More

    ಇನ್ನೂ ಅಂತಿಮವಾಗಿಲ್ಲ ಮತದಾರರ ಪಟ್ಟಿ

    ಜಯಪುರ (ಕೊಪ್ಪ ತಾ.): ಮೇಗುಂದಾ ಹೋಬಳಿಯ ಐದು ಪಿಎಸಿಎಸ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು), ಒಂದು ಭೂ ಅಭಿವೃದ್ಧಿ ಬ್ಯಾಂಕ್​ನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ದಿನಾಂಕ ಘೊಷಣೆಯಾಗಿದೆ. ಮೊದಲ ಹಂತದಲ್ಲಿ ಹೇರೂರಿನ ಪಿಎಸಿಎಸ್​ಗೆ ಜ.12ರಂದು ಚುನಾವಣೆ ನಿಗದಿಯಾಗಿದೆ. ಆದರೆ ಮತದಾರರ ಅಂತಿಮ ಪಟ್ಟಿ ಇನ್ನೂ ಪ್ರಕಟವಾಗಿಲ್ಲ.

    ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಸಂಘಗಳ ಸರ್ವ ಸದಸ್ಯರ ವಾರ್ಷಿಕ ಸಭೆಗಳಲ್ಲಿ ಎಲ್ಲ ಷೇರುದಾರರು ಭಾಗವಹಿಸಬೇಕು. ಕನಿಷ್ಠ ಆರ್ಥಿಕ ವ್ಯವಹಾರ ನಡೆಸಿರಬೇಕು. ಐದು ವಾರ್ಷಿಕ ಸಭೆಗಳಲ್ಲಿ ಕನಿಷ್ಠ ಮೂರು ಸಭೆಗೆ ಗೈರಾದ ಷೇರುದಾರರಿಗೆ ಮತದಾನದ ಹಕ್ಕು ನೀಡುವಂತಿಲ್ಲ ಎಂಬ ಅಂಶವನ್ನು 2013ರಲ್ಲಿ ಸೇರಿಸಿ ಜಾರಿಗೊಳಿಸಲಾಗಿದೆ. ಈ ಹಿಂದಿನ ಐದು ವರ್ಷಗಳ ಸರ್ವ ಸದಸ್ಯರ ಸಭೆಗಳಲ್ಲಿ ಮತ್ತು ಆಹ್ವಾನ ಪತ್ರಿಕೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಬೈಲಾದಲ್ಲಿ ಸೇರಿಸಲಾಗಿತ್ತು.

    ಈ ನಿಯಮಗಳನ್ನು ಪಾಲಿಸದ ಷೇರುದಾರರನ್ನು ಚುನಾವಣಾಧಿಕಾರಿಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದರು. ಆದರೆ ಇದನ್ನು ವಿರೋಧಿಸಿದ ಅನರ್ಹ ಮತದಾರರು ಹೈಕೋರ್ಟ್​ನಿಂದ ಮತದಾನದ ಹಕ್ಕು ನೀಡುವಂತೆ ಆದೇಶ ಪಡೆದಿದ್ದಾರೆ. ಇನ್ನೂ ಕೆಲವರು ಮನವಿ ಸಲ್ಲಿಸುತ್ತಲೇ ಇದ್ದಾರೆ. ಚುನಾವಣೆಗೆ 15 ದಿನ ಮೊದಲೇ ಅರ್ಹ ಮತದಾರರ ಅಂತಿಮ ಪಟ್ಟಿ ಪ್ರಕಟ ಮಾಡಲಾಗದೆ ಚುನಾವಣಾ ಅಧಿಕಾರಿಗಳು ಕಂಗಾಲಾಗಿದ್ದರೆ.

    ನಿರ್ದೇಶಕರಾಗಿ ಆಯ್ಕೆ ಬಯಸಿರುವ ಅಭ್ಯರ್ಥಿಗಳು ಮನೆ ಮನೆಗಳಿಗೆ ತೆರಳಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಅಂತಿಮ ಪಟ್ಟಿಯನ್ನು ಚುನಾವಣಾ ಅಧಿಕಾರಿಗಳು ಇನ್ನೂ ಪ್ರಕಟಿಸಿಲ್ಲ. ಪ್ರಭಾವಿ ಹಾಗೂ ಆರ್ಥಿಕವಾಗಿ ಸಬಲರಾಗಿರುವ ಅನರ್ಹ ಮತದಾರರು ನ್ಯಾಯಾಲಯದ ಮೂಲಕ ಮತದಾನದ ಹಕ್ಕು ಪಡೆಯುತ್ತಿದ್ದಾರೆ. ಸಾಮಾನ್ಯರು ಮಾತ್ರ ಮತದಾನ ಅವಕಾಶ ವಂಚಿತರಾಗುತ್ತಿದ್ದಾರೆ.

    ಅರ್ಹ ಮತದಾರರು 154: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಆಧಾರದಂತೆ ಹೇರೂರು ಪಿಎಸಿಎಸ್​ನ 1068 ಷೇರುದಾರರಲ್ಲಿ ಮೊದಲ ಹಂತದಲ್ಲಿ 154 ಜನ ಮಾತ್ರ ಮತದಾನಕ್ಕೆ ಅರ್ಹತೆ ಪಡೆದಿದ್ದರು. 914 ಷೇರುದಾರರನ್ನು ಅನರ್ಹ ಮತದಾರರು ಎಂದು ಘೊಷಿಸಲಾಗಿತ್ತು. ಇವರಲ್ಲಿ ಕೆಲವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಮತದಾನದ ಹಕ್ಕು ಪಡೆದಿದ್ದಾರೆ.

    ಮೂರು ಸಭೆಗೆ ಹಾಜರಾಗದವರು ಅನರ್ಹ ಮತದಾರರು ಎಂಬುದು ಅವೈಜ್ಞಾನಿಕ. ಒಂದೇ ದಿನ, ಒಂದೇ ಸಮಯದಲ್ಲಿ ಎರಡಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳ ಸಭೆ ನಡೆದಿವೆ. ಅಲ್ಲದೆ ಕೆಲವೊಮ್ಮೆ ಸಭೆಯ ಮಾಹಿತಿಯೂ ಸರಿಯಾಗಿ ಷೇರುದಾರರಿಗೆ ತಲುಪಿರುವುದಿಲ್ಲ. ಕಾಯ್ದೆಗೆ ಪೂರಕ ವ್ಯವಸ್ಥೆ ಮಾಡಿಕೊಳ್ಳದೆ ಕಾಯ್ದೆ ಜಾರಿಗೆ ತರಬಾರದಿತ್ತು ಎನ್ನುತ್ತಾರೆ ಮತದಾನ ವಂಚಿತ ಷೇರುದಾರ ಎ.ಜಿ.ಶಿವಾನಂದ ಭಟ್.

    ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಅನ್ವಯ ಅರ್ಹ ಮತದಾರರ ಪಟ್ಟಿ ತಯಾರಿಸಲಾಗಿತ್ತು. ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೆಸರಿಸಿರುವ ಷೇರುದಾರ ಮತದಾರರನ್ನು ಅರ್ಹ ಮತದಾರರ ಪಟ್ಟಿಯಲ್ಲಿ ಸೇರಿಸಬೇಕಿದೆ ಎಂಬುದು ಜಿಲ್ಲಾ ಚುನಾವಣಾಧಿಕಾರಿ ನಾಗೇಶ್ ಎಸ್. ಡೋಂಗ್ರೆ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts