ನಲ್ಲಿದ್ದರೂ ಯೋಯೋ ಟೆಸ್ಟ್​ನಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣಕ್ಕಾಗಿಯೇ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಉದಾಹರಣಗಳಿವೆ.

ವಿದೇಶದಲ್ಲಿ ಇನ್ನೂ ಅಧಿಕವಿದೆ!

ವಿದೇಶಿ ಕ್ರಿಕೆಟ್ ತಂಡಗಳಿಗೆ ಹೋಲಿಸಿದರೆ ಭಾರತದಲ್ಲಿ ಯೋಯೋ ಟೆಸ್ಟ್​ನಲ್ಲಿ ಉತ್ತೀರ್ಣ ರಾಗಲು ನಿಗದಿಪಡಿಸಿರುವ ಅಂಕ ಕಡಿಮೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಮಾನದಂಡ 20.1 ಅಂಕದಷ್ಟಿದ್ದರೆ, ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ 19 ಅಂಕವಿದೆ. ಪಾಕಿಸ್ತಾನ ತಂಡದಲ್ಲಿ ಯೋಯೋ ಟೆಸ್ಟ್ ಉತ್ತೀರ್ಣರಾಗಲು ಕನಿಷ್ಠ ಅಂಕ 17.4.

ಏನಿದು ಯೋಯೋ ಟೆಸ್ಟ್?

ಯೋಯೋ ಟೆಸ್ಟ್ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಕ್ರೀಡಾಪಟುಗಳ ಫಿಟ್ನೆಸ್ ಪರೀಕ್ಷಾ ಪದ್ಧತಿಯಾಗಿದೆ. 20 ಮೀಟರ್​ನ ಅಳತೆಯಲ್ಲಿ ಎರಡು ಕೋನಗಳನ್ನು ನೇರ ಲೈನ್​ನ ಒಳಗೆ ಇಡಲಾಗಿರುತ್ತದೆ. ಆಟಗಾರನೊಬ್ಬ ಒಂದು ಲೈನ್​ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್​ನ ಅಂತರದಲ್ಲಿ ಇಟ್ಟ ಕೋನಗಳನ್ನು ಬೀಪ್ ಧ್ವನಿಯನ್ನು ಅನುಸರಿಸಿ ಸುತ್ತುವರಿಯಬೇಕು. ಪ್ರತಿ ಬಾರಿ ಸುತ್ತಿದಾಗಲೂ ಬೀಪ್ ಧ್ವನಿ ವೇಗವಾಗುತ್ತಲೇ ಸಾಗುತ್ತದೆ. ಅದಕ್ಕೆ ತಕ್ಕಂತೆ ಆಟಗಾರ ವೇಗವಾಗಿ ಎರಡೂ ತುದಿಯಲ್ಲಿಟ್ಟ ಕೋನವನ್ನು ಸುತ್ತಬೇಕಾಗುತ್ತದೆ. ಬೀಪ್ ಧ್ವನಿಗೆ ತಕ್ಕಂತೆ ಓಡಲು ವಿಫಲರಾದಲ್ಲಿ ಕಡಿಮೆ ಅಂಕ ಸಿಗುತ್ತದೆ. ಇದನ್ನು ಬೀಪ್ ಟೆಸ್ಟ್ ಎಂದೂ ಕರೆಯಲಾಗುತ್ತದೆ.

Leave a Reply

Your email address will not be published. Required fields are marked *