ಪೊಲೀಸರೊಂದಿಗೆ ಸಹಕಾರ ಮನೋಭಾವ ಅಗತ್ಯ

ಬಸವಾಪಟ್ಟಣ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಪೊಲೀಸ್ ಠಾಣೆ ವತಿಯಿಂದ ಜನಸ್ನೇಹಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು.

ಅರಕಲಗೂಡು ಸಿಪಿಐ ದೀಪಕ್ ಮಾತನಾಡಿ, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ಮನೋಭಾವನೆ ಹೊಂದುವುದು ಮುಖ್ಯ. ಅಲ್ಲದೆ ಬಹಳಷ್ಟು ಅಪರಾಧ ಪ್ರಕಾರಣಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅನೇಕ ನಿಂಬಂಧನೆಗಳನ್ನು ವಿಧಿಸಿದೆ. ಸಾರ್ವಜನಿಕರು ಅವುಗಳ ಪಾಲನೆಗೆ ಮುಂದಾಗಬೇಕು. ಚುನಾವಣಾ ಅಕ್ರಮಗಳ ಬಗ್ಗೆ ಜನಸಾಮನ್ಯರು ಮೊಬೈಲ್‌ಗಳ ಮೂಲಕ ದೂರು ನೀಡಬಹುದು. ಅಲ್ಲದೆ ದೂರುದಾರರ ವಿವರವನ್ನು ಗುಪ್ತವಾಗಿ ಇಡಲಾಗವುದು. ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಕೋರಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, 10,000 ರೂ.ಗಳಿಗಿಂತ ಹೆಚ್ಚು ಹಣವನ್ನು ವ್ಯವಹರಿಸಲು ಅಗತ್ಯ ದಾಖಲೆ ಹೊಂದಿರಬೇಕು. 30,000 ರೂ.ಗಿಂತ ಹೆಚ್ಚು ಹಣವನ್ನು ಕೊಂಡಯ್ಯಲು ಅಗತ್ಯ ದಾಖಲೆ ಇರಬೇಕು. ಮಾರಕಸ್ತ್ರಗಳನ್ನು ಹಿಡಿದು ಓಡಾಡುವುದು ಹಾಗೂ ಹೊಂದಿರುವುದು ಅಪರಾಧ. ಹಣ, ಹೆಂಡ , ದುಬಾರಿ ವಸ್ತುಗಳನ್ನು ಅಗತ್ಯ ದಾಖಲೆ ಇಲ್ಲದೆ ಸಾಗಿಸುವಂತಿಲ್ಲ ಎಂದರು.

ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜೇಶ್, ಪಿಡಿಒ ಮಂಜುನಾಥ್, ಗ್ರಾಪಂ ಸದಸ್ಯರಾದ ಕಂಬೇಗೌಡ, ಸ್ವಾಮಿಗೌಡ ಸುರೇಶ್, ಪುಟ್ಟಮ್ಮ, ಮಾಜಿ ಅಧ್ಯಕ್ಷ ಮಹೇಂದ್ರಕುಮಾರ್, ಹಿರಿಯ ಮುಖಂಡ ಕುಮಾರಸ್ವಾಮಿ ಸಭೆಯಲ್ಲಿ ಹಾಜರಿದ್ದರು.