ಮುಂದಿನ ವಾರ ಸಮನ್ವಯ ಸಮಿತಿ ಸಭೆ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ತಲೆದೋರಿರುವ ಸಮಸ್ಯೆಗಳ ನಿವಾರಣೆಗೆ ಸಮನ್ವಯ ಸಮಿತಿ ಮುಂದಿನ ವಾರ ಸಭೆ ಸೇರಲಿದೆ. ನಿಗಮ-ಮಂಡಳಿಗಳ ನೇಮಕದಲ್ಲಿ ಆಗಿರುವ ತೊಡಕುಗಳು, ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ, ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಸೇರಿ ಇರುವ ಅನೇಕ ಗೊಂದಲಗಳಿಗೆ ಎರಡೂ ಪಕ್ಷಗಳ ಮುಖಂಡರು ಪರಿಹಾರ ಕಂಡುಕೊಳ್ಳುವ ಸಲುವಾಗಿ ಚರ್ಚೆಗಳು ನಡೆಯಲಿವೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಸೀಟು ಹಂಚಿಕೆಯಾಗಬೇಕಿದೆ. ಮೊದಲು 12 ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದ ಜೆಡಿಎಸ್ ಈಗ 8-10 ಕ್ಷೇತ್ರ ಸಿಕ್ಕರೂ ಸಾಕು ಎನ್ನುತ್ತಿದೆ. ಯಾವ ಕ್ಷೇತ್ರಗಳು ಎಂಬ ಗೊಂದಲ ಬಾಕಿ ಇದೆ. ಇನ್ನು ಕಾಂಗ್ರೆಸ್​ನ ಹಾಲಿ ಸಂಸದರು ಪಕ್ಷ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕೆಂಬ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸಮನ್ವಯ ಸಭೆಯಲ್ಲಿ ನಿರ್ಣಯಕ್ಕೆ ಬರಲಾಗುತ್ತದೆ. ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ದೇವೇಗೌಡ ನಿರ್ಧಾರ ಕೈಗೊಳ್ಳಲಿದ್ದಾರೆ. ಬಜೆಟ್​ನಲ್ಲಿ ಯಾವೆಲ್ಲ ಅಂಶಗಳಿರಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ. ಶನಿವಾರ ಸಂಜೆಯೊಳಗೆ ಸಭೆ ದಿನಾಂಕ ನಿಗದಿ ಮಾಡುವಂತೆ ಸಂಚಾಲಕ ಡ್ಯಾನಿಷ್ ಆಲಿಗೆ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಪ್ಪಿತಸ್ಥರ ರಕ್ಷಿಸಲ್ಲವೆಂದ ಸಿಎಂ

ಬೆಂಗಳೂರು: ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕೆಲವು ಲೋಪಗಳಾಗಿವೆಯಾದರೂ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯತಿಥಿ ನಿಮಿತ್ತ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿದರು. ತಪ್ಪುಗಳನ್ನು ಮುಚ್ಚಿಹಾಕುವ ಕೆಲಸ ನನ್ನ ರಾಜಕೀಯ ಜೀವನದಲ್ಲಿ ಮಾಡಿಲ್ಲ. ಮಾಧ್ಯಮ ವರದಿಗಾರಿಕೆ ನಿರ್ಬಂಧಿಸುವಂತೆ ನ್ಯಾಯಾಲಯದ ಮೊರೆ ಹೋಗಿರುವುದು ಪುಟ್ಟರಂಗಶೆಟ್ಟಿ ವೈಯಕ್ತಿಕ ನಿರ್ಧಾರ ಎಂದರು.ಮಂಗನ ಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಕಾಯಿಲೆಗೆ ತುತ್ತಾಗಿರುವವರಿಗೂ ಸರ್ಕಾರ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕೆಎಸ್​ಪಿಸಿಬಿ ಯಥಾಸ್ಥಿತಿ: ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಂಗ್ರೆಸ್ ಶಾಸಕ ಕೆ. ಸುಧಾಕರ್ ನೇಮಕಕ್ಕೆ ತಾಂತ್ರಿಕ ತೊಡಕಿದೆ. ಅವುಗಳನ್ನೆಲ್ಲ ಬೀದಿಯಲ್ಲಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಹಾಗೆ ವರ್ತಿಸಿ ಮುಖ್ಯಮಂತ್ರಿ ಹುದ್ದೆಯ ಘನತೆ ಕುಗ್ಗಿಸಲು ಇಚ್ಛಿಸುವುದಿಲ್ಲ. ಸೂಕ್ತ ಸಮಯ, ಸ್ಥಳದಲ್ಲಿ ಆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದ ಸಿಎಂ, ಸುಧಾಕರ್ ಆಯ್ಕೆಗೆ ತಡೆಹಿಡಿದಿರುವ ಸೂಚನೆ ನೀಡಿದರು.

ಬಿಜೆಪಿಯಿಂದಲೂ ನಮ್ಮಲ್ಲಿಗೆ ಬರ್ತಾರೆ!

ಬೆಂಗಳೂರು: ನಾವು ಮನಸ್ಸು ಮಾಡಿದರೆ ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ, ಆದರೆ ಅಂತಹ ಪ್ರಯತ್ನ ಮಾಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲ ಸುಳ್ಳು. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್.ಕೆ.ಪಾಟೀಲ್ ಜ.18ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *