ಅಮಾಯಕ ರೈತರ ಹೆಸರಲ್ಲಿ 50 ಲಕ್ಷ ರೂ. ವಂಚಿಸಿದ ಸಹಕಾರ ಸಂಘದ ಕಾರ್ಯದರ್ಶಿ

ಯಾದಗಿರಿ: ಸರ್ಕಾರ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ವಿತರಿಸಿ ಅವರಿಗೆ ಆಸರೆಯಾಗಿದೆ. ಆದರೆ ಜಿಲ್ಲೆಯಲ್ಲಿ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬ ಅಮಾಯಕ ರೈತರ ಹೆಸರಿನಲ್ಲಿ ಸಾಲ ಪಡೆದು ಅನ್ನದಾತರಿಗೆ ವಂಚಿಸಿ ಪರಾರಿಯಾಗಿದ್ದು, ಮೋಸ ಹೋದ ರೈತರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

ಯಾದಗಿರಿ ತಾಲೂಕಿನ ನೀಲಹಳ್ಳಿ ಗ್ರಾಮದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್​ ನಿಯಮಿತ ವ್ಯಾಪ್ತಿಗೆ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಉಮೇಶ ಕವಡಿ ವಿವಿಧ ಕಾರಣಗಳಿಗಾಗಿ ಸಂಘಕ್ಕೆ ಬರುತ್ತಿದ್ದ ಅಮಾಯಕ ರೈತರಿಂದ ದಾಖಲೆಗಳನ್ನು ಪಡೆದು, ಅದರ ಮೇಲೆ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ಪಡೆಯುತ್ತಿದ್ದ. ನಂತರ ಈ ದಾಖಲೆಗಳನ್ನು ಉಪಯೋಗಿಸಿಕೊಂಡು ಸಂಘದ ವ್ಯಾಪ್ತಿಗೆ ಬರುವ ನೀಲಹಳ್ಳಿ, ಗೌಡಗೇರಾ, ಕಣೇಕಲ್​ ಹಾಗೂ ಇನ್ನಿತರ ಗ್ರಾಮಗಳ ಸುಮಾರು 50 ರೈತರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ಪಡೆದಿದ್ದಾನೆ.

ಸಾಲದ ಜತೆಗೆ ಸಂಘದ ಇನ್ನಷ್ಟು ಹಣವನ್ನೂ ಸಹ ಆತ ಲಪಟಾಯಿಸಿದ್ದು, ಒಟ್ಟು ಸುಮಾರು 50 ಲಕ್ಷ ರೂ. ವಂಚಿಸಿದ್ದಾನೆ. ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಸೈದಾಪುರ ಪೊಲೀಸ್​ ಠಾಣೆಯಲ್ಲಿ ಉಮೇಶ್​ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಉಮೇಶ್​ ನಾಪತ್ತೆಯಾಗಿದ್ದಾನೆ. ಈ ಕುರಿತು ಶಾಖಾ ವ್ಯವಸ್ಥಾಪಕರನ್ನು ಕೇಳಿದರೆ, ವಂಚನೆ ಕುರಿತು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.